ತರಕಾರಿಯ ದರ ಆಕಾಶಕ್ಕೆ ಏರಿದೆ ಅಂತ ಗೊಣಗುಟ್ಟುವ ಜನರಿಗೆ ಯಾವತ್ತೂ ಕಡಿಮೆಯಿಲ್ಲ. ಇಲ್ಲೊಂದು ಬೆಂಡೆಗಿಡ ಆ ಮಾತಲ್ಲಿನ ಆಕಾಶಕ್ಕೆ ಎಂಬಷ್ಟೆ ಶಬ್ಧವನ್ನು ಅದೆಲ್ಲಿಯೋ ಕೇಳಿಸಿಕೊಂಡಿರಬೇಕು. ಹಾಗಾಗಿ ಎದೆಮಟ್ಟಕ್ಕೆ ಬೆಳೆದು ಫಸಲು ನೀಡಬೇಕಾಗಿದ್ದ ಬೆಂಡೆ ಗಿಡ ಬೆಳೆಯುತ್ತಲೇ ಸಾಗಿದೆ. ಅದೂ ಅಂತಿತಹ ಎತ್ತರವಲ್ಲ ಅನಾಮತ್ತು ಹದಿನೈದು ಅಡಿ. ಸಾಮಾನ್ಯವಾಗಿ ಬೆಂಡೆಗಿಡ ಎಂದರೆ ಮೂರ್ನಾಲ್ಕು ಅಡಿ ಎತ್ತರಕ್ಕೆ ಏರಿ ಗಣ್ಣು ಗಣ್ಣಿಗೂ ಕಾಯಿಬಿಟ್ಟು ಮನುಷ್ಯರ ಹೊಟ್ಟೆ ತಂಪಾಗಿಸುತ್ತದೆ. ಆದ್ರೆ ಈ ಗಿಡಕ್ಕೆ ಅದೇನನ್ನಿಸಿತೋ ಏನೋ ಬೆಳೆಯುತ್ತಲೇ ಸಾಗಿದೆ.
ಸಾಗರ ತಾಲ್ಲೂಕು ಕಡವಿನಮನೆಯ ಸವಿತ ಎಂಬುವವರು ನೆಟ್ಟ ಈ ಗಿಡ ಈಗ ಅವರ ಕೈಗೂ ಎಟುಕುವುದಿಲ್ಲ. ಹದಿನೈದು ಅಡಿ ಎತ್ತರದ ಮೇಲೆ ಒಂದು ಗೊಂಚಲು ಕಾಯಿಬಿಟ್ಟು ತೊನೆದಾಡುತ್ತಿದೆ. ಪೇಟೆಗೆ ಹೋಗಿ ಬೆಂಡೆ ಕೊಳ್ಳೋಣಾವೆಂದರೆ ದುಬಾರಿ ದರ ಕೈಗೆಟುಕದು ಎಂದು ಮನೆಯಲ್ಲಿ ಬೀಜ ಬಿತ್ತಿ ಗಿಡಬೆಳೆದು ತರಕಾರಿ ಕೊಯ್ದು ಜತೆಯಲ್ಲಿ ಬೆಳೆದ ಪೋಸ್ ಕೋಡೋಣ ಎಂದರೆ ದುರಂತ ನೋಡಿ ಇಲ್ಲೂ ಕೈಗೆಟುಕದೇ ಗಗನಕ್ಕೇರಿ ನಿಂತಿದೆ ಬೆಂಡೆ. ಬೆಂಡೆ ಗಿಡವನ್ನು ಬೆಂಡಾಗಿಸಿ ಕಾಯಿ ಕೊಯ್ಯೋಣವೆಂದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?. ಎಂಬ ಪ್ರಶ್ನೆ ಬೆಳೆದವರಿಗೆ. ತಳಕುತ್ತಾ ಬಳುಕುತ್ತಾ ಫಿಂಗರ್ ಗೆ ಎಟುಕದಂತೆ ಬೆಳೆದು ನಿಂತ ಈ ಲೇಡಿಸ್ ಫಿಂಗರ್ ನೋಡಲಂತೂ ಬಲು ಅಚ್ಚರಿಯೇ ಸರಿ.
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ)