Wednesday, October 1, 2008

ಹನಿ ಹನಿ ಇಬ್ಬನಿ


ಚುಮು ಚುಮು ಬೆಳಗಾಗುತ್ತಿದ್ದಂತೆ ಹನಿ ಹನಿ ಇಬ್ಬನಿ ಬೀಳುವ ಚಳಿಗಾಲ ಶುರುವಾಗಿದೆ. ಒಂದು ಮಂಕಿ ಕ್ಯಾಪ್ ಧರಿಸಿ ಬೆಳಿಗ್ಗಿನ ವಾಕಿಂಗ್ ಹೊರಡುವವರಿಗೆ ಮೀಸೆಯಮೇಲೆಲ್ಲಾ ಹನಿ ಹನಿ ಇಬ್ಬನಿ . ಬಾಯಿಂದ ಹೊರಡುವ ಬೆಳ್ಳನೆಯ ಹೊಗೆ ಸಿಗರೇಟು ಸೇದದಿದ್ದರೂ ಪುಕ್ಕಟೆ ಬರುತ್ತದೆ. ಮೂರ್ನಾಲ್ಕು ಕಿಲೋಮೀಟರ್ ನಡೆದು ವಾಪಾಸು ಮನೆಗೆ ಬಂದು ಒಂದು ಸೌಟು ಕೊಬ್ಬರಿ ಎಣ್ಣೆ ಬಾಯಿಗೆ ಹಾಕಿ ಪುಚುಪುಚು ಆಯಿಲ್ ಪುಲ್ಲಿಂಗ್ ಮಾಡಿ ನಂತರ ಬಿಸಿಬಿಸಿ ಕಾಫಿ ಕುಡಿದರೆ ಆಹಾ ಎಂಥ ಮಧುರಾ ಯಾತನೆ ಎಂಬ ಹಾಡು ಗುಣುಗುಣಿಸಬಹುದು. ಆರೋಗ್ಯದ ಬಗ್ಗೆ ಪಕ್ಕದ ಮನೆಯವರೊಡನೆ ಗಂಟೆಗಟ್ಟಲೆ ಭಾಷಣ ಬಿಗಿಯಬಹುದು. ನಂತರ ಬಿಸಿಬಿಸಿ ದೋಸೆ ಆಮೇಲೆ ಆಫೀಸ್ ಇದ್ದರೆ ಅದರ ಕತೆ ಬೇರೆ. ಇದು ಸಿಟಿ ಜೀವನದ ಕತೆಯಾಯಿತು. ನಮಗೆ ನಮ್ಮಂತ ಹಳ್ಳಿಯಲ್ಲಿ ಕೂತವರಿಗೆ ಇದು ಮಹದಾನಂದದ ಕಾಲ.....!. ಬೆಳಿಗ್ಗಿನ ಚಳಿಗೆ ಏಳಲಾರದೆ ಎದ್ದು ಕೊಟ್ಟಿಗೆಗೆ ಹೋಗಿ ಕಮಟು ವಾಸನೆಯ ಸಗಣಿ ಬಾಚಬೇಕು. ಚಳಿಗಾಲ ಬಂತೆಂದರೆ ಆಕಳುಗಳು ಇಡಿ ಮೈಯನ್ನು ರಾಡಿ ಮಾಡಿಕೊಂಡು ಬಿಡುತ್ತವೆ. ಬೆಚ್ಚನೆಯ ಸಗಣಿಯ ಮೇಲೆ ಹೊರಳಿ ಹೊಳ್ಯಾಡಿ ದೇಹದ ತಾಪಮಾನವನ್ನು ಹೆಚ್ಚಿಸಿಕೊಳ್ಳುವ ಅವುಗಳ ಯತ್ನದಲ್ಲಿ ನಮಗೆ ಹಾಲು ಹಿಂಡಲು ಬರಲಾರದಷ್ಟು ರಾಡಿ. ಅವುಗಳ ಮೈ ತೊಳಸಿಯೇ ಹಾಲು ಕರೆಯಬೇಕು. ನಾವು ಇಂದು ಹಾಲು ಕರೆದು ಡೈರಿಗೆ ಹಾಕದಿದ್ದರೆ ನಾಳೆ ಸಿಟಿಯಲ್ಲಿ ವಾಕಿಂಗ್ ಮುಗಿಸಿ ಬಂದವರಿಗೆ ಬಿಸಿಬಿಸಿ ಕಾಫಿ ಇರುವುದಿಲ್ಲ ಎಂಬ ಕಾಳಜಿಯಿಂದ ನಾವೇನು ಕರೆಯುತ್ತಿಲ್ಲ. ಹೀಗೆ ಹಾಲು ಹಾಕಿ ನಾಲ್ಕಾರು ಕಾಸು ಕಂಡು ಅದರಿಂದ ನಮ್ಮ ಮಕ್ಕಳಾದರೂ ಸಿಟಿಯ ವಾಕಿಂಗ್ ಮುಗಿಸಿ ಕಾಫಿ ಕುಡಿಯುತ್ತಾರಾ ಎಂಬ ದೂರದ ಆಸೆ. ಈ ಆಸೆ ದೂರವಾಗುತ್ತಲೆ ಬಂದಿದೆ. ಕಾರಣ ಹಾಲು ಡೈರಿಗೆ ಹಾಕಿ ಲಾಭ ಮಾಡಿದ ಗಿರಾಕಿ ನಮ್ಮ ಮಲೆನಾಡಿನಲ್ಲಿ ಇಲ್ಲ. ದಿನ ದೂಡಬಹುದು ಅಷ್ಟೆ. ಹಾಗೆಯೇ ಭತ್ತ ಬೆಳೆಯುವ ಮಲೆನಾಡಿಗನೂ ಅದೇ ಕನಸು ಹೊತ್ತು ಹಲವಾರು ತಲೆಮಾರು ಕಳೆದಿದ್ದಾನೆ. ಸಮಾಜಕ್ಕೆ ಅಮೃತ ಉಣಿಸಿದವರು ತಾವು ಅರೆಹೊಟ್ಟೆಯಲ್ಲಿಯೇ ಇರಬೇಕು ಎಂಬುದು ಪ್ರಕೃತಿ ನಿಯಮವಾದಂತಿದೆ . ಹಾಗಾದರೆ ಹಣದ ವಿಷಯದಲ್ಲಿ ಗೆದ್ದವರ್ಯಾರು, ?
ಕಂಡೆ ನಾನು ಮೊನ್ನೆ ಬೆಂಗಳೂರು ಮೈಸೂರು ಹಾಗೂ ಮಡ್ರಾಸ್ ಗೆ ಹೋದಾಗ ಗೆದ್ದವರನ್ನು ಕಂಡೆ. ಅಬ್ಬಾ ಅದು ಎಂತಾ ಗೆಲುವು?. ಆದರೆ ಅವರು ಲಯಕರ್ತರು.

