Friday, December 7, 2012

ಶಾಲೆಯಲ್ಲೊಂದು "ಶ್ವಾನ" ಪ್ರಾರ್ಥನೆ




ಮಕ್ಕಳ ಶಾಲೆಗಳು ಆರಂಭವಾಗುವುದು ಪ್ರಾರ್ಥನೆಯಿಂದ. "ಸ್ವಾಮಿ ದೇವನೆ ಲೋಕಪಾಲನೆ.." ಜಯ ಭಾರತ ಜನನಿಯೆ ತನುಜಾತೆ" ಜನಗಣಮನ ಎಂಬ ರಾಷ್ಟ್ರ ಗೀತೆ ಇರಬಹುದು ಒಟ್ಟಿನಲ್ಲಿ ಆರಂಭ ಪ್ರಾರ್ಥನೆಯಿಂದಲೆ. ಇದು ಎಲ್ಲ ಶಾಲೆಯ ಆರಂಭದ ಕ್ಷಣಗಳು. ಘಂಟೆ ಭಾರಿಸಿದ ತಕ್ಷಣ ಸಾಲಿನ ಸರತಿಯಲ್ಲಿ ನಿಲ್ಲುವ ಮಕ್ಕಳು ತಮ್ಮದೇ ಆದಂತಹ ಮುದ್ದು ಭಾಷೆಯಲ್ಲಿ ಹೇಳುವ ಸಾಲುಗಳು ಎಲ್ಲರ ಗಮನ ಸೆಳೆಯುತ್ತದೆ. ಅವೆಲ್ಲ ಸಹಜ ಬಿಡಿ, ಆದರೆ ಕಳೆದ ಎರಡು ವರ್ಷಗಳಿಂದ ಕಾರ್ಗಲ್ ಸಮೀಪದ ಲಿಂಗನಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ನಡೆಯುತ್ತಿದೆ ಅದು ಶ್ವಾನ ಪ್ರಾರ್ಥನೆ.
ಇದು ವಿಶೇಷವಾದಂತಹ ಘಟನೆ. ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ಶಾಲಾಗಂಟೆ ಭಾರಿಸುತ್ತಿದ್ದಂತೆ ಎರಡು ನಾಯಿಗಳು ಶಾಲೆಯ ಮಕ್ಕಳ ನಡುವೆ ದಾರಿ ಮಾಡಿಕೊಂಡು ಶಾಲೆಯ ಒಳ ಆವರಣ ಪ್ರವೇಶಿಸುತ್ತವೆ. ಮುಖ್ಯೋಪಾಧ್ಯಾಯರಾದ ಬಸವರಾಜ್ ಕ್ಲಾಸ್ ಲೀಡರ್ ಹುಡುಗನನ್ನು ವೇದಿಕೆಗೆ ಕರೆದು ಮಕ್ಕಳ ಪ್ರಾರ್ಥನೆಗೆ ಕಾಷನ್ ನೀಡಲು ಹೇಳುತ್ತಿದ್ದಂತೆ ಸೋನು ಹಾಗು ಗುಗ್ಗು ಎಂಬ ಎರಡು ಶ್ವಾನಗಳೂ ಕೂಡ ವೇದಿಕೆಯನ್ನು ಏರುತ್ತವೆ. ಮಕ್ಕಳು ಪ್ರಾರ್ಥನೆ ಶುರು ಮಾಡಿದ ಒಂದೆರಡು ಕ್ಷಣದ ನಂತರ ಸೋನು ಎಂಬ ಶ್ವಾನವೂ ತನ್ನದೇ ಆದ ಸ್ವರದಲ್ಲಿ ಪ್ರಾರ್ಥನೆಗೆ ತೊಡಗುತ್ತದೆ. ಶ್ವಾನ ಪ್ರಾರ್ಥನೆಯೆಂದರೆ ಕೇವಲ ನಾಯಿಯ ಊಳಿಡುವಿಕೆ ಅಲ್ಲ ಸ್ವಲ್ಪ ಮಟ್ಟಿಗಿನ ದನಿಯ ಏರಿಳಿತವನ್ನೂ ಮಾಡುತ್ತದೆ ಸೋನು ಎಂಬ ಶ್ವಾನ. ಗುಗ್ಗು ಎಂಬ ಶ್ವಾನ ಹಿರಿಯಣ್ಣ ಸೋನುವಿಗೆ ಸಾಥ್ ನೀಡುತ್ತದೆ. ರಾಷ್ಟಗೀತೆ ಮುಗಿದು ವರ್ತಮಾನ ಪತ್ರಿಕೆ ಓದಲು ಮಕ್ಕಳು ಶುರುವಿಟ್ಟುಕೊಂಡನಂತರ ಎರಡು ಶ್ವಾನಗಳೂ ವೇದಿಕೆಯಿಂದ ನಿರ್ಗಮಿಸುತ್ತವೆ. ಕೆಲಕಾಲ ಮಕ್ಕಳ ಸಾಲಿನ ನಡುವೆ ಓಡಾಡಿ ನಂತರ ಬಿಸಿಯೂಟ ಕ್ಕೆ ಮತ್ತೆ ಹಾಜರ್, ಅಲ್ಲಿಯತನಕ ಶಾಲೆಯ ಆವರಣದಲ್ಲಿ ಸುತ್ತಾಡುತ್ತಲೋ ಲಿಂಗನಮಕ್ಕಿಯ ಬೀದಿ ಸುತ್ತುತ್ತಲೋ ಇರುತ್ತವೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಸಾವಿತ್ರಿ ಅಶೋಕ್. ಇದು ಯಾವ ಜನ್ಮದ ಋಣವೋ ಗೊತ್ತಿಲ್ಲ ಎನ್ನುತ್ತಾರೆ ಬಸವರಾಜ್. ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರುವ ಈ ಶ್ವಾನ ಜೋಡಿಯ ವಿಚಿತ್ರ ವರ್ತನೆ ಅರ್ಥವಾಗುವುದು ಕಷ್ಟಕರ.

ಬಸವರಾಜ್ ಫೋನ್:೭೭೯೫೨೨೮೨೬೧

Monday, December 3, 2012

ಬದುಕನ್ನು ಬಂಗಾgವಾಗಿಸಿದ ವೀಳ್ಯದೆಲೆ


"ಏಲೆ ಅಡಿಕೆ ಸುಣ್ಣ ಸೇರಿದರೆ ಕೆಂಬಣ್ಣ" ಎಂಬ ಹಾಡನ್ನು ನೀವು ಕೇಳಿರುತ್ತೀರಿ. ಗೋಪಾಲಕೃಷ್ಣ ಅಡಿಗರು ತಮ್ಮ ಭಾಷಣವೊಂದರಲ್ಲಿ "ಅಡಿಕೆ ತಿಂದರೆ ಸೊಕ್ಕು ಬರುತ್ತದೆ ಅಂತ ಕೇಳಿದ್ದೆ ಆದರೆ ಬೆಳೆದರೂ ಬರುತ್ತದೆ ಎಂದು ಗೊತ್ತಿರಲಿಲ್ಲ" ಎಂಬ ಮಾತನ್ನು ಹೇಳಿದ್ದರು. ಅಡಿಕೆಗೆ ಒಳ್ಳೆಯ ದರ ಬಂದಾಗ ಹೇಳಿದ ಮಾತದು. ಇನ್ನು ಸುಣ್ಣವೆಂಬ ಬಿಳೀ ಬಣ್ಣದ ವಿಷಯ ಎಲ್ಲರಿಗೂ ತಿಳಿದದ್ದೇ. ಈ ಮೂರನ್ನೂ ನಂಬಿ ಬದುಕುತ್ತಿರುವ ಕುಟುಂಬಗಳ ಸಂಖ್ಯೆ ವಿಫುಲವಾಗಿದೆ. ಆದರೆ ೭೦ ವರ್ಷಗಳಿಂದ ವೀಳ್ಯದೆಲೆಯನ್ನೇ ನಂಬಿ ಬದುಕುಬಂಗಾರವನ್ನಾಗಿಸಿಕೊಂಡ ಕುಟುಂಬಗಳು ತುಂಬಾ ಅಪರೂಪ. ಅಂತಹ ಕುಟುಂಬ ತಾಳಗುಪ್ಪ ಸಮೀಪದ ಕೆರೇಕೈ ಎಂ ಶ್ರೀಪಾದರವರದ್ದು.

