ಹಳೆ ಕಥೆಒಂದನೊಂದು ಊರಲ್ಲಿ ಒಂದು ದೇವಸ್ಥಾನ ಇತ್ತು. ಅಲ್ಲಿ ಸನ್ಯಾಸಿಯೊಬ್ಬರು ಇದ್ದರು. ಅವರು ದೇವರಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಒಂದು ದಿವಸ ಅ ಊರಿಗೆ ಪ್ರವಾಹ ಬಂತು. ಊರಿನ ಜನರೆಲ್ಲ ಗುಳೆ ಹೊರಟರು .ಹಾಗೆ ಹೊರಟಾಗ ಊರಿನ ಜನರು ಸನ್ಯಾಸಿಯ ಬಳಿ "ಬನ್ನಿ ಸ್ವಾಮಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೀರ" ಎಂದರು.
ಆಗ ಸನ್ಯಾಸಿ " ಇಲ್ಲ ನೀವೆಲ್ಲ ಹೋಗಿ ಬದುಕಿಕೊಳ್ಳಿ, ನನ್ನನ್ನು ಕರೆದೊಯ್ಯಲು ಭಗವಂತ ಬರುತ್ತಾನೆ" ಎಂದು ಧ್ಯಾನದಲ್ಲಿ ಕುಳಿತರು. ಪ್ರವಾಹ ಹೆಚ್ಚುತ್ತಾ ಹೋಯಿತು ದೇವಸ್ಥಾನ ಮುಳುಗುತ್ತಾ ಬಂತು. ಸನ್ಯಾಸಿ ದೇವಸ್ಥಾನದ ನೆತ್ತಿಯ ಮೇಲೆ ಕುಳಿತು ದೇವರ ಧ್ಯಾನ ಮುಂದುವರೆಸಿದರು. ಆಗ ಒಂದು ದೋಣಿಯಾತ ಬಂದು 'ಬನ್ನಿ ಸ್ವಾಮಿ " ಎಂದು ಕರೆದ. ಆಗಲೂ ಸನ್ಯಾಸಿ ಬರಲೊಲ್ಲೆ ಎಂದರು. ನೀರು ದೇವಸ್ಥಾನದ ನೆತ್ತಿಯನ್ನೂ ಮುಳುಗಿಸತೊಡಗಿತು ಆಗ ಬಂದದ್ದು ಹೆಲಿಕ್ಯಾಪ್ಟರ್ ಆಗಲೂ ಸನ್ಯಾಸಿಯ ಉತ್ತರ ಅಷ್ಟೆ "ಇಲ್ಲ ನನ್ನನ್ನು ಕರೆದೊಯ್ಯಲು ಭಗವಂತ ಬರುತ್ತಾನೆ" ಆ ಉತ್ತರದ
ನಂತರ ಪ್ರವಾಹ ಹೆಚ್ಚಿ ಸನ್ಯಾಸಿ ಅಲ್ಲಿ ಮುಳುಗಿ ಹೋದರು.
ದೇಹ ಬಿಟ್ಟ ಸನ್ಯಾಸಿಯ ಆತ್ಮ ದೇವರ ಬಳಿ ಸೇರಿತು. ಮತ್ತು
ಸಿಟ್ಟಿನಿಂದ ಕೇಳಿತು " ಹೇ ಭಗವಂತಾ ನಾನು ನಿನ್ನನ್ನು ಅನವರತ ಭಜಿಸುತ್ತಿದ್ದೆ , ಆದರೂ ನೀನು ನನ್ನ ದೇಹವನ್ನು ಪ್ರವಾಹದಿಂದ ಕಾಪಾಡಲು ಬರಲಿಲ್ಲವೇಕೆ?"
