"ಮೆ ಇದರ್ಸೆ ಏಕ್ ಮೈಲ್ ಸಕ್ತಾ ... .... ...?". ಹೊಸನಗರದ ಗೋ ಸಮ್ಮೇಳನದಲ್ಲಿ ಮೀಡಿಯಾ ಸೆಂಟರ್ರಿನ ಕಂಪ್ಯೂಟರ್ ಮುಂದೆ ಕುಳಿತುಕೊಂಡು ನ್ಯೂಸ್ ಮಾಡುತ್ತಾ ಇದ್ದಾಗ ಹಿಂದಿನಿಂದ ಒಂದು ದನಿ ಕೇಳಿಸಿತು. ದನಿ ಬಂದತ್ತ ತಿರುಗಿ ನೊಡಿದೆ. ಶ್ವೇತ ವಸ್ತ್ರದಾರಿಯಾದ ಸುಮಾರು ಅರವತ್ತು ವಯಸ್ಸಿನ ವ್ಯಕ್ತಿ ನಿಂತಿದ್ದರು. "ಆವೋ.. ಬೈಟೋ" ಎಂದು ಹೇಳಿದೆ. " ನಹಿ, ನಹಿ ಮುಝ್ಕೋ ಕಂಪ್ಯೂಟರ್ ಕಾಮ್ ಆತಾ ನಹಿ, ಆಪ್ ಮೆರೆಲಿಯೆ ಕಾಮ್ ಕರ್ನಾ" ಎಂದು ಹೇಳಿತು. ಸರಿ ನಾನಿದ್ದದ್ದು ಆ ಕೆಲಸಕ್ಕಾಗಿಯೇ ಎಂದು ಹೇಳಿ ಅವರ ಕೆಲಸ ಮುಗಿಸಿಕೊಟ್ಟೆ. ಅವರು ಥ್ಯಾಂಕ್ಸ್ ಹೇಳಿ ಹೊರಟು ಹೋದರು. ಅದೇ ದಿನ ಸಾಯಂಕಾಲ ಆ ದಿನದ ನ್ಯೂಸ್ ಟೈಪ್ ಮಾಡಿ ಮೈಲ್ ಗೆ ಪೋಟೋ ಅಟ್ಯಾಚ್ ಮಾಡುವಾಗ ಅದರಲ್ಲಿದ್ದ ಈ ವ್ಯಕ್ತಿ ಬೆಳಿಗ್ಗೆ ಬಂದಿದ್ದರಲ್ಲ ಎಂದು ನೊಡಿದರೆ, ಅರೆ ಹೌದು ಅವರು ಒರಿಸ್ಸಾದ ಕ್ಯಾಬಿನೆಟ್ ದರ್ಜೆ ಸಚಿವರು. ಪಕ್ಕದಲ್ಲಿದ್ದ ವರದಿಗಾರನಿಗೆ ಕರೆದು ಘಟನೆ ಹೇಳಿದೆ. " ಅಯ್ಯೋ ಬೆಳಿಗ್ಗೆ ಈತ ನನ್ನ ಬಳಿ ಬಂದು ಮೈಲ್ ಕಳುಹಿಸಬಹುದಾ ಅಂತ ಕೇಳಿದ " ಇಲ್ಲಿ ಅಲೋ ಇಲ್ಲ ಅಂತ ಕಳುಹಿಸಿದನಲ್ಲ ಮಾರಾಯ" ಎಂದು ಅಲವತ್ತುಕೊಂಡ.
ಗುಲ್ಬರ್ಗಾದ ಗಂವ್ಹಾರದಲ್ಲಿ ನಡೆದ ಶಿವಸತ್ರದ ಕಾರ್ಯಕ್ರಮದಲ್ಲಿ ನನ್ನದು ಮೀಡಿಯಾ ಸೆಂಟರ್ ನಲ್ಲಿ ನ್ಯೂಸ್ ತಯಾಋ ಮಾಡಿ ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ಕಳುಹಿಸುವ ಕೆಲಸ. ಭಾರತೀಶ, ದತ್ತಿ, ಮತ್ತಿಗಾರು ನಾಗರಾಜ ಸೇರಿದಂತೆ ನಾಲ್ಕು ಜನರ ಟೀಂ ನಮ್ಮದು. ವಿಜಯಕರ್ನಾಟಕದ ರಾ.ಭಡ್ತಿ ಬೆಂಗಳೂರಿನಿಂದ ಸಲಹೆ ಸೂಚನೆ ನೀಡುತ್ತಿದ್ದರು. ಒಟ್ಟು ೯ ದಿನಗಳ ಕಾರ್ಯಕ್ರಮ. ರಣಬಿಸಿಲಿನ ನಡುವೆ ಸೇವಾ ದೃಷ್ಟಿಯಲ್ಲಿ ಕೆಲಸ ಮಾಡುವ ನಮಗೆ ಆದ್ಯಾವುದೋ ಹೇಳಲಾರದ ಆನಂದವೊಂದನ್ನು ಬಿಟ್ಟರೆ ಮತ್ಯಾವ ಲಾಭವೂಇಲ್ಲ. ಕಾರ್ಯಕ್ರಮದ ನಾಲ್ಕನೇ ದಿನ ನಲವತ್ತು ವಯಸ್ಸಿನ ಬಿಳಿ ಧಿರಿಸು ದರಿಸಿದ ವ್ಯಕ್ತಿಯೊಬ್ಬ ಮೀಡಿಯಾ ಸೆಂಟರ್ರಿಗೆ ಬಂದರು. ಗಡ್ಡ ಬಿಟ್ಟಿದ್ದ ದಪ್ಪ ವ್ಯಕ್ತಿ ಎಲ್ಲಿ? ಎಂದು ನಮ್ಮನ್ನು ಕೇಳಿದರು. ದತ್ತಿ ಲಚ್ಚಣ್ಣನನ್ನು ಹುಡುಕುತ್ತಿದ್ದಾರೆ ಎಂದು ನಮಗೆ ತಿಳಿಯಿತು. ಅವರು ನ್ಯೂಸ್ ಗೆ ಹೋಗಿದ್ದಾರೆ ಎಂದು ಹೇಳಿಯಾಯಿತು. ನಲವತ್ತರ ಯುವಕನಿಗೆ ತಳಮಳ, ಕೂತಲ್ಲಿ ಕೂರಲಾರ ನಿಂತಲ್ಲಿ ನಿಲ್ಲಲಾರ. ಅವರ ಚಡಪಡಿಕೆಯನ್ನು ನೋಡಿ ನಾನು ಏನಾಗಬೇಕಿತ್ತು ? ಅಂತ ಕೇಳಿದೆ. ನನಗೆ ಇನ್ನರ್ಧ ಗಂಟೆಯಲ್ಲಿ ವೇದಿಕೆಯನ್ನೇರಿ ಭಾಷಣ ಮಾಡಬೇಕೆಂದು ಶ್ರೀಗಳಿಂದ ಅಣತಿ ಬಂದಿದೆ. ಆದರೆ ಏನು ಮಾತನಾಡಬೇಕೆಂದು ಗೊತ್ತಿಲ್ಲ, ಗಡ್ಡಬಿಟ್ಟಿದ್ದಾರಲ್ಲ ಅವರು ಬರೆದುಕೊಡುತ್ತೇನೆ ಎಂದಿದ್ದರು, ಆದರೆ ಅವರು ಕಾಣಿಸುತ್ತಿಲ್ಲ. ನೀವು ಸ್ವಲ್ಪ ಭಾಷಣ ಬರೆದುಕೊಡುತ್ತೀರಾ? ಎಂದು ಕೇಳಿದರು. ಆಯಿತು ಅದರಲ್ಲೇನಿದೆ ಮಹಾ ಎಂದು ಪಟಪಟ ಟೈಪ್ ಮಾಡಿ ಪ್ರಿಂಟ್ ತೆಗೆದು ಕೊಟ್ಟೆ. ಖುಷಿಯಾದ ಅವರು ಉಷ್ಹಪ್ಪಾ ಎಂದು ಹೊರಟು ಹೋದರು. ಅರ್ದ ಗಂಟೆಯ ನಂತರ ನನ್ನ ಮಾತು ವೇದಿಕೆಯಲ್ಲಿ ಮೊಳಗುತ್ತಿತ್ತು.
ದತ್ತಿ ಲಚ್ಚಣ್ಣ ಬಂದ ನಂತರ ಭಾಷಣದ ಕತೆ ಹೇಳಿದೆ. ಅವರು " ಅಯ್ಯೊ ಹೌದು ನಮ್ಮ ಹೊಸನಗರದ ಶಾಸಕ ಹಾಲಪ್ಪ , ಅವರ ಪಿ.ಎ ಬಂದಿಲ್ಲ ಭಾಷಣ ಬರೆದುಕೊಡಿ ಎಂದಿದ್ದರು ನಾನು ಮರೆತೆ . ಎಂದ.
ಆ ಭಾಷಣ ಬರೆದುಕೊಟ್ಟಿದ್ದರ ಮಹತ್ವ ಕೊನೆಗೆ ಕಾರ್ಯಕ್ರಮ ಮುಗಿಯುವವರೆಗೂ ಅದೆಂತೋ, ನರಿಬೋಳ, ದುಡ್ಡಪ್ಪ ಗೌಡ ... ಹೀಗೆ ಹತ್ತಾರು ಬಿಳಿ ವಸ್ತ್ರದ ಜನರ ಧ್ವನಿಯಾದೆ.
ಈಗ ಹಾಲಪ್ಪ ಕ್ಯಾಬಿನೆಟ್ ದರ್ಜೆ ಸಚಿವರು. ನಾನು ಇಲ್ಲಿ ತೌಡು ಕುಟ್ಟುತ್ತಿದ್ದೇನೆ.
ಅವರುಗಳಿಗೆ ಪರಊರಿನಲ್ಲಿಯೂ ರಂಗನಾಗುವುದು ಗೊತ್ತು , ನಾನು ಊರಿನಲ್ಲಿಯೇ ಮಂಗ ನಾಗಿದ್ದೇನಾ ಅಂತ ಗುಮಾನಿ...