Friday, December 17, 2010

ಆಮೆಯ ಬೇಟೆ



ಜೊರ್ರಂತ ಸುರಿವ ಮಲೆನಾಡಿನ ಮಳೆಗಾಲದಲ್ಲಿ ಈ ಚಿತ್ರದಲ್ಲಿನ ವೇಷಧಾರಿ ಹೊರಟರೆಂದರೆ ಅವತ್ತು ಒಂದಿಷ್ಟು ಆಮೆಯ ಆಯುಷ್ಯ ಮುಗಿಯಿತೆಂದು ಅರ್ಥ. ನೀರಿನಲ್ಲೂ , ನೆಲದ ಮೇಲೂ ಬದುಕಬಲ್ಲ ಆಮೆ ಅತ್ಯಂತ ನಿರುಪದ್ರವಿ. ಆದರೆ ಅದರ ಮಾಂಸ ರುಚಿಯಾಗಿರುವುದು ಅದರ ದುರ್ದೈವ. ಮಳೆಗಾಲ್ದ ದಿವಸಗಲಲ್ಲಿ ತುಂಬುತ್ತಿರುವ ಕೆರೆಗಳಿಂದ ಆಮೆಗಳು ನೆಲಕ್ಕೆ ಹೊರಟಿರುತ್ತವೆ. ನಿಧಾನಗತಿಗೆ ಹೆಸರಾಗಿದ್ದರೂ ಆಮೆ ಮಾತ್ರಾ ಸುಲಭವಾಗಿ ಬೇಟೆಗಾರರಿಗೆ ಸಿಗುವುದಿಲ್ಲ. ನೀರೊಂದಿದ್ದರೆ ಅದು ಪುಳುಕ್ ಅಂತ ದಡದಿಂದ ಹಾರಿ ಜಾರಿಕೊಂಡುಬಿಡುತ್ತದೆ. ಅದಕ್ಕಾಗಿ ಬೇಟೆಗಾರರು ಉಪಾಯ ಮಾಡುತ್ತಾರೆ. ತಲೆಗೆ ಸೊಪ್ಪು ಕಟ್ಟಿಕೊಂಡು ಕೆರೆಯ ಕಡೆಯಿಂದ ದಡದತ್ತ ನಿಧಾನ ನಡೆದುಬರುತ್ತಾರೆ. ಆಮೆಯು ಯಾವುದೋ ಗಿಡ ಎಂದು ಬಾವಿಸಿ ಅರಾಮವಾಗಿರುತ್ತದೆ. ಹಾಗೆ ಆರಾಮವಾಗಿರುವ ಮರುಕ್ಷಣ ಆಮೆ ಬೇಟೆಗಾರನ ಚೀಲ ಸೇರುತ್ತದೆ. ಕೊಂದ ಪಾಪ ತಿಂದು ಪರಿಹಾರ ಎಂಬಂತೆ ಬೇಟೆಗಾರರು ಚೀಲ ಭರ್ತಿಯಾದೊಡನೆ ನಗುನಗುತ್ತಾ ಮನೆ ಸೇರುತ್ತಾರೆ. ಇದು ಪ್ರಕೃತಿಯ ಆಹಾರ ಚಕ್ರ. ಒಂದು ಜೀವಿಯ ಸಾವು ಮತ್ತೊಂದು ಜೀವಿಯಲ್ಲಿ ಬದುಕು ಕಾಣಿಸುತ್ತದೆ ಎಂದು ನೋಡುಗರು ಸುಮ್ಮನಾಗಬೇಕಷ್ಟೆ.

Tuesday, December 14, 2010

ಭೀಮೇಶ್ವರದಲ್ಲಿ ಮಾರ್ಚ್ ೨ ರಿಂದ "ಅತಿರುದ್ರ ಮಹಾಯಾಗ"




