Saturday, January 17, 2009

ಪ್ರೇಮ ಕುರುಡಾದದ್ದು ಏಕೆ !!

(ಪಿ.ಭಾರತಿಶ ಎಲ್ಲಿಂದಲೋ ನೋಡಿ ಕಳುಹಿಸಿದ್ದು)
ಹಿಂದೆ, ಈ ಭೂಮಿ ಮನುಷ್ಯ,, ಸೃಷ್ಟಿಯಾಗುವ ಮುಂಚೆ ನಡೆದ ಘಟನೆ ಇದು. ಮಾನವನನ್ನು ಸೃಷ್ಟಿ
ಮಾಡುವ ಮುಂಚೆ ದೇವರು ಅವನಲ್ಲಿ ಸೇರಿಸಬೇಕಾದ ಗುಣಗಳನ್ನು- ಅಸೂಯೆ, ಆಲಸ್ಯ, ಕೋಪ, ಸುಳ್ಳು , ಫ್ರೀತಿ,
ಚಾಡಿ,ಹುಚ್ಚು... ಮುಂತಾದ ಎಲ್ಲಾ ಗುಣಗಳನ್ನು ಬೇರೆ, ಬೇರೆ ಇರಿಸಿದ್ದ. ಒಮ್ಮೆ ಅವನು ತನ್ನ ಯಾವುದೋ ಕೆಲಸದಲ್ಲಿ
ಮುಳುಗಿದ್ದಾಗ , ತಮ್ಮಷ್ಟಕ್ಕೆ ಕುಳಿತು ಬೇಸರಗೊಂಡಿದ್ದ ಆ ಗುಣಗಳೆಲ್ಲಾ ಒಟ್ಟಾಗಿ ಸೇರಿ ಆಟ ಆಡಿ ಬೇಸರ ಕಳೆಯೋಣವೆಂದು
ನಿರ್ಧರಿಸಿದವು. ಎಲ್ಲ ಗುಣಗಳೂ ಒಟ್ಟಾಗಿ ಸೇರಿ " ಕಣ್ಣಾಮುಚ್ಚಾಲೆ " ಆಡೋಣವೆಂದು ನಿರ್ಧರಿಸಿದವು.ಕೂಡಲೇ "
ಹುಚ್ಚು " ಉನ್ಮಾದದಿಂದ " ಹುಡುಕುವ ಕೆಲಸ ನನಗೇ ಮೊದಲು" ಎಂದಿತು. ಅದರ ಅಬ್ಬರ, ಆರ್ಭಟ,
ಮಿತಿಮೀರಿದ ಉತ್ಸಾಹ ನೋಡಿ ಇತರ ಗುಣಗಳೆಲ್ಲಾ ವಾದ ಮಾಡದೆ ಅದಕ್ಕೆ ಒಪ್ಪಿದವು.
ಪ್ರಾರಂಭವಾಯಿತು.ಅಲ್ಲೇ ಇದ್ದ ಒಂದು ದೊಡ್ಡ ಮರದ ಬಳಿ ನಿಂತು ಕಣ್ಣುಮುಚ್ಚಿಕೊಂಡು " ಹುಚ್ಚು " ಒಂದು,
ಎರಡು, ಮೂರು ...." ಎಂದು ಎಣಿಕೆ ಪ್ರಾರಂಭಿಸಿತು. ಎಲ್ಲಾ ಗುಣಗಳೂ ಅವಿತುಕೊಳ್ಳಲು
ತೊಡಗಿದವು. ' ವಂಚನೆ ' ಅಲ್ಲೇ ಬಿದ್ದಿದ್ದ ತಿಪ್ಪೆಯ ರಾಶಿಯ ಮಧ್ಯೆ ಬಚ್ಚಿಟ್ಟುಕೊಂಡಿತು. ' ಸುಳ್ಳು ' ತಾನು ಒಂದು
ಕಲ್ಲಿನ ಹಿಂದೆ ಬಚ್ಚಿಟ್ಟುಕೊಳ್ಳುವುದಾಗಿ ಹೇಳಿ ಕೊಳದ ತಳದಲ್ಲಿ ಮುಚ್ಚಿಟ್ಟುಕೊಂಡಿತು. ...೭೬, ೭೭ ೭೮
ಇಷ್ಟರಲ್ಲಾಗಲೇ ಬಹುಮಟ್ಟಿಗೆ ಎಲ್ಲಾ ಗುಣಗಳೂ ಅಡಗಿಕೊಂಡಿದ್ದವು. ಆದರೆ ಪ್ರೀತಿ ಮಾತ್ರ ಇನ್ನೂ ಅವಿತುಕೊಂಡಿರಲಿಲ್ಲ. ಪ್ರೀತಿಗೆ ಎಲ್ಲಿ ಮರೆಯಾಗಬೇಕೆಂದು ನಿರ್ಧರಿಸಲಾಗಲಿಲ್ಲ.ಇದರಲ್ಲಿ ಅಚ್ಚರಿಯೇನಿಲ್ಲ. ಪ್ರೀತಿ, ಪ್ರೇಮವನ್ನು
ಯಾರಾದರೂ ಮುಚ್ಚಿಡಲು ಸಾಧ್ಯವೇ ? ...೯೫,೯೬,೯೭. ಅಷ್ಟರಲ್ಲಿ ಪ್ರೀತಿಗೆ ಒಂದು ಸುಂದರವಾದ ಗುಲಾಬಿ ಪೊದೆ ಕಾಣಿಸಿತು. ಕೋಡಲೇ ಆ ಪೊದೆಯ ಹಿಂದೆ ಪ್ರೀತಿ ಮರೆಯಾಯಿತು.
