Tuesday, May 3, 2011

ನನಗೆ ಗೊತ್ತಿಲ್ಲ...ನಿಮಗೆ?



ದೇವರು ಎಂಬ ಶಕ್ತಿಗೆ ಹಲವು ರೂಪ ಹಲವು ವೇಷ. ನಮ್ಮ ಸಮಯಕ್ಕೆ ನಮ್ಮ ಸಮಸ್ಯೆಗೆ ನಮ್ಮ ಸಂಕಟಕ್ಕೆ ಒದಗುವ ಜನರನ್ನೂ ನಾವು ದೇವರು ಅಂತ ಅಂದುಬಿಡುತ್ತೇವೆ. ಆದರೂ ಅಲ್ಲಿಯೂ ಕೂಡ "ದೇವರು ಬಂದ ಹಾಗೆ ಬಂದೆ ಮಾರಾಯಾ" ಎಂದು ಆ ಕಾಣದ ಎಂದೂ ಬಾರದ ದೇವರಿಗೆ ಗುಲುಗುಂಜಿ ಮಹತ್ವ ನೀಡಿ ಹೇಳುವ ಮಾತದು.ಇರಲಿ ದೇವರೆಂಬ ಶಕ್ತಿ ಉತ್ತರ ಸಿಗದ ಅಥವಾ ನಿಲುಕದ ಪ್ರಶ್ನೆ, ನಾನು ಈಗ ಹೇಳಹೊರಟಿದ್ದು ಅಂತಹ ಒಬ್ಬ ವ್ಯಕ್ತಿಯ ಬಗ್ಗೆ.
ಒಂದು ಸಣ್ಣ ಜ್ವರ ಬಂದರೆ ಜೀವನವೇ ಮುಗಿದು ಹೋಯಿತು ಎಂದು ಹಲುಬುವವರ ಸಂಖ್ಯೆ ಅದೇಕೋ ಬಹಳ ಹೆಚ್ಚು. ಷುಗರ್ ಬಿಪಿ ಇದ್ದರಂತೂ ಮುಗಿದೇ ಹೋಯಿತು ಹೆಜ್ಜೆ ಹೆಜ್ಜೆಗೂ ಅದರದ್ದೇ ಸುದ್ದಿ ಅದರದ್ದೇ ಜಪ. ಆದರೆ ಈಗ ನಾನು ಹೇಳಹೊರಟವನ ಕತೆ ಕೇಳಿ ಇನ್ನು ನಾವೆಲ್ಲ ಗೊಣಗುವುದರಲ್ಲಿ ಅರ್ಥವಿದೆಯಾ ಎಂಬ ಪ್ರಶ್ನೆ ಬೇಕಾದರೆ ಕೇಳಿಕೊಳ್ಳಬಹುದು.
ನನಗೆ ಜೆಸಿಬಿ ಕೆಲಸದ ಅವಶ್ಯಕತೆ ಇದ್ದಾಗ ಕಾನ್ಲೆಯ ವೆಂಕಟಾಚಲ ಎಂಬ ಜನವನ್ನು ಸಂಪರ್ಕಿಸಿದೆ.ಆತನೋ ಪಾದರಸದಂತಹ ವ್ಯಕ್ತಿತ್ವ ಉಳ್ಳವ. ಆತನ ವೇಗಕ್ಕೆ ಸ್ಪಂದಿಸುವುದು ಅಷ್ಟು ಸುಲಭದ ಮಾತಲ್ಲ. ಅರ್ಥ್ ಮೂವಿಂಗ್ ವಿಷಯದಲ್ಲಿ ಸೂಪರ್ ಪರಿಣಿತ. ನಾನು ಹೇಳಿದ ಕೆಲಸವನ್ನು ಮೂರು ನಾಲ್ಕು ದಿವಸಗಳ ಒಳಗೆ ಚಕಚಕ ಅಂತ ಮುಗಿಸಿಕೊಟ್ಟು ಹೊರಟುನಿಂತ. ಬೆಳಿಗ್ಗೆ ಆರುಗಂಟೆಯಿಂದ ಸರಪರ ಸರಪರ ಅಂತ ಸೈಟಿನಲ್ಲಿ ಓಡಾಡಿ ಹುರುಪು ತಂದಿಟ್ಟವರ ಪೈಕಿಯಲ್ಲಿ ವೆಂಕಟಾಚಲ ಮೊದಲಿಗೆ.
