Saturday, July 9, 2011

ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.....



ಚಂದ್ರ ಮೂಡಿಬಂದ .... ಹೀಗೆ ಮುಂದುವರೆಯುತ್ತದೆ ಆ ಚಂದದ ಹಾಡು. ಹಾಗೆ ಸೂರ್ಯನ ಜತೆ ಜಾರಿಹೋಗುತ್ತಿರುವ ಅದೆಷ್ಟೋ ದಿವಸಗಳನ್ನು ನಾವು ನೀವು ನೋಡುತ್ತಾ ಇದ್ದೇವೆ. ಸೂರ್ಯನಿಗೂ ನಮ್ಮನ್ನು ನೋಡಿ ನಗು ಬಂದಿರಬೇಕು. "ಅಲ್ಲಾ ನಾನೂ ನಿತ್ಯ ನೊಡ್ತಾ ಇದೀನಿ, ಆವಾಗಿನಿಂದ ಆ ಐಡಿಯಾ, ಈ ಐಡಿಯಾ ಅಂತ ಕೊಚ್ತಾನೆ ಇದಾರೆ, ಈ ನನ್ ಮಕ್ಳು, ಏನೂ ಮಾಡಾಕಾಗಿಲ್ಲ, ಇನ್ನೇನು ಅಕಾ ಇಕಾ ಅಂದ್ರೆ ಬದುಕಿನಿಂದಲೇ ಜಾರಿಹೋಗೋ ದಿವಸ ಬಂತು... ಛೇ ಪಾಪ" ಅಂತ. ಅನ್ಲಿಬಿಡಿ ನಾವು ಅದ್ಕೆಲ್ಲಾ ತಲೆ ಕೆಡಿಸಿಕೊಂಡು ಸುಮ್ನೆ ಇರೋಕಾಗುತ್ತಾ? ಎಂಬ ಒಂದು ಸ್ವಗತದ ಪ್ರಶ್ನೆ ಹಾಕಿಕೊಂಡು ಮುನ್ನುಗ್ಗೋಣ.

ಈ ಮಳೆಗಾಲ ಅಂತಂದ್ರೆ ನನಗೆ ಅಕ್ಷರ ಕುಟ್ಟೋ ಉಮ್ಮೇದು. ಕಪ್ಪು ಬಿಳುಪು ಕೂದಲಿನ ಬುಡದಲ್ಲಿ ಬಿಸಿಬಿಸಿ ಆದಂತಾಗಿ "ಬರಿ ಬರಿ" ಅನ್ನೋಕೆ ಶುರುಮಾಡುತ್ತೆ. ಹಾಗೆ ಒಳಗಿನಿಂದ ಒತ್ತಡವೇನೋ ಬರುತ್ತೆ ಆದರೆ ಬರ್ಯೋದು ಏನನ್ನ?, ಸರಸರನೆ ಒಳಗಿನಿಂದ ಐಡಿಯಾ ಬಂದು ಅಕ್ಷರ ರೂಪ ತಾಳಿ ತಕತೈ ತಕತೈ ಅಂತ ಲಾಗ ಹಾಕಿ ನಾಟ್ಯ ಮಾಡಲು ನಂದೇನು ಬ್ರಹ್ಮಾಂಡದ ತಲೆಯಾ?, ಹಾಗಾಗಿ ನನ್ನ ಮಟ್ಟದಲ್ಲಿ ಒಂದಿಷ್ಟು ಏನನ್ನಾದರೂ ಕುಟ್ಟಬೇಕು, ಕತೆ ಕಟ್ಟಬೇಕು. ಕಾದಂಬರಿ ಗೀಚಬೇಕು. ಆ...ಅದೇನೋ "ಹ ಹ ಹ " ಎಂಬ ಸದ್ದು ಕೇಳಿತಪ್ಪ ನನಗೆ. ಓಹೋ ಅದು ನೀವು ನಕ್ಕ ಸದ್ದು ಬಿಡಿ ಗೊತ್ತಾಯ್ತು. ನಾನು ಕಾದಂಬರಿ ಗೀಚಬೇಕು ಅಂತ ಬರೆದದ್ದು ಓದಿ ನೀವು ಗಿಟಿಗಿಟಿ ಅಂದಿರಿ ಅಂದಾಯ್ತು. ಅದು ಹಾಗಲ್ಲ ಇರಲಿ ಪ್ರಾಸಕ್ಕೆ ಅಂತ ಹಾಗೆ ಬರೆದೆ.

ಮೊನ್ನೆ ಹರಿಶ್ಚಂದ್ರ ಭಟ್ರು ಬೆಂಗಳೂರಿನಿಂದ ಫೋನ್ ಮಾಡಿದ್ದರು. "ಶ್ರೀಗಳ ಹತ್ತಿರ ಯಾವುದೋ ವಿಷಯ ಕುರಿತು ಮಾತನಾಡುತ್ತಿದ್ದಾಗ ಸಂಸ್ಥಾನ ನನ್ನ ಬಳಿ"....."ಎಂಬ ಆ ಪುಸ್ತಕ ಓದಿದ್ದೀರಾ ಅಂತ ಕೇಳಿದರು. ನಾನು ಇಲ್ಲ ಎಂದೆ, ಅವರು ಓದಿ ಅಂದರು, ನಾನೂ ಇರಲಿ ಎಂದು ನೀವು ".........."ಎಂಬ ಈ ಪುಸ್ತಕ ಓದಿದ್ದೀರಾ ಎಂದೆ, ಅವರು ಇಲ್ಲ ಎಂದರು ನಾನು ಖಂಡಿತಾ ಓದಿ ಎಂದೆ. ತಂದುಕೊಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಹಾಗಾಗಿ ಶ್ರೀಗಳಿಗೆ ಪುಸ್ತಕ ತಲುಪಿಸುತ್ತೀರಾ? ಎಂದರು. ಹರಿಶ್ಚಂದ್ರ ಭಟ್ಟರ ಮಾತನ್ನು ಕೇಳಿ ವಿಜಯಶ್ರೀಯ ಮಾತಿನಂತೆ ನಾನು ಫ್ಯಾನ್ ರಕ್ಕೆಗಳಿಗೆ ಹತ್ತಿರವಾದೆ.(ಅರ್ಥಾತ್ ಉಬ್ಬಿ ಹೋದೆ....!). ಹಾಗಾಗಲು ಮುಖ್ಯ ಕಾರಣ ನಿಮಗೆ ಈಗ ಅರ್ಥವಾಗಿರಬೇಕು. ಅವರು ಹೇಳಿದ "ಈ ಪುಸ್ತಕ" ಎಂದರೆ ನನ್ನ "ಒಂದು ಜೇನಿನ ಹಿಂದೆ". ಕುಂತಲ್ಲಿ ಕೂರಲಾರೆ, ನಿಂತಲ್ಲಿ ನಿಲ್ಲಲಾರೆ ಎಂದೆಲ್ಲಾ ನನಗೆ ಆಯಿತು ಅಂತ ಅಂದುಕೊಂಡಿರಾ..? ತೀರಾ ಹಾಗಲ್ಲದಿದ್ದರೂ ಒಂಥರಾ ಖುಷ್ ಆಗಿದ್ದು ನಿಜ. ನಿಮ್ಮ ಬಳಿ ಸುಳ್ಳು ಹೇಳಿ ಯಾವ ಪಾಪಕ್ಕೆ ಹೋಗಲಿ. ಅಂತೂ ಗುರುಗಳಿಗೆ ಪುಸ್ತಕ ತಲುಪಿಸಿದೆ ಬಿಡಿ. ಇಷ್ಟೆಲ್ಲಾ ಪೀಠಿಕೆಯ ಕತೆಯಾಯಿತು ಇನ್ನು ನೇರವಾಗಿ ನಾನು ಹೇಳಬೇಕಾಗಿದ್ದ ವಿಷಯ ಹೇಳಿ ಮುಗಿಸುತ್ತೇನೆ.


ಕಳೆದ ದೀಪಾವಳಿಯಲ್ಲಿ "ಕಟ್ಟು ಕತೆಯ ಕಟ್ಟು" ಬಿಡುಗಡೆಯಾಗಿ ಕಟ್ಟುಗಟ್ಟಲೆ ಅಟ್ಟದಲ್ಲಿ ಕುಳಿತಿದೆ. ಬಹಳಷ್ಟು ಜನ ಕೇಳಿದ್ದಾರೆ ತಲುಪಿಸಲಾಗಲಿಲ್ಲ, ಬಹಳಷ್ಟು ಜನ ಕೇಳಲಿಲ್ಲ ತಲುಪಿಸಿದ್ದೇನೆ. ಹಾಗಾಗಿ ಏನೋ ಒಂದು ಆಗಿದೆ. ಒಂದು ಜೇನಿನ ಹಿಂದೆ ಮೂರು ವರ್ಷದಲ್ಲಿ ಪೂರ್ಣ ಖಾಲಿ. ಹಾಗಾಗಿ ಈಗ ಮೂರನೇ ಪುಸ್ತಕ "ಮನೆ ಕಟ್ಟಿ ನೋಡು..." ಬರೆದು ಬಿಸಾಕೋಣ ಅನ್ನುವ ತಲುಬು ಬಂದಿದೆ. ಅಯ್ಯಾ ಅದೆಂತಾ "ಮನೆ ಕಟ್ಟದೆಲ್ಲಾ ಪುಸ್ತಕ ಬರೀತೆ ಮಾರಾಯ ಮಳ್ಳು ಹಂಗೆ" ಅಂತ ವಿಶ್ವಾಸಿಕರೊಬ್ಬರು ಕೇಳಿದರು. ನೋಡಬೇಕು ಏನು ಬರೆಯಬೇಕು ಅಂತ ಅಂದೆ ಅಷ್ಟೆ. ಅಷ್ಟರಲ್ಲಿ ಮನಸ್ಸಿನ ಮೂಲೆಯಲ್ಲಿ "ಏಯ್ ಮಂಕೆ, ಮನೆ ಕಟ್ಟಿ ನೋಡು ಮುಂದಿನ ವರ್ಷಕ್ಕೆ ಇರಲಿ, ಈ ವರ್ಷ ಆವತ್ತು ಯೋಚಿಸಿದ್ದೆಯೆಲ್ಲಾ "ಆರ್. ಶರ್ಮಾಸ್ ಆರ್ಟಿಕಲ್ಸ್" ಅಂತ ಅಂದರೆ ಇಲ್ಲಿಯವರೆಗೆ ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲಾ ಲೇಖನಗಳನ್ನು ಕಲರ್ ಕಲರ್ ಫೋಟೋದಲ್ಲಿ ಮುದ್ರಿಸಿ, ಪುಸ್ತಕ ಮಾಡು" ಅಂತಲೂ ಅನ್ನುತ್ತಿದೆ. ಮತ್ತೊಂದು ಮನಸ್ಸು, "ಬ್ಲಾಗ್ ಬರಹಗಳು" ಅಂತ ಮುಖಪುಟದಲ್ಲಿ ಜಡಿದು ಬಿಡುಗಡೆ ಮಾಡು, ಹಾಗೆ ಮಾಡುವುದರಿಂದ ಪ್ರಕಟಿತ ಲೇಖನಗಳ ಜತೆಗೆ ಬ್ಲಾಗಿನ ಬರಹವೂ ಮುದ್ರಣ ಕಂಡು ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ ಫ್ರೇಮಸ್...! ಅಗಬಹುದು ಅಂತ ಅನ್ನುತ್ತಿದೆ.

"ಕಟ್ಟು ಕತೆಯ ಕಟ್ಟಿಗೆ ನವ್ಯಾ ಹಣ ಕೊಟ್ಟಿದ್ದಳು, ಈ ಬಾರಿ ನಾನು ಕೊಡುತ್ತೇನೆ ಅಂತ ನನ್ನ ಅಕೌಂಟ್ ನಂಬರ್ ತನ್ನ ಬ್ಯಾಲೆನ್ಸ್ ಪಳಪಳನೆ ಮಿಂಚಿಸುತ್ತಾ ಕಣ್ಣು ಕುಕ್ಕುತ್ತಿದೆ. ನನ್ನವಳು ನಾನೊಂದು ಕಿವಿಗೆ ಜೋತಾಡಿಸುವ ಸೆಟ್ ಮಾಡಿಸಬೇಕು ಅಂತಿದ್ದಾಳೆ. ಏನು ಮಾಡಬೇಕೋ ಸರಿಯಾಗಿ ತಿಳಿಯುತ್ತಿಲ್ಲ,

ಸೂರ್ಯ ಇದೆಲ್ಲದರ ನಡುವೆ ನಿತ್ಯ ಜಾರಿಹೋಗುತ್ತಿದ್ದಾನೆ. ಅವನಿಂದ ನಳನಳಿಸುತ್ತಿರುವ ಮರಗಿಡಗಳು "ರಾಗು ಬೇಕಾದರೆ ಬ್ಲಾಗ್ ಕುಟ್ಟು, ಪುಸ್ತಕ ಮಾತ್ರಾ ಮುದ್ರಿಸಬೇಡ, ಪೇಪರ್ ಫ್ಯಾಕ್ಟರಿಯವರು ನಮ್ಮ ಸಂತತಿಯನ್ನೇ ಉಳಿಸುತ್ತಿಲ್ಲಾ "ಅಂತ ರೋಧಿಸುವಂತೆ ಭಾಸವಾಗುತ್ತಿದೆ. ನೋಡೋಣ "ಚಂದ್ರ ಮೂಡಿ ಬಂದ" ನಂತರ.... ಸ್ಟಾರ್ ಹೇಗಿದೆ ಅಂತ.



ಪಾರಂ ನಂ ...............!

ಸಪ್ಟೆಂಬರ್ ೩೦-೨೦೦೯ ರ ಬ್ಲಾಗ್ ನಲ್ಲಿ "ಫಾರಂ ನಂ... ಅಂತ" ನನ್ನ ವಿವರ ದಾಖಲಿಸಿದ್ದೆ. ಅದನ್ನು ೨೦೧೦ ರಲ್ಲಿಯೂ ಪ್ರಕಟಿಸಬೇಕಿತ್ತು. ಆದರೆ ಮರೆತಿದ್ದೆ. ನಾವು ಮರೆತರೂ ಜನ..? ಇಲ್ಲಪ್ಪ. ವಿಕಾಸ ಮೊನ್ನೆ ಚಾಟಿಸಿ..! "ಅಲ್ಲಾ ನಿನ್ನ ಅಫಡವಿಟ್ಟಿನ ಬ್ಲಾಗ್ ನೋಡ್ಬೇಕಿತ್ತು, ಲಿಂಕ್ ಕಳುಹಿಸು ಅಂದ. ಅದೆಲ್ಲಿ ಹುಡುಕುವುದು ಈ ನನ್ನ ಸ್ಲೋ ನೆಟ್ ನಲ್ಲಿ. ಆದರೆ ಅಂವ ಬಿಡಬೇಕಲ್ಲ ಬೆನ್ನುಹತ್ತಿದ ಹುಡುಕಿದೆ . ಸಿಕ್ಕಿತು. ಅದನ್ನ ಇಲ್ಲಿ ಮತ್ತು ಈ ವರ್ಷದ್ದು ಡಿಟೈಲ್ ಸೇರಿ ಮಡಗುತ್ತಿದ್ದೇನೆ . ಪರಾಮರ್ಶಿಸಿ.