ಎಣಿಕೆ ಮುಗಿಸಿ ಕಣ್ಣು ಬಿಟ್ಟಾಗ ಹುಚ್ಚಿನ ಕಣ್ಣಿಗೆ ಮೊದಲು ಬಿದ್ದಿದ್ದೇ' ಆಲಸ್ಯ'. ಎದ್ದು ಬಚ್ಚಿಟ್ಟುಕೊಳ್ಳಲು ಅದರ
ಅಡ್ಡವಾಗಿ ಅದು ಅಲ್ಲಿಯೇ ಬಿದ್ದುಕೊಂಡಿತ್ತು. ಅದನ್ನು ಹಿಡಿದ ಉತ್ಸಾಹದಿಂದ ಹುಚ್ಚು ನೇರವಾಗಿ ಕೊಳದ
ಬಳಿ ಹೋಗಿ 'ಸುಳ್ಳನ್ನು' ಎಳೆ ತಂದಿತು. ಅದಕ್ಕೆ ಸುಳ್ಳಿನ ಸ್ವಭಾವ ಚೆನ್ನಾಗಿಯೇ . ಕೊಂಚ ಸಮಯದಲ್ಲಿಯೇ
'ಹುಚ್ಚು' ಎಲ್ಲಾ ಗುಣಗಳನ್ನೂ ಹುಡುಕಿತು, 'ಪ್ರೀತಿ'ಯೊಂದನ್ನು ಹೊರತು ಪಡಿಸಿ.ಪ್ರೀತಿ ಸಿಕ್ಕದ್ದಕ್ಕಾಗಿ ಹುಚ್ಚಿಗೆ
ವಿಪರೀತ ಕೋಪ ಬಂದಿತು.ಅಷ್ಟರಲ್ಲಿ ಪ್ರೀತಿಯ ಬಗೆಗಿನ ಹೊಟ್ಟೆಕಿಚ್ಚಿನಿಂದ 'ಅಸೂಯೆ' 'ಚಾಡಿ'ಯ ನೋಡಿ
ಅರ್ಥಪೂರ್ಣವಾಗಿ ನಕ್ಕಿತು. ಕೂಡಲೇ 'ಚಾಡಿ"ಯು ಪಿಸುಮಾತಿನಲ್ಲಿ ಹುಚ್ಚಿಗೆ " ನೀನು
ಹುಡುಕುತ್ತಿರುವ "ಪ್ರೀತಿ"
ಗುಲಾಬಿ ಪೊದೆಯ ಬಳಿ ಇದೆ' ಎಂದು ತಿಳಿಸಿತು. ಕೂಡಲೇ' ಹುಚ್ಚು' ಅಬ್ಬರ ಆರ್ಭಟದಿಂದ ಕೂಗುತ್ತಾ
ರಭಸದಿಂದ
ಗುಲಾಬಿಯ ಮೇಲೆ ಬಿದ್ದಿತು. ಮರುಕ್ಷಣವೇ ಕಿಠಾರನೆ ಯಾರೋ ನೋವಿನಿಂದ ಕಿರುಚಿದ ಧ್ವನಿ
ಕೇಳಿಸಿತು. ನೋಡಿದರೆ ಗುಲಾಬಿಯ
ಮುಳ್ಳುಗಳು ಪ್ರೀತಿಯ ಕಣ್ಣುಗಳನ್ನು ಚುಚ್ಚಿ ಕುರುಡು ಮಾಡಿತ್ತು.
ಎಲ್ಲಾ' ಗುಣಗಳ' ಗಲಾಟೆಯ ಧ್ವನಿ ಕೇಳಿ ದೇವರು ಅಲ್ಲಿಗೆ ಬಂದು , ಕಣ್ಣು ಕುರುಡಾಗಿ
ಗೋಳಾಡುತ್ತಿದ್ದ 'ಪ್ರೀತಿ'ಯನ್ನು ಕಂಡು ಕುಪಿತನಾಗಿ ಅದಕ್ಕೆ ಕಾರಣ ಯಾರೆಂದು ಪತ್ತೆ ಹಚ್ಚಿದನು.ನಂತರ '
ಹುಚ್ಚ'ನ್ನು ಕರೆದು " ಪ್ರೀತಿ ಕುರುಡಾದದ್ದು ನಿನ್ನಿಂದಲೇ . ಆದ್ದರಿಂದ ಇನ್ನು ಮುಂದೆ ಅದರೊಡನೆ ನೀನು ಇರಲೇ ಬೇಕು
" ಎಂದು ಶಾಪಕೊಟ್ಟನು.
ಆಂದಿನಿಂದ ಪ್ರೀತಿ ಕುರುಡಾಯಿತು.. ಮತ್ತು ಪ್ರೇಮಿಗಳೆಲ್ಲಾ ಹುಚ್ಚರಾದರು.....ಇಷ್ಟಲ್ಲದೆ .." ಪ್ರೇಮಿ ಮತ್ತು
ಹುಚ್ಚ ಒಂದೇ ದೋಣಿಯ ಪಯಣಿಗರು "ಎಂದು ಶೇಕ್ ಸ್ಪಿಯರ್ ಸುಮ್ಮನೆ ಹೇಳಿದ್ದಾನೆಯೇ ?

Wednesday, January 14, 2009

ಚಳಿಯಲ್ಲಿಯೂ ಸೆಖೆಯಾದರೆ ಸಾರ್ಥಕ....!

ಭಾರತೀಶ ಪಿ ಬರೆದನೆಂದರೆ ಅದರಲ್ಲಿ ಒಂದು ಮಜ ಇರುತ್ತದೆ. ನನಗೆ ಆಗಾಗ ವಿಚಾರಗಳ ನ್ನು ಪೂರೈಕೆಮಾಡುವ ಮಾಹಿತಿದಾರ. ಹಿತೈಷಿ, ಅವನ ಒಂದಿಷ್ಟು ಆಲೋಚನೆಗಳು ನಿಮಗೆ. - ಕೆ.ಆರ್.ಶರ್ಮಾ.ತಲವಾಟ


ವಳಲಂಬೆಯವರ 'ವಿಚಾರವಾದ, ವಿಜ್ಞಾನ, ಅಧ್ಯಾತ್ಮ ಮತ್ತು ದೇವರು' ನೋಡಿದೆ. ಪೂರ್ತಿ ಓದುವಷ್ಟು ಸ್ವಾರಸ್ಯ ಕಾಣಲಿಲ್ಲ. ಮೂರು ಅಧ್ಯಾಯ ಓದಿದೆ. ವಿಚಾರ ಸರಣಿ ಇಷ್ಟವಾಗಲಿಲ್ಲ. ಆದರೂ, ಇದ್ದಕ್ಕಿದ್ದಂತೆ ನಿಗಿ-ನಿಗಿ ಹೊಳೆಯುವ ಮಾತನ್ನು ಆಡಿಬಿಡುತ್ತಾರೆ. ಅದು ಅಲ್ಲಿಗೇ ನಿಂತು ಮತ್ತೆಲ್ಲಿಗೋ ಹೋಗುತ್ತಾರೆ.ಕಷ್ಟ-ಸುಖಗಳ ಸವಕಲು ವಿಶ್ಲೇಷಣೆ ಹಿಡಿಸಲಿಲ್ಲ. ಸುಖದ ಅನುಭೂತಿಗೆ ಕಷ್ಟ ಅನಿವಾರ್ಯ ಅಂತ ಪ್ರತಿಪಾದಿಸುವುದು ಹಿಡಿಸಲಿಲ್ಲ. ಅನ್ನ ಚೆನ್ನಾಗಿದೆ ಅಂತ ಹೇಳಲು ಹಳಸಲು ಅನ್ನ ತಿಂದಿರಲೇಬೇಕೇ? ಸಕ್ಕರೆಯ ಸಿಹಿ ಆಹಾ! ಅನ್ನುವಂತಿತ್ತು ಎಂದಾಗಲು ಖಾರ, ಕಹಿ ತಿಂದ ಅನುಭವ ಬೇಕೇಬೇಕೇ? ತಾರೆ ಜಮೀನ್ ಪರ್್ನ ಡೀಪ್ ಫೀಲ್್ಗೆ ಖರಾಬ್ ಸಿನೆಮಾ ನೋಡಿರಲೇಬೇಕಿತ್ತೇ? ಹಾಗಾಗಿ, ಸುಖಕ್ಕೆ ಕಷ್ಟದ ಕಾರ್ಪಣ್ಯ ಅನಿವಾರ್ಯವಲ್ಲ. ಅದು ಅದರ ಪಾಡಿಗೆ, ಇದು ಇದರ ಪಾಡಿಗೆ. ಹಾಂ! ಮಾತೊಂದನ್ನು ಕೇಳಿರಬಹುದು. ಶ್ರೀಮಂತನಿಗೆ ಬಡವನ ಬವಣೆ ಅರ್ಥವಾಗಬೇಕಾದರೆ ಕನಿಷ್ಠ ಒಂದು ದಿನವಾದರೂ ಅವನು ತಿಪ್ಪೆಗೆ ಬೀಳಬೇಕು. ಸಾಮಾನ್ಯ ಸಂದರ್ಭದಲ್ಲಿ ಇದರ ಅನಿವಾರ್ಯತೆ ಇಲ್ಲ. ಅಂತಸ್ತಿನ ಅಂತರ ಹೃದಯ ತರಂಗಗಳನ್ನು ಅರಿಯಲು ಅಡ್ಡ ಬರುವುದಿಲ್ಲ. ಹಾಗಾಗದೇ ಶ್ರೀಮಂತನಿಗೆ ಅಂತಸ್ತಿನ ಅಮಲು ಏರಿ ಉಡಾಫೆಯಾದರೆ ಕನಿಷ್ಠ ಒಂದು ದಿನವಾದರೂ ತಿಪ್ಪೆಗೆ ಬಿದ್ದರೆ ಅರ್ಥವಾಗಬಹುದೇನೋ ಎಂದು ಚಿಂತಿಸುವುದರಲ್ಲಿ ಅರ್ಥವಿದೆ. ಆದ್ದರಿಂದ ಸುಖ ಬೇಕಾದರೆ ಕಷ್ಟಪಡಲೇಬೇಕು ಎಂಬುದನ್ನು ಒಪ್ಪಲಾಗುವುದಿಲ್ಲ. ಸಾಮಾನ್ಯನನ್ನು ಗಮನದಲ್ಲಿರಿಸಿಕೊಂಡು ಇದನ್ನು ಬರೆದಿದ್ದರೆ, ಇದು ನನ್ನ-ನಿನ್ನನ್ನು ಹೆದರಿಸದೇ ಬಿಡದು. ಹಿಮಾಲಯದ ಅಘೋರಿಗಳ ಚಮತ್ಕಾರ ಅನ್ನೋ ತರಹದ ಮಾತುಕತೆಯೇ ಸಿಕ್ಕಾಪಟ್ಟೆ ಹೊಳೆಯುತ್ತ ಹೋಗುತ್ತದೆ. ಅಧ್ಯಾತ್ಮ ಸಾಮಾನ್ಯನ ಬದುಕಿಗೆ ಸಿಗುವಂತಹುದಲ್ಲ, ಬದುಕುತ್ತಿರುವ ರೀತಿಗೆ ಅದು ಯಾವುದೋ ಲೋಕದ ಮಾಯೆ ಎಂಬೆಲ್ಲ ರೀತಿಯಲ್ಲಿ ಸಾರುತ್ತ ಅವಧೂತರ ಬದುಕನ್ನೇ ವೈಭವೀಕರಿಸುತ್ತ ಹೋಗುತ್ತದೆ. ಅದು ಇಷ್ಟವಾಗಲಿಲ್ಲ. ಹರೀಶ ಹೇಳಿದ ಒಂದು ಮಾತು. ಹಾವಿನ ಹತ್ತಿರ ಹೋಗಲು ಹೆದರುವುದು ನಾರ್ಮಲ್ ಕೇಸ್. ಅಯ್ಯೋ! ಹತ್ತಿರ ಹೋಗಲು ಹೆದರಿದರೆ ಸೋತಂತೆ ಆಗುತ್ತದೆ ಎಂದು ಅಂದುಕೊಂಡು ಹತ್ತಿರ ಹೋಗುವವನಿಗೆ ಔಷಧಿ ಕೊಡಿಸಬೇಕು. ಏಕೆಂದರೆ ಹಾವು ಕಚ್ಚುತ್ತದೆ. ಕಚ್ಚಿದರೆ ಸಾಯದೇ ಇರುವಷ್ಟು ಅವನು ಶಕ್ತನಲ್ಲ. ಆದರೂ ಹತ್ತಿರ ಹೋಗುತ್ತೇನೆಂದು ಹಟ ಹಿಡಿದರೆ ಔಷಧಿಯ ಹೊರತಾಗಿ ಬೇರೆ ದಾರಿ ಇಲ್ಲ. ಅವರು ಹೇಳುವ ಯೋಗಿಗಳು ಹಾಗಿರುವುದಿಲ್ಲ. ಎಲ್ಲವನ್ನೂ ಮಾಡಬೇಕು, ಎಲ್ಲ ಪರಿಸ್ಥಿತಿಗಳಿಗೂ ಒಗ್ಗಿಕೊಳ್ಳಬೇಕು, ಸಿಕ್ಕಿದ್ದನ್ನೇ ತಿಂದು ಅರಗಿಸಿಕೊಳ್ಳಬೇಕು ಎಂಬ ಹಾದಿಯಲ್ಲೇ ಇರುತ್ತಾರೆ. ಒಂಥರಾ ಫ್ಯಾಂಟಸಿ ಪ್ರಪಂಚದಲ್ಲಿ ಬದುಕುವ ತವಕ. ಯಾವುದೋ ಒಂದು ಅಂತಿಮ ಸುಖಕ್ಕಾಗಿ ಪಯಣ. ಯಾವತ್ತೂ ಪಯಣದ ಆರಂಭ ಆ ಅಂತಿಮ ಸುಖಕ್ಕೆ ವಿರುದ್ಧವಾಗಿರುವ ಜೀವನ ಸನ್ನಿವೇಶದಿಂದಲೇ ಆಗಿರುವುದು ವಿಚಿತ್ರವಾಗಿ ಕಾಣುತ್ತದೆ. ಹಾಗಾದರೆ ಆ ಅಂತಿಮ ಸುಖದ ಪಯಣ ಇರುವ ಪರಿಸ್ಥಿತಿಯಿಂದಲೇ ಸಾಧ್ಯವಿಲ್ಲವೇ! ಆತಂಕ ಕಾಡದಿರದು. ನಾನು ಒಬ್ಬಂಟಿ, ನನಗೆ ಯಾರೂ ಇಲ್ಲ, ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ, ನನ್ನ ಕಷ್ಟಕ್ಕೆ ಯಾರೂ ಆಗಿಬರುತ್ತಿಲ್ಲ ಎಂಬ ಅಭದ್ರ ಭಾವಗಳು ಕಾಡುತ್ತಿರುವಾಗ, ಅದರಿಂದ ಮೇಲೆ ಬರಲು, ನಾನೂ ಎಲ್ಲರಂತೆ, ಎಲ್ಲವಂತೆ ಈ ವ್ಯವಸ್ಥೆಯ ಒಂದು ಭಾಗವೆಂಬ ದರ್ಶನ ಆಗಬೇಕು ಎಂಬ ಸಾಹಿತ್ಯ ಸಾಗಿದ್ದರೆ ಹೃದಯಕ್ಕೆ ಹದವಾಗಿ ತಟ್ಟುತ್ತಿತ್ತು. ಅಂತಹ ಅಧ್ಯಾತ್ಮ ಪ್ರತಿಕ್ಷಣಗಳ ಸಮಗ್ರ-ಸುಂದರ ಅನುಭೂತಿಗೆ ಅನಿವಾರ್ಯವೆಂದು