ಬೆಂಗಳೂರಿನಲ್ಲಿ ಪೆಜತ್ತಾಯರು ಯು.ಬಿ ಸಿಟಿಯಲ್ಲಿರುವ ರಾಜಧಾನಿ ಹೊಟೆಲ್ಲಿಗೆ ಊಟಕ್ಕೆ ಕರೆದೊಯ್ದಿದ್ದರು. ಆ ಹೊಟೆಲ್ಲಿನ ತಲೆಯಮೇಲೆ ವಿಜಯಮಲ್ಯನ ಹೆಲಿಪ್ಯಾಡ್ ಇದೆ. ಬಹು ಅಂತಸ್ತಿನ ಆ ಕಟ್ಟದವನ್ನು ಕುತ್ತಿಗೆ ಮುರಿದುಹೋಗುತ್ತದೆಯೇನೋ ಎನ್ನುವಷ್ಟು ತಲೆ ಎತ್ತಿ ನೋಡಬೇಕು. ಕೋಟಿ ಕೋಟಿ ರೂಪಾಯಿಯ ಒಡೆಯ ವಿಜಯ ಮಲ್ಯ ಹಾಗೂ ಅವನಪ್ಪ ವಿಠಲ ಮಲ್ಯ ಗಳಿಸಿದ್ದು ಗಳಿಸುತ್ತಿರುವುದು ಹೆಂಡದಿಂದ. ಜನರಿಗೆ ಕುಡಿಸಿ ಬೆಳೆದವರು ಅವರು . ಅವರು ಉರಿಯಲು ಅದೆಷ್ಟು ಮನೆಯ ದೀಪಗಳು ಆರಿವೆಯೋ ಇರಲಿ. ಮೈಸೂರಿಗೆ ಹೋದಾಗ ಗಣೇಶ್ ಬೀಡಿಯ ಒಡೆಯರ ಆಸ್ತಿಯನ್ನು ಕಿವಿಯಾರೆ ಕೇಳಿದೆ. ಮೂರು ತಲೆಮಾರು ಹಾಸಿ ಹೊದೆಯುವಷ್ಟು, ಎಲ್ಲಿ ನೋಡಿದರಲ್ಲಿ ಅವರದ್ದೇ ಆಸ್ತಿ. ಆ ಆಸ್ತಿ ಹಾಗೆ ಬೆಳೆಯಲು ಎಷ್ಟು ಜನರ ಅಸ್ತಿ ನುಗ್ಗಾಗಿದೆಯೋ ಬಲ್ಲವರ್ಯಾರು. ಮಡ್ರಾಸ್ ಗೆ ಹೋದಾಗ ಮಾಣಿಕ್ ಚಂದ್ ಗುಟ್ಕಾ ಕಂಪನಿಯ ಒಡೆಯನ ಶ್ರೀಮಂತಿಕೆಯ ಕುರಿತು ವಿವರ ಹೇಳಿದರೊಬ್ಬರು. ಮೂರೇನು ಮೂವತ್ತು ತಲೆಮಾರು ತಿಂದರೂ ಕರಗದು ಅಷ್ಟಿದೆ ಆಸ್ತಿ. ಪಾಪ ಗುಟ್ಕಾ ತಿಂದು ಅದೆಷ್ಟು ಜನರು ದೇಣಿಗೆ ಕೊಟ್ಟರೋ ಜೀವವನ್ನ ಅಂತ ಅನ್ನಿಸಿತು. ನಾವಾದರೋ ಒಂದಿಷ್ಟು ಅಡಿಕೆ ಬೆಳೆದು ಹಣ ಕಂಡಿದ್ದೇವೆ. ಆದರೆ ಲಾಗಾಯ್ತಿನಿಂದ ಆಹಾರ ಬೆಳೆ ಬೆಳೆದು ಸಂಕಷ್ಟದಲ್ಲಿರುವ ರೈತರನ್ನು ನೆನೆದು ಬೇಸರವಾಗುತ್ತದೆ. ಇರಲಿ ಶ್ರೀಮಂತಿಕೆಯೊಂದೆ ಮಾನವಲ್ಲ ಅಂತ ಅಂದುಕೊಂಡು ಹಾಲು ಮಾರಿ ತರಕಾರಿ ಬೆಳೆದು ಭತ್ತ ಹಾಕಿ ದೇಶೋದ್ಧಾರ ಮಾಡಲು ಒಂದಿಷ್ಟು ಜನ ಬೇಕಲ್ಲ. ಅವರ ಸಾಲಿಗೆ ಅವರುಗಳು ಹಾಗೂ ನಾವುಗಳು ಎನ್ನುವ ಸಮಾಧಾನ.