ಭಗವಂತ ಯಥಾಪ್ರಕಾರ ಮುಗುಳ್ನಗುತ್ತಾ ಉತ್ತರಿಸಿದ, " ನಾನು ನಿನ್ನನ್ನು ರಕ್ಷಿಸಲು ಮೊದಲು ಜನರನ್ನು ನಂತರ ದೋಣಿಯನ್ನು ಅಂತಿಮವಾಗಿ ಹೆಲಿಕ್ಯಾಪ್ಟರ್ ನ್ನು ಕಳುಹಿಸಿದೆ, ಆದರೆ ನೀನು ಅದನ್ನು ಅರಿತುಕೊಳ್ಳಲಿಲ್ಲ ನೀನು ನಾನೇ ಬರಬೇಕೆಂದು ಹಠ ಹಿಡಿದೆ ಆದರಿಂದ ನೀನು ದೇಹವನ್ನು ಕಳೆದುಕೊಳ್ಳಬೇಕಾಯಿತು., ಭಗವಂತನಾದ ನಾನು ನಿಮ್ಮಗಳಿಗೆ ಹಲವಾರು ರೂಪದಲ್ಲಿ ಕಾಣಿಸಿಕೊಳ್ಳುತ್ತೇನೆ ಅದನ್ನು ಅರಿತುಕೊಳ್ಳುವ ಚೈತನ್ಯ ನಿಮಗಿರಬೇಕು, ಆಗಲಿ ನಿನ್ನ ಗಟ್ಟಿ ಮನಸ್ಸಿನಿಂದ ಹಠದ ಸ್ವಭಾವದಿಂದ ಅಥವಾ ಅಜ್ಞಾನದಿಂದ ನೀನು ದೇಹವನ್ನು ಕಳೆದುಕೊಂದಿರಬಹುದು ಆದರೆ ಮನುಷ್ಯರ ದೃಷ್ಟಿಯಲ್ಲಿ ಮಹಾತ್ಮನಾಗಿದ್ದೀಯ ನೋಡಲ್ಲಿ ಎಂದು ಭಗವಂತ ಸನ್ಯಾಸಿಗಳಿಗೆ ಅವರು ದೇವಸ್ಥಾನದ ನೆತ್ತಿಯಲ್ಲಿ ಬಿಟ್ಟು ಬಂದ ದೇಹವನ್ನು ತೋರಿಸಿದ. ಅಲ್ಲಿ ಪ್ರವಾಹ ಇಳಿದಿತ್ತು. ಸನ್ಯಾಸಿಯ ದೇಹದ ಸುತ್ತ ಸಾವಿರಾರು ಜನ ಸೇರಿದ್ದರು ಮತ್ತು ಅವರಿಗೆ ಮಹಾತ್ಮನ ಪಟ್ಟ ಕಟ್ಟಿದ್ದರು. ಉಘೇ ಉಘೇ ಎನ್ನುತಿದ್ದರು.
ನಂತರದ ವರ್ಷಗಳಲ್ಲಿ ಅದು ಪುಣ್ಯ ಕ್ಷೇತ್ರವಾಯಿತು.
ಹೊಸ ಕತೆಅದೇ ಪುಣ್ಯಕ್ಷೇತ್ರದಲ್ಲಿ ನೂರಾರು ವರ್ಷದ ನಂತರ ಮತ್ತೆ ಪ್ರವಾಹ ಬಂತು. ಆಗಲೂ ಅಲ್ಲೊಬ್ಬರು ಸನ್ಯಾಸಿಗಳಿದ್ದರು. ಅವರಿಗೆ ಈ ಹಿಂದಿನ ಕಥೆ ಗೊತ್ತಿತ್ತು. ಅವರಿಗೂ ಭರ್ಜರಿ ಮಹಾತ್ಮನಾಗುವ ಆಸೆ ಇತ್ತು ಆದರೆ ಆಗಿರಲಿಲ್ಲ. ಪ್ರವಾಹದ ನೀರು ದೇವಸ್ಥಾನದ ಆವರಣಕ್ಕೆ ಬರುತ್ತಿದ್ದಂತೆ ಅವರಬಳಿ ಕಾರೊಂದು ಬಂತು. ನೂರಾರು ಭಕ್ತರು ಪ್ರವಾಹದ ಭಯದಲ್ಲಿ ಅತ್ತಿಂದಿತ್ತ ಓಡಾಡುತಿದ್ದರೂ ಸನ್ಯಾಸಿಗಳು ಅದನ್ನು ಲೆಕ್ಕಿಸದೆ "ಭಗವಂತ ನನ್ನನ್ನು ಬದುಕಿಸಲು ಕಾರನ್ನು ಕಳುಹಿಸಿದ್ದಾನೆ" ಎಂದು ಕಾರನ್ನೇರಿದರು. ಆದರೆ ಕಾರು ಹೆಚ್ಚು ದೂರ ಹೋಗಲಿಲ್ಲ. ನೀರು ಹೆಚ್ಚಿದ ಕಾರಣ ರಸ್ತೆ ಇಲ್ಲದೆ ಮತ್ತೆ ದೇವಸ್ಥಾನಕ್ಕೆ ವಾಪಾಸು ಬಂತು. ಪ್ರವಾಹದ ನೀರು ದೇವಸ್ಥಾನದ ಒಳಗೆ ಬಂತು. ಸನ್ಯಾಸಿಗಳು ಮಹಡಿ ಏರಿದರು. ಅಲ್ಲೂ ಬಂತು ಸನ್ಯಾಸಿಗಳು ದೇವರು ಕಳುಹಿಸುವ ದೋಣಿಗಾಗಿ ಹುಡುಕಿದರು, ದೋಣಿ ಬಂತು, ದೇವಸ್ಥಾನದ ಮಹಡಿಯಲ್ಲಿ ಸೇರಿದ್ದ ನೂರಾರು ಜನರನ್ನು ಮರೆತು ಸನ್ಯಾಸಿಗಳು ಅದನ್ನು ಏರಿದರು. ಆದರೆ ದೋಣಿ ಹೆಚ್ಚು ದೂರ ಸಾಗಲಿಲ್ಲ . ನೀರಿನ ರಭಸಕ್ಕೆ ತೇಲುತ್ತಾ ತೇಲುತ್ತಾ ಮತ್ತೊಂದು ಕಟ್ಟಡದ ನೆತ್ತಿಯವರೆಗೆ ಬಂತು. ಸನ್ಯಾಸಿಗಳು ಅಲ್ಲಿ ಇಳಿದುಕೊಂಡು ಭಗವಂತ ಕಳುಹಿಸುವ ಕೆಲಿಕ್ಯಾಪ್ಟರ್ ಗಾಗಿ ಆಕಾಶ ನೋಡತೊಡಗಿದರು. ಅರೆ ಎಂಥಾ ಆಶ್ಚರ್ಯ ಕ್ಷಣ ಮಾತ್ರದಲ್ಲಿ ಅದೂ ಹಾರಿಕೊಂಡು ಬಂದು ಸನ್ಯಾಸಿಯಿದ್ದ ಕಟ್ಟಡದಲ್ಲಿ ಇಳಿಯಿತು. ಲಗುಬಗೆಯಿಂದ ಸನ್ಯಾಸಿ ಪೀಠ, ಗಂಟು ಮೂಟೆಯೊಡನೆ ಹೆಲಿಕ್ಯಾಪ್ಟರ್ ಹತ್ತಿ ಕುಳಿತರು. ಇನ್ನೂ ಹತ್ತೆಂಟು ಜನ ಅಲ್ಲಿದ್ದರು. ಸನ್ಯಾಸಿಗಳು ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಗಂಟೆಯೊಳಗೆ ಸನ್ಯಾಸಿಗಳನ್ನು ದೂರದ ಸುರಕ್ಷಿತ ಜಾಗಕ್ಕೆ ಇಳೀಸಿದರು. ಅಲ್ಲಿ ಟಿವಿ ೯ ನವರು ಮೈಕ್ ನ್ನು ಸನ್ಯಾಸಿಗಳ ಮುಂದೆ ಹಿಡಿದು ಪ್ರವಾಹದ ಬಗ್ಗೆ ಕೇಳಿ ನಂತರ " ಪ್ರವಾಹದಲ್ಲಿ ಸಿಲುಕಿರುವ ನೂರಾರು ಭಕ್ತರ ಕಥೆ ಏನು? " ಎಂದು ಕೇಳಿದರು. ಅದಕ್ಕೆ ಸನ್ಯಾಸಿಗಳು " ನೀರು ನೀರು ಎಲ್ಲೆಲ್ಲಿಯೂ ನೀರು, ಉಳಿದ ಭಕ್ತರು ಅಲ್ಲಿ ಇದ್ದಾರೆ , ಅದೇನು ಅಂತಹಾ ದೊಡ್ಡ ವಿಷಯವಲ್ಲ ನೀರಿಳಿದ ಮೇಲೆ ಎಲ್ಲಾ ಸುರಕ್ಷಿತ" ಎಂದರು.ಪ್ರವಾಹ ತಗ್ಗಿತು. ಸನ್ಯಾಸಿಗಳು ಮತೆ ದೇವಸ್ಥಾನಕ್ಕೆ ವಾಪಾಸಾದರು ಮತ್ತು ಹತ್ತಾರು ವರ್ಷ ಬದುಕಿದ್ದರು ಆದರೆ ಅವರು ಮಹಾತ್ಮರಾಗಲಿಲ್ಲ. ಹಾಗೆಯೇ ಒಂದು ದಿನ ಸನ್ಯಾಸಿಗಳು ದೇಹ ತ್ಯಜಿಸಿದರು. ಸನ್ಯಾಸಿಯ ಆತ್ಮಕ್ಕೆ ತಾನು ಸಿಕ್ಕಾಪಟ್ಟೆ ದೊಡ್ಡ ಮಹಾತ್ಮನಾಗಲಿಲ್ಲ ಎಂಬ ಕೊರಗು ಇತ್ತು. ಭಗವಂತನ ಬಳಿ " ಅದೇನು ? ಆ ಪ್ರವಾಹದ ಸಮಯದಲ್ಲಿ ನೀನು ಕಳುಹಿಸಿದ ಎಲ್ಲಾ ವಾಹನಗಳನ್ನು ಉಪ ಯೋಗಿಸಿದೆ ನಾನು, ಆದರೂ ತದನಂತರ ನಾನು ಭರ್ಜರಿ ಮಹಾತ್ಮ ಆಗಲೇ ಇಲ್ಲ? " ಎಂದು ಕೇಳಿದರು.
