Thursday, November 13, 2008

ಹಾಗೆಲ್ಲಾ..ಎಲ್ಲರಿಗೂ ಅನ್ನಿಸುತ್ತೆ ..ಪ್ರಾಂಕ್ಫರ್ಟ್ ನಗರದ ಅಗಲದ ರಸ್ತೆಯಲ್ಲಿ ಜೊಂಯ್ ಅಂತ ಕಾರಲ್ಲಿ ಹೋಗುತ್ತಿರುವಾಗ ನಮ್ಮ ದೇಶ ನೆನಪಾಗಿ ಅಲ್ಲಿನ ರಸ್ತೆಯನ್ನೂ ಹೀಗೆ ಮಾಡಬೇಕು ಅನ್ನಿಸುತ್ತೆ. ಆದರೆ ಇಲ್ಲಿ ಬಂದು ಕಿಷ್ಕಿಂದೆಯ ರಸ್ತೆಗೆ ಅಂಗಡಿ ಇಟ್ಟುಕೊಂಡವರನ್ನು ಅಲುಗಾಡಿಸಲಾಗದೆ ಸುಮ್ಮನಿರಬೇಕಾಗುತ್ತೆ. ನಮ್ಮ ರಾಜಕಾರಣಿಗಳು ಸರಿ ಇಲ್ಲ ಅವರು ಸರಿ ಇದ್ದಿದ್ದರೆ ಇವೆಲ್ಲಾ ಸರಿ ಇರುತ್ತಿತ್ತು ಅಂತ ಅನ್ನಿಸುತ್ತೆ ಆದರೆ ಎಂ.ಎಲ್.ಎ ಎಲೆಕ್ಷನ್ ನಲ್ಲಿ ಆತ ಒಂದು ಕೋಟಿ ರೂಪಾಯಿ ಹಂಚಿ ಗೆಲ್ಲಬೇಕಾದ ಪರಿಸ್ಥಿತಿ ಇದೆ ಎಂದು ಅರಿವಾದಾಗ ಮನ ಮುದುಡುತ್ತೆ . ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ತಿಂಗಳು ತಿಂಗಳೂ ಸಂಬಳ ಎಣಿಸುತ್ತಾ ಡ್ಯೂಟಿ ಮಾಡುತ್ತಿರಬೇಕಾದರೆ ತತ್ ಇದು ಕತ್ತೆ ಚಾಕರಿ ಜೀತ ಬೆಳೆಗ್ಗೆದ್ದು ಆಫೀಸು ಟೆನ್ಷನ್ ಅದೇ ಊರಲ್ಲಿರುವ ಅಣ್ಣ ಜುಂ ಅಂತ ಇದ್ದಾನೆ ನಾವೂ ಅಲ್ಲಿ ಹೋಗಿಬಿಡೋಣ ಅಂತ ಅನ್ನಿಸುತ್ತೆ. ಆದರೆ ಹಳ್ಳಿಗೆ ಬಂದಾಗ ಕೈಯಲ್ಲಿ ಕಾಸಿಲ್ಲದೆ ಸಮಯಕ್ಕೆ ಸರಿಯಾದ ಕೆಲಸ ಇಲ್ಲದೆ ಹೊತ್ತೇ ಹೋಗದೆ ತತ್ ದರಿದ್ರ ಅಂತ ಅನ್ನಿಸುತ್ತೆ. ಊರಿಂದ ಅಮ್ಮ ಫೋನ್ ಮಾಡಿಕೊಂಡು ನಿನ್ನ ಅಣ್ಣ ಅತ್ತಿಗೆ ನಮ್ಮನ್ನು ಮುದುಕರು ಎಂದು ತಾತ್ಸಾರ ಮಾಡುತ್ತಿದ್ದಾರೆ ಎಂದಾಗ ಅಣ್ಣ ಅತ್ತಿಗೆಗೆ ಏನಾಗಿದೆ ದಾಡಿ? ವಯಸ್ಸಿನಲ್ಲಿ ಅಪ್ಪ ಅಮ್ಮ ಸಾಕಿಲ್ಲವೇ ಅವರನ್ನು ಇನ್ನು ಎಷ್ಟು ವರ್ಷ ಬದುಕುತ್ತಾರೆ ಅವರು ಚೆನ್ನಾಗಿ ನೋಡಿಕೊಳ್ಳಬೇಕಪ್ಪ, ಮಾತೃ ದೇವೋ ಭವ ಅಲ್ಲವೆ ಅಂತ ಅನ್ನಿಸುತ್ತೆ. ಅಪ್ಪ ಅಮ್ಮ ನನ್ನು ಸಿಟಿ ಯ ಮನೆಗೆ ಕರೆದುಕೊಂಡು ಬಂದು ಸುಖವಾಗಿ ಇಡೋಣ ಎಂದಾಗ ಹೆಂಡತಿ ಅದು ಸಾಧ್ಯವಿಲ್ಲದ ಮಾತು ಎಂದು ಸಿಡಿಮಿಡಿ ಗುಟ್ಟಿದಾಗ ಅಣ್ಣನ ಪರಿಸ್ಥಿತಿ ಅರಿವಾಗುತ್ತೆ. ಅದ್ಯಾರಿಗೋ ಬಿಪಿಯಂತೆ ಷುಗರ್ ಅಂತೆ ಯಾವಾಗಲೂ ತನ್ನ ಖಾಯಿಲೆಯದೇ ವರಾತವಂತೆ ,ಎಂದಾಗ ಸಿಕ್ಕಾಪಟ್ಟೆ ತಿಂತಾನೆ, ವಾಕಿಂಗ್ ಮಾಡಲ್ಲ ಕಾಯಿಲೆ ಬರದೆ ಇನ್ನೇನಾಗುತ್ತೆ?ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅಂತ ಅನ್ನಿಸುತ್ತೆ. ನಳನಳಿಸುವ ಆರೋಗ್ಯದಿಂದಿದ್ದ ನಾವು ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದಾಗ ಡಾಕ್ಟರ್ ನಿಮಗೆ ಬಿಪಿ ಇದೆ ಎಂದಾಗ "ಈ ದರಿದ್ರ ಕಾಯಿಲೆ ಅದು ಹೇಗೆ ಬರುತ್ತೋ.? ಈಗಿನ ಆಹಾರವೇ ವಿಷಯುಕ್ತ " ಅಂತ ಅನ್ನಿಸುತ್ತೆ. ಊರಿಂದ ದೂರದ ಪ್ರಯಾಣಕ್ಕೆ ಬಸ್ ಏರಿ ಕುಳಿತಾಗ ಹೆಂಗಸೊಬ್ಬಳು ವಯಕ್ ಅಂತ ವಾಂತಿಮಾಡಿದಾಗ ಏನು ದರಿದ್ರ ಜನರಪ್ಪಾ ಕಾಮನ್ ಸೆನ್ಸ್ ಇಲ್ಲ ಸಿಕ್ಕಿದ್ದೆಲ್ಲಾ ತಿಂತಾರೆ ಇಲ್ಲಿ ಬಂದು ಕಕ್ತಾರೆ ಅಂತ ಅನ್ಸುತ್ತೆ . ಆದರೆ ಮನದೆನ್ನೆ ಅದೇ ವಯಕ್ ಅಂತ ಶಬ್ದ ಮಾಡಿದರೆ "ಅಯ್ಯೋ ಏನ್ಮಾಡಕಾಗುತ್ತೆ ದರಿದ್ರ ಬಸ್ ನಲ್ಲಿ ಕೆಟ್ಟ ಬೆವರು ವಾಸನೆ ವಾಂತಿ ಬರ್ದೆ ಇನ್ನೇನಾಗುತ್ತೆ ಅನ್ನೋ ಡೈಲಾಗ್ ತನ್ನಿಂದ ತಾನೆ ಬರುತ್ತೆ. ಗೋಮಾತೆ ಮಾತೆ ಎನ್ನಿರೋ ಎಂದು ವೇದಿಕೆಯಲ್ಲಿ ಭಾಷಣ ಕೇಳುವಾಗ ಗೋವಿನ ಮಹತ್ವ ಕೇಳಿದಾಗ ನಾವೂ ಒಂದು ಒಳ್ಳೆಯ ಆಕಳು ಸಾಕೋಣ ಅಂತ ಅನ್ನಿಸುತ್ತೆ. ಮನೆಗೆ ತಂದ ಆಕಳು ಹಾಲು ಕರೆಯಲು ಹೋದಾಗ ದುಬುಲ್ ಅಂತ ಒದ್ದು ಮುಂಗೈ ಬುರುಬುರು ಅಂತ ಬೂರೆ ಗಡುಬಿನ ತರಹ ಉಬ್ಬಿದಾಗ ಭಾಷಣಕಾರ ಆಕಳು ಸಾಕಿಲ್ಲ ಕೇವಲ ಬೊಗಳೆ ಬಿಟ್ಟಿದ್ದಾನೆ ಅಂತ ಅರಿವಾಗುತ್ತೆ. ಜತೆಗೆ ಕೆಲಸ ಮಾಡುವ ಕಲೀಗ್ ಳ ಬಳುಕಾಟ ಕುಲುಕುಲು , ಗುಳಿಬೀಳುವ ಕೆನ್ನೆ ಕಂಡಾಗ ಮನೆಯಲ್ಲಿರುವ ಹೆಂಡತಿ ನೆನಪಾಗಿ ನಾನು ಅವಳ ಕಟ್ಟಿಕೊಳ್ಳುವುದರ ಬದಲು ಇವಳನ್ನೇ ಮದುವೆ ಮಾಡಿಕೊಂಡಿದ್ದರೆ ಸ್ವರ್ಗ ಕಾಣಬಹುದಿತ್ತು ಅಂತ ಅನ್ನಿಸುತ್ತೆ. ಅದೇ ಗೊಣಗಾಟವನ್ನು ಇದೇ ಕಲೀಗ್ ಳ ಗಂಡನೂ ಗುಣುಗುಣಿಸುತ್ತಿದ್ದಾನೆ ಎಂದು ಅರಿವಾದರೆ ಮದುವೆಯ ಮರ್ಮ ತಿಳಿಯುತ್ತೆ. ಧ್ಯಾನದಿಂದ ಬಿಪಿ ಷುಗರ್ ವಾಷ್ ಔಟ್ ಆಗಿಬಿಡುತ್ತೆ ಎಂದು ಧ್ಯಾನದ ಮಾಸ್ಟರ್ ಭಾಷಣ ಮಾಡುವಾಗ ನಾವೂ ಸಾವಿರ ರೂಪಾಯಿ ಕೊಟ್ಟು ಧ್ಯಾನ ಕಲಿತುಬಿಡಬೇಕು ಅಂತ ಅನ್ನಿಸುತ್ತೆ. ಅದೇ ಧ್ಯಾನದ ಟೀಚರ್ ಭಾಷಣ ಮುಗಿಸಿ ಮನೆಗೆ ಹೋಗಿ ಬಿಪಿ ಮಾತ್ರೆ ನುಂಗುವುದನ್ನು ಕಂಡರೆ ಒಹೋ ಅಂತ ಅನ್ನಿಸುತ್ತೆ. ನಾವು ಕಳೆದುಕೊಂಡಿದ್ದು ಮುಂದೆ ಗಳಿಸಬಹುದಾದದ್ದು ಮಕ್ಕಾಮಕ್ಕಿ ಹೇಳುವ ಜ್ಯೋತಿಷಿಯ ಕಂಡು ಮನ ಅಚ್ಚರಿಗೊಳಗಾಗುತ್ತೆ ಅದೇ ಜ್ಯೋತಿಷಿ ತಾನು ಕಳೆದುಕೊಂಡ ಪವಿತ್ರದುಂಗುರದ ಹುಡುಕಾಟಕ್ಕೆ ಹೆಂಡತಿಯ ಸಹಾಯ ಕೇಳುವುದು ಕಂಡರೆ ಇದು ಹೀಗಾ ಅಂತ ಅನ್ನಿಸುತ್ತೆ. ಆಫೀಸಿನಲ್ಲಿ ಬಾಸ್ ಕೆಲಸಕ್ಕಾಗಿ ಒತ್ತಡ ಹೇರಿದಾಗ ಶೊಷಣೆ ಅನ್ನಿಸಿ ಅವನ ಮುಖಕ್ಕೆ ಗುದ್ದಿಬಿಡೋಣ ಅಂತ ಅ ನ್ನಿಸುತ್ತೆ, ಕಾಲಾನಂತರ ನಾವೇ ಬಾಸ್ ಆದಾಗ ದರಿದ್ರ ಪೆಡ್ಡೆಗಳು ಜವಾಬ್ದಾರಿ ಇಲ್ಲ ಕೆಲಸ ಮಾಡೋಲ್ಲ ಕೇವಲ ಸಂಬಳ ತಿಂತಾರೆ ಅಂತ ಅನ್ನಿಸುತ್ತೆ. ಯಾರೋ ಬರೆದ ಲೇಖನ ಓದುವಾಗ ಇದು ಏನಂತ ಬರೆದಿದ್ದಾರೆ ಅಂತ ಅನ್ನಿಸುತ್ತೆ, ನಾವು ಬರೆಯಲು ಕೂತಾಗ ನಾಲ್ಕು ಪದಗಳ ಮುಂದೆ ಹೋಗದೆ ಇದೆಲ್ಲ ಕೆಲಸವಿಲ್ಲದವರು ಮಾಡುವ ಉದ್ಯೋಗ ಅಂತ ಅ ನ್ನಿಸುತ್ತೆ. ಬಗೆಹರಿಯದ ಸಮಸ್ಯ್ರೆ ಬಂದಾಗ ದೇವರೇ ನೀನೆ ಕಾಪಾಡು ಎಂದು ಪ್ರಾರ್ಥಿಸೋಣ ಅಂತ ಅನ್ನಿಸುತ್ತೆ ಸಮಸ್ಯೆ ಬಗೆಹರಿದಾಗ ನನ್ನ ತಾಕತ್ತಿನಿಂದ ಬಗೆಹರಿಸಿಕೊಂಡೆ ಅಂತ ಅನ್ನಿಸುತ್ತೆ. ಎಸಿ ರೂಮಿನಲ್ಲಿ ಕುಳಿತು ವರ್ಷಕ್ಕೆ ನಾಲ್ಕು ಲಕ್ಷದ ಸಂಬಳ ಪ್ಯಾಕೇಜ್ ಅನುಭವಿಸುತ್ತಿರುವಾಗ ನಿರುದ್ಯೋಗದವರನ್ನು ಕಂಡು ಅವರು ಅವಕಾಶ ಹುಡುಕಿಕೊಳ್ಳಲಿಲ್ಲ ಶ್ರಮ ಪಡಲಿಲ್ಲ ಸೋಮಾರಿಗಳು ಹಾಗಾಗಿ ಅವರ ಗತಿ ಅದು ಅಂತ ಅನ್ನಿಸುತ್ತೆ ಇದ್ದಕ್ಕಿದ್ದಂತೆ ಮಾರ್ಕೆಟ್ ಗೋತಾ ಆಗಿ ಇದ್ದ ಕೆಲಸ ಹೋಗಿ ಬೇರೆ ನಾಲ್ಕು ಲಕ್ಷದ ಪ್ಯಾಕೇಜ್ ಸಿಗದಾಗ ಎಲ್ಲಾ ಗ್ರಹಚಾರ ಅಂತ ಅನ್ನಿಸುತ್ತೆ. ರಾಮನ ವೇಷಧಾರಿ ಏಕಪತ್ನಿ ವೃತದ ಬಗ್ಗೆ ಅರ್ಥ ಹೇಳುವಾಗ ಆಟ ರಂಗೇರುತ್ತದೆ, ಆದರೆ ಆತನಿಗೆ ನಿಜಜೀವನದಲ್ಲಿ ಮೂರು ಹೆಂಡಿರು ಎಂದಾಗ ಪಿಚ್ ಎನ್ನಿಸುತ್ತೆ. ವಾರಗಿತ್ತಿ ಖರೀದಿಸಿದ ಸೀರೆ ತುಂಬಾ ಚೆನ್ನಾಗಿದೆ , ಗೆಳತಿಯ ಬೆಂಡೋಲೆ ಸೂಪರ್ ಅಂತ ಎಲ್ಲ ಹೆಂಗಸರಿಗೂ ಅನ್ನಿಸುತ್ತಿರುತ್ತೆ ಆದರೆ ಮನಬಿಚ್ಚಿ ಹೇಳಬಾರದು ಅಂತ ಒಳಗಿನಿಂದ ಏನೋ ಚುಚ್ಚುತ್ತೆ.

ಈ ಬ್ಲಾಗ್ ಓದುವಾಗ ಒಮ್ಮೊಮ್ಮೆ ಹೌದು ಮತ್ತೊಮ್ಮೆ ಹೌದೇ ಹೌದು ಹಾಗೂ ಮಗದೊಮ್ಮೆ ಅಲ್ಲವೇಅ ಲ್ಲ ಎಂಬ ಭಾವನೆ ಮೂಡಿ ಮುಗುಳ್ನಗೆ ಮೂಡುತ್ತೆ. ಆದರೆ ಮರುಕ್ಷಣ ಅಯ್ಯೋ ಇಂತಹ ಬರಹ ಸಾವಿರಾರು, ಮತ್ತೆ ಇವೆಲ್ಲಾ ನನಗೆ ಮೊದಲೇ ಗೊತ್ತಿತ್ತು ಎಂಬ ಭಾವನೆ ಮೂಡಿ ಇದರಲ್ಲಿ ಹೊಸತೇನಿದೆ ಅಂತ ಅನ್ನಿಸುತ್ತೆ.

ಒಮ್ಮೆ ಹಾಗೆ ಮತ್ತೊಮ್ಮೆ ಹೀಗೆ ಮಗದೊಮ್ಮೆ ಹೇಗೇ ? ಎಂಬ ಸುತ್ತಾಟದಲ್ಲೇ ಜೀವನ ಎಂಬುದು ಕಳೆದೇ ಹೋಯಿತಲ್ಲ ಅಂತ ಅನ್ನಿಸುತ್ತೆ. ಮತ್ತು ಹೀಗೆ ನೂರಾರು ಅನ್ನಿಸಿಕೆ ಗಳು ದಿನನಿತ್ಯ ಅನ್ನಿಸುತ್ತಲೇ ಇರುತ್ತೆ.

