Wednesday, May 21, 2014

ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು

ಮನಸ್ಸೆಂಬ ಮಾಯಾಲೋಕ ಶರವೇಗದಲ್ಲಿ ಮುನ್ನೆಡೆಯುತ್ತದೆ. ದೇಹಕ್ಕಿಂತ ಸಹಸ್ರಪಟ್ಟು ವೇಗದ ಮನಸ್ಸನ್ನು ನಿಯಂತ್ರಿಸದಿದ್ದಲ್ಲಿ ಕೊಂಚ ಕಷ್ಟ ಬದುಕು. ಓಡುವ ತಲೆಯನ್ನು ನಿಲ್ಲಿಸಲು ನೂರಾರು ತರಹ ನಿಯಮಗಳಿವೆ. ದೇಹದ ಮೂಲಕ ಮನಸ್ಸನ್ನು ನಿಯಂತ್ರಿಸುವುದು ಸುಲಭವಿಧಾನವಾದ್ದರಿಂದ ತಟಕ್ ಅಂತ ಮಾದಕಪಾನೀಯ ದ್ರವ್ಯಗಳಿಗೆ ಮೊರೆಹೋಗುವುದು ಸುಲಭ ಸಹಜ. ಓದುವ ಹಾರುವ ಹಾರಾಡುವ ಮನಸ್ಸು ದಿನಕ್ಕೊಮ್ಮೆ ಟಕ್ಕಂತ ನಿಂತರೆ ಅದರ ಮಜವೇ ಮಜ. ಹಾಗೆ ಸಹಜವಾಗಿ ನಿಲ್ಲಿಸುವುದು ಸುಲಭವಲ್ಲ ನಿಜ ಆದರೆ ಸುಲಭಮಾರ್ಗವಿದೆ. ಕತ್ತಲೆ ಕೋಣೆಯಲ್ಲಿ ಕಣ್ಣಿನ ನೇರಕ್ಕೆ ದೀಪವಿಟ್ಟುಕೊಂಡು ಐದು ನಿಮಿಷ ಎವೆಯಿಕ್ಕದೆ ನೋಡುವುದು ಮತ್ತೆ ಐದು ನಿಮಿಷ ಕಣ್ಣು ಮುಚ್ಚಿ ಕಣ್ಣೊಳಗೆ ಬಿಂಬವವನ್ನುತುಂಬಿಕೊಳ್ಳಬೇಕು. ಅರ್ದ ಘಂಟೆ ಸಾಕು ಮನಸ್ಸು ನಂತರ ನಿಲ್ಲತೊಡಗುತ್ತದೆ. ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು ಎಂಬುದು ಹೊಸ ವಿಷಯ. ಮಿಕ್ಕೆಲ್ಲ ಅಲ್ಲಿ ಇಲ್ಲಿ ಓದಿ ಕೇಳಿ ತಿಳಿದದ್ದೆ ಎಮ್ದಿರಾ . ವಾಕೆ ಮಜ ಮಾಡಿ. 

Monday, May 19, 2014

ಕಾ ಕೆ ಕಾಹಾ....

ಎಂಟನೇ ತರಗತಿಯ ಸಂಸ್ಕೃತ ಮೇಷ್ಟ್ರು ನಮಗೆ  ಕಾ ಕೆ ಕಾ: , ಕಾಂ ಕೆ ಕಾ: ಅಂತ ಬಾಯಿಪಾಠ ಮಾಡಿಸಲು ಯತ್ನಿಸಿದ್ದುಂಟು.  ನಾವು ಮಾತ್ರಾ  ಕಾಕೆ ಕಾಕಾ ಎಂದು ಹಿಂದಿನ ಬೇಂಚಿನಲ್ಲಿ ಪಕ್ಕಾ  ಕಾಗೆಯಂತೆ ಒದರುತ್ತಿದ್ದೆವು. ಹಾಗೆ ಒದರಿದ ಕೆಲವರು ಇಂದು ದೊಡ್ಡ ಮಟ್ಟದ ಅಧಿಕಾರಿಗಳಾಗಿದ್ದಾರೆ ಇನ್ನು ಕೆಲವರು ಬೇಕಾಬಿಟ್ಟಿಯಾಗಿಯೂ ಹೋಗಿದ್ದಾರೆ. ಆದರೆ ಹಾಗೆಲ್ಲ ಏರಿದ್ದಕ್ಕೂ ಅಥವಾ ಇಳಿದಿದ್ದಕ್ಕೂ ಈ ಕಾಕೆ ಕಾ:  ಸಂಬಂಧ ಇಲ್ಲ ಅಂತ ತೀರಾ ತಳ್ಳಿ ಹಾಕಲಾಗದು.  ರಾಮಹ ರಾಮೌ ರಾಮಾಃ ದಂತೆಯೇ ಈ ಕಾ ಕೆ ಕಾಹ  ವನ್ನು ಎದ್ದು ಬಿದ್ದು ಗಟ್ಟುಹೊಡೆದು ಪರೀಕ್ಷೆಯಲ್ಲಿ ಪಕ್ಕಾ ಹಾಗೆಯೇ ಬರೆದು ನೂರಾ ಇಪ್ಪತ್ತೈದಕ್ಕೆ ನೂರಾ ಇಪ್ಪತ್ತು ಪಡೆದು ಒಬ್ಬ ನನ್ನ ಸ್ನೇಹಿತ ಅಂದು ಬೀಗಿದ್ದ. ಪಾಪ ಇಂದು ಅವನು ಸಂಜೆಯಾದಕೂಡಲೇ ಒಮ್ಮೊಮ್ಮೆ ಮಟ ಮಟ ಮಧ್ಯಾಹ್ನವೂ  ತೊಂಬತ್ತು ಹಾಕಿ ಕಣ್ಣು ಕೆಂಪಗೆ ಮಾಡಿಕೊಂಡು ಕಾಗೆಯಂತೆಯೇ ಒದರುತ್ತಾನೆ. ನಮ್ಮ ಜೊತೆ ಹಾಗೆಲ್ಲಾ ಕೂಗಾಡುತ್ತಿದ್ದವನು  ಓದೋದು ನನಗೆ ಒಗ್ಗಿದ್ದಲ್ಲ ಅಂತ ಪುಸ್ತಕ ಮಡಚಿಟ್ಟು  ಪಕ್ಕಾ ವ್ಯವಹಾರಸ್ಥನಾಗಿ ಠಾಕು ಠೀಕಾಗಿದ್ದಾನೆ, ಮಗದೊಬ್ಬ ನೂರಕ್ಕೆ ತೊಂಬತ್ತು ಗಳಿಸಿ ತೊಂಬತ್ತು ಮುಟ್ಟದೆ ಸೂಪರ್ ಪೋಸ್ಟ್ ನಲ್ಲಿ ಜುಂ ಅಂತ ಇದ್ದಾನೆ.                                     ನಾನೂ   ಅತ್ತಲೂ ಇಲ್ಲದೆ ಇತ್ತಲೂ ಸಲ್ಲದೆ ಆಗಿಬಿಟ್ಟೆ ಅಂತ ಬಹಳ ಜನ ಅಂದುಕೊಂಡಿದ್ದರು. ಹಾಗಾಗಲಿಲ್ಲ. ಅಪ್ಪನ ಲೆಕ್ಕಾಚಾರ ಹಿಡಿದರೆ  ತಿಥಿ ದಿವಸ ಕಾಗೆ ಕರೆಸುವ ಜನ ನಾನಾಗಬೇಕಾಗಿತ್ತು. ಆದರೆ ಆಗಲಿಲ್ಲ. ಇತ್ತಲೆ ಇದ್ದೇನೆ  ಹಾಯಾಗಿ. ಕಾಗೆ ಕಂಡಕೂಡಲೆ ಕಾ ಕಾ ಎನ್ನುತ್ತ .

