Tuesday, June 24, 2008

ಟಿ.ವಿ ೯ ಎಂಬ ಕಡ್ಡಿ ಚಾನಲ್ ಮತ್ತು ವರದಹಳ್ಳಿ ಶ್ರೀಧರರು


ಸಜ್ಜನಗಡದಿಂದ ಬಂದ ಸಜ್ಜನ ಶ್ರೀಧರ ಸ್ವಾಮಿಗಳ ತಪೋಭೂಮಿ ಸಾಗರದ ಸಮೀಪದ ವರದಹಳ್ಳಿ. ಅಲ್ಲಿ ಪ್ರಶಾಂತತೆ ನೆಲಸಿದೆ. ಗುಡ್ಡ ಬೆಟ್ಟಗಳ ನಡುವೆ ಶುದ್ಧವಾದ ಜುಳು ಜುಳು ಅಬ್ಬಿ ನೀರು ಹರಿಯುತ್ತದೆ. ಅದಕ್ಕೊಂದು ಮಾನವ ನಿರ್ಮಿತ ಗೋಮುಖ ಇದೆ. ಅದರ ಬಾಯಿಂದ ಬೀಳುವ ನೀರು ನೋಡಲು ಬೊಗಸೆಯಲ್ಲಿ ಹಿಡಿದು ಕುಡಿಯಲು ಆನಂದ. ಚಂದದ ಪುಷ್ಕರಣಿ ಇದೆ, ಅಲ್ಲಿ ತೀರ್ಥಸ್ನಾನ ಮಾಡಿದರೆ ಆನಂದ. ಗಿಡಮರಗಳಿವೆ ಹಾಗಾಗಿ ಶುದ್ಧಗಾಳಿ ಉಸಿರಾಡಲು ಪರಮಾನಂದ. ಪಾಠಶಾಲೆಯ ಮಕ್ಕಳ ವೇದಘೋಷ ಕೇಳಿಬರುತ್ತದೆ ಅದು ಕರ್ಣಾನಂದ. ಶ್ರೀಧರರು ಬದುಕಿದ ರೀತಿ ನಿಮಗೆ ಗೊತ್ತಿದ್ದರೆ ಅವರು ಓಡಾಡಿದ ಜಾಗಗಳಲ್ಲಿ ನೀವೂ ಓಡಾಡಿದರೆ ಮನಸ್ಸು ಪುಳಕಗೊಳ್ಳುತ್ತದೆ. ಇವೆಲ್ಲಾ ನೂರಕ್ಕೆ ನೂರು ಸತ್ಯ. ಆದರೆ ಮೊನ್ನೆ ಮೊನ್ನೆ ಟಿವಿ ನೈನ್ ಎಂಬ ಚಾನಲ್ಲಿನಲ್ಲಿ ಬಂತು ನೋಡಿ ಪವಾಡದ ಕತೆಗಳು ಅದು ಮಾತ್ರಾ... ಅಮ್ಮಾ. ಬೇಸರವಾಗುತ್ತದೆ.

ಕಳೆದ ಹದಿನೈದು ದಿವಸಗಳಿಂದ ವರದಳ್ಳಿ ಯಲ್ಲಿ ಜನಜಂಗುಳಿ. ಒಂದು ಗುರುವಾರ ಇಪ್ಪತ್ತು ಸಾವಿರ ಜನ ಸೇರಿದ್ದರಂತೆ. ಪ್ಲಾಸ್ಟಿಕ್ ಕ್ಯಾನ್ಗಳು ಸಾಗರದಲ್ಲಿ ಭರ್ಜರಿ ವ್ಯಾಪಾರವಂತೆ. ಗೋಮುಖದ ಅಬ್ಬಿ ನೀರನ್ನು ತುಂಬಿ ವ್ಯಾಪಾರ ಶುರುವಿಟ್ಟುಕೊಂಡಿದ್ದಾರಂತೆ. ಈ ನುಗ್ಗಾಟಕ್ಕೆ ಪ್ರಮುಖ ಕಾರಣ ಟಿವಿ ೯ ನಲ್ಲಿ ಬಂದ ವರದಿಗಳು. ತೀರ್ಥಸ್ನಾನ ಮಾಡಿದರೆ ಎಲ್ಲಾ ರೋಗಗಳು ಗುಣಮುಖವಾಗುತ್ತದೆಯಂತೆ. ಕೋಟಿಗಟ್ಟಲೆ ವ್ಯಾಪಾರದಲ್ಲಿ ಲಾಸ್ ಆದರೂ ಒಂದೇ ಒಂದು ಅವಾಜ್ ಪ್ರಾರ್ಥನೆ ಮಾಡಿದರೆ ಸಾಕು ವಾಪಾಸು ಮನೆಗೆ ಹೋಗುವುದರೊಳಗೆ ದಾರಿಯಲ್ಲಿಯೇ ನಿಮಗೆ ಯಾರಾದರೂ ಸಿಕ್ಕು ಸಮಸ್ಯೆ ಬಗೆ ಹರಿಯುತ್ತದೆಯಂತೆ. ರಾತ್ರಿ ಮೂರುಗಂಟೆಗೆ ಶ್ರೀಧರರು ಇಂದೂ ಪುಷ್ಕರಣೆಗೆ ಬಂದು ಸ್ನಾನ ಮಾಡಿಹೋಗುತ್ತಾರಂತೆ.(ಟಿ.ವಿ ಯಲ್ಲಿ ಈ ಹೇಳಿಕೆ ನೀಡಿದವರಿಗೆ ತಾನು ಎಂತಹ ಬಾಲಿಶ ಹೇಳಿಕೆ ನೀಡುತ್ತಿದ್ದೇನೆಂದು ಅರ್ಥವೇ ಆಗಿಲ್ಲ ವೆಂದು ಕಾಣಿಸುತ್ತದೆ ಕಾರಣ, ಶ್ರೀಧರರು ಇಂದೂ ಬೆಳಗಿನ ಜಾವ ಬಂದು ಹೋಗುತ್ತಾರೆ ಎಂದರೆ ಅವರಿಗೆ ಮುಕ್ತಿಯೇ ಸಿಕ್ಕಿಲ್ಲ ಎಂಬ ಅಪಾರ್ಥ ನೀಡುತ್ತದೆ) ಪಾದುಕೆಯ ಕಟ ಕಟ ಶಬ್ಧ ಆಲಿಸಿದರೆ ಕೇಳುತ್ತದೆಯಂತೆ. ಮಾತಿಲ್ಲದವರಿಗೆ ಮಾತು ಬರುತ್ತದೆ. ಸತ್ತವರು ಬದುಕಿ ಬರುತ್ತಾರೆ. ಮುಂತಾದ ಅಂತೆಕಂತೆಗಳನ್ನು ಸತ್ಯವೆಂಬಂತೆ ಬಿಂಬಿಸಿದ ವರದಿ. ಪಾಪ ಅಮಾಯಕ ಜನರು ಅಳಿದುಳಿದ ಹಣವನ್ನು ಬಾಚಿಬಳಿದುಕೊಂಡು ವಾಸಿಯಾಗದ ಖಾಯಿಲೆಗಳ ದೇಹವನ್ನು ಹೊತ್ತು, ದೂರದೂರದ ಊರಿನಿಂದ ವರದಹಳ್ಳಿಯತ್ತ ನುಗ್ಗತೊಡಗಿದ್ದಾರೆ. ನಂಬಿಕೆ ಕೆಲಸ ಮಾಡುತ್ತದೆ ನಿಜ ಆದರೆ ಕುರುಡು ನಂಬಿಕೆ ಹಣವನ್ನು ವ್ಯರ್ಥ ಹಾಗೂ ಸಮಸ್ಯೆಯನ್ನು ದ್ವಿಗುಣ ಮಾಡುತ್ತದೆ. ಟಿವಿ ನೈನ್ ವರದಿಗಾರ ವಿಚಿತ್ರ ಅಂಗಚೇಷ್ಟೆಯ ಮುಖೇನ ಹಾಗೂ ವಿಷಿಷ್ಠ ಧ್ವನಿಯ ಮುಖಾಂತರ ಬಿಂಬಿಸಿದ್ದು ಅದೆಷ್ಟು ಪ್ರಭಾವ ಬೀರಿದೆಯೆಂದರೆ ತಮ್ಮ ಎಲ್ಲಾ ಸಮಸ್ಯೆಯೂ ಬಗೆಹರಿಯಿತು ಎಂದು ಜನ ನಂಬಿದ್ದಾರೆ. ವರದಹಳ್ಳಿಗೆ ಬಂದು ಹೋದ ನಂತರ ಯಾವಬದಲಾವಣೆಯೂ ಆಗದಿದ್ದರೆ ಅವರಿಗೆ ಇದೊಂದು ಮೋಸದ ತಾಣ ಎಂಬ ಭಾವನೆ ಬೆಳೆಯುತ್ತದೆ. ಆದರೆ ಶ್ರೀಧರರ ಪ್ರಕಾರ "ಸನ್ನಡತೆ ಸದ್ಬುದ್ದಿ ಸದಾಚಾರ ನಮ್ಮಲ್ಲಿ ಇದ್ದರೆ ಅದಕ್ಕೆ ಭಗವಂತ ಯೋಗ್ಯತೆಯನ್ನು ತಾನಾಗಿಯೇ ಕರುಣಿಸಬಲ್ಲ. ದುರಾಸೆ ದ್ವೇಷಕ್ಕೆ ಆತ ಮೌನಿ. ರೋಗರುಜಿನಗಳು, ಆರ್ಥಿಕ ಸಮಸ್ಯೆಗಳು, ಮುಂತಾದವುಗಳನ್ನು ತೀರ್ಥ ಪ್ರೋಕ್ಷಿಸಿ ಮಾಯ ಮಾಡಲಾಗದು. ನನ್ನ ಬಳಿ ಬರುವ ಭಕ್ತರು ತಮಗೆ ಹಣ ಕರುಣಿಸಿ, ನನ್ನ ಮನೆಯ ಆಕಳು ಹಾಲು ನೀಡುತ್ತಿಲ್ಲ, ನನಗೆ ಭೋಗ ಕರುಣಿಸಿ, ಎಂದು ಬರುತ್ತಾರೆ. ಆದರೆ ನಾನು ಸನ್ಯಾಸಿ ನನ್ನ ಬಳಿ ಮುಕ್ತಿಕೊಡಿ ಎಂದು ಪ್ರಾಂಜಲ ಮನಸ್ಸಿನಿಂದ ಇಲ್ಲಿಯವರೆಗೆ ಯಾರೂ ಬಂದಿಲ್ಲ. ನನ್ನ ತಪೋಶಕ್ತಿ ನನಗೆ ಮುಕ್ತಿ ನೀಡಬಹುದು ಆದರೆ ಮಿಕ್ಕವರ ವೈಯಕ್ತಿಕ ಸಮಸ್ಯೆಗೆ ಅವರೂ ಸನ್ಮಾರ್ಗದಲ್ಲಿ ನಡೆಯಬೇಕು. ನನ್ನಿಂದ ಪವಾಡಗಳು ನಡೆಯುವುದಿಲ್ಲ." ಎಂದು ಹೇಳುತ್ತಿದ್ದರಂತೆ. ಹಾಗೂ ಪ್ರಾಮಾಣಿಕ ಮನಸ್ಸಿನಿಂದ ಪ್ರಾರ್ಥಿಸುವ ಭಕ್ತರಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದರಂತೆ. ಸಾತ್ವಿಕ ರೀತಿಯಲ್ಲಿ ಬದುಕುವ ದಾರಿಯನ್ನು ಉಪನ್ಯಾಸಗಳ ಮುಖಾಂತರ ಬೋಧಿಸುತ್ತಿದ್ದರಂತೆ. ಹೀಗಾಗಿ ಅವರು ಮುಕ್ತರಾದನಂತರವೂ ಕ್ಷೇತ್ರ ಅವರ ಸನ್ಮಾರ್ಗದಲ್ಲಿ ನಡೆಯುತ್ತಿತ್ತು. ಅಂದು ಶ್ರೀಧರರು ಅದೆಷ್ಟು ಸಜ್ಜನರಾಗಿದರು ಎನ್ನುವುದಕ್ಕೆ ಅವರಬಳಿ ಯಾರಾದರೂ ಗಂಡುಹೆಣ್ಣಿನ ಜಾತಕ ತೋರಿಸಿ "ಮದುವೆ ಮಾಡಿಕೊಳ್ಳಬಹುದಾ... " ಎಂದು ಕೇಳಿದರೆ. "ತಮ್ಮಾ ಜಾತಕ ನಿನ್ನ ಪುರೋಹಿತರಿಗೆ ತೋರಿಸು, ಅದು ಅವರ ಕೆಲಸ, ಒಳ್ಳೆಯ ಕೆಲಸಕ್ಕೆ ಭಗವಂತನ ಆಶೀರ್ವಾದ ಇದೆ" ಎನ್ನುತ್ತಿದ್ದ್ರಂತೆ. ಅವರು ಭವಿಷ್ಯ, ಜಾತಕ ಮುಂತಾದವುಗಳ ತಂಟೆಗೆ ಹೋದವರಲ್ಲ ಎಂದು ಅವರನ್ನು ಹತ್ತಿರದಿಂದ ನೋಡಿದ ಶಿಷ್ಯರೊಬ್ಬರು ಹೇಳಿದರು. ಈಗ ಮಾದ್ಯಮದವರ ಅತಿಮಾನುಷ ಪ್ರಚಾರದಿಂದ ವರದಹಳ್ಳಿಯನ್ನು ಮಾಂತ್ರಿಕ ಶಕ್ತಿಯ ತಾಣ ಮಾಡುವ ಯತ್ನ ನಡೆದಿದೆ. ಪವಾಡಗಳ ತಾಣವಾಗುವತ್ತ ಹೆಜ್ಜೆ ಹಾಕಿದೆ. ಇದರಿಂದಾಗಿ ನೆಮ್ಮದಿಯ ತಾಣವಾಗಿದ್ದ ಕ್ಷೇತ್ರ ವ್ಯಾಪಾರೀಕರಣದ ಪೇಟೆಯಾಗುವ ದಿನ ದೂರವಿಲ್ಲ. ಆದರೆ ಟಿವಿಯಲ್ಲಿ ನ ವರದಿಯಲ್ಲಿ ಶ್ರೀಧರರ ಆಶ್ರಮದ ಆರಂಭದಿಂದಲೂ ಬೆಳವಣಿಗೆಗೆ ಕಾರಣೀಕರ್ತರಾದ ಶಂಕರನಾರಾಯಣ ರಾಯರಂತರ ನಿಜವಾದ ಭಕ್ತರ ಸಂದರ್ಶನ ಇಲ್ಲದಿರುವುದು ಅನುಮಾನ ಹುಟ್ಟಿಸುತ್ತದೆ. ಇದು ಪ್ರಚಾರಕ್ಕೆ ಮಾಡಿದ ತಂತ್ರವೇ? ಎಂಬ ಪ್ರಶ್ನೆ ಕಾಡದಿರದು. ಹಾಗೇನಾದರೂ ಪ್ರಚಾರಕ್ಕೆ ಮಾಡಿದ ತಂತ್ರವಾದರೆ ವರದಹಳ್ಳಿ ಮತ್ತೊಂದು ಕಮರ್ಶಿಯಲ್ ಕೇಂದ್ರವಾಗಲು ಹೆಚ್ಚುದಿನ ಬಾಕಿ ಇಲ್ಲ. ಶ್ರಿಧರರೇ ಕಾಯಬೇಕು ಕ್ಷೇತ್ರವನ್ನು....!

