Saturday, January 3, 2009

ಎರಡು ಬ್ಲಾಗ್ ಗಳು ಮತ್ತೊಂದು.. ಕನ್ನಡ ಕಲಿಕೆ

ಶ್ರದ್ಧೆಯಿಂದ ಪುಕ್ಕಟೆ ಮಾಹಿತಿ ಒದಗಿಸುವವರ ಮೊದಲಪಟ್ಟಿಯಲ್ಲಿ ಬ್ಲಾಗಿಗಳು ಬರುತ್ತಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಯಾವ ಲೇಖನಕ್ಕೂ ಬ್ಲಾಗಿಗಳ ಮಾಹಿತಿ ಸೆಡ್ಡುಹೊಡೆಯುವಂತಿರುತ್ತದೆ. ಅಂತಹ ಒಂದು ಉತ್ತಮ ಗ್ರಾಹಕರ ಪರವಾಗಿರುವ ಬ್ಲಾಗ್ ಎಂದರೆ ತುಸು ತಡವರಿಸಿದರೂ ಮಾಂಸ(!)ವಾಗುವ ಮಾವೆಂಸ ರವರ http://mavemsa.blogspot.com/ ಬ್ಲಾಗ್. ಸಾಗರದ ಬಳಕೆದಾರರ ವೇದಿಕೆಯ ಮುಂಚೂಣಿಯಲ್ಲಿ ಕೆಲಸಮಾಡುತ್ತಿರುವ ಮಾವೆಂಸ ಪ್ರಸಾದ್ ತಮ್ಮ ಬ್ಲಾಗಿನಲ್ಲಿಯೂ ಅದೇ ಗ್ರಾಹಕರಿಗೆ ಮಾಹಿತಿ ಒದಗಿಸುವ ಕೆಲಸವನ್ನು ಮುಂದುವರೆಸಿದ್ದಾರೆ. ಹಾಗಂತ ಕೇವಲ ಬಳೆಕೆದಾರರ ವೇದಿಕೆಯ ಮಾಹಿತಿಯೊಂದೇ ಇಲ್ಲಿಲ್ಲ ಹಾಗಾದರೆ ಮತ್ತೇನೆನಿದೆ ಅಂತ ತಿಳಿಯಲು ಒಮ್ಮೆ ಇಣುಕಿಬನ್ನಿ.
"ಇನ್ನು ಒಂದೇ ದಿನ ಬಾಕಿಯಿರುವುದು. ಅಮ್ಮನಿಗಂತೂ ಖುಷಿಯೇ ಖುಷಿ..ಅಮ್ಮನತ್ರ ಹೇಳಿದೆ..ಅರ್ಜೆಂಟಾಗಿ ಕಾಲೇಜಿಗೆ ಹೋಗಬೇಕಂತೆ..ಫೋನ್ ಬಂದಿದೆ..ಹುಡುಗನ ಇನ್ನೊಂದ್ಸಲ ನೋಡಿಕೊಂಡು ಹೋಗಕ್ಕೆ ಹೇಳಿ..! ಅಮ್ಮನಿಗೆ ಸಿಟ್ಟು ಬಂತು. " ಹೀಗೆ ಮದುವೆ ಇಷ್ಟವಿಲ್ಲದ ಹುಡುಗಿಯೊಬ್ಬಳು ಹೇಗೆ ತಪ್ಪಿಸಿಕೊಳ್ಳುತ್ತಾಳೇ ಎಂಬುದನ್ನು ಚಿತ್ರಾ ಕರ್ಕೇರಾ ದೋಳ್ಪಾಡಿ.. ತಮ್ಮ ಶರಧಿ ಬ್ಲಾಗಿನಲ್ಲಿ (http://sharadhi.blogspot.com/) ನೋಡಲು ಬಂದ ಮೊಬೈಲ್ ಹುಡುಗ ಬರಹದ ಮೂಲಕ ಹೇಳಿಕೊಳ್ಳುತ್ತಾರೆ. ತಮ್ಮ ಪರಿಚಯದಲ್ಲಿ ನನ್ ಬಗ್ಗೆ ಹೇಳಕ್ಕೇನೂ ಇಲ್ಲ..ನಾನ್ ಥೇಟ್ ನಿಮ್ ಥರಾನೇ. ಕೂತಾಗ-ನಿಂತಾಗ ಎಲ್ಲೋ ಒಂದೆಡೆ ಮನದಲ್ಲಿ ಉದಿಸಿದ ಭಾವದಲೆಗಳ ಪುಟ್ಟ ಪಯಣ ಈ 'ಶರಧಿಯಲಿ.', ನನ್ ಊರು ಕರಾವಳಿ ಮಡಿಲು ಪುತ್ತೂರು, ಸಧ್ಯಕ್ಕೆ ಬೆಂಗಳೂರ್ ನನ್ನೂರು. ಎಂದೆನ್ನುತ್ತಾ ನಮ್ಮ ಪರಿಚಯದವರಂತೆ ಅಕ್ಕಪಕ್ಕದವರಂತೆ ತಮ್ಮ ಕತೆ ಹೇಳಿಕೊಳ್ಳುತ್ತಾರೆ. ಅಲ್ಲಿ ಕೇವಲ ಅವರ ಕಥೆಗಳಿಲ್ಲ
"ನಿಜವಾದ ಅಪ್ಪ ಹೇಗಿರಬೇಕೆಂದರೆ ಯಾವ ಕಾರಣಕ್ಕೂ ಅನಾಥ ಮಕ್ಕಳೆದುರು ತಮ್ಮ ಮಕ್ಕಳನ್ನು ಮುದ್ದು ಮಾಡಬಾರದು" ಎಂಬಂತಹ ತತ್ವ ಜ್ಞಾನದ ವಾಕ್ಯಗಳಿವೆ ಅವುಗಳಿಗೆ ಚಿತ್ರಾರವರು "ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು! " ಎಂಬ ಹೆಡ್ಡಿಂಗ್ ನೀಡಿದ್ದಾರೆ. ಹೀಗಿದೆ ಈ ವಾರದ ನನಗೆ ಕಂಡ ಬ್ಲಾಗ್ ಲೋಕ. ನಿಮಗೂ ಇಷ್ಟವಾದರೆ ಅಲ್ಲಿ ಒಂದು ಕಾಮೆಂಟ್ ದಾಖಲಿಸಿ. ನಮ್ಮ ಬ್ಲಾಗಿಗಳಿಗೆ ಕಾಮೆಂಟಗಳು ಉತ್ಸಾಹ ತರಬಲ್ಲದು. ಅವರಿಂದ ನಾವು ನಮ್ಮಿಂದ ಅವರು ಎಂಬುದಾದರೂ ಬ್ಲಾಗಿಗಳಲ್ಲಿ ಉತ್ಸಾಹ ಹೆಚ್ಚಿದರೆ ಓದುಗರಾದ ನಮಗೇ ಹೆಚ್ಚು ಲಾಭ.
