Monday, June 30, 2008

ಡಾ ದೀಪಕ್ ಮತ್ತು ಸ್ವಾಮಿ ವಿವೇಕಾನಂದ ಮತ್ತು ಕೆಲಸವೆಂಬ ಪೂಜೆ

ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಸೇರಿದ್ದ ಪ್ರಪಂಚದ ಪ್ರೇಕ್ಷಕರೆದುರು ಹಿಂದೂ ಧರ್ಮವನ್ನು ಎತ್ತರಕ್ಕೆ ಏರಿಸಿದವರು ಸ್ವಾಮಿ ವಿವೇಕಾನಂದ ಎಂದು ನಿಮಗೆ ಗೊತ್ತು. ಅಂದು ವಿವೇಕಾನಂದರು "ಅಕ್ಕತಂಗಿಯರೆ ಅಣ್ಣ ತಮ್ಮಂದಿರೆ" ಎಂದು ಭಾಷಣ ಪ್ರಾರಂಬಿಸುತ್ತಿದ್ದಂತೆ ಇಡೀ ಸಭೆಯೇ ಬೆಕ್ಕಸಬೆರಗಯಿತು ಆ ಕಾರಣಕ್ಕಾಗಿ ಅವರು ಪ್ರಖ್ಯಾತಿಯಾದರು ಎಂದು ನಾನೂ ನಾಲ್ಕನೇ ಕ್ಲಾಸಿನ ಪುಸ್ತಕದಲ್ಲಿ ಓದಿದ್ದೆ. ನೀವೂ ಓದಿರುತ್ತೀರಿ. ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಬರೆದಾದಮೇಲೆ ನಾನಂತೂ ಮರೆತಿದ್ದೆ. ನೀವು ಮರೆತಿರೋ ಬಿಟ್ಟಿರೋ ಗೊತ್ತಿಲ್ಲ. ಒಮ್ಮೆ ಬೆಂಗಳೂರಿನಲ್ಲಿ ಹೀಗೆ ಮಾತನಾಡುತ್ತಿದ್ದಾಗ ನರಹರಿ(ನನಗೆ ವರಸೆಯಲ್ಲಿ ಅವರು ಬಾವನಾಗಬೇಕು , ಹಾಗಂತಲೇ ಇಲ್ಲಿ ಬಾವ ಬಾವ ಎಂದು ಬರೆಯುತ್ತ ಹೋದರೆ ಭಾವದ ಅಭಾವವಾಗುತ್ತದೆ ಎನ್ನುವ ಕಾರಣಕ್ಕೆ ಹೆಸರಿಂದಲೇ ಬರೆಯುತ್ತಿದ್ದೇನೆ) ಹೇಳಿದರು. ಅಕ್ಕತಂಗಿಯರೇ ಅಣ್ಣತಮ್ಮಂದಿರೇ ಎಂದು ಭಾಷಣ ಪ್ರಾರಂಭ ಮಾಡಿದ ಮಾತ್ರಕ್ಕೆ ಇಡೀ ಸಭೆ ಮರುಳಾಗಲಿಲ್ಲ. ವಿವೇಕಾನಂದರ ಬಳಿ ಅಷ್ಟೊಂದು ತಾಕತ್ತು ಇತ್ತು. ಅವರು ಧ್ಯಾನದ ಆಳವನ್ನು ಹಿಂದೂಧರ್ಮದ ಅಗಲವನ್ನೂ ಆಳವಾಗಿ ತಿಳಿದಿದ್ದರು. ಅದರ ಹಿನ್ನೆಲೆ ಹೀಗಿದೆ. ವಿವೇಕಾನಂದರು ವಿಶ್ವಧರ್ಮ ಸಮ್ಮೇಳನಕ್ಕೆ ಅಲ್ಲಿಗೆ ಹೋದಾಗ ಅವರಿಗೆ ಭವ್ಯವಾದ ಸ್ವಾಗತವೇನೂ ಸಿಕ್ಕಿರಲಿಲ್ಲ. ವೇದಿಕೆಯಲ್ಲಿ ಭಾಷನ ಮಾಡುವ ಪ್ರತಿಯೊಬ್ಬರೂ ಅದಕ್ಕಾಗಿಯೇ ನಿಯೋಜಿಸಲ್ಪಟ್ಟಿದ್ದ ಪಾಶ್ಚಾತ್ಯ ಮಹಿಳೆಯೊಬ್ಬರ ಬಳಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿತ್ತು. ಆಕೆ ಅವರಿಗೆ ಸಮಯವನ್ನು ನಿಗದಿಪಡಿಸುತ್ತಿದ್ದರು ವಿವೇಕಾನಂದರು ಆ ಮಹಿಳೆಯ ಮನೆಗೆ ಬೆಳಿಗ್ಗೆ ಹೋದರು. ಆಕೆ ಈ ಕಾವಿ ವೇಷಧಾರಿ ಈ ಸಂತನನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಅರ್ದ ಗಂಟೆ ಕುಳಿತಿರಿ ಎಂದು ಹಜಾರದಲ್ಲಿ ವಿವೇಕಾನಂದರನ್ನು ಕೂರಿಸಿ ಒಳನಡೆದಳು. ಅರ್ದ ಗಂಟೆಗಳ ಕಾಲ ಅಲ್ಲಿ ಕುಳೀತಿದ್ದ ವಿವೇಕಾನಂದರು ಮೇಜಿನ ಮೇಲಿದ್ದ ಇಂಜನಿಯರಿಂಗ್ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕವನ್ನು ತಿರುವಿ ಹಾಕುತ್ತಾ ಕುಳಿತಿದ್ದರು. ಅರ್ದಗಂಟೆಯ ನಂತರ ಅಚೆ ಬಂದ ಮಹಿಳೆ ಭಾರತದ ಸಂತನ ಕೈಯಲ್ಲಿದ್ದ ಪುಸ್ತಕವನ್ನು ನೋಡಿ " ಓಹೋ ಈತ ನಾಳೆಯ ಭಾಷಣಕ್ಕೆ ಸಮಯ ನಿಗದಿಪಡಿಸಿಕೊಳ್ಳಲು ಬಂದಿರುವ ಸನ್ಯಾಸಿ , ತನ್ನನ್ನು ಇಂಪ್ರೆಸ್ ಮಾಡಲು ಇಂಜನಿಯರಿಂಗ್ ಪುಸ್ತಕ ಓದುತ್ತಿದ್ದಾನೆ, ಈತನಿಗೇನು ಗೊತ್ತು ಇಂಜನಿಯರ್ ಬಗ್ಗೆ ಎಂದು ಆಲೋಚಿಸುತ್ತಾ. "ಸರ್ ಆ ಪುಸ್ತಕದ ವಿಷಯ ನಿಮಗೆ ಅರ್ಥವಾಯಿತಾ..? ಅದೂ ನೀವು ಅರ್ದ ಗಂಟೆಯೊಳಗೆ ಮುನ್ನೂರು ಪುಟ ಮುಗಿಸಿದಂತಿದೆ" ಎಂದು ವ್ಯಂಗ್ಯವಾಡಿದಳು.ಆಗ ವಿವೇಕಾನಂದರು "ಇಲ್ಲಿಯವರೆಗೆ ಓದಿದಷ್ಟು ಅರ್ಥವಾಗಿದೆ" ಎಂದು ಆಕೆಗೆ ಸರಿ ಸುಮಾರು ಎರಡು ಗಂಟೆಗಳ ಕಾಲ ತಾವು ಓದಿದ್ದ ವಿಷಯದ ಬಗ್ಗೆ ವಿವರಿಸಿದರಂತೆ. ಆಗ ಆ ಮಹೀಳೆ ವಿವೇಕಾನಂದರ ಮನೋಶಕ್ತಿಗೆ ತಲೆ ಬಾಗಿ ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡು ಭಾಷಣಕ್ಕೆ ಅನುವು ಮಾಡಿಕೊಟ್ಟಳಂತೆ.


ಈ ಮೇಲಿನ ಘಟನೆ ವಿವೇಕಾನಂದರ ಗ್ರಾಹ್ಯಶಕ್ತಿಯನ್ನು ಉದಾಹರಿಸುತ್ತದೆ. ಮತ್ತು ಇಷ್ಟು ಗ್ರಾಹ್ಯ ಶಕ್ತಿ ಧ್ಯಾನದ ಮೊದಲನೆ ಹಂತದಲ್ಲಿಯೇ ಮನುಷ್ಯನಿಗೆ ಒಲಿಯುತ್ತದೆಯಂತೆ. ನಮಗೆ ಇಂಗ್ಲೀಷ್ ಅಥವಾ ಕನ್ನಡದ ವಾಕ್ಯದಲ್ಲಿನ ಒಂದೊಂದೇ ಶಬ್ಧಗಳು ಪಟಕ್ಕನೆ ತಲೆಯೊಳಗೆ ಹೋದಂತೆ ವಿವೇಕಾನಂದರಿಗೆ ಪುಟಗಳು ನೋಡಿದಾಕ್ಷಣ ತಲೆಯೊಳಗೆ ಹೋಗುತ್ತಿದ್ದವಂತೆ, ಇರಲಿ ಅವೆಲ್ಲಾ ಅಂತೆಕಂತೆಗಳಾಯಿತು, ಏಕೆಂದಂರೆ ನಾನು ವಿವೇಕಾನಂದರನ್ನು ನೋಡಿಲ್ಲ ಅವರ ಬಗ್ಗೆ ಓದಿಲ್ಲ ಸಂಪೂರ್ಣ ಹೇಗೂ ತಿಳಿದಿಲ್ಲ. ಆದರೆ ಮೊನ್ನೆ ಅವರ ತತ್ವಗಳನ್ನು ಅರೆದುಕುಡಿದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದೆ. ಅವರೇ ಡಾ.ದೀಪಕ್.