ಅರ್ಥವಾಗುತ್ತಿತ್ತು. ಈ ಅನುಭೂತಿ ಸುಖವಾಗುತ್ತಿತ್ತು, ಅದಕ್ಕೆ ಅಡ್ಡಬರುವ ಸಂಗತಿಗಳೇ ಕಷ್ಟವಾಗುತ್ತಿತ್ತು. ಈ ಅನುಭೂತಿಯ ಈ ಬದುಕು ದಿವ್ಯವಾಗುತ್ತಿತ್ತು ಎಂಬ ಸಂದೇಶ ಸಾರಲು ಆಗಿದ್ದಿದ್ದರೆ ಅವರ ಸಾಹಿತ್ಯ ಸುಂದರವಾಗುತ್ತಿತ್ತು. ಈಗದು ಆಕಾಶದ ಬುಟ್ಟಿಯಾಗಿದೆ. ತಲುಪಲು ಕಷ್ಟವಾಗುತ್ತಿದೆ. ತಲುಪದಿದ್ದರೂ ತೊಂದರೆ ಇಲ್ಲವೇನೋ ಎಂದು ಅನಿಸುತ್ತಿದೆ. ಅದಿಲ್ಲದೇ ಈಗ ಬದುಕುತ್ತಿಲ್ಲವೇ ಎಂಬ ಸಮಾಧಾನವೂ ಸಿಗುತ್ತಿದೆ.ಮತ್ತೆ, ಧರ್ಮಗಳ ಜೀವಂತಿಕೆಯ ವಿಷಯ ಬಂದಾಗ ಉದಾಹರಣೆಯನ್ನೇ ಅವಲಂಬಿಸಿ ಉಸಿರಾಡುತ್ತಾರೆ. ಹಳೆಯ ನಾಗರಿಕತೆಗಳ ಸಂದರ್ಭದಲ್ಲಿ ಹಲವು ಧರ್ಮಗಳಿದ್ದವು. ಹೊಸ ಮತಗಳ ತೀವ್ರ ಧಾಳಿಯಿಂದ ಎಲ್ಲವೂ ಮಣ್ಣಲ್ಲಿ ಮಣ್ಣಾದವು. ಆದರೆ, ನಮ್ಮ ಹಿಂದೂ ಧರ್ಮ ಮಾತ್ರ ಹಾಗಾಗಲಿಲ್ಲ. ಹಿಂದೂ ಧರ್ಮ ಎಲ್ಲವನ್ನೂ ಬುದ್ಧಿವಂತಿಕೆಯಿಂದ ಒಪ್ಪಿಕೊಂಡಿದ್ದರಿಂದ ಅದು ಅಳಿಯದೇ ಹಾಗೇ ಉಳಿದಿದೆ ಎಂಬ ವಾದವನ್ನು ಮಂಡಿಸುತ್ತಾರೆ. Practically, is it possible, acceptable for such a long time? ಇಲ್ಲ ಅನಿಸುತ್ತಿದೆ. ಧರ್ಮ ಹಿಂದೂವೋ ಮತ್ತೊಂದೋ ಗೊತ್ತಿಲ್ಲ. ಮೊದಲದು ಬದುಕಲು ಬಿಡಬೇಕು. ಹೊಟ್ಟೆ ಹೊರೆದುಕೊಳ್ಳಲು ದಾರಿ ಹಾಕಿಕೊಡಬೇಕು. ಮತ್ತೂ ಆಗುವುದಾದರೆ ನಮ್ಮನ್ನು ಬೆಳೆಯಲು ಬಿಡಬೇಕು. ಮತ್ತೂ ಆಗುವುದಾದರೆ ಕೈ ಹಿಡಿದು ಬೆಳೆಸಬೇಕು. ಒಟ್ಟಿನಲ್ಲಿ, ಧರ್ಮ ಜೀವದ ಜೀವಂತಿಕೆಯಾಗಿರಬೇಕು. ಹಾಗಾದರೆ ಅದು ಅನಂತಕಾಲ ಬಾಳುತ್ತದೆ. ಆ ಧರ್ಮದ ಹೆಸರು ಬದಲಾಗಬಹುದೇನೋ? ಗೊತ್ತಿಲ್ಲ. ಉಸಿರು ಮಾತ್ರ ನಿರಂತರವಾಗಿರುತ್ತದೆ..ಧರ್ಮದ ಥೀಮ್ ಅಂತಿದ್ದರೆ ಎಂಜಾಯ್ ಮಾಡುತ್ತೇನೆ.

Tuesday, January 13, 2009

ಭೀಮೇಶ್ವರ ಮತ್ತು ನೋವಿನೆಣ್ಣೆ


ಭೀಮೇಶ್ವರ ಎಂಬ ಹೆಸರಿನ ಈ ಜಾಗ ಕಾರ್ಗಲ್ ಮತ್ತು ಭಟ್ಕಳ ರಸ್ತೆಯಲ್ಲಿ ೩ಕಿಲೋ ಮೀಟರ್ ಒಳಗಡೆ ಇದೆ. ಕಡಿದಾದ ಮಣ್ಣು ರಸ್ತೆಯಲ್ಲಿ ವಾಹನ ಇಳಿಸಿ ಸಾಗಿದರೆ ರೋಮಾಂಚನ ಇಲ್ಲಿ ಉಚಿತ. ಕಲ್ಲಿನಿಂದ ನಿರ್ಮಾಣವಾದ ದೇವಸ್ಥಾನ ನೋಡಿದ ಮೇಲೆನೆಮ್ಮದಿ ಖಚಿತ. ಜುಳುಜುಳು ನೀರು ಬೀಳುವ ಜಾಗದಲ್ಲಿ ತಲೆಯೊಡ್ಡಿನಿಂತರೆ ಆಹಾ ಅನ್ನಬಹುದು. ಅಲ್ಲಿಯೇ ಮೆಟ್ಟಿಲಮೇಲೆ ನಿಂತು ಓಹೋ ಎಂದರೆ ಮರುಧ್ವನಿ ಮರುಕ್ಷಣ ಓಹೋ. ವಸತಿಗೆ ವ್ಯವಸ್ಥೆ ಅಲ್ಲಿಲ್ಲ. ಹಸಿವೆ ತೀರಲು
ಒಂದಿಷ್ಟು ಊಟ ಕಟ್ಟಿಸಿಕೊಂಡು ಹೋಗಬೇಕಾದ ಪ್ರಮೇಯವಿದೆ. ದೇವಸ್ಥಾನದ ಪೂಜಾರಿಯ ಬಳಿ ಬೇಕಷ್ಟೇ ಮಾತನಾಡಿದರೆ ಬಚಾವ್. ಇಲ್ಲದಿದ್ದರೆ ಆತ ನಮ್ಮ ವೈಯಕ್ತಿಕ ಸಮಸ್ಯೆ ಬಗೆಹರಿಸಲುನಿಲ್ಲುತ್ತಾನೆ. ಮತ್ತು ಒಂದಿಷ್ಟು ಹಣ ಖರ್ಚು ಮಾಡಿಸಿ ಪೂಜೆ ಮಾಡಿಸುತ್ತಾನೆ. ಸೊಂಟ ನೋವಿಗೆ ಎಣ್ಣೆ ಕೊಡುತ್ತೀನಿ ಅನ್ನುತ್ತಾನೆ. ಹಾಗಾಗಿ ಎಚ್ಚರ ಅವಶ್ಯ. ಇವಿಷ್ಟು ಮುನ್ನೆಚ್ಚರಿಕೆ ಪಾಲಿಸಿದರೆ ಸೂಪರ್ ಜಾಗ. ಅಲ್ಲಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಕಾನೂರು ಕೋಟೆಯಿದೆ........
