Friday, November 7, 2008

ತುಂಬೆ ಇಳಕಲ ಬಿಳಿ ದೆವ್ವ.


ಅಮಾವಾಸೆಯಾದ್ದರಿಂದ ಎಲ್ಲೆಲ್ಲೂ ಗಾಢಾಂಧಕಾರ. ಬೆಳಕಿನ ಹುಡುಕಾಟಕ್ಕೆ ನಕ್ಷತ್ರಗಳನ್ನಾದರೂ ಅವಲಂಬಿಸೋಣ ಎಂದರೆ ಮೋಡಗಳು ಅವನ್ನು ಮರೆಮಾಚಿದ್ದವು. ಸಾಗರದಿಂದ ಕನಿಷ್ಟ ೧೨ ಕಿಲೋಮೀಟರ್ ದೂರದ ಮನೆಗೆ ಹೋಗಲು ಬಸ್ಸೂ ಇರಲಿಲ್ಲ. ಇನ್ನೇನು ಮಾಡುವುದು ಲಟಾರಿ ಸೈಕಲ್ಲೇ ಗತಿ ಎಂದು ಅನಿವಾರ್ಯವಾಗಿ ಮನೆಯತ್ತ ಪೆಡಲ್ ತುಳಿಯತೊಡಗಿದೆ. ವರದಳ್ಳಿ ಕ್ರಾಸ್ ವರೆಗೆ ಜೋಗಕ್ಕೆ ಹೋಗುವ ವಾಹನಗಳ ಬೆಳಕು ಸಿಕ್ಕಿತು. ನಂತರ ಕರ್ಕಿಕೊಪ್ಪದ ಕಡೆ ತಿರುಗಿದಾಗ ಬೆಳಕಿಲ್ಲದೆ ಕಂಗಾಲಾದೆ. ಡೈನಮೋ ದುರಸ್ತಿ ಮಾಡಲು ಹೆಣಗಿದೆ. ಬಡಪೆಟ್ಟಿಗೆ ಅದು ಬಗ್ಗಲಿಲ್ಲ ಗರಗರ ಸದ್ದು ಬಂತೇ ಹೊರತು ಬೆಳಕು ಬರಲಿಲ್ಲ. ಬೆಳಕು ಇಲ್ಲದ ಸೈಕಲ್ ತುಳಿಯುವುದೊಂದೇ ಅನಿವಾರ್ಯ.ಕಣ್ಣು ನಿಧಾನ ಕತ್ತಲೆಗೆ ಹೊಂದಿಕೊಂಡಿತು. ತುಳಿಯುತ್ತಾ ಸಾಗಿದೆ. ಕರ್ಕಿಕೊಪ್ಪ ದಾಟಿದ ಮೇಲೆ ಬೆಂಕಟವಳ್ಳಿತನಕ ಘಟ್ಟದ ರಸ್ತೆ ನಂತರ ಭರ್ಜರಿ ಇಳಿಜಾರು. ಘಟ್ಟದಲ್ಲಿ ಸೈಕಲ್ ತುಳಿಯಲಾರದೆ ದಬ್ಬಿಕೊಂಡು ಹೊರಟೆ. ಸೈಕಲ್ ಘಟ್ಟದಲ್ಲಿ ದಬ್ಬಿ ದಬ್ಬಿ ಬೆವರು ಗುದುಕುತ್ತಿತ್ತು . ಅಂತೂ ಇಂತೂ ಸುರಿವ ಬೆವರಿನೊಡನೆ ಘಟ್ಟದ ರಸ್ತೆ ಮುಗಿಯಿತು. ಇಳಿಜಾರು ಪ್ರಾರಂಭವಾದ್ದರಿಂದ ಸ್ವಲ್ಪ ಹಿತ . ಪೆಡಲ್ ಮಾಡದೆ ೨ ಕಿಲೋಮೀಟರ್ ಸಾಗಬಹುದು ಎಂದು