Friday, April 10, 2009
ಅರ್ಥವಾದರೆ...! ನಕ್ಕುಬಿಡಿ
ಜಾಹಿರಾತುಗಳು ಪ್ರಪಂಚವನ್ನಾಳುತ್ತಿವೆ ಅನ್ನೋದು ಸತ್ಯ. ದಿನನಿತ್ಯ ಟಿವಿಯಲ್ಲಿ ಪತ್ರಿಕೆಗಳಲ್ಲಿ ಜಾಹಿರಾತುಗಳು ನಾನಾತರಹದಲ್ಲಿ ಪ್ರಕಟಗೊಳ್ಳುತ್ತವೆ. ಗ್ರಾಹಕರನ್ನು ಸೆಳೆಯಲು ಪೈಪೋಟಿ ಬೀಳುತ್ತವೆ.
ಅಂತಹ ಜಾಹಿರಾತು ಪಟ್ಟಿಯಲ್ಲಿ ಶೀಲ ಅಶ್ಲೀಲ ಎಂದೆಲ್ಲಾ ವಿಭಾಗ ಮಾಡಿ ಕಟ್ಟುನಿಟ್ಟು ಕಾನೂನು ಮಾಡಿದೆ. ಹಾಗೆಲ್ಲ ಸಿಕ್ಕಾಪಟ್ಟೆ ಅಶ್ಡ್ಲೀಲ ಜಾಹಿರಾತುಗಳನ್ನು ಪ್ರಕಟಿಸುವಂತಿಲ್ಲ ಅನ್ನುತ್ತದೆ ಕಾನೂನು.
ಆದರೆ ರಂಗೋಲಿ ಕೆಳಗೆ ತೂರುವ ಬುದ್ದಿವಂತಿಕೆ ಇರುವ ಜನ ಇರುವವರೆಗೂ ಕಾನೂನು ಯಾವ ಲೆಕ್ಕ..?
ಇಂಗ್ಲೇಂಡಿನ ಮ್ಯಾನಿಕ್ಸ್ ಜೆಲ್ ಕ್ರೀಮ್ ಮಾರುವ ಕಂಪನಿಯೊಂದು ಜಾಹಿರಾತು ಪ್ರಕಟಿಸಿದೆ. ಸುಂದರ ಪರಿಸರ ವೀಕ್ಷಿಸುತ್ತಾ ಕುಳಿತ ಹುಡುಗಿ ಬದಿಯಲ್ಲಿ ಕ್ರೀಂ ನ ಟ್ಯೂಬ್. ಸರಿ ಇದರಲ್ಲೇನಿದೆ ಅಂತಹ ಅಪಾರ್ಥ ಎಂದಿರಾ?. ಇದೆ ಪರಾಂಬರಿಸಿ ಸ್ವಲ್ಪ ತಲೆ ಓಡಿಸಿ. ಅರ್ಥವಾದರೆ ನಕ್ಕುಬಿಡಿ.
ಕ್ಲ್ಯೂ: ಹುಡುಗಿಯ ಆಚೆ ಈಚೆ ಎರಡೆರಡು ಸಮಾನಾಂತರದಲ್ಲಿ ಕಂಬ ಇದೆ.....! ಲೋಷನ್ ನ ಜಾಹಿರಾತು ಅದು....!
ಅಬ್ಬಾ ಬುದ್ದಿವಂತ ಜಾಹಿರಾತುದಾರರೇ...!
Thursday, April 9, 2009
ಹಾರುವ ನೋಟುಗಳು
ಸ್ವಪ್ನದಲ್ಲಿನ ಸುಧಾರಣೆ ಶ್ಯಾಮರಾಯರಿಗೆ ಕೊಂಚ ನಿರಾಳತನೆಯನ್ನು ತಂದಿತ್ತಾದರು ಸಂಪೂರ್ಣ ಸಮಾಧಾನ ಸಿಕ್ಕಿರಲಿಲ್ಲ. ಅಯ್ಯೋ ಇವುಗಳಿಗೆಲ್ಲಾ ಜ್ಯೋತಿಷ್ಯ ಮಾಟ ಮಂತ್ರ ದಿಂದ ಮುಕ್ತಿ ಸಾಧ್ಯವಿಲ್ಲ. ಪಾರಮಾರ್ಥಿಕ ಸಾಧನೆ ಮಾಡಿದ ಧರ್ಮಗುರುಗಳು ಲೌಕಿಕ ತಂತ್ರಗಳ ಮೂಲಕ ಪರಿಹಾರ ಕೊಡಬಲ್ಲರು ಎಂಬ ಸಹೋದ್ಯೋಗಿಯೊಬ್ಬರ ಮಾತು ಶ್ಯಾಮರಾಯರಿಗೆ ಹಿಡಿಸಿತು. ಹಾರುವ ನೋಟಿನ ಸ್ವಪ್ನ ನಿಂತರೆ ಸಾಕೆಂದು ಧರ್ಮಗುರುಗ ಭೇಟಿಗೆ ಸಮಯ ನಿಗದಿಪಡಿಸಿದರು. ಈ ಜಗತ್ತೇ ಒಂದು ಸ್ವಪ್ನ, ಅದು ದು:ಸ್ವಪ್ನವಾಗಿ ಕಾಡಬಾರದು ಎಂದರೆ ಭಗವಂತನ ಸಾನ್ನಿದ್ಯ, ಅವನ ಸ್ನೇಹ ಸಂಪಾದಿಸಬೇಕು. ಇನ್ನು ನಿಮ್ಮ ಸ್ವಪ್ನದ ಯೋಚನೆ ಶ್ರೀಮಠಕ್ಕೆ ಬಿಡಿ. ನಿಮಗೆ ನಾವು ಶ್ರೀ ಮಠದ ಭಕ್ತವೃಂದದ ವತಿಯಿಂದ ಧರ್ಮಭೀರು ಸದ್ಗ್ರಹಸ್ಥ ಪ್ರಶಸ್ತಿಯನ್ನು ನಾಡಿದ್ದು ಉತ್ಸವದ ದಿವಸ ಲಕ್ಷಾಂತರ ಜನರೆದುರು ಪ್ರಧಾನಮಾಡುತ್ತೇವೆ. ಅದು ನಿಮಗೆ ಜನಮನ್ನಣೆ ನೀಡುತ್ತದೆ ಆ ನಂತರ ಎಲ್ಲಾ ಸರಿಯಾಗುತ್ತದೆ. ಹ್ಞಾ ಹಾಗೇಯೇ ಇನ್ನೊಂದು ವಿಚಾರ, ಶ್ರೀ ಮಠದ ಮಹಾದ್ವಾರ ನೋಡಿದ್ದೀರಲ್ಲ..? ಅದು ಶಿಥಿಲಗೊಂಡಿದೆ. ಅದರ ವಿಚಾರ ಮಠದ ಮುಕ್ತೇಸರರ ಬಳಿ ಮಾತನಾಡಿ ಎಂದು ಶ್ರೀಗಳು ಶ್ಯಾಮರಾಯರಿಗೆ ಫಲಮಂತ್ರಾಕ್ಷತೆ ನೀಡಿದರು. ಶ್ಯಾಮರಾಯರಿಗೆ ಅದೇನೋ ಅನಿರ್ವಚನೀಯ ಆನಂದದ ಅನುಭವ ಆಯಿತು. ಮುಕ್ತೇಸರರು ಹತ್ತಾರು ಲಕ್ಷ ರೂಪಾಯಿಗಳ ಮಹಾದ್ವಾರದ ಯೋಜನೆಯನ್ನು ರಾಯರ ಮುಂದಿಟ್ಟರು. ರಾಯರಿಗೆ ಮಠದಿಂದ ಪ್ರಧಾನವಾಗುವ ಧರ್ಮಭೀರು ಸದ್ಗ್ರಹಸ್ಥ ಪ್ರಶಸ್ತಿ ಹಾಗೂ ಮಾಯವಾಗುವ ದುಸ್ವಪ್ನದೆದುರು ಸಾವಿರದ ನೋಟಿನ ಕಂತೆಗಳು ಪೇಲವ ಅಂತ ಅನಿಸಿತು. ********** ಪ್ರಶಸ್ತಿ ಸ್ವೀಕರಿಸಿ ಊರು ಸೇರಿದ ಶ್ಯಾಮರಾಯರು ತಿಂಗಳಾಂತ್ಯದ ಎಲ್ಲಾ ವ್ಯವಹಾರ ಚುಕ್ತಾ ಮಾಡಲು ಬ್ಯಾಂಕ್ ಪಾಸ್ ಪುಸ್ತಕ ತೆಗೆದರು. ಅದು ಜೀರೋ ಬ್ಯಾಲೆನ್ಸ್ ತೋರುತ್ತಿತ್ತು. ಆಗ ಅವರಿಗೆ ನಿರುಮ್ಮಳ ಭಾವದ ಅನುಭವವಾಯಿತು. ಆನಂತರದ ಶನಿವಾರಗಳಲ್ಲಿ ಶ್ಯಾಮರಾಯರಿಗೆ ಸ್ವಪ್ನ ಕಾಣುತ್ತಿರಲಿಲ್ಲವೋ ಅಥವಾ ಕಂಡದ್ದು ನೆನಪಿರುತ್ತಿರಲಿಲ್ಲವೋ ಎಂದು ತಿಳಿಯದಂತಹ ಆಳವಾದ ನಿದ್ರೆ ಬರತೊಡಗಿತು. ಆದರೆ ಅಂದಿನಿಂದ ರಾಯರ ಧರ್ಮಪತ್ನಿಗೆ ತೆರೆದ ಬಾಗಿಲ ಬಳಿಯಲಿ ಒಂಟಿಯಾಗಿ ತಾನು ನಿಂತಂತೆ ಹಾಗೂ ಸಾವಿರ ಐನೂರರ ನೂರಾರು ನೋಟುಗಳು ಆಚೆ ಈಚೆ ಮನೆಯ ಬಾಗಿಲೊಳಗೆ ಮಾತ್ರಾ ತೂರಿ ಹೋದಂತೆ ಮತ್ತು ಎಷ್ಟು ಕೈಬೀಸಿದರೂ ತಮ್ಮ ಮನೆಯೊಳಗೆ ಅವು ಬಾರದಂತೆ ಮಸುಕು ಮಸುಕು ಸ್ವಪ್ನ ಬೀಳತೊಡಗಿತು.
***************
Monday, April 6, 2009
ಗಮ್ಯ
-
ನಡೆಯುತ್ತಿರುವವರ ಎದುರು ಬಿಳಿ ಪರದೆ ಅಡ್ಡಹಿಡಿದಂತೆ ಇಬ್ಬನಿ ಬೀಳುತ್ತಿತ್ತು. ಮರಗಿಡ ಹೂವುಹುಲ್ಲುಗಳ ಸುತ್ತ ಜೇನು ದುಂಬಿಗಳ ಝೇಂಕಾರ ಹೊರಡದಷ್ಟು ಹನಿಗಟ್ಟಿತ್ತು. ಪತರಗುಟ್ಟುತ್ತಿದ್ದ ಛಳಿಯಿಂದಾಗಿ ಮಿಡತೆ ಹಾತೆಗಳು ಬೆಳಗಿನ ಹಾರಾಟ ಮಾಡಲಾರದೆ ಮರ ಗಿಡಗಳಿಗೆ ಅಂಟಿಕೊಂಡಿದ್ದವು. ಗಿಡುಗನಿಂದ ಗುಬ್ಬಿಯತನಕ ಎಲ್ಲಾ ಪಕ್ಷಿಗಳು ರಕ್ಕೆ ಬಡಿದು ಕಾವೇರಿಸಿಕೊಳ್ಳುತ್ತಿದ್ದವು. ಇಂತಹ ವಾತಾವರಣವಿದ್ದರೂ ಕೋಳೂರಿನ ಕದಂಬೇಶ್ವರ ದೇವಸ್ಥಾನದ ಅರ್ಚಕ ಅಪ್ಪಣ್ಣ ಭಟ್ರಿಗೆ ಮಾತ್ರಾ ಇಬ್ಬನಿ ಮತ್ತು ಚಳಿ ಲೆಕ್ಕಕ್ಕೆ ಇರಲಿಲ್ಲ. ಬೆಳಗಿನ ಜಾವ ಐದು ಗಂಟೆಗೆ ಎದ್ದು ಸರ್ಪದ ಪೊರೆಯಂತೆ ಬಿರುಕು ಬಿಟ್ಟಿರುವ ಮೈಗೆ ತಣ್ಣೀರು ಸುರುವಿಕೊಂಡು ಕೆಂಪನೆಯ ನಾರು ಮಡಿಯನ್ನುಟ್ಟು, ಬೆಳಗಿನ ಆಹ್ನಿಕ ಆರಂಬಿಸಿ ಭಸ್ಮ ಹಚ್ಚಿ ಬೆಳಕುಮೂಡುವತನಕ ಜಪಮಾಡಿ ನಂತರ ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಕೆ..ಶರಣ್ಯೆ ತೃಂಬಕೇ ದೇವಿ ನಾರಾಯಣೀ...