ಮಜ್ಜಿಗೆ ಕಪಾಟು ಅಂದರೆ ಅಡಿಗೆ ಮನೆಯಲ್ಲಿರುವ ಮರದ ಕಪಾಟು ಅಂಬೋದು ಅರ್ಥ ಅಂತಾದರೆ ನಿಮಗೆ ಸ್ವಲ್ಪ ತಲೆಕೆರೆದುಕೊಳ್ಳುವಷ್ಟು ಅಲ್ಲದಿದ್ದರೂ ಇದೇನಪ್ಪಾ ಮರದ ಕಪಾಟಿಗೆ ಮಜ್ಜಿಗೆಯ ಹೆಸರು ಅಂತ ನಿಮಗೆ ಅನ್ನಿಸದಿರದು. ನಮ್ಮ ಹಳ್ಳಿ ಮನೆಗಳಲ್ಲಿ ಒಂದುಕಾಲದ ಮನೆಯ ಗೃಹಲಕ್ಷ್ಮಿ...! ಯ ಅತ್ಯಂತ ಜತನವಾದ ಸ್ಥಳ ಅದು. ಅಡಿಗೆಮನೆಯ ಯಾವುದೋ ಒಂದು ಮೂಲೆಯಲ್ಲಿ ಕಪ್ಪುಬಣ್ಣದಲ್ಲಿರುವ, ಮರದ ಜಾತಿ ಯಾವುದು ಅಂತ ತಿಳಿಯದ ಹಂತದಲ್ಲಿರುವ ಈ ಕಪಾಟು ಮಜ್ಜಿಗೆ ಬೆಣ್ಣೆ ತುಪ್ಪ ಇಡುವ ಕಾರಣದಿಂದ ಆ ಹೆಸರು ಅದಕ್ಕೆ. ಹೆಸರಿಗೆ ತಕ್ಕಂತೆ ಅಷ್ಟೇ ಇಡುವ ಕಪಾಟಾಗಿದ್ದರೆ ಅದನ್ನ ನಾನು ಇಲ್ಲಿ ಬರೆಯುವ ಪ್ರಮೇಯ ಇರುತ್ತಿರಲಿಲ್ಲ. ಆದರೆ ಆ ಕಪಾಟು ಆ ಮನೆಯ ಗೃಹಿಣಿಯ ಎಲ್ಲಾ ಸ್ವತ್ತುಗಳನ್ನು ಜತನವಾಗಿ ಕಾಪಿಟ್ಟುಕೊಳ್ಳುವ ಜಾಗವಾಗಿದ್ದರಿಂದ ಅದಕ್ಕೊಂದು ಮಹತ್ವ ಸ್ಥಾನ. ಈಗ ಬಿಡಿ, ಕಬ್ಬಿಣದ ಸುವ್ಯವಸ್ಥಿತ ಪದ್ದತಿ ಬಂದಿದೆ ಹಾಗಾಗಿ ಮರದ ಮಜ್ಜಿಗೆ ಕಪಾಟು ತನ್ನತನ ಕಳೆದುಕೊಂಡು ಮಾಯವಾಗಿದೆ. ಈಗಿನದು ಬಿಟ್ಟು ಹಿಂದಿನದಕ್ಕೆ ತೆರಳೋಣ.
ಕಟ್ಟಿಗೆಯ ಒಲೆಯ ಕಾಲ, ಹಾಗಂತ ತೀರಾ ನೂರು ವರ್ಷ ಹಿಂದಿನದಲ್ಲ ಜಸ್ಟ್ ನಲವತ್ತು ವರ್ಷ ಅಷ್ಟೆ. ನೆಲಕ್ಕೆ ಕುಳಿತು ಉಬಸಾ ಅಂಡೆ ಎಂಬ ಕಬ್ಬಿಣದ ಪೈಪ್ ನಿಂದ ವಿಚಿತ್ರ ಸದ್ದು ಮಾಡಿ ಒಲೆ ಉರಿಸಬೇಕು. ಅಡಿಗೆ ಮನೆಯಲ್ಲಿ ಒಂದೇ ಒಂದು ಕಪ್ ಕಾಫಿ ಮಾಡಿದರೂ ಹೊಗೆಯಿಂದ ತುಂಬಿ ತುಳುಕಾಡುವ ಸಮಯ. ಹೊಗೆಯ ಪ್ರಮಾಣ ಅಷ್ಟಿದ್ದಮೇಲೆ ಅಲ್ಲಿರುವ ಯಾವ ವಸ್ತು ಬೆಳ್ಳಗಿರಲು ಸಾದ್ಯ..? ಅಂತಹ ವಾತಾವರಣದಲ್ಲಿ ಈ ಮಜ್ಜಿಗೆ ಕಪಾಟು ಇರುತ್ತಿತ್ತು. ಅದಕ್ಕೊಂದು ಬಾಗಿಲು ಬಾಗಿಲಿಗೊಂದು ಚಿಲಕ. ಆ ಚಿಲಕ ಸಸೂತ್ರವಾಗಿ ನಿಂತಿದ್ದನ್ನು ನಾನಂತೂ ಯಾರಮನೆಯಲ್ಲಿಯೂ ನೋಡಿರಲಿಲ್ಲ. ಒಂದೋ ಹಲ್ಲುಕಚ್ಚಿ ತೆಗೆಯಬೇಕಾಗಿತ್ತು ಅಥವಾ ಚಿಲಕ ತೆಗೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ, ಓರೆಯಾಗಿ ಜೋತು ಬಿದ್ದಿರುತ್ತಿತ್ತು. ಅಂತಹ ಕಪಾಟಿನಲ್ಲಿ ಕೆಳಗಿನ ಅರೆಯಲ್ಲಿ ಸಾಲಾಗಿ ಮಜ್ಜಿಗೆ ಬೆಣ್ಣೆ ತುಪ್ಪ ಮುಂತಾದವುಗಳ ಸ್ಥಾನ, ಎರಡನೆ ಅಂದರೆ ಮಧ್ಯದ ಅರೆಯಲ್ಲಿ ನೆಂಟರಿಷ್ಟರು ತಂದಿರುವ ಗ್ಲುಕೋಸ್ ಬಿಸ್ಕತ್ತು ಮೂಸಂಬಿ ಹಣ್ಣು ಮುಂತಾದವುಗಳ ಸ್ಥಾನ. ನಮಗೆಲ್ಲಾ ಅತ್ಯಂತ ಇಷ್ಟವಾದ ಸ್ಟೆಪ್ ಅದು. ಮೇಲ್ಗಡೆ ಅರೆ ಗೃಹಣಿಯ ಸಾಸಿವೆ ಡಬ್ಬಿ ಯ ಸ್ಥಾನ. ಅಲ್ಲಿ ಮನೆಯೆಂಬ ಮಹಾಲಕ್ಷ್ಮಿಯ ಲಕ್ಷ್ಮಿ ಅವತಾರ ಅನಾವರಣ ಗೊಳ್ಳುತ್ತಿತ್ತು. ಯಾವುದೇ ಡಬ್ಬಿಯ ಅಡಿಬಾಗಕ್ಕೆ ಕೈಹಾಕಿದರೂ ಅಲ್ಲಿರುತ್ತಿತ್ತು ಚಿಲ್ಲರೆ ಕಾಸು. ಆ ಮೇಲಿನ ಸ್ಟೆಪ್ ಸಾಮಾನ್ಯವಾಗಿ ಹುಡುಗರ ಕೈಗೆ ಸಿಗದಷ್ಟು ಎತ್ತರದಲ್ಲಿರುತ್ತಿತ್ತು. ಕಾಸಷ್ಟೇ ಅಲ್ಲಿನ ವಾಸಸ್ಥಾನ ಅಲ್ಲ, ಸ್ವಲ್ಪ ದುಬಾರಿಯ ಪದಾರ್ಥಗಳಾದ ಗೋಡಂಬಿ ಕೇಸರಿ ದ್ರಾಕ್ಷಿಗಳ ಜತನತನವೂ ಅಲ್ಲಿಯೇ. ನಮಗೆಲ್ಲಾ ಆ ಕಾರಣದಿಂದ ಆ ಮೇಲಿನ ಸ್ಟೆಪ್(ಅರೆ) ತುಂಬಾ ಇಷ್ಟ. ಮನೆಯಲ್ಲಿ ಹಿರಿಯರು ಇಲ್ಲದಾಗ ಬಿಸ್ಕತ್ ಟಿನ್( ಬಿಸ್ಕತ್ ಗೆ ಉಪಯೋಗಿಸಿದ ಖಾಲಿ ಟಿನ್) ಮಗಚಿ ಇಟ್ಟು ಸರ್ಕಸ್ ಮಾಡಿ ಅಲ್ಲಿದ್ದ ಗೋಡಂಬಿ ಹೊಟ್ಟೆಗೆ ಸೇರಿಸಲು ಹರ ಸಾಹಸ ಮಾಡಿದ್ದಿದೆ. ಹಾಗೆ ಮಾಡಲು ಹೋಗಿ ದಡಾರನೆ ಬಿದ್ದು ಒದೆ ತಿಂದಿದ್ದೂ ಇದೆ. ಇವೆಲ್ಲಾ ಕಾರಣದಿಂದ ಕಪ್ಪುಮಸಿ ಬಣ್ಣದ ಮಜ್ಜಿಗೆಗೂಡು ನನ್ನ ಮಿದುಳಿನಲ್ಲಿ ಸಂಗ್ರಹವಾಗಿದೆ.
ಈಗ ಮತ್ತೆ ಹೊಸ ಮನೆಯಲ್ಲಿ ಮಜ್ಜಿಗೆ ಗೂಡು ಮಾಡಿಸಿಯಾಗಿದೆ. ಆದರೆ ಮೊದಲನೇ ಸ್ಟೆಪ್ ಮಕ್ಕಳಿಗೆ ಸಿಗದಷ್ಟು ಎತ್ತರಕ್ಕೆ ಇಟ್ಟಾಗಿದೆ, ಕಾರನ ಈಗ ನಾವು ಮಕ್ಕಳ ಅನುಭವ ಪಡೆದ ದೊಡ್ಡವರು ಹಾಗಾಗಿ. ಆದರೆ ಕಪ್ಪು ಬಣ್ಣಕ್ಕೆ ಹೊಗೆ ಇಲ್ಲ ಕಾಲ ಬದಲಾಗಿದೆ.