Wednesday, April 22, 2009

"ತಂಗಾಳಿಯಲ್ಲಿ ನಾನು ತೇಲಿ ಹೋದೆ"

ಅಮಾವಾಸೆಯ ಕಾರ್ಗತ್ತಲು. ನಕ್ಷತ್ರಗಳು ಅಲ್ಲೊಂದು ಇಲ್ಲೊಂದು ಮಿನುಗುತ್ತಿತ್ತು.ಮೋಡ ನಕ್ಷತ್ರಗಳನ್ನು ಮರೆಮಾಚಿ ಮತ್ತೆ ತೋರಿಸುತ್ತಿತ್ತು. ಬಾಲ್ಯದಿಂದ ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಅಮಾವಾಸೆಯ ಭಯವನ್ನು ತೊಡೆದುಹಾಕುವ ನಿರ್ಧಾರವನ್ನು ತೆಗೆದುಕೊಂಡು ಅದಾಗಲೇ ಮನೆಯಿಂದ ಅರ್ದ ಕಿಲೋಮೀಟರ್ ಕ್ರಮಿಸಿದ್ದೆ. ಬೂತ ದೆವ್ವ ಪಿಶಾಚಿ ಮುಂತಾದವುಗಳ ಬಗ್ಗೆ ಕೇಳಿದ್ದ ಕತೆಗಳು ಪುಂಖಾನುಪುಂಖವಾಗಿ ನೆನಪಿಗೆ ಬರುತ್ತಿತ್ತು. ನಾನು ಕತ್ತಲಿನಲ್ಲಿ ಟಾರ್ಚ್ ನ ಸಹಾಯವೂ ಇಲ್ಲದೆ ಹಿಡಿದಿದ್ದ ದಾರಿ ಹಗಲೂ ಹೋಗಲು ಹೆದರುವ ಕಾಡು ಹಾಗೂ ಗುಡ್ಡದ ದಾರಿ. ನಿರ್ಜನ ಜಾಗದಲ್ಲಿ ದೆವ್ವಗಳು ಅಲೆದಾಟವಿರುತ್ತದೆ ಅವು ಮನುಷ್ಯರ ಆಕ್ರತಿಯನ್ನೇ ಹೊಂದಿದ್ದರೂ ಪಾದ ಮಾತ್ರ ಹಿಂದುಮುಂದೆ ಎಂಬಂತಹ ಕತೆಗಳು ಬೇಡವೆಂದರೂ ಪದೆ ಪದೆ ನೆನಪಾಗುತ್ತಿತ್ತು. ಅಂತಹ ನೆನಪುಗಳಿಂದ ಹೊರಬರಲು ಸಣ್ಣದಾಗಿ ಹಾಡಲು ಪ್ರಾರಂಭಿಸಿದೆ. ದಾರಿ ಕ್ರಮಿಸಿದಂತೆಲ್ಲಾ ಹಾಡಿನ ದನಿ ಸ್ವಲ್ಪ ಏರಿಸಿದೆ. ಗುಡ್ಡದ ದಾರಿಯಾದ್ದರಿಂದ ಏದುಸಿರು ಸ್ವಲ್ಪ ಹೆಚ್ಚಾಗಿ ಹಾಡಿನ ದನಿಯಲ್ಲಿಯೂ ಏರುಪೇರಾಗುತ್ತಿತ್ತು. ಒಮ್ಮೆ ನಾನು ಹಾಡುತ್ತಿರುವ ಹಾಡನ್ನು ನಾನೇ ಕೇಳಿಕೊಂಡೆ ಅರೆ "ತಂಗಾಳಿಯಲ್ಲಿ ನಾನು ತೇಲಿ ಹೋದೆ" ಎಂಬ ಮೋಹಿನಿಯದೇ ಹಾಡು. ಥೂ ದರಿದ್ರ ಅದು ಇಲ್ಲ ಎನ್ನುವುದಕ್ಕೆ ಹೊರಟ ನಾನು ಸರಿ ಸುಮಾರು ಅರ್ದ ಗಂಟೆ ಅದೊಂದೆ ಹಾಡು ನನಗೇ ತಿಳಿಯದಂತೆ ಹಾಡಿದೆನಲ್ಲ ಅಂತ ಅನಿಸಿ ಹಾಡು ಬದಲಾಯಿಸಿದೆ. ಇನ್ನು ಸರಿಸುಮಾರು ಅರ್ದ ಗಂಟೆ ಹೀಗೆ ನಡೆದರೆ ಗುಡ್ಡದ ತಲೆ ತಲುಪುತ್ತೇನೆ. ಅಲ್ಲಿಂದ ತಾಳಗುಪ್ಪ ಕಾಣಿಸುತ್ತದೆ. ಅಲ್ಲಿ ಲೈಟುಗಳ ಬೆಳಕು ನೋಡಬಹುದು. ದೂರದಲ್ಲಿ ಸಾಗರವನ್ನೂ ನೋಡಬಹುದು ಎಂದು ಆಲೋಚಿಸುತ್ತಾ " ನೂರೊಂದು ನೆನಪು ಎದೆಯಾಳದಿಂದ" ಎಂಬ ಬೇಸರದ ಹಾಡಿಗೆ ಭಾವುಕನಾಗಿ ಹಾಡುತ್ತಾ ಮುನ್ನೆಡದೆ. ಗುಡ್ಡದ ಏರಿನ ಹೊಡೆತ ಜೋರಾಗಿದ್ದರಿಂದ ಹಾಡಿನ ನಡುವೆ ಕೆಮ್ಮು ತನ್ನಿಂದತಾನೆ ಬರುತ್ತಿತ್ತು. ಹಾಗಾಗಿ ಹಾಡಿಗೆ ಒಂಥರಾ ಒರಿಜಿನಾಲಿಟಿ ಬಂದಿತ್ತು. ಗಂಟೆ ಸುಮಾರು ಎಷ್ಟಿರಬಹುದೆಂದು ಅಂದಾಜಿಸಿದೆ ಮನೆಯಿಂದ ಹೊರಡುವಾಗ ಹನ್ನೊಂದೂವರೆ ಈಗ ಹನ್ನೆರಡಾಗಿರಬಹುದಾ...? ಉತ್ತರ ಖಚಿತವಾಗಿ ಸಿಗಲಿಲ್ಲ. ಹನ್ನೆರಡು ಗಂಟೆಗೆ ಸರಿಯಾಗಿ ದೆವ್ವಗಳೂ ಡ್ಯೂಟಿ ಮುಗಿಸಿ ಮರಕ್ಕೆ ಬಂದು ವಾಪಾಸು ಸೇರಿಕೊಳ್ಳುತ್ತವೆ ಅಂತ ಯಾರೋ ಹೇಳಿದ್ದು ಪಕ್ಕನೆ ನೆನಪಾಯಿತು. ಎಷ್ಟೇ ಧೈರ್ಯ ತಂದುಕೊಂಡರೂ ಒಮ್ಮೆ ಮೈ ಜುಂ ಆಂತು. ನಡಿಗೆಯ ವೇಗದಿಂದ ಬೆವರು ಹರಿಯುತ್ತಿತ್ತು. ಅಂತೂ ಗುಡ್ಡದ ನೆತ್ತಿಗೆ ಬಂದು ತಲುಪಿದೆ. ಆಹಾ ಆ ಕ್ಷಣದ ಆನಂದ ಹೇಗೆ ವರ್ಣಿಸಲಿ..?. ಸೊಂಯ್ ಎಂದು ಬೀಸುವ ತಂಗಾಳಿ. ಗಾಳಿಗೆ ತೂಗುವ ಬೃಹದಾಕಾರದ ಬಿದಿರುಮೊಳೆಗಳು. ಅದರ ತಿಕ್ಕಾಟಕ್ಕೆ ಹೊರಡುವ ಸುಂಯ್ ಸುಂಯ್ ಶಬ್ದ. ಹೆಚ್ಚು ಕಮ್ಮಿ ಅರ್ದ ಗಂಟೆಗಳ ಕಾಲ ಅಲ್ಲಿಯೇ ಅತ್ತ ಇತ್ತ ಓಡಾಡಿದೆ. ಸೆಕೆಯ ಬೆವರಿಗೆ ಒದ್ದೆಯಾಗಿದ್ದ ಅಂಗಿಯನ್ನು ಬಿಚ್ಚಿ ಸುಮ್ಮನೆ ಮೇಲಕ್ಕೆ ಎಸೆದೆ. ಅದೊಂದೆ ನಾ ಮಾಡಿದ ಸ್ವಲ್ಪ ಯಡವಟ್ಟು ಕೆಲಸ. ಅಂಗಿ ಬಿದಿರಿನ ಹೆಣೆಕೆಗೆ ಸಿಕ್ಕಿ ಹಾಕಿಕೊಂಡಿತು. ಸಧ್ಯ ಬಿಳಿ ಬಣ್ಣದ ಅಂಗಿಯಾಗಿದ್ದರಿಂದ ದೂರದಿಂದಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಾಗೆಯೇ ಸ್ವಲ್ಪ ಹೊತ್ತಿ ಅಂಗಿಯ ಆಲೋಚನೆ ಬಿಟ್ಟು ಪ್ರಪಂಚವನ್ನು ತಂಗಾಳಿಯ ಸುಖವನ್ನು ಅನುಭವಿಸುತ್ತಾ ಆಡ್ಡಾದೆ. ಸುಸ್ತೆಲ್ಲಾ ಮಾಯವಾದಮೇಲೆ ಹರಸಾಹಸ ಪಟ್ಟು ಕೋಲೋಂದರ ಸಹಾಯದಿಂದ ಅಂಗಿಯನ್ನು ಕೆಳಗಿಳಿಸಿ ಮನೆಗೆ ಹೊರಡಲನುವಾದೆ.
ಅಷ್ಟರಲ್ಲಿ ನನ್ನಿಂದ ಸುಮಾರು ನೂರು ಅಡಿ ದೂರದಲ್ಲಿ ಸರಸರ ಸದ್ದು ಮಾಡುತ್ತಾ ಒಂಥರಾ ವಿಚಿತ್ರ ರೀತಿಯಲ್ಲಿ ಅಯ್ಯೋ ಎಂದು ಕೂಗುತ್ತಾ ಯಾರೋ ಓಡಿಹೋದಂತಾಯಿತು.
ಈಗ ಮಾತ್ರಾ ಅಂತಹ ತಂಗಾಳಿಯಲ್ಲಿಯೂ ನಖಶಿಕಾಂತ ಬೆವರಿದೆ. ಮತ್ತೆ ಸ್ವಲ್ಪ ಕ್ಷಣ ಸುಧಾರಿಸಿಕೊಂಡು ಯಾವ ಸದ್ದೂ ಬಾರದಾದಮೇಲೆ ಬಿರಬಿರನೆ ಮನೆಗೆ ಸೇರಿದೆ. ಹಾಗೆ ಕೂಗಿದ್ದು ದೆವ್ವವಾ?. ಅಥವಾ ನನ್ನಲ್ಲಿ ಅಡಗಿದ್ದಾ ಭಾವನೆಯಾ? ಉತ್ತರ ರಾತ್ರಿ ಪೂರ್ತಾ ನಿದ್ರೆಗೆಟ್ಟರೂ ಸಿಗಲೇ ಇಲ್ಲ. ನಿದ್ರೆ ಮಾಡಲೂ ಆಗಲಿಲ್ಲ. ಮಾರನೇ ದಿನ ಅದಕ್ಕೊಂದು ಉತ್ತರ ಸಿಕ್ಕೀತು ಅಂತ ನಾನು ಎಣಿಸಿರಲಿಲ್ಲ.