ನಮೋಸ್ತುತೆ ಎಂದು ಒಂದರ ಹಿಂದೆ ಒಂದು ನಿರರ್ಗಳವಾಗಿ ಮಂತ್ರ ಪಠಿಸುತ್ತಾ ಊರುಬಾಗಿಲನಲ್ಲಿರುವ ದೇವಸ್ಥಾನಕ್ಕೆ ತಾಮ್ರದ ಕೊಡದ ತುಂಬಾ ನೀರು ತುಂಬಿಕೊಂಡು ಹೊರಟಿದ್ದರು. ಮಳೆಯಿರಲಿ ಚಳಿಯಿರಲಿ ಈ ಬೆಳಗಿನ ಜಾವದ ಮಂತ್ರಪಠಣಯುಕ್ತ ನಡಿಗೆ ಅಪ್ಪಣ್ಣ ಭಟ್ಟರ ನಲವತ್ತು ವರ್ಷದಿಂದ ನಡೆದುಬಂದಿರುವ ನಿತ್ಯದ ಕಾಯಕ. ಆ ಸಮಯದಲ್ಲಿ ಮನೆಯಿಂದ ಹೊರಟು ದೇವಸ್ಥಾನದತ್ತ ಮುಖ ಮಾಡಿರುವ ಅಪ್ಪಣ್ಣಭಟ್ಟರು ಆಕಾಶ ಕಳಚಿ ತಲೆಮೇಲೆ ಬಿದ್ದರೂ ತಿರುಗಿನೋಡುತ್ತಿರಲಿಲ್ಲ. ಭಟ್ಟರ ಲಯಬದ್ದ ನಡಿಗೆ ಹಾಗೂ ಅದಕ್ಕೆ ತಾಳವೆಂಬಂತೆ ಭುಜದಮೇಲಿನ ತಾಮ್ರದ ಕೊಡದ ನೀರಿನ ಕೊಳ್... ಕೊಳ್ ಸದ್ದು ಹಾಗೂ ಅವುಗಳಿಗೆ ಸ್ವರವಾಗಿ ಭಟ್ಟರ ಮೇಲುದನಿಯ ಮಂತ್ರ ಮತ್ತು ಅದಕ್ಕೆ ಬೆಳಗಿನ ಜಾವದ ಗೋಪಿಹಕ್ಕಿಯ ಸಿಳ್ಳೆಯ ಶೃತಿ ಇವಿಷ್ಟೂ ಸುಶ್ರಾವ್ಯ. ದೇವಸ್ಥಾನದ ಮೆಟ್ಟಲೇರುವ ಸಮಯಕ್ಕೆ ಸರಿಯಾಗಿ ಮೂಡಣದಲ್ಲಿ ಸೂರ್ಯ ಸಂಪೂರ್ಣ ಮೂಡಿ ಭಟ್ಟರ ಕೆಂಪು ಮಡಿಗೆ ಇನ್ನಷ್ಟು ರಂಗು ತರಿಸುತ್ತಿದ್ದ. ಇದು ನೋಡುಗರ ಕಣ್ಣಿನ ವರ್ಣನೆಯಾದರೆ ಅಪ್ಪಣ್ಣ ಭಟ್ಟರ ಗುರಿ ಇದ್ಯಾವುದರ ಬಗ್ಗೆ ಇರದೆ ಗಮ್ಯ ತಲುಪುವ ಯೋಚನೆಯಲ್ಲಿರುತ್ತಿತ್ತು. ಹುಟ್ಟು ತಿಳಿಯದು ಸಾವು ತಿಳಿಯದು ನಡುವಿನ ಜೀವನದಲ್ಲಿ ಸಾಕ್ಷಾತ್ಕಾರ ಹೇಗೆ? ಎಂಬಂತಹ ನೂರಾರುಪ್ರಶ್ನೆಗಳು ಕಾಡುತ್ತಿದ್ದವು. ಪರಮಾತ್ಮನನ್ನು ತಲುಪುವ ಗಮ್ಯದ ಉತ್ತರ ಇಂದು ಸಿಕ್ಕೀತು ನಾಳೆ ಸಿಕ್ಕೀತು ಎಂದು ಪ್ರಯತ್ನದ ಚಿಂತನೆ ನಡೆಸುತ್ತಲೇ ಬಂದಿದ್ದರು. ಇಪ್ಪತ್ತರ ಹರೆಯದ ನಂತರ ನಲವತ್ತು ವರ್ಷದಿಂದ ದೇಹ ಸವೆಸುತ್ತಾ ಬಂದಿರುವ ಭಟ್ಟರು ಏಕಾಂಗಿ ಜೀವಿ. ಸಂಸಾರ ಮಾಡಿಕೊಳ್ಳುವ ಆಸೆ ಹರೆಯದಲ್ಲಿ ಇತ್ತಾದರೂ ತಿರ ಕೊಡಲು ಹಣ ಇರಲಿಲ್ಲ. ತಿರ ಇಲ್ಲದೆ ಹೆಣ್ಣು ಸಿಗುವ ಹೊತ್ತಿಗೆ ದೇಹ ಐವತ್ತರ ಮುಪ್ಪಿಗೆ ಈಡಾಗಿತ್ತು. ಹಾಗಾಗಿ ಮದುವೆ ಮಕ್ಕಳ ಚಿಂತೆ ತೊರೆದ ಭಟ್ಟರು ಹುಟ್ಟು ಸಾವು, ಕರ್ಮ ಕಾಯಕ, ದೇವರು ದಿಂಡಿರು, ಗುರಿ ಗಮ್ಯ, ಮುಂತಾದ ವಿಷಯಗಳ ಬಗ್ಗೆ ಆಸಕ್ತಿವಹಿಸಿ ಪೂಜಾಕೈಂಕರ್ಯದಲ್ಲಿ ನಿರತರಾಗಿದ್ದರು. ಅಪ್ಪಣ್ಣ ಭಟ್ಟರ ಈ ನಡಿಗೆ ಹೊರಗಿನವರಿಗೆ ಸುಖಾನುಭೂತಿಯನ್ನು ಒದಗಿಸುತ್ತಿದ್ದಾರೂ ಇಂದು ಅವರು ಅದೇಕೊ ಒಳಗಿನಿಂದ ವಿಹ್ವಲರಾಗಿದ್ದರು. ಅರವತ್ತರ ದೇಹಕ್ಕೆ ಸಾಕ್ಷಾತ್ಕಾರದ ಹಂಬಲ ತೀವ್ರವಾಗುತ್ತಿತ್ತು. ಪ್ರತಿ ಹೆಜ್ಜೆ ಮುಂದಿಡುತ್ತಿದ್ದಾಗಲೂ ಒಳಮನಸ್ಸು ಹಿಂದೆ ಹಿಂದೆ ಓಡುತ್ತಿತ್ತು. ಗಾಂಜಾಳದ ಮಾಚಭಟ್ಟರ ಏಳನೇ ಪುತ್ರರಾದ ಅಪ್ಪಣ್ಣ ಹುಟ್ಟಿನಿಂದಲೆ ಸಂಸಾರಿಗಳ ಇಹಭೋಗದ ಲಾಲಸೆಯಿಂದ ಇರುವ ಸಾಮಾಜಿಕರ ಲೆಕ್ಕಾಚಾರದ ಪ್ರಕಾರ ನತದೃಷ್ಟ ಜೀವಿ. ಬಡತನ ಬರುವ ಕಾಲಕ್ಕೆ ಅಪ್ಪಣ್ಣ ಹುಟ್ಟಿದನೋ ಅವನು ಹುಟ್ಟಿದ್ದಕ್ಕಾಗಿ ಬಡತನ ಬಂತೋ ಎಂಬ ಜಿಜ್ಞಾಸೆಗೆ ಉತ್ತರ ಸಿಗಲಿಲ್ಲವಾದರೂ ಮನೆಯಲ್ಲಿನ ಯಾವ ಕಷ್ಟ ಬಂದರೂ ಅದರ ಹೊಣೆ ಅಪ್ಪಣ್ಣನ ಮೇಲಾಗುತ್ತಿತ್ತು. ಆತ ಹುಟ್ಟಿದ ಸ್ವಲ್ಪದಿವಸದಲ್ಲಿ ಊಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂತು. ಸರ್ಕಾರದ ಈ ಕಾಯ್ದೆಯಿಂದಾಗಿ ಮಾಚಭಟ್ಟರು ಗೇಣಿಗೆ ನೀಡಿದ್ದ ಏಳಕೆರೆ ಜಮೀನು ಕೈಬಿಟ್ಟಿತು. ಇನ್ನುಳಿದ ಎರಡು ಎಕರೆಯಲ್ಲಿ ಒಂಬತ್ತು ಜನರ ಸಂಸಾರ ಸಾಗಬೇಕಿತ್ತು. ಮಾಚಭಟ್ಟರು ಜೀವಂತವಿದ್ದಿದ್ದರೆ ಅದು ಸಾಗುತ್ತಿತ್ತೇನೋ ಆದರೆ ಜವರಾಯ ಅವರನ್ನು ಎಳೆದೊಯ್ದ. ಕೆಲವರು ಜಮೀನು ಕಳೆದುಕೊಂಡ ಆಘಾತ ಎಂದರು, ಅಲ್ಲ ಅದು ಸಹಜ ವಯೋಮಾನದ ಹೃದಯಾಘಾತ ಎಂದರು ಹಲವರು, ಅಪ್ಪಣ್ಣ ಮೂಲಾನಕ್ಷತ್ರದಲ್ಲಿ ಹುಟ್ಟಿದ್ದಾನೆ ಹಾಗಾಗಿ ಅಪ್ಪನನ್ನೇ ಬಲಿತೆಗೆದುಕೊಂಡಿದ್ದಾನೆ ಎಂದರು ಇನ್ನೂ ಕೆಲವರು. ಒಟ್ಟಾರೆ ಮನೆಗೆ ಕಷ್ಟಕೋಟಲೆಗಳ ಸರಣಿ ಆರಂಭವಾಗಿದ್ದರ ಫಲಿತಾಂಶ ಎಲ್ಲರ ಬಾಯಿಂದ ಅಪ್ಪಣ್ಣ ನೆಂಬ ಬಾಲಕ ಏಳರಾಟದ ಶನಿ ಎಂದು ಕರೆಯಿಸಿಕೊಳ್ಳುವಂತಾಯಿತು. ಅಪ್ಪ ಹಾಗೂ ಅಪ್ಪನ ಜಮೀನು ಕಳೆದುಕೊಂಡ ಅಪ್ಪಣ್ಣ ಅಬ್ಬೆಯ ಆಶ್ರಯದಲ್ಲಿ ಬಾಲ್ಯ ಕಳೆದ. ಕೌಮಾರ್ಯಕ್ಕೆ ಕಾಲಿಡುವ ಹೊತ್ತಿಗೆ ಅಬ್ಬೆಯೂ ಇಹ ತ್ಯಜಿಸಿದಳು. ತಿಳಿದೋ ತಿಳಿಯದೆಯೋ ಬಾಲ್ಯ ಕಳೆದು ಹರೆಯಕ್ಕೆ ಬಂದ ಅಪ್ಪಣ್ಣ ಆರ್ಥಿಕ ಬಡತನವೊಂದು ಬಿಟ್ಟರೆ ಮಿಕ್ಕೆಲ್ಲಾ ರೀತಿಯಿಂದಲೂ ಪುಷ್ಠಿಯಾದ ವ್ಯಕ್ತಿ. ತಿರ ಕೊಟ್ಟು ಮದುವೆಯಾಗಲಾರದ ಅಪ್ಪಣ್ಣನಿಗೆ ಮನಸ್ಸು ಶಂಕರಾಚಾರ್ಯರು ,ಸ್ವಾಮಿ ವಿವೇಕಾನಂದ ಮುಂತಾದ ಮಹಾನ ವ್ಯಕ್ತಿಗಳಂತೆ ಜಗದ್ವಿಖ್ಯಾತಿಯಾಗುವತ್ತ ಹೊರಳಿತು. ಹೆಣ್ಣು ಸಿಗದ ಅನಿವಾರ್ಯದ ಸ್ಥಿತಿಯಿಂದ ಸಾಧಕರಾಗಲು ಹೊರಟ ಅಪ್ಪಣ್ಣನಿಗೆ ಅದಕ್ಕೆ ತಕ್ಕಂತ ನಡಾವಳಿಕೆಗಳನ್ನು ರೂಢಿಸಿಕೊಳ್ಳುವುದು ತುಸು ಕಷ್ಟಕರವಾಗಿತ್ತು. ಆದರೂ ಹಣ ಹೆಣ್ಣು, ಹೊನ್ನು, ಮಣ್ಣು, ಮುಂತಾದ ಪರದ ಚಿಂತೆಗೆ ಅಡ್ಡಬರುವ ಇಹದ ಸುಖಕ್ಕೆ ಪ್ರೇರೇಪಿಸುವ ಆಸೆಗಳನ್ನು ಗೆದ್ದ ಅಪ್ಪಣ್ಣ ನಿಧಾನವಾಗಿ ಅಪ್ಪಣ್ಣ ಭಟ್ಟನಾದ. ಆನಂತರ ಬ್ರಹ್ಮಚಾರಿ ಅಪ್ಪಣ್ಣ ಭಟ್ಟ ಹುಟ್ಟೂರಾದ ಗಾಂಜಾಳ ತೊರೆದು ಕೋಳೂರು ಸೇರಿದ. ಅಲ್ಲಿ ಅವನಿಗೆ ಕದಂಬ ದೇವಸ್ಥಾನದ ಪೂಜೆಯ ಕಾಯಕ ಜತೆಯಾಯಿತು. ಪ್ರತಿ ನಿತ್ಯ ಲಿಂಗ ತೊಳೆದು ಅಭಿಷೇಕ ಮಾಡಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶ್ರೀದೇವರ ಅನುಗ್ರಹ ಕೊಡಿಸುವುದು ನಿತ್ಯಕರ್ಮವಾಯಿತು. ಭಟ್ಟನೆಂಬ ಏಕವಚನದಿಂದ ಭಟ್ಟರು ಎಂಬ ಬಹುವಚನಕ್ಕೆ ಏರಲು ಹೆಚ್ಚುದಿನ ತಗುಲಲಿಲ್ಲ.