ಪಾರಂ ನಂ ...............! (ಹಳೇದು)
ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ ೫೭೭೪೨೧

ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ ೮೦೦(೯೬ ಮಾಡೆಲ್), ಸುಜುಕಿ ಬೈಕ್-(೦೮)-ಟಿವಿಎಸ್ ಸ್ಕೂಟಿ-
೧ ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
೪೫ ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
೨ ಲಕ್ಷ ಇನ್ಷುರೆನ್ಸ್ ಪಾಲಿಸಿ
೭೫ ಸಾವಿರ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ- ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ
-------------------------------------------

ಈವರ್ಷದ್ದು

ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ 577421 . ಫೋ:9342253240
ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ 8೦೦(96 ಮಾಡೆಲ್), ಸುಜುಕಿ ಬೈಕ್-(೦8)-ಮೈಕ್ರೋ ಮ್ಯಾಕ್ಸ್ ಮೊಬೈಲ್-೨೦ ಗ್ರಾಂ ಬಂಗಾರದ ಸರ
2 ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
25 ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
2 ಲಕ್ಷ ಇನ್ಷುರೆನ್ಸ್ ಪಾಲಿಸಿ
25 ಸಾವಿರ ಮೌಲ್ಯದ ಷೇರು(ಎಚ್.ಸಿ.ಸಿ+ರಿಲೆಯನ್ಸ್)
1 ಲಕ್ಷ ರೂಪಾಯಿ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ-ಕಟ್ಟು ಕತೆಯ ಕಟ್ಟು (ಕಥಾ ಸಂಕಲನ) ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ (ಕಡಿಮೆಯಾಗಿದೆ ಅರ್ಥಾತ್ ಬುದ್ದಿ ಬರುತ್ತಾ ಇದೆ)

ಈ ಮೇಲ್ಕಂಡದ್ದು ಈ ವರ್ಷದ ತನಕ ಸತ್ಯ ಎಂದು ಪ್ರಾಮಾಣಿಕರಿಸುತ್ತಾ ಡಿಕ್ಲರೇಷನ್ ಸಲ್ಲಿಸುತ್ತಿದ್ದೇನೆ . ಮುಂದಿನದು ಮುಂದಿನ ವರ್ಷ(ವಿಕಾಸ್ ನೆನಪಿಸಿದರೆ) .

ಬುದ್ದಿವಂತರು ಬಿಡಿ ನೀವು...!



ಅಂತಹ ದೃಶ್ಯಗಳಿರುತ್ತವಲ್ಲ ಅದು ನೋಡಲು ಚಂದ. ಯಜಮಾನ ಅದೇನೋ ಕೆಲಸದಲ್ಲಿ ತಲ್ಲೀನ, ಮನೆಯೊಡತಿಯದೂ ಅಷ್ಟೆ ಒಂಥರಾ ಧನ್ಯತಾ ಭಾವದ ಕೆಲಸ. ಮಗು ಸಂಸಾರ ಜಂಜಡದಲ್ಲಿ ಮುಳುಗದೇ ಅದರದ್ದೇ ಆದ ಆಟ. ಅಲ್ಲಿ ಅವರದ್ದು ಖುಷಿಯೂ ಅಲ್ಲದ ಸಿಟ್ಟೂ ಇಲ್ಲದ ಹಾಗಂತ ತೀರಾ ಶಾಂತಿಯೂ ಇರದ ವಾತಾವರಣ. ದೂರ ನಿಂತು ನೋಡಿ ನಮಗೆ ಬೇಕಾದಂತೆ ನಾವು ಸೃಷ್ಟಿಸಿಕೊಳ್ಳಬಹುದು. ನೆಮ್ಮದಿಯಜೀವನ ಅಂತಲೋ, ಸುಖೀ ಸಂಸಾರ ಎಂತಲೋ, ನಾಳಿನ ಚಿಂತೆಯಿಲ್ಲದ ಬದುಕು ಎಂದೋ... ಹೀಗೆ ಏನೇನೋ. ಆದರೆ ವಾಸ್ತವ ಹಾಗಿಲ್ಲ, ಬಡತನದ ಬದುಕು ಬಹಳ ಕಷ್ಟ ಕಣ್ರೀ... ಹೊತ್ತಿನ ತುತ್ತಿನ ಚೀಲ ತುಂಬಿಸುವ ಕಾಯಕದ ಎದುರು ಭವಿಷ್ಯದ ಚಿಂತೆ ಚಿಂತನೆಗೆ ಅವಕಾಶ ಇರುವುದಿಲ್ಲ ಅಷ್ಟೆ. ಅವರಿಗೂ ಆಸೆ ಆಕಾಂಕ್ಷೆ ಎಲ್ಲಾ ನಮ್ಮ ನಿಮ್ಮಂತೆ, ಕನಸುಗಳು ಸಾವಿರ ಸಾವಿರ ಬೆನ್ನತ್ತುತ್ತಲೇ ಇರುತ್ತವೆ. ಆದರೆ ನನಸಾಗದು ಅಷ್ಟೆ. ಪ್ರಕೃತಿ ಹೀಗೆ ಎಲ್ಲರಿಗೂ ಇರುವ ಕನಸನ್ನು ನನಸು ಮಾಡುತ್ತಾ ಹೋಗದು. ಹಾಗೆ ಹೋದರೆ ಕೆಸರಿನಲ್ಲಿ ಮಿಂದು ಭತ್ತ ಬೇಳೆಯೋರ್ಯಾರು?, ಬಟ್ಟೆ ನೆಯ್ಯೋರ್ಯಾರು..? ಇರಲಿ ಈಗ ವಿಷಯಕ್ಕೆ ಬರೋಣ.

