Tuesday, October 14, 2008

ಭೂಮಿ ಹುಣ್ಣಿಮೆ ಕಡುಬು ಮತ್ತು ಗೊಡ್ಡಲ್ಲದ ಶಾಸ್ತ್ರ


ಮಳೆಗಾಲ ಮುಗಿದು ಅತ್ತ ಚಳಿಗಾಲವೂ ಅಲ್ಲದ ಇತ್ತ ಬೇಸಿಗೆಯೂ ಅಲ್ಲದ ಕಾಲದಲ್ಲಿ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಅಂತಹ ಒಂದು ಹಬ್ಬ ಈ ಭೂಮಿಹುಣ್ಣಿಮೆ. ಹೆಸರೇ ಸೂಚಿಸುವಂತೆ ಭೂಮಿಯನ್ನು ನಂಬಿ ಬದುಕುತ್ತಿರುವವರ ಹಬ್ಬ . ಅಡಿಕೆ, ಭತ್ತ ಕಬ್ಬು ಹೀಗೆ ರೈತಾಪಿ ವರ್ಗ ತಾವು ಬೆಳೆಯುತ್ತಿರುವ ಕೃಷಿ ಕ್ಷೇತ್ರಕ್ಕೆ ಹೋಗಿ ಅಲ್ಲಿಯೇ ಕಲ್ಲಿನ ರೂಪ ತಳೆದು ಬಿದ್ದಿದ್ದಕ್ಕೆ ತಾತ್ಕಾಲಿಕ ದೇವರ ಪಟ್ಟ ಕೊಟ್ಟು ಪ್ರತಿಷ್ಟಾಪನೆ ಮಾಡಿ ಅದಕ್ಕೊಂದು ಪೂಜೆ ಸಲ್ಲಿಸಿ ಅಲ್ಲಿಯೇ ಒಂದಿಷ್ಟು ಕಡುಬು ತಿಂದು ನಂತರ ಮನೆಗೆ ಬಂದು ದೇವರಿಗೆ ನೈವೇದ್ಯ ಮಾಡಿ ಊಟ ಮಾಡಿದರೆ ಭೂಮಿ ಹುಣ್ಣಿಮೆ ಹಬ್ಬ ಮುಗಿದಂತೆ.
ಹೀಗೆ ನೂರಾರು ಸಂಪ್ರದಾಯದ ಹಬ್ಬಗಳು ಪ್ರತೀ ವರ್ಷ ಬಂದುಹೋಗುತ್ತವೆ. ಒಮ್ಮೊಮ್ಮೆ ನಾವು ಆಚರಿಸುವ ಈ ಹಬ್ಬಗಳನ್ನು ನೋಡಿ ನಮ್ಮಷ್ಟಕ್ಕೆ ನಗು ಬರುತ್ತದೆ. ದೂರದಿಂದ ನಿಂತು ನಮ್ಮ ಆಚರಣೆಗಳನ್ನು ನಾವೇ ನೋಡಿಕೊಂಡರೆ ಸಣ್ಣ ಮಕ್ಕಳಾಟದಂತೆ ಭಾಸವಾಗುತ್ತದೆ. ತೋಟದಲ್ಲಿ ಬಿದ್ದು ಹೊರಳಾಡುತ್ತಿದ್ದ ಕಲ್ಲು ದೇವರಂತೆ. ಅದಕ್ಕೆ ಕುಂಕುಮ ಅರಿಶಿನ ಹೂವು ಹಾಗೂ ಮನೆಯಿಂದ ಒಯ್ದಿದ್ದ ಲಕ್ಷ್ಮೀಕಾಸಿನ ಸರ ಮತ್ತು ನೈವೇದ್ಯ. ಅಲ್ಲೊಂದಿಷ್ಟು ಮಂತ್ರ ಹಾಗೂ "ಪೂಜೆಯ ಮಾಡುವೆ ಮಾಲಕ್ಷ್ಮೀ ನಾನಿನ್ನ... ತೇಜವಾ ಬೀರುತ್ತ ಬಾರಮ್ಮ....