ಡಾ ದೀಪಕ್ ಸಾಗರದಲ್ಲಿ ಯಶಸ್ವಿ ಎಂಬಿಬಿಎಸ್ ಯುವ ಡಾಕ್ಟರ್. ಒಂದಿಷ್ಟು ಆಧ್ಯಾತ್ಮವನ್ನು ವಿವೇಕಾನಂದರ, ರಾಮಕೃಷ್ಣಪರಮಹಂಸರ ತತ್ವವನ್ನು ತಿಳಿದುಕೊಂಡವರು. ಹಾಗಂತ ವಿಜ್ಞಾನವನ್ನು ಅಲ್ಲಗಳೆದು ದೇವರಮೇಲೆ ಭಾರ ಹೊರಿಸುವ ಗಿರಾಕಿಯಲ್ಲ. ವಿಜ್ಞಾನದಿಂದ ಉತ್ತರ ಸಿಗದು ಎಂದಾದಮೇಲೆ ದೇವರ ಮೊರೆಹೋಗುವ ಜನ. ಬಹಳಷ್ಟು ಆಲೋಪತಿ ಡಾಕ್ಟರ್ ತರಹ ಹಣದ ಹಿಂದೆ ಹೋದವರಲ್ಲ. ಈ ಕಾಲದಲ್ಲಿಯೂ ಅವರ ಭೇಟಿ ಫೀ ೧೫-೨೦ ರ ಆಸುಪಾಸಿನಲ್ಲಿಯೇ ಇದೆ. ಅವರು ಹಾಸ್ಟೆಲ್ಲಿನಲ್ಲಿದ್ದಾಗ ಒಮ್ಮೆ ಖಾಯಿಲೆ ಬಿದ್ದಿದ್ದರಂತೆ. ಹಾಸ್ಟೆಲ್ಲಿನ ವಾರ್ಡನ್ ಒಬ್ಬ ರಾಮಕೃಷ್ಣಾಶ್ರಮದ ಸನ್ಯಾಸಿ. ಖಾಯಿಲೆಬಿದ್ದಿರುವ ದೀಪಕರನ್ನು ಅವರು ಸ್ನಾನಮಾಡಿಸಿದರಂತೆ. ಸ್ನಾನ ಮಾಡಿಸುವಾಗ ಆ ಸನ್ಯಾಸಿ ಪುರುಷಸೂಕ್ತ ವನ್ನು ಪಠಿಸುತ್ತಿದ್ದರಂತೆ. ಇವರಿಗೆ ಆಶ್ಚರ್ಯವಾಯಿತು. ದೀಪಕ್ ಸ್ವಾಮೀಜಿಯಬಳಿ ತನ್ನನ್ನು ಸ್ನಾನ ಮಾಡಿಸುವಾಗ ಪುರುಷಸೂಕ್ತ ಪಠಿಸುವ ಕಾರಣ ಕೇಳಿದರಂತೆ. ಆವಾಗ ಅವರು" ಇದು ಭಗವಂತನ ಅಭಿಷೇಕ ಹಾಗಾಗಿ ಅದೇ ಸೂಕ್ತ." ಎಂದರಂತೆ. ದೀಪಕ್ ಗೆ ಅವರು ತನ್ನಲ್ಲಿಯೂ ದೇವರನ್ನು ಕಂಡಿದ್ದು ಆಶ್ಚ್ರಯ ಮೂಡಿಸಿತಂತೆ.

