ಅಡಿಗೆ ಭಟ್ಟರೊಯ್ಯುವರು
ಯಜ್ಞ ಸುಟ್ಟವರೊಯ್ಯುವರು
ಸರ್ವ ಬಿಟ್ಟವರೊಯ್ಯುವರು
ಸಂಸಾರಿಯಿಂದ
ಹೀಗಿದೆ ನೋಡಿ ಸಂಸಾರಿಯ ಗತಿ. ಮದುವೆ ಎಂಬ ಮೂರಕ್ಷರದ ನಂತರ ಸಂಸಾರಿ ಎಂಬ ಹಂತಕ್ಕೆ ಏರುತ್ತಾರಲ್ಲ ಆವಾಗ ಶುರು. ಮಿಕ್ಕವರೆಲ್ಲರೂ ಈ ಸಂಸಾರಿಯ ಹಿಂದೆ ಬೀಳುತ್ತಾರೆ. ಅಲ್ಲಿಯತನಕದ ಜೀವನ ಅವನಿಗೆ ನಂತರದ್ದು ಬೇರೆಯವರಿಗೆ. ಮನುಷ್ಯನಿಗೆ ಮದುವೆ ಎಂಬುದು ಬಂಧನವೂ ಹೌದು ಹಾಗೆಯೇ ಜೀವನವೂ ಹೌದು. ನಮ್ಮ ಹಿಂದೂ ಧರ್ಮ ಶಾಸ್ತ್ರಗಳು ಅಪುತ್ರಸ್ಯ ಗತಿರ್ನಾಸ್ತಿ ಎಂದು ಒಂಥರಾ ಹೆದರಿಸಿ ಮದುವೆಗೆ ಪ್ರಚೋದಿಸುತ್ತವೆ. ಮದುವೆಯಾದ ಮೇಲೆ ಮತ್ತೆ ಮಕ್ಕಳಾಗದಿದ್ದರೆ ನಾಗ ಶಾಂತಿ ಸುಬ್ರಹ್ಮಣ್ಯ ಜಪ ಹೀಗೆಲ್ಲಾ ಮುಂದುವರೆಯುತ್ತದೆ. ಇರಲಿ ಅವೆಲ್ಲಾ ಶಾಸ್ತ್ರ ಸಂಪ್ರದಾಯಗಳ ಕತೆಯಾಯಿತು ಈಗ ಸಂಸಾರದ ವಿಚಾರಕ್ಕೆ ಬರೋಣ. ನಮ್ಮ ಹಳ್ಳಿಗಳಲ್ಲಿ ಒಂದುಕಾಲದಲ್ಲಿ ಸಂಸಾರ ಎಂಬುದನ್ನು ಸಾಗರಕ್ಕೆ ಹೋಲಿಸಲಾಗುತ್ತಿತ್ತು. ಆದರೆ ನಿಜವಾಗಿಯೂ ಸಂಸಾರವೆಂದರೆ ಹಡಗಿನ ನೆನಪಾಗುತ್ತಿತ್ತು. ಅಣ್ಣತಮ್ಮಂದಿರು ಐದು ಜನ ಅವರಿಗೆ ತಲಾ ನಾಲ್ಕೈದು ಮಕ್ಕಳು ಆ ಮಕ್ಕಳಿಗೆ ಹೆಂಡಂದಿರು ಹೀಗೆ ಮೂವತ್ತು ನಲವತ್ತು ಜನರಿರುವ ಒಂದೊಂದು ಅವಿಭಕ್ತ ಕುಟುಂಬ . ಅಮ್ಮಾ .............