ಕನ್ನಡ ಕಲಿಸಬೇಕು ಕಲಿಯಬೇಕು ಅದು ನಮ್ಮನಿಮ್ಮೆಲ್ಲರ ಕರ್ತವ್ಯ. ಆದರೆ ನಮಗೆ ನಿಮಗೆ ಇಲ್ಲಿ ಅದನ್ನು ಕಾರ್ಯಗತ ಮಾಡಲಾಗಲಿಲ್ಲ. ಹಾಗಾಗಿ ನಾವು ಬೆಂಗಳೂರಿನಲ್ಲಿ ತಮಿಳು ಇಂಗ್ಲೀಷ್ ಹಿಂದಿ ಮುಂತಾದ ಭಾಷೆಗಳನ್ನು ಕಲಿತುಬಿಟ್ಟಿದ್ದೇವೆ. ಆದರೆ ಅಮೆರಿಕಾದ ನಮ್ಮ ವಿಶ್ವೇಶ್ವರ ದೀಕ್ಷಿತರು ಅದಕ್ಕಾಗಿಯೇ ಒಂದು ಪತ್ರಿಕೆಯನ್ನು ಹೊರಡಿಸುತ್ತಾರೆ. ಕನ್ನಡ ಕಲಿ (http://kannadakali.com/ ) ಎಂಬುದು ಪತ್ರಿಕೆಯ ಹೆಸರು. ಆನ್ ಲೈನ್ ನಲ್ಲಿ ಹೊಸಮಾದರಿಯ ಪತ್ರಿಕೆ ಅದು. ನಮ್ಮೆದುರೆ ಪುಟಗಳು ಬಿಚ್ಚಿಕೊಳ್ಳುತ್ತಾ ನಾವೇ ಪುಸ್ತಕದ ಪುಟ ತೆರೆದು ಓದಿದಂತೆ ಭಾಸವಾಗುತ್ತದೆ. ಶುಭವಾಗಲಿ ದೀಕ್ಷಿತರಿಗೆ.
ಈವಾರದ್ದು ಇಷ್ಟು ಮತ್ತೆ ಹೇಗೂ ಮುಂದಿನವಾರ ಇದೆಯಲ್ಲ. ಅಲ್ಲಿಯವರೆಗೆ ಶುಭದಿನಗಳು

Friday, January 2, 2009

ನಾನು ನಿನ್ನ ಕೊಡೆ ಕದ್ದಿಲ್ಲ

ಹೀಗೆ ಬರೆಯುತ್ತಾ ಬರೆಯುತ್ತಾ ನಾನು ಒಂದು ದಿನ ಇಲ್ಲವಾಗುತ್ತೇನೆ. ಹಾಗೆ ಓದುತ್ತಾ ಓದುತ್ತಾ ನೀವು ಕೂಡ ಅಷ್ಟೆ. ಆದರೆ ಬರಹಗಳು ಉಳಿಯುತ್ತವೆ. ಭಾಷೆಗಳು ಉಳಿಯುತ್ತವೋ ಇಲ್ಲವೋ ಗೊತ್ತಿಲ್ಲ. ಒಂದಾನೊಂದು ಕಾಲಕ್ಕೆ ಭಾಷೆಯಾಗಿದ್ದ ಕನ್ನಡ ಈಗ ಹಳೆಗನ್ನಡ ಎಂಬ ಹೆಸರು ಪಡೆದು ನಮಗೆ ನಿಮಗೆ ಅರ್ಥವಾಗದಂತಾಗಿದೆ. ಹಾಗೆಯೇ ಈಗ ನಾನು ಬರೆದದ್ದು ನೀವು ಓದಿದ್ದು ಮುಂದೊಂದು ದಿನ ಯಾರಿಗೂ ಅರ್ಥವಾಗದಿರಬಹುದು. ಅಥವಾ ನಾವು ಬರೆದ ರೀತಿಯಲ್ಲಿ ಅರ್ಥವಾಗದಿರಬಹುದು. ಹೀಗೊಂದು ವಾಕ್ಯವಿದೆ "ನಾನು ನಿನ್ನ ಕೊಡೆ ಕದ್ದಿಲ್ಲ". ಈ ವಾಕ್ಯದ ಮಜ ಹೇಗಿದೆ ಎಂದರೆ ವಾಕ್ಯದ ಒಂದೊಂದು ಶಬ್ಧವನ್ನು ಒತ್ತಿ ಹೇಳಿದಾಗ ಒಂದೊಂದು ಅರ್ಥವನ್ನು ನಿಡುತ್ತದೆ. "ನಾನು ನಿನ್ನ ಕೊಡೆ ಕದ್ದಿಲ್ಲ" ಎಂದು ನಿನ್ನ ಶಬ್ಧವನ್ನು ಒತ್ತಿ ಹೇಳಿದಾಗ ನಿನ್ನ ಕೊಡೆ ಕದ್ದಿಲ್ಲ ಬೇರೆಯವರ ಕೊಡೆ ಕದ್ದಿದ್ದೇನೆ ಎಂಬ ಅರ್ಥವನ್ನು ಕೊಡೆ ಶಭ್ಧವನ್ನು ಮಾತ್ರ ಒತ್ತಿ ಹೇಳಿದಾಗ ಕೊಡೆ ಕದ್ದಿಲ್ಲ ಬೇರೆ ಏನನ್ನೋ ಕದ್ದಿದ್ದೇನೆ ಎಂದು ಹಾಗೂ ಕದ್ದಿಲ್ಲ ಎಂಬ ಶಬ್ಧವನ್ನು ಒತ್ತಿ ಹೇಳಿದಾಗ ನಾನು ಕದ್ದಿಲ್ಲ ತೆಗೆದುಕೊಂಡು ಹೋಗಿದ್ಡೇನೆ ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ಸಹಜವಾಗಿದ್ದ ಒಂದು ವಾಕ್ಯ ಆಡುವಾಗಿನ ವ್ಯತ್ಯಾಸದಿಂದ ಮೂಲವಾದ ಅರ್ಥಕ್ಕೆ ತದ್ವಿರುದ್ದವಾದ ಅರ್ಥವನ್ನು ನೀಡಿಬಿಡುತ್ತದೆ. ವರ್ತಮಾನದಲ್ಲಿಯೇ ಬರಹಗಳು ಇಷ್ಟೊಂದು ಅವಾಂತರ ತಂಡಿಡಬಲ್ಲದಾದರೆ ನೂರಾರು ವರ್ಷದ ನಂತರ ದುರಂತವನ್ನೇ ಸೃಷ್ಟಿಸಬಿಡಬಲ್ಲದು ಭಾಷೆ. ಈಗಿನ ಕನ್ನಡದಲ್ಲಿ ನೂರಾರು ಆಂಗ್ಲ ಪದಗಳು ತುಂಬಿ ತುಳುಕಾಡುತ್ತಿವೆ. ಮುಂದೊಂದು ದಿನ ಅವೇ ಕನ್ನಡವಾಗುತ್ತವೆ. ಹಾಗಂತ ಈ ಭಾಷೆಯ ಸಮಸ್ಯೆ ಕೇವಲ ಕನ್ನಡಕ್ಕೆ ಅಂತೇನೂ ಅಲ್ಲ ಇಂಗ್ಲೀಷ್ ಸೇರಿದಂತೆ ಜಗತ್ತಿನ ಎಲ್ಲಾ ಭಾಷೆಗೂ ಇದೇ ಸಮಸ್ಯೆ.
ಅಣುಸ್ಥಾವರದ ಹಾರುಬೂದಿಯನ್ನು ಹೂತಿಡುವಾಗ ಇದೇ ಸಮಸ್ಯೆ ಎದುರಾಯಿತಂತೆ. ಆ ಅಣುಸ್ಥಾವರ ಬೂದಿ ಸಾವಿರ ವರ್ಷಗಳ ಕಾಲ ವಿಕಿರಣವನ್ನು ಸೂಸುತ್ತಿರುತ್ತದೆಯಂತೆ. ಹಾಗಾಗಿ ಅದನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಅದರ ಸಂಪರ್ಕ ಮನುಷ್ಯನಿಗೆ ಅಥವಾ ಯಾವುದೇ ಪ್ರಾಣಿಗಳಿ ಬಂದಲ್ಲಿ ರೋಗರುಜಿನ ಕಟ್ಟಿಟ್ಟ ಬುತ್ತಿ. ಸಾವಿರ ವರ್ಷಗಳ ಕಾಲ ಅಪಾಯವನ್ನು ಕಂಕುಳಿನಲ್ಲಿ ಇಟ್ಟುಕೊಂಡು ಕಾಪಾಡುವುದೂ ಒಂದು ಕಷ್ಟಕಾರಕ ಕೆಲಸವೆ. ಬೂದಿಯನ್ನಿಟ್ಟ ಜಾಗದಲ್ಲಿ ಡೇಂಜರ್ ಎಂದು ಬರೆದ ಬೋರ್ಡ್ ಇಡಬೇಕು. ಸರಿ ಓದುವನಿಗೆ ಇಂಗ್ಲೀಷ್ ಬರದಿದ್ದರೆ ಎಂಬ ಚಿಂತೆ. ಆಯಿತು ಜಗತ್ತಿನ ಎಲ್ಲಾ ಭಾಷೆಯಲ್ಲಿಯೂ ಹಾಗೆ ಬರೆದಿಡಬೇಕು. ಅದು ಸರಿ ಆದರೆ ಅಕ್ಷರ ಓದಲು ಬಾರದಿದ್ದವನಿಗೆ ಎಂಬ ಚಿಂತೆ. ಓದಲು ಬಾರದಿದ್ದವನಿಗೆ ಅಂತ ಮಾನವನ ತಲೆಬುರುಡೆ ಪಕ್ಕಕ್ಕೆರಡು ಎಲುಬಿನ ಚಿತ್ರ ಬಿಡಿಸಿಟ್ಟರೆ ಆತ ಆಪಾಯ ಎಂದು ಅರ್ಥೈಸಿಕೊಳ್ಳುತ್ತಾನೆ. ಸರಿ ಈ ಭಾಷೆ ಈ ಚಿಹ್ನೆ ಗಳೆಲ್ಲಾ ಈಗ ಸರಿ ಇನ್ನು ಮುನ್ನೂರು ವರ್ಷದಲ್ಲಿ ಯಾವ ಬದಲಾವಣೆ ಆಗುತ್ತದೆ ಅಂತ ಯಾರು ಬಲ್ಲರು?. ತಲೆಬುರುಡೆಯೇ ದೇವರಾದರೆ.?. ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ. "ಓಹೋ ಇದು ದೇವರ ಆವಾಸಸ್ಥಾನ " ಎಂದು ಯಾರಾದರೂ ಪೂಜೆ ಶುರುವಿಟ್ಟುಕೊಂಡರೆ ಅಣುಬೂದಿಯನ್ನು ಭಸ್ಮ ಅಂತ ತಿಳಿದು ಲೇಪಿಸಿಕೊಂಡರೆ? . ಭಾಷೆಯೂ ಹಾಗೆ ಡೇಂಜರ್ ಅಥವಾ ಅಪಾಯ ಎನ್ನುವುದು ಬದಲಾದರೆ. ಅಂತಿಮವಾಗಿ ಅಮೆರಿಕಾದ ವಿಜ್ಞಾನಿಗಳು ಒಂದು ತೀರ್ಮಾನಕ್ಕೆ ಬಂದರಂತೆ. ಪ್ರತೀ ಇಪ್ಪತ್ತದು ವರ್ಷಕ್ಕೊಮ್ಮೆ ಅಲ್ಲಿನ ನಾಮಫಲಕವನ್ನು ಹೊಸದಾಗಿ ಬರೆಯಬೇಕು. ಆಗ ಈ ಬೂದಿಯ ಅಪಾಯ ನಿರಂತರವಾಗಿ ಅರಿವಿಗೆ ಬರುತ್ತದೆ. ಅಮೆರಿಕಾದಲ್ಲಾದರೆ ಸರಿ ನಮ್ಮಂತಹ ದೇಶದಲ್ಲಿ ಹತ್ತು ವರ್ಷದ ಪ್ಲಾನ್ ನಮ್ಮಲ್ಲಿಲ್ಲ ಇನ್ನು ಸಾವಿರ ವರ್ಷದ ಕಥೆ ಆಮೇಲಿನದು.
