Wednesday, February 23, 2011
ನಂಬಿ ಕೆಟ್ಟವರಿಲ್ಲವೋ ಎಂಬುದೂ ಇನ್ನೊಂದು ನಂಬಿಕೆಯಷ್ಟೆ.
ಹಿಂಗೆ ದುಡ್ಡು ಕೊಡೋಕೆ ಯಾರಿಗೇನು ಮಳ್ಳ, ...!
ನನಗೆ ಭತ್ತ ಬೆಳೆಯುವ ರೈತರೆಂದರೆ ಅದೋನೋ ಒಂಥರಾ ಅಕ್ಕರೆ. ಪಾಪ ಅವರುಗಳು ವರ್ಷಪೂರ್ತಿ(ಮಲೆನಾಡಿನಲ್ಲಿ ಅಂತಿಟ್ಟುಕೊಳ್ಳಿ) ಕಷ್ಟಪಟ್ಟರೂ ಪೂರ್ತಿ ಹೊಟ್ಟೆ ತುಂಬುವುದಿಲ್ಲ. ಹಾಗಾಗಿ ಅಂತಹ ರೈತರು ನನ್ನ ಸಾಮಿಪ್ಯಕ್ಕೆ ಸಿಕ್ಕಾಗ ಖುಶಿಯಾಗಿ ಮಾತನಾಡಿಸುತ್ತಲೇ ಇರುತ್ತೇನೆ. ಆದರೂ ಒಮ್ಮೊಮ್ಮೆ ಈ ಪ್ರೀತಿ ತೀರಾ ಯಡವಟ್ಟಿನ ಪ್ರಸಂಗಗಳಿಗೆ ನಾಂದಿಯಾಗುತ್ತದೆ.
ಒಂದು ದಿನ ಕಳೆದವರ್ಷ ಬಿರುಬೇಸಿಗೆಯಲ್ಲಿ ಸಾಗರಕ್ಕೆ ಹೋಗುತ್ತಿದ್ದೆ, ಅಕ್ಕಪಕ್ಕ ಭತ್ತದ ಗದ್ದೆಗಳು ಬಿಸಿಲಿಗೆ ಬಾಯ್ದೆರೆದು ನಿಂತಿದ್ದವು. ಹಾಗೆ ಹೋಗುತ್ತಿದಾಗ ಗದ್ದೆಬಯಲಿನಲ್ಲಿ ಎತ್ತು ಮೇಯಿಸಿಕೊಂಡು ವಯಸ್ಕನೊಬ್ಬನಿದ್ದ. ನನ್ನ ಮಂಡೆಗೆ ಒಂದು ಆಲೋಚನೆ ಪಳಕ್ಕನೆ ಮಿಂಚಿತು. ಪಾಪ ಈ ಭತ್ತ ಬೆಳೆಯುವವರು ಇಲ್ಲದಿದ್ದರೆ ಪ್ರಪಂಚ ಬಲು ಕಷ್ಟ, ನಮಗಾಗಿ ಅವರುಗಳು ಅವರ ಸ್ವಾರ್ಥದ ನಡುವೆಯೂ ಒಂದಷ್ಟು ಕೆಲಸ ಮಾಡುತ್ತಾರೆ, ಹಾಗಾಗಿ ನಾವೂ ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬಾರದೇಕೆ?, ಆಲೋಚನೆ ಮೂಡಮೂಡುತ್ತಿದ್ದಂತೆ ಕಾರು ರಸ್ತೆಬದಿಗೆ ನಿಲ್ಲಿಸಿ ಆತನತ್ತ ಹೆಜ್ಜೆ ಹಾಕತೊಡಗಿದೆ.
ಆತ ನನಗೆ ಅಪರಿಚಿತ ಹಾಗೆಯೇ ಆತನಿಗೆ ನಾನೂ... ಆದ್ದರಿಂದ ಆತ ನನ್ನನ್ನೇ ಎವೆಯಿಕ್ಕದೇ ನೋಡತೊಡಗಿದ. ನಾನು ಸೀದಾ ಅವನ ಹೋಗಿ " ನಾನು ....... ಊರಿನವನು ನನ್ನ ಹೆಸರು ...... ನೀವು ಭತ್ತ ಬೆಳೆದು ಉಪಕಾರ ಮಾಡುತ್ತೀರಿ, ಅದಕ್ಕಾಗಿ ನನಗೆ ಖುಷಿ, ನಾನು ನಿಮಗೆ ಸ್ವಲ್ಪ ಸಹಾಯ ಮಾಡಬೇಕೆಂದಿದ್ದೇನೆ ಎಂದು ಐದು ನೂರು ರೂಪಾಯಿ ಅವನಿಗೆ ಕೊಡಲು ಹೋದೆ.
ನಾನು ಕೊಟ್ಟ ಐದುನೂರು ರೂಪಾಯಿ ನೋಟು ಇಸಕೊಂಡು ಹಿಂದೆ ಮುಂದೆ ತಿರುಗಿಸಿ ನೋಡಿ ಆನಂತರ ಕೈಯೆತ್ತಿ ದೂರದಲ್ಲಿ ಇದ್ದ ಮತ್ತೊಬ್ಬನನ್ನು ಕೂಗಿ ಕರೆದ. ಸರಿ ನನ್ನ ಕೆಲಸವಾಯಿತಲ್ಲ ಎಂದು ನಾನು "ಆಯ್ತು ಬರ್ತೇನೆ" ಎಂದೆ. "ಸ್ವಲ್ಪ ಅಂವ ಬರಾಗಂಟ ಇರ್ರಿ" ಎಂದ ರೈತ. ಆಯ್ತಪ್ಪ ಎನ್ನುತ್ತಾ ನಿಂತೆ. ಕೆಲ ಸಮಯದ ನಂತರ ಆತ ಬಂದ, ಅವನೂ ಇವನು ಅದೇನೋ ಗುಸುಗುಸು ಪಿಸಪಿಸ ಮಾಡಿಕೊಂಡರು, ನಂತರ ಮತ್ತೊಬ್ಬಾತ ನನ್ನ ಬಳಿ ಬಂದು, ಊರು ಕೇರಿ ಎಲ್ಲಾ ವಿಚಾರಿಸಿದ . ಎಲ್ಲಾ ಹೇಳಿದ ಮೇಲೆ ಮೊದಲನೆಯವನ ಬಳಿ ಇದ್ದ ಐದುನೂರು ರೂಪಾಯಿ ಇಸಿದು ನನ್ನ ಕೈಗೆ ಕೊಡುತ್ತಾ " ಸುಮ್ನೆ ಇದ್ನ ತಗಂಡು ವಾಪಾಸು ಹೋಗಿ, ನಿಮ್ಮ ಆಟ ಎಲ್ಲಾ ನಮ್ತಾವ ನಡಿಯಾದಿಲ್ಲ" ಎಂದ . ನನಗೆ ಕಕ್ಕಾಬಿಕ್ಕಿ, ಯಾವ ಆಟ? ಆತನನ್ನು ಕೇಳಿದೆ. "ಅಯ್ಯಾ ಸುಮ್ನಿರಿ, ಸುಮ್ನೆ ಹಾದಿಮೇಲೆ ಹೋಗೋರಿಗೆಲ್ಲ ಹಿಂಗೆ ದುಡ್ಡು ಕೊಡೋಕೆ ಯಾರಿಗೇನು ಮಳ್ಳ, ಅದರ ಹಿಂದಿನ ಮರ್ಮ ನಂಗೆ ಗೊತ್ತೈತಿ, ಸುಮ್ನೆ ರೈಟ್ ಹೇಳಿ" ಎಂದು ಸ್ವಲ್ಪ ಬಿರುಸಾಗಿ ಹೇಳಿದ. ಬೇರೆ ದಾರಿ ಕಾಣದೆ ನಾನು ತೆಪ್ಪನೆಯ ಮುಖ ಹಾಕಿಕೊಂಡು ವಾಪಾಸು ಹೊರಟೆ.