ನಂತರದ ದಿನಗಳಲ್ಲಿ ಒಮ್ಮೆ ವಿವೇಕಾನಂದರ ಕುರಿತು ಭಾಷಣ ಮಾಡುತ್ತಿದ್ದ್ರರಂತೆ. ಭಾಷಣ ಮುಗಿದ ಮೇಲೆ ವ್ಯಕ್ತಿಯೊಬ್ಬರು "ನೀವು ವಿವೇಕಾನಂದರ ಪ್ರತಿ ರೂಪ, ನಾನು ನಿಮ್ಮಲ್ಲಿ ವಿವೇಕಾನಂದರನ್ನು ಕಂಡೆ ಎಂದು ದಡಾಲನೆ ಕಾಲುಮುಟ್ಟಿ ನಮಸ್ಕರಿಸಿದರಂತೆ." ದೀಪಕ್ ಗೆ ಆ ಅನುಭವ ಅನಿರೀಕ್ಷಿತ.
ನಾವು ಮಾಡುವ ಕೆಲಸದಲ್ಲಿ ಭಗವಂತನನ್ನು ನಾವು ಕಾಣಲು ಸಾದ್ಯವೇ ಎಂಬಂತಹ ಲವಲೇಶದ ಅನುಮಾನವೂ ಇಲ್ಲದೆ ಮಗ್ನನಾದರೆ ಭಗವಂತನನ್ನು ಕಾಣಬಹುದು. ಅಥವಾ ಕಂಡಿದ್ದನ್ನು ಭಗವಂತ ಅಂದುಕೊಳ್ಳಬಹುದೆಂಬ ತರ್ಲೆ ಉತ್ತರವನ್ನೂ ಕಂಡುಕೊಳ್ಳಬಹುದು ಬಿಡಿ ಆ ವಿಚಾರವನ್ನು ಈಗ ವಿಷಯಕ್ಕೆ ಬರೋಣ