ನಂತರದ ದಿನಗಳಲ್ಲಿ ಅಪ್ಪಣ್ಣ ಭಟ್ಟರು ವೈಯಕ್ತಿಕ ಸಾಧನೆಗಾಗಿ ಜಪತಪ ಮುಂದುವರೆಸಿದರು. ನಿತ್ಯ ದೇವರ ಸಾನ್ನಿಧ್ಯದಲ್ಲೇ ಇದ್ದರೂ ಅವರಿಗೆ ಒಮ್ಮೊಯೂ ಗಮ್ಯ ತಲುಪುವ ಮಾರ್ಗ ತೆರವಾಗಿರಲಿಲ್ಲ ಎಂಬ ಅಸಹನೆ ಕಾಡುತ್ತಿತ್ತು. ಆ ಅಸಹನೆ ಅದೇಕೋ ಇಂದು ಆಂತರ್ಯದಲ್ಲಿ ಸ್ವಲ್ಪ ಅತಿಯಾಗಿ ಕಾಡುತ್ತಿತ್ತು. ಜ್ಞಾನೋದಯಕ್ಕೆ ಸೂಕ್ತ ಸಾಧನೆಗಳು ತಮ್ಮಿಂದ ಇದ್ದರೂ ಒಂದೇ ಒಂದು ದಿವಸವೂ ವಿಶೇಷ ಅನುಭೂತಿ ಆಗಿರಲೇ ಇಲ್ಲ. ಉಪವಾಸವಿದ್ದು ನೋಡಿದರು ವನವಾಸದ ಯತ್ನವೂ ನಡೆಯಿತು ಕಣ್ಮುಚ್ಚಿ ಕುಳಿತರು ನೀರೇ ಆಹಾರ, ನಿರಾಹಾರ, ಅಧ್ಯಯನ ಅಧ್ಯಾಪನ ಹೀಗೆ ಅವರ ಮಟ್ಟಕ್ಕೆ ತೋಚಿದಂತಹ ಎಲ್ಲಾ ಮಾರ್ಗಗಳನ್ನು ಅನುಸರಿಸಿದರೂ ಜ್ಞಾನದ ಕಿಂಡಿ ಕಾಣಿಸಲಿಲ್ಲ. ಹಾಗಾದಾಗಲೆಲ್ಲಾ ಹಿಂದಿನ ಸಾಧಕರ ಸಾಧನೆಯ ಬಗ್ಗೆ ಅನುಮಾನ ಮೊಳಕೆಯೊಡೆಯುತ್ತಿತ್ತು. ಪರಮ ಹಂಸರಿಗೆ ಸರಸ್ವತಿ ಕಂಡಿದ್ದು ಅವರ ಭ್ರಮೆಯೋ,ಅಥವಾ ಸತ್ಯವೋ? ಕಣ್ಣಿಗೆ ಕಾಣುವ ಪ್ರಪಂಚದಲ್ಲಿ ಪ್ರಕೃತಿಯ ಸೃಷ್ಟಿಯ ಹೊರತಾಗಿ ಏನೂ ಕಾಣಿಸುವುದಿಲ್ಲ. ಕಣ್ಮುಚ್ಚಿದರೆ ಗಾಢಾಂಧಕಾರದ ನಡುವೆ ಕಲ್ಪನೆಯ ಸೃಷ್ಟಿ. ಅದು ತನ್ನದೇ ಸೃಷ್ಟಿಯೋ ಅಥವಾ ದೈವಾನುಭೂತಿಯೋ ಎಂಬಷ್ಟರ ಮಟ್ಟಿಗೆ ಯೋಚನೆ ಹರಿಯುತ್ತಿತ್ತು. ಅಂತಹ ಯೋಚನೆಗಳಲ್ಲಿ ಮುಳುಗಿದ್ದ ಅರಿಷಡ್ ವರ್ಗಗಳನ್ನು ಗೆದ್ದೆ ಎಂಬ ಭಾವನೆ ಮೊಳೆಯುತ್ತಿದ್ದಂತೆ ಇವೆಲ್ಲಾ ಅರ್ಥವಿಲ್ಲದ ಸಾಧನೆಗಳು ಎಂಬ ಬೇಸರ ಆವರಿಸಿಕೊಳ್ಳುತ್ತಿತ್ತು. ಮತ್ತೆ ಕೆಲದಿವಸಗಳಲ್ಲಿ ಗಮ್ಯ ತಲುಪುವ ಆಸೆ ತನ್ನಷ್ಟಕ್ಕೆ ಮೊಳಕೆಯೊಡೆದು ಜೀವತಳೆಯುತ್ತಿತ್ತು. ಭಾಹ್ಯವಾಗಿ ಮಂತ್ರಪಠಿಸುತ್ತಿದ್ದ ಅಪ್ಪಣ್ಣ ಭಟ್ಟರು ಒಳಗಿನ ಯೋಚನೆಗಳ ಸರಮಾಲೆಯೊಡನೆ ದೇವಸ್ಥಾನದ ಒಂದೊಂದೇ ಮೆಟ್ಟಿಲೇರತೊಡಗಿದರು. ಕಲ್ಲಿನ ಇಪ್ಪತ್ತೆಂಟು ಮೆಟ್ಟಿಲನ್ನೇರಿ ಕೊಡಪಾನವನ್ನು ದೇವಸ್ಥಾನದ ಪಡಸಾಲೆಯ ಮೇಲಿಟ್ಟು ಹತ್ತಡಿ ಎತ್ತರದ ಪ್ರಧಾನ ಬಾಗಿಲು ತಳ್ಳಿದರು. ಕುಂಯ್ಯೋ... ಡರ್ರ್.. ಎಂದು ಸದ್ದು ಮಾಡುತ್ತಾ ಬಾಗಿಲು ತೆರೆದುಕೊಂಡಿತು. ಕೊಡಪಾನ ಹೆಗಲಮೇಲೇರಿಸಿ ಗರ್ಭಗುಡಿಯತ್ತ ಹೆಜ್ಜೆ ಹಾಕಿದ ಭಟ್ಟರಿಗೆ ದೇವಸ್ಥಾನದ ಪಡಸಾಲೆಯಲ್ಲಿ ಯಾರೋ ಮಲಗಿದಂತೆ ಕಂಡಿತು. ಸುಲಲಿತ ಮಂತ್ರಕ್ಕೆ ಅಲ್ಪವಿರಾಮ ಹಾಕಿ ಒಮ್ಮೆ ಯಾರದು..? ಎಂದರು. ಅತ್ತ ಕಡೆಯಿಂದ ಮಾತಿಲ್ಲ ಕತೆಯಿಲ್ಲ. ಬಹುಶಃ ಆಳವಾದ ನಿದ್ರೆಗೆ ಜಾರಿದ್ದಿರಬೇಕು ಆ ವ್ಯಕ್ತಿ. ತುಂಬಿದ ಕೊಡಪಾನ ಬದಿಯಲ್ಲಿಟ್ಟು ನಿಧಾನ ಪಡಸಾಲೆಯನ್ನೇರಿ ಯಾರು ॒ಯಾರದೂ?