
"ಮಾವಿನ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಎಂದು ನಮ್ಮ ಗಿಂಡಿಮನೆ ಮೃತ್ಯುಂಜಯ ಅವರು ತಮ್ಮದೊಂದು ಕವಿತೆಯಲ್ಲಿ ಹೇಳಿದ್ದಾರೆ. ಆ ಕವಿತೆಯಲ್ಲಿ ಪ್ರಕೃತಿಯ ಶಬ್ದ ವನ್ನು ನಮಗೆ ತಿಳಿಸುವುದರ ಜತೆ ಮಾವಿನ ಚಿಗುರು ಕೋಗಿಲೆಯ ಸಂಬಂಧದ ಎಳೆಯನ್ನು ನವಿರಾಗಿ ಬಿಚ್ಚಿಡುತ್ತದೆ. ಇರಲಿ ಈಗ ಆ ಸುಮಧುರ ಕವಿತೆಯಲ್ಲಿನ ಮಾವಿನ ಬಗ್ಗೆ ಹೇಳೋಣ.
ಮಾವಿನ ಹಣ್ಣು ಮಾವಿನ ಮಿಡಿ ಉಪ್ಪಿನಕಾಯಿ, ಮಾವಿನ ಕಾಯಿ ತಂಬುಳಿ ಯಾರಿಗೆ ಗೊತ್ತಿಲ್ಲ? ಆಹಾ ಎಂಥ ಮಧುರಾ ವಾಸನೆ ಎನ್ನುವವರೆ ಎಲ್ಲ. ಪರಿಮಳ ಅಪ್ಪೆ ಮಾವಿನ ಕಾಯಿ ಹುಳಿ ಹುಳಿ ತಂಬುಳಿಯನ್ನು ನೆನೆಸಿಕೊಂಡಾಗಲೆಲ್ಲ ಚೊಳ್ ಅಂತ ಬಾಯಲ್ಲಿ ನೀರುಬರುತ್ತದೆ. ಮೊಸರು ಅನ್ನದ ಜತೆ ಕಚಕ್ ಅಂತ ಮಿಡಿಯನ್ನು ಕಚಿಕೊಂಡಾಗ ಆಗುವ ಆನಂದ ವರ್ಣಿಸಲಸದಳ. ಕಂಚಪ್ಪೆ. ಅನಂತ ಭಟ್ಟನ ಅಪ್ಪೆ ದ್ಯಾವ್ರಪ್ಪೆ ಹೀಗೆ ಸ್ಥಳೀಯವಾಗಿ ನೂರಾರು ಹೆಸರಿನಿಂದ ಕರೆಯಿಸಿಕೊಳ್ಳುವ ಮಾವಿನ ರುಚಿಗೆ ಸರಿಸಾಟಿಯಿಲ್ಲ. ಹೀಗೆ ಮನುಷ್ಯನ ಊಟದ ಜತೆಗೆ ಗುಡ್ ಕಾಂಬಿನೇಷನ್ ಆಗಿರುವ ಮಾವು ಪಕ್ಷಿ ಸಂಕುಲಕ್ಕೂ ಅಪಾರ ಉಪಕಾರಿ. ವಾಸಕ್ಕೆ ಆಹಾರಕ್ಕೆ ಸಂತತಿ ಬೆಳಸುವುದಕ್ಕೆ ಹೀಗೆ ಹತ್ತಾರು ಕಾರಣಗಳು ಅದರ ಜತೆ ತಳಕು ಹಾಕಿಕೊಂಡಿವೆ. ಆಯಿತು ಕೊರೆತ ಸಾಕು ಏನು ಹೇಳ ಹೊರಟಿವೆಯೋ ಅದನ್ನು ಹೇಳು ಮಾರಾಯ ಅಂದಿರಾ..! ಆಯಿತು ವಿಷಯಕ್ಕೆ ಬರೋಣ.
ಹೀಗೆ ಮಾವಿನ ಉತ್ಪನ್ನಗಳನ್ನು ಬಳಸುವ ಮಾನವ ಪರೋಕ್ಷವಾಗಿ ಮಾವಿನಮರಗಳ ಮಾರಣ ಹೋಮಕ್ಕೆ ಕಾರಣವಾಗುತ್ತಿದ್ದಾನೆ. ಅದು ಈಗ ನಾನು ಮೇಲೆ ಹೇಳಿದ ರುಚಿರುಚಿಯಾದ ಉತ್ಪನ್ನಗಳನ್ನು ಬಳಸುವ ಕಾರಣಕ್ಕಿಂತ ಹೆಚ್ಚು ಮಾವಿನ ಎಲೆಯನ್ನು ತೋರಣಕ್ಕಾಗಿ ಬಳಸುವ ಕಾರಣದಿಂದ ಎಂದು ಹೇಳಲು ಬಹು ಬೇಸರವೆನಿಸುತ್ತದೆ. ಹೌದು ಅದು ದೊಡ್ಡ ದುರಂತ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಮಾವಿನ ಸೊಪ್ಪನ್ನು ತೋರಣದ ಕಾರಣಕ್ಕಾಗಿ ಯಥೇಚ್ಚವಾಗಿ ಬಳಸಲಾಗುತ್ತಿದೆ. ಮದುವೆಮನೆ ಉಪನಯನ ಹೀಗೆ ಧಾರ್ಮಿಕ ಸಮಾರಂಭಗಳಲ್ಲಂತೂ ಈ ಮಾವಿನ ಸೊಪ್ಪಿನ ಮಾರಣ ಹೋಮ ನೋಡಲಾಗದು. ಸಮಾರಂಭ ನಡೆಯುವ ಜಾಗಕ್ಕೆ ನೀವು ಹೋದಾಗ ಗಮನಿಸಿ ಅಲ್ಲಿ ಕಮಾನಿನಾಕರಾದಲ್ಲಿ ದಪ್ಪನೆಯ ಮಾವಿನ ಸೊಪ್ಪಿನ ಹೊದಿಕೆಯನ್ನೇ ನಿರ್ಮಿಸಿಬಿಟ್ಟಿರುತ್ತಾರೆ. ನನಗಂತೂ ಅವುಗಳನ್ನು ನೋಡಿದಾಗ ಸಮಾರಂಭದ ಉತ್ಸಾಹವೇ ಉಡುಗಿಹೋಗುತ್ತದೆ. ಮಾವಿನ ಎಲೆಗಳು ನನ್ನನ್ನು ಉಳಿಸಿ ಹೀಗೆ ಹಿಂಸಿಸಬೇಡಿ ಎಂದು ಚಿತ್ಕಾರ ಹೊರಡಿಸಿದಂತೆ ಭಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ರಾಜಕೀಯ ಸಮಾರಂಭಕ್ಕೂ ಮಾವಿನ ಎಲೆಗಳ ತೋರಣದ ಬಳಕೆಯಾಗುತ್ತಿದೆ. ಒಂದೆರಡು ದಿವಸದಲ್ಲಿ ಬಾಡಿಹೋಗುವ ಈ ಕಾರ್ಯಕ್ರಮಕ್ಕೆ ವರ್ಷಗಟ್ಟಲೆ ಮರದಲ್ಲಿ ಹಸಿರಾಗಿರುವ ಸೊಪ್ಪನ್ನು ಬಳಸುವುದು ಯಾವ ನ್ಯಾಯ ಅಂತ ಮಾವಿನ ಮರ ಮಾತನಾಡಲು ಬರುತ್ತಿದ್ದರೆ ಕೇಳುತ್ತಿತ್ತೇನೋ ಅಂತ ನನಗೆ ಅನ್ನಿಸುತ್ತದೆ.
ಅದ್ಯಾರೋ ಶಾಸ್ತ್ರಕಾರ ಮಾವಿನ ಸೊಪ್ಪು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಬೇಕು ಆಂದ, ಅದಕ್ಕೆ ನವ್ಯ ಶಾಸ್ತ್ರಕಾರ ಮಾವಿನ ಸೊಪ್ಪಿನಲ್ಲಿ ವೈರಸ್ ನಿರೋಧಕ ಶಕ್ತಿಯಿದೆ ಹಾಗಾಗಿ ಅದನ್ನು ಹತ್ತಾರು ಜನ ಓಡಾಡುವ ಜಾಗದ ಸಮಾರಂಭ ಸ್ಥಳದಲ್ಲಿ ಕಟ್ಟಿ ಸಮೂಹ ಕಾಯಿಲೆ ಹರಡದಂತೆ ತಡೆಯಬೇಕೆಂದು ನಮ್ಮ ಹಿಂದಿನವರು ಆ ಶಾಸ್ತ್ರ ಮಾಡಿದ್ದಾರೆ ಎಂದು ತನ್ನದೇ ತರ್ಕದ ...! ಮೂಲಕ ಸೇರಿಸಿದ, ಈಗಿನವರು ಕುಂಡೆ ಮೇಲೆ ಮಾಡಿಕೊಂಡು ಮನೆಯಲ್ಲಿ ಕಾರ್ಯಕ್ರಮ ಎಂದಕೂಡಲೆ ಮಾವಿನ ಸೊಪ್ಪು ಕಡಿದು ಕಡಿದು ತಂದು ಕಟ್ಟುತ್ತಿದ್ದಾರೆ. ಹಾಗಂತ ಅದೇ ಶಾಸ್ತ್ರಕಾರ ದೇವರು ನಿಮಗೆ ಸುಗಿ ಸುಗಿದು ಧನಕನನ ಕೊಡುತ್ತಾನೆ ವರ್ಷಕ್ಕೊಂದು ಮಾವಿನ ಸಸಿ ನಾಟಿ ಮಾಡಿ ಎಂದು ಸೇರಿಸಬಹುದಿತ್ತು. ಆದರೆ ಆತ ಹಾಗೆ ಮಾಡಿಲ್ಲ ಕಾರಣ ಆತನ ಕಾಲದಲ್ಲಿ ಕಾಡು ಹೇರಳವಾಗಿತ್ತು ಅವನ್ನು ನಾಶಮಾಡುವುದಕ್ಕೆ ಮಾರ್ಗ ಬೇಕಿತ್ತು ಹೀಗಾಗಿ ಹೀಗೊಂದು ಸಿಂಪಲ್ ಉಪಾಯ ಮಾಡಿದ. ಆದರೆ ಅದು ಈ ಕಾಲಕ್ಕೆ ದುಭಾರಿಯಾಗಿ ಪರಿಣಮಿಸಿದೆ. ಇದೊಂದು ತೋರಣದ ಬಳೆಕೆಯ ಕಾರಣದಿಂದಾಗಿ ಮಾವಿನಮರ ವರ್ಷದಿದ ವರ್ಷಕ್ಕೆ ಬೋಳುಬೋಳಾಗಿ ಮಾಯವಾಗುವತ್ತ ಸಾಗುತ್ತಿದೆ. ಇದು ತೋರಣಕ್ಕಾಗಿ ಮಾವುನಾಶದ ಕಥೆಯಾದರೆ ನಂತರದ್ದು ಮಾವಿನ ಮಿಡಿ ಕೊಯ್ಯುವವರ ದುರಾಸೆಯಿಂದ ಇಡೀ ಟೊಂಗೆಯೇ ಮಾಯವಾಗುವತ್ತ ಹೊರಟದ್ದೂ ಕಾಡು ಮಾವಿನ ಮರಗಳ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ.
ಹೀಗೆ ಮನುಷ್ಯನ ದುರ್ಬಳಕೆಯಿಂದ ಅಪರೂಪದ ಕಾಡುಮಾವಿನಮರದ ಸಂತತಿ ಬರ್ಬಾದೆದ್ದು ಹೋಗುತ್ತಿದೆ. ರಕ್ಷಿಸುವ ದೃಷ್ಟಿಯಿಂದ ಕೇವಲ ಲೇಖನ ಬರೆಯುತ್ತಾ ಕುಳಿತುಕೊಂಡರೆ ಆಗದು. ನಾನಂತೂ ವರ್ಷಕ್ಕೆ ನನ್ನ ಹತ್ತಿರ ಸಾದ್ಯವಾದಷ್ಟು ಕಾಡುಮಾವಿನ ಮರಗಳನ್ನು ನೆಡುತ್ತಿದ್ದೇನೆ. ಹಿಂದೆ ಅಶೋಕ ಮಹಾರಾಜನ ಕಾಲದಲ್ಲಿ ಸಾಲುಮರಗಳಾಗಿ ಕಂಡುಬರುತ್ತಿದ್ದ ಮಾವು ಇಂದಿನ ಪ್ರಜಾಪ್ರಭುತ್ವ ಎಂಬ ನಮ್ಮದೇ ಆಳ್ವಿಕೆಯಲ್ಲಿ ಕಾಣಬರುತ್ತಿಲ್ಲ.
ಕಳೆದ ವರ್ಷ ಹೊನ್ನೆಮರಡುವಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಗೋಷ್ಠಿ ನಡೆದಾಗ ಮಾವಿನ ತೋರಣ ಕಟ್ಟಲು ಹೊರಟಿದ್ದರು. ನಂತರ ಅವರಿಗೆ ಗಂಟೆಗಟ್ಟಲೆ ಕೊರೆದು ಅಕೇಶಿಯಾ ತೋರಣ ಕಟ್ಟಿಸಲಾಯಿತು. ಬಂದವರೆಲ್ಲರೂ ಅದು ಮಾವಿನ ತೋರಣ ಎಂದೇ ಭಾವಿಸಿದ್ದರು. ಹಾಗಾಗಿ ನಾವು ನೀವು ಹೀಗೆ ಒಂದಿಷ್ಟು ನಮ್ಮ ಮಟ್ಟದ ತೀರ್ಮಾನ ಕೈಗೊಳ್ಳುವುದರಲ್ಲಿ ಅರ್ಥವಿದೆ. ನಿಮಗೆ ಸಂದರ್ಭ ಸಿಕ್ಕಾಗ ತೋರಣಕ್ಕಾಗಿ ಯಡ್ಡಾದಿಡ್ಡಿ ಮಾವಿನ ಸೊಪ್ಪನ್ನು ಬಳಸುವವರಿಗೆ ತಿಳಿ ಹೇಳಿ. ಸ್ವಲ್ಪ ಶಾಸ್ತ್ರಕ್ಕೆ ಬಳಸಲಿ. ಆ ವರ್ಷ ಒಂದೇ ಒಂದು ಗಿಡ ನೆಡಲು ಹೇಳಿ. ಇದು ಮಾವಿನ ಮರಗಳು ನನ್ನ ಮೂಲಕ ಮಾಡಿಕೊಂಡ ಮನವಿ ಅಂತ ಬೇಕಾದರೂ ಅಂದುಕೊಳ್ಳಿ. ಕಾಡುಮಾವಿನ ಮರಗಳು ಹೀಗೆಯೇ ದುರ್ಬಳಕೆಯಾದಲ್ಲಿ ಮತ್ತೆ ಕವಿಗಳ ಕವಿತೆಯಲ್ಲಿ ಮಾತ್ರಾ ಇದನ್ನು ಕಲ್ಪಿಸಿಕೊಳ್ಳಬೇಕಾದೀತು. ಅದು ನಮ್ಮ ಮುಂದಿನ ತಲೆಮಾರಿನವರಿಗೆ ಆಸಕ್ತಿ ಇದ್ದರೆ..! .
ಇನ್ನೂ ಮುಂದೆ ಯೋಚಿಸಿದಲ್ಲಿ ಮಾವು ಮಾಯವಾಗಿ ಅದು ಹೇಗಿತ್ತು ಅಂತ ತಿಳಿಯದ ಕವಿಗಳು " ಅಕೆಶಿಯಾ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಅನ್ನಬೇಕಾಗುತ್ತದೆ. ಹಾಗಾಗಲು ಬಿಡುವುದು ಬೇಡ. ಈ ಬಾರಿ ಮದುವೆ ಮುಂಜಿಗೆಂದು ನೀವು ಎರಡು ದಿವಸ ಮೊದಲು ಊರಿಗೆ ಬಂದಾಗ ನಾನು ಹೇಳಿದ್ದು ನೆನಪಾಗಿ ಅನುಷ್ಠಾನಕ್ಕೆ ಬರುತ್ತದೆ ಎಂಬ ಆಶಯ ನನ್ನದು. ಅದು ಸಕ್ಸಸ್ಸು ಹೌದು ಕಾರಣ ಊರಿನಲ್ಲಿ ನಿಮ್ಮ ಮಾತು ಕೇಳುತ್ತಾರೆ, ನಾವೆಲ್ಲ ಹೇಳಿದರೆ ಇವಕ್ಕೆಲ್ಲಾ ಎಂತ ಗೊತ್ತು ಅಂತ ಬಾಯಿಮುಚ್ಚಿಸುತ್ತಾರೆ. ಹಾಗಾಗಿ ನೀವು ಶಂಖವಾಗಿ ಮಾವು ತೀರ್ಥವಾಗಲಿ.