ಇದೂ ಅಂತೆ ಕಂತೆಗಳು , ಡಾ ದೀಪಕ್ ಹೇಳಿದ್ದು ಮತ್ತು ನಾನು ಕೇಳಿದ್ದು. ಡಾ ದೀಪಕ್ ಮನೆಗೆ ಕರೆದು ತಂಪಾಗಿ ಊಟ ಹಾಕಿ ಒಂದೂವರೆ ತಾಸು ಉಚಿತ ಪಾಠ ಮಾಡಿದ್ದು. ಮಾರನೇ ದಿನ ಡಾ.ದೀಪಕ್ ಹೇಳಿದ ಮಾತುಗಳು ತಲೆಯಲ್ಲಿ ಇನ್ನೂ ಗುಂಯ್ ಗುಟ್ಟುತ್ತಿತ್ತು. ಎಂಬತ್ತು ವರ್ಷದ ಅಪ್ಪಯ್ಯನಿಗೆ ದಿನವಿಡಿ ಮನೆಯಲ್ಲಿ ಕೂರಲು ಬೇಸರ. ದಿನಕ್ಕೊಮ್ಮೆ ತಾಳಗುಪ್ಪಕ್ಕೆ ಭೇಟಿಕೊಡಬೇಕು. ನನಗೆ ದಿನನಿತ್ಯ ಅವರನ್ನು ತಾಳಗುಪ್ಪಕ್ಕೆ ಹೋಗಲು ಬೈಕ್ ನಲ್ಲಿ ಬಸ್ಸಿಗೆ ಬಿಡಬೇಕು. ಏನೋ ಕೆಲಸವಿದ್ದಾಗ ಹೀಗೆ ಡ್ರಾಪ್ ಕೊಡುವುದು ಬೇಸರತರಿಸಿಬಿಡುತ್ತದೆ. ವಾಪಾಸು ಬರುವ ಬಸ್ಸನ್ನು ಕಾದು ಮನೆಗೆ ಕರೆದುಕೊಂಡು ಬರಬೇಕು. ಅಕಸ್ಮಾತ್ ಒಂದೈದು ನಿಮಿಷ ವ್ಯತ್ಯವಾದರೂ ಹತ್ತು ಬಾರಿ ಸರಿಯಾದ ಸಮಯಕ್ಕೆ ಕರೆದುಕೊಂಡುಹೋಗಿ ಬಿಟ್ಟ ವಿಷಯವನ್ನೂ ಮರೆತು ಬೈಸಿಕೊಳ್ಳಬೇಕು. ಅದು ಅವರ ಸ್ವಭಾವ ಬಿಡಿ. ಆದರೂ ಒಮ್ಮೊಮ್ಮೆ ತಾಳ್ಮೆಕೆಡುತ್ತದೆ. ಆವಾಗೆಲ್ಲ ಸಿಟ್ಟನ್ನು ಅದುಮುತ್ತೇನೆ. ಒಮ್ಮೊಮ್ಮೆ ಬಹಳ ಕಷ್ಟವಾಗುತ್ತದೆ. ಆದರೂ ಈ ಹತ್ತು ವರ್ಷದಲ್ಲಿ ಒಂದು ಬಾರಿಯೂ ಸಿಟ್ಟನ್ನು ವ್ಯಕ್ತಪಡಿಸಲಿಲ್ಲ. ವ್ಯಕ್ತಪಡಿಸದಿದ್ದರೂ ಮ ನಸ್ಸಿಗೆ ಕಷ್ಟವಾಗುತ್ತದೆ. ಮೊನ್ನೆ ಹಾಗೆಯೇ ಆ ಯಿತು, ಬಸ್ಸಿಗೆ ಕಾದೂ ಕಾದೂ ಅ ಸಹನೆ ಪ್ರಾರಂಭವಾಯಿತು. ಆ ವಾಗ ಡಾ ದೀಪಕ್ ರ ಸ್ನಾನದ ಕತೆ ನೆನಪಾಯಿತು. ಹೌದು ಬಸ್ಸಿಗೆ ಬರುವುದು ಭಗವಂತ, ಅವನ ದರ್ಶನಕ್ಕೆ ನಾನು ಕಾಯುತ್ತಿದ್ದೇನೆ ಅಂತ ಅಂದುಕೊಂಡೆ. ಅರೆ ಆಶ್ಚರ್ಯ ನನ್ನೊಳಗಿನ ಅಸಹನೆ ತಟ್ಟನೆ ಮಾಯವಾಯಿತು. ನನಗೆ ಆಶ್ಚ್ರಯ ಆಗಲು ಪ್ರಮುಖ ಕಾರಣ ನಾನು ಇತ್ತೀಚಿಗೆ ದೇವರು ಭಗವಂತ ಅಂತ ಹಿಂದೆ ಅಷ್ಟಾಗಿ ಹೋದವನಲ್ಲ. ಇದೇನೋ ಹೊಸ ಅನುಭವ. ಇರಲಿ ಇಂತಹ ನಂಬಿಕೆಗಳು ಖುಷಿಕೊಡುತ್ತವೆ ಅಂತಾದರೆ ಇರಲಿ.
ವಿವೇಕಾನಂದರ ಹೇಳಿದ ಬೇಸಿಕ್ ತತ್ವ ಕೆಲಸದಲ್ಲಿ ಭಗವಂತನನ್ನು ಕಾಣುವುದಂತೆ. ಎಲ್ಲವುದಕ್ಕೂ ಗೊತ್ತಿಲ್ಲ, ಸಣ್ಣ ಪುಟ್ಟ ಅಸಮಾಧಾನವನ್ನು ಹೀಗೆ ಹೋಗಲಾಡಿಸಿಕೊಳ್ಳಬಹುದು. ಅಷ್ಟೊಂದು ಆ ಳವಾದ ಅ ರ್ಥ ನಮ್ಮಂತಹ ಪಾಮರರಿಗೆ ಆಗದು. ಗಟ್ಟಿ ಕೇಳಿದರೆ ನಮಗೆಲ್ಲಾ ಆಳವಾದ ಅಧ್ಯಾತ್ಮ ಅ ಗತ್ಯವೂ ಇ ಲ್ಲ. ಮೇಲ್ಪದರಿನ ಟಚ್ ಅರ್ಥವಾದರೆ ಹ್ಯಾಪಿ ಲೈಫ್ ಚಾನ್ಸು ಅಷ್ಟೆ.

3 comments:

ಜಗದೀಶಶರ್ಮಾ said...

ಚೆನ್ನಾಗಿ ಬರ್ದಿದೀರ ಸರ್. ನನಗೂ ಈ ದೀಪಕ್ ಬಗ್ಗೆ ವಿಶೇಷ ಭಾವನೆಗಳಿವೆ.

Vijay Joshi said...

ಭಾರತದ ದೇಶಭಕ್ತ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಗ್ಗೆ ತುಂಬು ಅಭಿಮಾನದಿಂದ ಈ ಲೇಖನ ಬರೆದಿದ್ದೀರಿ. ಲೇಖನ ನನಗಿಷ್ಟವಾಯಿತು. ನಿಮಗೆ ದನ್ಯವಾದಗಳು..

shreeshum said...

To: jagadish Sharma And Vijay Joshi

Dhanyavadagalu