ಕೊನೆಯದಾಗಿ: ಇದೇಕೆ ಹೀಗೆ ಈ ಅನ್ನಿಸಿಕೆಗಳು? ಎಂದು ವಿಕ್ರಮಾದಿತ್ಯನ ಬೇತಾಳದ ತರಹ ಪ್ರಶ್ನೆಯನ್ನು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ. "ಮನಸ್ಸು ಎರಡು, ಹೊರಮನಸ್ಸು ಹಾಗೂ ಒಳಮನಸ್ಸು ಅವುಗಳಲ್ಲಿ ಪ್ರಶ್ನೆಗೊಂದು ಉತ್ತರಕ್ಕೊಂದು ಎಂಬ ವಿಭಾಗ, ಪ್ರಶ್ನೆ ಒಳಗಿನದಾದರೆ ಉತ್ತರ ಸುಲಭ ಪ್ರಶ್ನೆ ಹೊರಗಿನದಾದರೆ ಹೀಗೆ ಯಡವಟ್ಟು. ಈ ಒಳಹೊರ ಮನಸ್ಸಿನ ಒಗ್ಗೂಡಿಸಿದರೆ ಸುಂದರ ಜೀವನ ಅದು ಸಾಧ್ಯವಾಗದಿದ್ದರೆ ಹೀಗೆ ಅನರ್ಥ, ಆಕಾಶಕ್ಕೆ ಏಣಿ ಸಾಚಿ ಚಂದ್ರನ ಹಿಡಿದಂತೆ, ದೂರದಿಂದ ಚಂದ್ರ ಆತನಿಗೆ ಸಿಕ್ಕಿದಂತೆ ಕಾಣಿಸುತ್ತದೆ , ಹತ್ತಿರ ಹೋದಾಗ ನಿಜವಾದ ದೂರ ತಿಳಿಯುತ್ತದೆ" ಎಂದು ಉತ್ತರಿಸಿದರು . ಉತ್ತರ ಚಾಟಿಯಿಂದ ನನಗೇ ಭಾರಿಸಿದಂತೆ ಇತ್ತು. ಬೆಪ್ಫಾಗಿ ಮುಗುಮ್ಮಾದೆ.
ಟಿಪ್ಸ್: ಏಕಾಗ್ರತೆ ಬರುತ್ತಿಲ್ಲ , ಯಾವ್ಯಾವುದೋ ಅನಾವಾಶ್ಯಕ ಯೋಚನೆಗಳು ವೃಥಾ ಕಾಡುತ್ತಿದೆ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿದ್ದರೆ, ದಿನಕ್ಕೊಮ್ಮೆ ಹತ್ತು ನಿಮಿಷ ನಾಭಿಯ ವರೆಗಿನ ನಿಮ್ಮ ಉಸಿರಾಟವನ್ನೆ ಗಮನಿಸಿ. ಅದರ ಮಜ ನೋಡಿ .

Wednesday, November 12, 2008

ದೋಣಿ ಸಾಗಲಿ ಮುಂದೆ ಹೋಗಲಿ
ಸಾಲು ಸಾಲು ಬಿದಿರಿನ ಪೊದೆಗಳು, ಆಕಾಶದೆತ್ತರಕ್ಕೆ ಕೈಚಾಚಿ ನಿಂತಂತೆ ತೋರುತ್ತವೆ.. ನೂರಾರು ಜಾತಿಯ ಪಕ್ಷಿಗಳ ಕಲರವ. ಕಣ್ಣಿಗೆಟುಕುವಷ್ಟು ದೂರ ಶರಾವತಿ ನದಿಯ ಹಿನ್ನೀರು. ನೀರಿನ ಮಧ್ಯೆ ನಡುಗುಡ್ಡೆಗಳು. ನೀರಿನ ಬುಡದಲ್ಲಿ ಕಣ್ಮುಚ್ಚಿ ಕುಳಿತರೆ ಆ ನೀರವ ಮೌನ ಹಾಗೂ ತೆಕ್ಕಲಿನ ಪಟ ಪಟ ಶಬ್ಧ ಅದ್ಯಾವುದೋ ಲೋಕಕ್ಕೆ ಒಯ್ದುಬಿಡುತ್ತದೆ. ದಡದಲ್ಲಿ ಒಂದಿಷ್ಟು ದೋಣಿಗಳು ಹಾಗೆ ಸುಮ್ಮನೆ ಮಲಗಿರುತ್ತವೆ. ಒಂದು ದೋಣಿಯಲ್ಲಿ ನಾವು, ಹಾಗೂ ನೀವು ಹುಟ್ಟುಹಾಕುತ್ತಾ ಹೊರಟರೆ ಅದೇಕೋ ತನ್ನಿಂದ ತಾನೆ "ದೋಣಿ ಸಾಗಲಿ ಮುಂದೆ ಹೋಗಲಿ...." ಹಾಡು ಗುನುಗುಣಿಸಲು ಪ್ರಾರಂಭವಾಗುತ್ತದೆ. ಇದು ನಮ್ಮ ಮನೆಯಿಂದ ಎಂಟು ಕಿಲೋಮೀಟರ್ ದೂರದ ಹೊನ್ನೇಮರಡು ಎಂಬ ಪ್ರವಾಸಿ ತಾಣದ ಮಜ.

ನಾನು ತಿಂಗಳಿಗೊಮ್ಮೆಯಾದರೂ ಹೊನ್ನೆಮರಡುವಿಗೆ ಹೋಗುತ್ತೇನೆ. ಮನೆಗೆ ಬಂದ ನೆಂಟರಿಗೆ ಆ ನೀರವ ಮೌನ ಹಕ್ಕಿಗಳ ಕಲರವ ತೋರಿಸಬೇಕೆಂಬುದು ಒಳಗಿನ ಹಂಬಲ. ಅದರ ಬಗ್ಗೆ ಅಲ್ಲಿ ಬಂದು ಸೇರುವ ಜೇನುಗಳ ಬಗ್ಗೆ, ಜೇನಿನ ಜೀವನದ ಬಗ್ಗೆ, ಬಿದಿರಿನ ಮೊಳೆಗಳಿಗೆ ಅಲ್ಲಷ್ಟೇ ಜಾಗದಲ್ಲಿ ಕಟ್ಟೆರೋಗ ಬಾರದಿರುವುದಕ್ಕೆ ಕಾರಣ ಹೇಳಿ ಕೊರೆಯಬೇಕು ಅನ್ನಿಸುತ್ತಿರುತ್ತದೆ. ಆದರೆ ಅವರ್ಯಾರಿಗೂ ಅದು ಬೇಡ ಬೋಟ್ ರೈಡಿಂಗ್ ಅವರುಗಳು ಇಷ್ಟಪಡುತ್ತಾರೆ ಇನ್ನು ಕೆಲವರು ಜಾಕೆಟ್ ಹಾಕಿಕೊಂಡು ಸ್ವಿಮ್ಮಿಂಗ್ ಇಷ್ಟಪಡುತ್ತಾರೆ. ಸರಿ ಅವರಿಗಿಷ್ಟವಾದದ್ದು ಅವರಿಗೆ ಎಂದುಕೊಳ್ಳುತ್ತಾ ಸ್ವಾಮಿಯ ಬಳಿ ಜಾಕೆಟ್ ಗಾಗಿ ಅಥವಾ ಬೋಟಿಂಗ್ ಗಾಗಿ ಹಲ್ಲುಗಿಂಜುತ್ತೇನೆ. ಸ್ವಾಮಿಯೆಂಬ ಸ್ವಾಮಿ ಅಸಾದ್ಯ ವ್ಯಕ್ತಿತ್ವದ ಮನುಷ್ಯ. ಬೆಂಗಳೂರಿನ ಧಾವಂತದ ಬದುಕು ಬಿಟ್ಟು ಇಲ್ಲಿ ಅದೇನನ್ನೋ ಸಾಧಿಸಿದ್ದಾರೆ. ಪ್ರಪಂಚಕ್ಕೆ ಹೊನ್ನೇಮರಡುವನ್ನು ಪರಿಚಯಿಸಿದ್ದಾರೆ. ಪರಿಸರ ಪ್ರವಾಸೋದ್ಯಮವನ್ನು ಬೆಳಸಿದ್ದಾರೆ ಒಂದಿಷ್ಟು ಜಾಗದಲ್ಲಿ ಅದ್ಬುತ ಕಾಡನ್ನು ಬೆಳಸಿದ್ದಾರೆ, ಅದು ಅತ್ಯಂತ ಸಹಜವಾಗಿದೆ ಅದರ ಜತೆ ಜತೆ ಯಲ್ಲಿ ನೇರ ನಿಷ್ಟುರ ವರ್ತನೆಯಿಂದ ಸ್ಥಳೀಯ ಜನರನ್ನು ನಿಷ್ಠೂರ ಮಾಡಿಕೊಂಡಿದ್ದಾರೆ. ಸಾಧಾರಣ ಲುಂಗಿ ಪಂಚೆಯಲ್ಲಿ ಓಡಾಡುವ ಸ್ವಾಮಿ ಮತ್ತು ಅಷ್ಟೇ ಸಹಜವಾದ ಧಿರಿಸಿನ ಅವರ ಪತ್ನಿ ನೊಮಿಟೋ( ಈಕೆ ಗುಜಾರಾತಿ ಮಹಿಳೆ) ರನ್ನು ನೋಡಿದರೆ ಇವರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯೂ ಬಾರದು ಅಬ್ಬೆಪಾರಿಗಳು ಅಂತ ಅನ್ನಿಸುವುದು ಸಹಜ. ಆದರೆ ವಾಸ್ತವ ಹಾಗಲ್ಲ ಅವರಿಗೆ ಬಾರದ ಭಾಷೆಗಳಿಲ್ಲ ಆದರೆ ವೃಥಾ ಮಾತನಾಡರು ಅಷ್ಟೆ. ಈ ದಂಪತಿಗಳಿಬ್ಬರು ಪ್ರಥಮ ಪರಿಚಯದಲ್ಲಿ ಒರಟರಂತೆ ಅನ್ನಿಸಿದರೂ ನಂತರದ ದಿನಗಳಲ್ಲಿ ಆತ್ಮೀಯರಾಗಿಬಿಡುತ್ತಾರೆ. ಪಟ್ಟಣದಲ್ಲಿ ಸಾಫ್ಟಾಗಿ ಸೂಪರ್ರಾಗಿ ಕಳೆಯಬಹುದಾಗಿದ್ದ ಜೀವನವನ್ನು ಚಾಲೆಂಜ್ ಎಂದು ಈ ಕಾಡನ್ನು ಆಯ್ಕೆಮಾಡಿಕೊಂಡಿರುವ ಈ ವಿದ್ಯಾವಂತ ದಂಪತಿಗಳು ನನಗೆ ಅಚ್ಚರಿಯ ಮೂಟೆ.