ನಾನು ಒಂಥರಾ ವಿಚಿತ್ರ ಪರಿಸ್ಥಿತಿಗೆ ಸಿಕ್ಕಿದ್ದೆ. ಹೌದು ನಾನು ಮಾಡಿದ್ದ ಕೆಲಸ ಎಲ್ಲರೂ ಮಾಡದಿರುವದ್ದು, ಮತ್ತೆ ಹಾಗೆಲ್ಲ ಹೀಗೆಲ್ಲಾ ಮಾಡಬಾರದು ಅಂತ ಸಮಾಜ ಅಘೋಷಿತವಾಗಿ ತೀರ್ಮಾನಿಸಿಬಿಟ್ಟಿದೆ. ಹೀಗೆಲ್ಲಾ ಸಹಜವಾಗಿರದ್ದನ್ನು ಮಾಡಹೊರಟರೆ ಹೀಗೆ ಆಗುವುದು ಎನ್ನುತ್ತಾ ನನ್ನ ಮಂಡೆಗೆ ಹೊಳೆದ ಉಪಾಯವನ್ನು ಶಪಿಸುತ್ತಾ ಕಾರಿನತ್ತ ಹೆಜ್ಜೆಹಾಕಿದೆ. ಆನಂತರವೂ ಚೌರ ಮಾಡಿಸದ ದಿನಗಳಲ್ಲಿ ಮಂಡೆಯೊಳಗಿನಿಂದ ಇದೇ ತರಹ ಐಡಿಯಾಗಳು ಬರುತ್ತಲೇ ಇರುತ್ತವೆ ಆದರೆ ಅನುಷ್ಠಾನಕ್ಕೆ ಹೋಗಿರಲಿಲ್ಲ. ಮತ್ತೆ ಬ್ಲಾಗಿನ ಹಿಂದಿನ ಪೋಸ್ಟ್ ನಲ್ಲಿ ಅದೇ ತರಹದ ಅನುಭವ ಆಗಿ ಬೆಚ್ಚಿದೆ. ಥೋ.....ಛೆ ...ಎನ್ನುತ್ತಾ.
Tuesday, February 22, 2011
ತೀರ್ಪುಗಾರ ನಾನಲ್ಲ. ಬಹುಮಾನ ನಿಮಗೆ
ಪ್ರಿಯ ಓದುಗರೇ,
ಹಿಂದೆ ಯಾವುದೋ ಒಂದು ಪೋಸ್ಟ್ ನಲ್ಲಿ ನಾನು ಹಲುಬಿದ್ದೆ, ವಿಜಯಕರ್ನಾಟಕಕ್ಕೆ ನಾನು ಬರೆದ ಲೇಖನಕ್ಕೆ ಸರಿ ಸುಮಾರು ೧೨ ಸಾವಿರ ಸಂಭಾವನೆಯನ್ನೇ ಕಳುಹಿಸಿಲ್ಲ, ಮೈಲ್ ಮಾಡಿದರೂ ಉತ್ತರವಿಲ್ಲ ಹಾಗೆ ಹೀಗೆ ಲೊಂಗೆ ಲೊಟ್ಟೆ ಎಂದೆಲ್ಲಾ. ಮೈಲ್ ಮಾಡಿಲ್ಲವಾದರೂ ೪೩೫೦ ರೂಗಳ ಚೆಕ್ ಕಳುಹಿಸಿದ್ದಾರೆ. ಧನ್ಯವಾದ ಅವರಿಗೆ. ಈಗ ಅನ್ನಿಸುತ್ತೆ ಬ್ಲಾಗ್ ಬರೆಯಬಾರದಿತ್ತು(ನೋಡು ಹಣ ಎಂದ ಕೂಡಲೇ ದನಿಯೇ ಬದಲಾಯಿತು ಎಂದಿರಾ...? ಒಕೆ ಇರ್ಲಿ ಬಿಡಿ) ಆದರೂ ಬರೆದಾಯಿತಲ್ಲ ಹೋಗಲಿ ಬಿಡಿ. ಈಗ ನೇರ ವಿಷಯಕ್ಕೆ ಬರೋಣ. ಈಗ ಐದು ನೂರು ರೂಪಾಯಿಗಳ ಬಹುಮಾನವಿರುವ ಒಂದು ಸಣ್ಣ ಸ್ಪರ್ಧೆ ಈ ನನ್ನ ಬ್ಲಾಗ್ ಓದುಗರಿಗೆ. ನೀವು ಮಾಡಬೇಕಾದ್ದು ಇಷ್ಟೆ. ಕನ್ನಡದ ಯಾವ್ ಬ್ಲಾಗ್ ನಿಮಗೆ ಅತ್ಯಂತ ಇಷ್ಟವಾಯಿತು? ಕಾರಣವೇನು?
