ನಮ್ಮನ್ನು ಗುರುತಿಸಲು ಹೆಸರು ಅಂತ ಯಾವ ಪುಣ್ಯಾತ್ಮ ಕಂಡು ಹಿಡಿದನೋ ಅವನ ಹೆಸರು ತಿಳಿದಿದ್ದರೆ ಉದ್ದಂಡ ನಮಸ್ಕಾರ ಮಾಡಬಹುದಿತ್ತು. ಒಮ್ಮೊಮ್ಮೆ ಹೆಸರುಗಳಿಂದ ಅವಾಂತರಗಳು ಆದಾಗಲೆಲ್ಲಾ ನನಗೆ ಹೀಗೆ ಅನ್ನಿಸುತ್ತದೆ. ಹುಟ್ಟಿದ ದಿವಸ ನಾಮಕರಣದವರೆಗೆ ಚೋಟುದ್ದ ಇರುವ ದೇಹ, ಅಮ್ಮನ ಅಕ್ಕಪಕ್ಕ ಸುಳಿದಾಡುವವರ ಮೂಲಕ ಒಂದು ಹೆಸರನ್ನು ಪಡೆಯುತ್ತದೆ . ಅವರೋ ಆ ದೇಹಕ್ಕೂ ರೂಪಕ್ಕೂ ಹೋಲದ ಅವರ ಮಟ್ಟಕ್ಕೆ ತೋಚುವ ಒಂದು ಹೆಸರನ್ನು ಇಟ್ಟು ಕೈತೊಳೆದುಕೊಳ್ಳುತ್ತಾರೆ. ಅಲ್ಲಿಂದಲೇ ಶುರುವಾಗುತ್ತದೆ ಹೆಸರಿನ ರಗಳೆ, ಆಮೇಲೆ ಸಾಯೋವರೆಗೂ ಮುಂದುವರೆಯುತ್ತದೆ ಕೆಲವರಿದ್ದಂತೂ ಸತ್ತಮೇಲೂ. ಕನಿಷ್ಟ ನಮ್ಮ ಹೆಸರನ್ನು ನಾವು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ನಮಗಿಲ್ಲವಲ್ಲ ಎಂದು ಒಮ್ಮೊಮ್ಮೆ ಅನಿಸುತ್ತದೆ. ಒಮ್ಮೆ ಯೋಚಿಸಿ!. ನಾವೆಷ್ಟು ನಿಸ್ಸಹಾಯಕರು, ನಮಗಿಟ್ಟ ಹೆಸರು ಕೆಟ್ಟದ್ದೊ ಅಥವಾ ಒಳ್ಳೆಯದೋ ಎಂದು ನಮಗೆ ಅರ್ಥವಾಗುವ ವರ್ಷಗಳಲ್ಲಿ ಅದು ಜಗಜ್ಜಾಹೀರಾಗಿರುತ್ತದೆ. ಆನಂತರ ನಮಗೆ ಇಷ್ಟವಾಗಲಿ ಇಲ್ಲದಿರಲಿ ನಾವು ಓ ಅನ್ನಲೇ ಬೇಕು. ಅದರ ಬದಲಾಗಿ ಹದಿನೆಂಟು ವರ್ಷದವರೆಗೆ ಬೇರೆಯವರಿಟ್ಟ ಹೆಸರು ಆ ನಂತರ ಕಡ್ದಾಯವಾಗಿ ಅವರಿಗೆ ತಕ್ಕುದಾದ ಹೆಸರನ್ನು ಅವರೇ ಆಯ್ಕೆಮಾಡಿಕೊಂಡು ಬದಲಾಯಿಸಿಕೊಳ್ಳಬೇಕು ಎಂಬ ಸಂಪ್ರದಾಯದ ಕಾನೂನು ಮಾಡಿದರೆ ಸರಿಯಾಗಿತ್ತೇನೋ ಅಂತ ಅನ್ನಿಸುತ್ತದೆ.
ಇದು ಬದುಕಿ ಬಳ್ಳಿ ಹರಿಯುವುದು ಅನಿಶ್ಚಿತ ಎಂಬಂತೆ ಕಾಣುವ ಚೋಟುದ್ದದ ದೇಹ ಇದ್ದಾಗ ಇಡುವ ಹೆಸರು ಮುಂದೆ ದೊಡ್ಡದಾದಾಗ ಎಷ್ಟೊಂದು ಅನರ್ಥಕಾರಿಯಾಗಿಬಿಡುತ್ತದೆ ಎನ್ನುವುದಕ್ಕೆ ನೂರಾರು ಉದಾಹರಣೆ ಕೊಡಬಹುದು. ಸುಂದರಿಯೆಂಬ ಹುಡುಗಿ ಬೆಳೆದಂತೆಲ್ಲಾ ವಂದರಿಯಾದರೆ ಆಕೆಗೂ ತನ್ನ ಹೆಸರನ್ನು ಹೇಳಿಕೊಳ್ಳಲು ನಾಚಿಕೆ. ಘಾಟಾಳಿ ಹುಡುಗಿಗೆ ಸಾದ್ವಿ ಎಂದು, ಅವಳಿಗೂ ಅವಳ ಸ್ವಭಾವಕ್ಕೂ ಹೋಲದ ಹೆಸರು. ಕೃಷ್ಣನ ಮತ್ತೊಂದು ಅವತಾರ ಎತ್ತಿದಂತಹ ಸ್ವಭಾವದವನಿಗೆ ಶ್ರೀ ರಾಮ. ತಂದೆ ತಾಯಿಗಳನ್ನು ಕಣ್ಣೆತ್ತಿಯೂ ನೋಡದವನಿಗೆ ಶ್ರವಣ ಕುಮಾರ, ಹೀಗೆ ಸಾಗುತ್ತಾ ಹೋಗುತ್ತದೆ ನಮ್ಮ ಹಿರಿಯರು ಮಾಡಿದ ನಾಮಕರಣ ಎಂಬ ಪದ್ದತಿಯ ಅನಾನುಕೂಲತೆಗಳು. ಅದೇ ಮರುನಾಮಕರಣ ಎಂಬ ಪದ್ದತಿ ಖಡಾಖಂಡಿತವೆಂದು ಆಗಿದ್ದರೆ ಇಷ್ಟೊಂದು ಅಭಾಸವಿರುತ್ತಿರಲಿಲ್ಲ.
ಈಗ ಹೆಸರು ಬದಲಾಯಿಸುವ ವ್ಯವಸ್ಥೆ ಇದೆ, ಕೋರ್ಟಿನಲ್ಲಿ ಒಂದು ಪ್ರಮಾಣಪತ್ರ ಸಲ್ಲಿಸಿ ನಿಮಗೆ ಬೇಕಾದ ಹಾಗೆ ಹೆಸರು ಬದಲಾಯಿಸಿಕೊಳ್ಳಿರಲ್ಲ ಎಂದು ನೀವು ಹೇಳಬಹುದು. ಊಹ್ಞು... ಅದು ಅಸಾಧ್ಯ. ಕಾರಣ ನಮ್ಮ ಜನರು ಸಂಪ್ರದಾಯ ಒಪ್ಪಿದಷ್ಟು ಸುಲಭವಾಗಿ ಕೋರ್ಟು ಕಚೇರಿಯನ್ನು ಒಪ್ಪುವುದಿಲ್ಲ. ಕೋರ್ಟು ಎಂದಾಕ್ಷಣ ನಮ್ಮ ಹುಡುಗಿಯೊಬ್ಬಳು ಹೆಸರು ಬದಲಾಯಿಸಿಕೊಂಡ ಕತೆ ನೆನಪಾಗುತ್ತದೆ.
ವತ್ಸಲಾ ಎಂಬುದು ಆಕೆಯ ಮನೆಯವರು ಇಟ್ಟ ಹೆಸರು, ಆಕೆ ಕಾಲೇಜಿಗೆ ಹೋದಾಗ ಸ್ನೇಹಿತರು ಅವಳ ಹೆಸರನ್ನು ಗೇಲಿಮಾಡಿದರಂತೆ. ಗೇಲಿ ಮಾಡಲು ಪ್ರಮುಖ ಕಾರಣ ಅವರಿಗೆ ಇವಳ ಹೆಸರನ್ನು ಕೂಗಲು ನಾಲಿಗೆ ಹೊರಳುತ್ತಿರಲಿಲ್ಲ. ಎಲ್ಲರೂ ವಸ್ತಲಾ ವಸ್ತಲಾ ಎನ್ನುತ್ತಿದ್ದರಂತೆ. ಈಕೆ ಬೇಸರಗೊಂಡು ತರಾತುರಿಯಲ್ಲಿ ತನ್ನ ಹೆಸರನ್ನು ಕೋರ್ಟಿನಲ್ಲಿ ಮಾಲಾ ಎಂದು ಬದಲಾಯಿಸಿಕೊಂಡದ್ದಾಯಿತು. ಹೆಸರನ್ನೇನೋ ಬದಲಾಯಿಸಿಕೊಂಡಾಯಿತು ಅದನ್ನು ಈಗ ಎಲ್ಲರಿಗೆ ತಿಳಿಸಬೇಕಲ್ಲ. ಅದೇ ದೊಡ್ಡ ಕೆಲಸವಾಗತೊಡಗಿತು. ಸ್ಥಳೀಯ ಪತ್ರಿಕೆಯಲ್ಲಿ ಹಣ ತೆತ್ತು ಒಂದು ಜಾಹಿರಾತು ನೀಡಿದ್ದಾಯಿತು. ಆ ಕೆಲಸವನ್ನೇನೋ ಹಾಗೂ
ಹೀಗೂ ಆಕೆ ನೆರವೇರಿಸಿದಳು ಆದರೆ ಈಗ ಅವಳು ಊಹಿಸದ ಮತ್ತೊಂದು ಸಮಸ್ಯೆ ಬಂದೊದಗಿತು. ಆಕೆ ತನ್ನ ಹೊಸ ಹೆಸರನ್ನು ಇಂಗ್ಲೀಷಿನಲ್ಲಿ Mala ಎಂದು ಬರೆದಾಗ ಅದನ್ನು ಕನ್ನಡದಲ್ಲಿ ಮಲ ಎಂದು ಓದತೊಡಗಿದರು. ಒಂದು ಮಾಡಲು ಹೋಗಿ ಎರಡು ಮಾಡಿಕೊಂಡಂತಾಯಿತು. ಅದೇ ಹದಿನೆಂಟು ತುಂಬಿದ ಕೂಡಲೇ ಹೊಸ ಹೆಸರು ಎಂದಾಗಿದ್ದರೆ ಆರಾಮವಾಗಿ ಗಂಟೆಗಟ್ಟಲೆ ಕುಳಿತು ಒಳ್ಳೆಯ ಹೆಸರನ್ನು ಇಟ್ಟುಕೊಳ್ಳಬಹುದಿತ್ತು. ಜನರು ಅವರಾಗಿಯೇ ನಿನ್ನ ಹೊಸ ಹೆಸರು ಏನೆಂದು ಕೇಳುತ್ತಿದ್ದರು. ಜಾಹಿರಾತು ಕೋರ್ಟು ಕಚೇರಿ ಮುಂತಾದ ಯಾವ ಖರ್ಚೂ ಇರಲಿಲ್ಲ. ಇರಲಿ ಆಗದಿದ್ದರ ಕುರಿತು ಕೊರಗುವುದಕ್ಕಿಂತ ಇದ್ದದ್ದರಲ್ಲಿ ಮಜವನ್ನು ಹುಡುಕುವುದು ಪರಮಸುಖ. ಕನ್ನಡದ ಹೆಸರುಗಳು ಇಂಗ್ಲೀಷಿನಲ್ಲಿ ಬರೆದಾಗ ಏನೇನೋ ಆಗುತ್ತದೆ ಅಂದೆನಲ್ಲ ಎನೇನೋ ಆಗುವುದಿರಲಿ ಕೆಲವೊಮ್ಮೆ ಕೋಲಾಹಲವನ್ನೇ ಸೃಷ್ಟಿಸಿಬಿಡುತ್ತದೆ ಎನ್ನುವುದಕ್ಕೆ ನನ್ನದೇ ಒಂದು ತಾಜಾ ಉದಾಹರಣೆ ಇದೆ.
