ಅದೇಕೋ ವರುಣರಾಯ ಜೋಗದಮಟ್ಟಿಗೆ ಈ ವರ್ಷ ಮುನಿಸಿಕೊಂಡಿದ್ದಾನೆ. ಎಲ್ಲಾ ಸರಿಯಾಗಿದ್ದರೆ ಈ ಇಷ್ಟೊತ್ತಿಗೆ ಜೋಗ ಜಲಪಾತ ಇಷ್ಟಾದರೂ ಇರಬೇಕಾಗಿತ್ತು. ಆದರೆ ಈಗ ಸಣ್ಣ ಮಕ್ಕಳ ಸುಸುವಿನಷ್ಟು ಬೀಳುತ್ತಿದೆ ಅಂತ ಬರೆಯಲು ಬೇಸರವಾಗುತ್ತಿದೆ. ಆದರೂ ಅದೇ ಸತ್ಯ. ಆದರೂ ಇನ್ನೂ ಸಮಯ ಮಿಕ್ಕಿಲ್ಲ ಹದಿನೈದು ದಿನ ಸಿಕ್ಕಾಪಟ್ಟೆ ಮಳೆ ಕುಟ್ಟಿದರೆ ಜಲಪಾತ್ ತುಂಬಿದರೂ ತುಂಬೀತೆ. ಆವಾಗ ರೊಂಯ್ ಅಂತ ಹೋಗಿ ಒಂದು ಫೊಟೋ ತೆಗೆದುಕೊಂಡು ಬಂದು ಇಲ್ಲಿ ಪಬ್ಲಿಸುತ್ತೇನೆ. ಸಂಸಾರ ಸಮೇತ ಕಾರು ಹತ್ತಿ "ಮುಂಗಾರು ಮಳೆಯೇ....." ಹಾಡನ್ನು ಗುನುಗುತ್ತಾ ಹೊರಡಬಹುದು ನೀವು. ಅಲ್ಲಿಯತನಕ ಇದೇ ಚಿತ್ರ.
Thursday, August 26, 2010
Wednesday, August 25, 2010
ಮಜ ಇದೆ ಅಲ್ಲಿ.
ಬಾಲ್ಯ ಅನ್ನೋದು ಅವಸ್ಥೆಗಳಲ್ಲಿ ಅತ್ಯಂತ ಸುಂದರ ಸುಮಧುರ. ಆದರೆ ಅದು ಹಾಗೆಲ್ಲ ಅಂತ ಗೊತ್ತಾಗುವುದು ದೊಡ್ಡವರಾದ್ಮೇಲೆ ಅನ್ನೋದು ವಿಪರ್ಯಾಸ. ಆವಾಗ ಯಾವತ್ತು ನಾನು ಎತ್ತರದವನಾದೇನೋ ಅಂತ ಅನ್ನಿಸುತ್ತಿರುತ್ತದೆ. ಹಾಗೆ ಅನ್ನಿಸಲು ಪ್ರಮುಖ ಕಾರಣ ಯಾರೂ ಬೈಯ್ಯುವವರು ಇರೋದಿಲ್ಲ ಅನ್ನೋದು. ಇನ್ನು ಮಿಕ್ಕಂತೆ ಹತ್ತು ಹಲವಾರು ಕಾರಣಗಳಿರುತ್ತವೆ ಅವರವರಿಗೆ ಸಿಕ್ಕ ಪರಿಸರಕ್ಕೆ ತಕ್ಕಂತೆ. ನನಗೆ ಆಗ ಅನ್ನಿಸುತಿತ್ತು ಬೇಗ ಬೆಳೆಯಬೇಕು ಎಂದು. ಅದಕ್ಕೆ ಪ್ರಮುಖ ಎರಡು ಕಾರಣಗಳು ಸ್ಕೂಲಿಗೆ ಹೋಗುವುದು ಇರೋದಿಲ್ಲ ಹಾಗೂ ಇನ್ನೊಂದು ಚೊರ್ರ್ ಚೊರ್ರ್ ಎಂಬ ಮಜಬೂತು ಸದ್ದಿನೊಂದಿಗೆ ದೊಡ್ಡವರ ತರಹ ಅಂಗಳದಲ್ಲಿ ಕುಳಿತು ಸೋಪಿನ ನೊರೆ ಮುಖಕ್ಕೆ ಹಚ್ಚಿ ಗಡ್ದ ಮಾಡಿಕೊಳ್ಳಬಹುದು. ಅದೇಕೆ ಗಡ್ಡದ ಹುಚ್ಚು ಹತ್ತಿತೋ ಗೊತ್ತಿಲ್ಲ. ಅಂತೂ ದೊಡ್ಡವರು ಮಾಡಿಕೊಳ್ಳುತ್ತಿದ್ದ ಗಡ್ದ ಮಾಡಿಕೊಳ್ಳುವ ಕೆಲಸ ಬಹು ಇಷ್ಟವಾಗಿತ್ತು. ದುರಂತವೆಂದರೆ ಈಗ ಅದೊಂದು ಕೆಲಸ ಅತೀ ಬೇಸರದ್ದು.