ಯಥಾಪ್ರಕಾರ ಭಗವಂತ ಹಸನ್ಮುಖಿಯಾಗಿ ಉತ್ತರಿಸಿದ " ಅಯ್ಯಾ, ನಾನು ನೀನ್ನನ್ನು ಮಹಾತ್ಮನನ್ನಾಗಿಸಲು ನೀನಿದ್ದ ಜಾಗಕೆ ಪ್ರವಾಹ ಕಳುಹಿಸಿದೆ ಆದರೆ ನೀನು ಕಾರನ್ನೇರಿದೆ. ರಸ್ತೆಗೆ ಅಡ್ಡ ನೀರನ್ನು ಹರಿಸಿದೆ ನೀನು ದೇವಸ್ಥಾನದ ಮಹಡಿಯನ್ನೇರಿದೆ. ನಿನ್ನ ಜತೆಗಿದ್ದ ಭಕ್ತರನ್ನು ದೋಣಿಯಲ್ಲಿ ಏರಿಸು ಎಂದು ದೋಣಿ ಕಳುಹಿಸಿದೆ ನೀನೇ ಏರಿದೆ. ಅದನ್ನು ತೇಲಿಸಿದೆ ಆದರೆ ನೀನು ಮತ್ತೊಂದು ಕಟ್ಟಡ ಏರಿದೆ. ಕೊನೆಯಲ್ಲಿ ಉಳಿದ ನಾಲ್ಕಾರು ಜನರನ್ನಾದರು ಬದುಕಿಸಿ ನೀನು ಮಹಾತ್ಮನಾಗುತ್ತೀಯ ಎಂದು ಹೆಲಿಕ್ಯಾಪ್ಟರ್ ಕಳುಹಿಸಿದೆ ಆದರೆ ನಿನಗೆ ನಿನ್ನ ಜೀವವೇ ಹೆಚ್ಚಾಯಿತು. ಹೋಗಲಿ ದೂರದಲ್ಲಿರುವ ಭಕ್ತರಿಗೆ ನೀನು ನಾಲ್ಕು ಒಳ್ಳೆಯ ಮಾತನ್ನಾದರೂ ಆಡಲಿ ಎಂದು ಟಿವಿ ೯ ನ ವರದಿಗಾರನನ್ನು ಕಳುಹಿಸಿದೆ ಆದರೆ ಅಲ್ಲೂ ನೀನು ಸಂಕಷ್ಟದಲ್ಲಿರುವ ಜನರಿಗೆ ಒಳ್ಳೆಯ ಮಾತನಾಡಲಿಲ್ಲ ಆದರೂ ಪ್ರವಾಹ ಮುಗಿದ ನಂತರದ ವರ್ಷಗಳಲ್ಲಿ ನಿನ್ನನ್ನೂ ನಂಬುವ ಹುಂಬ ಭಕ್ತರನ್ನು ಇರಿಸಿದೆನಲ್ಲಾ ಅದಕ್ಕೆ ಖುಷಿ ಪಡು" ಎಂದ. ಸನ್ಯಾಸಿಗೆ ಆವಾಗ ಅರ್ಥವಾದಂತಾಯಿತು. ಆದರೆ ಏನು ಪ್ರಯೋಜನ ಇತ್ತ ಭೂಮಿಯಲ್ಲಿ ಆ ಸನ್ಯಾಸಿಯ ಜಾಗದಲ್ಲಿ ಅರ್ಥವಾಗದ ಮತೊಬ್ಬ ಸನ್ಯಾಸಿ ಕುಳಿತಿದ್ದರು. ಭಕ್ತರ ಜಾಗದಲ್ಲಿ.......................ನಾವು ....... ನೀವು ....................?