ನನ್ನ ಅಕ್ಕನ ಮಗನಿಗೆ ದೀಪಾವಳಿಯ ಒಂದು ಶುಭಾಶಯ ಪತ್ರ ಕಳುಹಿಸಿದ್ದೆ. ನನ್ನ ಪೂರ್ತಿ ಹೆಸರು ಬರೆದರೆ ಶುಭಾಶಯಕ್ಕಿಂತ ಹೆಸರೇ ತುಂಬೀತು ಎಂದು ನನ್ನ ಹೆಸರಿನಲ್ಲಿನ ಮೊದಲನೆ Ra ಅಕ್ಷರವನ್ನು ಹಾಗು ನಾನು ಅವನ ಮಾವನಾದ್ದರಿಂದ, ಮಾವನ Ma ಇಂಗ್ಲಿಷಿನಲ್ಲಿ RaMa ಎಂದು ಜೋಡಿಸಿ ಕಳುಹಿಸಿದ್ದೆ.ಮಧ್ಯೆ ಎರಡು ಅಕ್ಷರದ ಮಧ್ಯೆ ಒಂದು ಚುಕ್ಕಿಯನ್ನಿಡಲು ಮರೆತಿದ್ದೆ ಅನ್ನಿಸುತ್ತದೆ. ಆ ಶುಭಾಶಯ ಪತ್ರ ಅವನ ಶ್ರೀಮತಿಯ ಕೈಗೆ ಸಿಕ್ಕಿತು. ಆ ಗ್ರೀಟಿಂಗ್ಸ್ನಲ್ಲಿ ಪ್ರಣಯಪೂರ್ವಕ ಚಿತ್ರವೇನಾದರೂ ಇತ್ತೋ ಏನೋ, ಈಗ ನೆನಪಿಲ್ಲ. ಪತ್ರ ಸಿಕ್ಕ ಕೂಡಲೆ ಅವನ ಮನೆಯಲ್ಲಿ ರಾಮಾಯಣ ಶುರುವಾಗಿಯೇ ಹೋಯಿತಂತೆ. ನನ್ನ ಬಳಿ ಏನೋ ಮುಚ್ಚಿಟ್ಟಿದ್ದೀರಿ ಯಾರೀಕೆ ರಮ?. ಗಂಗಾ ಕಾವೇರಿ ಗೋದಾವರಿ ಭೂಮಿಯ ಸ್ಪರ್ಶವಾಗಿಯೇ ಹೋಯಿತಂತೆ. ಆತ ಮಾತ್ರ ಕಕ್ಕಾಬಿಕ್ಕಿ, ಇತ್ತ ಹೆಂಡತಿಯೂ ಇಲ್ಲ ಅತ್ತ ರಮ ಗೊತ್ತಿಲ್ಲ.ನನಗೆ ರಮ ಅನ್ನೋರು ಯಾರೂ ಗೊತ್ತಿಲ್ಲ ಎಂದು ಹೇಳಿದ ಆತನನ್ನು ಆಕೆ ಗೊತ್ತಿಲ್ಲದಿದ್ದರೆ ಅದೇಗೆ ಈ ಪತ್ರ? ಎಂದು ಸೊರ ಸೊರ ಸದ್ದಿನ ನಡುವೆ ಪ್ರಶ್ನೆ. ಎಲ್ಲಿಂದ ಉತ್ತರ ತಂದಾನು ಆತ. ಸದ್ಯ ನಾನು ಅವತ್ತೇ ಶುಭಾಶಯಪತ್ರ ಮುಟ್ಟಿತಾ ಎಂದು ಕೇಳಲು ಫೋನ್ ಮಾಡಿದ್ದೆ. ಅಕಸ್ಮಾತ್ ನಾನು ಫೋನ್ ಮಾಡಿಲ್ಲದಿದ್ದರೆ ಗಂಡ ಹೆಂಡತಿಯರನ್ನು ದೂರ ಮಾಡಿದ ಪಾಪ ನನಗೆ ತಗುಲುತ್ತಿತ್ತೋ ಏನೋ! ಸದ್ಯ ಹಾಗಾಗಲಿಲ್ಲ. ರಮ ಅಲ್ಲ ಅದು ರಾಘು ಮಾವನ ಸಂಕ್ಷಿಪ್ತ ರೂಪವಾದ ರಾ.ಮಾ. ಇಂಗ್ಲೀಷಿನವರ ಯಡವಟ್ಟುತನದಿಂದ ಹೀಗಾಗಿದೆ ಎಂದು ಗೊತ್ತಾದಮೇಲೆ ಅವನ ಶ್ರೀಮತಿಯೂ ಮನಸಾರೆ ನಕ್ಕಳಂತೆ.
ಇಂಗ್ಲೀಷಿನ ವಿಚಾರ ಹಾಗಿರಲಿ ಹೆಸರಿನ ವಿಚಾರದಲ್ಲಿ ಹಿಂದಿ ಜನರಿದ್ದಾರಲ್ಲ ಅವರದು ಮತ್ತೊಂದು ರಾಮಾಯಣ. ನಮ್ಮಲ್ಲಿ ಒಂದು ಜೋಕ್ ಇತ್ತು ಒಬ್ಬಾತ ಹೇಳಿದನಂತೆ ನಾನು ಬ್ರಹ್ಮಚಾರಿ, ಮತ್ತೊಬ್ಬ ಹೇಳಿದನಂತೆ ನಮ್ಮಪ್ಪನೂ ಬ್ರಹ್ಮಚಾರಿ ಮಗದೊಬ್ಬ ಹೇಳಿದನಂತೆ ನಮ್ಮ ಮನೆಯಲ್ಲಿ ನಾನು, ನಮ್ಮಪ್ಪ, ನಮ್ತಾತ ಮೂವರು ಬ್ರಹ್ಮಚಾರಿ. ಅಸಾಧ್ಯವಾದ ಈ ಮಾತನ್ನು ಹೇಳಿದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಇದೊಂದು ಜೋಕ್ ಎಂದು ಘೊಳ್ಳನೆ ನಗುತ್ತಿದ್ದರು. ನಾನು ಕೂಡ ನಕ್ಕಿದ್ದೆ, ಆದರೆ ಇನ್ನು ನಗುವುದಿಲ್ಲ ಕಾರಣ ಇದು ಆಸಾಧ್ಯವಾದುದೇನಲ್ಲ ಖಂಡಿತ ಸಾಧ್ಯ ಎಂದು ಮೊನ್ನೆ ತಿಳಿಯಿತು.
ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಒಬ್ಬರು ಸಿಕ್ಕರು, ಅವರು ಉತ್ತರ ಭಾರತದವರು. ಅವರ ಹೆಸರು ಬ್ರಹ್ಮಚಾರಿ. ಇದು ಒಂದು ಹೆಸರಾಗಲು ಸಾಧ್ಯವಾದಮೇಲೆ ಮೊದಲನೆಯದು ಜೋಕ್ ಎಂದು ನಗುವ ಅಗತ್ಯವೇ ಇಲ್ಲ ಎಂದೆನಿಸಿತು. ನಮ್ಮ ಮಲೆನಾಡಿನಲ್ಲಿ ಕೆಲವು ಕುಟುಂಬಗಳಲ್ಲಿ ಒಂದು ಸಂಪ್ರದಾಯವಿದೆ, ಮನೆಯ ಹಿರಿಯ ಮಗನಿಗೆ ತಿಮ್ಮಪ್ಪ ಎಂದು ಹೆಸರಿಡುತ್ತಾರೆ.ಮೊದಲೆಲ್ಲಾ ಹತ್ತೆಂಟು ಮಕ್ಕಳಾಗುತ್ತಿತ್ತು ಹಾಗಾಗಿ ಸಮಸ್ಯೆ ಇರಲಿಲ್ಲ. ಈಗ ಕುಟುಂಬ ಯೋಜನೆಯ ಕಾಲಬಂದಮೇಲೆ ಹೇಗಾಗಿದೆಯೆಂದರೆ ತಾತ,ಮಗ, ಮೊಮ್ಮೊಗ ಮೂವರೂ ತಿಮ್ಮಪ್ಪ. ಅದೇ ತರಹ ಬ್ರಹ್ಮಚಾರಿಗಳೂ ಮಗ,ಅಪ್ಪ, ತಾತ,ಆಗುತ್ತಾರಲ್ಲ. ಆದರೆ ಇದರಿಂದ ಸಮಸ್ಯೆ ಇರುವುದು ಹೆಂಗಸರಿಗೆ, ಅವರ ಪಾಡು ಹೇಳತೀರದು. ಇದು ಎಷ್ಟೊಂದು ಅತಿರೇಕದ ಸಮಸ್ಯೆ ಎಂದರೆ ತಾಯಿ ಮಗನನ್ನು ಎಲ್ಲರೆದುರು ಹೆಸರು ಹೇಳಿ ಒಂದು ಪಪ್ಪಿಕೊಡೊ ಎಂದು ಕರೆಯುವಂತಿಲ್ಲ,ಅಪ್ಪ ಗುರಾಯಿಸುತ್ತಾನೆ. ಜತೆಯಲ್ಲಿ ಗಂಡನ ಹೆಸರನ್ನು ಇಟ್ಟು ಕರೆದು ಅವನ ಆಯಸ್ಸಿಗೆ ಕುಂದು ತರುತ್ತಾಳೆ ಎಂದು ಕೆಂಗಣ್ಣು ಎದುರಿಸಬೇಕಾಗುತ್ತದೆ.ಇರಲಿ ಅವರವರ ಪಾಡು ಅವರವರಿಗೆ ನಮ್ಮದೇನು? ಅಲ್ಲವೇ?
ಈ ಕಾಲದಲ್ಲಿ ಮಕ್ಕಳು ಹುಟ್ಟುವ ಮೊದಲೇ ಹೆಸರಿನ ಆಯ್ಕೆ ಶುರುವಾಗಿರುತ್ತದೆ. ವೆಬ್ ಸೈಟ್ನಲ್ಲಿ ಇರುವ ಲಕ್ಷಾಂತರ
ಹೆಸರಿನಲ್ಲಿನಮಗಿಷ್ಟವಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಂದೆ ನಮ್ಮ ಹಳ್ಳಿಗಳಲ್ಲಿ ಅವರದಷ್ಟೇ ಒಂದು ಪ್ರಪಂಚ. ಹೊಸ ಹೊಸ ಹೆಸರನ್ನು ತರುವುದು ಎಲ್ಲಿಂದ. ಹಾಗಾಗಿ ಬಹಳಷ್ಟು ಮನೆಗಳಲ್ಲಿ ಆ ಊರಿನ ದೇವಸ್ಥಾನದಲ್ಲಿ ಯಾವ ದೇವರು ಪ್ರತಿಷ್ಠಾಪನೆಗೊಂಡಿರುತ್ತಾನೋ ಅವನ ಹೆಸರನ್ನು ಇಟ್ಟು ಕೈ ತೊಳೆದುಕೊಳ್ಳುತ್ತಿದ್ದರು. ಇವತ್ತಿಗೂ ಗಣಪತಿ ದೇವಸ್ಥಾನವಿರುವ ಊರಿನಲ್ಲಿ ಕನಿಷ್ಠವೆಂದರೂ ಹತ್ತಾರು ಗಣಪತಿ ಊರಿನಲ್ಲಿ ಓಡಾಡುತ್ತಿರುತ್ತಾರೆ. ಗಂಡಸರಿಗೆ ಗಣಪತಿ ಎಂಬ ಹೆಸರು ಸರಿ. ಎಂಥಾ ವಿಚಿತ್ರ ನೋಡಿ, ಊರಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನ ಇದೆ ಎಂಬ ಒಂದೇ ಕಾರಣಕ್ಕೆ ಅದೇ ಹೆಸರನ್ನು ಗಂಡುಮಕ್ಕಳಿಗೆ ನಾಮಕರಣ ಮಾಡಿಬಿಡುತ್ತಾರೆ. ಲಕ್ಷ್ಮೀ ಸ್ತ್ರಿಲಿಂಗ ನಾರಾಯಣ ಪುಲ್ಲಿಂಗ ಎರಡು ಸೇರಿಸಿದರೆ ಯಾವ ಲಿಂಗ ಸೂಚಕ ಎನ್ನುವ ಈಗಿನ ಹುಡುಗರ ಪ್ರಶ್ನೆಗೆ ಏನಂತ ಉತ್ತರಿಸುವುದು. ನಂಬಿದರೆ ನಂಬಿ ಬಿಟ್ಟರೆ ಬಿಡಿ ನಮ್ಮ ಊರಿನಲ್ಲಿ ಕೆಲವರಂತೂ ಯಾವ ದೇವರಿಗೂ ಸಿಟ್ಟಾಗುವ ಸಮಸ್ಯೆಯೆ ಬೇಡ ಎಂದು ಮಕ್ಕಳಿಗೆ "ದೇವರು" ಎಂದೇ ಹೆಸರಿಟ್ಟುಬಿಟ್ಟಿದ್ದಾರೆ.
ಶಾಖಾಹಾರಿ ದೇವರ ಭಕ್ತರ ಕಥೆ ಹೀಗಾದರೆ ಕುರಿಕೋಳಿ ಬಲಿ ಕೇಳುವ ದೈವ ಭಕ್ತರೂ ಪೈಪೋಟಿಗೆ ಬಿದ್ದವರಂತೆ ತಮ್ಮ ಮಕ್ಕಳಿಗೆ ಭೂತ,ಚೌಡಿ,ಕಾಳಿ,ದೇವಿ ಎಂಬ ಹೆಸರನ್ನಿಟ್ಟು ನಮ್ಮೂರ ರಸ್ತೆಯಲ್ಲಿ ಹಾಡಾಹಗಲೇ ಭೂತ ಬಂದರೂ ಯಾರು ಹೆದರುವುದಿಲ್ಲ ಎಂದು ಹೇಳುವಂತಾಗಿದೆ. ಅಣ್ಣನಿಗೆ ದೊಡ್ದಭೂತ ತಮ್ಮನಿಗೆ ಸಣ್ಣಭೂತ ಎಂಬ ಹೆಸರುಗಳು ಇಲ್ಲಿ ಸರ್ವೇ ಸಾಮಾನ್ಯ. ಆದರೆ ಈ ತರಹದ ಹೆಸರುಗಳು ನಲ್ವತ್ತು ವರ್ಷಗಳಿಂದೀಚೆಗೆ ಮಾಯವಾಗಿದೆ.
ಹೆಸರಿನ ವಿಚಾರವಾಗಿ ನಮ್ಮನ್ನು ಗೊಂದಲಕ್ಕೆ ಬಿಳಿಸಲು ಇನ್ನು ಕೆಲವರು ಗಂಡು ಮಕ್ಕಳಿಗೂ ಹೆಣ್ಣುಮಕ್ಕಳಿಗೂ ಒಂದೇ ತರಹದ ಹೆಸರನ್ನಿಟ್ಟು ಗೋಳು ಮಾಡಿಬಿಡುತ್ತಾರೆ. ಅರುಣ, ವಿನಯ, ಮುಂತಾದ ಹೆಸರುಗಳು ದ್ವಿಲಿಂಗಿಗಳು. ಹೆಸರಿನಮಾತ್ರದಿಂದ ಗಂಡೋ ಹೆಣ್ಣೋ ಎಂದು ಪತ್ತೆಮಾಡಲಾಗದಿರಲಿ ಎಂಬ ತೀರ್ಮಾನ ಅವರದ್ದಿರಬೇಕು. ಇರಲಿ ಹೆಸರನ್ನು ಇಟ್ಟಾದಮೇಲೆ ಮಾಡುವುದಿನ್ನೇನು ಇದ್ದುದರಲ್ಲಿಯೇ ತೃಪ್ತಿಪಡಬೇಕು ಎಂಬ ವೇದಾಂತವೇ ಸಿದ್ಧಾಂತ. ಇದನ್ನು ಓದಿದ ಮೇಲೆ ಹಾಗೆ ಒಪ್ಪಿಕೊಳ್ಳಲು ಆಗದಿದ್ದಲ್ಲಿ ನಿಮ್ಮ ಹೆಸರನ್ನು ನಿಮಗಿಷ್ಟದಂತೆ ಜನರಿಗೆ ಕಷ್ಟವಾಗದಂತೆ ಬೇಕಾದರೆ ಬದಲಾಯಿಸಿಕೊಳ್ಳಿ.
ಇವೆಲ್ಲಾ ಸ್ವದೇಶಿ ಹೆಸರಿನ ಅವಾಂತರಗಳಾದರೆ ನಮ್ಮ ದೇಶದವರ ಹೆಸರು ವಿದೇಶಿ ಜನರ ಬಾಯಿಗೆ ಸಿಕ್ಕಿ ಹೇಗೆ ಅವಾಂತರವಾಗುತ್ತದೆ ಎನ್ನುವುದಕ್ಕೆ ನಮ್ಮ ಸಂಬಂಧಿಯೊಬ್ಬರ ಅನುಭವವೇ ವೇದ್ಯ. ಅವರ ಹೆಸರು ಜಿ.ಮೃತ್ಯುಂಜಯ. ಅದು ನಮ್ಮವರ ನಾಲಿಗೆಯಲ್ಲಿಯೇ ಸುಲಭವಾಗಿ ನುಲಿಯದೆ ಮುರ್ತುಂಜಯ ಎಂದಾಗುತ್ತಿತ್ತು. ಇನ್ನು ಈ ಚಿತ್ರವಿಚಿತ್ರ ಹೆಸರು ತಿಳಿಯದ ವಿದೇಶಿಯರ ಬಾಯಲ್ಲಿ ಏನಾಗಬಹುದು?. ಅವರು ಬೆಹರಿನ್ನ ಕಂಪನಿಯೊಂದರಲ್ಲಿ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಕೆಲಸಕ್ಕೆ ಸೇರಿದ ದಿನ ಇವರನ್ನು ಭಾರತೀಯ ಸಹೋದ್ಯೋಗಿಯೊಬ್ಬ ಮಿಕ್ಕವರಿಗೆ ಪರಿಚಯ ಮಾಡಿಕೊಟ್ಟನಂತೆ. ಮಾರನೇ ದಿನ ಡ್ಯೂಟಿಗೆ ಹೋದಾಗ ಹಾಯ್ ಬಾಯ್ ಆದನಂತರ ಬ್ರಿಟೀಷ್ ಮೂಲದ ಇಂಜನಿಯರ್ ಒಬ್ಬ ಇವರತ್ತ ನೋಡಿ , ಮಿಸ್ಟರ್ ಜಿ.ಮೂರ್ ತುಂಡಯ್ಯ ಕಮ್ ಹಿಯರ್ ಎಂದನಂತೆ, ಒಂದು ಸ್ವಲ್ಪ ಹೊತ್ತು ಇವರು ಆತ ಬೇರೆ ಏನೋ ಹೇಳುತ್ತಿದ್ದಾನೆ ಅಂದುಕೊಂಡರಂತೆ. ಮತ್ತೆ ಆತ ಮೂರ್ ತುಂಡಯ್ಯ ಅಂದಾಗ ಇವರಿಗೆ ತಿಳಿಯಿತು, ತನ್ನ ಹೆಸರಾದ ಮೃತ್ಯುಂಜಯ ಇವನ ನಾಲಿಗೆಯಲ್ಲಿ ಹೊರಳಾಡಿ ಹೀಗೆ ರೂಪಾಂತರಗೊಂಡಿದೆ ಎಂದು. ತಕ್ಷಣ ಈ ರಗಳೆಯೆ ಬೇಡ ಎಂದು ಅವರು ತಮ್ಮ ಹೆಸರನ್ನು ಜಿ.ಎಂ.ಜಯ ಎಂದು ಎಲ್ಲರ ನಾಲಿಗೆಯಮೇಲೆ ಸಾರಾಗವಾಗಿ ನಲಿದು ನುಲಿಯಲು ಅನುಕೂಲವಾಗಲಿ ಎಂದು ಬದಲಾಯಿಸಿಕೊಂಡರಂತೆ. ಆದರೆ ಅದರಿಂದ ಆನಂತರ ಮತ್ತೊಂದು ಸಮಸ್ಯೆ, ಇವರ ಹೆಸರನ್ನು ಕೇಳಿದ ಭಾರತೀಯ ಮೂಲದ ನೌಕರರು ಇದು ಯಾರೋ ಮಹಿಳೆಯಿರಬೇಕೆಂದು ಸ್ವಲ್ಪ ಖುಷಿಯಿಂದ ಬೇಟಿಗೆ ಬಂದು ಬೆಪ್ಪಾಗುತ್ತಿದ್ದರಂತೆ. ಅವರು ಬೆಪ್ಪಾದರೂ ಪರವಾಗಿಲ್ಲ, ಜನರ ಬಾಯಲ್ಲಿ ಬದುಕಿದ್ದಾಗಲೇ ಮೂರು ತುಂಡಾಗುವುದಕ್ಕಿಂತ ಇದೇ ಲೇಸು ಎಂದು ಜಯ ಎನ್ನುವ ಹೆಸರಿನಲ್ಲಿಯೇ ಮುಂದುವರೆಯುವ ತೀರ್ಮಾನ ಕೈಗೊಂಡರು ಎನ್ನಿ. ಹೀಗೆ ಹೆಸರಿನ ಅವಾಂತರಗಳು ಅನುಕೂಲಗಳು ಬರೆಯುತ್ತಾ ಕುಳಿತರೆ ನಂತರ ನೀವೂ ನನ್ನ ಹೆಸರನ್ನು ಅಳಿಸಿಹಾಕುವುದು ಖಂಡಿತಾ.ಹಾಗಾಗಿ ಇಷ್ಟು ಸಾಕು
Wednesday, March 4, 2009
Tuesday, March 3, 2009
ಹೆಸರು ಹೆಸರೆಂದು.....
ಹೆಸರು ಹೆಸರೆಂದು ನೀಂ ಬಸವುಳಿವುದೇಕಯ್ಯ.?
ಕಸದೊಳಗೆ ಕಸವಾಗಿ ಹೋಹನಲೆ ನೀನು?
ಮುಸಕಲೀ ಧರೆಯ ಮರೆವೆನ್ನನ್,ಎನ್ನುತ ಬೇಡು/
ಮಿಸುಕದಿರು ಮಣ್ಣಿನಲಿ ಮಂಕುತಿಮ್ಮ//
ಎಂದು ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ.ಜಿ ಯವರು ಹೆಸರಿನ ಹಿಂದೆ ಬೀಳುವವರ ಕುರಿತು, ಮಣ್ಣಲ್ಲಿ ಮಣ್ಣಾಗಿ ಹೋಗುವ ನಮಗೇಕೆ ಅದರ ಚಿಂತೆ ಎಂಬರ್ಥದ ಅದ್ಭುತವಾದ ಕಗ್ಗವನ್ನು ರಚಿಸಿದ್ದಾರೆ. ಜನರಿಗೆ ಹೆಸರಿನ ವ್ಯಾಮೋಹ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಆ ಮಹಾತ್ಮರೂ ಕಗ್ಗದ ಪುಸ್ತಕದಲ್ಲಿ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ ಎಂದು ಹೇಳಲು ಮರೆತಿಲ್ಲವೆಂಬುದು ಸತ್ಯ. ಅದು ಮುದ್ರಣಕಾರರ ಆಸಕ್ತಿಯೋ,ಪ್ರಕಾಶಕರ ಹಿತಾಸಕ್ತಿಯೋ? ಮುಂತಾದ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿಲ್ಲದ್ದರಿಂದ ಡಿ.ವಿ.ಜಿಯಂತಹ ಮಹಾತ್ಮರ ವಿಚಾರದ ಗೊಡವೆ ನಮಗೆ ಬೇಡ ಬಿಡಿ. ಆದರು ಹೆಸರಿನ ವ್ಯಾಮೋಹ ಬೇಡ ಅಂತ ಬಾಯಿಮಾತಲ್ಲಿ ಹೇಳುವ ಹಲವಾರು ಜನರನ್ನು ನಾವು ದಿನನಿತ್ಯ ಭೇಟಿಯಾಗುತ್ತಲೇ ಇರುತ್ತೇವೆ. ಹಾಗೆ ಹೇಳುತ್ತಾರೆ ಎಂದಾಕ್ಷಣ ಅವರಿಗೆ ಹೆಸರು ಗಳಿಸುವ ಚಟದ ಬಗ್ಗೆ ಆಸಕ್ತಿ ಇಲ್ಲಾ ಎಂದೆಣಿಸದಿರಿ ಅವರೂ ಒಂದಲ್ಲಾ ಒಂದು ರೀತಿಯಲ್ಲಿ ಹೆಸರಿಗಾಗಿಯೇ ಒದ್ದಾಡುತ್ತಿರುತ್ತಾರೆ ಎಂದರ್ಥ.