ಅಯ್ಯೋ ಈಗಿನದು ಈಗ ಮುಂದಿನದು ಯಾರಿಗೆ ಗೊತ್ತು ಅಂದಿರಾ..? ಯೆಸ್ ನಿಮ್ಮಂತೆ ನಾನು. ಹ್ಯಾವ್ ಯೆ ನೈಸ್(ಖೇಣೀ ನೈಸ್ ಅಲ್ಲ) ಡೆ

Tuesday, December 30, 2008

ಅಪ್ಪಯ್ಯಾ..ಅಪ್ಪಯ್ಯಾ.. ಆನು ಟೂರಿಗೆ ಹೋಕ್ತಿ..

ಅಂತ ಏಳನೆ ಕ್ಲಾಸಿನಲ್ಲಿ ಓದುತ್ತಿರುವ ಮಗ ವರಾತ ಶುರು ಹಚ್ಚಿದ. ಏಕಮಾತ್ರ ಒಬ್ಬನೇ ಒಬ್ಬ(!!!!) ಮಗನನ್ನು ಶಾಲೆಯ ಟೂರಿಗೆ ಕಳುಹಿಸುವುದೆಂದರೆ ಅದೇನೋ ಆತಂಕ ಮನೆಯವಳಿಗೆ. ನನಗೂ ಆತಂಕ ಇಲ್ಲವೆಂದಲ್ಲ ಆದರೂ ಅವಳಷ್ಟಿಲ್ಲ. ನನ್ನ ಆತಂಕದ ಕಾರಣ ಇಲ್ಲಿಂದ ಚಿತ್ರದುರ್ಗ ಸರಿ ಸುಮಾರು ಇನ್ನೂರಾ ಐವತ್ತು ಕಿಲೋಮೀಟರ್ ದೂರ. ಹೋಗಿ ಬರುವುದು ಒಂದೇ ದಿನದಲ್ಲಿ. ಸುಸ್ತಾಗುತ್ತಲ್ಲ ಎಂಬುದು. ಆದರೂ ಅವನ ಆರಂಬಿಕ ಉತ್ಸಾಹಕ್ಕೆ "ಟೂರು ಗೀರು ಎಲ್ಲಾ ಬ್ಯಾಡ ಸುಮ್ನಿರು" ಎಂದು ತಣ್ಣೀರೆರಚಿದೆ. (ನನ್ನ ಅಪ್ಪಯ್ಯನೂ ಹೀಗೆ ಮಾಡುತ್ತಿದ್ದ ನನಗೆ) ನನ್ನೆದುರು ಸುಮ್ಮನಾದ ಮಗ ದೊಡ್ಡಪ್ಪನ ಮನೆಗೆ ಹೋದ. ಸಂಜೆ ದೊಡ್ಡಪ್ಪನ " ಹೋಗ್ಬರ್ಲಾ ಹುಡುಗ್ರು ಟೂರಿಗೆ ಹೋಪ್ದು ಅಂದ್ರೆ ಖುಷಿಯಪಾ ಪಾಪ" ಎಂಬ ವಶೀಲಿಬಾಜಿಯೊಂದಿಗೆ ವಾಪಾಸು ಬಂದ. ಆದರೂ ನಾನು ಬಗ್ಗಲಿಲ್ಲ. ಮಾರನೇ ದಿನ ಅವನ ಮಂಜುಮಾವನ ವಶೀಲಿ ಸಿಕ್ಕಾಪಟ್ಟೆ ಬಿಗಿಯಾಗಿದ್ದರಿಂದ ಹಾಗೂ ಮಗನ ಕಡೆ ಪಾರ್ಟಿ ದೊಡ್ದದಾದ್ದರಿಂದ ಟೂರಿಗೆ ತಾತ್ವಿಕ ಒಪ್ಪಿಗೆ ಕೊಟ್ಟೆ. ಮಗ ದಿಲ್ ಕುಷ್.
ಇವಿಷ್ಟು ಟೂರಿಗೆ ಇನ್ನೂ ಹದಿನೈದು ದಿವಸ ಇರುವಾಗಲೇ ಮುಗಿದ ಮಾತುಕತೆ. ಈ ಮಾತುಕತೆ ಮುಗಿದ ಮಾರನೇ ದಿನ ಅಡಿಗೆ ಮನೆಯಲ್ಲಿ ದಡಾರನೆ ಬಿದ್ದು ಮಳ್ಳಂಡೆಯನ್ನು ಬುರುಬುರು ಉಬ್ಬಿಸಿಕೊಂಡು ಕೂತ ಮಗರಾಯ. ಸರಿ ಡಾ. ಪ್ರಸನ್ನರಲ್ಲಿಗೆ ಕರೆದುಕೊಂಡು ಹೋಗಿ ಅದಕ್ಕೊಂದು ರಿಮೂವಬಲ್ ಬ್ಯಾಂಡೇಜ್ ಸುತ್ತಿಸಿ ಸಾವಿರ ರೂಪಾಯಿ ತೆತ್ತು ಮನೆಯತ್ತ ಮಗನನ್ನು ಕರೆದುಕೊಂಡು ಹೊರಟೆ. ಆವಾಗ " ಅಪ್ಪಯ್ಯಾ ಡಾಕ್ಟ್ರಿಗೆ ಎಷ್ಟು ಖರ್ಚಾತು..?" ಎಂದ. " ಸಾವಿರ ರೂಪಾಯಿ" ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದವ ನಂತರ " ನಿಂಗೆ ಸುಮ್ನೆ ದುಡ್ಡು ದಂಡ ಮಾಡ್ಸಿ ಬಿಟ್ಟಿ ಹಂಗಾಗಿ ಟೂರಿಗೆ ಆನು ಹೋಕ್ತ್ನಲ್ಲೆ ಅದರ ದುಡ್ಡು ನಿಂಗೆ ಉಳತ್ತು ತಗ" ಎಂದ. ಇರ್ಲಿ ಬಿಡು ಅಂತ ಸುಮ್ಮನುಳಿದೆ.