ಆದರೂ ಈಗ ಸಣ್ಣ ಸಣ್ಣ ಮಕ್ಕಳನ್ನು ಅವರಪಾಡಿಗೆ,ಆಟವಾಡುತ್ತಾ ಇರುವಾಗ ನೋಡಿದರೆ ಮನದ ಮೂಲೆಯಲ್ಲಿ ಬಾಲ್ಯ ಉಕ್ಕುತ್ತದೆ. ಅವುಕ್ಕೆ ಬಡವ- ಬಲ್ಲಿದ ಪ್ರತಿಷ್ಟೆ- ಪರಾಕಷ್ಟೆ ಎಂಬಂತಹ ಹಂಗಿಲ್ಲಿದೆ ಖುಶ್ ಖುಷಿಯಾಗಿರುವುದನ್ನು ನೋಡಿದಾಗ ನಾನೂ ತುಸುಹೊತ್ತು ಬಾಲ್ಯಕ್ಕೆ ಜಾರುತ್ತೇನೆ. ಮಜ ಇದೆ ಅಲ್ಲಿ.
Monday, August 23, 2010
ಮೇಣ ತೆಗೆಯೋನೆ ಜಾಣ
ಮಳೆಗಾಲ ಶುರುವಾಯಿತು ಎಂದಾಕ್ಷಣ ಹೆಜ್ಜೇನು ಬಯಲುಸೀಮೆಯತ್ತ ವಲಸೆಯನ್ನಾರಂಭಿಸುತ್ತವೆ. ಅವು ಬಿಟ್ಟುಹೋದ ತತ್ತಿಗಳು ಜೇನುಕೃಷಿಕರಿಗೆ ಉಪ ಆದಾಯವನ್ನು ತಂದುಕೊಡುತ್ತವೆ. ಒಂದೊಂದು ಮರದಲ್ಲಿ ಹತ್ತಾರು ಖಾಲಿತತ್ತಿಗಳು ಸಿಗುತ್ತವೆ. ಅವನ್ನು ತಂದು ಜೇನುಮೇಣವನ್ನಾಗಿಸಿ ಮಾರುಕಟ್ಟೆಗೆ ಒಯ್ದರೆ ವಾರಕ್ಕಾಗುವ ಖರ್ಚು ಕಿಸೆಗೆ ಖಂಡಿತ.
ಮನುಷ್ಯ ಪ್ರಕೃತಿಯಿಂದ ತೆಗೆದ ಮೊದಲ ಪ್ಲಾಸ್ಟಿಕ್ ಎಂಬ ಹೆಗ್ಗಳಿಗೆ ಜೇನು ಮೇಣಕ್ಕೆ. ಪಾಶ್ಚಾತ್ಯರು ಜೇನುಮೇಣವನ್ನು ಮೊಂಬತ್ತಿಗಾಗಿ ಉಪಯೋಗಿಸುತ್ತಾರೆ. ಚರ್ಚ್ ಗಳಲ್ಲಿ ಜೇನುಮೇಣದಿಂದ ತಯಾರಾಗಿರುವ ಮೊಂಬತ್ತಿಗೆ ಹೆಚ್ಚಿನ ಗೌರವವಿದೆ. ಮೇಣ ಉಕ್ಕದ, ವಿಷದ ಹೊಗೆ ಬರದ ಪರಿಸರ ಸ್ನೇಹಿ ಮೊಂಬತ್ತಿ ಎಂಬ ಹೆಗ್ಗಳಿಗೆ ಇದಕ್ಕಿದೆ. ಮರಗೆಲಸದವರು ಹೆಚ್ಚಾಗಿ ಜೇನುಮೇಣದ ಗ್ರಾಹಕರು ಅವರು ಮರ ನುಣುಪಾಗಲು ಜೇನುಮೇಣವನ್ನು ಬಳಸುತ್ತಾರೆ.