ಭೀಮೇಶ್ವರ ಸಾಗರ ತಾಲ್ಲೂಕಿನ ತುಟ್ಟ ತುದಿಯ ಯಾತ್ರಾಸ್ಥಳ. ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಕೋಗಾರಿನ ಬಳಿ ಇರುವ ಈ ಕ್ಷೇತ್ರ ಆಸ್ತಿಕರ ಜತೆ ಪ್ರಕೃತಿಪ್ರಿಯರ ಮನದಾಸೆಯನ್ನು ತಣಿಸುತ್ತದೆ. ಪ್ರತೀ ವರ್ಷ ಶಿವರಾತ್ರಿಯ ಸಮಯದಲ್ಲಿ ಜಾತ್ರೆಯನ್ನು ಇಲ್ಲಿ ನಡೆಸುತ್ತಾರೆ. ಈ ಬಾರಿ ೨ ಮಾರ್ಚ್ ೨೦೧೧ ರಿಂದ ಮಾರ್ಚ್ ೮ ನೇ ತಾರೀಕಿನವರೆಗೆ ಇಲ್ಲಿ "ಸಾಂಗ ಅತಿರುದ್ರ ಮಹಾ ಯಾಗ"ವನ್ನು ಭೀಮಲಿಂಗೇಶ್ವರ ಸೇವಾ ಸಮಿತಿ ಹಮ್ಮಿಕೊಂಡಿದ್ದು ಯಾಗ ಶಾಂತಿ ಹವನಗಳ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತದೆ., ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪೂರ್ಣಾನುಗ್ರಹ ಮತ್ತು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳ ಸಂಪೂರ್ಣ ಸಹಕಾರವನ್ನು ಸಮಿತಿಯವರು ಬಯಸಿದ್ದಾರೆ.
ಸ್ಥಳ ಪುರಾಣ: ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾದರಿಂದ ಧರ್ಮರಾಯನು ಕಾಶಿಯಿಂದ ಈಶ್ವರ ಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ. ಸ್ಥಳೀಯವಾಗಿ ಸಿಗುವ ಕಲ್ಲಿನ ಬಂಡೆಯನ್ನೇ ಹಲಗೆಯನ್ನಾಗಿಸಿ ನಿರ್ಮಿಸಿದ ದೇವಸ್ಥಾನದೆದುರು ಒಂದು ಬೃಹತ್ ಬಂಡೆ ಎರಡು ಹೋಳಾಗಿ ಮಲಗಿದೆ. ಅದಕ್ಕೆ ಪ್ರಮುಖ ಕಾರಣ ದೇವಸ್ಥಾನದ ಬಾಗಿಲಿಗೆ ಬೇಕಾದ ಕಲ್ಲು ಹಲಗೆಯಾಗಿ ಏಳಿಸಲು ಆಗ್ದಿದ್ದಾಗ ಭೀಮನು ತನ್ನ ಕಾಲಿನಿಂದ ಬಲವಾಗಿ ಒದ್ದನಂತೆ, ಆಗ ಅದು ಎರಡು ಹೋಳಾಗಿ ಒಂದು ಹೋಳು ಬಳಕೆಗೆಬಂದಿತಂತೆ, ಇನ್ನೊಂದು ಭೀಮನ ಕಾಲಿನ ಹೆಜ್ಜೆಯ ಗುರುತಿನೊಂದಿಗೆ ಅಲ್ಲಿಯೇ ಉಳಿದಿದೆ. ಇಷ್ಟಾದನಂತರ ದೇವರ ಅಭಿಷೇಕಕ್ಕೆ ಅರ್ಜುನ ತನ್ನ ಬಿಲ್ಲಿನಿಂದ ಬಾಣವೊಂದನ್ನು ಹೋಡೆದಾಗ ಅಲ್ಲಿ ನೀರು ಚಿಮ್ಮಿತಂತೆ. ಅದಕ್ಕೆ ಸರಳಹೊಳೆ ಎಂದು ಹೆಸರಿಟ್ಟನಂತೆ. ಈ ಸರಳ ಹೊಳೆ ಇಂದಿಗೂ ದೇವಸ್ಥಾನಕ್ಕಿಂತ ನೂರು ಅಡಿ ಮೇಲ್ಬಾಗದಲ್ಲಿ ಜನಿಸಿ ವರ್ಷಪೂರ್ತಿ ಮೈತುಂಬಿ ಹರಿಯುತ್ತಿರುವುದು ವಿಶೇಷ. ಇಂದಿಗೂ ಈ ಸರಳ ಹೊಳೆಯ ಮತ್ತೊಂದು ವಿಶೇಷವೆಂದರೆ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಹರಿವಿನ ಪ್ರಮಾಣವೂ ತನ್ನಷ್ಟಕ್ಕೆ ಹೆಚ್ಚುತ್ತದೆ. ಭೀಮಲಿಂಗೇಶ್ವರ ದೇವಸ್ಥಾನ ಹಿಂಬಾಗ "ಹಿಡಿಂಬಾ" ವನ ಎಂದು ಖ್ಯಾತಿಯಾಗಿದ್ದು, ಪ್ರಕೃತಿ ಸಹಜ ವನಸ್ಪತಿಗಳಿಂದ ತುಂಬಿತುಳುಕಾಡುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು: ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಅರ್ಚಕರು ಭೀಮೇಶ್ವರ : ೦೮೧೮೬-೨೧೦೯೬೬ - ೯೪೪೯೭೭೬೭೨೯

Sunday, December 12, 2010

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ!