ಕಾಲಿಗೆ ಬ್ಯಾಂಡೇಜ್ ಸುತ್ತಿದ್ದರಿಂದ ಮಡಚಲು ಆಗುತ್ತಿರಲಿಲ್ಲ. ಹಾಗಾಗಿ ಸ್ಕೂಲಿಗೆ ದಿನಾಲೂ ಬೈಕಿನಲ್ಲಿ ಬಿಟ್ಟು ಬರುವುದು ಹಾಗೂ ಸಂಜೆ ಕರೆದುಕೊಂಡು ಬರುವುದು ನಿತ್ಯದ ಕಾಯಕವಾಯಿತು. ಏತನ್ಮಧ್ಯೆ ಸ್ಕೂಲಿನ ಚಿತ್ರದುರ್ಗದ ಟೂರು ಹತ್ತಿರ ಬರುತ್ತಿತ್ತು. ಪ್ರಾಯಶ: ನಿತ್ಯ ಕ್ಲಾಸಿನಲ್ಲಿ ಟೂರಿನದ್ದೇ ಮಾತುಕತೆ ನಡೆಯುತ್ತಿತ್ತು . ಹಾಗಾಗಿ ಸಂಜೆ ಮನೆಗೆ ಬರುವಾಗ ಮಗರಾಯನಿಗೆ ಟುರಿನದೇ ಕತೆ " ಅಪ್ಪಯ್ಯ ಚಿತ್ರದುರ್ಗ ಅಂದ್ರೆ ಬಯಲು ಸೀಮೆ ಸಿಕ್ಕಾಪಟ್ಟೆ ಬಿಸಿಲು, ಅಲ್ಲಿಗೆ ಹೋಪ್ದು ಎಷ್ಟು ತ್ರಾಸು, ಆನು ಹೋಪದು ಇಲ್ಲೆ ಅರಾಮಾತು ಯಂಗೆ" ಅಂತಲೋ ಅಥವಾ " ಅಪ್ಪಯ್ಯಾ ಬೆಳಗಿನ ಜಾವ ಐದು ಗಂಟೆಗೆ ಹೊರಡಕಡ, ರಾತ್ರಿ ವಾಪಾಸು ಸ್ಕೂಲಿಗೆ ಬಂದು ಉಳಿಯಕಡ, ಆನು ಹೋಪದು ಇಲ್ಲೆ ಅರಾಮಾತು ಯಂಗೆ " ಹೀಗೆ ಒಂಥರಾ ಹೋಗಲಾರೆನಲ್ಲ ಎಂಬುದನ್ನು ಒಳ್ಳೆಯದೇ ಆತು ಎಂದು ತನ್ನಷ್ಟಕ್ಕೆ ಸಮಾಧಾನದ ಕಾರಣದೊಂದಿಗೆ ನಿತ್ಯ ಸುದ್ದಿ ಹೇಳಲು ಶುರು ಮಾಡಿದ. ಅಲ್ಲಿಗೆ ನನಗೆ ಅವನ ಟೂರಿನ ಗುಂಗು ಮನವರಿಕೆಯಾಗತೊಡಗಿತು. ಆದರೆ ಡಾಕ್ಟರ್ ಇಪ್ಪತ್ತು ದಿವಸ ಬ್ಯಾಂಡೇಜ್ ಬಿಚ್ಚುವಂತಿಲ್ಲ ಎಂದಿದ್ದರು.ಅದಕ್ಕೊಂದು ಉಪಾಯ ಟೂರಿಗೆ ಇನ್ನು ಮೂರು ದಿನ ಬಾಕಿ ಇದೆ ಎನ್ನುವಾಗ ಶುರುವಾಯಿತು.
ಬೆಳಿಗ್ಗೆ ಸ್ನಾನ ಮಾಡಲು ಬ್ಯಾಂಡೇಜ್ ಬಿಚ್ಚಿದಾಗ " ಅರೆ ಒಂಚೂರು ನೋವೇ ಇಲ್ಲೆ" ಎಂದು ದಡಬಡ ಬಚ್ಚಲು ಮನೆಯಿಂದ ನಡೆದುಕೊಂಡು ಬಂದು ಹೇಳಿದ. ಪಟಪಟ ಮಡಚಿದ. ಆದರೆ ಬಡ್ಡಿಮಗಂದು ಕಾಲು ಸ್ವಲ್ಪ ನೋಯುತ್ತಿತ್ತು ಎಂಬುದು ಮುಖದಲ್ಲಿ ಗೊತ್ತಾಗುತ್ತಿತ್ತು. ಆದರೂ ಹಲ್ಲುಕಚ್ಚಿ ಸಹಿಸಿಕೊಂಡ. ಅಂತೂ ಹಾಗೂ ಹೀಗೂ ಮಾಡಿ ಟೂರಿಗೆ ಹೋಗುವುದು ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಸೈಕಲ್ ಹೊಡೆದು ತಾನು ಪರ್ ಫೆಕ್ಟ್ ಎಂದು ರುಜುವಾತು ಪಡಿಸಿ " ಅಪ್ಪಯ್ಯಾ ಬಿಸಿಲು ಜೋರಾದ್ರೆ ಹೆಂಗಿರ್ತು ಅಂತ ಗೊತ್ತಾಪ್ಲೆ ಬಯಲು ಸೀಮೆಗೆ ಹೋಯಕು ಅಲ್ದಾ..? ಬೆಳಿಗಿನ ಜಾವ ಎದ್ದು ಹೋಪ್ಲೆ ಲಾಯ್ಕಿರ್ತು ಅಲ್ದಾ?. ರಾತ್ರಿ ಸ್ಕೂಲಲ್ಲೇ ಉಳ್ಕಂಬದು ಎಂದ್ರೆ ಒಂಥರಾ ಮಜಾ ಅಲ್ದಾ?" ಎನ್ನುವ ಪ್ರಶ್ನೆಗಳ ಮೂಲಕ ತಾನು ಟೂರಿಗೆ ಹೋಗುವೆ ಅನ್ನುವ ವಿಚಾರ ಮನದಟ್ಟು ಮಾಡಿದ.