ನಿಜವಾಗಿಯೂ ಅದನ್ನು ನಿಭಾಯಿಸಲು ಎಂಟೆದೆಯ ಭಂಟನಾಗಿರಲೇ ಬೇಕು. ಅತ್ತೆ ಸೊಸೆ ಜಗಳ ವಾರಗಿತ್ತಿಯರ ಮುನಿಸು ಗಂಡ ಹೆಂಡಿರ ಗುದ್ದಾಟ ಮಕ್ಕಳ ಚೆಲ್ಲಾಟ ಹೊಡೆದಾಟ ಒಂದೊಂದು ನೆನೆಸಿಕೊಂಡರೆ ಹಾಗೆ ಇದ್ದ ಅವಿಭಕ್ತ ಕುಟುಂಬಗಳು ಕನಸಾ ಎಂದೆನಿಸುತ್ತದೆ. ದಿನನಿತ್ಯ ಒಬ್ಬರಲ್ಲಾ ಒಬ್ಬರು ಅತಿಥಿಗಳು ಅವರಿಗೆ ಊಟ ಹಾಸಿಗೆ ಕಾಫಿ ತಿಂಡಿ. ಮಕ್ಕಳ ವಿದ್ಯಾಭ್ಯಾಸ ಅವುಗಳಿಗೆ ಬಟ್ಟೆಬರೆ . ಅದನ್ನೆಲ್ಲಾ ಹ್ಯಾಗೆ ನಿಭಾಯಿಸಿದರು? ಎಂಬ ಪ್ರಶ್ನೆ ಒಮ್ಮೊಮ್ಮೆ ಕಾಡದಿರದು. ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬ ಎಂಬ ಶಬ್ಧ ಬಹುಪಾಲು ತನ್ನ ಅರ್ಥ ಕಳೆದುಕೊಂಡಿದೆ. ಗಂಡ ಹೆಂಡತಿ ಒಂದು ಮಗು ಇಷ್ಟಕ್ಕೆ ಸಂಸಾರ ಮುಗಿಯುತ್ತದೆ. ಆದರೂ ಟೆನ್ಷನ್ ಜೀವನ ಹಾಗಾದರೆ ಆವಾಗ..ಇವುಗಳನ್ನೆಲ್ಲಾ ಹೇಗೆ ನಿಭಾಯಿಸಿದರು ?. ಎಂಬ ಪ್ರಶ್ನೆ ಕಾಡುತ್ತದೆ. ನಮ್ಮ ಊರಿನಲ್ಲಿ ಒಬ್ಬ ಮಹಾತಾಯಿ ಹಾಗೂ ಆಕೆಯ ಗಂಡ ಮಹಾಪುರುಷ. ಅವರಿಗೆ ಒಟ್ಟು ಹದಿನೆಂಟು ಮಕ್ಕಳು. ಆದರೆ ಆ ಕರುಣಾಮಯಿ ದೇವರ ದಯೆಯಿಂದ ಉಳಿದದ್ದು ಐದು ಗಂಡು ಒಂದು ಹೆಣ್ಣು. ಉಳಿದ ಇಷ್ಟರಿಂದಲೇ ಇಡೀ ಮನೆಯಲ್ಲಿ ಮೂವತ್ತು ಜನ. ಎರಡೂವರೆ ಎಕರೆ ಅಡಿಕೆ ಭಾಗಾಯ್ತು. ಹಿರಿಯಣ್ಣ ಮನೆಯ ಯಜಮಾನ. ಅದೇನು ಮಾಡಿದನೋ ಸಂಸಾರ. ಮಕ್ಕಳೆಲ್ಲಾ ಯಾರ ಹಿಡಿದು ಎಲ್ಲಿ ಓದಿದರೋ..? ಅಂತೂ ಇವತ್ತಿನ ಈ ಕಾಲದಲ್ಲಿ ಎಲ್ಲಾ ಮಕ್ಕಳು ದೇಶದಾದ್ಯಂತ ಒಂದೊಂದು ಕಡೆ ಅಂಗಡಿ ಕೆಲಸ ಮುಂತಾದವುಗಳನ್ನು ಅವಲಂಬಿಸಿ ಯಶಸ್ಸು ಹೊಂದಿದ್ದಾರೆ. ಆ ಮನೆಯ ಯಜಮಾನ ಎಂಬತ್ತುವರ್ಷವಾದರೂ ಇನ್ನೂ ಗಟ್ಟಿಯಾಗಿದ್ದಾನೆ.