Sunday, May 18, 2014

ೋಗರತೋವ

"ಯೋಗರತೋವ ಭೋಗರತೋವ" ಅಂತ ಮುಂದುವರೆಯುತ್ತದೆ ಭಜಗೋವಿಂದಂ ನಲ್ಲಿ. ಅಲ್ಲಿ ಯಾವಾರ್ಥ ಇಲ್ಲಿ ಅದಕ್ಕೆ ಏನರ್ಥ ಬೇಡ ಬಿಡಿ. ಈಗ  ಇನ್ನೊಂದೆಡೆ ಯೋಗ ಅಂದರೆ  ಲಕ್ ಅಂತಲೂ ಬಳಕೆಯಾಗುತ್ತೆ ಅದೂ ಬೇಡ. ನನನಗೀಗ ಇದಕ್ಕೆ  ತೋಚಿದ ಅರ್ಥ ಮೈ ಮುರಿಯುವುದು. ಅದೇ ಯೋಗ  ಅದು ಭೋಗ ಹೆಚ್ಚಾದಾಗ ಬೇಕಾಗುತ್ತದೆ.
         ಪ್ರಕೃತಿ ಕರುಣಿಸಿದ ಈ ಅದ್ಭುತ ದೇಹದ ಉಪಯೋಗ ಸಮರ್ಪಕವಾಗದಿದ್ದಲ್ಲಿ ಅದು ರೋಗದ ಗೂಡಾಗುವ ಸಾದ್ಯತೆ ಹೆಚ್ಚಾಗುತ್ತದೆ. ಆವಾಗ ವೈದ್ಯರೂ ಬೇಕು ಔಷಧಿಯೂ ಬೇಕು ಅಂತ ಮನಸ್ಸು ತೀರ್ಮಾನ ಮಾಡಿಬಿಡುತ್ತದೆ. ಅಲ್ಲೂ ಸರಿಯಾಗಿಸಿಕೊಳ್ಳುವುದಕ್ಕೆ ಹೇರಳ ಅವಕಾಶವಿದೆ. ಆದರೆ ಸ್ವಲ್ಪ ಛಲ ಹಠ ಇದ್ದರೆ ಸದೃಡ ದೇಹಕ್ಕೆ ಈ ಮೈ ಮುರಿತವೇ ಒಳ್ಳೆಯದು. ಕಾಯಕವೇ ಕೈಲಾಸ ನಿಜ ಆದರೆ ದೇಹಕ್ಕೆ ಅನುಕೂಲವಾಗುವಂತಹ ಕಾಯಕವಾದರೆ ಕಾಯಕ್ಕೂ ಕೈಲಾಸ ಭೂಲೋಕದಲ್ಲಿಯೇ ದರ್ಶನವಾಗುತ್ತದೆ. ಕೇವಲ ಕುಳಿತು ಕೆಲಸ ಮಾಡಿದರೆ ಕೈ ಲಾಸ್ ಆಗಿ ಕಲಾಸ್ ಆಗುವ ಸಂಭವವೇ ಹೆಚ್ಚು. ಅದಕ್ಕೆ ಈ ಮೈ ಮುರಿದುಕೊಳ್ಳುವುದು ಸುಲಭ ಮಾರ್ಗ.
         ವಾಡಿಕೆ ಮಾತೊಂದಿದೆ. ಬೆಳಗ್ಗೆ ಎದ್ದು ಮೈಮುರಿದು ಹೊರಟ ಅಂತ. ಎರಡು ಕೈ ಮೇಲಕ್ಕೆ ಎತ್ತಿ ಆ... ಅಂದು ಬಾಯಿ ಕಳೆಯುವ ಕ್ರಿಯೆಗೆ ಹಾಗೆ ಹೇಳುವುದು ವಾಡಿಕೆ. ನಿಜವಾಗಿಯೂ ಅದು ಅಷ್ಟೇ ಅಲ್ಲ. ರಾತ್ರಿಯ ಸುಖದ ನಿದ್ರೆಯ ಮುಗಿಸಿದ ದೇಹ ಬೆಳಗ್ಗೆ ಎಚ್ಚರವಾದಾಗ ಮೈ ಮುರಿಯುವ ಮನಸ್ಸಿಗೆ ತಯಾರಾಗಿರುತ್ತದೆ. ಆದರೆ ನಾವು ಶತ ಸೋಂಬೇರಿಗಳು ಕೈ ಎತ್ತಿ ಆ... ಅಂದು ಕಾಫಿ ಕುಡಿಯಲು ಅನುವಾಗುತ್ತೇವೆ. ಸಂಜೆ ಕಾಡುವ ಸೊಂಟ ನೋವಿಗೆ ಮಾತ್ರೆ ನುಂಗುತ್ತೇವೆ. ಈಗ ಸ್ವಲ್ಪ ಮಜ ಮಾಡೋಣ ಬೆಳಗ್ಗೆ  ಎದ್ದ ಹಾಸಿಗೆಯಲ್ಲಿಯೇ ಒಂಚೂರು ಮೈ ಮುರಿಯೋಣ (ಚಿತ್ರದಲ್ಲಿಷ್ಟು ಏಕ್ ದಂ ಬೇಡ, ಒಮ್ಮೆಲೆ ಹಾಗೆ ಮಾಡಲು ಹೋದರೆ ನಿಜವಾಗಿಯೂ ಲಟ ಲಟ ಅಂತ ಮೈ ಮುರಿದು ಹೋದೀತು) ಅದು ಎಷ್ಟೆಂದರೆ ಒಮ್ಮೆ ಬೆವರು ಕಿತ್ತು ಬರುವಷ್ಟು. ಆಮೇಲೆ ಕಾಫಿ  ಮುಂತಾದ ನಮ್ಮ ಚಟಗಳು ಹೇಗೂ ಇದ್ದದ್ದೆ. ಇನ್ನು ಇವನ್ನೆಲ್ಲಾ ಮಾಡದಿದ್ದರೂ ಅದು ಇದೆಯಲ್ಲ ಎಂತದು ಅಂದರೆ ಆಗುವುದು... ಅದು ಆಗಿಯೇ ಆಗುತ್ತೆ ಬಿಡಿ.