ಹೊರಡುವ ಮುನ್ನಾದಿನ ರಾತ್ರಿ ನಿದ್ರೆಯೇ ಇಲ್ಲ. ಅಮ್ಮ " ನಾಲ್ಕು ಗಂಟೆ ಆತಾ" ಎಂದು ಹನ್ನೆರಡೂವರೆಯಿಂದಲೇ ಶುರು ಹಚ್ಚಿ ಕೊನೆಗೂ ಮೂರೂವರೆಗೆ ಎದ್ದು ಸ್ನಾನ ಸಂದ್ಯಾವಂದನೆ ಪೂರೈಸಿ ತಾನೆ ಬಟ್ಟೆ ಹುಡುಕಿ ಹಾಕಿಕೊಂಡ ( ದಿನನಿತ್ಯ ಇವಕ್ಕೆಲ್ಲಾ ತಾಯಿ ಮಗನ ಮಧ್ಯೆ ಒಂದು ದೊಡ್ಡ ಯುದ್ಧವೇ ನಡೆಯುತ್ತಿತ್ತು) "ಸರ್ ಕ್ಯಾಮೆರಾ ತರಲು ಹೇಳಿದ್ದಾರೆ ಎಂದು ಅದನ್ನು ತೆಗೆದುಕೊಂಡು ಖರ್ಚಿಗೆ ಅಂತ ಇನ್ನೂರು ಇಸಕೊಂಡು ಟಾ ಟಾ ಹೇಳಿದ.
ಮತ್ತೆ ಯಥಾಪ್ರಕಾರ ಚಿತ್ರದುರ್ಗಕ್ಕೆ ಟೂರಿಗೆ ಹೋಗಿ ಬಂದ. ಅದು ಮಕ್ಕಳೆಂದರೆ ಹಾಗೆ ಮತ್ತು ಅಪ್ಪಯ್ಯನೆಂದರೆ ಹೀಗೆ ಹಾಗೂ ಯಾವತ್ತೂ ಯಾವಕಾಲಕ್ಕೂ ಹಾಗೆ ಹೀಗೆ. ನಾನೂ ಮೂವತ್ತು ವರ್ಷಗಳ ಹಿಂದೆ ಹೀಗೆ ಟೂರಿಗೆ ಬೇಡ ಅಂದಾಗ ಅಂದಿದ್ದೆಲ್ಲ ನೆನಪಾಯಿತು . ಕಾಲ ಚಕ್ರವೇ ಉರುಳು ಉರುಳುರುಳು. ಅದೆಷ್ಟು ಬೇಗ ನಾನು ಹೀಗೆಯೇ ಟೂರಿಗೆ ಹೋಗಿದ್ದ ನೆನಪು ಹಸಿರಿರುವಾಗಲೇ ನನ್ನ ಮಗನೂ ಹೀಗೊಂದು ಟೂರಿಗೆ ಹೋಗಿ ಬರುವ ಸಮಯ ಬಂತು. ಅಲ್ಲಿಗೆ ನನಗೆ.......?
ಹಾ ಮರೆತೆ ಅದೇ ಸೂರ್ಯ ಅದೇ ಭೂಮಿ ಅದೇ ನೀರು ಅದೇ ಗಾಳಿ ಅಂತ ಹೊರನೋಟಕ್ಕೆ ಅನಿಸಿದರೂ ಎಲ್ಲವೂ ಬೇರೆಯದೇ. ಹೋದ ವರ್ಷ ನಗು ನಗುತ್ತಾ ಇದ್ದವರು ಇಂದು ಅಳುತ್ತಿರಬಹುದು ಹೋದ ವರ್ಷ ಅಳುತ್ತಾ ಇದ್ದವರು ಇಂದು ನಗುತ್ತಾ ಇರಬಹುದು ನಗು ಅಳು ಎಲ್ಲಾ ಆರಂಭವೂ ಅಲ್ಲ ಅಂತ್ಯವೂ ಅಲ್ಲ. ಮತ್ತೆ ಮತ್ತೆ ಹುಟ್ಟುತ್ತವೆ ಸಾಯುತ್ತವೆ ಬದಲಾಗುತ್ತವೆ. ಈ ನಡುವೆ ಮತ್ತೊಂದು ವರ್ಷ ಬಂದಿದೆ. ನನಗೆ ನಿಮಗೆ ಹರ್ಷ ತರಲಿ, ಕಷ್ಟ ಎದುರಿಸುವ ಶಕ್ತಿ ಬರಲಿ.

ಬಾಯಿಗೆ ಬಂದಿತು ಹೃದಯಾ....!


