ಸನ್ಯಾಸ ಎಂದರೆ ಪ್ರವಾಹದ ವಿರುದ್ಧ ಈಜುವುದು ಅಂತ ಅನ್ನಬಹುದು. ಅಲ್ಲಿ ಎಷ್ಟರಮಟ್ಟಿಗಿನ ಮಾನಸಿಕ ಸ್ಥಿರತೆ ಇದೆಯೋ ಅಷ್ಟರ ಮಟ್ಟಿಗಿನ ಏರುಗತಿ ಸಾದ್ಯ. ಹಾಗಾಗಿ ಪ್ರಸ್ತುತಕ್ಕೆ ಒಂದು ಸ್ನ್ಯಾಸಿಯ ಕತೆಯತ್ತ ಹೊರಳೋಣ.
ಯಥಾಪ್ರಕಾರ ಒಂದಾನೊಂದು ಊರು ಅಲ್ಲೊಬ್ಬ ಸನ್ಯಾಸಿ ಇದ್ದ. ಆತ ಜಪ ತಪ ಗಳಲ್ಲಿ ಮುಳುಗೇಳುತ್ತಾ ಪಾಮರರಿಗೆ ಸನ್ಮಾರ್ಗ ತೋರಿಸುತ್ತ ತಾನೂ ಭಗವಂತನತ್ತ ಸಾಗುವ ಪಯಣದಲ್ಲಿ ಮಗ್ನನಾಗಿದ್ದ. ಹೀಗೆ ಇರಬೇಕಾದ ಒಂದು ದಿನ ಆ ಊರಿನಲ್ಲಿ ಘಟನೆಯೊಂದು ನಡೆಯಿತು. ಮದುವೆಯಾಗದ ಸುಂದರಿಯೊಬ್ಬಳು ಮಗುವಿಗೆ ಜನ್ಮ ನೀಡಿದಳು. ಜಡಭರಿತ ಊರಿನ ಜನರಿಗೆ ಮಾತನಾಡಲು ಭರ್ಜರಿ ವಿಷಯ. ಯಾರು? ಆಕೆಯ ಈ ಸ್ಥಿತಿಗೆ ತಂದವನು ಎಂಬ ಕುತೂಹಲದ ಮಾತುಗಳು ಹರಿದಾಡಲಾರಂಬಿಸಿತು. ಹೀಗೆಲ್ಲಾ ಆಗುವುದು ಎಂದರೆ ಊರಿನ ಮರ್ಯಾದೆ ಹರಾಜು ಎಂಬ ಲೆಕ್ಕಾಚಾರ ಹಿರಿಕರಿದ್ದಾದ್ದರಿಂದ ಸರಿ ಪಂಚಾಯ್ತಿ ಕಟ್ಟೆ ಸೇರಿಯಾಯಿತು. ಹಸುಗೂಸಿನ ತಾಯಿ ಮಗುವಿನ ಸಮೇತ ಪಂಚಾಯ್ತಿ ಕಟ್ಟೆ ಏರಿದಳು. ಪಂಚರ ಸಮ್ಮುಖದಲ್ಲಿ ವಿಚಾರಣೆ ಆರಂಭಗೊಂಡು ಅಂತಿಮವಾಗಿ ಆಕೆಯ ಬಳಿ ಈ ಕೂಸಿನ ತಂದೆ ಯಾರು? ಮತ್ತು ಆತನನ್ನು ದಂಡಿಸಬೇಕು ಎಂದು ಕೇಳಲಾಯಿತು. ಬಹಳ ಹೊತ್ತು ಸುಮ್ಮನಿದ್ದ ಆಕೆ ಕೊನೆಗೂ ಒತ್ತಡ ತಡೆಯಲಾರದೆ " ಈ ಕೂಸಿನ ಅಪ್ಪ ಅದೇ ಸನ್ಯಾಸಿ" ಎಂದು ಹೇಳಿದಳು.