ಮದ್ಯಮವರ್ಗದ ಜನರ ಮಾತುಕತೆಗಳ ನಡುವೆ ಹಾಯ್ದುಹೋಗುವ ಒಂದು ವಿಷಯ ಕೆಲಸಗಾರರ ಕುರಿತಾದದ್ದು. "ಅಯ್ಯೋ ಅವ್ರೇ ಸುಖವಾಗಿರುವ ಜನ ಕಣ್ರೀ.... ನಾಳಿನ ಚಿಂತೆಯಿಲ್ಲ, ಇವತ್ತಿಂದು ಉಂಡ್ರು ನಿದ್ರೆ ಮಾಡಿದ್ರು... ನಮ್ದು ಹಾಗಾ? " ಅಂತ ಕರಕರ ಕೊರಗುತ್ತಾ ಇರುತ್ತಾರೆ. ನಮ್ಮ ಹಳ್ಳಿ ಕಡೆ " ಇನ್ನು ಕೆಲಸಕ್ಕೆ ಕೂಲಿಕಾರರು ಸಿಕ್ಕೋದಿಲ್ಲ, ಅವ್ರು ಹೇಳಿದ್ದೇ ಕೂಲಿ ಮಾಡಿದ್ದೇ ಕೆಲಸ, ತೋಟ ಮನೆ ಕೊಟ್ಟು ಎಲ್ಲಾರೂ ಹೋಗೋದಷ್ಟೇ ನಮಗೆ ಉಳಿದದ್ದು" ಎಂದು ನಾನು ಸಣ್ಣವನಿದ್ದಾಗಿನಿಂದ ಅಂದರೆ ಸುಮಾರು ಮೂವತ್ತು ವರ್ಷದಿಂದ ಕೇಳುತ್ತಾ ಬಂದಿರುವ ಮಾತು. ಹಾಗಂತ ಅದೇ ಸತ್ಯ ಎಂದು ನೀವು ತಿಳಿದರೆ ಯಡವಟ್ಟಾದೀರಿ. ಹೀಗೆಲ್ಲಾ ಕರಕರ ಅನ್ನುವ ಜನರ ಆಂತರ್ಯಕ್ಕೆ ಗೊತ್ತಿ ಕೂಲಿ ಕೆಲಸ ಬಡತನ ಇವೆಲ್ಲಾ ಕಷ್ಟಕರ ಅಂತ. ನಿಜವಾಗಿಯೂ ಇವರ ಭಾವನೆ ಕೂಲಿಯ ಜೀವನದಲ್ಲಿ ಸುಖ ಅಂತಾದರೆ ಹೀಗೆ ಅಲವತ್ತುಕೊಳ್ಳುವ ಇವರುಗಳೆಲ್ಲಾ ತಮ್ಮ ಬಳಿ ಇದ್ದ ಆಸ್ತಿಯನ್ನೆಲ್ಲಾ ಅರೆಕ್ಷಣದಲ್ಲಿ ದಾನ ಮಾಡಿ ಊರಂಚಿನಲ್ಲಿ ಒಂದು ಗುಡಿಸಲು ಕಟ್ಟಿಕೂಲಿಕಾರರಾಗಿಬಿಡಬಹುದಲ್ಲ..?. ಇಲ್ಲ ಇವೆಲ್ಲಾ ಮನುಷ್ಯನ ಹುಟ್ಟುಗುಣ. ತನಗಿದ್ದ ಅವಸ್ಥೆಯನ್ನು ಅವನು ಅನುಭವಿಸಲಾರ, ಬೇರೆಯವರದ್ದು ಸುಖ ಎನ್ನುವ ಭ್ರಮೆ. ವಿಚಿತ್ರವೆಂದರೆ ಈ ಕೂಲಿಕಾರರ ಕುರಿತು ಮಾತುಕತೆಯಲ್ಲಿ ಅವರದ್ದು ಸುಖವಲ್ಲ ಎಂಬುದು ಇವರಿಗೂ ಗೊತ್ತು. ಆದರೆ ಅವರು ಮಾಡುವ ಕೆಲಸಕ್ಕೆ ತಾನು ತೆತ್ತಬೇಕಲ್ಲಾ ಎಂಬ ಸಂಕಟ ಹಾಗೆಲ್ಲ ಹೇಳಿಸುತ್ತದೆ. ಅಲ್ಲೆಲ್ಲೋ ದೂರದ ಪಟ್ಟಣದಲ್ಲಿ ಕೆಲಸಕ್ಕಿರುವ ತಮ್ಮ ಕರುಳಬಳ್ಳಿ "ನನಗೆ ಸಂಬಳ ಇನ್ನೂ ಹೈಕ್ ಆಗ್ಲೇ ಇಲ್ಲ, ನಲವತ್ತರ ಅಂಚಿನಲ್ಲಿಯೇ ಇದೆ" ಎಂದಾಗ ಕಂಪನಿಯ ವಿರುದ್ಧ ಲೊಚಗುಟ್ಟುವ ಮಂದಿ ದಿನವಿಡೀ ದುಡಿವ ಕೂಲಿಕೆಲಸಕ್ಕೆ ನೂರು ರೂಪಾಯಿ ಕೊಟ್ಟು ಅದೇನೋ ನೋಟಿನ ಕಂತೆಯನ್ನೇ ಕೊಟ್ಟೇವೇನೋ ಎಂಬ ಮಾತುಗಳನ್ನಾಡುವ ಪರಿಪಾಟ ಬಂದಿದೆ. ಬಂದಿದೆ ಏನಲ್ಲ ಲಾಗಾಯ್ತಿನಿಂದ ಚಾಲ್ತಿಯಲ್ಲಿದೆ.

ಅದೇಕೆ ಹೀಗೆ?, ಅದೆಲ್ಲಾ ಎಂತು?, ಅಂತ ಪ್ರಶ್ನಿಸುವ ಗೋಜಿಗೆ ಹೋಗದೆ ಹಾಗೆ ಹೇಳುವವರ ನಡುವೆ ನಿಂತಾಗ ಯೆಸ್ ಯಸ್ ಎಂದು ಲೊಚಗುಟ್ಟಿ ಬಚಾವಾಗುವುದೇ ಲೇಸು ಅಂತ ಅಂದಿರಾ..? . ಬುದ್ದಿವಂತರು ಬಿಡಿ ನೀವು...!

.

Thursday, July 7, 2011

ಅವೂ ಹೀಗೆ ಮಸುಕು ಮಸುಕು



ನನಗೆ ಬಹಳ ಸಾರಿ ಅನ್ನಿಸುತ್ತಿರುತ್ತದೆ. ನಾನು ಬರೆದಿದ್ದೆಲ್ಲಾ ನಾ ಕಂಡಿದ್ದು ನಾ ಕೇಳಿದ್ದು ನಾ ಅನುಭವಿಸಿದ್ದು. ಹಾಗಾಗಿ ನನಗೆ ನನ್ನಷ್ಟಕ್ಕೆ ಒಂಥರಾ ಜಿಗುಪ್ಸೆ. ಅದರಲ್ಲೇನಿದೆ ಬಹಳ ಜನ ಬರೆಯುವುದಿಲ್ಲ ನಾನು ಕಕ್ಕಿದ್ದೇನೆ ಅಷ್ಟೆ. ನಿಜವಾದ ಬರಹಗಾರ ತನ್ನ ಮಿದುಳನ್ನು ಸಮರ್ಥವಾಗಿ ಉಪಯೋಗಿಸಿದರೆ ಅವನು ಕಾಣದ್ದನ್ನು ಬರೆಯುತ್ತಾನೆ. ಅದು ಹೇಗಿರುತ್ತದೆ ಎಂದರೆ ಕಂಡವರೂ ಬೆಚ್ಚಿಬೀಳುವಷ್ಟು. ಆದರೆ ಅನುಭವಿಸಿದ್ದನ್ನು ಬರೆಯುವ ಬರಹಗಾರ ಕಲ್ಪಿಸಿಕೊಂಡು ಬರೆಯಲಾರ. ಕಲ್ಪನೆಗೆ ರಕ್ಕೆಪುಕ್ಕ ಸೇರಿಸಿ ಬರೆಯುವ ತಾಕತ್ತಿನ ಜನರು ನಿಜವಾದ ಮಜ ಕೊಡುವ ಬರಹಗಾರರಾಗಿಬಿಡುತ್ತಾರೆ.