ನಿಮ್ಮ ಗಮನಕ್ಕೆ - 2) : ಟೈಮ್ಸ್ ಆಫ್ ಇಂಡಿಯಾ ಮಾಲೀಕತ್ವದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಳೆದ ಕೆಲ ದಿನಗಳಲ್ಲಿ ನಡೆದ ಕ್ಷಿಪ್ರ (ಮತ್ತು ನಮಗೆಲ್ಲ ತೀವ್ರ ಅಸಮಾಧಾನಕರ) ಬದಲಾವಣೆಗಳೆಂದರೆ ವಿಶ್ವೇಶ್ವರ ಭಟ್ ಅವರು ಸಂಪಾದಕ ಹುದ್ದೆಗೆ ರಾಜೀನಾಮೆಯಿತ್ತಿದ್ದಾರೆ, ಅವರನ್ನು ಹಿಂಬಾಲಿಸುತ್ತ ಪ್ರತಾಪ್ ಸಿಂಹ, ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಮುಂತಾಗಿ ಉಪಸಂಪಾದಕ ವರ್ಗದವರೂ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಅವರೆಲ್ಲರ ಆಕರ್ಷಕ ಅಂಕಣಗಳು ಈಗ ಪ್ರಕಟವಾಗುತ್ತಿಲ್ಲ. ಹಾಗೆಯೇ ಎಸ್. ಷಡಕ್ಷರಿಯವರ ಜನಪ್ರಿಯ ದೈನಂದಿನ ಅಂಕಣ ’ಕ್ಷಣಹೊತ್ತು ಆಣಿಮುತ್ತು’, ರವಿ ಬೆಳಗೆರೆಯವರ ಸಾಪ್ತಾಹಿಕ ಅಂಕಣ ’ಸೂರ್ಯ ಶಿಕಾರಿ’, ಹಾಲ್ದೊಡ್ಡೇರಿ ಸುಧೀಂದ್ರ ಅವರ ’ನೆಟ್ ನೋಟ’ ಅಂಕಣಗಳೂ ನಿಂತು ಹೋಗಿವೆ. ’ಪರಾಗ ಸ್ಪರ್ಶ’ ಅಂಕಣ?- stay tuned for further announcement...

ಹೀಗೆ ಈ ವಾರದ ಪರಾಗ ಸ್ಪರ್ಷದ ಜತೆ ಶ್ರೀವತ್ಸ ಜೋಷಿಯವರು ಒಂದು ಪರ್ಸನಲ್ ಮೈಲ್ ಮಾಡಿಬಿಟ್ಟಿದ್ದಾರೆ ಎಂಬಲ್ಲಿಗೆ ವಿಜಯಕರ್ನಾಟಕದಲ್ಲಿ ಅವರ ಅಂಕಣವೂ ಡೋಲಾಯಮಾನ ಅಂತಲೂ ಲೆಕ್ಕಾಚಾರಕ್ಕೆ ಇಳಿಯಬಹುದು. ಒಟ್ಟಿನಲ್ಲಿ ಕನ್ನಡದ ನಂ ೧ ಪ್ರಸಾರದ ವಿಜಯಕರ್ನಾಟಕದ ಒಳಗಡೆ ಏನೇನೋ ನಡೆದಿದೆ ಅಂತ ಪತ್ರಿಕೋದ್ಯಮದ ಆಸಕ್ತಿ ಇರುವವರಿಗೆ ಗೊತ್ತಾಗಿದೆ. ಕುಟ್ಟಿ ಕಟ್ಟಿ ಮೆಟ್ಟಿ ವಿಕ ಬೆಳಸಿದ "ವಿ ಭಟ್ರು ವಿಕ ಬಿಟ್ರು" ಎಂಬ ವಿಷಯದೊಂದಿಗೆ ಬಜ್, ಎಸ್ ಎಂ ಎಸ್ ಹರಿದಾಡಿದಾಗ ನಾನೂ ಒಮ್ಮೆ ಆಶ್ಚರ್ಯಕ್ಕೆ ಒಳಗಾಗಿದ್ದೆ. ಆದರೆ ಬಟ್ಟೆ ಗಲೀಜಾದರೆ ಒಗೆಯಲೇ..! ಬೇಕಲ್ಲ ಅಂತ ಬೆಂಗಳೂರಿನಿಂದ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದಾಗ ಒಳಾರ್ಥ ಅರ್ಥವಾಗದೆ ಗಲಿಬಿಲಿಗೊಳಗಾದೆ. ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯನ್ನಾಧರಿಸಿ ಬಂದ ಫೋನ್ ಗಳು ಎನೇನನ್ನೋ ಹೇಳತೊಡಗಿದಾಗ "ಛೆ" ಅಂತ ನಿರ್ಲಕ್ಷ್ಯ ಮಾಡಿಬಿಟ್ಟೆ. ಕಾರಣ ಅವೆಲ್ಲಾ ದೊಡ್ಡವರ ಕತೆಗಳು ಎತ್ತರಕ್ಕೆ ಏರಿದ ಮನುಷ್ಯನ ಸುತ್ತ ಬೇಕಾದ್ದು ಬೇಡಾದ್ದು ಹುಟ್ಟಿಕೊಳ್ಳುವುದೂ ಸಹಜ. ಹಾಗೆಲ್ಲಾ ಬರೆಯುವ ಬೆಳೆಗೆರೆಯ ಬಗ್ಗೆಯೂ ನೂರಾರು ಕತೆಗಳಿವೆ, ನಾವು ಹಾಗೆ ಹುಟ್ಟುವ ಕತೆಗಳನ್ನು ತಲೆಯೊಳಗೆ ಇಟ್ಟು ಸಾಕತೊಡಗಿದರೆ ಅವರ ಬರಹಗಳನ್ನ ಸವಿಯಲು ಆಗುವುದೇ ಇಲ್ಲ ಎಂಬ ನನ್ನ ಓದುಗ ಮಿತ್ರರೊಬ್ಬರ ಮಾತು ನೆನಪು ಮಾಡಿಕೊಂಡು ಸುಮ್ಮನುಳಿದೆ.