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೆ ,ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮ:

ಎಂಬ ಮಂತ್ರ ಬಾಲ್ಯದಿಂದಲೇ ಹೇಳುತ್ತಾ ಬಂದಿರುವ ಸಾವಿರಾರು ಭಕ್ತರಿಗೆ ಅದೊಂದೇ ಮಂತ್ರ ಸಾಕು ಶ್ರೀಧರರು ಎಂತಹ ಸನ್ಯಾಸಿ ಎಂದು ತಿಳಿಯಲು. ಆದರೆ ಇಂದಿನ ಜನ ಬಿಂಬಿಸಿಹೊರಟಿರುವ ಮಾಂತ್ರಿಕ ಶಕ್ತಿಯ ಶ್ರೀಧರರು ಅಲ್ಲಿ ಎಂದೂ ಇರಲಿಲ್ಲ ಇಂದೂ ಇಲ್ಲ ಮುಂದೂ ಇರುವುದಿಲ್ಲ ಎಂಬುದು ಹಿರಿಯರ ನುಡಿ. ನಂಬಿ ಕೆಟ್ಟವರಿಲ್ಲವೋ ನಿಜ. ಆದರೆ ಕೆಟ್ಟದ್ದನ್ನು ನಂಬಬಾರದು. ಹಾಗೆ ನಂಬಿದಲ್ಲಿ ಕೆಟ್ಟುಹೋಗುವುದು ಖಂಡಿತ...