ಎಂದೂ ವಿಮಾನ ಹತ್ತಿರದವ ಅಲ್ಲಿನ ವ್ಯವಸ್ಥೆಯ ಕುರಿತು ಕಷ್ಟಪಟ್ಟು ಬರೆಯತೊಡಗಿದರೆ, " ವಿಮಾನ ಹತ್ತಿದೊಡನೆ ಒಮ್ಮೆಲೆ ದಂಗಾದೆ, ಕೂರಲು ಇರಲಿ, ಒಂಟಿಕಾಲಿನಲ್ಲಿ ನಿಲ್ಲದೂ ಆಗದಷ್ಟು ರಷ್ ಆಗಿತ್ತು. ಬೆವರಿನ ವಾಸನೆಯ ಕಮಟು........ಕಿಟಕಿಯ ಸೀಟಿಗಾಗಿ ಜಗಳ..." ಹೀಗೆಲ್ಲಾ ಆಗಿಬಿಡಬಹುದು. ನಿತ್ಯ ಬಸ್ ಪ್ರಯಾಣವನ್ನಷ್ಟೇ ಮಾಡುತ್ತಿದ್ದ ಓದುಗ ತೀರಾ ತಲೆಕೆಡಿಸಿಕೊಳ್ಳದಿರಬಹುದು ಆದರೆ ವಿಮಾನ ಪ್ರಯಾಣಿಕ ಓದಿದರೆ...?

ಆದರೆ ಕಾಳಿದಾಸ "ಮೇಘ ಸಂದೇಶ"ವನ್ನ ಅಂದೇ ಬರೆದ ಅಂತಾರೆ. ಅದರಲ್ಲಿ ಮೋಡಗಳು ಸಾಗುವ ಹಾದಿ ಅದೆಷ್ಟು ಕರಾರುವಕ್ಕಾಗಿ ವಣಿಸಿದ್ದಾನೆ ಆತ ಎಂದರೆ ಈಗಲೂ ಆ ಮೇಘಗಳ ದಾರಿಯಲ್ಲಿ ಒಂದು ಪುಟ್ಟ ವಿಮಾನದಲ್ಲಿ ಸಾಗಿದರೆ ಕಾಳಿದಾಸ ವರ್ಣಿಸಿದ ದೃಶ್ಯಾವಳಿಗಳು ಕಾಣಸಿಗುತ್ತವೆಯಂತೆ. (ಹಾಗಂತ ನನಗೆ ಯಾರೋ ಹೇಳಿದ್ದನ್ನ ಇಲ್ಲಿ ಬರೆಯುತ್ತಿದ್ದೇನೆ ಅಷ್ಟೆ. ನನಗೇನು ಮೇಘ ಸಂದೇಶವೂ ಗೊತ್ತಿಲ್ಲ ಕಾಳಿದಾಸನನ್ನೂ (ಹೆಸರು ಹೊರತುಪಡಿಸಿ) ತಿಳಿದಿಲ್ಲ. ಕವಿರತ್ನ ಕಾಳಿದಾಸ ಗೊತ್ತಷ್ಟೆ.) ಅಂದೇನು ಆತ ವಿಮಾನ ಹತ್ತಿರಲಿಲ್ಲ ಹೆಚ್ಚೆಂದರೆ ಕೆಳಗಿನಿಂದ ಆ ಜಾಗಗಳನ್ನು ನೋಡಿರಬಹುದು. ಮೇಲಿನ ಪಯಣ ಆತನ ಕಲ್ಪನೆಯ ಕೂಸು. ಹಾಗಾಗಿ ಅಂತಹ ಅದ್ಭುತ ಕಲ್ಪನೆಗೆ ಇಂದೂ ಕೂಡ ಕಾಳಿದಾಸ ಪ್ರಸ್ತುತ. ಎಂಬಲ್ಲಿಗೆ ನಮ್ಮ ಮಿದುಳನ್ನು ಸಮರ್ಥವಾಗಿ ಬಳಸಿದರೆ ಕಲ್ಪನೆಯೂ ಕೂಡ ವಾಸ್ತವವಾಗುತ್ತದೆ. ಅಂತಹ ತಾಕತ್ತು ಮನುಷ್ಯನ ಮಿದುಳಿಗಿದೆ.

ಸರಿ ಬಿಡಿ ಇಂತಿಪ್ಪ ಮಿದುಳೆಂಬ ಮಿದುಳನ್ನು ನಾವೂ ನೀವೂ ಬಹಳ ಹೆಚ್ಚಿನ ಅಂಶವನ್ನೇನೂ ಬಳಸಿಲ್ಲ. ಇಲ್ಲಿ ಹಳ್ಳಿಯ ಮೂಲೆಯಲ್ಲಿ ಕುಳಿತ ನನಗಿಂತ ಒಂದಿಷ್ಟು ಗುಲಗುಂಜಿ ಜಾಸ್ತಿ ನೀವು ಬಳಸಿರಬಹುದು. ಅಥವಾ ಹತ್ತು ಗುಲಗುಂಜಿ ಜಾಸ್ತಿ ಬೇಕಾದರೆ ಇಟ್ಟುಕೊಳ್ಳಿ ಮತ್ತೆ ಅಷ್ಟಕ್ಕೆ ತರ್ಲೆ ತಕರಾರು ಬೇಡ. ಆದರೆ ಅಂದೇಂದೋ ಸಿಕ್ಕಾಪಟ್ಟೆ ಜಾಸ್ತಿ ಬಳಸಿದ ಜನ ಇಂದಿಗೂ ಪ್ರಸ್ತುತರು ಅಂದಾದಮೇಲೆ ನಮಗೆ ನಿಮಗೆ ಯಾಕೆ ಹಾಗೆ ಮಾಡಲಾಗುತ್ತಿಲ್ಲ ಎಂಬ ಪ್ರಶ್ನೆ ನನ್ನಂತೆ ನಿಮಗೂ ಕಾಡಿದ್ದಿರಬಹುದು. ಸೌಲಭ್ಯ ಹೆಚ್ಚಾಗಿ ನಾವು ಬಡ್ದಾಗುತ್ತೀದ್ದೇವಾ, ಬಳಸದ ವಸ್ತು ತುಕ್ಕು ಹಿಡಿಯುವಂತೆ ನಮಗೂ ಆಗಿದೆಯಾ?, ಸಹಸ್ರಾರು ವರ್ಷ ಮುಂದಿನವರು ನೆನಪಿಟ್ಟುಕೊಳ್ಳುವಂತಹಾ ಸಾಹಿತ್ಯ ಬೇಡ ಒಂದಿನ್ನೂರು ವರ್ಷ ಉಳಿಯುವಂತಹ ಸಾಹಿತ್ಯ ರಚನೆ ಯಾಕಾಗುತಿಲ್ಲ ?. ಎಂಬ ಪ್ರಶ್ನೆ ಕಾಡಿ ಕಾಡಿ ಅಂತಿಮವಾಗಿ ಅವೂ ಹೀಗೆ ಮಸುಕು ಮಸುಕು ರೂಪ ತಾಳಿಬಿಟ್ಟಿತು. ಒಟ್ಟಿನಲ್ಲಿ ಕತೆ ಇಷ್ಟೆ ಆರಂಭವೂ ಇಲ್ಲ ಅಂತ್ಯವೂ ಇಲ್ಲ ನಡು ಕೇಳಬೇಡಿ.

Tuesday, July 5, 2011

ಗಂಟೆ ಸದ್ದು ಅಪ್ಪಯ್ಯನದು ಜಾಗಟೆ ಅಪ್ಪೀದು

ಎಂಬತ್ನಾಲ್ಕರ ಅಪ್ಪಯ್ಯ ಹದಿನಾಲ್ಕರ ಅಪ್ಪಿ ಹಾಗೂ ಈ ಜನರೇಷನ್ ಗ್ಯಾಪ್ ನಡುವೆ ಅಪ್ಪಯ್ಯನ ಮಗನೂ ಅಪ್ಪಿಯ ಅಪ್ಪಯ್ಯನೂ ಆದ ನಲವತ್ನಾಲ್ಕರ ನಾನು. ಇದು ನಮ್ಮ ಮನೆಯ ಗಂಡು ದಿಕ್ಕಿನ ಚಿತ್ರಣ. ನನ್ನ ಹೆಂಡತಿ ಅರ್ಥಾತ್ ಅಪ್ಪಿಯ ಅಮ್ಮ ಮತ್ತು ನನ್ನ ಅಮ್ಮ ಅಂದರೆ ಅಪ್ಪಯ್ಯನ ಹೆಂಡತಿ ಎಂಬಲ್ಲಿಗೆ ಈ ಬ್ಲಾಗಿನ ಕೆಳಗಡೆ ಕಾಣುವ ನಮ್ಮ ಮನೆಯೊಳಗಿನ ಸಂಸಾರದ ಜನರು. ಅಯ್ಯೋ ಸಾಕು ಸಂಸಾರ ಚಿತ್ರಣ ಮುಂದುವರೆಸು ಅಂದಿರಾ. ಸರಿ ಕೇಳಿ.

೮೪ ಕ್ಕೆ ತಾಳ್ಮೆ ಎಂಬುದು ಇಲ್ಲ ೧೪ ಕ್ಕೆ ತಾಳ್ಮೆಯ ಅವಶ್ಯಕತೆ ಇಲ್ಲ. ಹಾಗಾಗಿ ಇವೆರಡರ ನಡುವೆ ನಾನು ಹೈರಾಣಾಗಿಬಿಡುತ್ತೇನೆ. ಸಿಕ್ಕಾಪಟ್ಟೆ ತಾಳ್ಮೆ ನನಗೆ ಭಗವಂತ ಅಥವಾ ಜೀವನ ಕಲಿಸಿಕೊಟ್ಟ ಪರಿಣಾಮವಾಗಿ ಮುಗುಳ್ನಗುತ್ತಾ ನಿಭಾಯಿಸುತ್ತೇನೆ. ಅಥವಾ ಅದು ಅನಿವಾರ್ಯ. ಅಪ್ಪಯ್ಯನದು ಒಂಥರಾ ಹಿಟ್ಲರ್ ಆಡಳಿತ. ತಾನು ಹೇಳಿದಂತೆ ನಮ್ಮ ಮನೆಯೇನು ಇಡೀ ಪ್ರಪಂಚವೇ ನಡೆಯಬೇಕು ಎನ್ನುವ ಮನಸ್ಸು. ದೇಹಕ್ಕೆ ವಯಸ್ಸಾದರೂ ಮನಸ್ಸು ಬಗ್ಗದು. ಹಾಗಾಗಿ ಅಜ್ಜ ಮೊಮ್ಮಗನ ಯುದ್ದ ಆವಾಗಾವಾಗ ನಡೆಯುತ್ತಲೇ ಇರುತ್ತದೆ. ೪೪ ರ ನಾನು ಏನಾದರೂ ಉಪಾಯ ಮಾಡಿ ಸಮಾಧಾನ ಮಾಡಿ ಮುಂದೆ ಸಾಗಬೇಕು ಹಲಬಾರಿ. ಈ ಸಮಾಧಾನಕ್ಕೆ ಅರ್ದಾಂಗಿಯೂ ಸಹಕಾರಿ ಎನ್ನಿ ಅಜ್ಜಿಯೂ ಜತೆಗೆ ಎನ್ನಿ, ಹೌದೌದು ಎನ್ನುತ್ತೇನೆ ನಾನು.

ಬೆಳಗ್ಗೆ ಬೆಳಗ್ಗೆ ಉಷ:ಕಾಲದಲ್ಲಿ..! ಅಪ್ಪಯ್ಯ ಸ್ನಾನಮಾಡಿ ಬರೊಬ್ಬರಿ ಮೂರುತಾಸಿನ ಪೂಜೆ ಮುಗಿಸಿ ಆಚೆ ಬಂದರೆ ಗರಂ ಗರಂ.ತಿಂಡಿ ತಿಂದು ಜಗುಲಿಯ ಖುರ್ಚಿಯ ಮೇಲೆ ಕುಳಿತಾಗ ಮೊಮ್ಮಗ ಕಾರ್ಟೂನ್ ನೆಟ್ ವರ್ಕ್ ಹಾಕಿ ಬೆಂಚ್ ಮೇಲೆ ಮಲಗಿದ್ದನ್ನು ಕಂಡು "ಅದೆಂತಾ ಹಗಲು ಮೂರೊತ್ತು ಟಿವಿಯೋ.." ಎಂಬ ಅಸಹನೆಯ ಸ್ವರ ಹೊರಡುತ್ತದೆ. ಮೊಮ್ಮಗನೋ" ನೀನು ಮುಕ್ತ... ನೋಡಿರೆ ಅಡ್ಡಿಲ್ಯಾ" ಕೆಣಕುತ್ತಾನೆ. "ತೆಗೆದುಬಿಟ್ರೆ ಹಲ್ಲು ಉದುರಿಹೋಕು" ಅಜ್ಜನ ಅವಾಜು. ಹೀಗೆ ಮಾತಿನ ಚಕಮಕಿ ನಡೆಯುತ್ತಿರುವಾಗ ಅಪ್ಪಿಯ ಅಮ್ಮನ ಪ್ರವೇಶ "ಅಪೀ... ಟಿವಿ ಆಫ್ ಮಾಡ ಮಾರಾಯ. ಮನೆಯೆಲ್ಲ ರಗಳೆ". "ನೀ ಸುಮ್ನಿರು ಅಮ" ಅಪ್ಪಿಯ ಉತ್ತರ. "ಯಂಗೆ ಎದುರುತ್ತರ ಕೊಡ್ತ್ಯ" ಅಪ್ಪಿಯ ಅಮ್ಮನ ದನಿ. ಹೀಗೆ ತಾರಕಕ್ಕೆ ಏರುವ ಹಂತದಲ್ಲಿ ಅಪ್ಪಿಯ ಅಜ್ಜ ಎದ್ದು ಟಿವಿ ಬಂದ್ ಮಾಡಿ ಬಿಡುತ್ತಾನೆ. ಅಲ್ಲಿಗೆ ಅಪ್ಪಿಯ ಸಿಟ್ಟು ನೆತ್ತಿಗೆ. ಅಂತಹ ಕ್ಷಣಗಳಲ್ಲಿ ನನ್ನ ಪ್ರವೇಶವಾಗಿ ಮಿಕಮಿಕ ಎಂದು ಕಣ್ಣರಳಿಸಿ ನೋಡಿ ಅಕಸ್ಮಾತ್ ಕಣ್ಣಿನ ದೃಷ್ಟಿಗೆ ಹೆದರಿದರೆ ಹೆದರಲಿ ಎಂದು ನಂತರ ಅದಾಗದಿದ್ದಾಗ ಏನೇನೂ ಉಪಾಯ ಮಾಡಿ ತಣಿಸುವುದಿದೆ.