ಕೊನೆಯದಾಗಿ: ಶ್ರೀಮಂತಿಕೆಯಲ್ಲಿ ನೆಮ್ಮದಿ ಇಲ್ಲವಂತೆ ಹೌದಾ..? ಎಂದು ಆನಂದರಾಮಾ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು" ಹೌದು ಬಡವರು ಹಾಗಂದುಕೊಳ್ಳುವುದರಿಂದ ಬಡತನದಲ್ಲಿ ನೆಮ್ಮದಿ ಇದೆ" ಎಂದರವರು. ಅಂತರಾರ್ಥ ತಿಳಿದು ದಂಗಾದೆ.

2 comments:

ವಿಕಾಸ್ ಹೆಗಡೆ said...

ಅಡಿಕೆ ಬೆಳೆದವ ಶ್ರೀಮಂತ ಆಗಲ್ಲ, ಗುಟ್ಕಾ ಮಾಡಿದವ ಆಗ್ತಾನೆ, ಕಬ್ಬು ಬೆಳೆದವ ಶ್ರೀಮಂತ ಆಗಲ್ಲ, ಶುಗರ್ಕೇನ್ ಜ್ಯೂಸ್ ಮಾಡಿದವ ಆಗ್ತಾನೆ, ಹೂಕೋಸು ಬೆಳೆದವ ಶ್ರೀಮಂತ ಆಗಲ್ಲ, ಗೋಬಿ ಮಂಚೂರಿ ಮಾಡಿದವ ಆಗ್ತಾನೆ.. ಹಿಂಗೇ ಏನೇನೋ...

ಈಸಲ ಆನಂದರಾಮಾ ಶಾಸ್ತ್ರಿಗಳಿಗೆ ನನ್ನ ನಮಸ್ಕಾರ ತಿಳಿಸಿ

shreeshum said...

ok khandita

thanks for posting