ನೋಡಿ ಈ ಹುಡುಗನಿಗೆ ಹೆದರಿಕೆಯೂ ಇಲ್ಲ ಹೇಸಿಕೆಯೂ ಇಲ್ಲ. ಕುರಿಯೆಂಬ ಕುರಿಯ ಹೃದಯವನ್ನು ಬಾಯಿಗಿಟ್ಟುಕೊಂಡು ಪೀಪಿ ಊದುತ್ತಿದ್ದಾನೆ. ನಮ್ಮೂರ ಬಸ್ಟ್ಯಾಂಡ್ ಗೆ ನಡೆದು ಹೋಗುತ್ತಿದ್ದೆ. ಕೂಲಿಕಾರ್ಮಿಕರು ಕೆರೆಯ ಬಳಿ ಹೊಳೆ ಹಬ್ಬದ ಸಮಾರಂಭಕ್ಕೆ ಸೇರಿದ್ದರು. ಒಂದಿಷ್ಟು ಜನ ಕುರಿಯ ಚರ್ಮ ಸುಲಿಯುತ್ತಿದ್ದರು ಮತ್ತೊಂದಿಷ್ಟುಜನ ಕುರಿಮಾಂಸ ಪಾಲು ಹಾಕುತ್ತಿದ್ದರು. ದೊಡ್ಡವರು ಅತ್ತ ಪಾಲು ಹಾಕುತ್ತಿದ್ದಾಗ ಈತ ಹೃದಯವನ್ನೇ ಎತ್ತಿಕೊಂಡು ಬಂದು ರಸ್ತೆಬದಿಯಲ್ಲಿ ಆಟವಾಡುತ್ತಿದ್ದ. ಹೃದಯ ಬಾಯಿಗೆ ಬಂದ ಹಾಗೆ ಆಯಿತು ಎಂದು ನಾವೆಲ್ಲ ಆವಾಗ ಈವಾಗ ಆಡಿಕೊಳ್ಳುತ್ತೇವಲ್ಲ ಅದು ಹೀಗೆಯೇ ಇರಬೇಕು...!?. ಹುಡುಗ ಹೃದಯಕ್ಕೆ ರಕ್ತ ಪೂರೈಸುವ ನಾಳವನ್ನು ಊದುವ ಪರಿ ನೋಡಿದರೆ ಮತ್ತೆ ಸಂಚಲನ ಉಂಟುಮಾಡಿ ಕುರಿಯನ್ನು ಬದುಕಿಸುತ್ತಾನೇನೋ ಎಂಬಂತಿದೆ. ನನಗೆ ಪೋಟೋ ತೆಗೆಯಲು ಒಮ್ಮೆ ಮುಜುಗರವಾದರೂ ನಂತರ ನಿಮ್ಮಗಳ ನೆನಪಾಗಿ ಗಟ್ಟಿ ಮನಸ್ಸಿನಿಂದ ಚಕ ಚಕ ಪೋಟೋ ತೆಗೆದೆ. ನಿಮಗೆ ಇಂತಹ ದೃಶ್ಯ ಸಿಕ್ಕುವುದು ಅಸಾದ್ಯ. ಈ ಮನುಷ್ಯನೆಂಬ ಮನುಷ್ಯನಿಗೆ ಹೀಗೆ ನೂರಾರು ಜೀವಿಗಳು ಚೆಲ್ಲಾಟದ ವಸ್ತು ಅವುಕ್ಕೋ ಪ್ರಾಣ ಹೋದರೂ ಪ್ರಾಣಸಂಕಟ. ಏನೇ ಇರಲಿ ಅವರವರ ಭಾವಕ್ಕೆ ಅವರವರ ಭಕುತಿಗೆ....ಅಲ್ವಾ..? ನೂರು ಪುಟದಲ್ಲಿ ಹೇಳಲಾಗದ್ದು ಒಂದು ಪಟ(ಚಿತ್ರ)ದಲ್ಲಿ ಹೇಳಬಹುದಂತೆ. ಇದಕ್ಕೆ ಇಷ್ಟು ಹೆಚ್ಚಾಯಿತು. ಇನ್ನು ಮುಂದಿನದು ನಿಮಗೆ ಬಿಟ್ಟದ್ದು....
ವಿಸೂ: ಪಟದಲ್ಲಿ ಇರುವುದು ಹೃದಯ ಅಲ್ಲ ಶ್ವಾಸಕೋಶ ಅಂತ ನಮ್ಮ ವಿಕಾಸ್ ತಿದ್ದಿದ್ದಾರೆ. ಇದ್ದರೂ ಇರಬೈದು ನಂಗೆ ಇನ್ನೂ ದೇಹದ ಹೊರಗಿನದ್ಡೇ ಸಂಪೂರ್ಣ ಗೊತ್ತಿಲ್ಲ ಒಳಗಿನದ್ದು ಆಮೆಲಾಯಿತು. ಬಾಯಿಗೆ ಬಂದಿತು ಶ್ವಾಸಕೋಶ ಎಂದು ಓದಿಕೊಳ್ಳಿ

Sunday, December 28, 2008

ಎರಡು ಬ್ಲಾಗ್ ಗಳು

"ನನಗೇಂತ ಹಣ್ಣು ಕೊಳ್ಳಲು ಅಪ್ಪಯ್ಯ(ಮಾವ) ಹಣ್ಣಿನಂಗಡಿಗೆ ಹೋಗಿದ್ದರಿರಬೇಕು. ಬಸ್ಸು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಬಂದೇ ಬಿಟ್ಟರು. ಕಿಟಕಿಯಲ್ಲಿ ಹಣ್ಣು ಕೊಟ್ಟರು. ತಗೊಂಡೆ. ಇನ್ನೊಂದು ಬಾರಿ ಅವರನ್ನಪ್ಪಿ ಅಳಬೇಕೆನ್ನಿಸಿದರೂ ಬಸ್ಸು ಹೊರಟೇ ಬಿಟ್ಟಿತು. ಟಾ...ಟಾ..." ಹೀಗೆ ಶಾಂತಲಾ ಭಂಡಿಯವರ ನಕ್ಕುಬಿಡಿ ಒಮ್ಮೆ ಬರಹ ನೆನಪು ಕನಸುಗಳ ನಡುವೆ ಎಂಬ ಬ್ಲಾಗ್ ಮುಖಾಂತರ ತಲುಪುತ್ತದೆ http://shantalabhandi.blogspot.com/). ಊರಿಂದ ವಾಪಾಸು ಹೊರಟಾಗ, ಕೊಟ್ಟ ಮನೆಯಲ್ಲಿ ನಡೆಯುವ ಸಣ್ಣ ಘಟನೆಯನ್ನು ನಮ್ಮ ಕಣ್ಣಮುಂದೆ ಬಿಚ್ಚಿಡುವಲ್ಲಿ ಶಾಂತಲಭಂಡಿ ಯಶಸ್ಸು ಸಾಧಿಸುತ್ತಾರೆ. ಬರಹದ ಆರಂಭದಲ್ಲಿ ನಮಗೆ ಶಾಂತಲಾ ಭಂಡಿ ಯಾಗಿದ್ದವರು ಬರಹದ ಮುಕ್ತಾಯದಲ್ಲಿ ನಮಗೆ ಗೊತ್ತಿಲ್ಲದಂತೆ ತನ್ನದೇ ಕಥೆ ಹೇಳುತ್ತಾ ನಮ್ಮ ನಿಮ್ಮ ಅಕ್ಕತಂಗಿಯರಂತೆ ಅನಿಸಿ ಶಾಂತಲಕ್ಕ ಆಗಿಬಿಡುತ್ತಾರೆ. ಅವರೆಲ್ಲೋ ನಾವೆಲ್ಲೋ ಎನ್ನುವ ಸಂಬಂಧ ಬ್ಲಾಗ್ ಮೂಲಕ ನಮಗೆ ಅವರಿಗೆ ಗೊತ್ತಿಲ್ಲದಂತೆ ಒಂದು ಸುಮಧುರ ಬಾಂಧವ್ಯ ಹುಟ್ಟಿಕೊಂಡಿರುತ್ತದೆ. ಇದಕ್ಕೆ ಬರಹಗಳು ಎನ್ನುವುದು. ಓದಿನ ಆರಂಭದಲ್ಲಿ ಅಪರಿಚಿತರು ಓದಿದನಂತರ ಅಪರಿಚಿತರಾದರೂ ಅದು ಹೇಗೋ ಪರಿಚಿತರು. ಹೀಗೆ ಎಲ್ಲಿಯದೋ ಕಥೆಯನ್ನು ಯಾರಿಗೋ ತಲುಪಿಸುವ ಬ್ಲಾಗ್ ಗೆ ಜೈ ಅನ್ನೋಣ.