ಕಳೆದ ಎಪ್ಪತ್ತು ವರ್ಷಗಳಿಂದ ನಿರಂತರವಾಗಿ ವೀಳ್ಯದೆಲೆ ಬೆಳೆದು, ಅವುಗಳನ್ನು ಜೋಡಿಸಿ ತಾಳಗುಪ್ಪ ಹಾಗೂ ಸಾಗರದ ಸಂತೆ ಪೆಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸುಂದರ ಬದುಕು ಕಟ್ಟಿಕೊಂಡ ಕುಟುಂಬದ ಎರಡನೇ ತಲೆಮಾರಿನ ವ್ಯಕ್ತಿ ಶ್ರೀಪಾದ. ಶ್ರೀಪಾದರವರ ತಂದೆ ಮಹಬಲೇಶ್ವರಯ್ಯ ೧೯೩೫ ನೇ ಇಸವಿಯಲ್ಲಿ ವೀಳ್ಯದೆಲೆ ಬೆಳೆಯನ್ನು ಆಯ್ಕೆ ಮಾಡಿಕೊಂಡರು. ಆಣೆ ಪಾವಲಿಗಳ ಅಂದಿನ ಕಾಲದಲ್ಲಿ ಅಡಿಕೆಗೆ ಸೂಕ್ತ ಮಾರುಕಟ್ಟೆ ಇಲ್ಲದ ಹಾಗೂ ನಿಯಂತ್ರಣಕ್ಕೆ ಬಾರದ ವ್ಯಾಪಕ ಕೊಳೆರೋಗದ ಕಾರಣ ಹಾಗೂ ಅತೀ ಸಣ್ಣ ಹಿಡುವಳಿಯ ಕಾರಣದಿಂದ ಅವಿಭಕ್ತ ಕುಟುಂಬದ ಪೋಷಣೆಗೆ ಬೇರೆಯ ಆದಾಯ ಮೂಲವನ್ನು ಹುಡುಕಿಕೊಳ್ಳುವುದು ಮಹಬ್ಜಲೇಶ್ವರಯ್ಯ ನವರಿಗೆ ಅನಿವಾರ್ಯ ವಾಗಿತ್ತು. ಅಂದು ಅವರು ಆಯ್ಕೆ ಮಾಡಿಕೊಂಡಿದ್ದು ವಿಳ್ಯದೆಲೆ. ಮನೆಯ ತೋಟದಲ್ಲಿ ಬೆಳೆದ ವೀಳ್ಯದೆಲೆಯನ್ನು ಕೊಯ್ದು ಜೊಡಿಸಿ ಆರು ಕಿಲೋಮಿಟರ್ ದೂರದ ತಾಳಗುಪ್ಪದ ಸಂತೆಗೆ ತಲೆಹೊರೆಯ ಮೇಲೆ ಹೊತ್ತೊಯ್ದು ಸಂಜೆಯ ತನಕ ಸಂತೆಯ ಪೇಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸಂಸಾರ ತೂಗಿಸುತ್ತಿದ್ದರು. ಕಾಲಚಕ್ರ ಉರುಳಿದಂತೆ ವಯೋಮಾನದ ಕಾರಣದಿಂದ ಮಹಭಲೇಶ್ವರಯ್ಯ ವೀಳ್ಯದೆಲೆಯ ವೃತ್ತಿಯಿಂದ ನಿವೃತ್ತರಾದರು. ಐದು ಜನ ಗಂಡುಮಕ್ಕಳಲ್ಲಿ ನಾಲ್ಕು ಜನ ಬೇರೆ ಊರುಗಳಿಗೆ ಜೀವನಕ್ಕಾಗಿ ಹೋಗಿದ್ದರಿಂದ ಅಲ್ಪ ಹಿಡುವಳಿಯ ಸಂಸಾರದ ನೊಗ ಶ್ರಿಪಾದರವರ ಹೆಗಲಮೇಲೆ ಬಿತ್ತು. ತಂದೆಯವರ ಕಾಲದಲ್ಲಿಯೇ ಅಲ್ಪ ಹಿಡುವಳಿ ಇನ್ನು ಅದರಲ್ಲಿ ಐದು ಹಿಸ್ಸೆ ಮಾಡಿದರೆ ಜೀವನ ನಿರ್ವಹಿಸುವ ವಿಧಾನದ ಬಗ್ಗೆ ಚಿಂತಿಸಿದ ಶ್ರೀಪಾದ ತಂದೆಯವರ ವೃತ್ತಿಗೆ ಇನ್ನಷ್ಟು ವಿಸ್ತಾರ ನಿಡುವ ಆಲೋಚನೆಗೆ ಇಳಿದರು. ಇಪ್ಪತ್ತು ವರ್ಷದ ಹಿಂದೆ ಅವರು ತೆಗೆದುಕೊಂಡ ನಿರ್ಧಾರ ಇಂದು ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಿದೆ.