ಚಿಕ್ಕದಾದ ಚೊಕ್ಕದಾದ ಇಷ್ಟವಾದ ಬ್ಲಾಗ್ ಹಾಗೂ ಕೊಡುವ ಕಾರಣದ ಮೇಲೆ ತೀರ್ಪು. ತೀರ್ಪುಗಾರ ನಾನಲ್ಲ. ಬಹುಮಾನ ನಿಮ್ಮ ಅಕೌಂಟ್ಗೆ ಬಂದು ಬೀಳುತ್ತದೆ. ಶುರು ಹಚ್ಕೊಳ್ಳಿ..... (ಈ ತಿಂಗಳಾಂತ್ಯ ಗಡವು) ಮೈಲ್ ಮೂಲಕವೂ ತಿಳಿಸಬಹುದು (shreeshum@gmail.com)
ಬ್ಲಾಗೇ ಬೇಡ ಬರೇ ಕಾಮೆಂಟೇ ಸಾಕು ಎನ್ನಿಸುವಷ್ಟು
ಏನಾಗುತ್ತೆ ಎಂದರೆ ಲೇಖನಕ್ಕಿಂತ ಕಾಮೆಂಟೇ ಸೂಪರ್ರಾಗಿರುತ್ತೆ , ಸಿನೆಮಾಗಿಂತ ಟೈಟಲ್ಲೇ ಚೆನ್ನಾಗಿರುತ್ತೆ, ಹುಡುಗಿಗಿಂತ ಡ್ರೆಸ್ಸೇ ಮಜವಾಗಿರುತ್ತೆ, ಹೀಗೆ ಇದು ಮುಂದುವರೆಯುತ್ತೇ,
ಹೀಗೆಲ್ಲಾ ಏಕೆ ಎಂದರೆ ನಾವು ಗಂಟೆಗಟ್ಟಲೆ ತಲೆ ಖರ್ಚು ಮಾಡಿ ಒಂದು ಬ್ಲಾಗು ಕುಟ್ಟುತ್ತೇವೆ, ಸಂಡಾಸು ಮನೆಯಲ್ಲಿ ಕುಂತಾಗಲೋ, ಇನ್ನೇನು ನಿದ್ರೆ ಹತ್ತಿತು ಎನ್ನುವಾಗಲೋ, ಹಲ್ಲಲ್ಲಿ ಅಡಗಿ ಕುಳಿತ ಸಾಸಿವೆ ಕಾಳನ್ನು ಕೀಳುವಾಗಲ ಮಂಡೆಯಲ್ಲಿ ಪಳಕ್ಕನೆ ಮಿಂಚುವ ಯೋಚನೆಯನ್ನು ಅಕ್ಷರರೂಪಕ್ಕೆ ಇಳಿಸಿ ಬ್ಲಾಗು ಕುಟ್ಟಿ ಉಸ್ ಎಂದು ನಿಟ್ಟುಸಿರು ಬಿಟ್ಟು ತಾಸಿನೊಳಗೆ ಮೂರ್ನಾಲ್ಕು ಸಾಲಿನ ಕಾಮೆಂಟು ನಮ್ಮ ಇಡೀ ಬ್ಲಾಗಿನ ಗಂಟೆಗಟ್ಟಲೆ ಕೊರೆದ ಸಾಲುಗಳ ಸಾರವನ್ನು ಹೀರಿ ಹೇಳಿಬಿಡುತ್ತೆ, ನನ್ನ ಹಿಂದಿನ ಪೋಸ್ಟ್ "ಹೋಗಲಿ ಬಿಡಿ ಮತ್ತೆ ಸಿಗೋಣ" ಕ್ಕೆ ಮೂರೇ ಮೂರು ಕಾಮೆಂಟು ಬಂದಿದೆ, ೧ ಹೊಸ್ಮನೆ ಮುತ್ತು ೨ ಮೃತ್ಯುಂಜಯ ಹೊಸ್ಮನೆ ೩ ರಮ್ಯಾ. ಅವು ಮೂರು ಓದಿದರೆ ನಾನು ಇಷ್ಟು ಬರೆಯಲು ಅಷ್ಟೆಲ್ಲಾ ಸಾಲುಗಳನ್ನು ಕುಟ್ಟಿದೆನಾ ? ಅನ್ನಿಸಿಬಿಡುವಷ್ಟು. ನಿಜವಾಗಿಯೂ ಬ್ಲಾಗೇ ಬೇಡ ಬರೇ ಕಾಮೆಂಟೇ ಸಾಕು ಎನ್ನಿಸುವಷ್ಟು,.