ಬೆಳಿಗ್ಗೆ ಎದ್ದವನು ನಿತ್ಯ ಕೆಲಸಗಳನ್ನೆಲ್ಲಾ ಮುಗಿಸಿ ಕೊನೆಕೊಯ್ಯುವ ಸುಬ್ಬನಿಗಾಗಿ ಕಾಯುತ್ತಾ ಕುಳಿತೆ. ಹತ್ತು ಗಂಟೆಯಾದರೂ ಆತ ಪತ್ತೆ ಇಲ್ಲ. ಬೇರೆಲ್ಲಾದರೂ ಹೋಗಿಬಿಟ್ಟನೇನೋ ನೋಡಿ ಬರೋಣ ಅಂತ ಅವನ ಮನೆಗೆ ಹೋದೆ. ಸುಬ್ಬನ ಮನೆ ತಲುಪಿ ಅವನ ಹೆಸರು ಹಿಡಿದು ಕೂಗಿದೆ. ಆದರೆ ಆತ ಹೊರಬರದೆ ಅವನ ಹೆಂಡತಿ ಲಕ್ಷ್ಮಿ ಹೊರಗೆ ಬಂದು "ಅವ್ರಿಗೆ ಸಿಕ್ಕಾಪಟ್ಟೆ ಜ್ವರ ಬಂದೈತಿ" ಎಂದಳು.
"ನಿನ್ನೆ ಅರಾಂ ಇದ್ನಲ್ಲ" ನಾನಂದೆ
"ಹೌದ್ರಿ ರಾತ್ರಿ ಬ್ಯಾಡ್ದಿದ್ದು ಮಾಡಾಕೆ ಹೋಗಿ ಜ್ವರ ಬರ್ಸಿಕೊಂಡಿದಾರೆ"
"ಎಂತದು ಅಂತ ಮಾಡಬಾರದ ಕೆಲ್ಸ"?.
"ನಿನ್ನೆ ರಾತ್ರಿ ಅಮಾಸೆ ಬ್ಯಾಡ ಅಂತ ನಾ ಹೇಳಿದ್ರು ಕೇಳ್ದೆ ಕಾಡುಗುಡ್ಡಕ್ಕೆ ಬ್ಯಾಟಿಗೆ ಹೋಗಿದಾರೆ, ಅಲ್ಲಿ ದಯ್ಯ ಕಂಡು ಕೂಗ್ತಾ ಮನಿಗೆ ಬಂದು ಬಿದ್ಕಂಡಿದಾರೆ, ಈಗ ಗಾಡಿಗ ಮಾವಂಗೆ ಹೇಳಿ ಕಳ್ಸಿದೀನಿ" ಎಂದು ದುಗುಡ ತುಂಬಿದ ವದನಾರವಿಂದ ದಿಂದ ಹೇಳಿದಳು.
ಈಗ ನನಗೆ ರಾತ್ರಿಯ ಕೂಗಿನ ಮರ್ಮ ತಿಳಿಯಿತು. "ಅಯ್ಯೋ ಅದು ದೆವ್ವ ಅಲ್ಲ ಎಂತೂ ಅಲ್ಲ, ಮಾರಾಯ್ತಿ ನಾನೇ ರಾತ್ರಿ ಗುಡ್ಡಕ್ಕೆ ಹೋಗಿದ್ದೆ ನನ್ನ ನ್ನ ಕಂಡು ದೆವ್ವ ಅಂದ್ಕೊಂಡಿದಾನೆ ಕರಿ ಇಲ್ಲಿ ಅವನ್ನ" ಎಂದೆ.
