Thursday, December 11, 2008

ಜೇನುಗವನಗಳು

ಮಿನಿಗವನ, ಹನಿಗವನ, ಚುಟುಕ ಎಂದು ಕರೆಯಿಸಿಕೊಳ್ಳುವ ಬರಹಗಳೆಂದರೆ ನನಗೆ ಬಲು ಇಷ್ಟ. ಅದನ್ನು ಬರೆಯುವವರು ಅತೀಬುದ್ದಿವಂತರು ಎಂಬುದು ನನ್ನ ನಂಬಿಕೆ. ಪುಟಗಟ್ಟಲೆ ಕೊರೆದು ಒಂದು ಸಾಲಿನ ಅರ್ಥಹೇಳುವ ಬರಹಗಾರ ನಾಲ್ಕೇ ನಾಲ್ಕು ಸಾಲಿನಲ್ಲಿ ಒಳ್ಳೆಯ ಅರ್ಥ ತರುವ ಹಾಗೂ ಮುಗುಳ್ನಗೆ ಮೂಡಿಸುವ ಇವರೆದುರು ಪೇಲವನಾಗಿಬಿಡುತ್ತಾನೆ. ದುಂಡಿರಾಜ್ ಒಮ್ಮೆ ಬರೆದಿದ್ದರು
ಹುಡುಗ ಹೇಳಿದ:
ಪ್ರಿಯೆ ಹೃದಯ ಶ್ರೀಮಂತಿಕೆಯಲ್ಲಿ ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಸರಿ ಹಾಗಾದರೆ ನಾನು ಟಾಟಾ ಬರ್ಲಾ.
ಇಷ್ಟು ಸಾಲುಗಳಲ್ಲಿ ಎಂಥಹ ಮಜ ಇದೆ ನೋಡಿ. ಕವನ ಕವಿತೆಗಳಾದರೆ ಅರ್ಥಮಾಡಿಕೊಳ್ಳಲು ತಾಕತ್ತಿರಬೇಕು. ಅದನ್ನು ಆಳವಾಗಿ ಅಗಲವಾಗಿ ಪರಾಮರ್ಶಿಸಿ ಅಂತಿಮವಾಗಿ ಇದು ಹೀಗೆ ಅರ್ಥವಿರಬಹುದೇನೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಈ ಹನಿಯಂತಿರುವ ಹನಿಗವನ ಮಾತ್ರಾ ಪಾಮರರಿಗಾಗಿಯೇ ಇರುವುದು. ಓದಿದಕೂಡಲೇ ನಕ್ಕುಬಿಡಬಹುದು. ಡಿವಿಜಿ ಯವರ ಮಂಕುತಿಮ್ಮನ ಕಗ್ಗವೂ ಕೂಡ ನಾಲ್ಕೇ ಸಾಲು ಆದರೆ ಅರ್ಥಸಹಿತ ಕಗ್ಗವನ್ನು ಕೊಳ್ಳದಿದ್ದರೆ ನಮ್ಮನಿಮ್ಮಂತಹ ವರಿಗೆ ಅದು ತಿಳಿಯುವುದೇ ಇಲ್ಲ.
ಎಲ್ಲವೂ ಶೂನ್ಯದಿಂದಲೇ..
ಇದ್ದರೆ ಸಂಸಾರ
ಇಲ್ಲದಿದ್ದರೆ ಸಸಾರ.
ಮೂರೇ ಸಾಲಿನ ಈ ಚುಟುಕ ಪಟಕ್ಕನೆ ಅದೆಂತಹ ಘನಗಂಭೀರವಾದ ಅರ್ಥವನ್ನು ಕೊಡುತ್ತದೆ. ಹನಿಗವನದಲ್ಲಿ ನಗುಮೂಡಿಸುವ ಹನಿಗಳೇ ಹೆಚ್ಚು. ಸಣ್ಣದಾಗಿ ಚಮಕ್ ಕೊಡುವ ಸಾಹಿತ್ಯವೂ ಇದೆಯೆನ್ನಿ
ಹುಡುಗ ಹೇಳಿದ :
ಕನ್ನಡವೆಂದರೆ ಕುಣಿದಾಡುವುದೆನ್ನೆದೆ
ಹುಡುಗಿ ಹೇಳಿದಳು :
ಎನ್ನದಿದ್ದರೂ .............................!?
ಒಂದಿಷ್ಟು ಚುಕ್ಕಿ ನಂತರ ಆಶ್ಚರ್ಯಸೂಚಕ ಹಾಗೂ ಪ್ರಶ್ನಾರ್ಥಕದ ಚಿಹ್ನೆ. ಅದರ ಅರ್ಥ ಅಲ್ಲೆನೋ ಸಣ್ಣ ಡಬ್ಬಲ್ ಮೀನಿಂಗ್ ಇದೆ ಅಂತ ನಮಗೆ ಓದಿದ ಕೂಡಲೆ ತಿಳಿದು ಕಿರುನಗೆ ಮೂಡುತ್ತದೆ. ಇವತ್ತಿನ ಕಾಲದಲ್ಲಿ ಧಾವಂತದ ಬದುಕಿನಲ್ಲಿ ದುಡಿಯುವ ಭರಾಟೆಯಲ್ಲಿ ಗಂಟೆಗಟ್ಟಲೆ ಓದುತ್ತಾ ಕೂರುವುದರಲ್ಲಿ ಅರ್ಥ...!ವಿಲ್ಲ ಎಂದು ಈ ಹನಿಗವನ ಹುಟ್ಟಿಕೊಂಡಿತೇನೋ ಅಂತ ಅನ್ನಿಸುತ್ತದೆ. ಹಾಗೆಯೇ ನೂರಾರು ಈ ಹನಿಗವನಗಳ ಸೃಷ್ಟಿಕರ್ತರೂ ಹುಟ್ಟಿಕೊಂಡಿದ್ದಾರೆ. ಜೈ ಹನಿಗವನ.

2 comments:

Harisha - ಹರೀಶ said...

ಡುಂಡಿರಾಜರ ಕೆಲವು ಚುಟುಕುಗಳನ್ನು ಓದಿದ್ದೇನೆ.. ಚೆನ್ನಾಗಿವೆ..

ಮನಸ್ವಿ said...

ದುಂಡಿರಾಜರ ಹನಿಗವನಗಳು ಚನ್ನಾಗಿರುತ್ತವೆ, ಯಾರು ಬರೆದದ್ದು ನೆನಪಿಗೆ ಬರದಿದ್ದರೂ ೨ ಸಾಲುಗಳು ನೆನಪಾದವು ಅದೇನೆಂದರೆ
ಬ್ಯಾಂಕ್ ಕ್ಯಾಶಿಯರ್ ತನ್ನ ಕೌಂಟರಿನಲ್ಲಿ ನಗುವುದಿಲ್ಲ ಏಕೆ?
ಏಕೆಂದರೆ ಅಲ್ಲಿ ಬೋರ್ಡ್ ಹಾಕಿರುತ್ತಾರಲ್ಲ "ನಗದು" ಎಂದು.