ಅಂತಹ ವೆಂಕಟಾಚಲ ನನಗೆ ಹಳೇ ಪರಿಚಯದ ಜನ, ಆತನ ಆರೋಗ್ಯ ಕೆಲ ವರ್ಷದ ಹಿಂದೆ ತುಸು ಏರುಪೇರಾಗಿತ್ತು ಅಂತ ಯಾರೋ ಹೇಳಿದ್ದು ನೆನಪಾಗಿ ಕೇಳಿದೆ" ಆವಾಗ ನಿನ್ನ ಆರೋಗ್ಯ ಸರಿ ಇರಲಿಲ್ಲವಲ್ಲ, ಏನಾಗಿತ್ತು?. ಆತ "ಹೌದು ಸಣ್ಣದೊಂದು ಸಮಸ್ಯೆಯಾಗಿತ್ತು" ಎಂದು ಹೇಳಿ ಸುಮ್ಮನುಳಿದ. ಏನಾಗಿತ್ತು ಅಂತ ಮತೆ ಕುತೂಹಲದಿಂದ ಪ್ರಶ್ನಿಸಿದೆ. ನಿರುಂಬಳವಾಗಿ ಆತ್ ನೀಡಿದ ಉತ್ತರ ಕೇಳಿ ದಂಗಾಗಿ ಹೋದೆ.
"ಅದೇಕೋ ಸಣ್ಣ ಹೊಟ್ಟೆ ನೋವು ಬರುತ್ತಿತ್ತು, ಸಿಕ್ಕಾಪಟ್ಟೆ ಸುಸ್ತು, ಅಂತ ಮಣಿಪಾಲಕ್ಕೆ ಹೋದೆ, ಅವರು ಪರೀಕ್ಷೆ ಮಾಡಿ, ನಿಮಗೆ ಒಂದು ಕಿಡ್ನಿ ಹುಟ್ಟುವಾಗಲೇ ಇಲ್ಲ ಇನ್ನೊಂದು ಸ್ವಲ್ಪ ತೊಂದರೆಯಲ್ಲಿದೆ ಎಂದರು. ನಂಬಿಕೆಯಾಗಲಿಲ್ಲ, ಸೀದಾ ಅಲ್ಲಿಂದ ಹೊರಟು ಬೇರೆಡೆ ಹೋಗುವ ತೀರ್ಮಾನ ಕೈಗೊಂಡೆ. ಅಲ್ಲಿನ ವೈದ್ಯರು "ಇಲ್ಲ ಈಗಲೇ ಆಪರೇಷನ್ ಮಾಡಿದರೆ ಮಾತ್ರಾ ಬದುಕುಳಿಯುತ್ತೀರಿ, ಇಲ್ಲದಿದ್ದಲ್ಲಿ ಇನ್ನೈದು ದಿವಸದೊಳಗೆ ನಿಮ್ಮ ಆರೋಗ್ಯ ಮಿತಿಮೀರಿ ಹಾಳಾಗುತ್ತದೆ ಎಂದರು. ನನಗೆ ಅದು ಸತ್ಯ ಅಂತ ಅನ್ನಿಸಲಿಲ್ಲ, ಆದರೂ ಎದೆಗುಂದದೆ ಮನೆಗೆ ಬಂದು ಬರಬೇಕಾದ ಬಾಕಿ ಹಣಕ್ಕೆ ಎಲ್ಲರಿಗೂ ಪೋನಾಯಿಸಿದೆ. ಅರ್ದದಷ್ಟು ಹಣ ಮನೆಬಾಗಿಲಿಗೆ ಬಂತು, ನಾನು ಕೊಡಬೇಕಾದವರಿಗೆಲ್ಲ ಚುಕ್ತಾ ಮಾಡಿದೆ. ಮಾರನೇ ದಿವಸ ಬೆಂಗಳೂರು ಸೇರಿದೆ. ಪರಿಚಯದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದಾಗ ಮಣಿಪಾಲದ ವರದಿ ನಿಜ ಅಂತ ತಿಳಿಯಿತು. ಒಮ್ಮೆ ಹತಾಶ ಭಾವೆ ಮೂಡಿತಾದರೂ ಹೆಂಡತಿ ಹಾಗೂ ಮಗಳ ಮುಖ ನೆನಪಾಗಿ ಧೈರ್ಯ ತಂದುಕೊಂಡೆ.ವಾರದೊಳಗೆ ಆಪರೇಷನ್ ಮಾಡಿ ಇರುವ ಒಂದು ಕಿಡ್ನಿಯಲ್ಲಿನ ಸಮಸ್ಯೆಯನ್ನು ಬಗೆಹರಿಸಿದರು. ಮತ್ತು "ನೀವು ಜತನದಿಂದ ಕಾಪಾಡಿಕೊಂಡಲ್ಲಿ ಕಟ್ಟುನಿಟ್ಟು ಕಾಯ್ದುಕೊಂಡಲ್ಲಿ ಇನ್ನು ಹತ್ತು ವರ್ಷ ಬದುಕಬಹುದು" ಎಂದು ಹೇಳಿದರು.
ಅಲ್ಲಿಂದ ಜೀವನೋತ್ಸಾಹ ಪುಟಿಯುತ್ತಿದೆ.ಹೀಗೆ ಮೂರು ವರ್ಷ ಕಳೆದಿದ್ದೇನೆ. ಇನ್ನು ಭಗವಂತನೇ ಬಲ್ಲ, ಇರುವಷ್ಟು ದಿವಸ ಒಂದಿಷ್ಟು ಜನರಿಗೆ ಉಪಕಾರ ಮಾಡಿ ಹೋಗುವ ತೀರ್ಮಾನ ನನ್ನದು" ಅಂತ ಹೇಳಿದ ವೆಂಕಟಾಚಲ.
ಅಷ್ಟಕ್ಕೂ ಎಂಟನೇ ತರಗತಿಯಲ್ಲಿ ಓದುತ್ತಿರುವ ಮಗಳು ಹಾಗೂ ಮೂವತ್ತೊಂಬತ್ತು ವರ್ಷದ ಪತ್ನಿಯಿರುವ ಮತ್ತು ನನ್ನ ಕಟ್ಟಡದ ಪಾಯದೊಳಗೆ ಮಣ್ಣುತುಂಬುವ ಬೃಹತ್ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ಪರಿಹರಿಸಿದ ವೆಂಕಟಾಚಲನಿಗೆ ಈಗಿನ್ನೂ ಕೇವಲ ನಲವತ್ತೊಂಬತ್ತು ವರ್ಷ. ಪುಟಿದೇಳುವ ಉತ್ಸಾಹದ ವೆಂಕಟಾಚಲನನ್ನು ನೋಡಿ ನಾನು ದೇವರನ್ನು ನೆನೆಯಿಸಿಕೊಂಡೆ. ದೇವರೂ ಹೀಗೆ ಇರಬಹುದಾ ತನ್ನೊಡಲೊಳಗೆ ಸಾವಿರ ಸಮಸ್ಯೆಯಿದ್ದರೂ ಬೇರೆಯವರಿಗೆ ಅಭಯ ಹಸ್ತ ನೀಡುವಂತೆ....!
ನನಗೆ ಗೊತ್ತಿಲ್ಲ...ನಿಮಗೆ?

Monday, May 2, 2011

ನೈತಿಕತೆ ಸೃಷ್ಟ್ತಿಸಿಕೊಂಡಲ್ಲಿ ......!