ಆಲೋಚಿಸುತ್ತಾ ಸೈಕಲ್ ಹತ್ತಿ ಕುಳಿತು ಒಂದೆರಡು ಮಾರು ದೂರ ಸಾಗಿದ್ದೆ. ಇದ್ದಕ್ಕಿದ್ದಂತೆ ಪಳಕ್ಕನೆ ಸೈಕಲ್ ಡೈನಮೋ ಹತ್ತಿಕೊಂಡಿತು. ಅನಿರೀಕ್ಷಿತವಾದ ಆಘಾತಕ್ಕೆ ಬೆಚ್ಚಿದೆ. ನಂತರ ತುಸು ಸಾವಾರಿಸಿಕೊಂಡು ತನ್ನಿಂದತಾನೆ ಹತ್ತಿರಬೇಕೆಂದು ಆಲೋಚಿಸುತ್ತಾ ಮುಂದೆ ಸಾಗಿದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದಿನ ಸೀಟಿನಲ್ಲಿ ಯಾರೋ ಕುಳಿತುಕೊಂಡ ಅನುಭವಾಯಿತು. ನನ್ನ ಸೊಂಟದ ಬಳಿ ಬಿಳಿಯದಾದ ಎರಡು ಉದ್ದನೆಯ ಕೈಗಳು ನೇತಾಡುತ್ತಿದ್ದವು. ಒಮ್ಮೆಲೆ ಮೈ ಮರಗಟ್ಟಿದ ಅನುಭವವಾಯಿತು. ಈಗ ನನಗೆ ಸೈಕಲ್ ಡೈನಾಮೋ ತನ್ನಿಂದ ತಾನೆ ಹತ್ತಿಕೊಂಡದ್ದರ ರಹಸ್ಯ ತಿಳಿಯಿತು. ಘಟ್ಟದ ರಸ್ತೆಯಲ್ಲಿ ಸೈಕಲ್ ದಬ್ಬುವಾಗಲೂ ಅಷ್ಟೊಂದು ಬೆವರು ಗುದುಕಿರಲಿಲ್ಲ. ಅಂಗಿ ಚೊಣ್ಣ ಎಲ್ಲೂ ಎಲ್ಲೆಲ್ಲೂ ನೀರು ದುಮ್ಮಿಕ್ಕುತ್ತಿದೆ. ಯಾವ ರಗಳೆಯೂ ಬೇಡ ಸೈಕಲ್ ನಿಲ್ಲಿಸಿ ಬಿದ್ದು ಓಡಿಬಿಡೋಣ ಎಂದು ಬ್ರೆಕ್ ಹಾಕಿದೆ. ಇಲ್ಲ ಬ್ರೇಕ್ ಎಷ್ಟು ಗಟ್ಟಿಯಾಗಿ ಅಮುಕಿದರೂ ಅದು ಕೆಲಸ ಮಾಡುತ್ತಿಲ್ಲ. ಕಾಲನ್ನಾದರೂ ನೆಲಕ್ಕೆ ಊರೊಣ ಎಂದರೆ ಕಾಲು ಸೈಕಲ್ ಪೆಡಲ್ಲಿಗೆ ಅಂಟಿಕೊಂಡಿದೆ. ಇಷ್ಟಾದ ಮೇಲೆ ನನಗೆ ಮನವರಿಕೆಯಾಯಿತು ಇಷ್ಟು ದಿವಸ ನಾನು ಚೌಡಿ ಭೂತ ದೆವ್ವ ಎನ್ನುವುದೆಲ್ಲಾ ಬೋಗಸ್ ಎನ್ನುತ್ತಿದ್ದೆ. ಆದರೆ ಇಂದು ಸ್ವಯಂ ನನಗೆ ಅನುಭೂತಿಯಾಗುತ್ತಿದೆ. ಮಾಡುವುದೇನು? ಎಂದು ತೋಚುತ್ತಿಲ್ಲ. ಒಂದೇಸವನೆ ಗಾಯಿತ್ರಿ ಮಂತ್ರ ಹೇಳಲೆತ್ನಿಸಿದೆ. ಆದರೆ ಅರ್ದದ ವರೆಗೆ ಗಾಯಿತ್ರಿ ಮಂತ್ರ ಬಂತು ಮುಂದೆ ನೆನಪಾಗುತ್ತಿಲ್ಲ. ಇಲ್ಲ ಇವೆಲ್ಲ ಸತ್ಯ ಅಲ್ಲ ನಾನು ಭ್ರಮೆಗೊಳಗಾಗಿದ್ದೇನೆ ಎಂದು ಹೊರಮನಸ್ಸಿಗೆ ಧೈರ್ಯ ತುಂಬಿಸಲೆತ್ನಿಸಿದೆ. ಅಷ್ಟರಲ್ಲಿ ನನ್ನ ಕಿರುಗಣ್ಣಿಗೆ ಕಾಣುತ್ತಿದ್ದ ಬಿಳಿಯ ಕೈಗಳದ್ದೇ ಇರಬೇಕು ಧ್ವನಿ ಹೊರಟಿತು. "ಹ ಹ ಹ ಮೂರ್ಖ ನಿನ್ನ ಪ್ರಯತ್ನ ಬಿಡು, ". ಈಗ ಮಾತ್ರ ಇವ್ಯಾವುದೂ ನನ್ನ ಭ್ರಮೆಯಲ್ಲ ಎಂಬುದು ಅರಿವಿಗೆ ಬಂತು. ತಿರುಗಿ ನನ್ನ ಹಿಂದೆ ಕುಳಿತಿರುವುದು ಏನು ಎಂದು ನೋಡಿಬಿಡೋಣ, ಎಂಬ ಭಯಮಿಶ್ರಿತ ಕುತೂಹಲದಿಂದ ತಿರುಗಲೆತ್ನಿಸಿದೆ ಆದರೆ ಕುತ್ತಿಗೆ ತಿರುಗುತ್ತಿಲ್ಲ. ಯಾರೋ ಹಿಂದಿನಿಂದ ಕುತ್ತಿಗೆ ಒತ್ತಿ ಹಿಡಿದಂತೆ ಆಯಿತು. ಜತೆಗೆ ಹಿಂದಿನ ದನಿ ಹೇಳಿತು " ಮೂರ್ಖ ತಿರುಗಿ ನನ್ನನ್ನೇನು ನೋಡುತ್ತೀ... ಮುಂದೆ ನೋಡು ಅಲ್ಲೇನಿದೆ ಅಂತ" ಎಂದಿತು. ನನ್ನ ಸೈಕಲ್ಲಿನ ಅನತಿ ದೂರದಲ್ಲಿ ಕಾಲೇ ಇಲ್ಲದ ವಿಕಾರ ಮುಖದ ಆಕೃತಿ ಸೈಕಲ್ ಜತೆಜತೆಗೆ ತೇಲುತ್ತಾ ಬರತೊಡಗಿತು. ಅಮ್ಮಾ ಇದ್ಯಾವ ಮಾಯೆ. ದೆವ್ವ ಅಂಬೋದು ಮನುಷ್ಯ ಸೃಷ್ಟಿ ಎಂದು ನಾಸ್ತಿಕ ವಾದ ಮಾಡಿ ಎಲ್ಲರನ್ನೂ ಸೋಲಿಸುತ್ತಿದ್ದ ನನಗೆ ಇಂಥಹಾ ಅನುಭವ ವಾಯಿತಲ್ಲ. ಏನು ಮಾಡಲಿ ಈಗ ಒಟ್ಟಿನಲ್ಲಿ ಇನ್ನು