ರೆಡಿಯೋದಲ್ಲಿ ಕೃಷಿರಂಗ ಕಾರ್ಯಕ್ರಮ ಬರುವ ಮುನ್ನ ಹೀಗೊಂದು ಹಾಡು ಪ್ರಸಾರವಾಗುತ್ತಿತ್ತು ಮತ್ತು ಆಗುತ್ತಿದೆ. ಹಿಂದೆ ಈ ಹಾಡನ್ನು ಗುಣಗುಣಿಸದ ಕೃಷಿಕರಿಲ್ಲ. ಈಗ ಜಿಂಕೆ ಮರಿನಾ..-ಏನೊ ಒಂಥರಾ... ಮುಂತಾದ ಹಾಡು ಗುಣುಗುಣಿಸಿದಂತೆ ಅಂದು ಕರಿಯೆತ್ತಾ.. ಗುಣುಗುಣಿಸುತ್ತಿದ್ದರು. ಆನಂತರ ಬೆಂಕಿರೋಗಕ್ಕೆ ರೋಡೋಮಿಲ್ ಹೊಡೆಯಿರಿ, ಊಜಿ ನೊಣಕ್ಕೆ ಎಂಡೊಮಿಲ್ ಹೊಡೆಯಿರಿ, ಡಿಎಪಿ ಹಾಕಿ ಯೂರಿಯಾ ಚೆಲ್ಲಿ ಮುಂತಾಗಿ ಮುಂದುವರೆಯುತ್ತಿತ್ತು. ಅವೆಲ್ಲಾ ಇರಲಿ ಈ ಕರಿ ಹಾಗೂ ಬಿಳಿ ಎತ್ತಿನ ಕತೆಗೆ ಬರೋಣ. ನಾವು ನೀವು ದಿನನಿತ್ಯ ಊಟ ಮಾಡುವ ಬಿಳಿ ಅಕ್ಕಿಯ ಹಿಂದಿನ ಕರಿ ಕತೆ ಇಂದಿಗೂ ಬೇಸರದ ಸಂಗತಿಯೆ. ಅದೂ ಮಲೆನಾಡಿನಲ್ಲಿ ಭತ್ತ ಬೆಳೆಯುವ ಕೆಲಸವೆಂದರೆ ಅದರ ಪಾಡು ಯಾರಿಗೂ ಬೇಡ. ಮೊಣಕಾಲಿನ ಆಳ ಹುಗಿಯುವ ಕೆಸರಿನಲ್ಲಿ ಬೆನ್ನೆಲುಬು ಕಾಣುವ ಹೋರಿಗಳನ್ನು ನೇಗಿಲೆಗೆ ಕಟ್ಟಿಕೊಂಡು ಹೂಟಿ ಮಾಡುವ ಕೆಲಸದ ಕಷ್ಟ ಮಾಡಿದವರಿಗೆ ಗೊತ್ತು. ನಾಲ್ಕು ತಿಂಗಳುಗಳ ಕಾಲ ಹಗಲೂ ರಾತ್ರಿ ಹಕ್ಕಿ ಪ್ರಾಣಿ ಮಳೆಯಿಂದ ರಕ್ಷಿಸಿಕೊಂಡು ಒಂದು ಬೆಳೆ ತೆಗೆದರೆ ಆರು ತಿಂಗಳ ಊಟಕ್ಕಾಗುತ್ತದೆ. ಕೃಷಿಕನಿಗೆ ಆರು ತಿಂಗಳ ಊಟಕ್ಕಾದರೆ ಎತ್ತುಗಳಿಗೆ ಆತ ಎಲ್ಲಿಂದ ತಂದಾನು?. ಅವುಕ್ಕೆ ಗುಡ್ಡದಲ್ಲಿನ ಚುಪುರು ಚುಪುರು ಹುಲ್ಲೇ ಗತಿ. ಅದೇನು ಮನುಷ್ಯನ ಜತೆಗಿನ ಬಾಂಧವ್ಯವೋ ಆದರೂ ಅವುಗಳು ಅವನ ಜತೆಗಾರನಾಗಿವೆ. ಆಕಳುಗಳಿಗಾದರೆ ಗೋವೆಂಬ ಹಿರಿಮೆಯಿದೆ. ಹಾಲು ಕೊಡುತ್ತವೆಯಾದ್ದರಿಂದ ಅವುಕ್ಕೆ ಹಿಂಡಿ ಸಿಗುತ್ತದೆ. ಆದರೆ ಅದ್ಯಾವ ಜನ್ಮದಲ್ಲಿ ಎಂತಹ ಪಾಪ ಮಾಡಿ ಇವು ಹೋರಿಗಳಾಗಿ ಹುಟ್ಟಿವೆಯೋ ಹೂಟಿ ಮಾಡೂವ ಒಂದು ತಿಂಗಳು ಹತ್ತಿಹಿಂಡಿ ಕಂಡರೆ ಅವುಗಳ ಪುಣ್ಯ. ಗೋಮಾತೆಗಾದರೆ ಗೋಪೂಜೆಯಂತೆ, ಗೋಗ್ರಾಸವಂತೆ ಹೀಗೆ ಅಂತೆಕಂತೆಗಳ ಸಂತೆಯಿದೆ. ಅನ್ನ ನೀಡಲು ಅರ್ಲು ತುಳಿಯುವ ಹೋರಿಗಳಿಗಾದರೆ ಪೂಜೆಯೂ ಇಲ್ಲ ಗೀಜೆಯೂ ಇಲ್ಲ. ಆದರೂ ಅವು ಅರೆಹೊಟ್ಟೆಯಲ್ಲಿ ದ್ದು ಮನುಷ್ಯನಿಗೆ ಹೊಟ್ಟೆ ತುಂಬಿಸಲು ಹೋರಾಟ ಮಾಡುತ್ತಲೇ ಇವೆ. ಅವುಗಳ ಜತೆಗೆ ಬೆನ್ನಿಗೆ ಅಂಟಿಕೊಂಡಿರುವ ಚಕ್ಕಳ ಮೂಳೆಯ ರೈತನೂ ಇದ್ದಾನಲ್ಲ ಎಂಬ ಸಮಾಧಾನ ಅವುಕ್ಕೆ ಇರಬೇಕು. ಅವೇನೆ ಇರಲಿ ಹೀಗೆ ಯಾರ್ಯಾರೋ ಎಷ್ಟೆಷ್ಟೋ ಕಷ್ಟಪಟ್ಟು ನಮ್ಮ ಹೊಟ್ಟೆಗೆ ಹಿಟ್ಟು ತಲುಪಿಸುತ್ತಿದ್ದಾರಲ್ಲ ಅಂದು ಯೋಚಿಸಿದರೆ ಒಮ್ಮೆ ನಮ್ಮ ಒಣ ಠೇಂಕಾರವೆಲ್ಲಾ ಇಳಿದುಹೋಗುತ್ತದೆ.
ಕೊನೆಯದಾಗಿ: ದೇಹ ಪೋಷಣೆಯ ಹೊಣೆ ಹೊತ್ತವರು ಕಷ್ಟದಲ್ಲಿದ್ದಾರೆ ಮನಸ್ಸಿಗೆ ಮುದ ನೀಡುವ ಕೆಲಸ ಆಯ್ದುಕೊಂಡವರು ಸುಖದಲ್ಲಿ ತೇಲುತ್ತಿದಾರೆ ಇದೇಕೆ ಹೀಗೆ ? ಎಂದು ನಮ್ಮ ಆನಂದರಾಮ ಶಾಸ್ತ್ರಿಯವರನ್ನು ಕೇಳಿದೆ. ಅದಕ್ಕವರು ಜನ್ಮ ಜನ್ಮಾಂತರದ ಕತೆ ಹುಟ್ಟಿಕೊಂಡಿರುವುದು ಇಂತ ತರ್ಲೆ ಆಲೋಚನೆಯಿಂದಲೆ. ಕಡಿಮೆ ಯೋಚಿಸು ಹೆಚ್ಚು ಸುಖದಿಂದಿರು ಎಂದು ಸ್ವಲ್ಪ ಬಿರುಸಾಗಿ ಹೇಳಿದರು. ನಾನು ತೆಪ್ಪಗಾದೆ