"ಬಾಲ್ಯ" ವಾವ್ ಅದೆರಡು ಅಕ್ಷರದಲ್ಲಿಯೇ ಮಜ ಇದೆ. ಬಡತನವಿರಲಿ, ಸಿರಿತನವಿರಲಿ ಇರಲಿ ಇಲ್ಲದಿರಲಿ ಬಾಲ್ಯ ಬಾಲ್ಯವೇ. ಅಲ್ಲೊಂದಿಷ್ಟು ಸುಮಧುರ ನೆನಪುಗಳು ನಮ್ಮ ನೆನಪಿನ ಕೋಶದಲ್ಲಿ ದಾಖಲಿಸುತ್ತವೆ. ಅದನ್ನು ಬೇಕೆಂದಾಗ ನೆನಪಿಗೆ ತಂದುಕೊಂಡು ಮಜ ಅನುಭವಿಸಬಹುದು. ಹಿಡಿದ-ಹಿಡಿಯದ ಮೀನು, ಕೆಸರಾಟ, ಮರಳು ಗುಡ್ಡೆಯಲ್ಲಿ ಗುಬ್ಬಿ ಹುಳ ಅರಸಿದ್ದು, ಗುಮ್ಮ ಅಂತ ಹೆದರಿಕೊಂಡಿದ್ದು, ಪಾಪದ ಕೆಂಪು ಪೀಟಿಯ ಅಂಡಿಗೆ ದಾರ ಕಟ್ಟಿ ಹೆಲಿಕ್ಯಾಪ್ಟರ್ ಅಂತ ಆಟ ಆಡಿದ್ದು, ಅದೊಂದು ಜೀವಿ ಎಂಬ ಅರಿವಿಲ್ಲದೇ ಅದಕ್ಕೆ ಹಿಂಸೆ ನೀಡಿ ಮಜ ಅನುಭವಿಸಿದ್ದು, ಹಸಿರುಳ್ಳೆ ಹಾವಿನ ಬಾಲ ಹಿಡಿದು ಗರಗರ ತಿರುಗಿಸಿ ಹಾರಿ ಬಿಟ್ಟಿದ್ದು, ಬಸ್ಸಿಗೆ ಕಲ್ಲು ಹೊಡೆದದ್ದು, ಹೀಗೆ ಒಂದಾ ಎರಡಾ..? ಸಾಲು ಸಾಲು ನೆನಪುಗಳು ಮುಗುಳ್ನಗೆ ಮೂಡಲು ಸಹಕರಿಸುತ್ತವೆ. ಅದು ಸರಿ ಅದೇ ತರಹದ ಹುಡುಗಾಟಿಕೆಯನ್ನು ಈಗ ನಿಮ್ಮ ಮಕ್ಕಳು ಮಾಡಲು ಹೊರಟಿದ್ದಾರೆ, ಮತ್ತೇಕೆ ಅವನ್ನು ಗದರಿಸುತ್ತೀರಿ, ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!