ಕೊನೆಯದಾಗಿ :ನಮ್ಮ ಕಡೆ ಸಹಜವಾಗಿ ನಡೆಯುತ್ತಿರುವ ವಿಷಯಗಳನ್ನು ದೊಡ್ಡದು ಮಾಡುವ ಕೆಲಸಕ್ಕೆ ಕಡ್ಡಿ (ಫಿಟ್ಟಿಂಗ್) ಇಡುವುದು ಅನ್ನುತ್ತಾರೆ. ಟಿ.ವಿ ನೈನ್ ಗೆ ಕಡ್ಡಿಚಾನೆಲ್ ಎಂಬ ಹೆಸರು ಇತ್ತೀಚೆಗೆ ಹರಿದಾಡುತ್ತಿದೆ. ಸಣ್ಣದ್ದನ್ನು ದೊಡ್ಡದ್ದು, ಇಲ್ಲದ್ದನ್ನು ಇದ್ದಂತೆ ಮಾಡುವುದು ಅವರ ವೃತ್ತಿ. ಆದರೆ ಅಮಾಯಕರು ಸಿಕ್ಕಿಹಾಕಿಕೊಳ್ಳುವುದು ಯಾರ ವೃತ್ತಿಯೋ ಅರ್ಥವಾಗುತ್ತಿಲ್ಲ. ಪ್ರಪಂಚ ಇದು ಅವರವರ ದೃಷ್ಟಿಯಲ್ಲಿ ಅವರವರು ಸರಿ.


ಅಂತಿಮವಾಗಿ: ನಾನು ಈ ಬ್ಲಾಗ್ ಬರೆದು ಮುಗಿಸುತ್ತಿದ್ದಂತೆ ಕಡ್ಡಿ ತಂಡ ರಾಮನಗರದ ದರ್ಗಾದಲ್ಲಿ ದಿವ್ಯ ಪುರುಷ, ಕೇಳಿದ್ದನ್ನು ನೀಡುತ್ತಾನೆ, ಮಕ್ಕಳಿಲ್ಲದವರಿಗೆ ಮಕ್ಕಳು, ಹಣವಿಲ್ಲದವರಿಗೆ ಹಣ, ಎಂದು ಮನುಷ್ಯರು ಎಂದೂ ಮಾಡದ ಚೇಷ್ಟೆಗಳನ್ನು ಮಾಡುತ್ತಾ ಕೈ ಆಡಿಸುತ್ತಾ ಆಳವಾದ ದನಿಯಲ್ಲಿ ಕೂಗುತ್ತಿವೆ. ಆ ದೇವರೆ ............ ನಮ್ಮ ಜನರನ್ನು . ಕಾಪಾಡಬೇಕು

8 comments:

prasca said...

