Wednesday, January 27, 2010

" ದಬ್ಬೆತಲೆ " http://prajavani.net/Content/Jan312010/weekly20100130167907.asp)


ಬೆಳ್ಳನೆಯ ನೊರೆಯಾಗಿ ದಬ ದಬ ಎಂದು ಸದ್ದು ಮಾಡುತ್ತಾ ವರ್ಷಪೂರ್ತಿ ಕಣ್ಮನ ತಣಿಸುವ ಜಲಧಾರೆಗೆ ಪಶ್ಚಿಮ ಘಟ್ಟಗಳ ಸರಣಿ ತವರುಮನೆ ಇದ್ದಂತೆ. ನೂರಾರು ಜಲಧಾರೆಗಳ ತವರೂರಾದ ಪಶ್ಚಿಮಘಟ್ಟ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಕೆಲ ಜಲಪಾತಗಳನ್ನು ತೋರಿಸಲು ಹರಸಾಹಸವನ್ನು ಬೇಡುತ್ತದೆ. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತದಂತವುಗಳನ್ನು ನೋಡಲು ವಾಹನದಲ್ಲಿ ಹೋಗಿ ಜಲಧಾರೆಯ ಮುಂದೆ ನಿಂತರಾಯಿತು. ಆದರೆ ಇನ್ನೂ ಹತ್ತು ಹಲವು ಜಲಧಾರೆ ನೋಡಬೇಕು ಎಂದೆನಿಸಿದರೆ ಚಾರಣ , ಸಾಹಸ ಮಾಡಬೇಕಾಗುತ್ತದೆ. ಅಂತಹ ಸಾಹಸದ ಚಾರಣವನ್ನು ಬೇಡುವ ಜಲಪಾತ ಶಿವಮೊಗ್ಗ ಜಿಲ್ಲೆಯ ಕಾರ್ಗಲ್-ಭಟ್ಕಳ ರಸ್ತೆಯ ಕೊಂಜವಳ್ಳಿ ಎಂಬ ಊರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ "ದಬ್ಬೆ" ಎಂಬ ಜಲಧಾರೆ. ಕೊಂಜವಳ್ಳಿಯಿಂದ ೮ ಕಿಲೋಮೀಟರ್ ಕಚ್ಚಾರಸ್ತೆಯಲ್ಲಿ ಸಾಗಿ ಮಂಜೇ ಗೌಡರ ಮನೆಯ ಬದಿಯಲ್ಲಿ ಪ್ರಪಾತದ ದಾರಿ ಇಳಿದರೆ ದಬ್ಬೆ ಜಲಪಾತದ ಸೊಬಗು ಸಿಗುತ್ತದೆ. ಆದರೆ ಹಾಗೆ ಇಳಿದು ಸಾಗುವುದು ಸುಲಭಸಾದ್ಯವಲ್ಲದ ಕೆಲಸ. ಜಲಪಾತದ ಸೊಬಗನ್ನೂ ಅನುಭವಿಸಬೇಕು ಸುಲಭದಲ್ಲಿಯೂ ಇರಬೇಕು ಎನ್ನುವವರಿಗೆ ಇದು ಕಷ್ಟಕರ, ಹಾಗೆ ಸುಲಭದಲ್ಲಿ ಜಲಪಾತದ ಸೊಬಗು ಅನುಭವಿಸಿ ಜಲಪಾತಕ್ಕೆ ತಲೆಕೊಟ್ಟು ಸ್ನಾನ ಮಾಡಬೇಕೆಂಬ ಆಸೆಯಿದ್ದವರಿಗೆ "ದಬ್ಬೆತಲೆ" ಸುಮಧುರ ಅನುಭವವನ್ನು ನೀಡುತ್ತದೆ. ದಬ್ಬೆಗೆ ಸಾಗುವ ದಾರಿಯಲ್ಲಿ ದಬ್ಬೆ ಜಲಪಾತಕ್ಕಿಂತ ಒಂದು ಕಿಲೋಮೀಟರ್ ಹಿಂದೆ ಕಿರಿದಾದ ಸೇತುವೆಯ ಹತ್ತು ಅಡಿ ಪಕ್ಕದಲ್ಲಿಯೇ ಅಡಗಿರುವ ಈ "ದಬ್ಬೆತಲೆ" ಹುಡುಕುವುದು ಸ್ವಲ್ಪ ಕಷ್ಟವಾದರೂ ಸಿಕ್ಕಮೇಲೆ "ವಾವ್" ಎನ್ನುವ ಉದ್ಘಾರವನ್ನು ತನ್ನಷ್ಟಕ್ಕೆ ಹೊರಡಿಸುತ್ತದೆ. ದಬ್ಬೆತಲೆಯ ನದಿಗುಂಟ ಒಂದರ್ದ ಕಿಲೋಮೀಟರ್ ಕೆಳಗೆ ಸಾಗಿದರೆ ದಬ್ಬೆ ಜಲಪಾತ ಬೀಳುವ ಜಾಗಕ್ಕೂ ಹೋಗಬಹುದು. ಮೇಲ್ಗಡೆ ಸಾಗಿದರೆ ದಬ್ಬೆ ಜಲಪಾತವಾಗುವ ನದಿಯ ಪಾತ್ರವನ್ನು ಅನುಭವಿಸಬಹುದು. ಫೆಬ್ರವರಿ ತಿಂಗಳ ನಂತರ ನೀರಿನ ರಭಸ ಕಡಿಮೆಯಾಗುವುದರಿಂದ ಅಷ್ಟರೊಳಗೆ ಪ್ರವಾಸಕ್ಕೆ ಸೂಕ್ತ ಸಮಯ.
http://prajavani.net/Content/Jan312010/weekly20100130167907.asp)



------------------------------------
೯೩೪೨೨೫೩೨೪೦