Thursday, November 20, 2008

ಹಳ್ಳಿಯಿಂದ ದಿಲ್ಲಿಯೋ ದಿಲ್ಲಿಯಿಂದ ಹಳ್ಳಿಯೋ...ಮಧ್ಯಮ ವರ್ಗದವರು ಹೆಚ್ಚಿರುವ ಹಳ್ಳಿಗಳು ತುಂಬಾ ಚೆಂದ. ಅತ್ತ ಶ್ರೀಮಂತರೂ ಇಲ್ಲದ ಇತ್ತ ಕೂಳಿಗೆ ಗತಿ ಇರದ ಬಡವರೂ ಅಲ್ಲದ ಜನರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಅವರ ಗುರಿ ಹೆಚ್ಚಿನ ಪಾಲು ದೇವಸ್ಥಾನ ದೇವರು ಜ್ಯೋತಿಷ್ಯ ಜ್ಯೋತಿಶಿ, ಮತ್ತು ಪ್ರಸ್ತುತ ರಾಜಕೀಯ ಹೀಗೆ ಸುತ್ತಿತ್ತಿರುತ್ತದೆ. ಹಾ ಸ್ವಲ್ಪ ಗುಟ್ಟಾಗಿ ಹೇಳುತ್ತೀನಿ ಇದು ನಿಮ್ಮಲ್ಲಿಯೇ ಇರಲಿ ಸಂಜೆ ಹೊತ್ತು ಕದ್ದು ಬೇಲಿ ಹಾರುವುದು ಹಾಗೂ ಒಂದೇ ಒಂದು ಕ್ವಾಟರ್ ಗಟಗಟನೆ ಅಡಗಿ ಕುಡಿಯುವುದು ಕೆಲವರ ಚಾಳಿ. ನಾನು ನಮ್ಮನೆ ಇರುವುದು ಇಂತಹ ಹಳ್ಳಿಯಲ್ಲಿಯೇ. ಇದರ ಸಂಪೂರ್ಣ ಮಜವನ್ನು ನಾನು ಅನುಭವಿಸುತ್ತೇನೆ. ಸಾಮಾನ್ಯವಾಗಿ ಊರಲ್ಲಿ ಎರಡು ಪಾರ್ಟಿಗಳಿರುತ್ತವೆ. ಪಾರ್ಟಿಗಳಿವೆ ಎಂದಾಕ್ಷಣ ಎಂತದೋ ಒಂದು ಸಿದ್ದಾಂತದ ಮೇಲೆ ಅವು ನಿಂತಿವೆ ಎಂದು ಅಂದಾಜಿಸಬೇಡಿ ಒಟ್ಟು ಒಂದಿಷ್ಟು ಸುದ್ದಿ ರಗಳೆಯ ತತ್ವದ ಮೇಲೆ ಎರಡು ಪಾರ್ಟಿ. ಅದರ ಸದಸ್ಯರುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತಾರೆ. ಹಾಗೆಯೇ ಒಂದು ನಾಲ್ಕೈದು ಜನ ನಾರದನ ಕೆಲಸಮಾಡುವವರು. ಅವರು ಯಾವ ಪಾರ್ಟಿಯ ಜತೆಯೂ ಗುರುತಿಸಿಕೊಳ್ಳುವುದಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಇಲ್ಲಿಗೆ ಸುದ್ದಿವಾಚಕ ಕೆಲಸ ಅವರಿಗೆ. ಸಾಮಾನ್ಯವಾಗಿ ಇಂತಹ ಹಳ್ಳಿಗಳಲ್ಲಿ ಎರಡು ಪಾರ್ಟಿಗಳಾಗಲು ಮುಖ್ಯ ಕೇಂದ್ರ ಸ್ಥಾನ ಆಯಾ ಊರಿನ ದೇವಸ್ಥಾನ. ಅಲ್ಲಿ ಒಂದು ಕ್ಯಾತೆ ತೆಗೆದು ಪಕ್ಕಾ ಎರಡು ಬಣಗಳಾಗಿಬಿಡುತ್ತವೆ.. ಈಗ ಹತ್ತು ವರ್ಷದಿಂದೀಚೆ ಮಠ ಪರಿಷತ್ತು ಎಂದು ಹೊಸ ಸೇರ್ಪಡೆಯಾದ್ದರಿಂದ ಅದು ಇನ್ನಷ್ಟು ಅನುಕೂಲವಾಗುತ್ತದೆ. ಸಾರ್ವಜನಿಕ ಕೆಲಸದ ಸಮಯದಲ್ಲಂತೂ ಅವನ್ಯಾಕೆ ಬರಲಿಲ್ಲ ಇವನ್ಯಾಕೆ ಬರಲಿಲ್ಲ? ಹೀಗೆ ಅಲ್ಲಿ ಬಾರದಿದ್ದವರ ಬಗ್ಗೆ ಚರ್ಚೆ ಕುಚರ್ಚೆಗಳು ನಡೆಯುತ್ತವೆ. ಮಜ ತೆಗೆದುಕೊಳ್ಳಲು ನೀವು ನಿಂತಿರಾದರೆ ಬರಾಪ್ಪೂರ್ ವಿಷಯ.ಇಂತಹ ವಾತಾವರಣದಲ್ಲಿ ಬದುಕು ಕಳೆಯುತ್ತಿರುವ ನೂರಕ್ಕೆ ತೊಂಬತ್ತು ಜನ ತಮ್ಮ ಜೀವನದ ಬಗ್ಗೆ ತಮ್ಮ ಊರಿನ ರಸ್ತೆಯೆ ಬಗ್ಗೆ ತಮ್ಮ ಊರಿನ ಶಾಲೆಯ ಬಗ್ಗೆ ತಲೆ ಕಡಿಸಿಕೊಳ್ಳುವುದೇ ಇಲ್ಲ. ಆದರೆ ಅವರ ಮಾತುಗಳನ್ನು ಕೇಳಬೇಕು, ಅಮೆರಿಕಾದ ಒಬಾಮನ ವರೆಗೂ ಅಳೆದು ಗುಡ್ಡೆ ಹಾಕಿ ಸಾಪ್ಟ್ ವೇರ್ ಮುಳುಗಿ ಹೋಯಿತಂತೆ ಎನ್ನುವ ಸ್ವಯಂ ತೀರ್ಮಾನವನ್ನೂ ತೆಗೆದುಕೊಂಡುಬಿಡುತ್ತಾರೆ. ಕೆಲವರಂತೂ ತಾವು ಪರಮ ನಾಸ್ತಿಕರು ಎಂಬ ಫೋಸು ಬೇರೆ. ನಮ್ಮ ಪಕ್ಕದೂರಿನಲ್ಲಿ ಗಡ್ದದಾರಿ ವ್ಯಕ್ತಿ ಯೊಬ್ಬನಿದ್ದಾನೆ( ಪಾಪ ಹೆಸರು ಬೇಡ ಅವರು ಅವರದೇ ಲಹರಿಯಲ್ಲಿ ಇದ್ದಾರೆ , ಅವರನ್ನು ನಾವು ಅನ್ನೋದೇಕೆ?) ನಾನು ಬಾಲ್ಯದಿಂದ ಆತನನ್ನು ಗಮನಿಸುತ್ತಾ ಬಂದಿದ್ದೇನೆ. ತಾನು ಪರಮ ನಾಸ್ತಿಕ ಹಾಗೂ ಸಾಚಾ ಎಂದು ಬಿಂಬಿಸಿಕೊಂಡು ಮಿಕ್ಕವರೆಲ್ಲಾ ಒಂಥರಾ ಸರಿ ಇಲ್ಲದವರು ಎನ್ನುವ ವ್ಯಕ್ತಿತ್ವ. ಅವನ ಹರೆಯದಲ್ಲಿ ಅವನಂತಿರುವ ಒಂದು ಗುಂಪು ಕಟ್ಟಿಕೊಂಡು ದೇವಸ್ಥಾನಕ್ಕೆ ಜನರಲ್ ಬಾಡಿಯಲ್ಲಿ ತರ್ಲೆ ಎತ್ತುವುದು ಆತನ ಮುಖ್ಯ ಕೆಲಸ. ಸಂಜೆ ಒಂಚೂರು ರಂಗಾಗುವುದು ಹವ್ಯಾಸ. ಮಠ ಗುರುಗಳು ಎಂಬ ಹೊಸ ವಿಷಯ ಬಂದಮೇಲೆ ಆತನಿಗೆ ಇನ್ನಷ್ಟು ಹುರುಪು. ಗಂಟೆಗಟ್ಟಲೆ ಭಾಷಣ ಬಿಗಿದು ಮಠದ ವಿರುದ್ದ ತನ್ನ ಸಮರ ಎಂದ. ಜಾತಿಯ ವಿಷಯ ಆತನಿಗೆ ಒಗ್ಗದು. ಎಲ್ಲರೂ ಒಂದೇ ಜಾತಿ ಹಿಂದೂಗಳೆಲ್ಲಾ ಒಂದೇ ಅಂದ. ಸಾಬರು ಮಾತ್ರಾ ಬೇರೆ ಎಂದ. ವರ್ಷಗಳು ಉರುಳಿದವು. ಈಗ ಮಗಳು ಮದುವೆಗೆ ಬಂದಮೇಲೆ ಬ್ರಾಹ್ಮ್ಣಣ ಹುಡುಗನೇ ಆಗಬೇಕೆಂದು ಹುಡುಕಿ ಮದುವೆ ಮಾಡಿದ. ಅಳಿಯ ಮಗಳು ಮಠಕ್ಕೆ ಅಲೆದರೆ ಈತ ಸೈ ಸೈ ಅಂದ. ಗುರುತಿಸಿಕೊಳ್ಳಬೇಕು ಎಂಬ ಅಧಮ್ಯ ಆಸ್ದೆಯಿರುವ ಆತ ಡೈರಿ ನಿಲ್ಲಿಸುತ್ತೇನೆಂದ. ಅದು ನಿಲ್ಲಲಿಲ್ಲ. ಮಕಾಡೆ ಮಲಗಿದ. ಹೀಗೆ ಇಂಥಹಾ ವ್ಯಕ್ತಿಗಳು ನೂರಾರು ಸಿಗುತ್ತಾರೆ ನಮ್ಮ ಹಳ್ಳಿಗಳಲ್ಲಿ. ಮತ್ತೊಬ್ಬಾತ ಹರೆಯದಲ್ಲಿ ಆಟ ಆಡಿಸುತ್ತಾ ಉನ್ಮಾದದ ಉಮ್ಮೇದಿನಲ್ಲಿದ್ದ. ಅವನೂರಿನ ಒಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿತ್ತು. ಈತನದ್ದು ಅದನ್ನು ತಪ್ಪಿಸಲು ಹಗಲುರಾತ್ರಿ ಓಡಾಟ, ಕಾರಣ ಕೇಳಿದರೆ ಸನ್ಮಾನ ಪ್ರಶಸ್ತಿ ಎಲ್ಲಾ ಇರಬಾರದು ಎಂಬ ಒಣ ಸಿದ್ಧಾಂತ. ಈಗ ಆತನಿಗೆ ವಯಸ್ಸಾಗಿದೆ ತಿಂಗಳೊಪ್ಪತ್ತಿನಲ್ಲಿ ದೊಡ್ಡದಾಗಿ ಸನ್ಮಾನ ಕಾರ್ಯಕ್ರಮ ತಯಾರಿ ನಡೆದಿದೆ. ಸಂಜೆಯ ಬೇಲಿಯ ವ್ಯವಹಾರ ನಿತ್ಯ ಸಾಗಿದೆ. ಮತ್ತೊಬ್ಬನದು ಮತ್ತೂ ವಿಚಿತ್ರ. ಹತ್ತು ವರ್ಷದ ಹಿಂದೆ ದೇವಸ್ಥಾನದ ವಿಷಯದಲ್ಲಿ ಅ ವನದು ನಿತ್ಯ ರಗಳೆ. ಅವರು ಇಪ್ಪತ್ತೈದು ವರ್ಷದ ಹಿಂದೆ ಒಂದು ವರ್ಷ ಜನರಲ್ ಬಾಡಿ ಕರೆಯಲಿಲ್ಲ. ಅಷ್ಟು ತಿಂದರು ಇಷ್ಟು ತಿಂದರು ಹಾಗೆ ಹೀಗೆ. ನಂತರ ಊರವರು ಸತ್ಯ ಎಂದು ತಿಳಿದು ಇವನ ಪಟಾಲಂ ಗೆ ಅಧಿಕಾರ ಕೊಟ್ಟರು. ಈತ ಜನರಲ್ ಬಾಡಿ ಕರೆಯದೆ ಇವತ್ತಿಗೆಗೆ ಎಂಟು ವರ್ಷ.