ಮತ್ತೊಂದು ಅವಿಭಕ್ತ ಕುಟುಂಬ ನನ್ನ ಅತ್ತೆಯಮನೆ, ಲಿಂಗನಮಕ್ಕಿ ಆಣೆಕಟ್ಟಿನ ಭರಾಟೆಯಲ್ಲಿ ಅಮೀನುಕಳೆದುಕೊಂಡು ಸಿರಸಿಯ ಸಮೀಪ ಕಂಚಿಕೊಪ್ಪ ಎಂಬ ಊರಿನಲ್ಲಿ ನೆಲಸಿದ ಕುಟುಂಬ. ಅತ್ತೆಗೆ ಆರು ಗಂಡು ಮೂರು ಹೆಣ್ಣು ಮಕ್ಕಳು. ನಾನು ಚಿಕ್ಕವನಿದ್ದಾಗ ಬೇಸಿಗೆ ರಜೆಗೆ ಅಲ್ಲಿಗೆ ದೌಡಾಯಿಸುತ್ತಿದ್ದೆ. ಅಲ್ಲಿ ಮಕ್ಕಳ ಸಂಖ್ಯೆ ಎಷ್ಟಿತ್ತೆಂದರೆ ರಾತ್ರಿ ಊಟಕ್ಕೆ ಕೆಲವರು ತಪ್ಪಿಸಿಕೊಂಡರೂ ಗೊತ್ತಾಗುತ್ತಲೇ ಇರಲಿಲ್ಲ. ಕರೆಂಟ್ ಕೂಡ ಅಲ್ಲಿಗೆ ಬಂದಿರಲಿಲ್ಲವಾದ್ದರಿಂದ ಚಿಮುಣಿ ಬುಡ್ಡಿ ಅಥವಾ ಗ್ಯಾಸ್ ಲೈಟ್ ಬೆಳಕಿನಲ್ಲಿ ಯಾರು ಉಂಡರೋ ಯಾರು ಬಿಟ್ಟರೋ ಭಗವಂತನೇ ಬಲ್ಲ ಎಂಬಂತಿತ್ತು. ಬೆಳಿಗ್ಗೆ ದೋಸೆ ಕನಿಷ್ಟವೆಂದರೂ ನೂರು ಬೇಕಾಗುತ್ತಿತ್ತು. ಈ ಜನಜಂಗುಳಿಯ ನಡುವೆಯೇ ಅತ್ತೆಯ ಮನೆಯ ಮಕ್ಕಳು ಮೊಮ್ಮಕ್ಕಳು ಓದಿ ವಿದ್ಯಾವಂತಾರಾಗಿ ಪ್ರಪಂಚಾದ್ಯಂತ ನೆಲಸಿದ್ದಾರೆ.