॒ ಎಂದು ಗಡಸು ಕಂಠದಿಂದ ಕೂಗಿದರು ಅಪ್ಪಣ್ಣ ಭಟ್ಟರು. ಆ ಕಡೆಯ ವ್ಯಕ್ತಿ ಮಿಸುಕಾಡಲಿಲ್ಲ. ಒಳ ಆವರಣದಲ್ಲಿ ಸ್ವಲ್ಪ ಕತ್ತಲೆಯಿದ್ದುದರಿಂದ ಅದು ಗಂಡಸೋ ಹೆಂಗಸೋ ಎಂದೂ ಭಟ್ಟರಿಗೆ ಕಾಣಿಸಲಿಲ್ಲ. ಹತ್ತು ವರ್ಷದ ಹಿಂದಿನ ಘಟನೆ ಭಟ್ಟರಿಗೆ ನೆನಪಾಗಿ ನಖಶಿಕಾಂತ ಬೆವರಿದರು. ಅಂದೂ ಕೂಡ ಇದೇ ತರಹ ವ್ಯಕ್ತಿಯೊಬ್ಬ ದೆವಸ್ಥಾನದ ಹಜಾರದಲ್ಲಿ ಮಕಾಡೆ ಮಲಗಿದ್ದ. ಭಟ್ಟರು ಆತ ಯಾರೆಂದು ನೋಡಲು ಮುಖ ಹೊರಳಿಸಿದಾಗ ಬೆಚ್ಚಿ ಮಾರು ದೂರ ಹಾರಿದ್ದರು. ಅದ್ಯಾರೊ ಆತನ ಮುಖವನ್ನು ಕಲ್ಲಿನಿಂದ ಜಜ್ಜಿ ಬಿಟ್ಟಿದ್ದರು. ನಂತರ ಪೋಲೀಸ್ ಕೇಸ್ ರಗಳೆ ರಾಮಾಯಣಗಳನ್ನೆಲ್ಲಾ ಭಟ್ಟರು ಎದುರಿಸಬೇಕಾಯಿತು. ಅಷ್ಟರನಂತರ ಕಮಿಟಿಯವರಿಗೆ ದೇವಸ್ಥಾನದ ಪ್ರಧಾನ ಬಾಗಿಲಿಗೆ ಬೀಗ ಹಾಕುವಂತೆ ಭಟ್ಟರು ಮನವಿಮಾಡಿಕೊಂಡಿದ್ದರು. ಆದರೆ ಊರವರು ಶತಮಾನಗಳಿಂದ ಬೀಗಹಾಕದಿರುವ ದೇವಸ್ಥಾನಕ್ಕೆ ಈಗ ಬೀಗಹಾಕಲಾಗದು ಎಂದು ತಕರಾರು ಎತ್ತಿದ್ದರಿಂದ ಹಾಗೆಯೇ ಉಳಿದಿತ್ತು. ಈಗ ಮತ್ತೆ ಅದೇ ತರಹ ಯಾರಾದರೂ ಕೊಲೆಮಾಡಿ ತಂದು ಹಾಕಿರ ಬಹುದಾ ಎಂಬ ಆಲೋಚನೆ ಬಂದು ತಮಗೇಕೆ ಉಸಾಬರಿ ಅಧ್ಯಕ್ಷರಿಗೆ ಹೇಳಿದರಾಯಿತೆಂದು ವಾಪಾಸು ಊರಿಗೆ ಹೊರಡಲು ತಿರುಗಿದಾಗ ಮಲಗಿದ ವ್ಯಕ್ತಿಯಿಂದ ಮುಲುಗಾಟ ಕೇಳಿಸಿತು. ಧ್ವನಿ ಬಂದಿದ್ದರಿಂದ ವ್ಯಕ್ತಿ ಬದುಕಿದ್ದಾನೆಂಬ ಧೈರ್ಯ ಭಟ್ಟರಿಗೆ ಬಂತು. ನಿಧಾನ ಯಾರೆಂದು ತಿಳಿಯಲು ಹತ್ತಿರ ಹೋದರು. ಅರೆಗತ್ತಲೆಗೆ ಭಟ್ಟರ ಕಣ್ಣು ಹೊಂದಿಕೊಳ್ಳಲು ಕೆಲಕ್ಷಣ ಹಿಡಿಯಿತು. ಮರುಕ್ಷಣ ಮಬ್ಬುಗತ್ತಲಿನಲ್ಲಿ ಮಲಗಿದ್ದು ಹೆಣ್ಣು ಎಂದು ಭಟ್ಟರಿಗೆ ಅರಿವಾಯಿತು. ಅಸ್ತವ್ಯಸ್ತ ಬಟ್ಟೆ, ಅಂಗಾತ ಮಲಗಿದ ನಡು ವಯಸ್ಸಿನ ಹೆಣ್ನನ್ನು ಅರೆಬೆಳಕಿನಲ್ಲಿ ಕಂಡ ಅಪ್ಪಣ್ಣ ಭಟ್ಟರಿಗೆ ಒಮ್ಮೆ ಏನು ಮಾಡಬೇಕೆಂದು ತೋಚಲಿಲ್ಲ. ಆ ಅರೆಬೆಳಕಿನಲ್ಲಿ ಆಕೆಯ ಸೌಂದರ್ಯವನ್ನು ವರ್ಣಿಸಲು ಕವಿಮನಸ್ಸಿನವರೇ ಬೇಕೆಂದು ಭಟ್ಟರಿಗೆ ಅನ್ನಿಸಿತು. ಗೊಣಗುತ್ತಿದ್ದ ಮಂತ್ರ ನಿಲ್ಲಿಸಿ ಯಾರಮ್ಮ ನೀನು ಯಾರಮ್ಮ ನೀನು ಎಂದು ಮೂರ್ನಾಲ್ಕು ಬಾರಿ ಕೇಳಿದರೂ ಆಕೆ ಉತ್ತರಿಸಲಿಲ್ಲ. ಮಂದಹಾಸದ ಆಕೆ ಮುಖ ಆನಂದದ ಯಾವುದೋ ಕನಸನ್ನು ಕಾಣುತ್ತಿರುವಂತೆ ಅನ್ನಿಸುತ್ತಿತ್ತು. ಅರವತ್ತು ವರ್ಷದ ಅಪ್ಪಣ್ಣ ಭಟ್ಟರಿಗೆ ಕರುಳಿನಿಂದ ಅದೇನೋ ಪುರುಷ ಸಂದೇಶ ಬರುವಂತಾಗತೊಡಗಿತು. ತಮ್ಮ ನಿಯಂತ್ರಣ ತಪ್ಪುತ್ತಿರುವ ಭಾಸವಾಗತೊಡಗಿತು. ಆದರೂ ಅವನ್ನೆಲ್ಲಾ ಮೀರಿ ಅಲ್ಲಿಂದ ಹೊರಡಲನುವಾದರು. ಮತ್ತೆ ಹೊರಡುವುದಕ್ಕೆ ಮೊದಲು ಆಕೆಯನ್ನು ಎಬ್ಬಿಸಿ ಹೊರಡು ಎಂದು ಯಾರೋ ಮನದಾಳದಿಂದ ಕೂಗಿದಂತಾಯಿತು. ಮತ್ತೆ ಮೇಲುದನಿಯಲ್ಲಿ ಆಕೆಯನ್ನು ಭಟ್ಟರು ಕೂಗಿದರು. ತಮ್ಮದೇ ದನಿಯನ್ನು ತಮ್ಮದೇ ಕಿವಿಯಲ್ಲಿ ಕೇಳಿದ ಭಟ್ಟರಿಗೆ ಆಶ್ಚರ್ಯವಾಯಿತು. ಇಂತಹ ಮಾಧುರ್ಯ ತುಂಬಿದ ಅವರ ದನಿಯನ್ನು ಅವರು ಕೇಳಿರಲೇ ಇಲ್ಲ. ಇದು ತನ್ನದೇ ಧ್ವನಿಯಾ? ಎಂದೆನಿಸಿ ಮತ್ತೆ ಮತ್ತೆ ಕೂಗಿದರು. ಆಕೆ ಮಿಸುಕಾಡಲಿಲ್ಲ. ಈಗ ನಿಧಾನ ಆಕೆಯ ಹತ್ತಿರ ಹೋದ ಭಟ್ಟರು ಆಕೆಯ ಮೈಮುಟ್ಟಿ ಅಲುಗಿಸಲು ಮುಂದಾದರು. ಅಂಗಾತ ಮಲಗಿದ ಹೆಂಗಸಿನ ಭುಜವನ್ನು ವನ್ನು ಹಿಡಿಯಲು ಬಾಗಿದಾಗ ಪ್ರಕೃತಿಯ ಬಿಸಿಯುಸಿರು ಭಟ್ಟರ ದೇಹದ ತುಂಬೆಲ್ಲಾ ಮಿಂಚು ಹರಿಸಿತು. ಅವರ ಜೀವಿತಾವಧಿಯಲ್ಲಿ ಅನುಭವಿಸದ ಈ ಅನುಭೂತಿಗೆ ಭಟ್ಟರಲ್ಲಿನ ಪುರುಷ ನಿಯಂತ್ರಣ ತಪ್ಪಿದ. ಅರವತ್ತು ವರ್ಷದ ದೇಹ ಒಮ್ಮೆಲೆ ಕಂಪನಕ್ಕೀಡಾಯಿತು. ಮಂತ್ರ ತತ್ವ ಸಿದ್ದಾಂತಗಳು ಮನಸ್ಸಿನಾಳದಲ್ಲಿ ಮಾಯವಾದವು. ಪ್ರಪಂಚವೆಲ್ಲಾ ಮರೆತುಹೋಯಿತು. ಆತ್ಮ ಪರಮಾತ್ಮಗಳ ಮೂಲಕ ಗಮ್ಯ ತಲುಪುವ ಮಾರ್ಗ ಇದುವೆ ಎನ್ನುವ ಸಂದೇಶ ಆಂತರ್ಯ ದಿಂದ ಬಂದಂತೆ ಅನಿಸಿತು. ಅಪ್ಸರೆಯಂತೆ ಕಾಣಿಸಿದ ಮಂದಸ್ಮಿತೆ ಮೈಮೇಲೆ ಅಪ್ಪಣ್ಣ ಭಟ್ಟರು ಎರಗಿದರು. ಈ ಅನಿರೀಕ್ಷಿತದಿಂದ ನಿದ್ರೆಗೆ ಭಂಗವಾದ ಹೆಣ್ಣು ಜೀವ ದಿಡೀರನೆ ಆದ ಧಾಳಿಗೆ ಒಮ್ಮೆ ಬೆಚ್ಚಿ ಕೊಸರಾಡಿತು. ಆದರೆ ಅಪ್ಪಣ್ಣ ಭಟ್ಟರ ಆಜಾನುಬಾಹು ದೇಹದ ಧಾಳಿಗೆ ಹೆಣ್ಣು ಜೀವ ಪ್ರತಿರೋಧ ನೀಡಲಾಗದೆ ಪ್ರಕೃತಿಯ ಕರೆಯನ್ನು ತಿರಸ್ಕರಿಸಲಾಗದೆ ಸ್ಪಂದಿಸತೊಡಗಿತು. ಅಪ್ಪಣ್ಣ ಭಟ್ಟರು ನಲವತ್ತು ವರ್ಷದಿಂದ ಲಕ್ಷಾಂತರ ಜಪ ಮಾಡಿ, ನೂರಾರು ವೃತ ಮಾಡಿ, ಹತ್ತಾರು ಶಾಸ್ತ್ರ ಓದಿದರೂ ಸಿಗಲಾರದ ಗಮ್ಯ ಅನುಭೂತಿಯನ್ನು ದೇವಸ್ಥಾನದ ಪಡಸಾಲೆಯಲ್ಲಿ ಮುಂಜಾನೆಯಲ್ಲಿ ಮಂತ್ರಗಳ ಗೋಜಿಲ್ಲದೆ ತಂತ್ರಗಳ ಹಂಗಿಲ್ಲದೆ ಕೆಲವೇ ಕೆಲವು ನಿಮಿಷಗಳಲ್ಲಿ ಅನುಭವಿಸಿದರು. ಕೆಲವು ಕ್ಷಣ ಪರಮಾತ್ಮನಲ್ಲಿ ತಾನೂ ಒಂದಾಗಿ ಹೋದನೇನೋ ಎನ್ನುವಷ್ಟರ ಮಟ್ಟಿಗಿನ ಸ್ಥಿತಿಯನ್ನು ಅಪ್ಪಣ್ಣ ಭಟ್ಟರು ತಲುಪಿದರು. ಆ ಮಧುರಗಳಿಗೆಯಲ್ಲಿ ಜೀವಾಂಕುರವಾಯಿತು. ಅಷ್ಟರಲ್ಲಿ ದೇವಸ್ಥಾನದ ಹಂಚಿನಮಾಡಿನಲ್ಲಿ ಮನೆಮಾಡಿದ್ದ ಪಾರಿವಾಳಗಳು ಮುಲುಗಾಟದ ಸದ್ದಿಗೆ ಬೆದರಿದಂತೆ ಪಟಪಟನೆ ಸದ್ದು