ಒಮ್ಮೆಲೆ ಇಡೀ ಸಭೆ ಮೌನವಾಯಿತು. ಆತ ಹೇಳಿಕೇಳಿ ಮಹಾನ್ ಆಧ್ಯಾತ್ಮಿಕ ಮನುಷ್ಯ ಅವನನ್ನು ಶಿಕ್ಷಿಸುವುದು ಹೇಗೆ? ಎಂಬ ವಿಷಯ ಎಲ್ಲರಲ್ಲಿಯೂ. ಹೀಗೆ ಗಂಟೆಗಟ್ಟಲೆ ಜಿಜ್ಞಾಸೆ(ಈಗಿನ ಜಿಗ್ನಾಸೆ) ನಡೆದು ಅಂತಿಮವಾಗಿ "ಹಸುಗೂಸಿನ ಜನ್ಮಕ್ಕೆ ಸನ್ಯಾಸಿ ಕಾರಣ ಎಂದಾದಮೇಲೆ ಅದರ ಲಾಲನೆಗೂ ಅವನೇ ಜವಾಬ್ದಾರಿ" ಎಂದು ತೀರ್ಮಾನಿಸಿ ಆತನ ಬಳಿ ಹಸುಗೂಸನ್ನು ಒಯ್ದುಬಿಡಬೇಕು, ಹಾಗೂ ಆತನಿಗೆ ಊರಿನಲ್ಲಿ ಯಾರೂ ಬಿಕ್ಷೆ ನೀಡಬಾರದು " ಎಂಬ ಠರಾವಿನೊಂದಿಗೆ ಪಂಚಾಯ್ತಿ ಮುಗಿಯಿತು. ಸನ್ಯಾಸಿಯನ್ನು ಠಕ್ಕ ಕಪಟಿ ಮೋಸಗಾರ ಮುಂತಾದ ಶಬ್ಧಗಳೊಂದಿಗೆ ಬಯ್ಯುತ್ತಾ ಜನರು ಮನೆ ಸೇರಿದರು.
ದಿನತುಂಬಿದ ಕೂಸನ್ನು ಸನ್ಯಾಸಿಯಬಳಿ ಬಿಟ್ಟು ಊರ ಜನರು ದೂರ ನಡೆದರು. ಸನ್ಯಾಸಿ ಮುಗುಳ್ನಕ್ಕು ಮಗುವನ್ನು ಮುದ್ದಿಸಿದ. ಸ್ವಲ್ಪ ಸಮಯದ ನಂತರ ಮಗು ಹಸಿವಿಯಿಂದ ಅಳಲಾರಂಬಿಸಿತು. ಸನ್ಯಾಸಿಯ ತೀರ್ಥ ಗಳು ಮಗುವಿನ ಅಳುವನ್ನು ನಿಲ್ಲಿಸಲಿಲ್ಲ. ಸನ್ಯಾಸಿ ಈಗ ಅಧೀರನಾದ ತಾನು ಹೇಳಿಕೇಳಿ ಸನ್ಯಾಸಿ ಮಗುವಿನ ಹಸಿವೆ ನೀಗಿಸಲು ತನ್ನ ಬಳಿ ಏನಿಲ್ಲವಲ್ಲ ಈಗ ಏನಾದರೂ ಮಾಡಲೇಬೇಕು ಎಂದು ಅಳುವ ಮಗುವನ್ನು ಜೋಳಿಗೆಗೆ ಹಾಕಿಕೊಂಡು ಊರಮೇಲೆ ಹೊರಟ. ಮನೆಬಾಗಿಲಿನಲ್ಲಿ ಸನ್ಯಾಸಿಯನ್ನು ಕಂಡ ಜನ ಒಬ್ಬೊಬ್ಬರಾಗಿ ಠಪ್ಪಂತ ಬಾಗಿಲು ಹಾಕಿಕೊಂಡರು. "ನೀ ಮಾಡಿದ್ದು ನೀನೆ ಅನುಭವಿಸು" ಎಂದರು ಸನ್ಯಾಸಿ ಮುಗುಳ್ನಕ್ಕ ಮತ್ತು ಮುಂದಿನ ಮನೆಗೆ ಹೋಗಿ " ಮಗು ಹಸಿವೆಯಿಂದ ಅಳುತ್ತಿದೆ ಅದಕ್ಕೆ ಏನಾದರೂ ನೀಡಿ" ಎಂದ. ಅಲ್ಲೂ ಇದೇ ಬೈಗಳದ ಪುನರಾವರ್ತನೆ. ಆದರೂ ಸನ್ಯಾಸಿ ಎದೆಗುಂದಲಿಲ್ಲ ಆತನಿಗೆ ಭಗವಂತನ ಮೇಲೆ ಅಪಾರ ನಂಬಿಕೆ. ಹೀಗೆ ಸಾಗುತ್ತಾ ಸಾಗುತ್ತ ಆತ ಆ ಹಸುಗೂಸಿನ ತಾಯಿಯ ಮನೆಬಾಗಿಲಿಗೆ ಬಂದ ಮತ್ತು ಮಗುವಿನ ಹಸಿವೆಯ ಸುದ್ದಿ ಹೇಳಿ ಭಿಕ್ಷೆ ಕೇಳಿದ. ಈಗ ಅಚ್ಚರಿ ನಡೆಯಿತು. ಆ ತಾಯಿಯ ಮನೆಯವರು ಟಪ್ಪಂತ ಬಾಗಿಲು ಹಾಕಿದರೂ ಹಸುಗೂಸಿನ ತಾಯಿಗೆ ಮಾತ್ರಾ ಹಾಗೆ ಮಾಡಲಾಗಲಿಲ್ಲ. ಆಕೆ " ಸ್ವಾಮಿ ನನ್ನನ್ನು ಕ್ಷಮಿಸಿ" ಎಂದು ಸನ್ಯಾಸಿಯ ಕಾಲು ಹಿಡಿದು ಕೇಳಿಕೊಂಡು ನಂತರ ಮಗುವನ್ನು ಸನ್ಯಾಸಿಯಿಂದ ಎತ್ತಿಕೊಂಡು ಹಾಲುನೀಡಿ ಸಂತೈಸಿದಳು. ಮಗು ಅಳುವುದು ನಿಂತಮೇಲೆ ತಾಯಿ ಸನ್ಯಾಸಿಯ ಬಳಿ" ಸ್ವಾಮಿ ಈ ಮಗುವಿನ ತಂದೆ ನೀವಲ್ಲ , ಆದರೆ ಇದಕ್ಕೆ ಕಾರಣೀ ಕರ್ತನಾದವನ ಹೆಸರು ಹೇಳಿದರೆ ಆತನಿಗೆ ಘೋರ ಶಿಕ್ಷೆಯಾಗುತ್ತದೆಯೆಂಬ ಕಾರಣದಿಂದ ನಿಮ್ಮ ಹೆಸರು ಹೇಳಿದೆ, ನನ್ನ ತಪ್ಪನ್ನು ಮನ್ನಿಸಿ" ಎಂದು ಕಾಲಿಗೆ ಬಿದ್ದಳು. ಸನ್ಯಾಸಿ ಆಗಲೂ ಮುಗುಳ್ನಕ್ಕ ಅಷ್ಟೆ.
ಈ ಸುದ್ದಿ ಕ್ಷಣಮಾತ್ರದಲ್ಲಿ ಊರಿನಲ್ಲ್ಲೆಲ್ಲಾ ಹಬ್ಬಿತು . ತಕ್ಷಣ ಊರಿನ ಹಿರಿಕರಿಗೆ ತಮ್ಮ ತಪ್ಪಿನ ಅರಿವಾಗಿ ಸನ್ಯಾಸಿಯ ಕ್ಷಮೆಕೇಳಲು ಸ್ಥಳಕ್ಕೆ ಧಾವಿಸಿದರು. " ಅಯ್ಯಾ ಮಹಾತ್ಮರೆ ನೀವು ಈ ಮಗುವಿನ ಜನ್ಮಕ್ಕೆ ಕಾರಣ ಅಲ್ಲ ಅಂದಾದಮೇಲೆ ಆವಾಗ ಯಾಕೆ ಸುಮ್ಮನಿದ್ದೀರಿ ?. ನಮ್ಮಿಂದ ಅಪರಾಧವಾಯಿತು ಮನ್ನಿಸಿ " ಎಂದು ಕಾಲಿಗೆ ಬಿದ್ದರು. ಜನರೆಲ್ಲಾ " ಸನ್ಯಾಸಿ ಉಘೇ ಉಘೇ, ಇವರೇ ಮಹಾತ್ಮರು, ದೇವರು" ಎಂದೆಲ್ಲಾ ಜೈಕಾರ ಹಾಕತೊಡಗಿದರು. ಸನ್ಯಾಸಿ ಆವಾಗಲೂ ಮುಗಳ್ನಕ್ಕರು ಮತ್ತು ಹೇಳಿದರು. " ನೀವುಗಳು ಆವಾಗ ಆಪಾದನೆ ಹೊರಿಸಿದಾಗಲೂ ನನಗೆ ತಗುಲಲಿಲ್ಲ ಮತ್ತು ಈಗ ಜೈಕಾರ ಹಾಕಿದಾಗಲೂ ಅದು ತಗುಲಲಿಲ್ಲ"
ನೀತಿ: ರಗಳೆ ರಾಮಾಯಣದಿಂದ ದೂರವಿರಲು "ಐಪಿಲ್" ಬಳಸಿ.