ಕಟ್ಟುವುದು ಎಂದರೆ ತೀರಾ ಕಷ್ಟದ ಕೆಲಸ ಅಂತ ನನಗೇನೂ ಅನ್ನಿಸುವುದಿಲ್ಲ. ಅದು ತೀರಾ ಕಷ್ಟದ ಕೆಲಸವಾಗಿದ್ದ ಪಕ್ಷದಲ್ಲಿ ಈ ತರಹ ಪುತು ಪುತು ಮನೆಗಳು ಏಳುತ್ತಿರಲಿಲ್ಲ. ಆದರೆ ಈ ಮನೆಯೆಂಬ ಮನೆ ಕಟ್ಟುವಾಗ ಆ ಮನೆಯ ನೈತಿಕ ಗುಣಮಟ್ಟ ಇದೆಯಲ್ಲ ಅದನ್ನು ಸೃಷ್ಟಿಸುವುದು ಆರಂಭದಲ್ಲಿ ತುಸು ಕಷ್ಟ. ಒಮ್ಮೆ ಮನೆಯ ನೈತಿಕತೆ ಸೃಷ್ಟ್ತಿಸಿಕೊಂಡಲ್ಲಿ ತದನಂತರ ಜನರೇ ನಮ್ಮ ಹಾಗೂ ನಮ್ಮ ಮನೆಯ ನೀತಿ ನಿಯಮ ಸೃಷ್ಟಿಸಿಬಿಡುತ್ತಾರೆ. ನಾನು ಕಟ್ಟುತ್ತಿರುವ ಮನೆ ಸರ್ಕಾರದ ಲೆಕ್ಕದಲ್ಲಿ ನನ್ನದೇ ಆದರೆ ಅಂತರಂಗದಲ್ಲಿ ಅಲ್ಲ. ಹಾಗಂತ ಬೇರೆಯವರ ಮನೆಯೂ ಅಲ್ಲ. ಅದೊಂದು ವಿಶಿಷ್ಠ ಒಪ್ಪಂದವಲ್ಲದ ಒಪ್ಪಿಗೆಯಲ್ಲಿ ತನ್ನಷ್ಟಕ್ಕೆ ನಿರ್ಮಾಣವಾಗುತ್ತಿದೆ. ಅದರ ವಿಚಾರ ಮುಂದೆ ಎಂದಾದರೂ ಬ್ಲಾಗಿಸೋಣ, ಈಗ ಕಟ್ಟುವ ವಿಚಾರಕ್ಕೆ ಬರೋಣ.
ಮನೆಯ ಫೌಂಡೇಷನ್ ಭದ್ರವಾಗಿದ್ದಲ್ಲಿ ಎಲ್ಲವೂ ಸಸೂತ್ರ. ಅದಕ್ಕೆ ಸೈಜ್ ಕಲ್ಲಿನ ಅವಶ್ಯಕತೆಯಿದೆ. ಕಟ್ಟಡ ಕಟ್ಟುವ ಕೆಲಸಕ್ಕೆ ಸಾಮಗ್ರಿ ಒದಗಿಸುವ ಜವಾಬ್ದಾರಿಯನ್ನು ಹಲವರು ನಿರ್ವಹಿಸುತ್ತಿದ್ದಾರೆ ಈ ಪ್ರಪಂಚದಲ್ಲಿ. ನಾವು ಹಣ ಒಟ್ಟುಗೂಡಿಸಿ ಇಟ್ಟುಕೊಂಡರೆ ಆಯಿತಷ್ಟೆ. ಕಟ್ಟಡ ಸಾಮಗ್ರಿ ಒದಗಿಸುವ ಕೆಲಸದಲ್ಲಿ ಕಳ್ಳರು-ಸುಳ್ಳರು-ಮೋಸಗಾರೌ-ನಯವಂಚಕರು ಹೀಗೆ ವಿದವಿದವಾದ ಜನರ ಜತೆ ಅಪ್ಪಟ ಪ್ರಾಮಾಣಿಕರೂ ಇದ್ದಾರೆ, ಬಣ್ಣ ಬಣ್ಣದ ಮಾತನಾಡುವವರ ಜತೆ ಮಾತನ್ನೇ ಆಡದ ಜನರಿದ್ದಾರೆ. ಆದರೆ ಆಯ್ಕೆ ನಮ್ಮ ಮನಸ್ಥಿತಿಗೆ ಬಿಟ್ಟದ್ದು. ಒಮ್ಮೆ ನಾವು ತುಸು ಗಟ್ಟಿ ಮನಸ್ಸಿನಿಂದ ಕಟ್ಟುತ್ತಿರುವ ಮನೆಯ ಸುತ್ತ ಪ್ರಾಮಾಣಿಕ ಜನರ ಮನಸ್ಥಿತಿಯ ವಾತಾವರಣವನ್ನು ಸೃಷ್ಟಿಸಿಕೊಂಡರೆ ಆನಂತರ ಅವರೇ ನಮ್ಮ ಮನೆಯ ಕಟ್ಟುತ್ತಾರೆ ನಾವು ಕುಟ್ಟುತ್ತಾ ಕುಳಿತರೂ ಓಕೆ.