ಇಷ್ಟೆಲ್ಲಾ ಆಗುತ್ತಿದ್ದಂತೆ ಅಜ್ಜ "ಆ ರಾಮಕೃಷ್ಣ ಎಲ್ಲಿಗೆ ಹೋದ್ನೋ, ಒಂಬತ್ತು ಗಂಟೆಯಾದರೂ ಇನ್ನು ಪತ್ತೆ ಇಲ್ಲೆ" ಎಂದು ಮನೆಕೆಲಸದವನನ್ನು ಅನ್ನಲು ಶುರುಮಾಡುತ್ತಾನೆ. ಹಾಗೆ ಮನೆಕೆಲಸದವನ್ನು ಅನ್ನಲು ಕಾರಣ ’ವಾರಕ್ಕೆ ಕನಿಷ್ಟ ಐದು ಬಾರಿ ತಾಳಗುಪ್ಪಕ್ಕೆ ಹೋಗಬೇಕು, ಬಸ್ ಸ್ಟ್ಯಾಂಡ ಗೆ ಬೈಕ್ ನಲ್ಲಿ ಬಿಟ್ಟುಕೊಡಲು ರಾಮಕೃಷ್ಣ ಬೇಕು. ಈಗ ನನಗೆ ಅವೆಲ್ಲಾ ಅರ್ಥವಾಗಿ "ಆನು ಬಿಟ್ಕೊಡ್ತಿ, ಬಾ’ ಅಂದರೆ ಒಂದು ದಿವಸದ ಬೆಳಗಿನ ಗರಂ ತಣ್ಣಗಾದಂತೆ. ಇನ್ನು ಸಂಜೆಯದು ಮತ್ತೊಂದು ರೀತಿ ಮುಂದುವರೆಯುತ್ತದೆ. ಅಜ್ಜಂಗೆ ಈ ಟಿವಿ ಬೇಕೇಬೇಕು ಅಪ್ಪಿಗೆ ಕಾರ್ಟೂನ್ ಬೇಕೆ ಬೇಕು ಮತ್ತೆ ಜಟಾಪಟಿ ಶುರು.

ಈ ರಗಳೆಗೆ ತಿಲಾಂಜಲಿ ಇಡಲು ತೀರ್ಮಾನಿಸಿ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ಪಿಯ ಕೋಣೆಗೆ ಪೋರ್ಟ್ ಬಲ್ ಟಿವಿ ತಂದು ಕೂರಿಸಿದೆ. ಈಗ ಟಿವಿ ರಗಳೆ ಬಂದ್. "ಅಯ್ಯೋ ಶಿವನೆ ಮಗ ಎಸ್ ಎಸ್ ಎಲ್ ಸಿ ಓದುತ್ತಿದ್ದಾನೆ ಎಂದಿರಿ ಅವನಿಗೆ ಒಂದು ಟಿವಿ ತಂದುಕೊಟ್ಟಿರಾ?, ಎಂತಾ ಜನ ನೀವು, ನಮ್ಮ ಮನೆಯಲ್ಲಿ ಓದುತ್ತಿರುವ ಮಗ ಎಸ್ ಎಸ್ ಎಲ್ ಸಿ ಆದರೆ ಕೇಬಲ್ ತೆಗೆಸುತ್ತೇವೆ, ನೀವೋ...." ಎಂದಿರಾ. ಹೌದು ಮಗ ಟಿವಿ ನೋಡುತ್ತಾ ಎಸ್ ಎಸ್ ಎಲ್ ಸಿ ಫೇಲ್ ಆದರೆ ಮನೆಯಲ್ಲಿ ಇರಲು ಒಂದು ಜನ ಆದಂತಾಗುತ್ತದೆ. ನಮ್ಮ ಊರುಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ, ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ ಎಂದೆಲ್ಲಾ ನೀವು ಪತ್ರಿಕೆಗಳಲ್ಲಿ ಓದುತ್ತಾ ಇದ್ದೀರಿ, ಇರುವ ಒಬ್ಬ ಮಗನೂ ನಿಮ್ಮಂತೆ ಓದಿ ಆಮೆಲೆ ಪಟ್ಟಣ ಸೇರಿ "ಅಯ್ಯೋ, ನಗರದ ಜೀವದಲ್ಲಿ ನಾವು ಕಳೆದು ಹೋಗಿದ್ದೇವೆ, ಹಳ್ಳಿಯೇ ಚಂದ"ಎಂದು ಅಲವತ್ತು ಕೊಳ್ಳದೇ ಇರಲಿ ಎಂದು ಹೀಗೆ . ಆದರೂ ಇದು ಸ್ವಲ್ಪ ಅತಿ ಎಂದಿರಾ. ಜಗುಲಿಯಲ್ಲಿ ಗಂಟೆ ಸದ್ದು ಶುರುವಾಗಿದೆ, ರಾಮಕೃಷ್ಣಾ.....ರಾಮಕೃಷ್ಣಾ..... ಎಂದು. ಅದಕ್ಕಿನ್ನೊಂದು ಮಾರ್ಗ ಯೋಚಿಸಬೇಕು, ಆನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಬರಲಾ....

Monday, July 4, 2011

ಆದರೆ ನಾವು ಮನುಷ್ಯರಲ್ಲ...!