ಏನೆಲ್ಲಾ ನಡೆಯುತ್ತದೇ ಈ ಪ್ರಪಂಚದಲ್ಲಿ ನಿತ್ಯ. ಕಾಲ ಅವನ್ನೆಲ್ಲಾ ತನಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಮುಗಳ್ನಗುತ್ತಾ ನುಂಗಿ ಮುನ್ನಡೆಯುತ್ತದೆ. ವಿಜಯ ಕರ್ನಾಟಕ ವಿ ಭಟ್ಟರೊಡನೆ ಒಂದು ದೊಡ್ಡ ಟೀಂ ಕಳೆದುಕೊಂಡಿದೆ. ಒಂದೆರಡು ದಿನ ಛೆ ಅಂತ ಅನ್ನಿಸಿ ಮತ್ತೆ ಮುನ್ನುಗ್ಗುತ್ತಿದೆ. ಹೊರ ಹೊರಟವರು ಮತ್ತೊಂದು ಪತ್ರಿಕೆ ಕಟ್ಟುತ್ತಾರಂತೆ ಎಂಬ ಸುದ್ದಿ ಸುದ್ದಿಮನೆಯ ಕತೆಯಂತೆ ಜನರ ಬಾಯಲ್ಲಿ ಹೊರಟು ನೂರೆಂಟು ಮಾತಾಗುತ್ತಿದೆ.
ನಮ್ಮೂರಿನ ಗಣಪತಿ ಭತ್ತವ ಕೊಯ್ದು ಹಸನು ಮಾಡುತ್ತಿದ್ದ. ಅವನಿಗೆ ವಿ.ಕ ಡಲ್ ಆಗಿದ್ದು ಸುದ್ದಿಯಲ್ಲ ಅದಕ್ಕೆ ಹಿಂದೆ ಚಾರ್ಮ್ ಬಂದಿದ್ದೂ ಸುದ್ದಿಯಲ್ಲ. ಲಾಭವೋ ನಷ್ಟವೋ ಅವನು ಪ್ರತೀ ವರ್ಷ ಭತ್ತ ಬಿತ್ತುತ್ತಾನೆ ಅಕ್ಕಿ ಬೆಳೆಯುತ್ತಾನೆ. ಅವನಿಗೆ ಸಿಟ್ಟು ಬಂದು ಭತ್ತ ಬೆಳೆಯುವುದ ನಿಲ್ಲಿಸುವವರಿಗೂ ನಮ್ಮ ತಾಕತ್ತು ಹೀಗೆ ಮುಂದುವರೆಯುತ್ತದೆ.