ನಾವು ಒಬ್ಬ ಮೇಸ್ತ್ರಿಯ ಆಯ್ಕೆ ಮಾಡಿಕೊಂಡೆವು. ಆತನ ಬಳಿ "ನಿಮ್ಮ ಕಟ್ಟುವ ಕೂಲಿಯ ದರಪಟ್ಟಿ ಕೊಡಿ, ನಾವು ಚೌಕಾಶಿ ಮಾಡುವುದಿಲ್ಲ ಎಂದು ಹೇಳಿ ಆಯಿತು. ಆತ ಕೊಟ್ಟ ಪಟ್ಟಿ ನೋಡದೇ ಸರಿ ಕೆಲಸ ಶುರುಮಾಡಿ ದರ ಸರಿಯಾಗಿದೆ ಎಂದಾಯಿತು. ಆತ ತಬ್ಬಿಬು. "ಸಾರ್ ಒಂದು ನಿಮಿಷ ಪಟ್ಟಿ ಕೊಡಿ" ಎಂದು ಇಸಕೊಂಡು ಮತ್ತೆ ತಿದ್ದಿ "ಸಾರ್ ಒಂದೆರಡರ ದರ ನಾನು ಸ್ವಲ್ಪ ಹೆಚ್ಚು ಹಾಕಿದ್ದೆ" ಎನ್ನುತ್ತಾ ವಾಪಾಸ್ ನೀಡಿದ. ಅದಕ್ಕೂ ಮುಗುಳ್ನಗೆಯೇ ಉತ್ತರ.
ಕಲ್ಲು ಕೊಡುವವನು ಬಂದ ಆತನ ಬಳಿ ಹೇಳಿದೆ " ನೋಡಪ್ಪಾ ಸೈಜ್ ಕಲ್ಲು ನನಗೆ ಸಾವಿರಕ್ಕೆ ಸಾವಿರ ಇದ್ದರೆ ಆಯಿತು", ದರ ಹೇಳು ಅಂದೆ. ಆತ ಒಂದು ದರ ಹೇಳಿದ . ಓಕೆ ಅಂದೆ ಅದರಂತೆಯೇ ಕಲ್ಲು ಲಾರಿಯಲ್ಲಿ ಬಂದು ಬಿದ್ದಾಯಿತು ಜಾಗದಲ್ಲಿ. ಹಾಗೆ ಕಲ್ಲುಲೋಡು ದಿನನಿತ್ಯ ಬರುತ್ತಲೇ ಇತ್ತು. ನಾನು ನನ್ನಪಾಡಿಗೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದೆ. ಹೀಗೆ ಮತ್ತೊಂದು ದಿನ ಇದ್ದಕ್ಕಿದಂತೆ ಕಲ್ಲು ಎಣಿಸತೊಡಗಿದೆ. ಸಾವಿರಕಲ್ಲು ಇರುವುದರ ಬದಲು ಐವತ್ತು ಕಡಿಮೆ ಇತ್ತು. ಒಂದೂ ಮಾತನ್ನಾಡಲಿಲ್ಲ ಪೂರ್ತಿ ಸಾವಿರಕ್ಕೆ ಹಣ ನೀಡಿದೆ. ಡ್ರೈವರ್ ಕಕ್ಕಾಬಿಕ್ಕಿಯಾದ. "ಸಾರ್ ನಮ್ಮಿಂದ ತಪ್ಪಾಗಿದೆ, ಇಲ್ಲಿಯವರೆಗೆ ಬಂದ ಎಲ್ಲಾ ಲೋಡ್ ಕಲ್ಲುಗಳು ಸಾವಿರವೇ ಇತ್ತು, ಇದು ಮಾತ್ರಾ ಕಡಿಮೆ ಆಗಿಬಿಟ್ಟಿದೆ. ಅದು ಹೇಗೆ ಅಂತ ಅರ್ಥವಾಗುತ್ತಿಲ್ಲ. ಈಗ ಕಡಿಮೆಯಿದ್ದ ಕಲ್ಲು ನಾಳೆ ತುಂಬಿಕೊಡುತ್ತೇನೆ, ಜತೆಗೆ ಆ ಲೋಡ್ ಮಾಡುವವರಿಗೆ ಒಂದಿನ್ನೂರು ರೂಪಾಯಿ ಕೊಡಿ ಸಾವಿರದ ನೂರು ಲೆಕ್ಕ ಮಾಡಿ ಹಾಕುತ್ತಾರೆ" ಎಂದು ಹೇಳಿದ. ನಾನು " ನೋಡಪ್ಪಾ ನನಗೆ ಈ ಕಟ್ಟಡಕ್ಕೆ ಹಣ ನೀಡುತ್ತಾ ಇರುವವರು