ಹುಟ್ಟಿದ ೧೧ ನೇ ದಿನ ನಾಮಕರಣ ಎಂಬ ಕಾರ್ಯಕ್ರಮದ ಮೂಲಕ ಹೆಗಲನ್ನೇರುವ ಈ ಬೇತಾಳ ಜೀವನಪೂರ್ತಿ ಕುಂತರೂ ನಿಂತರೂ ಕೊನೆಗೆ ಆನಂದದಿಂದ ಸವಿನಿದ್ದೆಯಲ್ಲಿದ್ದಾಗಲೂ ಕಾಡುತ್ತಿರುತ್ತದೆ. ಮುಖಾರವಿಂದದ ಮೂಲಕ ಪ್ರಸ್ತುತಪಡುವ ನಾಮವಳಿ ಅವರವರ ಮುಖ ಲಕ್ಷಣದ ಮೂಲಕ ಕೆಲವರಿಗೆ ಸಂತಸ ಮೂಡಿಸಿದರೆ ಹಲವರಿಗೆ ಸಿಟ್ಟುತರಿಸುತ್ತದೆ. ಹೆಸರಿನಿಂದ ಆಗುವ ಅನಾಹುತಗಳಿಂದ ಒಮ್ಮೊಮ್ಮೆ ಹೆಸರೇ ಇಲ್ಲದಿದ್ದರೆ ಎಷ್ಟು ಆರಾಮು ಅಂತ ಅನ್ನಿಸುವುದೂ ಉಂಟು. ಆದರೆ ಅವೆಲ್ಲಾ ಅನಿಸಿಕೆಗಷ್ಟೆ ಸೀಮಿತ ಎಂಬುದು ನಿತ್ಯನೂತನ ಸತ್ಯ. ಹೆಸರಿನ ಹುಚ್ಚು ಯಾರಿಗೆ ಅತಿ ಹೆಚ್ಚು? ಎಂಬ ಪ್ರಶ್ನೆಗೆ ಬರಹಗಾರರು, ಎಂದು ಹೊಸತಾಗಿ ಹೇಳುವ ಅಗತ್ಯವೇ ಇಲ್ಲ. ಪತ್ರಿಕೆಗಳಲ್ಲಿ ಬರೆಯುವ ಲೇಖಕ ಮಹಾಶಯರಿಗಂತೂ ಪ್ರಕಟವಾಗುವ ಲೇಖನಕ್ಕಿಂತ ಅಲ್ಲಿ ಮೂಡಿ ಬರುವ ತಮ್ಮ ಹೆಸರಿನದ್ದೇ ಚಿಂತೆ. ಹಿಂದೆಲ್ಲಾ(ಈಗಲೂ ಕೆಲವರಿದ್ದಾರೆ) ತಮ್ಮ ನಿಜ ನಾಮಧೇಯವನ್ನು ಮರೆಮಾಚಿ ಗುಪ್ತನಾಮದಲ್ಲಿ ಬರೆಯುವ ಹಲವಾರು ಜನ ಲೇಖಕರು ಸಿಗುತ್ತಿದ್ದರು.ನಾವು ಸಣ್ಣವರಿದ್ದಾಗ ಸುಧಾದಲ್ಲಿನ ನೀವು ಕೇಳಿದಿರಿ ಅಂಕಣದಲ್ಲಿ ಓದುಗರ ಪ್ರಶ್ನೆಗೆ ಉತ್ತರಿಸುವ ಚಿತ್ತಾ, ಉತ್ತರಮುಖಿ ಎಂಬ ಮಹಾಶಯರು ಯಾರು?,ಅವರ ನಿಜ ನಾಮಧೇಯವೇನು?. ಎಂದು ಪತ್ತೆ ಮಾಡಲಾಗದೆ ನಾವು ಒದ್ದಾಡುತ್ತಿದ್ದೆವು. ಅವರ ನಿಜವಾದ ಹೆಸರನ್ನು ಹೇಳಿದರೆ ಅವರು ನಿಧನರಾಗಿಬಿಡುತ್ತಾರಂತೆ ಎಂಬ ದಂತಕಥೆಗಳೂ ನಮ್ಮನ್ನು ಇನ್ನಷ್ಟು ಕುತೂಹಲಕ್ಕೆ ಎಡೆಮಾಡಿಕೊಡುತ್ತಿತ್ತು.ದಾಸಯ್ಯ ಎನ್ನುವ ಹೆಸರಿನಲ್ಲಿ ಬರೆಯುವವರು ಶಂಖನಾದ ಸಿನೆಮಾದ ಹೀರೋನ ತರಹದ ವ್ಯಕ್ತಿಯಾಗಿರಬಹುದೆ ಎಂಬ ಗುಮಾನಿ ನಮಗೆ ಬಹಳ ಕಾಡುತ್ತಿತ್ತು.ಹೀಗೆ ನಿಜನಾಮಧೇಯ ಮರೆಮಾಚಿ ಓದುಗರನ್ನು ಕಾಡುತ್ತಿದ್ದ ಲೇಖಕರ ಮೇಲೆ ಸಿಟ್ಟು ಬಂದರೂ ಅವರ ಬರವಣಿಗೆಯ ಶೈಲಿ ಸಿಟ್ಟನ್ನು ತಣಿಸಿ ಯಾರಿರಬಹುದೀತ? ಎಂಬ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗುತ್ತಿತ್ತು.ಕಾಲಾನಂತರ ಗುಪ್ತನಾಮದ ಲೇಖಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿತು. ಆನಂತರ ಕಥೆ ಕವನಗಳ ಜತೆ ತಮ್ಮ ಹೆಸರನ್ನು ಮಾತ್ರಾ ಬರೆಯುವ ಕಥಾ ಲೇಖಕರು ಶುರುವಾದರು. ನಂತರ ಹೆಸರಿನ ಮುಂದೆ ಅಡ್ಡ ಹೆಸರು ಸೇರಿತು. ಆನಂತರ ಊರಿನ ಹೆಸರು ಸೇರಿ ಕಥೆ ಕವನಗಳಿಗಿಂತ ಬರೆಯುವ ಲೇಖಕರ ಹೆಸರೇ ಉದ್ದವಾಗತೊಡಗಿತು. ಲೇಖಕಿಯೊಬ್ಬರು ಅಪರೂಪಕ್ಕೊಂದು ಸುಂದರ ಕವನ ಬರೆಯುತ್ತಿದ್ದರು. ಕವನದಲ್ಲಿ ಆಕೆ ಗಟ್ಟಿಗಿತ್ತಿ ಆದರೆ ಕವನದ ಕೆಳಗೆ ನಮೂದಿಸುತ್ತಿದ್ದುದು ಮೊದಲು ತನ್ನ ಹೆಸರು ನಂತರ ಯಜಮಾನರದ್ದು ಆಮೇಲೆ ತನ್ನ ಹುಟ್ಟೂರು ಆಮೇಲೆ ವಾಸವಾಗಿದ್ದ ಊರನ್ನೂ ಸೇರಿಸುತ್ತಿದ್ದರು . ಅದು ಹೇಗಿತ್ತೆಂದರೆ ಮಲ್ಲಿಗೆ ಹೂವಿನ ದಂಡೆಗಿಂತ ದಾರ ಉದ್ದವಾದರೆ ಹೇಗಿರುತ್ತಿತ್ತೋ ಹಾಗಿತ್ತು. ಇರಲಿ ಮುದ್ರಿಸುವವರಿಗೆ ಚಿಂತೆಯಿಲ್ಲ ನಮಗೇಕೆ ಬಿಡಿ. ಚಿಕ್ಕಂದಿನಲ್ಲಿ ನಮಗೆ ಹಲವಾರು ಲೆಖಕರ ಹೆಸರುಗಳು ಬಹಳ ತಲೆ ಕೆಡಿಸುತ್ತಿದ್ದವು ಅವುಗಳಲ್ಲಿ ಪ್ರಮುಖವಾಗಿದ್ದು(ಇವತ್ತಿಗೂ ಅದೇ ಸಮಸ್ಯೆ ಇದೆ ಎನ್ನಿ) ಕೆ.ಟಿ.ಗಟ್ಟಿ.ರಿಗ್ರೇಟ್ ಅಯ್ಯರ್, ಮುಂತಾದವುಗಳು. ಗಟ್ಟಿ ಎನ್ನುವುದು ಲೇಖಕರ ಹೆಸರೊ?, ಅಥವಾ ಕೆ.ಟಿ.ಗಳಲ್ಲಿ ಅವರ ಹೆಸರು ಅಡಗಿದೆಯೋ ಎನ್ನುವುದು ಇವತ್ತಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ರಿಗ್ರೇಟ್ ಅಯ್ಯರ್, ಇದೇನು ಹೆಸರೊ? ಮನೆತನದ ಹೆಸರೋ? ಎಂದು ಕೆಲಕಾಲ ಗೊಂದಲದಲ್ಲಿತ್ತು. ಆನಂತರ ನಮ್ಮ ಗುಂಪಿನಲ್ಲಿ ಒಬ್ಬ ಪತ್ತೆ ಮಾಡಿದ, ಅವರ ನಿಜನಾಮಧೇಯ ಬೇರೆಯಂತೆ, ಅವರು ಪತ್ರಿಕೆಗಳಿಂದ ವಿಷಾದ ಪತ್ರ ಸ್ವೀಕರಿಸಿ ಸುಸ್ತಾಗಿ ಅಲ್ಲಿನ ವಿಷಾದವನ್ನು ಆಂಗ್ಲೀಕರಿಸಿ ತಮ್ಮ ಸರ್ನೇಮ್ ಜೊತೆ ಸೇರಿಸಿಕೊಂಡು ಬರೆಯಲು ಶುರುವಿಟ್ಟು ಯಶಸ್ವಿಯಾದರಂತೆ. ಕೊನೆಗೂ ಹಠ ಬಿಡದೆ ಬರೆಯುವುದನ್ನು ಮುಂದುವರೆಸಿಕೊಂಡು ಈಗ ಪ್ರಸಿದ್ಧ ಬರಹಗಾರರಂತೆ ಎಂಬ ಅಂತೆಕಂತೆಗಳ ವರದಿ ತಂದ. ಅದೇ ನಿಜವೋ ಆಥವಾ ಸುಳ್ಳೋ ಪ್ರಾಮಾಣಿಕರಿಸಲು ನಮ್ಮ ಬಳಿ ಯಾವ ಸಾಕ್ಷ್ಯಾಧಾರಗಳು ಇಲ್ಲದ್ದರಿಂದ ಮತ್ತು ನಮಗೆ ನಿಜವಾದ ಅರ್ಥ ಗೊತ್ತಿಲ್ಲದ್ದರಿಂದ ಒಪ್ಪಿಕೊಳ್ಳಲಾಯಿತು.
ವಿಷಾದ ಪತ್ರ ಎಂದಾಕ್ಷಣ ನನ್ನ ಮತ್ತೊಬ್ಬ ಸ್ನೇಹಿತರ ಅವಸ್ಥೆ ನೆನಪಾಗುತ್ತದೆ. ಅವರಿಗೆ ಏನಕೇನ ಪ್ರಕಾರೇಣ ತನ್ನ ಹೆಸರಿನಲ್ಲಿ ಒಂದು ಲೇಖನ ಪ್ರಕಟೋಭವ ಎಂಬ ಮಹದಾಸೆ. ಆದರೆ ಪತ್ರಿಕೆಗಳಲ್ಲಿನ ಸಂಪಾದಕ ಮಂಡಳಿಯವರು ವಿಷಾದ ಪತ್ರವನ್ನು ಪತ್ರಿಕೆಗಳಿಗಿಂತ ಜಾಸ್ತಿ ಮುದ್ರಿಸುತ್ತಾರೇನೋ ಎಂಬುದು ಇವರ ಸಂಶಯ. ಕಾರಣ ಇವರ ಲೇಖನ ಅಂಚೆಗೆ ಹಾಕಿ ವಾರದೊಳಗೆ ರಬ್ಬರ್ ಚೆಂಡಿನ ತರಹ ವಿಷಾದ ಪತ್ರದೊಡನೆ ವಾಪಾಸು ಬರುತ್ತಿತ್ತು. ಇವರೋ ಹಠ ಬಿಡದ ತ್ರಿವಿಕ್ರಮ, ಅಂತೂ ಕೊನೆಗೊಂದು ದಿನ ವಾರಪತ್ರಿಕೆಯೊಂದರಲ್ಲಿ ಇವರು ಬರೆದ ಸಣ್ಣಕಥೆಯೊಂದು ಸ್ವೀಕೃತಿಯಾದ ಪತ್ರ ಬಂತು. ಪ್ರಕಟಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ಇವರಿಗೆ ಎಲ್ಲಿಲ್ಲದ ತಳಮಳ,ಇವರ ಕಥೆಯನ್ನು ಹೊತ್ತ ಪತ್ರಿಕೆಯೂ ಬಂದಾಯಿತು ಆದರೆ ಎಂಥಾ ದುರ್ದೈವ ನೋಡಿ ಪಾಪ ಇವರ ಹೆಸರು ಮಾತ್ರಾ ಕೈತಪ್ಪಿನಿಂದ ಅಚ್ಚಾಗದೆ ಬಿಟ್ಟುಹೋಗಿತ್ತು. ಆದರೂ ಅವರು ತೀರಾ ಹತಾಶರಾಗದೆ ಕಪ್ಪು ಇಂಕಿನಲ್ಲಿ ದುಂಡಗೆ ತಮ್ಮ ಹೆಸರನ್ನು ಕೆಳಗೆ ಬರೆದು ಪತ್ರಿಕೆಗಳನ್ನು ತಮ್ಮ ಇಷ್ಟಮಿತ್ರರಿಗೆ ಹಂಚಿದರೆನ್ನಿ. ಅವರನ್ನು ನಾವೆಲ್ಲಾ ನಿಮ್ಮ ಹೆಸರನ್ನು ಕೋರ್ಟಿನಲ್ಲಿ ಯಂಡಮೂರಿ ವೀರೇಂದ್ರನಾಥ್ ಎಂದು ಬದಲಾಯಿಸಿಕೊಳ್ಳಿ, ಆಗ ಸಮಸ್ಯೆ ತನ್ನಿಂದತಾನೆ ಬಗೆ ಹರಿಯುತ್ತದಲ್ಲಾ ಎಂದು ಕಿಚಾಯಿಸುತ್ತಿದ್ದೆವು.ಪಾಪ ಆನಂತರ ಅವರು ಬರವಣಿಗೆ ನನ್ನ ಹಣೆಯಮೇಲೆ ಬರೆದಿಲ್ಲಾ ಎಂಬ ತೀರ್ಮಾನಕ್ಕೆ ಬಂದವರಂತೆ ಆವತ್ತಿನಿಂದ ಬರೆಯುವುದನ್ನೇ ಬಿಟ್ಟರು ಎಂಬುದು ಕುಚೋದ್ಯವಂತೂ ಖಂಡಿತಾ ಅಲ್ಲ.
ಬಹಳ ಹಿಂದೆ ಡಾ ಅನುಪಮ ನಿರಂಜನ ಮಹಿಳೆಯರ ಹೆಸರಿನ ಕುರಿತಾಗಿ ಒಂದು ಲೇಖನ ಬರೆದಿದ್ದರು. ಲೇಖನದ ಪ್ರಮುಖವಾದ ವಿಷಯ ಮಹಿಳೆಯರು ತಮ್ಮ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದರ ಕುರಿತಾಗಿತ್ತು.ತಾವು ಪಡುವ ಶ್ರಮಕ್ಕೆ ಗಂಡಸರಿಗೇಕೆ ಪುಕ್ಕಟ್ಟೆ ಪ್ರಚಾರ ನೀಡಬೇಕು ಎಂಬುದು ಅವರ ಮೂಲ ಪ್ರಶ್ನೆ. ಲೇಖನ ಉತ್ತಮ ವಿಚಾರಗಳನ್ನು ಒಳಗೊಂಡಿತ್ತು. ಆದರೆ ಅವರ ಸಮರ್ಥನೆಗಳು ಅವರಿಂದಲೇ ವಿಫಲವಾಗಿತ್ತು. ಕಾರಣ ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ಅವರು ಕೂಡ ತಮ್ಮ ಹೆಸರಿನ ಮುಂದೆ ನಿರಂಜನರ ಹೆಸರನ್ನು ಸೇರಿಸಿದ್ದರು. ಅದು ಕಾಕತಾಳೀಯವಿರಬಹುದು ಬಿಡಿ. ಸಾಮಾನ್ಯವಾಗಿ ವ್ಯಕ್ತಿಗಳ ಹೆಸರನ್ನು ಕೇಳಿದಾಕ್ಷಣ ನಮ್ಮ ಮನಸ್ಸು ಅವರ ಮುಖ ಹೀಗಿರಬಹುದೆಂಬ ಅಸ್ಪಷ್ಟವಾದ ತೀರ್ಮಾನಕ್ಕೆ ಬಂದುಬಿಡುತ್ತದೆ. ನಿಜವಾದ ಮುಖಕ್ಕೂ ನಮ್ಮ ಕಲ್ಪನೆಯ ಮುಖಕ್ಕೂ ಸಂಬಂಧವೇ ಇಲ್ಲದಿರಬಹುದು, ಆದರೂ ಕಲ್ಪನೆ ಮೂಡಿಯೇ ಮೂಡುತ್ತದೆ. ಕೆಲವರು ಆ ಕಲ್ಪನೆಗೂ ತ್ರಾಸು ನೀಡುವಂತಹ ಹೆಸರನ್ನಿಟ್ಟುಕೊಳ್ಳುತ್ತಾರೆ. ನಮ್ಮ ಎಳೆವೆಯಲ್ಲಿ ಕರ್ವಾಲೋ ಕಥೆಗಾರ ಪೂರ್ಣ ಚಂದ್ರ ತೇಜಸ್ವಿಯವರ ಹೆಸರೇ ನಮಗೆ ಖುಷಿ ಕೊಡುತ್ತಿತ್ತು. ಅದರ ಜತೆಗೆ ಗೊಂದಲವನ್ನೂ ತಂದಿಡುತ್ತಿತ್ತು. ಮೂರು ಹೆಸರನ್ನು ಸೇರಿಸಿ ಒಂದು ಹೆಸರು ಮಾಡಿದಂತಿರುವ ಅವರ ನಾಮಾವಳಿ ನಮಗೆ ವಿಚಿತ್ರ ಅನುಭವ ತರುತ್ತಿತ್ತು. ಒಂದೊಂದು ಹೆಸರು ಬೇರೆಬೇರೆಯಾಗಿ ಕೇಳಿದಾಗಲೂ ನಮಗೆ ಮತ್ತೊಂದು ಮುಖ ಕಣ್ಣೆದುರಿಗೆ ಬಂದುಬಿಡುತ್ತಿತ್ತು. ಆಮೇಲೆ ಮತ್ಯಾರೋ ಇನ್ನಷ್ಟು ಗೊಂದಲ ಮಾಡಿದರು ಅವರ ಹೆಸರು ಅಷ್ಟೇ ಅಲ್ಲ ಅದರ ಹಿಂದೆ "ಚಾರು ಚಂದ್ರ ಚಕೋರ" ಎಂದೂ ಇದೆ ಅದನ್ನು ಶಾರ್ಟಾಗಿ ಚಾ.ಚಂ.ಚ.ಪೂ.ಚಂ.ತೆ. ಅಂತಲೂ ಕರೆಯುತ್ತಾರೆ ಎಂದರು. ಅಲ್ಲಿಂದ ನಮಗೆ ಅವರ ಪುಸ್ತಕಗಳನ್ನು ಓದುವಾಗ ಮತ್ತಷ್ಟು ಗೊಂದಲವಾಗುತ್ತಿತ್ತು. ಹೀಗೆ ಉದ್ದನೆಯದಾದ ಹೆಸರನ್ನು ಗಿಡ್ದದಾಗಿ ಮಾಡಿಕೊಂಡ ಅವರ ತಂದೆಯವರ ಹೆಸರಿನಲ್ಲಿ ಕುವೆಂಪು ಎನ್ನುವುದೇ ನಾಮಪದ, ಅದು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಾಂತ ಇನ್ನೂ ಬಹಳ ಜನರಿಗೆ ತಿಳಿದೇ ಇಲ್ಲ ಎನ್ನುವುದೂ ಅರಗಿಸಲಾಗದ ಸತ್ಯ. ಅದೇನೆ ಇರಲಿ, ಬಹುಶಃ ಅವರ ಹೆಸರಿನಿಂದ ನಮ್ಮೂರಲ್ಲೊಬ್ಬರು ಪ್ರಭಾವಿತರಾಗಿದ್ದರು ಅಂತ ಅನ್ನಿಸುತ್ತದೆ , ತಮ್ಮ ಮಗಳಿಗೆ "ರಾಗರುಣೋದಯ ಬಿಂಬಾನನ ಪೂರ್ಣ ಚಂದ್ರಿಕಾ ಸುಹಾಸಿನಿ" ಎಂಬ ಮಾರುದ್ದದ ಹೆಸರನ್ನಿಟ್ಟು ಆಕೆಯನ್ನು ಚಿಕ್ಕದಾಗಿ ಪೂರ್ಣ ಎಂದು ಕರೆಯುತ್ತಿದ್ದರು. ಶಾಲೆಗೆ ಹೊಸತಾಗಿ ಸೇರಿದಾಗ ಆಕೆಯ ಇಷ್ಟುದ್ದಾ.. ಹೆಸರನ್ನು ನೋಡಿದ ಮೇಷ್ಟ್ರು "ನಿನ್ನ ಏನಂತ ಕರೆಯೋದಮ್ಮಾ" ಎಂದಾಗ ಆಕೆ " ನನ್ನನ್ನು ಎಲ್ಲಾರು ಪೂರ್ಣ ಅಂತಾರೆ ನೀವು ಪೂರ್ಣ ಕರೀರಿ ಸಾರ್.. ಎಂದಾಗ, ಅವಳ ಹೆಸರನ್ನು ಸಂಪೂರ್ಣ ಕರೆಯಬೇಕೆಂದು ತಿಳಿದ ಮೇಷ್ಟ್ರು ಮತ್ತೆ ಮತ್ತೆ ಕೇಳಿದಾಗಲೂ, ಆಕೆ ಪೂರ್ಣ ಕರೀರಿ ಸಾರ್ ಎಂದರೆ ಮೆಷ್ಟ್ರು ಕೆಂಡಾಮಂಡಲರಾಗುತ್ತಾರಲ್ಲ ಎಂದು ಅಂದಿನ ದಿನಗಳಲ್ಲಿ ಚಾಲ್ತಿಯಲ್ಲಿದ್ದ ಜೋಕ್ ಎನ್ನಬಹುದಾದ ಕಥೆ. ಇಂಥಹ ನಾಮಾವಳಿಗಳು ಮೂರ್ನಾಮ ಹಾಕಿಕೊಳ್ಳುವಷ್ಟು ತಲೆ ಕೆಡಿಸಿಬಿಡುತ್ತದಲ್ಲಾ ಎಂದು ಒಮ್ಮೊಮ್ಮೆ ಯಾರಿಗಾದರೂ ಅನ್ನಿಸುತ್ತದೆ. ಕೆಲವರಿಗೆ ನಾಮಕರಣ ಮಾಡಿದ ಹೆಸರಿಗೂ ಅವರ ದೇಹ ಪ್ರಕೃತಿಗೂ ಅಜಗಜಾಂತರವಿರುತ್ತದೆ. ಅದು ಅವರ ತಪ್ಪಲ್ಲದಿದ್ದರೂ ಜನರಿಗೆ ಮಾತ್ರ ನೂರಾರು ಸಮಸ್ಯೆ.
ನಮ್ಮ ಪರಿಚಿತ ಪುರೋಹಿತರೊಬ್ಬರ ಹೆಸರು ಪುಟ್ಟಭಟ್ಟರು ಎಂದಾಗಿತ್ತು. ಒಮ್ಮೆ ನಮ್ಮವರ ಮನೆಯಲ್ಲಿ ಶ್ರಾಧ್ದದ ಊಟಕ್ಕೆ ಅವರು ಬರಬೇಕಾಗಿತ್ತು. ೮ ಕಿಲೋಮೀಟರ್ ದೂರದ ಪೇಟೆಯ ಬಸ್ ಸ್ಟ್ಯಾಂಡಿಗೆ ಪುರೋಹಿತ ಪುಟ್ಟಭಟ್ಟರನ್ನು ಕರೆತರಲು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ನೆಂಟರ ಹುಡುಗನಿಗೆ ಬೈಕ್ ಕೊಟ್ಟು ಕಳುಹಿಸಲಾಯಿತು. ೩ ಗಂಟೆಯಾದರೂ ಇಬ್ಬರೂ ನಾಪತ್ತೆ. ಅಂತೂ ಮೂರುವರೆಗೆ ಪುರೋಹಿತರ ಸವಾರಿ ಯಾರದ್ದೋ ಬೈಕಿನ ಮೇಲೆ ಬಂದಾಯಿತು. ಅವರ ಹಿಂದೆ ನೆಂಟರ ಹುಡುಗ ಒಣಮುಖ ಹಾಕಿಕೊಂಡು ಬಂದ. ಕತೆ ಕೇಳಿದರೆ ಆತ " ಪುಟ್ಟಭಟ್ಟರೆಂದರೆ ಸಣ್ಣಗೆ ತೆಳ್ಳಗೆ ಇದ್ದಾರೆ ಎಂಬರ್ಥಮಾಡಿಕೊಂಡು ಅಲ್ಲೆಲ್ಲಾ ಹುಡುಕಾಡಿ ವಾಪಾಸು ಬಂದೆ, ಇವರಾಗಿದ್ದರೆ ಆಗಲೇ ಕಂಡಿದ್ದೆ, ಶ್ರಾದ್ದಕ್ಕೆ ಬರುವ ಭಟ್ಟರು ನೀವಾ ಎಂದು ಕೇಳೋಣ ಅಂದುಕೊಂಡೇ ಆದರೆ ಅವರ ಗಾತ್ರ ನೋಡಿ ಹೆದರಿ ಸುಮ್ಮನುಳಿದೆ" ಎಂದ. ಪುಟ್ಟಭಟ್ಟರು ಎಂಬುದು ಅವರ ಹೆಸರು ಎಂದು ಆತನಿಗೆ ಗೊತ್ತಿರಲಿಲ್ಲ. ಸಣ್ಣಗಿರುವ ಬಟ್ಟರನ್ನು ಆತ ಬಸ್ ಸ್ಟ್ಯಾಂಡನಲ್ಲಿ ಕಾಯುತ್ತಿದ್ದ ಆದರೆ ಇವರದು ಭೀಮಗಾತ್ರ ಶರೀರ ಜತೆಯಲ್ಲಿ ಗಂಟುಮುಖ, ಹೇಳಿಕೇಳಿ ಕರೆಯುವುದು ಶ್ರಾಧ್ಧದೂಟಕ್ಕೆ ಅಕಸ್ಮಾತ್ ಅವರು ಆ ಭಟ್ಟರಾಗಿರದಿದ್ದರೆ ತಪರಾಕಿ ತಿನ್ನಬೇಕಾದೀತೆಂದು ಹೆದರಿ ಆತ ಸಣಕಲು ಭಟ್ಟರಿಗಾಗಿ ಕಾಯುತ್ತಾ ಅಲ್ಲಿ ನಿಂತಿದ್ದ. ಹೆಸರಿಗೂ ಶರೀರಕ್ಕೂ ಸಂಬಂಧ ಇಲ್ಲದಿದ್ದರೆ ಇದೇ ತರಹದ ಸಮಸ್ಯೆಯಾಗುತ್ತದೆ. ಪಾಪ ಅವರಿಗೆ ಹೆಸರಿಟ್ಟವರಿದ್ದೂ ತೀರಾ ತಪ್ಪೇನಿಲ್ಲ, ಭಟ್ಟರು ಹುಟ್ಟುವಾಗ ಸಣ್ಣ ಕಡ್ಡಿಯಾಗಿಯೇ ಇದ್ದರಂತೆ, ಬದುಕುವುದೇ ಕಷ್ಟ ಎಂದುಕೊಂಡವರೇ ಹೆಚ್ಚು,ವಯಸ್ಸಿಗೆ ಬಂದಮೇಲೆ ನಿತ್ಯ ತುಪ್ಪದ ಸೇವನೆ ಅವರ ಗಾತ್ರ ಹೆಚ್ಚಿಸಲು ಕಾರಣವಾಗಿರಲೂಬಹುದು ಬಿಡಿ. ನಮ್ಮ ಊರಿನಲ್ಲಿ ಮತ್ತೊಬ್ಬ ಘಟಾನುಘಟಿ ಪುರೋಹಿತರು. ಅವರಿಗೆ ನಾಮಪದದ ಮೇಲೆ ಬಹಳ ಮಮತೆ. ಪ್ರತೀ ಹೆಸರು ಧನಾತ್ಮಕ ಗುಣಗಳನ್ನು ಹೊಂದಿರಬೇಕು ಎಂಬುದು ಅವರ ಸಿದ್ದಾಂತ. ಯಾವ ಹೆಸರಿನಲ್ಲಾದರೂ ಸ್ವಲ್ಪ ವ್ಯತ್ಯಯ ಉಂಟಾದರೂ ಅವರು ಅದರ ಹಿಂದೆ ಮುಂದೆ ಏನನ್ನಾದರೂ ಸೇರಿಸಿ ದುರಸ್ತಿಮಾಡುತ್ತಿದ್ದರು. ವೃತ್ತಿಯಲ್ಲಿ ಪುರೋಹಿತರಾದ್ದರಿಂದ ಅವರಿಗೆ ಸಹಿಸಲಾರದ ತಲೆನೋವು ಸಂವತ್ಸರದ ರೂಪದಲ್ಲಿ ಆ ವರ್ಷ ಬಂದೇಬಿಟ್ಟಿತು. ಈ ಸಂವತ್ಸರದ ಹೆಸರು "ವ್ಯಯಸಂವತ್ಸರ". ಅದೂ ವ್ಯಯ ಎಂದರೆ ನಷ್ಟ,ಹಾಗಾಗಿ ವರ್ಷಪೂರ್ತಿ ಎಲ್ಲರಿಗೂ ನಷ್ಟ ಎಂಬುದು ಅವರ ಅಚಲ ನಂಬಿಕೆ.