ನಾನು ಬದುಕಲಾರೆ ಎನ್ನುವ ಹಂತ ತಲುಪಿದೆ. ಅಂತಿಮವಾಗಿ ಶ್ರೀಧರ ಸ್ವಾಮಿಗಳು ನೆನಪಾದರು. "ಶ್ರೀಧರ ಸ್ವಾಮಿ ಕಾಪಾಡು ತಂದೆ" ಎಂದು ಕಿರುಚಿಕೊಂಡೆ. ಮರುಕ್ಷಣ ಎಲ್ಲಾ ಮಾಯವಾಯಿತು. ನಾನು ನನ್ನ ಬಡಕಲು ಸೈಕಲ್ ನಲ್ಲಿ ಘಟ್ಟದ ರಸ್ತೆಯ ಆರಂಭದಲ್ಲಿ ಇದ್ದೆ. ಇಷ್ಟೊತ್ತು ಕಂಡಿದ್ದು ಭ್ರಮೆ ಎನ್ನುವಷ್ಟರಮಟ್ಟಿಗೆ ಎಲ್ಲ ತಿಳಿಯಾಗಿತ್ತು. ಶ್ರೀಧರ ಸ್ವಾಮಿಗಳ ಮಹಿಮೆ ನೆನೆದು ಪುಳಕಿತನಾದೆ. ಎಲ್ಲರೀಗೂ ಈ ಸತ್ಯದ ಘಟನೆ ಹೇಳಬೇಕೆಂದುಕೊಂಡು ಸುಲಲಿತವಾಗಿ ಮನೆ ಸೇರಿದೆ.
ಇದೊಂದು ಘಟನೆ ನಡೆದು ಸುಮಾರು ನಲವತ್ತು ವರ್ಷಗಳು ಸಂದಿವೆ. ಈಗ ವಾಸ್ತವದ ಕತೆ ಹೇಳುತ್ತೇನೆ. ಮೇಲೆ ನಿಮಗೆ ವಿವರಿಸಿದ ಅನುಭವ ನನ್ನದಲ್ಲ. ನನ್ನ ಬಾಲ್ಯದಲ್ಲಿ ಸುಬ್ಬಣ್ಣ ಎಂಬ ನನಗೆ ವಾರಿಗೆಯಲ್ಲಿ ಅಣ್ಣನಾದವನ ಕಥೆ ಇದು. ನಮ್ಮನ್ನೆಲ್ಲಾ ಸುತ್ತು ಕೂರಿಸಿಕೊಂಡು ಇಂತಹ ಹಸಿ ಹಸಿ ಸುಳ್ಳಿನ ಕತೆಗಳನ್ನು ತೇಲಿಬಿಡುತ್ತಿದ್ದ. ನಮಗೆಲ್ಲಾ ಅವನು ಕಥೆ ವಿವರಿಸುವ ಪರಿಯಿಂದ ಮೈಮೇಲೆ ಮುಳ್ಳುಗಳು ಏಳುತ್ತಿದ್ದವು. ಅವನು ಇವನ್ನೆಲ್ಲಾ ಗೆದ್ದ ವೀರನಂತೆ ತೋರುತ್ತಿದ್ದ. ಹಾಗಾಗಿ ಮನಸ್ಸಿನ ಮೂಲೆಯಲ್ಲಿ ಈ ದೆವ್ವ ಭೂತಗಳು ಅಚ್ಚೊತ್ತಿ ಕುಳಿತು ಬಿಟ್ಟಿದೆ. ಅವೆಲ್ಲಾ ಪರಮ ಸುಳ್ಳು ಎಂದು ತಿಳಿದ್ದಿದ್ದರೂ ಹುಲ್ಕೋಡಿಗೆ ಹೋಗುವಾಗ ಕರ್ಕಿಕೊಪ್ಪ ದಾಟಿದಮೇಲೆ ತುಂಬೆ ಇಳಕಲು ಇಳಿಯುವಾಗ ಸುಬಣ್ಣನ ಕಥೆಗಳು ನೆನಪಾಗುತ್ತವೆ. ಅಕಸ್ಮಾತ್ ರಾತ್ರಿಯಾಗಿದ್ದರೆ ಒಂದು ಕ್ಷಣ ಮೈಮೇಲೆ ಮುಳ್ಳುಗಳೆದ್ದು ಮಾಯವಾಗುತ್ತದೆ. ಸುಬ್ಬಣ್ಣ ಹೀರೋ ಆಗಲು ಹೋಗಿ ಇಂತಹ ಓಳಿನ ಕಥೆಗಳು ಬಾಲ್ಯದಲ್ಲಿ ಸ್ವಲ್ಪ ಯಡವಟ್ಟು ನಂಬಿಕೆಗಳು ಉಳಿದಿವೆ. ಆದರೆ ನಾನಂತೂ ಸಣ್ಣ ಹುಡುಗರಿಗೆ ಇಂತಹ ಕಥೆಗಳನ್ನು ಹೇಳುವುದಿಲ್ಲ. ನೀವೂ ಹಾಗೆಯೇ ಅಂತ ಅಂದುಕೊಂಡಿದ್ದೇನೆ. ಅವು ತುಂಬಾ ತುಂಬಾ ದುಷ್ಪರಿಣಾಮ ಮಾಡಿಬಿಡುತ್ತವೆ. ಏನಂತೀರಿ.?
ಕೊನೆಯದಾಗಿ: ಭೂತ ದೆವ್ವ ವೆಂಬುದು ಭ್ರಮೆಯೋ ..ವಾಸ್ತವವೋ ..? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು ಭೂತವೆಂಬುದು ವಾಸ್ತವ ದೆವ್ವವೆಂಬುದು ಭ್ರಮೆ ಎಂದುತ್ತರಿಸದರು, ನಾನು ಬೂತವನ್ನು ಹೊಡೆದು ಪ್ರಶ್ನೆ ಕೇಳಿದ್ದರಿಂದ ಅಂತಹ ಉತ್ತರ ಬಂತು. ಮತ್ತೆ ಮರುಪ್ರಶ್ನಿಸಲಿಲ್ಲ.
ಟಿಪ್ಸ್: ಹುಳುಕು ಹಲ್ಲಿನ ಕಾಟ ತಪ್ಪಿಸಿಕೊಳ್ಳಲು ಎಲೆ ಅಡಿಕೆ ಜತೆ ತಂಬಾಕನ್ನು ಅಗಿಯಿರಿ. ಇದರಿಂದಾಗಿ ತಂಬಾಕು ಹಾಕುವುದಕ್ಕೆ ಕಾರಣ ಸಿಗುವುದು ಸುಲಭವಾಗುತ್ತದೆ
ಅಂತಿಮವಾಗಿ : ಸುಶ್ರುತ ದೊಡ್ಡೇರಿಯವರು ಬರೆದ ಸಂಪಿಗೆ ಮರದ ಬರಹವನ್ನು ಇದು ಹೋಲುತ್ತದೆ ಎಂಬ ಕಾಮೆಂಟ್ ಮಾಡಿದ್ದಾರೆ. ಹೋಲುವುದು ನಿಜ. ಅದನ್ನು ಅಂದು ಓದಿದ ನಾನು ಇದನ್ನು ಬರೆಯಬೇಕೆಂದು ಅಂದೇ ತೀರ್ಮಾನಿಸಿದ್ದೆ. ಆದರೆ ಇಂದು ತದ್ಗತ್ ಆಯಿತು.