ಮಾಡುತ್ತಾ ಹಾರಿದವು. ಆ ಸದ್ದಿಗೋ ಅಥವಾ ಪ್ರಕೃತಿಯ ಜವಾಬ್ದಾರಿ ಮುಗಿದದ್ದಕ್ಕೋ ಅಥವಾ ಇಹಕ್ಕೆ ಬಂದ ಅವಸ್ಥೆಗೂ ಅಪ್ಪಣ್ಣ ಭಟ್ಟರು ಎದ್ದುನಿಂತರು. ಭಟ್ಟರ ದೇಹದಿಂದ ಬಿಡುಗಡೆ ಸಿಗುತ್ತಿದ್ದಂತೆ ಆಕೆಯೂ ಎದ್ದು ನಿಂತಳು ಒಮ್ಮೆ ಭಟ್ಟರನ್ನು ಅಪಾದಮಸ್ತಕ ನೋಡಿ ವಿಚಿತ್ರ ಶೈಲಿಯಲ್ಲಿ ನಕ್ಕು ಹ ಹ ಹ ಎಂದು ಕೂಗುತ್ತಾ ಈ ಕ್ಷಣದವರೆಗೂ ಯಾವುದೇ ಘಟನೆಯೂ ನಡೆಯಲೇ ಇಲ್ಲವೆಂಬಂತೆ ಮೆಟ್ಟಿಲಿಳಿದು ಊರಿನತ್ತ ಓಡಿದಳು. ಆಕೆ ಅತ್ತ ಓಡುತ್ತಿದ್ದಂತೆ ಸಂಪುರ್ಣ ಇಹಕ್ಕೆ ಬಂದ ಅಪ್ಪಣ್ಣ ಭಟ್ಟರು ಆಕೆಯ ವರ್ತನೆಯಿಂದ ಆಘಾತಕ್ಕೀಡಾದರು. ಕೆಲಕ್ಷಣಗಳ ಹಿಂದೆ ಅಪ್ಸರೆಯಂತೆ ಕಂಡಿದ್ದು ಈಕೆಯಾ? ಎನ್ನುವ ದುಗುಡದ ನೂರಾರು ಯೋಚನೆಗಳು ಭುಗಿಲೇಳತೊಡಗಿದವು. ಅಯ್ಯಾ ಭಗವಂತ ನೀನು ನನ್ನ ಈ ದೇಹದಿಂದ ಎಂತಹಾ ಕೆಲಸ ಮಾಡಿಸಿಬಿಟ್ಟೆಯಲ್ಲಾ ನನ್ನನ್ನು ನಿನ್ನತ್ತ ಸೆಳೆದುಕೊಳ್ಳಲು ಬೇರೆ ದಾರಿ ನಿನಗೆ ತೋಚಲಿಲ್ಲವೇ ದೇವಾ ಎನ್ನುತ್ತಾ ಮತ್ತೊಮ್ಮೆ ಪರಮಾತ್ಮನ ಅನುಭೂತಿಯತ್ತ ಆ ಕ್ಷಣವನ್ನು ನೆನಪಿಸಿಕೊಂಡರು. ಈಗ ಆ ಅನುಭೂತಿ ಒಂಥರಾ ವಿಚಿತ್ರ ಹೇಸಿಗೆಯನ್ನು ತರಿಸಿತು. ಪ್ರಪಾತಕ್ಕಿಳಿದ ಮನಸ್ಥಿತಿಯನ್ನು ಮೇಲೆತ್ತಲು ಹಿಂದೆ ಮಾಡಿದ ಲಕ್ಷಾಂತರ ಗಾಯಿತ್ರಿ ಜಪದ ಶಕ್ತಿಯನ್ನು ಆವಾಹಿಸಲು ಯತ್ನಿಸಿದರು, ಆದರೆ ಆ ಪ್ರಯತ್ನ ಫಲಿಸಲಿಲ್ಲ. ಗಮ್ಯ ತಲುಪಲು ದೊರೆತ ಕ್ಷಣವನ್ನು ನಿರಂತರ ಉಳಿಸಿಕೊಳ್ಳಲಾಗದ್ದಕ್ಕೆ ಹಪಹಪಿಸುತ್ತಾ ಧರೆಗುರುಳಿದರು. ಕೆಳಗುರುಳಿದ ರಭಸಕ್ಕೆ ಅಪ್ಪಣ್ಣ ಭಟ್ಟರ ತಲೆ ತುಂಬಿದ ಕೊಡಕ್ಕೆ ತಾಕಿ ಅದು ದೇವಸ್ಥಾನದ ಮೆಟ್ಟಿಲಿನಿಂದ ಕೆಳಗೆ ಗಣ ಗಣ ಸದ್ದುಮಾಡುತ್ತಾ ಉರುಳಿ ತಳ ಸೇರಿತು.
*********
ಅಪ್ಪಣ್ಣ ಭಟ್ಟರು ಧರೆಗುರುಳಿದ ಹದಿನೈದು ವರ್ಷಗಳ ಕಾಲ ಕದಂಬೇಶ್ವರ ದೇವಸ್ಥಾನದಲ್ಲಿ ಸಮರ್ಥವಾಗಿ ಸುಶ್ರಾವ್ಯ ಮಂತ್ರಸಹಿತ ಪೂಜೆ ಮಾಡುವ ಅರ್ಚಕರು ಬರಲಿಲ್ಲ. ತದನಂತರ ಒಂದು ದಿನ ಚಳಿಯ ಮುಂಜಾನೆ ಹದಿಹರೆಯದ ಬ್ರಹ್ಮಚಾರಿಯೊಬ್ಬ ಊರಿನಲ್ಲಿ ಪ್ರತ್ಯಕ್ಷನಾಗಿ ಚುಮುಚುಮು ಬೆಳಕಿನಲ್ಲಿ ಕೊರೆಯುವ ಚಳಿ ಲೆಕ್ಕಿಸದೆ ತುಂಬಿದ ಕೊಡ ಹೊತ್ತು ದೇವಸ್ಥಾನಕ್ಕೆ ಹೋಗಿ ಪೂಜೆ ಆರಂಭಿಸಿದ. ಆತ ಪರಿಪೂರ್ಣವಾಗಿ ಅಪ್ಪಣ್ಣ ಭಟ್ಟರನ್ನೇ ಹೋಲುತ್ತಿದ್ದ ಹಾಗೂ ಅದೇ ತರಹ ಸುಶ್ರಾವ್ಯ ಮಂತ್ರ ಹೇಳುತ್ತಿದ್ದ ಮತ್ತು ಆತನಿಗೂ ಗಮ್ಯ ತಲುಪುವ ಅದಮ್ಯ ಆಸೆ ಮನದಾಳದಲ್ಲಿ ಹೂತಿತ್ತು. ಗಮ್ಯ ತಲುಪುವ ಆತನ ಆಸೆ ಬಾಹ್ಯ ವರ್ತನೆಯನ್ನು ನೋಡಿದವರಿಗೆ ತಿಳಿಯುತ್ತಿರಲಿಲ್ಲ.