ಸರಿ ಸುಮಾರಾಗಿ ಇಂತಿಪ್ಪ ನೂರಾರು ಪ್ರೇಕ್ಷಣೀಯ ಸ್ಥಳಗಳ ನಿಖಿರ ಮಾಹಿತಿಯನ್ನು ಹೊಂದಿದ ಆ ವ್ಯಕ್ತಿ ನನಗೆ ಜೋಗದಲ್ಲಿ ಒಂದು ತಾಸು ಮಾತನಾಡಲು ಸಿಕ್ಕಿದ್ದ. ಆತನದ್ದು ಸ್ಪೈನ್ ದೇಶವಂತೆ. ನಾನಂತೂ ಅದನ್ನು ನೋಡಿಲ್ಲ. ಅವನು ಹೇಳಿದ್ದಷ್ಟನ್ನ ಕೇಳಿದೆ. ನಾನು ನನಗೆ ತಿಳಿದದ್ದನ್ನು ಹೇಳಿದೆ.
ಈ ಘಟನೆ ನಡೆದು ಆರು ತಿಂಗಳ ನಂತರ ನನಗೆ ಭೀಮೆಶ್ವರಕ್ಕೆ ಹೋಗುವ ಅವಕಾಶಬಂತು. ನಾವು ನಾಲ್ಕೈದುಜನ ಸುಮೋದಲ್ಲಿ ದೇವಸ್ಥಾನ ತಲುಪಿದೆವು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಡಲನುವಾದಾಗ ಪೂಜಾರಿ ನಮ್ಮ ಜತೆಯಲ್ಲಿದ್ದ ಮಹಿಳೆಯೊಬ್ಬರ ಬಳಿ ನಿಮಗೆ ಕೀಲುನೋವು ಇರಬೇಕಲ್ಲ...!. ಎಂಬ ಪ್ರಶ್ನೆ ಎಸೆದ. ಆಕೆ ದಂಗಾಗಿಬಿಟ್ಟಳು. ಆಕೆಗೆ ಮಂಡಿನೋವು ಬಾಧಿಸುತ್ತಿದ್ದುದು ನಿಜವಾಗಿತ್ತು. ಪೂಜಾರಿ ಮರುಕ್ಷಣ ಮತ್ತೊಂದು ವಿಶೇಷ ಪೂಜೆ ಮಾಡಿಸಿ ಮುನ್ನೂರು ರೂಪಾಯಿ ವಸೂಲಿ ಮಾಡಿಕೊಂಡ. ನನಗೆ ಸ್ಪೈನ್ ದೇಶದವನ ಮಾಹಿತಿ ನೆನಪಾಯಿತು ಹಾಗೂ ನಾನು ಅದನ್ನು ಹೇಳಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪಾಪ ಆಕೆಯ ಮಂಡಿನೋವು ಹಾಗೆ ನಂಬುದಂತೆ ಮಾಡಿತ್ತು. ಮತ್ತು ಪೂಜಾರಿ ಒಂದು ಬಾಟಲಿಯಲ್ಲಿ ನೋವಿನೆಣ್ಣೆಯನ್ನೂ ನೀಡಿದ.
ಇಂತಹ ಮಾಹಿತಿಯನ್ನು ಕಂಕುಳಲ್ಲಿ ಇಟ್ಟುಕೊಂಡು ನಮ್ಮ ದೇಶ ಸುತ್ತುವ ವಿದೇಶಿಗರೂ , ನಮ್ಮನಡುವೆಯೇ ಇದ್ದು ಇಂತಹ ಮಾಹಿತಿಗೆ ಆಹಾರವಾಗುವ ಜನರೂ ಹಾಗೂ ನಮ್ಮ ಸುತ್ತಮುತ್ತಲೇ ಏನಿದೆ ? ಅಂತ ಗೊತ್ತಿಲ್ಲದ ನಮ್ಮಜನರೂ ಎಲ್ಲವೂ ನೆನಪಾಯಿತು.ಇದಕ್ಕಿಂತ ಹೆಚ್ಚಿನ ಅನುಭವ ನಿಮ್ಮದಿರಬಹುದು.ಅವುಗಳ ನಡುವೆ ಇದೂ ಒಂದು.

Sunday, January 11, 2009

ಮೊಬೈಲ್ ಮತ್ತು ಫಯಾಜ್

" ಅಣ್ಣಾ ನೀವು ಕೊಡ್ಸಿದ ಶರ್ಟು ಹ್ಯಾಂಗೆ ಕಾಣಿಸ್ತೈತಣ್ಣಾ" ಅಂತ ಫಯಾಜ್ ಕೇಳಿದಾಗ ಏನು ಹೇಳಬೇಕೆಂದು ತಿಳಿಯದೇ ಬೆಪ್ಪಾದೆ. ಅಬ್ಬಾ ಇದೆಂತಾ ಹುಡುಗರ ಮನಸ್ಸಪ್ಪಾ ಅಂತ ಅನ್ನಿಸಿತು. ನನಗೆ ಹಾಗೆ ಅನ್ನಿಸಲು ಕಾರಣ ಹಾಗೂ ಅವನಿಗೆ ಶರ್ಟು ನಾನು ಕೊಡಿಸಿದ್ದಕ್ಕೆ ಕಾರಣ ಮುಂತಾದವುಗಳೆಲ್ಲಾ ಸವಿವವರವಾಗಿ ನಿಮಗೆ ತಿಳಿಯಲು ಒಂದೆರಡು ದಿವಸ ಹಿಂದೆ ಹೋಗಬೇಕು.
"ರೀ ಎನ್ನ ಮೊಬೈಲ್ ಎಲ್ಲಿಟ್ಟಿದ್ದೀ?"