7 comments:

ಸುಶ್ರುತ ದೊಡ್ಡೇರಿ said...
This comment has been removed by the author.
ಸುಶ್ರುತ ದೊಡ್ಡೇರಿ said...

ನಾನು ಈಗ ಎರಡು ತಿಂಗಳ ಹಿಂದೆ ಬರೆದ ಪ್ರಬಂಧವೊಂದು ಇದಕ್ಕೆ ಪೂರಕವಾಗಿರುವಂತಿದೆ:

ಲಿಂಕು

shreeshum said...

ಹೌದು. ನಿಮ್ಮ ಸಂಪಿಗೆ ಮರದ ಕಥೆ ಓದಿದವನು ಅವತ್ತೇ ಬರೆಯಬೇಕೆಂದು ತೀರ್ಮಾನಿಸಿದ್ದೆ.
ಸುಭ್ಭಣ್ಣ ನ ಇಂತಹ ಕಥೆಗಳು ಹತ್ತಾರು ಇವೆ.
ನೀವು ಬರೆದ ಮೊದಲ ಕಾಮೆಂಟ್ ಅದೇಗೋ ಅಳಿಸಿ ಹೋಗಿದೆಯಪ್ಪಾ.

ಒಂಥರಾ ಕೃತಿ ಚೌರ್ಯ ಅಂತೀರಾ..? ಇರಲಿ ಬಿಡಿ
ತ್ಯಾಂಕ್ಸ್

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

RAAGUMAAVA
KATE TUMBA SWAARASYAVAAGIDE.
EE KATE YANNA OODUVAAGA ADEEKOO MANASSU 15 VARSHADA HINDINA NIMMA RAMBOO,
(RAJDOOTH BYKE),NEEVU HELUTTIDDA KATEGALU, BELLENNE TERU NIMMA MANEYALLIDDA HOSA HOSA UPAKARANA GALU, ELLA NENAPAAGUTTAVE.ondu sandarba naa devva boota galinda tumba hedaridde aaga neevu nanage boota ennuvudu bari brame endu manavarike maadi kottiddeeri nenapideye?

ಸಿಮೆಂಟು ಮರಳಿನ ಮಧ್ಯೆ said...

ತುಂಬಾ ಮಜವಾಗಿದೆ. ಬಾಲ್ಯದ ದಿನಗಳಲ್ಲಿ ಅಂತಹ ಕತೆಗಳು ರೋಚಕವಾಗಿರುತ್ತದೆ. ಜಗಜಿತ್ ಸಿಂಗ್ ರ ಗಜ಼ಲ್ ನೆನಪಾಗುತ್ತದೆ. "ಒ ಕಾಗಜ್ ಕಿ ಕಶ್ತಿ.. ಬಾರಿಶ್ ಕಾ ಪಾನಿ..."
ಅದರ ಚರಣವೊಂದರಲ್ಲಿ ಹೀಗಿದೆ.. ಅಜ್ಜಿ ಕಥೆ ಕೇಳುತ್ತ ಮಕ್ಕಳಿಗೆ "ಚೋಟಿಸಿ ರಾತೆ.. ಲಂಬಿಸಿ ಕಹಾನಿ..!!" ಧನ್ಯವಾದಗಳು

ವಿಕಾಸ್ ಹೆಗಡೆ said...

TIPS fantastic :)

ಮನಸ್ವಿ said...

ರಾಘಣ್ಣ ಕಥೆ ಮಾತ್ರ ಸೂಪರ್ ಆಗಿ ಬರದ್ದೆ,ಅರೆ ನಿಂಗೆ ಯಾವಾಗಿಂದ ಭಕ್ತಿ ಬಂತಪಾ???!! ಬೇರೆ ಏನೋ ಬರದಿಕ್ಕು ಮುಂದೆ ಅಂತ ಯೋಚನೆ ಮಾಡಿದಿ, ನೀಲಿ ಲೈನ್ ಓದದ್ರೊಳಗೆ..! , ಆದ್ರೂ ದ್ವನಿ ಹೆಣ್ಣಿನದಾ, ಗಂಡಿನದಾ ಹೇಳಲೇ ಇಲ್ಲ!,
ಟಿಪ್ಸ್ ಚನ್ನಾಗಿದೆ, ಫಾಯssssರ್ ಗುಟುಕಾ ತಿಂದರು ಹಲ್ಲು ಹುಳುಕು ಹಲ್ಲಿನ ಕಾಟ ತಪ್ಪಿಸ ಬಹುದಂತೆ ಹೌದೆ,
ನಮ್ಮನೆಲಿ ಅಪ್ಪ ಯಾವಗಲು ಹೇಳ್ತಾ ಇರ್ತ, ಡಾಕ್ಟರ್ ಹೇಳಿದ್ದ ಸೊಪ್ಪು ತಿನ್ನಕ್ಕು ಅಂತ, ಅದಕ್ಕೆ ಹೊಗೆ ಸೊಪ್ಪು ತಿಂತಿ ಅಂತ :)