ಇರಲಿ ಇದು ಅವರ ಕಥೆಯಾಯಿತು ಈಗ ನಮ್ಮ ಕಥೆಗೆ ಬರೋಣ. ನಾನು ಸ್ವಾಮಿಯಬಳಿ ನಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ ಅವರಿಗೆ ಹೊನ್ನೆಮರಡುವಿನಲ್ಲಿ ಈಜಲು ಜಾಕೆಟ್ ಬೇಕಿತ್ತು ಎಂದು ಕೇಳಿದಾಗೆಲ್ಲಾ ಅಯ್ಯೋ ಬನ್ನಿ ಸ್ವಾಮಿ ಎಂದು ಒಕೆ ಕೊಡುತ್ತಾರೆ. ಆವಾಗ ನಾನೂ ನಮ್ಮ ಅತಿಥಿಗಳ ಜತೆ ಸೇರಿಕೊಂಡು ಮೀನಾಗುತ್ತೇನೆ. ನೀರಿಗೆ ಬೋಟಿನಿಂದ ದುಡುಂ ದುಡುಂ ಎಂದು ಹಾರಿ ಮಜ ಉಢಾಯಿಸುತ್ತೇನೆ. ನೀರಿನಿಂದೆದ್ದು ಗಡಗಡ ನಡುಗಿ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಧುಮುಕುತ್ತೇನೆ. ಅಲ್ಲಿ ಹೀಗೆ ಇದ್ದಷ್ಟು ಹೊತ್ತು ಪ್ರಪಂಚ ಮರೆಯುತ್ತೇನೆ. ಜತೆಗೆ ಬಂದವರು ನೂರಾರು ಫೋಟೋ ಕ್ಲಿಕ್ಕಿಸುತ್ತಾರೆ ಎಲ್ಲರಿಗೂ ಮಜವೋ ಮಜ. ಈಜಾಡಿ ಸ್ವಾಮಿ ಉಳಿದುಕೊಳ್ಳಲು ಮಾಡಿಕೊಂಡ ಮನೆಯ ಬಳಿಯಿರುವ ರೌಂಡ್ ಗೆ ಬಂದು ಕುಳಿತುಕೊಂಡರೆ ಮಂಜುಳ ಘಮ ಘಮ ಪರಿಮಳದ ಚಾ ಕೊಡುತ್ತಾಳೆ. ಸಾರ್ ಸಾರ್ ಟಿ ಚೆನ್ನಾಗಿದೆಯಾ ಎಂದು ಹತ್ತು ಸಾರಿ ಕೇಳುವ ಮಂಜುಳಳ ಆತ್ಮೀಯತೆ ಚಾ ಕ್ಕಿಂತಲೂ ಉತ್ತಮ. ನನ್ನ ಮಗನ ಖುಷಿಯಂತೂ ಕೇಳುವುದೇ ಬೇಡ. ಅಲ್ಲಿಯ ತರಬೇತುದಾರರೆಲ್ಲ ಅವನ ದೋಸ್ತಿಗಳು. ಹೀಗೆ ತಿಂಗಳಿಗೊಮ್ಮೆಯಾದರೂ ನನ್ನ ಹೊನ್ನೆಮರಡುವಿನ ಯಾತ್ರೆ ನಡೆಯುತ್ತಿರುತ್ತದೆ. ಆ ಪೃಕೃತಿಯ ನಡುವೆ ಒಂದಿಷ್ಟು ಸಮಯ ಕಳೆದು ಬರುವುದಿದೆಯಲ್ಲ ಅದು ಅದ್ಬುತ. ಅಲ್ಲಿದ್ದಷ್ಟು ಹೊತ್ತು ಪ್ರಪಂಚ ಮರೆಯಬಹುದು.