ಮೇಣತೆಗೆಯುವ ವಿಧಾನ: ಹೆಜ್ಜೇನು ಅಥವಾ ತುಡುಜೇನು ತತ್ತಿಗಳನ್ನು ಸಣ್ಣ ತುಂಡುಗಳನ್ನಾಗಿಸಿ ಪಾತ್ರೆಯೊಳಗೆ ಹಾಕಿ ನೀರು ತುಂಬಿಸಿ ಅರ್ದ ಘಂಟೆಗಳ ಕಾಲ ಕುದಿಸಬೇಕು. ನಂತರ ಬಟ್ಟೆಯಲ್ಲಿ ಕುದಿದ ನೀರನ್ನು ಮತ್ತೊಂದು ಪಾತ್ರೆಗೆ ಸೋಸಬೇಕು. ಜಿಡ್ಡು ಬಟ್ಟೆಯಲ್ಲಿಯೇ ಉಳಿಯುತ್ತದೆ. ನೀರಿನ ಜೊತೆ ಸೇರಿದ ಮೇಣ ಮತ್ತೊಂದು ಪಾತ್ರೆಯಲ್ಲಿ ಶೇಖರಣೆಯಾಗುತ್ತದೆ. ನೀರು ಆರಿದ ನಂತರ ಶುದ್ಧ ಜೇನುಮೇಣ ತೇಲತೊಡಗುತ್ತದೆ. ಕೈಯಿಂದ ಉಂಡೆ ಕಟ್ಟಿದರೆ ಅರಿಶಿನ ಬಣ್ಣದ ಮಿರಿಮಿರಿ ಮಿಂಚುವ ಸುಹಾಸನಾಯುಕ್ತ ಜೇನುಮೇಣ ಬಂದಂತೆ. ಆನಂತರ ಕುದಿಯುವ ನೀರಿನೊಳಗೆ ಪಾತ್ರೆಯೊಂದನ್ನಿಟ್ಟು(ನೇರ ಪಾತ್ರೆಯೊಳಗೆ ಮೇಣದುಂಡೆ ಇಡುವಂತಿಲ್ಲ, ಇಟ್ಟರೆ ಜೇನುಮೇಣದ ಬಣ್ಣ ಕೆಡುತ್ತದೆ) ಅದರೊಳಗೆ ಜೇನುಮೇಣದುಂಡೆಯಿಟ್ಟರೆ ಕರಗಿ ನೀರಾಗುತ್ತದೆ. ಕರಗಿದ ಮೇಣವನ್ನು ಬೇಕಾದ ಆಕಾರದ ಅಚ್ಚಿಗೆ ಸುರುವಿದರೆ ಜೇನುಮೇಣ ಮಾರುಕಟ್ಟೆಗೆ ಸಿದ್ಧ.
ಹೀಗೆ ಜೇನೆಂಬ ಕೀಟ ತನ್ನ ಎಲ್ಲಾ ಉತ್ಪನ್ನಗಳನ್ನೂ ಮನುಷ್ಯನ ಬಳಕೆಗೆ ಕೊಟ್ಟು ನೀನಾರಿಗಾದೆಯೋ ಎಲೆ ಮಾನವ? ಎಂಬ ಪ್ರಶ್ನೆ ಕೇಳುವಂತಾಗಿದೆ. ತುಪ್ಪದ ಮೂಲಕ ರೈತ ಬೆಳೆಯುವ ಬೆಳೆಗಳ ಪರಾಗಸ್ಪರ್ಷದ ಮೂಲಕ ಹಾಗೂ ಅಂತಿಮವಾಗಿ ಜೇನು ಮೇಣದ ಮೂಲಕ ಕೃಷಿಕರ ಬಾಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ ಜೇನು. ಉಳಿಸಿ ಬೆಳಸುವುದಷ್ಟೆ ನಮ್ಮ ಜವಾಬ್ದಾರಿ.
(ಇಂದಿನ ಲವಲವಿಕೆಯಲ್ಲಿ ಪ್ರಕಟಿತ)
Subscribe to:
Posts (Atom)