ಮನೆಯಾಕೆ ಯಿಂದ ಶುಕ್ರವಾರ ಬೆಳಿಗ್ಗೆ ಬಂತು ಪ್ರಶ್ನೆ. ತಲೆ ಕೆರೆದುಕೊಂಡೆ ನಿನ್ನೆ ಸಂಜೆ ತೆಗೆದುಕೊಂಡಿದ್ದು ಹೌದು ಆದರೆ ಇಟ್ಟದ್ದು ಎಲ್ಲಿ ಅಂತ ಸರಕ್ಕನೆ ನೆನಪಾಗುತ್ತಿಲ್ಲ. ಸ್ವಲ್ಪ ಫ್ಲ್ಯಾಷ್ ಬ್ಯಾಕ್ ಗೆ ಹೋದಮೇಲೆ ನೆನಪಾಯಿತು ಹೌದು ಅಂಗಳದ ಅಂಚಿನ ಕಾಂಪೌಂಡ್ ಮೇಲೆ ಇಟ್ಟಿದ್ದೆ (ನಮ್ಮ ಮನೆಯಲ್ಲಿ ಹಾಗೆ ಮನೆಯ ಹೊರಗಡೆ ಮೊಬೈಲ್ ಇಡುವುದು ಅನಿವಾರ್ಯ. ಕಾರಣ ಮನೆಯೊಳಗೆ ಸಿಗ್ನಲ್ ಬರುವುದೇ ಇಲ್ಲ) . "ಕಂಟ್ನದ ಮೇಲೆ ಇಟ್ಟಿದ್ದಿ ನೋಡು" ಅಟ್ಟದಿಂದ ಕೂಗಿ ಹೇಳಿದೆ. "ಇಲ್ಲಿಲ್ಲೆ" ಮತ್ತೆ ಆ ಕಡೆಯಿಂದ ಸಿಟ್ಟಿನಿಂದ ಬಂತು ಉತ್ತರ ಜತೆಯಲ್ಲಿಯೇ " ಅಂವ ಬೇಜವಾಬ್ದಾರಿ ಎಲ್ಲಿಟ್ಟಿದ್ನ" ಎಂಬ ಅಪ್ಪಯ್ಯನ ವಗ್ಗರಣೆ. ಅಡಿಕೆ ಇಳಿಸುತ್ತಿದ್ದ ತಲೆಬಿಸಿ ಬಿಸಿಲಿನ ಝಳ ದ ಜತೆ ಮೊಬೈಲ್ ಕಾಣೆಯಾದ್ದು ಇನ್ನಷ್ಟು ರಂಗೇರಿತು. ಅಟ್ಟದಿಂದ ಇಳಿದು ಬಂದು ನಾನಿಟ್ಟ ಜಾಗದಲ್ಲಿ ಹುಡಿಕಾಡಿದೆ. ಮತ್ತೂ ನೆನಪು ಮಾಡಿಕೊಂಡು ಇಡದಿದ್ದ..! ಜಾಗದಲ್ಲೂ ಹುಡುಕಾಡಿದೆ. ಮೊಬೈಲ್ ಕಾಣೆಯಾದ ತಲೆಬಿಸಿ ಅಮ್ಮ, ಅಪ್ಪಿ . ಅಪ್ಪಯ್ಯ ಆಕೆ ಹೀಗೆ ಎಲ್ಲರಿಗೂ ವರ್ಗಾವಣೆಯಾಗಿ ಒಬ್ಬೊಬ್ಬರಿಂದ ಒನ್ನೊಂದು ತರಹದ ಮಾತುಗಳು ಹರಿದಾಡಲಾರಂಬಿಸಿತು ಎಂಬಲ್ಲಿಗೆ ಮೊಬೈಲ್ ಕಾಣೆಯಾಗಿದೆ ಎಂಬ ವಿಷಯ ಮನದಟ್ಟಾಯಿತು. ಕಾಣೆಯಾಗುವುದಾದರೂ ಹೇಗೆ? ಕಾಡಿನ ನಡುವೆ ಇರುವ ಒಂಟಿ ಮನೆ. ಮನೆಯಲ್ಲಿ ಯಾರೂ ತೆಗೆದುಕೊಂಡಿಲ್ಲ. ಆಗಲೆ ಮೊಬೈಲ್ ಕಳೆದು ಹನ್ನೆರಡು ತಾಸು ಕಳೆದಿದೆ. ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಡಯಲ್ ಮಾಡಿದ ಅಪ್ಪಿ " ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ" ಉತ್ತರ ಬಂತು. ಯಾರಾದರೂ ಕದ್ದಿದ್ದರೆ "ಸ್ವಿಚ್ ಆಫ್ ಮಾಡಿದ್ದಾರೆ" ಎಂಬ ಸಂದೇಶ ಬರಬೇಕಿತ್ತು ಹಾಗಾಗಿ ಯಾರೂ ಕದ್ದಿಲ್ಲ ಮತ್ತೆಲ್ಲಿಯೂ ಮರೆತಿಟ್ಟರಬೇಕು ಎಂಬ ತೀರ್ಮಾನ ಹೊರಬಿತ್ತು. ಸರಿ ಮತ್ತೆ ಹುಡುಕಾಟ ಹಿತ್ತಿಲು ಬಾಗಿಲು ಸಜ್ಜೆ ನ್ಯಾಗಂದಿಗೆ ಹೀಗೆ ಕಂಡಕಂಡಲ್ಲೆಲ್ಲಾ ... ಫಲಿತಾಂಶ ಮಾತ್ರಾ ಶೂನ್ಯ.