ಇದಿಷ್ಟು ನನ್ನ ಕಥೆಯಾಯಿತು. ಈಗ ನಿಮ್ಮ ಸರದಿ ಒಮ್ಮೆ ಇತ್ತ ಕಡೆ ಬಂದಾಗ ಬನ್ನಿ ಹೊನ್ನೆಮರಡುವಿಗೆ ಹೋಗಿ ಬರೋಣ. ನೀವೂ ದುಡಿದು ದುಡಿದು ಹೈರಾಣಾಗಿದ್ದೀರಿ ಎಂದು ನನಗೆ ತಿಳಿದಿದೆ. ಆ ದುಡಿಮೆ ಎನ್ನುವುದು ಎಷ್ಟಾದರೂ ಮುಗಿಯದು. ಎಂಟು ಲಕ್ಷ ಡೆಪಾಸಿಟ್ ಮಾಡುವಷ್ಟರಲ್ಲಿ ಹತ್ತು ಲಕ್ಶಕ್ಕೆ ಮನಸ್ಸು ಹಾತೊರೆಯುತ್ತದೆ. ಹತ್ತು ಲಕ್ಷ ಸೇರುವಷ್ಟರಲ್ಲಿ ಇಪ್ಪತ್ತು ಲಕ್ಷದ ಯೋಚನೆ ಮನಸ್ಸಿನಲ್ಲಿ ಜತೆಗೆ ಅವನನ್ನು ನೋಡು ಅಷ್ಟು ಹಣ ಮಾಡಿದ ಎನ್ನುವ ಯೋಚನೆ ಹೀಗೆ ಮುಗಿಯದ ಕಥೆ ಅದು. ದುಡಿಮೆ ಧಾವಂತ ವನ್ನೆಲ್ಲಾ ಬದಿಗಿಟ್ಟು ಹೊನ್ನೆಮರಡುವಿನ ನೀರವ ಮೌನದಲ್ಲಿ ಮಿಂದೆದ್ದು ಹೋಗಿ. ನಾನೂ ಇರಬೇಕೆಂದಿಲ್ಲ ನೀವೆ ಬಂದು ಹೋಗಬಹುದು. ಕಾರಣ ನನ್ನ ಒಂದಿಷ್ಟು ಕೊರೆತವನ್ನು ತಪ್ಪಿಸಿಕೊಳ್ಳಬಹುದು . ಏನಂತೀರಿ?

ಕೊನೆಯದಾಗಿ: ಜನರೆಲ್ಲ ಜೀವನಕ್ಕಾಗಿ ದುಡಿಯುತ್ತಿದ್ದಾರೋ? ಹಣಕ್ಕಾಗಿ ದುಡಿಯುತ್ತಿದ್ದಾರೋ? ದುಡಿಮೆಗಾಗಿ ದುಡಿಯುತ್ತಿದ್ದಾರೋ? ಎಂದು ಆನಂದರಾಮಶಾಸ್ತ್ರಿಗಳಲ್ಲಿ ಕೇಳಿದೆ. ಶೂನ್ಯದಿಂದ ಆರಂಭ, ಆರೋಗ್ಯವನ್ನೂ ಲೆಕ್ಕಿಸದೆ ಸಂಪಾದನೆ. ನಂತರ ಸಂಪಾದಿಸಿದ್ದೆಲ್ಲ ಕಳೆದುಕೊಂಡಿದ್ದಕ್ಕೆ ವ್ಯಯ. ಮತ್ತೆ ಶೂನ್ಯದಲ್ಲಿ ಅಂತ್ಯ. ಎನ್ನುವ ವಿಚಿತ್ರ ಉತ್ತರ ಕೊಟ್ಟರು. ನನಗೆ ಅರ್ಥವಾಗಲಿಲ್ಲ. ನಿಮಗೆ ಅರ್ಥವಾದರೆ ಯೆಸ್ ಅನ್ನಿ ಇಲ್ಲದಿದ್ದರೆ ನನ್ನನ್ನು ಅನ್ನಬೇಡಿ.

ಟಿಪ್ಸ್: ದೀರ್ಘ ಪ್ರಯಾಣಕ್ಕೆ ಹೊರಡುವ ಮುನ್ನ ಎಳೆ ಸೌತೆ ಕಾಯಿ ತಿಂದು ಹೊರಟರೆ ಪ್ರಯಾಣದುದ್ದಕ್ಕೂ ಅಜೀರ್ಣ, ಫುಡ್ ಪಾಯಿಸನ್, ಡಿ ಹೈಡ್ರೇಷನ್ ಮುಂತಾದ ಕಿರಿ ಕಿರಿ ಇರುವುದಿಲ್ಲ.