ಒಬ್ಬರಿಗೆ ನಷ್ಟವದರೆ ಮತ್ತೊಬ್ಬರಿಗೆ ಲಾಭವಾಗುವ ಸಾಧ್ಯತೆ ಇದೆ ಎಂಬ ಸಿದ್ದಾಂತವನ್ನು ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ. ಒಂದಿನಿತೂ ನಷ್ಟ ಮಾಡಿಕೊಳ್ಳಲು ಇಚ್ಛಿಸದ ಅವರು ಅಂಗಡಿಯಲ್ಲಿ ವ್ಯಯನಾಮ ಸಂವತ್ಸರದ ಪಂಚಾಂಗವನ್ನು ಕೊಂಡಾಕ್ಷಣ ಅಂಗಡಿಯವನ ಹತ್ತಿರವೇ ಪೆನ್ನು ಇಸಿದುಕೊಂಡು ವ್ಯಯದ ಹಿಂದೆ ಅ ಸೇರಿಸಿ ಅವ್ಯಯ ಮಾಡಿಯೇ ಬಿಟ್ಟರು.ಅವರ ಚಳುವಳಿ ಅಷ್ಟಕ್ಕೆ ನಿಲ್ಲದೆ, ಅವರ ಬಳಿ ಮಂಗಲ ಕಾರ್ಯಕ್ರಮಗಳಿಗೆ ಮುಹೂರ್ತವಿರಿಸಿಕೊಳ್ಳಲು ಬರುವ ಶಿಷ್ಯಕೋಟಿಯ ಬಳಿ ಈ ಸಿದ್ದಾಂತವನ್ನು ವೇದಾಂತ ರೂಪದಲ್ಲಿ ವಿವರಿಸಿ ಮಂಗಲಪತ್ರದಲ್ಲಿ ಅವ್ಯಯ ಸಂವತ್ಸರ ಮಾಘ ಶುದ್ಧ........ ಎಂದೇ ಮುದ್ರಣವಾಗುವಂತೆ ನೋಡಿಕೊಂಡರು. ಪುರೋಹಿತರ ಈ ವರ್ತನೆ ಕಂಡ ನಮ್ಮವರೊಲ್ಲೊಬ್ಬ ಸದ್ಯ ಇವರು ಹುಬ್ಬಳ್ಳಿಯ ಕಡೆ ಹೋಗಲಿಲ್ಲ ಅಲ್ಲಿನ ಜನರ ಮೆಣಸಿನಕಾಯಿ,ಉಳ್ಳಾಗಡ್ಡಿ ಎಂಬ ಅಡ್ದ ಹೆಸರು ಇವರ ಹತ್ತಿರ ರೂಪಾಂತರಗೊಂಡು ಸಿಹಿಮೆಣಸಿನಕಾಯಿ, ಉಳ್ಳಾಗಡ್ಡಿಯಲ್ಲ, ಎಂದಾಗಿ ಗದ್ದಲವಾಗುತ್ತಿತ್ತು, ಎಂದು ನಗೆಯ ಅಲೆ ಎಬ್ಬಿಸಿದ್ದ. ಕೆಸರಿನ ಬಣ್ಣದ ಹೆಸರಿನ ಪಾನಕ ಕಣ್ಣಿಗೆ ಕೆಟ್ಟದಾಗಿ ಕಂಡರೂ ಹೊಟ್ಟೆಗೆ ತಂಪು ಎಂಬಂತೆ ಕೆಲವರ ಹೆಸರು ಕೇಳಲು ಕೆಟ್ಟದಾಗಿದ್ದರೂ ಅವರ ಸಾಧನೆಗಳಿಂದ ಹೆಸರಿಗೊಂದು ಅರ್ಥ ತಂದುಕೊಟ್ಟವರಿದ್ದಾರೆ.ಸುಂದರ ಹೆಸರನ್ನಿಟ್ಟುಕೊಂಡು ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ಆ ಹೆಸರಿಗೆ ಕುಖ್ಯಾತಿ ತಂದವರೂ ಇದ್ದಾರೆ. ಮನುಷ್ಯರಿಂದ ಹುಟ್ಟಿ ಮನುಷ್ಯರೊಡನೆ ಬಾಳಿ ಅವರು ಹೋದರೂ ಉಳಿಯುವುದು ಎಂದರೆ ಹೆಸರು ಮಾತ್ರ. ಅದು ಅವರವರು ಬಾಳಿಬದುಕಿದ ರೀತಿ ನೀತಿಯ ಪ್ರಕಾರ, ಅವರವರು ಆಚರಿಸಿದ ಸಿದ್ಧಾಂತ, ಹೇಳಿದ ವೇದಾಂತವನ್ನು ಅನುಸರಿಸಿ ಅದಕ್ಕೆ ತಕ್ಕಷ್ಟು ವರ್ಷಗಳು ಉಳಿಯುತ್ತದೆ. ಶಾಶ್ವತವಾಗಿ ಉಳಿಯುವ ತಾಕತ್ತು ಇರುವುದು ಹೆಸರಿಗೊಂದೆ. ಬದುಕಿದ್ದಾಗ ದೇಹಕ್ಕೆ ಹೆಸರು, ಹೋದಾಗ ಅವರ ಕೆಲಸಕ್ಕೆ ಹೆಸರು, ಮತ್ತೆ ಮರು ಹುಟ್ಟುವ ಭಾಗ್ಯವಿದ್ದರೆ ಹೊಸಾ ಹೆಸರು.ಎನ್ನುವ ಸರ್ವಜ್ಞನಂತಹವರು ಮಾತ್ರಾ ಅಜ್ಞಾತರಾಗಿ ಜ್ಞಾತರಾಗಬಲ್ಲರು. ಹಾಗಾಗಿ ಪ್ರಾರಂಭದಲ್ಲಿಯೇ ಹೆಸರು ಹೆಸರೆಂದು ನೀಂ ಬಸವುಳಿವುದೇಕಯ್ಯಾ ಎಂದಿದ್ದು. ಆದರೆ ಅದು ಕಾಲಕ್ಕೆ ತಕ್ಕಂತೆ ಈಗ ಬದಲಾಗಿ ಹೆಸರಿಗಾಗಿಯೇ ನೀಂ ಬಸವಳಿಯಬೇಕಯ್ಯಾ ಆಗಿದೆ.
Monday, March 2, 2009
ಪೇಪರ್ ಪಾರಾಯಣ ಅಲ್ಲ ಪುರಾಣ
ಬೆಳಿಗ್ಗೆ ಮುಂಚೆ ಸೊರ್ ಸೊರ್ ಶಬ್ದ ಮಾಡುತ್ತಾ ಕಾಫಿಯ ಜತೆಯಲ್ಲಿ ದಿನಪತ್ರಿಕೆಗಳನ್ನು ಓದುವ ಮಜ ಅನುಭವಿಸಿದವರಿಗೆ ಗೊತ್ತು. ಅದೇರೀತಿ ತದೇಕಚಿತ್ತದಿಂದ ಪೇಪರ್ ಓದುತ್ತಿರುವವರನ್ನು,ಅವರು ಮಾಡುವ ಹಾವಭಾವಗಳಾನ್ನು ನೋಡುವುದೂ ಇನ್ನೊಂದು ಮಜ. ಒಂದೊಂದು ಗುಟುಕು ಕಾಫಿ ಒಳ ಸೇರುವಾಗಲೂ ಓದುವವರ ಮುಖದಲ್ಲಿನ ಭಾವನೆಗಳು ಬದಲಾಗುತ್ತಿರುತ್ತವೆ.ಭೀಕರ ಅಪಘಾತದ ಸುದ್ದಿ ಓದುವಾಗ ಅಯ್ಯೋ... ಛೆ..ಛೆ..ಛೇ ಎಂದು ತಮ್ಮಷ್ಟಕ್ಕೆ ಲೊಚಗುಟ್ಟಿ ಅಕಸ್ಮಾತ್ ಮತ್ಯಾರಾದರೂ ಪಕ್ಕದಲ್ಲಿದ್ದರೆ ಅವರ ಮಂಡೆಗೂ ತಮ್ಮ ಕಾಲಕೆಟ್ಟುಹೋಯಿತು ಎಂಬ ಅಭಿಪ್ರಾಯವನ್ನು ತಳ್ಳಿ, ಕೊನೆಯ ಪುಟದಲ್ಲಿ ಸೋತ ಕ್ರಿಕೇಟಿಗರ ಬಗ್ಗೆ ನಮ್ಮವರ ಹಣೆ ಬರಹವೇ ಇಷ್ಟು ಎಂದು ತಲೆಕೆಡಿಸಿಕೊಂಡು, ಅಕಸ್ಮಾತ್ ಗೆದ್ದ ಸುದ್ದಿಯಿದ್ದರೆ ನಾನು ಮೊದಲೇ ಹೇಳಿದ್ದೆ ಎಂದು ಇವರು ಹೇಳಿದ್ದಕ್ಕೆ ಅವರು ಗೆದ್ದರೇನೋ ಎನ್ನುವ ಮುಖಭಾವ ಪ್ರಕಟಪಡಿಸಿ, ನಂತರ ಮಧ್ಯ ಪುಟಕ್ಕೆ ಬಂದಾಗ ಇದಪ್ಪಾ ಸಂಪಾದಕೀಯ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿ, ವ್ಯಂಗ್ಯಚಿತ್ರ ನೋಡಿ ತಮ್ಮಷ್ಟಕ್ಕೆ ಒಂದು ಮುಗುಳ್ನಕ್ಕು, ಹೀಗೆ ಚಿತ್ರವಿಚಿತ್ರವಾಗಿ ಅಭಿನಯಿಸುತ್ತಾ ಮಡಚಿ ಬದಿಗಿಟ್ಟು "ಇತ್ತೀಚೆಗೆ ಪೇಪರ್ರಿನಲ್ಲಿ ಏನೂ ಇರೋದೇ ಇಲ್ಲ,ಬರೀ ಜಾಹಿರಾತು" ಎಂದೋ ಅಥವಾ "ಪೇಪರ್ ಓದುತ್ತಾ ಕುಳಿತರೆ ನಮ್ಮ ಕೆಲಸ ಮಾಡೋರ್ಯಾರೂ ಇಲ್ಲ" ಎಂದು ನಿತ್ಯದ ಮಾತು ಹೇಳಿ ಏಳುವಷ್ಟರಲ್ಲಿ ಕೆಲವರಿಗೆ ಕಾಫಿ ಕುಡಿದದ್ದೇ ನೆನಪಿರುವುದಿಲ್ಲ. ಇನ್ನು ಕೆಲವರ ಕಾಫಿ ಆರಿ ತಣ್ಣಗಾಗಿಬಿಡುತ್ತದೆ.
ದಿನಪತ್ರಿಕೆಯ ಓದುವ ವಿಚಾರದಲ್ಲಿ ಒಬ್ಬೊಬ್ಬರದು ಒಂದೊಂದು ಸಮಯ, ಕಾಫಿ ಜತೆ ಓದುವ ಅಭ್ಯಾಸ ಕೆಲವರದಾದರೆ, ದೇಹಬಾಧೆ ತೀರಿಸಿಕೊಳ್ಳುವ ಜಾಗಕ್ಕೆ ಪೇಪರ್ ಒಯ್ದು ಓದುತ್ತಾ ಕೆಲಸ ಮುಗಿಸುವ ಹಲವರೂ ಇದ್ದಾರೆ. ಆಫೀಸಿಗೆ ಹೋಗುವ ದಾರಿಯಲ್ಲಿ ಮುಖಪುಟ ಓದುತ್ತಾ ಸಾಗುವವರಿಗೇನು ಕೊರತೆಯಿಲ್ಲ. ಬಸ್ಸಿನ ಮೇಲೆ ಕುಳಿತು ಪ್ರಯಾಣದ ತ್ರಾಸು ಕಳೆಯಲು ಪೇಪರ್ ಓದುವ ಸಮಯವನ್ನು ಕೆಲವರು ಮೀಸಲಿಟ್ಟರೆ, ಮತ್ತೆಕೆಲವರು ಪಕ್ಕದವರು ಪೇಪರ್ ಮಡಚುವುದನ್ನೇ ಕಾಯುತ್ತಾ ಸ್ವಲ್ಪ ಹೆಚ್ಚು ಕಮ್ಮಿ ಕಸಿದುಕೊಳ್ಳಲು ತಯಾರಾಗಿರುತ್ತಾರೆ. ಇನ್ನು ಕೆಲವರು ಆಫೀಸಿನಲ್ಲಿ ಆರಂಭದ ಒಂದೂವರೆ ತಾಸು ಪೇಪರ್ ಓದುವ ಅಭ್ಯಾಸಕ್ಕಾಗಿ ಮೀಸಲಿಡುತ್ತಾರೆ.ಹಣಕೊಟ್ಟು ಓದುವವರು,ಬಿಟ್ಟಿ ಓದುವವರು,ಗ್ರಂಥಾಲಯದ ಮೊರೆಹೋಗುವವರು,ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಪತ್ರಿಕೆಯನ್ನು ಕೊಳ್ಳುವವರಂತೆ ನಟಿಸಿ ಹಿಂದೆಮುಂದೆ ತಿರುವಿ ಕಂಡಷ್ಟ್ಟು ಓದಿ ನಂತರ "ಬಸ್ಸು ಬಂತು" ಎಂದು ಯಾರೂ ಕೇಳದಿದ್ದರೂ ತಮ್ಮಷ್ಟಕ್ಕೆ ಗೊಣಗಿಕೊಂಡು ಹೋಗುವವರಿಗೇನೂ ಬರವಿಲ್ಲ. ಅವರು ಪತ್ರಿಕೆ ಖರೀದಿಸದೇ ಸಿಕ್ಕಷ್ಟೇ ಓದಿ ಅಷ್ಟಕ್ಕೆ ಸಮಾಧಾನ ಹೊಂದುವವರು, ಇಂಥವರ ಹೊರತಾಗಿ ಅಂಗಡಿಯಲ್ಲಿಯೇ ಎಲ್ಲಾ ಪತ್ರಿಕೆಗಳನ್ನು ಸಂಪೂರ್ಣ ಓದುವವರು ಹಾಗೂ ಇತ್ತೀಚೆಗೆ ಹೊಸತಾಗಿ ಸೇರ್ಪಡೆಯಾದ ಇಂಟರ್ನೆಟ್ ಓದುಗರು ಹೀಗೆ ಓದುಗರ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಪತ್ರಿಕೆಯನ್ನು ಓದುವ ಪರಿ ಇದಾದರೆ,ಪತ್ರಿಕೆಯಲ್ಲಿನ ವಿಷಯಗಳನ್ನು ಓದುವ ವಿಧಾನ ಇನ್ನೊಂದಿದೆ. ಬಹಳಷ್ಟು ಜನ ಮುಖಪುಟ ಮೊದಲು,ನಂತರ ಹಿಂದಿನ ಪುಟ ಇವಿಷ್ಟೆ ಸಾಕು ಅವರಿಗೆ. ಇನ್ನು ಕೆಲವರಿಗೆ ಕೊನೆಯ ಪುಟ ಮಾತ್ರ ಸಾಕು.ಮತ್ತಿಷ್ಟು ಜನರಿಗೆ ಸ್ಥಳೀಯ ಸುದ್ದಿಯಿರುವ ೨ ಹಾಗು ೩ನೇ ಪುಟವೂ ಬೇಕು. ಹಾಗೂ ಅಪರೂಕ್ಕೊಬ್ಬರಿಗೆ ಇಡೀ ಪತ್ರಿಕೆಯನ್ನೂ,ಪ್ರಿಂಟೆಡ್ ಎಂಡ ಪಬ್ಲಿಷರ್ಸ್ ತನಕವೂ ನಿತ್ಯ ಓದಲೇಬೇಕು. ಈ ರೀತಿ ಪೇಪರ್ ಓದುವ ಹುಚ್ಚು ಕೆಲವೊಮ್ಮೆ ಸ್ವಾರಸ್ಯಕರ ಪ್ರಸಂಗ ನಿರ್ಮಾಣಗೊಂಡು ಚರ್ಚೆಗೆ ಗ್ರಾಸವಾಗುತ್ತದೆ. ಅಂಥಹವರೊಬ್ಬರು ನಮ್ಮೂರಿನಲ್ಲಿದ್ದರು.