ಶ್ರಿಪಾದವರಿಗೆ ೩೦ ಗುಂಟೆ ಜಮೀನು, ಅದರಲ್ಲಿ ಐದು ಭಾಗವಾದರೆ ಇವರದ್ದು ಆರು ಗುಂಟೆ. ಇವೆಲ್ಲಾ ಲೆಕ್ಕಾಚಾರವನ್ನು ಮಾಡಿದ ಅವರು ವಿಳ್ಯದೆಲೆಯ ವ್ಯಾಪಾರವನ್ನು ತಾಳಗುಪ್ಪ ಸಂತೆಯಿಂದ ಸಾಗರದ ಸಂತೆಗೂ ವಿಸ್ತರಿಸುವ ನಿರ್ಧಾರ ಕೈಗೊಂಡರು. ಅಕ್ಕಪಕ್ಕದ ತೊಟದ ಕೃಷಿಕರಿಗೂ ವೀಳ್ಯದೆಲೆಬಳ್ಳಿ ಅಡಿಕೆ ಮರಕ್ಕೆ ಹಚ್ಚುವ ಹುರುಪು ನೀಡಿ, ವೀಳ್ಯದೆಲೆ ಕೊಯ್ದು ಮಾರಾಟದ ಹೊಣೆಯನ್ನು ತಾವು ಹೊತ್ತುಕೊಂಡರು. ತಮ್ಮ ತೋಟದಲ್ಲಿ ೧ ರಿಂದ ೨ ಸಾವಿರ ಸಿಗುತ್ತಿದ್ದ ವೀಳ್ಯದೆಲೆ ಹತ್ತು ಸಾವಿರಕ್ಕೆ ಏರಿತು. ಅಲ್ಲಿಂದ ನಿಧಾನವಾಗಿ ಇಪ್ಪತ್ತು ಸಾವಿರದ ಸಂಖ್ಯೆ ತಲುಪಿತು. ಅದರಿಂದಾಗಿ ಶನಿವಾರ ತಾಳಗುಪ್ಪ ಸಂತೆಗೆ ಸೀಮಿತವಾಗಿದ್ದ ಶ್ರೀಪಾದ ಗುರುವಾರದ ಸಾಗರದ ಸಂತೆಗೂ ಲಗ್ಗೆ ಇಟ್ಟರು. ಆದಾಯ ಹೆಚ್ಚುತ್ತಿದ್ದಂತೆ ಕೆಲಸದ ಒತ್ತಡವೂ ಹೆಚ್ಚಿತು. ೩೦ ಗುಂಟೆ ಜಮೀನಿನಲ್ಲಿ ಐದು ಪಾಲು ಮಾಡುವದಕ್ಕಿಂತ ಇನ್ನೆರಡು ಎಕರೆ ತೋಟ ಮಾಡಿದರೆ ಹೇಗೆ ಎಂಬ ಆಲೋಚನೆಗೆ ಪುಷ್ಠಿ ನೀಡಿ ಅನುಷ್ಠಾನ ಗೊಳಿಸಿದ ಶ್ರೀಪಾದ ಎಲ್ಲ ಸಹೋದರರಿಗೂ ತಮ್ಮ ಶ್ರಮದಿಂದ ೩೦ ಗುಂಟೆ ತೋಟ ಮಾಡಿಕೊಟ್ಟರು. ಅಲ್ಲಿಗೆ ತಮ್ಮ ಆರ್ಥಿಕ ಭದ್ರತೆಯ ಜತೆ ಸಹೋದರರ ಆರ್ಥಿಕ ಭದ್ರತೆಗೂ ವೀಳ್ಯದೆಲೆಯನ್ನು ಆಧರಿಸಿದರು.