ಮನುಷ್ಯರು ಏಕತೆಯನ್ನು ಮುಚ್ಚಿಡುತ್ತಾರೆ ಭಿನ್ನತೆಯನ್ನು ಪ್ರದರ್ಶಿಸುತ್ತಾರೆ ಎಂದರು ಅವರು. ಅವರು ಎಂದರೆ ಯಾರು? ಎಂದೆಲ್ಲಾ ಕೇಳಬೇಡಿ ಅವರು "ಅವರು"ಅಷ್ಟೆ. ಅಂತಹ ಮಾತನ್ನು ಕೇಳಿಸಿಕೊಂಡ ನಾನು " ನನಗೆ ಸರಿಯಾಗಿ ಅರ್ಥವಾಗಲಿಲ್ಲ" ಎಂದೆ. " ಉದಾಹರಣೆಗೆ ಪ್ರಪಂಚದಾವುದೇ ಭಾಗದ ಮನುಷ್ಯನಲ್ಲಿ ಕಾಣಬಹುದಾದ ಅವಯವಗಳನ್ನು ಬಟ್ಟೆಯಿಂದ ಜತನವಾಗಿ ಮುಚ್ಚಿಡುತ್ತಾರೆ ಅಕ್ಕಪಕ್ಕದಲ್ಲಿಯೇ ಬೇರೆ ತರಹ ಇರುವ ಮುಖಗಳನ್ನು ಪ್ರದರ್ಶನಕ್ಕೆಇಟ್ಟಿರುತ್ತಾರೆ" ಎಂದರು. ಸರಿ ಇದರಲ್ಲಿ ಏನೇನೋ ಅರ್ಥ ಇದೆ ಅಂತ ನಾನು ಸುಮ್ಮನುಳಿದೆ. ಅವರು ಸ್ವಲ್ಪ ಮುಂದುವರೆದು " ನೋಡು ಪ್ರಪಂಚದ ಯಾವ ಭಾಗದಲ್ಲಿನ ಮನುಷ್ಯರು ಎಂದರೆ ಬಣ್ಣ ಆಕಾರ ಹೊರತುಪಡಿಸಿ ಅವಯವಗಳೆಲ್ಲಾ ಒಂದೇ ತರಹ. ಮುಖ ಮಾತ್ರಾ ಹಾಗಲ್ಲ ನಾನಾ ನಮೂನೆಯಾಗಿ ಕಣ್ಣಿಗೆ ಕಾಣಿಸುತ್ತದೆ ಅದನ್ನು ಎಲ್ಲರಿಗೂ ತೋರಿಸುತ್ತಾರೆ, ಇನ್ನು ಮಿಕ್ಕಂತೆ ಡ್ಯಾಶ್ ಡ್ಯಾಶ್ ಗಳೆಲ್ಲಾ ಒಂದೇ ತರಹ ಅದನ್ನು ಮುಚ್ಚಿಟ್ಟು ಏನೇನೋ ಬೇರೆಯದೇ ಇದೆ ಎಂಬ ಭ್ರಮೆ ಹುಟ್ಟಿಸುತ್ತಾರೆ. ಇನ್ನೂ ಕೆಲವರು ಒಂದಿಷ್ಟು ಹೆಜ್ಜೆ ಮುಂದೆ ಹೋಗಿ ಆ ಅದನ್ನೂ...! ಕೂಡ ಚೂರುಪಾರು ಕಾಣಿಸುವಂತೆ ಮಾಡಿ ಕುತೂಹಲ ಕೆರಳಿಸಿ ಮಜ ತೆಗೆದುಕೊಳ್ಳುತ್ತಾರೆ, ಜತೆಗೆ ಹಣದ ಗಂಟನ್ನೇ ಹೊಡೆಯುವವರೂ ಇದ್ದಾರೆ." ಎಂತೆಲ್ಲಾ ಅನ್ನೋಕೆ ಶುರುಮಾಡಿದರು ಅವರು. ನಾನು ಮಗುಮ್ಮಾದೆ ಇದು ಒಂಥರಾ ಪಾಮರರು ತೀರಾಕೆಟ್ಟದ್ದು ಎನ್ನುವ ಹಾಗೂ ಅಶ್ಲೀಲ ಎನ್ನಬಹುದಾದ ವಿಷಯಗಳನ್ನು ಬಯಲಿಗೆಳೆಯುವ ಮಾತುಗಳು ಅಂತ ನನಗೆ ಅನ್ನಿಸದಿದ್ದರೂ ಜತೆಯಲ್ಲಿ ಇದ್ದವರಿಗೆ ಹಾಗೆ ಅನ್ನಿಸಿ ಆಯೋಮಯವಾಗುವುದು ಬೇಡ ಎಂದು ಹಾಗಾದೆ.
ಆ "ಅವರು" ಹುಳ ಬಿಟ್ಟು ಹೋದನಂತರ ನನ್ನ ಈಗಷ್ಟೇ ಬರುತ್ತಿರುವ ಬಿಳಿಕೂದಲಿಗೆ ನಾಲ್ಕಾಣೆ ಮರ್ಯಾದೆ ನೀಡುವ ಸಲುವಾಗಿ ತನ್ಮೂಲಕ ನನ್ನಷ್ಟಕ್ಕೆ ನಾನು ಚಿಂತಕ ಎಂದು ಒಳಮನಸ್ಸನ್ನು ಮಣಿಸುವ ಕಾರಣದಿಂದ ಮುಂದಿನ ಆಲೋಚನೆಗೆ ಬಿಟ್ಟೆ. ಹೌದು ಅವರು ಹೇಳಿದ್ದು ಸಾರ್ವಜನಿಕವಾಗಿ ಹೇಳಲಾಗದ ಸತ್ಯ. ಅದರಲ್ಲಿ ಒಂಥರಾ ವಿಷಯ ಇದೆ.
ಮನೆಯಲ್ಲಿ ಚಂದವಾದ ಹೆಂಡತಿ ಇದ್ದಾಗ ಅಲ್ಲೇಲ್ಲೋ ಬೇಲಿ ಹಾರುವ ಮಂದಿಯ ಮಂಡೆಯೊಳಗೆ ಇದೇ ಮುಚ್ಚಿಟ್ಟ ಬಟ್ಟೆಯೊಳಗೆ ಬೇರೆಯದೇ ಏನೋ ಇದೆ ಎಂಬ ಭ್ರಮೆ ತುಂಬಿರಬಹುದಾ..?, ಹೆಂಡತಿಯೆಂಬ ಹೆಂಡತಿ ಬಾಯ್ಬಿಟ್ಟು "ನನ್ನಲ್ಲಿ ಇಲ್ಲದ್ದು ಅವಳಲ್ಲಿ ಏನು ಕಂಡಿರಿ?" ಎಂದು ಶರಂಪರ ಜಗಳಕ್ಕೆ ನಿಂತಾಗ ಗಂಡ "ಅಯ್ಯೋ ಅಲ್ಲೂ ಅದೇ ಎಂಬುದು ಆಮೇಲೆ ಗೊತ್ತಾಯ್ತು ಕಣೇ" ಎಂದು ಮನಸ್ಸಿನಲ್ಲಿ ಅಂದುಕೊಳ್ಳಬಹುದಾ?, ಇದೇ ಉಲ್ಟಾ ಆಗಿ ಪರಗಂಡಸಿನ ಬೆನ್ನತ್ತಿ ನೂರಾರು ಕತೆ-ಕಾರಣಗಳಿಗೆ ಸೃಷ್ಟಿಕರ್ತೆಯರು ಮಹಿಳೆಯೂ ಆಗಿರಬಹುದಾ? ಎಂಬಂತಹ ಉತ್ತರವಿಲ್ಲದ ಪ್ರಶ್ನೆಗಳು ತನ್ನಷ್ಟಕ್ಕೆ ಮಿಂಚಿ ಮಾಯವಾಗತೊಡಗಿದವು.
ಹೀಗೆಲ್ಲಾ ಇಲ್ಲಸಲ್ಲದ ಆಲೋಚನೆಗಳು ಪುಂಖಾನುಪುಂಕವಾಗಿ ಹೊರಹೊಮ್ಮತೊಡಗಿದಾಗ ನನ್ನಲ್ಲಿನ ಬುದ್ಧಿ ಬಡಕ್ಕನೆ ಎದ್ದು "ಮಗನೇ ಕೆಲಸವಿಲ್ಲದ ಬಡಗಿ ಮಗನ ಡ್ಯಾಶ್ ಕೆತ್ತಿದ್ದನಂತೆ" ಕೆಲಸ ನೋಡು ಹೋಗು ಅಂತ ಅಂದಿತು. ಬಚಾವಾದೆ, ಯಡವಟ್ಟು ಆಲೋಚನೆಗೆ ಬ್ರೆಕ್ ನೀಡಿ ತೋಟಕ್ಕೆ ಹೋದೆ. ಅಲ್ಲಿ ಮಂಗನ ಗುಂಪೊಂದು ನಿರಾಳವಾಗಿ ಬಾಳೆ ಅಡಿಕೆ ಬಾರಿಸುತ್ತಿತ್ತು, ಮೈಮೇಲೆ ಬಟ್ಟೆಯಿಲ್ಲದೆ, ಶೀಲ ಅಶ್ಲೀಲ ಎಂಬ ಹಂಗಿಲ್ಲದೆ. ಪ್ರಪಂಚದ ಗೊಡವೆಯಿಲ್ಲದೆ, ಆದರೆ ನಾವು ಮನುಷ್ಯರಲ್ಲ...! ಹಾಗಾಗಿ ತೋಟದಿಂದ ವಾಪಾಸು ಬಂದವನು "ಕಟಕಟ" ಸದ್ದು ಮಾಡುತ್ತಾ ಹೀಗೆಲ್ಲಾ ಕುಟ್ಟಿದೆ. ಇದೂ ಕೆಲಸವಿಲ್ಲದುದರ ಪರಿಣಾಮ ಅಂತ ನೀವು ಅನ್ನಬಹುದು ಆದರೆ ನಾನು ಈ "ಕಟಕಟ" ಎಂಬ ಸದ್ದಿನ "ಅಕಟಕಟಾ" ಎಂಬುದು ಕೆಲಸದ ನಂತರದ್ದು ಅಂತ ಸಮರ್ಥಿಸಿಕೊಳ್ಳುತ್ತೇನೆ. ಓಕೆನಾ..?