ಆದರೆ ಈಗ ಮೂರೇ ಮೂರು ಅಥವಾ ಹೆಚ್ಚೆಂದರೆ ನಾಲ್ಕು ಜನರಿರುವ ಕುಟುಂಬ ವ್ಯವಸ್ಥೆಗೆ ನಾವು ತಲುಪಿದ್ದಾಗಿದೆ. ಇರುವ ಒಂದೋ ಎರಡೋ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅಪ್ಪ ಅಮ್ಮ ಅಂಡುಮೇಲೆ ಮಾಡಿಕೊಂಡು ಒದ್ದಾಡುವುದನ್ನು ನೋಡಿದರೆ ಅಂದಿನ ಅಮ್ಮಂದಿರಿಗೆ ಗಿಟಿಗಿಟಿ ನಗು ಬರಬಹುದೇನೋ. ಇಂದಿನ ಸಂಸಾರದ ಅಪ್ಪ ಅಮ್ಮರ ಮುನಿಸು, ಅಸಮಾಧಾನ, ಕೋಳಿ ಜಗಳ, ಪ್ರತಿ ನಿತ್ಯ ಚರ್ಚೆಯಾಗುವ ಭವಿಷ್ಯದ ಜೀವನದ ಕುರಿತು ಹೆದರಿಕೆಗಳು ಮುಂತಾದವುಗಳೆಲ್ಲಾ ಅಂದಿನ ಸಂಸಾರಕ್ಕೆ ಹೋಲಿಸಿದರೆ ನಿಜಕ್ಕೂ ನಾಚಿಕೆಯಾಗುತ್ತದೆ. ಅಂದು ಈತರಹ ಬೇಡದ ವಿಷಯಗಳನ್ನು ಆಲೋಚಿಸಲು ಮತ್ತೊಂದು ಪ್ರಪಂಚವನ್ನು ನೋಡಲು ಅವಕಾಶವೂ ಇರಲಿಲ್ಲ ಸಮಯವೂ ಇರಲಿಲ್ಲ ಇಂದು ಹಾಗಲ್ಲ. ಸಂಸಾರ ಸಣ್ಣದಾದರೂ ಭಾರವಾಗಿದೆ. ಜವಾಬ್ದಾರಿ ಪಾಸ್ ಮಾಡಲು ಗಂಡ ಹೆಂಡತಿ ಇಬ್ಬರೂ ಪರಸ್ಪರ ತಯಾರಾಗಿ ನಿಂತಿರುತ್ತಾರೆ. ಇರಲಿ ಅಂದು ಅಂದಿಗೆ ಕಷ್ಟವಾದರೂ ಇಂದು ಮಜ. ಇಂದು ಇಂದಿಗೆ ಹಿಡಿಸದಿದ್ದರೂ ಮುಂದೆ ಮಜ. ಕಾರಣ ಮುಂದೊಂದು ದಿವಸ ಯಾರೋ ಒಬ್ಬಾತ ತನ್ನ ಬ್ಲಾಗ್ ನಲ್ಲಿ "ಒಂದುಕಾಲದಲ್ಲಿ ಅಪ್ಪ ಅಮ್ಮ ಒಟ್ಟಿಗೆ ಇರುತ್ತಿದ್ದರಂತೆ.....ಅದಕ್ಕೆ ಸಂಸಾರ ಎನ್ನುತ್ತಿದ್ದರಂತೆ, ಅದು ಹೇಗೆ ಇರುತ್ತಿದ್ದರೋ ..." ಎಂಬುದಾಗಿ ಬರೆಯಬಹುದು.
ಮೊನ್ನೆ ಅದ್ಯಾವುದೋ ಸಮಾರಂಭಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋದಾಗ ಊಟಕ್ಕೆ ಎರಡು ಜಾಗ ಹಿಡಿಯುವುದಕ್ಕೆ ಹರಸಾಹಸ ಪಡಬೇಕಾಯಿತು. ಸೀಟು ಹಿಡಿದು ಅಬ್ಬಾ ಇನ್ನು ಊಟಕ್ಕೆ ರೆಡಿ ಎಂಬಂತಿರುವ ಫೋಟೋ ನೋಡಿದಾಗ ಇವೆಲ್ಲಾ ನೆನಪಾಯಿತು. ಇದೇ ಅಂದಾಗಿದ್ದರೆ ಕನಿಷ್ಟ ಹತ್ತು ಊಟದ ಜಾಗವನ್ನು ನಾನು ಹಿಡಿಯಬೇಕಾಗಿತ್ತು ಎಂಬ ಪರಿಸ್ಥಿತಿ ನೆನೆದು ಹೀಗೆಲ್ಲಾ ಏನೇನೋ ಒಂದೊಕ್ಕೊಂದು ಸಂಬಂಧವಿಲ್ಲದೇ ಬರೆಯುವಂತಾಯಿತು.