ಬಾರಮ್ಮ ನೀ ಮನೆಗೆ ... ಸಕಲ ಸೌಬಾಗ್ಯವಾ ತಾರಮ್ಮ.." ಎಂಬ ಹಾಡು. ಪೂಜೆ ಮುಗಿದ ಮರುಕ್ಷಣ "ಅಪಿ ಲಕ್ಷ್ಮೀ ಕಾಸಿನ ಸರ ತಗಂಡ್ಯಾ..? ದೀಪದ ಗುಡ್ಡು ಕಳದು ಹೋಕು... ಬಾಳೆ ಹಣ್ಣು ಸಿಪ್ಪೆ ತಗ ದನಕ್ಕೆ ಹಾಕಲಾಕ್ತು " ಎನ್ನುತ್ತಾ ಒಂಚೂರು ಅಲ್ಲಿ ಬಿಡದೆ ಕಲ್ಲನ್ನು ಮತ್ತೆ ಯಥಾ ಸ್ಥಾನಕ್ಕೆ ಇಟ್ಟು ಬರುವ ಪರಿ, ನಗೆ ತರಿಸುತ್ತದೆ. ಇರಲಿ ಅದು ನಂಬಿಕೆ ಅನ್ನೋಣ ಈ ಎಲ್ಲಾ ಸಂಪ್ರದಾಯಗಳನ್ನು ಪ್ರಶ್ನಿಸದೆ ಪಾಲಿಸಿಕೊಂಡವರ ಬಳಿ ಇದರ ಅರ್ಥ ಕೇಳಿದರೆ ಗುರಾಯಿಸುತ್ತಾರೆ. ಪುರೋಹಿತರ ಬಳಿ ಕೇಳಿದರೆ ನಮ್ಮನ್ನು ಉದ್ದಟತನದ ಪ್ರಶ್ನೆ ಎಂದು ಅವರೇ ತೀರ್ಮಾನಿಸಿ ಒರಟ ಎಂಬ ಪಟ್ಟ ಕಟ್ಟಿಬಿಡುತ್ತಾರೆ. ಹಾಗಾದರೆ ಭೂಮಿ ಹುಣ್ಣಿಮೆಯಂತಹ ಕೃಷಿಕರ ಹಬ್ಬಕ್ಕೆ ಏನಾದರೂ ಅರ್ಥವಿದೆಯಾ..? ಎಂದು ಕೆದಕಿದರೆ ಎಲ್ಲವುದಕ್ಕೂ ಅರ್ಥವಿಲ್ಲದಿದ್ದರೂ ಕೆಲವಕ್ಕೆ ಅರ್ಥವಿದೆ ಎಂಬ ಉತ್ತರ ನನಗೆ ಮೈಸೂರಿನ ಇಸ್ಕಾನ್ ನ ಹರೇಕೃಷ್ಣ ನೇಚರ್ ಪಾರ್ಮ ನ ಸಸ್ಟೈನ ಬಲ್ ಅಗ್ರಿಕಲ್ಚರ್ ಸಿಸ್ಟಮ್ ಆದ ಜೀವಚೈತನ್ಯ ಕೃಷಿ ಪದ್ದತಿ ಕಲಿಯುವಾಗ ಸಿಕ್ಕಿತು. ಭೂಮಿ ಹುಣ್ಣಿಮೆ ದಿನ ಕೆಮ್ಮಣ್ಣು ಹಾಗೂ ಜೇಡಿ ಮಣ್ಣನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು ಅಡಿಕೆ ಹಾಗೂ ತೆಂಗಿನ ಮರಕ್ಕೆ ಹಚ್ಚುವ ಪದ್ದತಿ ಇದೆ. ಇದು ಜೀವ ಚೈತನ್ಯ ಪದ್ದತಿಯಲ್ಲಿಯೂ ಟ್ರೀ ಪೇಸ್ಟ್ ಎಂಬ ಹೆಸರಿನಲ್ಲಿ ಇದೆ. ಇದರಿಂದಾಗಿ ಮರದ ಆಯುಷ್ಯ ವೃದ್ಧಿಯಾಗುತ್ತದೆ. ಭೂಮಿ ಹುಣ್ಣಿಮೆ ದಿನ ಅನ್ನ ಹಾಗೂ ಹಲವಾರು ಸೊಪ್ಪುಗಳ ಪಲ್ಯವನ್ನು ಭೂಮಿಗೆ ಅಚ್ಚುವ ಪದ್ದತಿ ಇದೆ. ಇದರಿಂದ ಕೃಷಿ ಭೂಮಿಯಲ್ಲಿ ಅನುಕೂಲಕರ ಸೂಕ್ಷ್ಮಾಣು ಜೀವಿಗಳ ಬೆಳೆವಣಿಗೆಯಾಗುತ್ತದೆ. ಹೀಗೆ ಕೆಲವು ಪದ್ದತಿಗಳಿಗೆ ಪರಿಪೂರ್ಣ ಅರ್ಥವಿದೆ. ಆದರೆ ಅದನ್ನು ಹೀಗೆ ಹೀಗೆಂದು ಅರ್ಥೈಸಿ ಹೇಳುವವರಿಲ್ಲ. ಹಾಗಾಗಿ ಇಂದಿನ ತಲೆಮಾರಿನವರಿಗೆ ನಮ್ಮ ಸಂಪ್ರದಾಯಗಳು ಗೊಡ್ಡು ಎಂಬ ಅಪಹಾಸ್ಯಕ್ಕೆ ಕಾರಣವಾಗಿಬಿಡುತ್ತದೆ. ನಮ್ಮ ಸಂಧ್ಯಾವಂದನೆಯನ್ನು ತೆಗೆದುಕೊಳ್ಳಿ . ಬಹಳಷ್ಟು ಜನರಲ್ಲಿ ಸಂಧ್ಯಾವಂದನೆ ಎಂಬ ಉಪನಯನದ ನಂತರ ಕ್ರಿಯೆ ಒಂಥರಾ ಯಡವಟ್ಟು ಅನ್ನಿಸಿಕೊಂಡಿದೆ. ಆದರೆ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾದ ಜನರು ರವಿಶಂಕರ್ ಗುರೂಜಿ ಬಳಿ ಹೋಗಿ ತಕತಕ ಕುಣಿದು ಅದೇನೋ ಧ್ಯಾನ ಕಲಿತೆ ಎಂದು ಹತ್ತು ಸಾವಿರ ಪೀಕಿ ಮನೆಗೆ ಬಂದಾಗ ಒಂದು ಕ್ಷಣ ಯೋಚನೆ ಮಾಡಿದರೆ ತಿಳಿಯುತ್ತದೆ, ಅಪ್ಪ ಮಾಡಿದ ಉಪನಯನ ಹಾಗೂ ಸಂಧ್ಯಾವಂದನೆಯ ನಿಜವಾದ ಅರ್ಥ. ಆದರೆ ಅದು ನಮಗೆ ಅರ್ಥವಾಗಲು ನಾವು ದುಡಿದ ಹತ್ತು ಸಾವಿರ ಖಾಲಿಯಾದಾಗಲೇ ತಿಳಿಯುವುದು ಎಂಬುದು ವಿಪರ್ಯಾಸವಾದರೂ ಸತ್ಯ. ಹಾಗೂ ನಮಗೆ ಉಪನಯನ ಮಾಡಿಸಿದ ಪುರೋಹಿತರಿಗೂ ಸಂಧ್ಯಾವಂದನೆಯ ಮಹತ್ವ ತಿಳಿಯದಿರುವುದು ಕಹಿ ಸತ್ಯ. ಪಾಪ ಅವರ ಮನಸ್ಸು ಅಂದಿನ ಹಸಿರು ನೋಟು ಹಾಗೂ ಕೆಂಪು ನೋಟಿನ ಲೆಕ್ಕಾಚಾರದಲ್ಲಿ ಮಗ್ನವಾಗಿರುತ್ತದೆ. ರವಿಶಂಕರ್ ಗುರೂಜಿಯೋ ಬಾಬಾ ರಾಮನೋ ಪೀಟರ್ರೋ ತಮ್ಮ ಹೊಸಬಾಟಲಿಯಲ್ಲಿ ಈ ಹಳೆಯದನ್ನೇ ಕೊಟ್ಟಾಗ ನಾವು ವಾವ್ ಅಂದು ಅವರದೊಂದು ಫೋಟೋ ನಮ್ಮ ಕೋಣೆಯಲ್ಲಿ ತಗುಲಿಹಾಕಿಕೊಂಡುಬಿಡುತ್ತೇವೆ. ಇರಲಿ ಈಗ ಮತ್ತೆ ಭೂಮಿ ಹುಣ್ಣಿಮೆ ಹಬ್ಬಕ್ಕೆ ಬರೋಣ. ಟಿ.ವಿಯಲ್ಲಿ ಜಾಹಿರಾತೊಂದು ಬರುತ್ತದೆ. ಅದು ಹೀಗಿದೆ, ಮರುಭೂಮಿಯಲ್ಲಿ ನೀರಡಿಕೆಯಿಂದ ಒಬ್ಬಾತ ತಲೆತಿರುಗಿ ಬೀಳುತ್ತಾನೆ. ವೃದ್ಧ ದಂಪತಿಗಳು ಆತನಿಗೆ ನೀರು ಕೊಡಲು ಹೋಗುತ್ತಾರೆ ಆವಾಗ ಆತ ಅಂತಹಾ ಪರಿಸ್ಥಿತಿಯಲ್ಲಿಯೂ ಇದು ಪ್ಯೂರಿಫೈಡ್ ನೀರು ತಾನೆ ? ಇಲ್ಲದಿದ್ದರೆ ನನಗೆ ಬೇಡ ಅನ್ನುತ್ತಾನೆ. ಆಮೇಲೆ ಕಂಪನಿಯ ಹೆಸರು ಹೇಳಿ ಅದೇ ನೀರು ಅನ್ನುತ್ತಾನೆ ಆತ ಕುಡಿಯುತ್ತಾನೆ. ಮೊನ್ನೆ ನನ್ನ ಮಗ ಮತ್ತು ಅವನ ಟೀಂ ಭೂಮಿ ಹುಣ್ಣಿಮೆ ದಿನ ತೋಟದಲ್ಲಿ ಬಾಳೆ ಎಲೆ ಹಾಕಿಕೊಂಡು ಕಡುಬು ಬಾರಿಸಿದರು. ತೋಟದಲ್ಲಿ ಜಾಗ ಹೇಗಿರುತ್ತದೆ ಎಂದು ನಿಮಗೆ ಮತ್ತೆ ಹೇಳಬೇಕಾಗಿಲ್ಲ. ಅಲ್ಲೇ ಹರಿಯುತ್ತಿದ್ದ ನೀರಿನಲ್ಲಿ ಕೈತೊಳೆದರು ಮತ್ತು ಕೊನೆಯಲ್ಲಿ ಬೊಗಸೆ ನೀರು ಕುಡಿದರು. ಮತ್ತು ಸಂತೋಷವಾಗಿ ಮತ್ತೊಂದು ತೋಟಕ್ಕೆ ಕಡುಬು ಬಾರಿಸಲು ಹೋದರು. ಆ ಹುಡುಗರು ಇವತ್ತೂ ಆರಾಮವಾಗಿದ್ದಾರೆ. ಅದೇ ಜಾಹಿರಾತಿನ ಅಮ್ಮನಾಗಿದ್ದರೆ ಅಯ್ಯೋ ... ಎಂದು ರಾಗ ಎಳೆಯಬೇಕಾಗಿತ್ತು. ಶುದ್ದ ನೀರನ್ನು ಅಭ್ಯಾಸ ಮಾಡಿ ನಮ್ಮ ದೇಹವನ್ನು ಸೂಕ್ಷ್ಮ ಮಾಡಿಸುವುದಕ್ಕಿಂತಲೂ ಅಶುದ್ದ (!) ನೀರನ್ನು ದಕ್ಕಿಸಿಕೊಳ್ಳುವುದನ್ನು ನಮ್ಮ ದೇಹಕ್ಕೆ ಕಲಿಸಬೇಕು. ತೋಟದಂತಹ ಜಾಗದಲ್ಲಿ ಊಟ ಮಾಡುವುದರಿಂದ ನಮ್ಮ ದೇಹ ಏನನ್ನಾದರೂ ಜೀರ್ಣಿಸಿಕೊಳ್ಳುವುದನ್ನು ಕಲಿಯುತ್ತದೆ. ಹೀಗಿದೆ ನೋಡಿ ವಿಚಾರಗಳು ಹೌದಾದರೆ ಹೌದೆನ್ನಿ ದಯಮಾಡಿ ಅಲ್ಲವಾದರೂ ಹೌದೆನ್ನಿ.
ಕೊನೆಯದಾಗಿ: ನಾವು ಆಚರಿಸುವ ಪ್ರತೀ ಹಬ್ಬಕ್ಕೂ ಹಾಗೂ ಎಲ್ಲ ಶಾಸ್ತ್ರ ಸಂಪ್ರದಾಯಗಳಿಗೂ ವೈಜ್ಞಾನಿಕ ಅರ್ಥವಿದೆಯಾ ? ಎಂದು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ." ಒಂದಿಷ್ಟಕ್ಕೆ ಅರ್ಥವಿದೆ ಮಿಕ್ಕವುಗಳಿಗೆ ಇಂದು ಅರ್ಥೈಸಲಾಗುತ್ತಿದೆ." ಎಂಬ ಉತ್ತರ ನೀಡಿದರು. ತಲೆಯಮೇಲೆ ಹೊಡೆದಂತಹ ಸತ್ಯದ ಮಾತಿಗೆ ಖುಷಿಯಾದೆ
ಟಿಪ್ಸ್: ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಂತಿಯಾಗುತ್ತದೆಯೇ? ಹಾಗಾದರೆ ಇನ್ನು ಚಿಂತೆ ಬಿಡಿ ನೆಲ್ಲಿಕಾಯಿಯ ಸೆಟ್ ಜತೆಯಲ್ಲಿ ಇಟ್ಟುಕೊಂಡು ಪ್ರಯಾಣಿಸಿ. ಅದು ಜತೆಯಲ್ಲಿ ಇಲ್ಲವೇ ಹಾಗಾದರೆ ಓದಲು ಕೊಂಡಿದ್ದ ದಿನ ಪತ್ರಿಕೆಯನ್ನು ಆಘ್ರಾಣಿಸಿ . ವಾಂತಿ ಆಗುವುದೇ ಇಲ್ಲ. ಅಂತ ವಾಂತೇಶ್ವರಿಯೊಬ್ಬರು ಹೇಳಿದ್ದರು, ಪ್ರಯೋಗಿಸಿ ಉತ್ತರ ತಿಳಿಸಿ. ನನಗೆ ಅನುಭವ ಇಲ್ಲ.
ಟಿಪ್ಸ್ ಓದಲು ಕಾಣಿಸದು ಎಂದರೆ ಸೆಲೆಕ್ಟ್ ಮಾಡಿ ಆವಾಗ ಕಾಣಿಸುತ್ತದೆ.