Muthu said...
ರಾಗಣ್ಣಾ....ದುಡ್ಡು ಎಂದರೆ ಶುದ್ಧ ಉಪ್ಪು.
ತುಸುವೇ ನಾಲಿಗೆ ಮೇಲಿಟ್ಟು ಕೊಂಡರೆ
ರುಚಿ. ಹೆಚ್ಚಾಗಿ ತಿಂದರೆ ದಾಹ.ಇದು
ಕಾರಂತಜ್ಜನ ಮಾತೋ
Mruthyunjaya.H said...
ತಮ್ಮಲ್ಲಿ ಜ್ಞಾನವಿಲ್ಲ ಎಂದು ಕೊರಗುವವರು ಕಡಿಮೆ.ತಮ್ಮಲ್ಲಿ ಹೃದಯವಂತಿಕೆಯಿಲ್ಲ ಎಂದು ಕೊರಗುವವರು ಇನ್ನೂ ಕಡಿಮೆ.ಹಣವಿಲ್ಲ ಎಂದು ಕೊರಗುತ್ತಿರುವವರಿಗೆ ಹಣ ಸಿಕ್ಕ ಕೂಡಲೇ ಅದನ್ನು ಜಗಜ್ಜಾಹೀರು ಮಾಡಿಕೊಳ್ಳುವ ತವಕ. ಯಾಕೆಂದರೆ ಅವರ ಬಳಿ ಈಗಲೂ ಈಗಲೂ ಏನೂ ಇಲ್ಲ ಹಣದ ಹೊರತಾಗಿ!
ಮತ್ತೆ ನಾನು ರವಿಬೆಳೆಗೆರೆಯವರನ್ನು ಎಂದೂ ಓದಿಲ್ಲ!
Ramya said...
Hey Raghu mava, good story I had to open my Fully loaded Laptop and connect to home interenet to read ur article, by that time my Microwave oven had cooke food it was beeping, since it was very hot I had to switch on AC still I dint give up I was reading ur article and my Hubs came by then tired by traffice bcoz of his Big CAR :) Henge!!!!
Monday, February 21, 2011
ಹೋಗಲಿ ಬಿಡಿ ಮತ್ತೆ ಸಿಗೋಣ .
ರವಿಬೆಳೆಗೆರೆಯ ಹಾಯ್ ಬೆಂಗಳೂರನ್ನು ಇತ್ತೀಚಿನ ವರ್ಷಗಳಲ್ಲಿ ಓದಿರಲೇ ಇಲ್ಲ. ಭಟ್ರ ಸುದ್ದಿ ಬಂದ ಒಂದೆರಡು ವಾರ ಓದಿದೆ. ರವಿಬೆಳೆಗೆರೆಯಂತಹ ರವಿಬೆಳೆಗೆರೆ ಅಕ್ಷರದ ಮೂಲಕ ಸೂಪರ್ ಪ್ರಪಂಚ ಕಟ್ಟುವ ತಾಕತ್ತು ಇದ್ದ ಜನ ಹೇಗೆ ಹಣದ ಹಿಂದೆ ಬಿದ್ದಿದ್ದಾರೆಂದರೆ ಆಶ್ಚರ್ಯವಾಗುವಷ್ಟು. ಯಾವ ಬರಹವೂ ಹಣದ ತನ್ನ ಸ್ವಂತ ಆಸ್ತಿಯ ವಿವರಗಳಿಲ್ಲದೆ, ಎಸ್ ಬಿ ಅಕೌಂಟ್ ನಲ್ಲಿ ನಾಲ್ಕು ಕೋಟಿಯ ಸುದ್ದಿ ಇಲ್ಲದೆ ಮುಕ್ತಾಯವಾಗದು ಎನ್ನುವಷ್ಟು . ನನ್ನ ಪುಸ್ತಕ ಅಷ್ಟು ಸೇಲ್ ಆಯಿತು, ನನ್ನ ಪುಸ್ತಕಕ್ಕೆ ಆ ಹುಡುಗ ಅಷ್ಟು ಪ್ರಿಂಟ್ ಮಾಡಿ ಅಂದ, ನಾನು ಅಷ್ಟು ಗುಡ್ಡೆ ಹಾಕಿದೆ ಅಬ್ಬಬ್ಬಾ ಅದರ ಪರಿ ತನ್ನ ಬಳಿ ಹೇರಳ ಸಂಪತ್ತು ಇದೆ ಎನ್ನುವ ಮನುಷ್ಯನ ಸಹಜ ಸ್ವಭಾವ ತೋರ್ಪಡಿಸುವ ವಿಧಾನ ರವಿಯಂತಹ ಬೆಳೆಗೆರೆಗೆ ಬಿಟ್ಟಿಲ್ಲ ಎಂದಮೇಲೆ ಹುಲುಮಾನವರ ಗತಿಯೇನು?.