"ಸುಮ್ಕಿರಿ ಒಡಿಯಾ ನೀವು, ತಮಾಶಿ ಮಾಡಾದು ಸಾಕು, ನೀವೆಂತಕೆ ಅಪರಾತ್ರಿಲಿ ಗುಡ್ಡಕ್ಕೆ ಹೋಕ್ತೀರಿ?. ಅದೂ ಅಲ್ದೆ ಅವ್ರು ಸರಿಯಾಗಿ ನೋಡಿದಾರಂತೆ . ಕೆಳಗೆ ಒಂದು ಓಡಾಟ್ತ ಇತ್ತಂತೆ, ಇನ್ನೊಂದು ಸೊಂಯ್ ಅಂತ ಹಾರಿ ಬಿದಿರು ಮಟ್ಟಿಯ ತಲೆಯ ಮೇಲೆ ಹಾರಿ ಕುತ್ಕಂಡ್ತಂತೆ, ಅದಕ್ಕೆ ಎರಡು ಕೈ ಮಾತ್ರಾ ಇತ್ತಂತೆ . ನೀವೆ ಆಗಿದ್ರೆ ನಿಮ್ಗೆ ಮೇಲೆಲ್ಲ ಹಾರಾಕೆ ಬರ್ತೈತಾ?."
ಈಗ ಉತ್ತರಿಸಲಾಗದ ಹಂತಕ್ಕೆ ನಾನು ಬಂದಿದ್ದೆ ನಾನು ಸುಮ್ಮನೆ ಮೇಲಕ್ಕೆ ಹಾರಿಸಿದ ಅಂಗಿ ಸೆಕೆ ತಡೆಯಲಾರದೆ ಮಾಡಿದ ಕೆಲಸ ದೆವ್ವಗಳ ನಂಬಿಕೆಯಿಂದ ಹೊರಬರಲು ಮಾಡಿದ ಅಪರಾತ್ರಿ ಓಡಾಟ, ಯಾವುದನ್ನೂ ಆಕೆ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ನನಗೆ ರಾತ್ರಿ ಕೂಗಿನ ಉತ್ತರ ಸಿಕ್ಕಿತ್ತು. ಸೈ ಎನ್ನುತ್ತಾ ಮನೆಯ ದಾರಿ ಹಿಡಿದೆ.
ಸಂಜೆ ಅವರ ಮನೆಯ ಮುಂದೆ ಹಾದು ಹೋಗುತ್ತಿರುವಾಗ ಗಾಡಿಗನ ಆರ್ಭಟ ಜೋರಾಗಿ ಕೆಳಿಬರುತ್ತಿತ್ತು. " ಇನ್ನು ಈ ಕಡೆ ಬರ್ತೀಯಾ?. ಬಿಟ್ಟೋಗು ದರಿದ್ರ ನಾನು ಅಂತಿಂತ ಗಾಡಿಗ ಅಂತ ತಿಳ್ಕಂಡಿಯಾ? ನೀನು ಬಿದಿರು ಮಟ್ಟಿ ಹತ್ತಿ ಕುಳಿತರೆ ನಾನು ಆಕಾಸ್ದಾಗೆ ತೇಲಾಡ್ತೀನಿ, ಹೋಗ್ ಹೋಗ್" ಎನ್ನುತ್ತಾ ಸುಬ್ಬನಿಗೆ ಬೇವಿನ ಸೊಪ್ಪಿನ ಪೂಜೆ ನಡೆಯುತ್ತಿತ್ತು.
ದೆವ್ವಕ್ಕೆ ಉತ್ತರ ಹುಡುಕಲು ಹೋಗಿ ಇನ್ನಷ್ಟು ದೆವ್ವದ ನಂಬಿಕೆ ಹೆಚ್ಚಾಗಲು ಕಾರಣೀಕರ್ತನಾದೆನಲ್ಲ ಅಂತ ಅನ್ನಿಸಿದ್ದು ಸುಳ್ಳಲ್ಲ.

Tuesday, April 21, 2009

ಕಾರ್ ಕಾರ್ ಕಾರ್


ಅಬ್ಬಾ ಈ ಕಾರ್ ಮುಟ್ಟಲೂ ಹಣ ಕೊಡಬೇಕೇನೋ. ಬಂಗಾರ ಮಯದ ಈ ಕಾರ್ ನೋಡಿ. ಜಗತ್ತು ಎಂತಹ ಐಷರಾಮಿನಲ್ಲಿ ತೇಲುತ್ತಿದೆ ಅಂತ ಅರ್ಥವಾಗುತ್ತೆ