4 comments:

ಯಜ್ಞೇಶ್ (yajnesh) said...

ನಮ್ಮ ಶಾಸ್ಥ್ರ ಅಥವ ನಮ್ಮ ಸಂಪ್ರದಾಯಗಳಲ್ಲಿ ಹೆಚ್ಚಿನವು ವೈeÁÕನಿಕವಾಗಿ ಕೂಡಿದ್ದು ಈಗ ಅದರ ಮಹತ್ವವೇನು ಎಂಬುದು ಯಾರಿಗೂ ತಿಳಿಯದೇ ಅದು ಕೇವಲ ಮೂಡನಂಬಿಕೆ ಎನ್ನುವ ಹಾಗಾಗಿದೆ. ನಮ್ಮ ಪೂರ್ವಜರು ಅದರ ಅರ್ಥ ಅಥವಾ ಮಹತ್ವವನ್ನು ತಿಳಿಸಿಕೊಡಲಿಲ್ಲ. ನಾವೂ ತಿಳಿದುಕೊಳ್ಳಲಿಲ್ಲ. ಈಗ ಇತಿಹಾಸ ಮರುಕಳಿಸುತ್ತಿದೆ ಅನ್ನಿಸುತ್ತಿದೆ. ಎಷ್ಟೋ ವರ್ಷಗಳಿಂದ ಮೂಲೆಗುಂಪಾಗಿದ್ದ ಆಯುರ್ವೇದ, ಧ್ಯಾನ ಮುಂತಾದವುಗಳು ಈಗ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. ನಮ್ಮಲ್ಲಿ ಈಗ ವಿಭೂತಿ ಹಚ್ಚಿಕೊಂಡರೆ ಹೆಚ್ಚಿನವರು ಇವನು ಆಸ್ಥಿಕ ಅನ್ನುತ್ತಾರೆಯೇ ವಿನಹಃ ವಿಭೂತಿಯಿಂದ ಏನು ಪ್ರಯೋಜನವಿದೆ ಅಂತ ಯೋಚಿಸಲು ಹೋಗುವುದಿಲ್ಲ. ವಿಭೂತಿ ಹಚ್ಚಿಕೊಂಡರೆ ದೇಹಕ್ಕೆ ಕ್ರಿಮಿ ಕೀಟಗಳ ಬಾದೆ ಕಡಿಮೆಯಾಗುತ್ತದೆ ಎನ್ನುತ್ತದ ಈಗಿನ ವಿeÁÕನ. ಇದನ್ನು ಎಷ್ಟೋ ಶಮಾನಗಳ ಹಿಂದೆ ಋಷಿ ಮುನಿಗಳು ಹೇಳಿದ್ದರು. ಕ್ರಮೇಣ ಒಬ್ಬರಿಂದ ಒಬ್ಬರಿಗೆ ಹರುಡುವಾಗ ಕೈ, ಕಾಲ ಮಸಾಲೆಗಳು ಸೇರಿ ಮೂಲಾರ್ಥವೇನು ಎನ್ನುವುದು ಜನರಿಗೆ ಗೊತ್ತೇ ಇಲ್ಲ ಅನ್ನುವ ಹಾಗಿದೆ.

ಲೇಖನ ಸುಂದರವಾಗಿ ಮೂಡಿಬಂದಿದೆ.

ವಿನಾಯಕ ಕೆ.ಎಸ್ said...

sharmare
neevu namma hotte urisuvanta lekhanagallanne bareetha idre nimma mele sooktha krama kaigolalaaguvudu! nice article...
vinayaka kodsara

shreeshum said...

yajnesh

yes thanks

vinayaka

Ha Ha Ha idappa comment mado shaili. nimma kathe odi nanagu hage ansittala allige equal. ok

Krupesh said...

bhoomi hunnime varnane & photo nodi kadubu, elegadubu, totada oota ella nenapathu :)

kelvau acharagalige rekke baala seri, moola uddesha bittu hogirutte, aaddarinda ellavannu prashnisuvudu sariyaadadde. samanjasa uttara siguvudu kasta. habbada sambrama, sadagara & ellaroo ondede seruva prakriye ideyalla, that itself is a good justfication I think