ಇಂತಹ ಸಾವಿರ ಸಾವಿರ ಅಭಾಸಕರ ಕಥೆಗಳು ಹಳ್ಳಿಗಳಲ್ಲಿ ಧಾರಾಳ. ಅವುಗಳಲ್ಲಿ ತೊಡಗಿಕೊಳ್ಳದೆ ಹೊರ ನಿಂತು ನೋಡುತ್ತಿದ್ದರೆ ಮಜವೋ ಮಜ. ಅವರುಗಳ ಹುಟ್ಟುಗುಣವನ್ನಂತೂ ಯಾರಿಂದಲೂ ಬದಲಾಯಿಸಲಾಗದು, ಮಜ ತೆಗೆದುಕೊಳ್ಳಬಹುದಷ್ಟೆ. ಪಟ್ಟಣದಲ್ಲಿನ ಜನ ಹಳ್ಳಿಯ ಬಗ್ಗೆ ತಾತ್ಸಾರ ಹೊಂದಲು ಇದುವೆ ಮುಖ್ಯ ಕಾರಣ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದಂತೆ ಆಗುತ್ತದೆ. ನಮ್ಮ ರಾಜ್ಯ ಮಟ್ಟದ ರಾಜಕಾರಣಿಗಳ ಕಿತ್ತಾಟ ಕಿರುಚಾಟ ದಿನನಿತ್ಯ ನೋಡಿದಾಗ ನನಗೆ ಇದು ಹೊರಟಿದ್ದು ಇಲ್ಲಿಂದಲೇಯಾ? ಎಂಬ ಅನುಮಾನ ಕಾಡುತ್ತದೆ. ಹಳ್ಳಿಯಿಂದ ದಿಲ್ಲಿಯವರಗೂ ಇದೇ ಅನಾವಶ್ಯಕ ಕಿತ್ತಾಟ. ಪರ ನಿಂದೆ ದ್ವೇಷ ಅಸೂಯೆ. ಇವುಗಳ ನಡುವೆ ಮನುಷ್ಯನಲ್ಲಿನ ರಚನಾತ್ಮಕ ಶಕ್ತಿ ಉಡುಗಿ ಹೋಗುತ್ತಿದೆ. ನನಗೂ ಒಮ್ಮೊಮ್ಮೆ ಭಯ ಕಾಡುತ್ತಿದೆ. ಒಕ್ಕಣ್ಣು ರಾಜ್ಯದಲ್ಲಿ ಬದುಕಲು ಎರಡು ಕಣ್ಣು ಇದ್ದವ ಒಂದು ಕಣ್ಣು ಮುಚ್ಚಿ ನಾಟಕ ಮಾಡಲು ಹೋಗಿ ಅವನೂ ಒಕ್ಕಣ್ಣ ನಾದಂತೆ ನನ್ನನ್ನೂ ಎಳೆದುಕೊಂಡು ಬಿಡುತ್ತದೆಯಾ..? ಎಂದು.