ಕೊನೆಯಾದಾಗಿ: ಆನಂದರಾಮ ಶಾಸ್ತ್ರಿಗಳೇ ಇತಿಹಾಸ ಮರುಕಳಿಸುತ್ತದೆ ಎಂದು ಹೇಳುತ್ತಾರಲ್ಲ ಹಾಗಂದಮೇಲೆ ಮತ್ತೆ ಹೀಗೆ ನೂರಾರು ಜನರ ಅವಿಭಕ್ತ ಕುಟುಂಬ ವ್ಯವಸ್ಥೆ ಮುಂದೊಂದು ದಿನ ಬರಲೇ ಬೇಕಲ್ಲವೇ?. ಎಂದು ಕೇಳಿದೆ ಅದಕ್ಕವರು " ಇಡೀ ಸಮಾಜ ಈ ಸಂಸಾರ ವೆಂಬ ವ್ಯವಸ್ಥೆಯ ಮೇಲೆ ನಿಂತಿದೆ. ಅದು ಡಂ ಎಂದರೆ ಪ್ರಪಂಚ ಡಂ ಎಂದಂತೆ. ಸಂಸಾರಿಯಾದವನು ಹೆದರಿಕೆಯಿಂದಲಾದರೂ ಜವಾಬ್ದಾರಿಯಾಗಿ ವರ್ತಿಸುತ್ತಾನೆ. ವಿಭಕ್ತ ಅವಿಭಕ್ತ ಎಂಬುದೆಲ್ಲಾ ನಾವು ಮಾಡಿಕೊಂಡ ವ್ಯವಸ್ಥೆ. ಇಡೀ ಪ್ರಪಂಚವೇ ಒಂದು ಕುಟುಂಬ, ವಸುದೈವ ಕುಟುಂಬಕಂ....." ಎಂದು ಉತ್ತರಿಸಿದರು. ಈ ಉತ್ತರ ಹೇಗಿತ್ತೆಂದರೆ ಈ ನನ್ನ ಬ್ಲಾಗ್ ಟೈಟಲ್ ಗೂ ಹಾಗೂ ನಾ ಬರೆದ ವಿಷಯಕ್ಕೂ ಮತ್ತು ಆರಂಭದಲ್ಲಿ ನಾನು ಬರೆದ ಚತುಷ್ಪದಿಗೂ ಇದ್ದಂತೆ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆದರೂ ಎನೋ ಇತ್ತು ಅಲ್ಲಿ ನನಗೆ ಅರ್ಥವಾಗಲಿಲ್ಲವಷ್ಟೆ.
ಟಿಪ್ಸ್: ತಲೆಯಲ್ಲಿ ಎಂಟಾಣೆಯ ಬಿಲ್ಲೆಯಾಕರದಲ್ಲಿ ಕೂದಲು ಉದುರಿಹೋಗುತ್ತದೆ. ಅದೊಂದು ಮಹಾನ್ ಖಾಯಿಲೆ ಎಂದು ಚರ್ಮ ತಜ್ಞರು ಬಿಂಬಿಸಿ ಸಾವಿರಾರು ರೂಪಾಯಿ ಕೆತ್ತಿಬಿಡುತ್ತಾರೆ. ಅದಕ್ಕೆ ನಾಲ್ಕಾಣೆಯೂ ಖರ್ಚಿಲ್ಲದ ಔಷಧಿಯೆಂದರೆ ತಾಮ್ರದ ಪಾತ್ರೆಯಲ್ಲಿ ಗೋಮೂತ್ರವನ್ನು ಹಿಡಿದು ಮೂರುದಿನ ಬಿಸಿಲಿನಲ್ಲಿ ಇಟ್ಟು ಆ ಜಾಗಕ್ಕೆ ಹಚ್ಚಿದರೆ ಕೂದಲು ಬುರುಬುರುನೆ ಬರಲು ಶುರುವಾಗುತ್ತದೆ. ಪುಕ್ಕಟೆ ಔಷಧಿಗೆ ಸಾವಿರಾರು ಕಳೆಯಬೇಡಿ, ಗೋಮಾತೆ ಮಾತೆ ಎನ್ನಿರೋ....