5 comments:
ಪ್ರಕೃತಿ ಪ್ರಿಯ ಬರಹ. ಟೊಂಕಕಟ್ಟಬೇಕಿದೆ ಯಾರಾದರೂ...! ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು?. ನಮ್ಮ ಮನೆಯ ಕಾರ್ಯಕ್ಕೆ ಒಂದಿಷ್ಟು ತೋರಣ ಎಷ್ಟು ಹಾನಿ ಮಾಡೀತು ಎಂಬ ಭಾವನೆ ನನ್ನದು ಮತ್ತು ಎಲ್ಲರದ್ದೂ..
ಶರ್ಮಣ್ಣ, ಹಿಂಗ್ ಹೇಳ್ತಿ ಅಂತ ಬ್ಯಾಜಾರಾಗಡ.
ನೀವು ಬರಿಯಕಿದ್ರೆ ಪ್ಯಾರಾ ಪ್ಯಾರಾ ಮಾಡಿ ಬರದ್ರೆ ಬರಹಕ್ಕೆ, ಓದಲಿಕ್ಕೆ ಆಸಕ್ತಿ, ಆಕರ್ಷಣೆ, ಅನುಕೂಲ ಇನ್ನೂ ಜಾಸ್ತಿ ಆಗ್ತು.
“ಅಕೇಶಿಯಾ ಚಿಗುರನು ಮೆಲ್ಲುತ ಕೋಗಿಲೆ ಕಾಗೆಯ ಸ್ವರದಲಿ ಹಾಡೀತು” ಎಂದು ಗಿಂ.ಮೃ. ಬರೀಬೇಕಾಗುತ್ತೆ, ಅದೃಷ್ಟದಿಂದ ಆ ಕಾಲಕ್ಕೆ ಕಾಗೆ, ಕೋಗಿಲೆಗಳು ಇನ್ನೂ ಇದ್ರೆ! ಬೇಜಾರಿನ ವಿಷಯ ಅಂದ್ರೆ ನಮ್ಮ ಬಹಳ ಬಹಳ ಸಾಂಪ್ರದಾಯಿಕ ಅಭ್ಯಾಸಗಳನ್ನ ನಾವು ಯಾಕೆ ಪಾಲಿಸ್ತೀವಿ ಅನ್ನೋದರ ಕಾರಣ ನಮಗೇ ಗೊತ್ತಿಲ್ಲ. ಬೇರೆ ಯಾರನ್ನೂ ಕೇಳೋ ಹಾಗೂ ಇಲ್ಲ.
ತೋರಣಕ್ಕೆ ಉಪಯೋಗಿಸುವ ಮಾವಿನ ಚಂಡೆಯ ಸಂಖ್ಯೆ ಅಲ್ಲಿ ಸುಮ್ಮನೆ ವೇಸ್ಟ್ ಆಗಿ ಬೀಳುವ ಸೊಪ್ಪಿಗೆ ಹೋಲಿಸಿದರೆ ಬಹಳ ಕಡಿಮೆ. ಇದನ್ನು ಆದಷ್ಟು ತಡೆಗಟ್ಟಬೇಕು.
ಮಾವಿನ ಸೊಪ್ಪಿನ ತೋರಣವೇ ಆಗಬೇಕು ಅಂತಾ ಯಾರು ಮಾಡಿದಾರೋ ಗೊತ್ತಿಲ್ಲ... ತೋರಣಕ್ಕಾಗಿ ಒಂದಿಡೀ ಮಾವಿನ ಮರಕ್ಕೆ ಗಾಯಮಾಡಿ ತೋರಣಕಟ್ಟುವ ಸಂಪ್ರಧಾಯ ಕೊನೆಗೊಳ್ಳಲಿ ಎಂಬುದು ನನ್ನ ಹಾರೈಕೆ, ಒಂದೊಳ್ಳೆ ಸಲಹೆಗೆ ನನ್ನದೊಂದು ವಂದನೆ.
Post a Comment