ಇದು ತೀರ್ಪು ಅಂದ್ಕೊಬೇಡಿ, ಚಪ್ಪಾಳೆ ಅನ್ನಿ, ಹಸ್ತಲಾಘವ ಅನ್ನಿ, 'ಗೋ-ಪರಾಕ್' ಅನ್ನಿ ಅಥವಾ 'ಭೇಷ್' ಎಂಬ ಹೆಸರಿನಲ್ಲಿ ಬೆನ್ನಿಗೊಂದು ಮೆದುಬಾರು ಅಂದುಕೊಳ್ಳಿ. ಉತ್ತಮ, ನಂಬಲಸಾಧ್ಯ ಕೆಲಸ ಮಾಡುತ್ತಿದ್ದೀರಿ. ನಿಮ್ಮೊಳಗೊಬ್ಬ ಇಷ್ಟೊಂದು ಚಟುವಟಿಕೆಯ, ಚಲನಶೀಲ, ರಂಜನೀಯ, ಜೀವಪರ, ರೈತಪರ, ಸಹೃದಯೀ ಶ್ರಮಿಕ ಉದಯಶಂಕರ್ ಇದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ನಾನು ಪ್ರಜಾವಾಣಿಯಲ್ಲಿದ್ದಾಗ ದಿನಾ ಮೆಲ್ಲಗೆ ಬಂದು 'ಇಂದಿನ ಈದಿನ' ವನ್ನು ತೋರಿಸಿ ಹೋಗುತ್ತಿದ್ದ ದೊಗಲೆ ಅಂಗಿಯೊಳಗಿನ ಉದಯಶಂಕರ್ ಬೇರೆಯೇ ಇರಬಹುದೆ?
ನಿಮ್ಮ ಬ್ಲಾಗ್ ನಿತ್ಯ ನೂತನವಾಗಿದೆ, ಸುಂದರವಾಗಿದೆ, ಸಮೃದ್ಧವಾಗಿದೆ. ಹೀಗೆಯೇ ಸುದೀರ್ಘ ಸುಮಂಗಲಿಯಾಗಿರಲಿ ಎಂದು ಹಾರೈಸುತ್ತೇನೆ.
ಅಂತ
ನಾಗೇಶ್ ಹೆಗಡೆಯವರು ಬ್ಲಾಗ್ ಗೆ ಹಾರೈಸಿದ್ದಾರೆ ಎಂದಮೇಲೆ ಆ ಬ್ಲಾಗ್ ಬಗ್ಗೆ ನಾವು ಹೇಳುವುದು ಇನ್ನೇನು ಉಳಿದಿದೆ..!?. ಅದು ನೆತ್ರಕೆರೆ ಉದಯಶಂಕರ್ ರವರ ಬರಪ್ಪೂರ ಮಾಹಿತಿಯ (http://paryaya.blogspot.com/) ಬ್ಲಾಗ್. ಅಲ್ಲಿ ಏನುಂಟು ಏನಿಲ್ಲ?, ಇಂದಿನ ಇತಿಹಾಸ ಎಂಬ ಬರವಣಿಗೆಯ ಮೂಲಕ ನಮಗೆ ಪ್ರಪಂಚ ತೋರಿಸುತ್ತಾರೆ ನೆತ್ರಕೆರೆ. ಪ್ರಿಂಟ್ ಮೀಡಿಯಾದಲ್ಲಿ ಉದ್ಯೋಗಿಯಾಗಿರುವ ನೆತ್ರಕೆರೆ ತಾವು ಕೆಲಸ ಮಾಡುವ ಪ್ರಜಾವಾಣಿಯಷ್ಟೇ ತಮ್ಮ ಬ್ಲಾಗನ್ನೂ ಒಪ್ಪ ಓರಣವಾಗಿದ್ದಾರೆ. ಬ್ಲಾಗ್ ನ ಬದಿಯಲ್ಲಿ ಮಾಹಿತಿ ಮಾಹಿತಿ ಮಾಹಿತಿ ಕ್ರಿಕೆಟ್ ನಿಂದ ಶೇರ್ ಸೂಚ್ಯಂಕದ ವರೆಗೂ ಹರಿದು ಹೊಳೆಯಾಗಿದೆ.
ಹೀಗೆ ತಮ್ಮದೇ ವಿಷಯವನ್ನು ತಮ್ಮದೇ ಘಟನೆಯನ್ನು ಬೇರೆಯದೇ ವಿಷಯವನ್ನು ಬೇರೆಯದೇ ಮಾಹಿತಿಯನ್ನು ಶ್ರದ್ದೆಯಿಂದ ಯಾವ ಪ್ರತಿಪಲಾಪೇಕ್ಷೆ ಇಲ್ಲದೆ ಅಪ್ಲೋಡ್ ಮಾಡುವ ಬ್ಲಾಗಿಗಳಿಗೆ ಒಂದು ತ್ಯಾಂಕ್ಸ್ ಸಲಾಮ್. ಮತ್ತೆ ಮುಂದಿನವಾರದವ್ ಬೇಟೆಗೆ ಯಾರು ಸಿಗುತ್ತಾರೋ ನೋಡೋಣ. ಅಲ್ಲಿಯವರೆಗೆ ಟೆಕ್ ಕೇರ್. -ಕೆ.ಆರ್.ಶರ್ಮಾ.ತಲವಾಟ