ಯಕ್ಷಗಾನ ಅವರ ಆಸಕ್ತಿದಾಯಕ ಕ್ಷೇತ್ರ,ಅಪರೂಪಕ್ಕೊಮ್ಮೆ ಜನರ ಒತ್ತಾಯದ ಮೇರೆಗೆ ಶ್ರಾದ್ಧದೂಟಕ್ಕೆ ಹೋಗುತ್ತಿದ್ದುದು ಉಂಟು. ಒಮ್ಮೆ ಆಪ್ತರೊಬ್ಬರು ಅವರನ್ನು ಶ್ರಾದ್ಧದೂಟದ ಭಟ್ಟರಾಗಿ ಆಹ್ವಾನಿಸಿದ್ದರು. ಶ್ರಾದ್ಧದೂಟದ ಪುರೋಹಿತರಾಗಿ ಹೋಗುವ ದಿನ ಪೇಪರ್ ಭಟ್ಟರ ಕೈಗೆ ಸಿಗುವಷ್ಟರಲ್ಲಿ ಮಧ್ಯಾಹ್ನ ೧ ಗಂಟೆಯಾಗಿತ್ತು. ಪೇಪರ್ ಸಿಗದೆ ಹಪಹಪಿಸುತ್ತಿದ್ದ ಭಟ್ಟರು ಕೈಗೆ ಪೇಪರ್ ಸಿಕ್ಕೊಡನೆ ಅದರಲ್ಲಿ ಮಗ್ನರಾಗಿ ಇಹವನ್ನೇ ಮರೆತರು. ಅತ್ತ ತಿಥಿ ಮನೆಯಲ್ಲಿ ಭಟ್ಟರ ಬರುವಿಕೆಗಾಗಿ ಎರಡುವರೆವರೆಗೂ ಕಾದು ನಂತರ ಇವರನ್ನು ಹುಡುಕುತ್ತಾಬಂದರು. ಭಟ್ಟರು ನಿರುಂಬಳವಾಗಿ ದೇವಸ್ಥಾನದ ಕಟ್ಟೆಯ ಮೇಲೆ ಪೇಪರಿನಲ್ಲಿ ಮಗ್ನರಾಗಿದ್ದು ಕಂಡು ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಭಟ್ಟರಿಗೆ ವಾಸ್ತವದ ಅರಿವಾಗಿದ್ದು ಆವಾಗಲೆ. ಅಷ್ಟರಮೇಲೆ ಸ್ನಾನಮಾಡಿ ಶ್ರಾಧ್ದ ಮಾಡಿಸಿ ಊಟ ಮಾಡುವಷ್ಟರಲ್ಲಿ ಸಂಜೆ ೬ ಗಂಟೆಯಾಗಿತ್ತು. ಹೀಗೆ ದಿನಪತ್ರಿಕೆ ಕೈಗೆ ಸಿಕ್ಕಾಗ ಪ್ರಪಂಚ ಮರೆಯುವವರೂ ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ?.
ದಿನಪತ್ರಿಕೆಗಳನ್ನು ಕೇವಲ ಸುದ್ದಿಗಾಗಿಯೇ ಖರೀದಿಸುತ್ತಾರೆ ಎನ್ನುವುದು ಶುದ್ಧ ಸುಳ್ಳು.ನಾನಾ ಉದ್ದೇಶಗಳಿಗೆ ಪತ್ರಿಕೆ ಮೊರೆಹೋಗುವವರಿದ್ದಾರೆ. ಅದರಲ್ಲಿ ಬರುವ ಕಾರ್ಟೂನ್ನಲ್ಲಿ ಸಂಖ್ಯೆಯನ್ನು ಹುಡುಕಿ ತೆಗೆದು ಬಾಗಿಸಿ ಗುಣಿಸಿ ನಂತರ ಒಂದು ಒಮ್ಮತದ ತೀರ್ಮಾನಕ್ಕೆ ಬಂದು ಮಟ್ಕಾ ಅಂಗಡಿಗೆ ಓಡುವವರಿಂದ ಹಿಡಿದು ನಿತ್ಯ ಭವಿಷ್ಯದಲ್ಲಿ ಇರುವ ಧನಲಾಭವನ್ನು ನಂಬಿ ಲಾಟರಿ ಕೊಳ್ಳುವವರ ತನಕ ವಿವಿದೊದ್ಧೇಶಗಳಿಗೆ ಪತ್ರಿಕೆ ಬಳಕೆಯಾಗುತ್ತದೆ. ಲಾಟರಿ ಫಲಿತಾಂಶಕ್ಕಾಗಿಯೇ ಕೆಲಪತ್ರಿಕೆಗಳನ್ನು ತರಿಸುವ ಭೂಪರಿಗೇನು ಕೊರತೆ ಇಲ್ಲ.
ನನ್ನ ಸ್ನೇಹಿತರ ಪರಿಚಯಸ್ತರೊಬ್ಬರು ಇದೆಕ್ಕೆಲ್ಲಾ ಹೊರತಾದ ಒಂದು ಉದ್ದೇಶಕ್ಕೆ ಪತ್ರಿಕೆ ತರಿಸುತ್ತಿದ್ದರಂತೆ.ಅದನ್ನು ಕೇಳಿದರೆ ಅಚ್ಚರಿಯಾಗುತ್ತದೆ.ಬೆಳಿಗ್ಗೆ ದಿನಪತ್ರಿಕೆ ಕೈಗೆ ಸಿಕ್ಕಾಕ್ಷಣ ಅದರಲ್ಲಿ ಕಪ್ಪು ಇಂಕು ದಟ್ಟವಾಗಿದ್ದ ಭಾಗವನ್ನು ಚೌಕಾಕಾರಕ್ಕೆ ಕತ್ತರಿಸಿ ಅದರಲ್ಲಿ ತಂಬಾಕಿನಪುಡಿ ತುಂಬಿ ಸೇದುವುದು ಅವರ ರೂಢಿ. ಅವರ ಆ ಅಭ್ಯಾಸ(!)ಕ್ಕೆ ಆಗಷ್ಟೇ ಮುದ್ರಣಗೊಂಡ ಹೊಸ ಪತ್ರಿಕೆಯೇ ಆಗಬೇಕಾಗಿದ್ದರಿಂದ ಅದಷ್ಟಕ್ಕಾಗಿಯೇ ಅವರು ಪತ್ರಿಕೆ ತರಿಸುತ್ತಿದ್ದರಂತೆ, ಇದು ನಂಬಲು ಅಸಾಧ್ಯವಾದರೂ ಸತ್ಯವಂತೆ. ಒಮ್ಮೆಲೆ ಗಟಗಟನೆ ಬಾಟಲಿಗಟ್ಟಲೆ ಕೆಮ್ಮಿನ ಔಷಧಿಯನ್ನು ಕುಡಿದು ತೇಲಾಡುವ ಜನರಿರುವ ನಮ್ಮ ದೇಶದಲ್ಲಿ ಇದೇನು ಅಂತಾ ಹೊಸತಲ್ಲ ಬಿಡಿ.
ದಿನಪತ್ರಿಕೆಗಳು ಪ್ರತಿಷ್ಠೆಯ ಸಂಕೇತವಾದ ಕಾಲವೊಂದಿತ್ತು. ಪತ್ರಿಕೆ ತರಿಸುತ್ತಾರೆಂದರೆ ಅವರು ಮುಂದುವರೆದವರು ಎಂಬ ಭಾವನೆ ಇತ್ತು.ಈಗ ನಮ್ಮ ಹಳ್ಳಿಗಳಲ್ಲಿ ಎಲ್ಲರ ಮನೆಗೂ ಪತ್ರಿಕೆಗಳು ಬರುತ್ತವೆ. ಹಿಂದೆ ಹಾಗಿರಲಿಲ್ಲ. ಅದರಲ್ಲಿನ ವಿಷಯಗಳ ಬಗ್ಗೆ ನಾಲ್ಕಾರು ಜನ ಸೇರಿದಲ್ಲಿ ಘನಗಂಭೀರವಾದ ಮುಖಭಾವದಮೂಲಕ ವಿಷದಪಡಿಸುವುದು ಪ್ರತಿಷ್ಠೆಯ ಸಂಕೇತವಾಗಿತ್ತು.ಅದು ಕೆಲವೊಮ್ಮೆ ಅಪಹಾಸ್ಯಕ್ಕೀಡಾಗುವ ಸಂಭವವೂ ಇರುತ್ತಿತ್ತು. ಒಮ್ಮೆ ಹಾಗೆಯೇ ಆಯಿತು.
ನಮ್ಮ ದೊಡ್ಡಮ್ಮ ಅನಕ್ಷರಸ್ತೆ. ದೊಡ್ಡಪ್ಪ ಅವರಿಗೆ ಅಕ್ಷರ ಕಲಿಸಲು ಹಲವಾರು ತರಹದ ಪ್ರಯತ್ನ ಮಾಡಿ ಕೈ ಸೋತಿದ್ದರು. ಅಂತೂ ಇಂತು ಕೆಲವಾರು ಅಕ್ಷರಗಳನ್ನು ಅವರು ಗುರುತಿಸುತ್ತಿದ್ದರು. ಅಕ್ಷರಗಳನ್ನು ಬಿಡಿ ಬಿಡಿಯಾಗಿ ಓದುತ್ತಿದ್ದ ಆವರು, ಕೂಡಿಸಿ ಹೇಳುವಾಗ ಅನರ್ಥಮಾಡಿಬಿಡುತ್ತಿದ್ದರು.ಕೆಂಪು ಎಂಬ ಶಬ್ಧವನ್ನು ಕೆ ಸೊನ್ನೆ ಪು ಎಂದು ಸರಿಯಾಗಿ ಓದಿ ನಂತರ ಕಾಗೆ ಎಂದುಬಿಡುತ್ತಿದ್ದರು.ನಮಗೆ ಬಾಳೆಹಣ್ಣು ಸುಲಿದಷ್ಟು ಸುಲಭವಾಗಿ ತೋರುವ ಶಬ್ಧಗಳು ಅವರಿಗೆ ಕಬ್ಬಿಣದ ಕಡಲೆ. ಆಕೆಗೂ ತನಗೆ ಓದಲು ಬರುತ್ತದೆ ಎಂದು ಜನರೆದುರಿಗೆ ತೋರಿಸಿಕೊಳ್ಳಬೇಕೆಂಬ ಚಪಲ. ನಾಲ್ಕಾರು ಜನ ಸೇರಿದಲ್ಲಿ ತಾನು ತಿಳಿದವಳು ಎಂದಾಗಬೇಕು ಎಂಬ ಆಸೆ. ಆಸೆ ತಪ್ಪಲ್ಲ ಆದರೆ ಅದು ಒಮ್ಮೊಮ್ಮೆ ಎಂಥಾ ಯಡವಟ್ಟಾಗುತ್ತದೆ ಎನ್ನುವುದಕ್ಕೆ ಅವರ ಈ ಪ್ರಸಂಗವೇ ಉದಾಹರಣೆ.