ಪ್ರಾಮಾಣಿಕರು ಹಾಗಾಗಿ ನನ್ನದೂ ಕೂಡ ಅದೇ ದಾರಿ, ನೀನು ಕಡಿಮೆ ತಂದಿದ್ದೀಯಾ ಅಂತ ನಾನೇನಾದರೂ ನಿನ್ನ ಹತ್ತಿರ ಹೇಳಿಲ್ಲವಲ್ಲ. ನೀನು ಕಡಿಮೆ ಕೊಟ್ಟರೆ ನನ್ನ ಹೆಸರು ಹಾಳಾಗುತ್ತದೆ ಅದಕ್ಕೆ ನನ್ನ ಒದ್ದಾಟ, ಅದೇ ರೀತಿ ಇನ್ನೂರು ಜಾಸ್ತಿಕೊಟ್ಟು ಕಲ್ಲು ಕೊಂಡರೂ ನನ್ನ ಹೆಸರೇ ಹಾಳಾಗುವುದು" ಎಂದು ಹೇಳಿ ಸುಮ್ಮನುಳಿದೆ.
ಇಂತಹ ಸಣ್ಣಪುಟ್ಟ ಘಟನೆಗಳ ಮೂಲಕ ಕಟ್ಟುತ್ತಿರುವ ಮನೆಯ ಸುತ್ತ ಪ್ರಾಮಾಣಿಕತೆಯ ನೈತಿಕತೆಯ ವಾತಾವರಣ ಸೃಷ್ಟಿಯಾಗಿದೆ. ಅಂತಹ ವಿಚಾರಗಳಲ್ಲಿ ಆಸಕ್ತರು ಸುತ್ತ ತುಂಬಿಕೊಳ್ಳುತ್ತಿದ್ದಾರೆ, ಹಾಗಾಗಿ ಕೆಲಸ ಸುಗಮ ಅಂತ ಅನ್ನಿಸುತ್ತಿದೆ. ಇದೆ ಇದೆ ಖಂಡಿತಾ ಇದೆ, ಪ್ರಾಮಾಣಿಕತೆ-ನೈತಿಕತೆ ಮುಂತಾದ ವಿಷಯಗಳು ಆದರೆ ನಾವೂ ಹಾಗೆಯೇ ಇರಬೇಕಷ್ಟೆ.

Sunday, May 1, 2011

ಮನೆ ಕಟ್ಟಿನೋಡು

ಅರೆ ನನಗೇ ಆಶ್ಚರ್ಯವಾಗುತ್ತಿದೆ. ಬ್ಲಾಗ್ ಆರಂಭವಾದಮೇಲೆಯೇ ನಾನು ಇಷ್ಟುದಿನ ಬರೆಯದೇ ಇದ್ದದ್ದು. ಒಮ್ಮೊಮ್ಮೆ ದಿನಕ್ಕೆರಡು ಅಥವಾ ಎರಡು ದಿನಕ್ಕೆ ಒಂದು ಕನಿಷ್ಟ ವಾರಕ್ಕೊಮ್ಮೆಯಾದರೂ ನಿಯಮಿತವಾಗಿ ಬ್ಲಾಗ್ ಅಥವಾ ಕತೆ ಲೇಖನ ಬರೆಯುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಬರೆಯುವ ಕೆಲಸ ನಿಂತುಹೋಯಿತು. ಅದಕ್ಕೆ ಮುಖ್ಯ ಕಾರಣ ಮನೆ ಕಟ್ಟಿನೋಡು...!. ಹೌದು ಈ ವರ್ಷದ ಮಾರ್ಚ್ ನಿಂದ ನನ್ನ ತೋಟದಮನೆ ಕೆಲಸ ಆರಂಬಿಸಿದೆ. ಆ ಕಾರಣಕ್ಕೆ ಬರೆಯಬೇಕೆಂಬ ಬರಹಗಳ ಮೂಟೆ ಮಂಡೆಯೆಂಬ ತಲೆಯೊಳಗೆ ಹುಟ್ಟಿ ಹುಟ್ಟಿ ಸಾಯತೊಡಗುತ್ತಿವೆ. ಅವಕ್ಕೆ ಅಕ್ಷರರೂಪ ಕೊಡಲಾಗುತ್ತಿಲ್ಲ. "ಅಬ್ಬಾ ಹಾಗೆ ಆಗ್ಲಿ ನಿರಾಳವಾದೆ ಎಂದಿರಾ..? ಇರಲಿ ಬಿಡಿ ನೀವು ಹಾಗಂದಿದ್ದು ತಮಾಷೆಗೆ ಅಂತ ತಿಳಿದುಕೊಂಡು ಮುಂದುವರೆಯುತ್ತೇನೆ.
ಅಲ್ಲಾ ಹೇಳಿ ಕೇಳಿ ಅದಕ್ಕೆ ಗಾದೆ ಮಾತು ಇದೆ ಅಂದ ಮೇಲೆ ಕಟ್ಟುವ ಕೆಲಸ ಕಷ್ಟ, ಅಷ್ಟಾಗ್ಯೂ ನಿನಗೆ ಈಗಾಗ್ಲೆ ಮನೆ ಇದೆ "ಅಪ್ಪ ಅಮ್ಮನ ಶ್ರಮ ನಾನು ಶರ್ಮಾ" ಅಂತ ಬ್ಲಾಗ್ ಕೆಳಗೆ ಸ್ಲೋಗನ್ ಹಾಕಿ ಮನೆ ಫೋಟೋ ಹಾಕಿದ್ದೀಯ, ಅದೂ ಅಷ್ಟು ಚಂದದ ಮನೆ ,ಮತ್ಯಾಕೆ ಬೇರೆ ಮನೆ ಅಂತ ನಿಮ್ಮ ಪ್ರಶ್ನೆಯಾದರೆ ನನ್ನ ಉತ್ತರ ಇಷ್ಟೆ. ಈಗ ಅದು ಸದ್ಯ ತೋಟದ ಮನೆ ಮುಂದೆ ಸರ್ಕಾರಕ್ಕೆ ಅರ್ಜಿ ಹಾಕಿ ಟೂರಿಸಂ ಇಲಾಖೆ ಪರ್ಮಿಷನ್ ಇತ್ತ ನಂತರ ನೀವೂ ಬಂದು ಉಳಿಯಬಹುದಾದ ನಿಮ್ಮ ಮನೆ. ಎಂಬ ಲ್ಲಿಗೆ ಅರ್ಥವಾಯಿತಲ್ಲ.
ಈ ಮನೆಯೆಂಬ ಮನೆಕೆಲಸ ದ ಒತ್ತಡದಲ್ಲಿ ಅಕ್ಷರಗಳು ಬೆರಳಿನ ತುದಿಯ ಮೂಲಕ ಮೂಡಲಾರೆ ಎನ್ನುತ್ತಿವೆ. ಹಾಗಾಗಿ ಬ್ಲಾಗ್ ಸತ್ತಿದೆ, ಲೇಖನ ಬಂದಿಲ್ಲ, ಕೇವಲ ಅರ್ಜಿ ಅರ್ಜಿ ಅರ್ಜಿ ಎಂದು ಕೀ ಬೋರ್ಡ್ ಮೇಲೆ ಬೆರಳುಗಳು ನರ್ತಿಸುತ್ತಿವೆ. ಅದೆಲ್ಲಾ ಮುಗಿದು ಮತ್ತೆ ಹೋಂ ಸ್ಟೆ ನಡೆಸುವುದಷ್ಟೇ ಕೆಲಸವಾದಮೇಲೆ ಬ್ಲಾಗ್ ನಿರಂತರೆ. ಅಯ್ಯೋ ನೀನು ಬ್ಲಾಗ್ ಬರೆಯದಿದ್ದರೆ ಕತ್ತೆ ಬಾಲ ಕುದುರೆ ಜುಟ್ಟು ಅಂತ ನೀವು ಅನ್ನುವುದಿಲ್ಲ ಅಂತ ಗೊತ್ತು ಆದರೂ ಬ್ಲಾಗ್ ಅಪರೂಪಕ್ಕೆ ಇದು ನಿಜವಾದ ಕಾರ್ಣ ಅಂತ ಹೇಳಿಬಿಟ್ಟರೆ ನನ್ಗೆ ಸಮಾಧಾನ.