ನನ್ನ ಹತ್ತಿರದ ನೆಂಟರೊಬ್ಬರು ತಮ್ಮ ಸಂಪತ್ತನ್ನು ಹೀಗೆ ವಿವರಿಸುತ್ತಾರೆ . "ಅಯ್ಯೋ ಬೆಳಿಗ್ಗೆ ಏಳುವಾಗ ಕರಿಮಿಣಿಸರ ರಗ್ಗಿಗೆ ಹಿಡಿದುಕೊಂಡು ಬಿಟ್ಟಿತ್ತು, ಆ ಶಾಲು ದುಬೈನಿಂದ ಹತ್ತು ಸಾವಿರ ಕೊಟ್ಟು ತರಿಸಿದ್ದು ಮಾರಾಯ್ತಿ, ಅದರ ಚುಂಗು ಸರಕ್ಕೆ ಹಿಡಿದುಕೊಂಡು ರಾಮಾಯಣ ಬ್ಯಾಡ, ಇವರು " ಅಯ್ಯಾ ಸರ ಹೊದರೆ ಹೋಗಲಿ ಎಳೆದು ತೆಗಿ ಅದನ್ನ, ಅದೇನು ದೊಡ್ಡದಾ ಎರಡು ಲಕ್ಷದ್ದು ಸೈಯಲ, ಸಂಜೆನೇ ಬೇರೇದು ತಂದ್ರೆ ಸೈ" ಅಂತ ಹೇಳಿದ್ರು ಆದ್ರೆ ಹಂಗೆಲ್ಲ ೨ ಲಕ್ಷದ ಸರ ಹರಿದು ಬಿಡಲೆ ಮನಸ್ಸಾದ್ರೂ ನಮಗೆ ಬರುತ್ತಾ?, " ಹೀಗೆ ಅವಳ ಮಾತು ತನ್ನಲ್ಲಿರುವ ಶ್ರೀಮಂತಿಕೆಯ ಎಲ್ಲಾ ವಸ್ತುಗಳ ದರಪಟ್ಟಿ ಹೇಳುತ್ತಾ ಮುಂದುವರೆಯುತ್ತದೆ.
ಇಷ್ಟಕ್ಕೆಲ್ಲಾ ಕಾರಣ ಹಣವೆಂಬ ಹಣ ರವಿಬೆಳೆಗೆರೆಯಿಂದ ಹಿಡಿದು ಆ ಅವಳ ತನಕ ಅವರ ಅರ್ದ ಆಯುಷ್ಯದ ನಂತರ ಸಿಕ್ಕಿರುತ್ತದೆ. ಅಲ್ಲಿಯವರೆಗೆ ಅವರಿಗೆ ಆಯ್ದುಕೊಂಡು ತಿನ್ನುವಂತಹಾ ಬದುಕು. ಅಂತಹ ಜನರಿಗೆ ಹೀಗೆ ತಮಗೆ ಕಂಡ ಶ್ರೀಮಂತಿಕೆಯನ್ನು ಹೇಳುತ್ತಾ ಸಾಗುವುದೇ ದೊಡ್ಡ ಕೆಲಸ ಕಸುಬು.
ಹುಟ್ಟಾ ಶ್ರೀಮಂತರೂ ಹಾಗೂ ನಮ್ಮ ನಿಮ್ಮಂಥಹ ಜನ ಎಂದೂ ಆ ತಂಟೆಗೆ ಹೋಗುವುದಿಲ್ಲ. ತಂಟೆಗೆ ಹೋಗುವುದಿಲ್ಲ ಎಂದರೆ ಆ ಮಾತು ಏಕೆ ಎಂದಿರಾ?, ಹೋಗಲಿ ಬಿಡಿ ಮತ್ತೆ ಸಿಗೋಣ .