"ನಿನ್ನೆ ಸಂಜೆ ಪಂಪ್ ಸೆಟ್ ರಿಪೇರಿಗೆ ಅಶೋಕ ಬಂದಿದ್ದ ಅವನೊಟ್ಟಿಗೆ ಒಬ್ಬ ಗ್ಯಾರೇಜ್ ಹುಡ್ಗ ಬಂದಿದ್ನಲ್ಲ.... ಹಾ ಅವನದೇ ಈ ಕೆಲಸ " ಮನೆಯಾಕೆಯಿಂದ ತೀರ್ಮಾನ ಬಂತು. ಸರಿ ಅದೇ ಹುಡುಗ ಮೊಬೈಲ್ ತೆಗೆದುಕೊಂಡು ಹೋಗಿದ್ದಿರಬಹುದು ಆದರೆ ಈಗ ಹದಿನಾಲ್ಕು ತಾಸುಗಳು ಕಳೆದಮೇಲೆ ಹೇಗೆ ಕೇಳುವುದು?. ಆತ ಉದ್ದೇಶಪೂರ್ವಕವಾಗಿ ಕದ್ದೊಯ್ದಿದ್ದರೆ ಈಗಾಗಲೇ ಹಬೇಸ್ ಮಾಡಿಯಾಗಿರುತ್ತದೆ. ಮತ್ತೆ ತನ್ನಮೇಲೆ ವೃಥಾ ಕಳ್ಳತನದ ಆರೋಪ ಹೊರಿಸಿದಿರಿ ಅಂತ ಆತ ಗಲಾಟೆ ಶುರುಮಾಡಬಹುದು ಎಂಬಂತಹ ಯೋಚನೆಗಳ ನಡುವೆ ಗ್ಯಾರೇಜ್ ಅಶೋಕನಿಗೆ ಏನಾದರಾಗಲಿ ತಣ್ಣಗೆ ಸುಮ್ಮನೆ ಒಂದುಸಾರಿ ಕೇಳು ಎಂದು ಫೋನಲ್ಲಿ ಹೇಳಿದೆ. ಆ ಕಡೆಯಿಂದ ಉತ್ತರ ಎಷ್ಟು ಹೊತ್ತಾದರೂ ಬರಲಿಲ್ಲ. ಆಗ ನನಗೇಕೋ ಅನುಮಾನದ ಹುತ್ತ ಬಲವಾಗತೊಡಗಿ ತಾಳಗುಪ್ಪಕ್ಕೆ ಬೈಕನ್ನೇರಿ ಹೊರಟೆ. ನಾನು ಗ್ಯಾರೇಜ್ ಬಳಿ ಬೈಕ್ ನಿಲ್ಲಿಸುತ್ತಿದ್ದಂತೆ ಹುಡುಗ ನನ್ನ ನೋಡಿ " ಎನಣ್ಣಾ ನಿನ್ನೆ ನಿಮ್ಮನ್ನ ನೋಡಿದ್ದೆ" ಎಂದು ಅರ್ಥವಿಲ್ಲದ ಮಾತನ್ನಾಡಿದ. ಆಗ ನನ್ನ ಸಂಶಯಕ್ಕೆ ರಕ್ಕೆಪುಕ್ಕ ಸೇರಿತು. ಅಶೋಕ " ನಾನು ಇನ್ನೂ ಅವನ ಬಳಿ ಕೇಳಿಲ್ಲ ಅಷ್ಟರಲ್ಲಿ ನೀನು ಬಂದೆ" ಎಂದ. ಸರಿಬಿಡು ಎನ್ನುತ್ತಾ ನಾನೇ ಡೈರೆಕ್ಟಾಗಿ " ಎಯ್ ತಮ್ಮಾ ನಿನ್ನೆ ನಮ್ಮ ಮನೆಯ ಕಾಂಪೌಂಡ್ ಮೇಲಿದ್ದ ಮೊಬೈಲ್ ನೋಡಿದ್ದೆಯಾ?" ಅಂತ ಕೇಳಿದೆ.
"ಇಲ್ಲ " ಹುಡುಗ ಹೆದರುತ್ತಾ ಹೇಳಿದ.
"ನೋಡು ನಮ್ಮ ಮನೆಗೆ ನಿನ್ನೆ ಮತ್ಯಾರು ಬರ್ಲಿಲ್ಲ ಮೊಬೈಲ್ ನೀನು ನೋಡಿದ್ದು ಮಾತ್ರ ಅಲ್ಲ ತಗಂಡು ಬಂದಿದ್ದೀ ಸುಮ್ಮನೆ ಕೊಡು ಇಲ್ಲದಿದ್ದರೆ ನಾನು ಪೋಲೀಸ್ ಕಂಪ್ಲೇಂಟ್ ಕೊಡುತ್ತೇನೆ" ಸ್ವಲ್ಪ ಬಿರುಸಾಗಿ ಹೇಳಿದೆ.
ನಾನು ಪೋಲೀಸ್ ಶಬ್ಧ ಬಳಸಿದ್ದರಿಂದ ಆತ " ಹೋ.." ಎಂದು ಅಳಲು ಶುರುಮಾಡಿ." ಇಲ್ಲಣ್ಣ ನಾನು ಬಡವ ಇರಬಹುದು ದುಡುದು ತಿಂತೀನಿ ಕದಿಯಲ್ಲ, " ಅಂತ ಹೇಳುತ್ತಾ ಧಾರಾಕಾರ ಕಣ್ಣೀರ ಕೋಡಿ ಹರಿಸತೊಡಗಿದ.
ಆತ ಅಳುವ ಪರಿ ನನಗೆ ಸಹಿಸಲಾಗಲಿಲ್ಲ. ನನಗೂ ಒಂಥರಾ ವ್ಯಥೆ ಕಾಡತೊಡಗಿತು. ಈ ಹುಡುಗನ ವರ್ತನೆ ನೋಡಿದರೆ ಕದ್ದದ್ದು ಈತ ಅಂತ ಹೇಳಲಾಗದು ಅದೂ ನಾನೇನು ಕಣ್ಣಲ್ಲಿ ಕಂಡಿಲ್ಲ ಹೀಗೆ ವೃಥಾ ಆರೋಪ ಹೊರಿಸಿದ ನೂರಾರು ಕಥೆಗಳು ಕಣ್ಮುಂದೆ ತೇಲಿಬಂದು ಸ್ವಲ್ಪ ಅಧಿರನಾದೆ. "ಸರಿ ಹೋಗಲಿ ಬಿಡು ತಪ್ಪು ನನ್ನದೆ ನೀನು ಕದ್ದಿಲ್ಲ ಅಂದ್ರೆ ಹೋಗ್ಲಿ ಬಿಡು" ಅಂತ ಸಮಾಧಾನ ಮಾಡಿದೆ. ಆದರೆ ಈಗ ಆತ ಅಳು ಜೋರುಮಾಡಿದ. ಅಯ್ಯೋ ಒಂದು ಮಾಡಲು ಹೋಗಿ ಇನ್ನೊಂದು ಮಾಡಿಕೊಂಡತಾಯಿತಲ್ಲ ಎಂದು ಆತನ ಅಳು ನಿಲ್ಲಿಸಲು ಹರಸಾಹಸ ಪ್ರಾರಂಭಿಸಿದೆ. ಕೊನೆಗೆ ಆತನ ಜೇಬಿಗೆ ನೂರರ ಒಂದು ನೋಟು ತುರುಕಿ ಆಯಿತು ನೀನು ಕದ್ದಿಲ್ಲ ಎಂದಮೇಲೆ ತಪ್ಪು ನನ್ನದೆ ಎಂದು ಸಮಾಧಾನ ಪಡಿಸಿದೆ. ನೂರರ ನೋಟು ಜೇಬಿಗೆ ಸೇರಿದಮೇಲೆ ಸ್ವಲ್ಪ ಸಮಾಧಾನ ಪಟ್ಟುಕೊಂದ ಹುಡುಗ ಗ್ಯಾರೇಜ್ ಕೆಲಸದಲ್ಲಿ ತಲ್ಲೀನನಾದ. ನಾನು ಹೋದ ಮೊಬೈಲ್ ಹೋಯಿತು ಜತೆಗೆ ನೂರೂ ಕೈಬಿಟ್ಟಿತು ಇನ್ನೇನು ಮಾಡುವುದಪ್ಪಾ ಎಂದು ಅಲ್ಲೇ ಖುರ್ಚಿಯಲ್ಲಿ ಕುಳಿತೆ. ಗ್ಯಾರೇಜನಲ್ಲಿ ಸೇರಿದ ಇತರೆ ಮಂದಿ ನನ್ನನ್ನು ಒಂಥರಾ ಅಪರಾಧಿ ಎಂಬಂತೆ ನೋಡತೊಡಗಿದರು. ಹಾಗೆಲ್ಲ ಸುಮ್ಮ ಸುಮ್ಮನೆ ಆನುಮಾನ ಪಡಬಾರದು ಎಂದು ನನಗೆ ಉಪದೇಶಾಮೃತ ಶುರುವಾಯಿತು. ಇನ್ನು ಇಲ್ಲಿ ಹೆಚ್ಚು ಹೊತ್ತು ಇದ್ದರೆ ನಾನು ಧರ್ಮದೇಟು ತಿನ್ನಬೇಕಾಯಿತೆಂದು ಹೊರಡಲನುವಾದೆ. ಅಷ್ಟರಲ್ಲಿ ಡೈರಿ ಪ್ರಕಾಶ ಬಂದ ಆತನ ಬಳಿ " ನನ್ನ ಮೊಬೈಲ್ ಕಳೆದಿದೆ ಸಿಮ್ ಬ್ಲಾಕ್ ಮಾಡಿಸಬೇಕಿತ್ತು" ಮುಂತಾಗಿ ಸವಿವರವಾಗಿ ಫಯಾಜ್ ಬಂದಿದ್ದು ನೂರು ಕೊಟ್ಟಿದ್ದು ಆತ ಅತ್ತದ್ದು ಹೇಳಿದೆ. ಆತ "ತಥ್ಥೇರಿಕಿ ಅವುಕ್ಕೆ ನಿನ್ನ ಭಾಷೆ ಅಲ್ಲ ತಡಿ ನೋಡ್ತಾ ಇರು ಈಗ" ಎನ್ನುತ್ತಾ ಹುಡುಗನನ್ನು ಗ್ಯಾರೇಜ್ ಹಿಂದೆ ಎಳೆದುಕೊಂಡು ಹೋದ. ನನಗೋ ಗಾಬರಿಯಾಯಿತು. ಮೊದಲೇ ಸೀನ್ ಕ್ರಿಯೇಟ್ ಆಗಿದೆ ಇನ್ನು ಮತ್ತೇನಾದರೂ ಗಲಾಟೆ ಆದೀತೆಂಬ ಭಯ. "ಏಯ್ ಹೋಗ್ಲಿ ಬಿಡಾ" ಎನ್ನುತ್ತಾ ನಾನೂ ಪ್ರಕಾಶನ ಹಿಂದೆ ಓಡಿದೆ. ಆದರೆ ಅಷ್ಟರಲ್ಲಿ ಪ್ರಕಾಶನ ರಭಸಕ್ಕೆ ಹುಡುಗ ಬಾಯಿಬಿಟ್ಟಾಗಿತ್ತು. ಪ್ರಕಾಶ ಹೆಂಗೆ? ಎನ್ನುತ್ತಾ ಹುಬು ಹಾರಿಸಿದ. "ಅವು ಸಾಬ್ರ ಹುಡುಗ್ರು ತಮಾ ಹಂಗಾಂದ್ರೆ ಹಂಗೆ ಹಿಂಗಾದ್ರೆ ಹಿಂಗೆ ನೀ ಲೂಸ್ ತರಹ ನೂರು ರೂಪಾಯಿ ಕೊಟ್ಟಿದ್ಯಲಾ" ಅಂತ ನನಗೆ ಅಂದ. ಫಯಾಜ್ ನ ಮುಖ ನೋಡಿದೆ ಕಣ್ಣೀರು ಧಾರಾಕಾರ ಇಳಿಯುತ್ತಿತ್ತು. " ಹೋಗ್ಲಿ ಬಿಡು ಅಳಬೇಡ , ಇನ್ನು ಈ ತರಹ ಮಾಡಬೇಡ" ಅಂತ ಸಮಾಧಾನ ಮಾಡಿದೆ. ನನಗೋ ಒಂಥರಾ ಪಿಚ್ಚೆನಿಸಿತು. ಛೆ ಪಾಪ ಈಗ ಸುತ್ತಮುತ್ತಲಿನವರೆಲ್ಲಾ ಆತನ ವಿರುದ್ಧ ತಿರುಗಿಬಿದ್ದಿದ್ದರು. ಉಪದೇಶಾಮೃತ ಆತನತ್ತ ತಿರುಗಿತ್ತು. ಕೆಲವರು ಹೊಡೆದು ಹೀರೋ ಆಗಲು ಮುನ್ನುಗ್ಗುತ್ತಿದ್ದರು. ನಾನು ಇನ್ನು ಅವಾಂತರವಾದೀತೆಂದು ಫಯಾಜ್ ನನ್ನು ಬೈಕಲ್ಲಿ ಕೂರಿಸಿಕೊಂಡು ಪೇಟೆಗೆ ಕರೆದುಕೊಂಡು ಹೋಗಿ ಮಹಳದಕರ್ ಟೆಕ್ಸಟೈಲ್ಸ್ ನಲ್ಲಿ ಒಂದು ಒಳ್ಳೆಯ ಟಿ ಶರ್ಟ್ ಕೊಡಿಸಿದೆ.
ಆತನ ಕಣ್ಣುಗಳಲ್ಲಿ ಅದೇನೋ ಹೊಳಪು ಕಂಡೆ ಮತ್ತು ಮನೆಗೆ ಬಂದು ಹುಡುಗನನ್ನು ಹೆದರಿಸಿ ಜೋರು ಮಾಡಿ ಅವಾಜ್ ಹಾಕಿ ಮೊಬೈಲ್ ಇಸಕೊಂಡು ಬಂದೆ ಅಂತ ಒಂದು ಸುಳ್ಳು ಹೇಳಿ ಮನೆಯವರೆದುರು ಹೀರೋ ಆದೆ.
ಭಾನುವಾರ ನಾ ಕೊಡಿಸಿದ್ದ ಟಿ ಶರ್ಟ್ ಹಾಕಿಕೊಂಡಿದ್ದ ಫಯಾಜ್ ಮಿರಿಮಿರಿ ಮಿಂಚುತ್ತಿದ್ದ ಮತ್ತು ನನ್ನನ್ನೇ ಹಾಗೆ ಕೇಳಿದ. ನಾನು ಮೊಬೈಲ್ ಸಿಕ್ಕಿದ್ದರಿಂದ ನನಗೆ ಉಳಿದ ಹಣ ಎಷ್ಟು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದೆ. ಮುಂದೊಂದು ದಿನ ಆ ಹುಡುಗನಿಗೆ ನಾನು ಶರ್ಟ್ ಕೊಡಿಸಿದ್ದು ಹಣ ಕೊಟ್ಟಿದ್ದು ಅರ್ಥವಾದರೆ ಸಾರ್ಥಕ. ಆಗದಿದ್ದರೆ ಅವನ ಅಲ್ಲಲ್ಲ ಯಾರ್ಯಾರದೋ ಹಣೆಬರಹದಲ್ಲಿ ಏನೇನು ಕಳೆದುಕೊಳ್ಳಬೇಕೆಂದು ಬರೆದಿದೆಯೋ ಬಲ್ಲವರ್ಯಾರು?.