ಆದರೆ ಶ್ರೀಧರರ ಪ್ರಕಾರ "ಸನ್ನಡತೆ ಸದ್ಬುದ್ದಿ ಸದಾಚಾರ ನಮ್ಮಲ್ಲಿ ಇದ್ದರೆ ಅದಕ್ಕೆ ಭಗವಂತ ಯೋಗ್ಯತೆಯನ್ನು ತಾನಾಗಿಯೇ ಕರುಣಿಸಬಲ್ಲ. ದುರಾಸೆ ದ್ವೇಷಕ್ಕೆ ಆತ ಮೌನಿ.

ನಿಮ್ಮ ಬರಹದಲ್ಲಿರುವ ಈ ಮಾತುಗಳು ಅರ್ಥ ಮಾಡಿಕೊಂಡರೆ ಬಹುಶಃ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹೌದು ಶರ್ಮ ಸಾರ್, ಸುಮಾರು ೪ ವರ್ಷಗಳಿಂದೆ ಸ್ರೀಧರಾಶ್ರಮಕ್ಕೆ ಭೇಟಿ ಕೊಡುತ್ತಿದ್ದೇನೆ. ಅಲ್ಲಿನ ಪ್ರಶಾಂತತೆ, ಸುಂದರ ಪರಿಸರ, ಅಲ್ಲಿನ ಹಸು ಕರುಗಳು, ವೇದ ಘೋಷ ಎಲ್ಲವೂ ಚೆನ್ನ. ಅದು ಹಾಘೆ ಇರಲಿ ಎಂದು ಹಾರೈಸುತ್ತೇನೆ. ಬಹುಶಃ ಕಣಗಾಲ್ ಪುಟ್ಟಣ್ಣನವರ ಹಿಂದೂ ಸ್ಥಾನವೂ ಎಂಬ ಹಾಡು ಇಲ್ಲಿ ಚಿತ್ರೀಕರಣಗೊಂಡಾಗಲೂ ಇಷ್ಟೊಂದು ಅವಸ್ಥೆ ಉಂಟಾಗಿರಲಿಲ್ಲ ಅನ್ಸುತ್ತೆ. ಈ TV9 ನವರಿಗೆ ಅದೇನು ಹುಚ್ಚೋ. ಪದ್ಮಪ್ರಿಯಾಳನ್ನ ಸಾಯ್ಸಿದ್ರು. ಇನ್ನು ಏನೇನು ಮಾಡ್ಬೇಕೂಂತಿದರೊ ಗೊತ್ತಿಲ್ಲ.

Unknown said...

prasanna
neevu helidante(padmapriya) nanagu ade gabari.

Thanks for comment

g.mruthyunjaya said...

this is one more example of the electronic media misguiding the gullible people. too many superstitious people are in media and they try to make their family bigger!

ವಿ.ರಾ.ಹೆ. said...

ನಮಸ್ತೆ,

ಕಡ್ಡಿ ಚಾನಲ್ ! ಹ್ಹ ಹ್ಹ. ಒಳ್ಲೆ ಹೆಸರನ್ನೇ ಕೊಟ್ಟಿದ್ದೀರ.

’ಉತ್ತಮ ಸಮಾಜಕ್ಕಾಗಿ ’ ಎನ್ನುವ ಸ್ಲೋಗನ್ ಇಟ್ಟುಕೊಂಡು ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಚಾನಲ್ ಅದು. ಒಂದು ತಾಸು ನೋಡಿದರೆ ಸಾಕು ಅಸಹ್ಯ ಬಂದುಬಿಡುತ್ತದೆ.

ಸುದ್ಧಿ ಮಾಧ್ಯಮಗಳಿಗೆ ಕಡಿವಾಣ ಬೇಕಾಗಿದೆ.

Sushrutha Dodderi said...

