ಬೀ ಈಟರ್ ಹೆಸರೇ ಹೇಳುವಂತೆ ಜೇನುಬಾಕ ಹಕ್ಕಿ.ಹಾರಾಟ ನೋಡಿದರೆ ಗಿಣಿಯೇನೋ ಎಂಬ ಭ್ರಮೆಗೆ ಹಚ್ಚುವ, ಗಿಳಿಯನ್ನೇ ಹೋಲುವ ಇದು ಗಂಡ ಹೆಂಡತಿ ಜೋಡಿಯಾಗಿ ಬದುಕು ಸಾಗಿಸುವ ಪಕ್ಷಿ. ಇರಲಿ ಅವೆಲ್ಲಾ ಅದರ ಹೆಗ್ಗಳಿಕೆಯಾಯಿತು. ಅದು ನನ್ನ ಹಾಗು ನನ್ನ ಜೇನಿನ ಬೆನ್ನೆತಿರುವ ಕತೆಗೆ ಬರೋಣ.
ಮಟಮಟ ಮಧ್ಯಾಹ್ನ ನಮ್ಮ ಮನೆಯ ಅಂಗಳದಲ್ಲಿ ಜೇನು ರೊಂಯ್ಯೋ ಅಂತ ಹಾರಾಡಲು ಶುರುಮಾಡಿತೆಂದರೆ ಬೀ ಈಟರ್ ಬಂದಿದೆ ಅಂತ ಅರ್ಥ. ಈ ಜೇನುಗಳೋ ಒಂಥರಾ ಯಡವಟ್ಟು ತಮ್ಮ ಪಾಡಿಗೆ ಪೆಟ್ಟಿಗೆಯೊಳಗೆ ಇದ್ದರೆ ಯಾರೂ (ಮನುಷ್ಯರನ್ನು ಹೊರತುಪಡಿಸಿ.....!) ಏನೂ ಮಾಡಲಾಗುವುದಿಲ್ಲ. ಆ ಹಕ್ಕಿಗಳಾದರೋ ಬಹು ಚುರುಕಿನವು. ಜೇನಿನ ಸಿಟ್ಟನ್ನು ಎನ್ ಕ್ಯಾಷ್ ಮಾಡಿಕೊಂಡು ಹೊಟ್ಟೆಯನ್ನು ಯಥೇಚ್ಚವಾಗಿ ತುಂಬಿಕೊಳ್ಳುತ್ತವೆ. ಅದು ನಡೆಯುವುದು ಹೀಗೆ...
ಹಕ್ಕಿಗಳೆರಡು ಜೇನು ಪೆಟ್ಟಿಗೆಯ ಹೊರಗೆ ಕುಳಿತು ಪಟಪಟನೆ ರಕ್ಕೆ ಬಡಿಯುತ್ತವೆ. ಆವಾಗಿನ ಸದಿಗೆ ಹೊರಹೊರಟ ಒಂದೆರಡು ಜೇನನ್ನು ಅಲ್ಲಿಯೇ ಕಟಂ ಕಟಂ ಅಂತ ತಿಂದುಬಿಡುತ್ತವೆ. ಇಷ್ಟಾಗಿದೆ ಹೀಗಾಗಿದೆ ಶತ್ರು ಮನೆಬಾಗಿಲಿಗೆ ಬಂದಾಗಿದೆ ಎಂಬ ಸುದ್ಧಿ ಪೆಟ್ಟಿಗೆಯೊಳಗೆ ಹೋಗಿದ್ದೇ ತಡ, ಒಳಗೆ ಕುಳಿತ ರಾಣಿಯಿಂದ "ಚಾರ್ಜ್" ಎಂಬ ಆರ್ಡರ್ ಬರುತ್ತದೆ. ತಕ್ಷಣ ಜೇನಿನ ದಂಡು ಹೊರಗೆಬರುತ್ತದೆ. ತಕ್ಷಣ ಹಸಿರುಬಣ್ಣದ ಬೀ ಈಟರ್ ಗಳೆರಡೂ ಹತ್ತಿರದ ಕರೆಂಟ್ ಲೈನ್ ಮೇಲೆ ಆರಾಮವಾಗಿ ಕುಳಿತುಬಿಡುತ್ತವೆ. ಈ ಜೇನು ಹುಳುಗಳೋ ತಾವು ಸಿಕ್ಕಾಪಟೆ ಜೋರೆಂಬ ಭ್ರಮೆಯಲ್ಲಿ ಹಕ್ಕಿಗಳ ಮೇಲೆ ಅಟ್ಯಾಕ್ ಮಾಡಲು ಬೆನ್ನೆಟ್ಟುತ್ತವೆ. ಈಗ ಬೀ ಈಟರ್ ಗೆ ಸುಗ್ಗಿಯೋ ಸುಗ್ಗಿ, ಕತ್ತನ್ನು ಒಮ್ಮೆ ಈ ಕಡೆ ತಿರುಗಿಸಿ ಕಟಂ , ಮತ್ತೊಮ್ಮೆ ಆಕಡೆ ತಿರುಗಿಸಿ ಕಟಂ. ಹತ್ತು ನಿಮಿಷಗಳಲ್ಲಿ ಸುಮಾರು ನೂರು ನೊಣಗಳು ಸ್ವಾಹಾ. ಭೂರಿ ಬೋಜನ ಪುಕ್ಕಟ್ಟೆ ಮುಗಿಸಿ ಪರ್ರನೆ ಹಾರುತ್ತಾ ಹೋಗಿಬಿಡುತ್ತವೆ.
ನನಗೀಗ ಮಧ್ಯಾಹ್ನ ಅದೇ ಕೆಲಸ ಹಕ್ಕಿ ಎಷ್ಟೋತ್ತಿಗೆ ಬರುತ್ತದೆ ಎಂದು ಕಾಯುವುದು ಮತ್ತು ಹಕ್ಕಿಗಳಿಗೆ ನಾನು ಎಷ್ಟೊತ್ತಿಗೆ ಬರುವುದಿಲ್ಲ ಎಂದು ಕಾಯುವುದು ಏತನ್ಮಧ್ಯೆ ಜೇನಿಗೆ ಮಾತ್ರಾ ಸಿಟ್ಟೋ ಸಿಟ್ಟು ಮತ್ತು ಅಪರದ ಭಟ್ರ ಕರೆಯಿಸಿಕೊಳ್ಳುವುದು.