ಅವರ ಎರಡನೆ ಮಗನ ಹೆಣ್ಣು ನಿಶ್ಚಯದ ಸಮಾರಂಭ. ನಿಶ್ಚಿತಾರ್ಥದ ಮಾತುಕತೆ ಮುಗಿದಾದಮೇಲೆ ಜಗುಲಿಯಲ್ಲಿ ಎಲ್ಲರೂ ಹರಟೆ ಹೊಡೆಯುತ್ತಾ ಕುಳಿತಿದ್ದರು. ಅಲ್ಲಿ ಅವತ್ತಿನ ದಿನ ಪತ್ರಿಕೆ ಇತ್ತು, ನಮ್ಮ ದೊಡ್ಡಮ್ಮನಿಗೆ ಬರುವ ಸೊಸೆಯೆದುರು ತಾನು ಬುದ್ದಿವಂತೆ ಅಂತ ತೋರಿಸಿಕೊಳ್ಳಬೇಕು ಅಂತ ಅನ್ನಿಸಿರಬೇಕು.ಅದನ್ನು ಕೈಗೆ ತೆಗೆದುಕೊಂಡು ಸ್ಟೈಲಾಗಿ ಹಿಡಿದುಕೊಂಡು "ಪ್ರಜಾವಾಣಿ" ಎಂದು ದೊಡ್ಡದಾಗಿ ಓದಿದರು. ಅದನ್ನು ಕೇಳಿದ ಕೆಲವರು ಮುಸಿಮುಸಿ ನಗತೊಡಗಿದರು. ಕಾರಣ ಅವರ ಉಪಾಯ ಸ್ವಲ್ಪ ಎಡವಟ್ಟಾಗಿತ್ತು,ದೊಡ್ಡಮ್ಮನ ಮನೆಗೆ ಬರುತ್ತಿದ್ದ ದಿನಪತ್ರಿಕೆ ಪ್ರಜಾವಾಣಿ, ಅದನ್ನೆ ಆಧಾರವಾಗಿಟ್ಟುಕೊಂಡು ಅವರು ಹಾಗೆ ಓದಿದ್ದರು ಆದರೆ ಅಲ್ಲಿದ್ದಿದ್ದ ದಿನಪತ್ರಿಕೆ ಉದಯವಾಣಿ!.
ನಮ್ಮೂರಿನಲ್ಲಿ ಪತ್ರಿಕೆಗಳನ್ನು ನಾನಾ ಉದ್ದೇಶಕ್ಕೆ ಬಳಸುವವರಿದ್ದಾರೆ. ದಿನದಲ್ಲಿ ಆರು ತಾಸು ದಿನಪತ್ರಿಕೆ ಹಿಡಿದುಕೊಂಡು ಕೂರುವವರಿಗೇನು ಬರವಿಲ್ಲ. ಹೀಗೆ ಇಲ್ಲೊಬ್ಬರು ಊರಿನಲ್ಲಿ ಹಣವಿದ್ದವರ ಸಾಲಿಗೆ ಸೇರುವ ಗೌರವಾನ್ವಿತ ಜನ, ನಾವು ನೋಡಿದಾಗಲೆಲ್ಲ ದಿನಪತ್ರಿಕೆ ಬಿಡಿಸಿಕೊಂಡು ಕುಳಿತಿರುತ್ತಿದ್ದರು. ನಾವು ಹತ್ತಿರ ಹೋದರೆ ಕೆಳಗಿದ್ದ ಪತ್ರಿಕೆ ಎರಡೂ ಕೈಯಲ್ಲಿ ಎತ್ತಿ ಹಿಡಿದು ಗಹನವಾಗಿ ಓದಲು ಶುರುವಿಟ್ಟುಕೊಳ್ಳುತ್ತಿದ್ದರು. ಹಾಗಂತ ಅಷ್ಟು ಹೊತ್ತು ಓದಿದರೂ ಅವರಿಗೆ ಯಾವ ವಿಷಯವೂ ಗೊತ್ತಿರುತ್ತಿರಲಿಲ್ಲ. ರಾಜೀವ ಗಾಂಧಿ ಸತ್ತದಿನವೂ,ದೇವೆ ಗೌಡರು ಪ್ರಧಾನಿಯಾದ ದಿನವೂ ನಾವು ವಿಷಯ ಹೇಳಿದ ಮೇಲೆ ಹೌದಾ ಎನ್ನುತ್ತಿದ್ದರು. ನಮಗೆ ಇದೊಂದು ವಿಚಿತ್ರ, ಬೆಳಿಗ್ಗೆಯಿಂದ ಸಂಜೆವರೆಗೂ ಪೇಪರ್ ಹಿಡಿದುಕೊಂಡಿರುವ ಇವರು ಏನು ಮಾಡುತ್ತಾರೆ ಎಂಬ ಗುಮಾನಿ.ನಮ್ಮ ತಂಡದಲ್ಲೊಬ್ಬನಿಗೆ ಅವರು ಪತ್ರಿಕೆಯ ಮಧ್ಯೆ ಅಶ್ಲೀಲ ಪುಸ್ತಕ ಇಟ್ಟುಕೊಂಡು ಓದುತ್ತಾರೆ ಎಂಬ ಸ್ವಾನುಭವದ ಅನುಮಾನ. ಕೊನೆಗೊಂದು ದಿನ ಗೆಳೆಯರ ತಂಡ ಇದರ ಮರ್ಮವನ್ನು ಪತ್ತೆ ಮಾಡಬೇಕೆಂದು ತೀರ್ಮಾನಿಸಿತು . ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಊರಿಗೆ ದೊಡ್ಡ ಜನ, ಸೀದಾ ಹೋಗಿ ಇಣಕುವಂತಿಲ್ಲ. ಸರಿ ಅದಕ್ಕೊಂದು ಉಪಾಯ ಸಿದ್ಧವಾಯಿತು. ಅವರು ಓದುವ ಸಮಯದಲ್ಲಿ ಹಿತ್ತಲಲ್ಲಿ ಹಾವು ಹಾವು ಎಂದು ಗಾಬರಿಯಿಂದ ಬೊಬ್ಬೆ ಹಾಕಿ ಅವರನ್ನು ಕೂಗುವುದು ಅವರು ಅತ್ತ ಹೋದಾಗ ಇತ್ತ ಒಬ್ಬ ಪತ್ತೆ ಮಾಡುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಿ ಆಚರಣೆಗೆ ತರಲಾಯಿತು.ನಂತರ ಪತ್ತೆಯಾಗಿದ್ದಿಷ್ಟೆ ದಿನಪತ್ರಿಕೆಯ ಮಧ್ಯಪುಟದಲ್ಲಿ ಮಟ್ಕಾದ ಸಂಖ್ಯೆ ಮೂರ್ನಾಲ್ಕು ತಿಂಗಳಿನಿಂದ ಯಾವುದು ಬಂದಿದೆ ಎಂದು ವಿವರಿಸುವ ಬಣ್ಣ ಬಣ್ಣದ ಚಾರ್ಟ್ ಇತ್ತು. ಮಟ್ಕಾ ಆಡುತ್ತಾರೆ ಎಂದು ತಿಳಿದರೆ ಯೋಗ್ಯತೆಗೆ ಕುಂದು ಬರುತ್ತದೆ ಎಂದು ಅವರು ದಿನಪತ್ರಿಕೆಯ ಮೊರೆಹೋಗಿದ್ದರು.
ನಮ್ಮ ಊರಿನ ಕಿರಾಣಿ ಅಂಗಡಿಮಾಲಿಕರದ್ದು ಮತ್ತೊಂದು ಕತೆ ಅವರು ಭಾಷೆಗಳ ಬೇಧವೆಣಿಸದೆ ಪ್ರಕಟವಾಗುವ ಎಲ್ಲಾ ದಿನಪತ್ರಿಕೆಗಳನ್ನು ತರಿಸುತ್ತಿದ್ದರು. ಹಾಗಂತ ಅಬ್ಬಾ...! ಎಂಥಾ ಪುಸ್ತಕ ಪ್ರೇಮಿ, ಎಂದೆಣಿಸದಿರಿ. ಅವರು ಖರೀದಿಸುತ್ತಿದ್ದುದು ಶುಕ್ರವಾರದ ಪತ್ರಿಕೆಯನ್ನು ಮಾತ್ರ. ಓ ಇವರು ಸಿನೆಮಾ ಪ್ರೇಮಿ.! ಅಂದುಕೊಂಡೀರಿ, ಅದೂ ಅಲ್ಲ ಅವರಿಗೆ ಬೇಕಾಗಿದ್ದುದು ಅಂದು ಪ್ರಕಟವಾಗುತ್ತಿದ್ದ ನಟಿಯರ ವಿಶೇಷ ಭಂಗಿಯ ಬ್ಲೋಅಪ್ ಚಿತ್ರಗಳು. ಅದನ್ನು ಚಂದವಾಗಿ ಕತ್ತರಿಸಿ ಬೆಳೆಕಾಳು ಹಾಕಿಡುವ ಡಬ್ಬಕ್ಕೆ ಅಂಟಿಸಿಟ್ಟುಕೊಳ್ಳುತ್ತಿದರು. ನಾಲ್ಕು ಮುಖವಿರುವ ತಗಡಿನ ಡಬ್ಬಕ್ಕೆ ಮೂರು ಕಡೆ ಈ ತರಹದ ಚಿತ್ರ ಒಂದು ಕಡೆ ದೇವರ ಚಿತ್ರ ಅಂಟಿಸಿಡುತ್ತಿದ್ದರು. ಗಿರಾಕಿಗಳಿಗೆ ಕಾಣಿಸುವುದು ದೇವರ ಚಿತ್ರ ಆಮೇಲೆ ತಮಗೆ ಇಷ್ಟವಾದ ಚಿತ್ರ ನೋಡಿಕೊಳ್ಳುತ್ತಿದ್ದರು.ಅವರು ಅಷ್ಟರಮಟ್ಟಿಗಿನ ಪತ್ರಿಕಾ ಪ್ರೇಮಿ.
ಪೇಪರ್ ಎಂದರೆ ದಿನಪತ್ರಿಕೆ ಎಂದು ತಿಳಿದ ಅಜ್ಜಿಯೊಬ್ಬಳು ನಮ್ಮ ಮನೆಯಲ್ಲಿದ್ದಳು. ಯಾರೋ ಅವಳ ಕಿವಿಗೆ ಅಮೆರಿಕಾದಲ್ಲಿ ಕಕ್ಕಸಿಗೆ ಹೋದ ನಂತರ ಶುಚಿಮಾಡಿಕೊಳ್ಳಲು ನೀರನ್ನು ಬಳಸದೆ ಪೇಪರ್ ಬಳಸುತ್ತಾರೆ ಎಂಬ ಸುದ್ದಿಯನ್ನು ತಲುಪಿಸಿದ್ದರು. ಅದೊಂದೇ ಕಾರಣದಿಂದ ಅವರಿಗೆ ಆ ದೇಶದ ಮೇಲೆ ಬಹಳ ಸಿಟ್ಟು.ನನ್ನ ಮಾವನ ಮಗ ಅಮೇರಿಕಾದಿಂದ ಬಂದಿದ್ದ.ಅವನ ಕಂಡೊಡನೆಯೇ ಅಜ್ಜಿ ಹತ್ತಿರ ಹೋಗಿ "ನಿನ್ನ ಅಮೇರಿಕಾದವರು ಎಂತಾ ಜನವೋ, ಪೇಪರ್ ಎಂದರೆ ಸರಸ್ವತಿ ಅಂಥಾದ್ದನ್ನು....... ಅಯ್ಯೋ ಪರಮಾತ್ಮ ಆ ದೇಶದ ಸುದ್ದಿ ನನ್ನ ಬಳಿ ಎತ್ತಬೇಡ, ನೀನು ಮತ್ತೆ ಅಲ್ಲಿಗೆ ಕಾಲಿಡಬೇಡ ಎಂದು ಹಠ ಹಿಡಿದುಬಿಟ್ಟಿದ್ದಳು. ಅದು ಅಕ್ಷರಗಳಿರುವ ದಿನಪತ್ರಿಕೆ ಅಲ್ಲ ಟಿಶ್ಯುಪೇಪರ್ ಅಂತ ಖಾಲಿ ಕಾಗದ ಎಂದು ವಿವರವಾಗಿ ಸಮಜಾಯಿಶಿ ನೀಡಿದ ಮೇಲೆ "ಮತ್ತೆ ಮೇಲಿನಮನೆ ಮುಂಡೆಗಂಡ ನನ್ನ ಬಳಿ ಕಕ್ಕಸು ತೊಳೆಯಲು ಪೇಪರ್ ಬಳಸುತ್ತಾರೆ ಎಂದು ಸುಳ್ಳು ಹೇಳಿದನಲ್ಲೊ" ಎಂದು ತಾನು ತಿಳಿದುಕೊಂಡಿದ್ದೆ ಸರಿ ಎಂಬಂತೆ ಸಮಾಧಾನ ಪಟ್ಟುಕೊಂಡಿದ್ದಳು.
ಹೀಗೆ ಪತ್ರಿಕೆಗಳಿಂದಾಗುವ ಪುರಾಣಗಳನ್ನು ಹೇಳುತ್ತಾ ಸಾಗಿದರೆ ಅದಕ್ಕೊಂದು ಅಂತ್ಯವೇ ಇಲ್ಲ. ಜನಸಾಮಾನ್ಯರಿಗೆ ಪ್ರತಿನಿತ್ಯದ ಸುದ್ದಿಯನ್ನು ತಿಳಿಸಲಿರುವ ಪತ್ರಿಕೆಗಳಿಂದಲೇ ಸುದ್ದಿಯಾಗುವ ಅಚ್ಚರಿಗಳು ಹಲವಾರು ಸಿಗುತ್ತಲೇ ಇರುತ್ತವೆ. ಒತ್ತಡದ ಇಂದಿನ ದಿನಗಳಲ್ಲಿ ಮುಖದಲ್ಲಿ ಒಂದು ಸಣ್ಣ ನಗು ಮಿಂಚಿ ಮಾಯವಾಗಲು ಪತ್ರಿಕೆಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸುತ್ತವೆ. ಸುದ್ದಿಮಾಡಲು ಹೋಗಿ ಸುದ್ದಿಯಾಗುತ್ತವೆ ಎಂಬ ಪ್ರಕ್ರಿಯೆ ನಿರಂತರ . 9342253240

Subscribe to:
Posts (Atom)