ನೂರು ವೀಳ್ಯದೆಲೆಯ ಒಂದು ಕಟ್ಟಿಗೆ ಇಪ್ಪತ್ತು ವರ್ಷದ ಹಿಂದೆ ೨ ರೂಪಾಯಿ ಇಂದು ಇಪ್ಪತ್ತು ರೂಪಾಯಿ. ವಾರವೊಂದಕ್ಕೆ ಸಾಗರ ಹಾಗೂ ತಾಳಗುಪ್ಪದ ಎರಡು ಸಂತೆಯಿಂದ ಐದು ಸಾವಿರ ರೂಪಾಯಿಗಳನ್ನು ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸುವ ಅವರು, ಖರ್ಚು ವೆಚ್ಚ ಕಳೆದು ಹದಿನೈದು ಸಾವಿರ ಮಿಗಿಸುತ್ತಾರೆ. ಈ ತರಹದ ಅವರ ನಿರಂತರ ಶ್ರಮದ ಪ್ರತಿಫಲ ಈಗ ಕಣ್ಣೆದುರಿಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದಾರೆ, ಸೈಕಲ್ ನಿಂದ ಆರಂಭವಾದ ಅವರ ವೇಗ ಇಂದು ಮೋಟರ್ ಸೈಕಲ್ ಗೆ ಏರಿದೆ. ಗುಡಿಸಲ ಮನೆಯಿಂದ ಸುವ್ಯವಸ್ಥಿತ ಸಕಲ ಸೌಲಭ್ಯದ ಮನೆ ಇದೆ. ಇವಕ್ಕೆಲ್ಲಾ ಪತ್ನಿ ಗೀತಾ ಹಾಗು ಮಕ್ಕಳು ಮತ್ತು ತಾಯಿ ವೀಳ್ಯದೆಲೆ ಜೋಡಿಸುವಂತಹ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದೂ ಕಾರಣ ಎನ್ನುತ್ತಾರೆ ಶ್ರೀಪಾದ.
ಲಕ್ಕವಳ್ಳಿ,ಹಾಗೂ ನಾಗವಳ್ಳಿ ತಳಿಯ ವೀಳ್ಯದೆಲೆ ಮಲೆನಾಡಿನ ಅಡಿಕೆ ತೋಟಕ್ಕೆ ಸೂಕ್ತ ಎನ್ನುವ ಶ್ರೀಪಾದ, ಮಾರುಕಟ್ಟೆಯ ಏರಿಳಿತಗಳಿಗೆ ಚಿಂತಿಸದೆ ನಿರಂತರ ಕೆಲಸದಲ್ಲಿ ನಂಬಿಕೆ ಇಟ್ಟರೆ ಪ್ರತಿಫಲ ಖಂಡಿತ ಎನ್ನುತ್ತಾರೆ. ತಾಳಗುಪ್ಪ ಹಾಗೂ ಸಾಗರದ ಸಂತೆಯಲ್ಲಿ "ಎಲೆಭಟ್ರು" ಎಂದು ಜನಜನಿತವಾಗಿರುವ ಇವರು ಇರುವ ಜಾಗದಲ್ಲಿಯೇ ಆದಾಯ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡು ಬಾಳು ಬಂಗಾರವಾಗಿಸಿಕೊಂಡವರ ಸಾಲಿಗೆ ಸೇರಿ ಉದ್ಯೋಗ ವಿಲ್ಲ ಎಂದು ಅಲೆಯುವ ಜನರಿಗೆ ಮಾರ್ಗದರ್ಶಿಯಾಗಿದ್ದಾರೆ