ನಾನು ಬರೆಯಬೇಕೂಂತ ಇದ್ದುದನ್ನು ನೀವು ಬರೆದು ನನ್ನ ಕೆಲಸ ಕಮ್ಮಿ ಮಾಡಿದ್ರಿ. ಧನ್ಯವಾದ!

Unknown said...

To
M.B

ತಂತ್ರಜ್ಝಾನವನ್ನು ಹೇಗೂ ಬಳಸಿಕೊಳ್ಳಬಹುದು

ಗೆ
ವಿಕಾಸ್ ಹೆಗಡೆ
ನೂರಕ್ಕೆ ನೂರು ಸತ್ಯ.

ಗೆ
ಸುಶ್ರುತ ದೊಡ್ಡೇರಿ
ನಿಮ್ಮ ಶೈಲಿಯಲ್ಲಿ ಬರೆಯಿರಿ, ಅದು ಚೆನ್ನಾಗಿರುತ್ತೆ.

Unknown said...

neevu helodu nija amayaka janaranna sullu heli vanchisuttha iddare. avaru thamma Slogange viruddhavagi kelasa madode Journalism antha thilkodiddare ansutthe.

ಮನಸ್ವಿ said...

ಶರ್ಮ ಅವರೇ ತುಂಬಾ ಚನ್ನಾಗಿ ಬರೆದಿದ್ದೀರಿ

ಶ್ರೀದರ ಸ್ವಾಮಿಗಳ ಬಗ್ಗೆ ನನಗೂ ಭಕ್ತಿ ಇದೆ ಆದರೆ ಟಿವಿ9 ನ ಪವಾಡ! ನೋಡಿ ಜನ ಹುಚ್ಚೆದ್ದು ಕುಣಿದದ್ದು ಅತಿಯಾಯಿತು ...... ವರದಹಳ್ಳಿಯಲ್ಲಿ ಮೊನ್ನೆ ಮೊನ್ನೆಯ ತನಕ ಅಂದರೆ ನಿಮ್ಮ ಕಡ್ಡಿ ಚಾನೆಲ್ ನಲ್ಲಿ ಹೀಗೂ ಉಂಟೆ ಅಂತ ಜನರ ತಲೆಯಲ್ಲಿ ಪವಾಡ ಎಂದು ನಂಬಿಸುವ ಮುನ್ನ.. ಶ್ರೀದರಶ್ರಮದ ಸ್ಥಳೀಯ ಭಕ್ತರು ಆರಾಮವಾಗಿ ಬಂದು ಹೋಗಿ ಮಾಡುತ್ತಿದ್ದರು.. ನೈನ್ ನವರ ಕರಾಮತ್ತಿನಿಂದ ಸ್ಥಳೀಯ ಭಕ್ತರು ತೀರ್ಥ ಪಡೆಯಲು ಪರೆದಾಡುವಂತಾಗಿದೆ..
ನನಗೂ ನಿಮ್ಮಂತೆಯೇ.. ಇದು ಅಶ್ರಮದವರೇ ಟಿ.ವಿ. ೯ ನಾರಾಯಣ ಸ್ವಾಮಿಯನ್ನು ಕರೆಸಿದ್ದಾರೆಯೇ ಅನ್ನುವ ಅನುಮಾನವಿದೆ!
ಅಂದಹಾಗೆ ಹಾಯ್ ಬೆಂಗಳೂರಲ್ಲೂ ಇದೆ ಸುದ್ದಿ ಕೊಟ್ಟಿದ್ದರೆ ಇನ್ನೊಂದಿಷ್ಟು ದಿಡೀರ್ ಭಕ್ತರು ಉದ್ಭವಿಸಿಬಿಡುತ್ತಿದ್ದರೆನೋ ಅಲ್ಲವೇ??? !!!!! ಇದಕ್ಕೆ ಹೇಳೋದು ಜನ ಮರುಳೆ, ಟಿವಿ9 ಮರುಳೆ (ಹೊಸ ಗಾದೆ )