Thursday, December 25, 2008

ಬಿಗ್ನೋನಿಯಾ ಎಂಬ ಮಾಂತ್ರಿಕ ಹೂವು






ಹೂವುಗಳ ಅಂದಕ್ಕೆ ಅದರ ಪರಿಮಳಕ್ಕೆ ಮನಸೋಲದವರಿಲ್ಲ. ಸಹಸ್ರಾರು ಜಾತಿಯ ಹೂವುಗಳ ನೂರಾರು ತರಹದ ಅದರ ಪರಿಮಳ ಆಹಾ ಸೂಪರ್. ಕಣ್ಣಿಗೆ ಚಂದದ ಜತೆ ಪರಿಮಳ ಸೂಸುವ ಮಲ್ಲಿಗೆ ಜಾಜಿ ಸಂಪಿಗೆ ಗುಲಾಬಿ ಮುಂತಾದವುಗಳಾದರೆ ಡಬ್ಬಲ್ ಪ್ರಾಫಿಟ್. ಪರಿಮಳಯುಕ್ತ ಮಲ್ಲಿಗೆ ಮುಂತಾದ ಹೂವುಗಳು ಶೃಂಗಾರ ರಸಕ್ಕೂ ಸೈ. ಹೀರೋಯಿನ್ ಗೆ ಒಂದೇ ಒಂದು ಮಲ್ಲಿಗೆ ದಂಡೆ ಮುಡಿಸಿದರೆ ಅಲ್ಲಿಯೇ ಪಟಾಯಿಸಿಕೊಳ್ಳಬಹುದು ಎಂಬುದು ಸಿನೆಮಾದವರ ನಂಬಿಕೆ. ಅದೇನು ತೀರಾ ಸುಳ್ಳಲ್ಲ ಮಲ್ಲಿಗೆ ಜಾಜಿ ಮುಂತಾದ ಹೂವುಗಳಿಗೆ ಮನಸ್ಸನ್ನು ಶೃಂಗಾರಕ್ಕೊಯ್ಯುವ ತಾಕತ್ತಿದೆ.
ಇನ್ನು ಪರಿಮಳ ರಹಿತ ಆದರೆ ನೊಡಲು ಸುಂದರವಾದ ಹೂವುಗಳೂ ನೂರಾರು ಇವೆ. ದಾಸವಾಳ ಮುಂತಾದವುಗಳು ಆ ವರ್ಗಕ್ಕೆ ಸೇರುತ್ತವೆ. ಅವು ಹೂವನ್ನು ಯಾಕೆಬಿಡುತ್ತವೆ ಎನ್ನುವುದೂ ಇಲ್ಲಿಯವರೆಗೆ ಗೊತ್ತಿಲ್ಲ. ಕಾರಣ ಹಲವು ಜಾತಿ ತನ್ನ ಬೀಜದ ಮೂಲಕ ವಂಶಾಭಿವೃದ್ಧಿಗಾಗಿ ದುಂಬಿಯನ್ನು ಆಕರ್ಷಿಸಲು ಹೂವುಬಿಡುತ್ತವೆ. ತನ್ಮೂಲಕ ಕಾಯಿ ಫಲಿತಗೊಳ್ಳುತ್ತವೆ. ಆದರೆ ದಾಸವಾಳ ಗುಲಾಬಿ ಮಲ್ಲಿಗೆ ಮುಂತಾದವುಗಳು ಕಾಯಿಇಡುವುದೇ ಇಲ್ಲ. ಗೆಲ್ಲಿನ ಮೂಲಕವಷ್ಟೇ ವಂಶಾಭಿವೃದ್ಧಿ. ಹಾಗಾದರೆ ಅವು ಹೂವು ಬಿಡುತ್ತವೇಕೆ?. ನಾಗೇಶ ಹೆಗಡೆಯವರನ್ನೇ ಕೇಳಬೇಕು. ಮನುಷ್ಯನ ಜಾತಿಯಲ್ಲಿ ಗಂಡು ಎಂಬುದಿದೆ ಅದು ಹೆಣ್ಣಿಗಾಗಿ ಹಪಹಪಿಸುತ್ತಿರುತ್ತದೆ ತಾನು ಅರಳಿ ಅವನ ಕೈಗೆ ಸಿಕ್ಕಿ ಅವನಮೂಲಕ ಅವಳ ಮುಡಿಸೇರಿ ಒಂದೇ ಒಂದು ಡ್ಯುಯೆಟ್ ಹಾಡುವಂತಾಗಲಿ ಎಂದು ಯಾವ ಹೂವು ಬಿಟ್ಟಿರಲಿಕ್ಕಿಲ್ಲ. ಸರಿ ಹಾಗಾದರೆ ಹೂವು ಬಿಟ್ಟಿದ್ದ್ಯಾಕೆ?. ಸುಮ್ಮನೆ ಅರಳಿ ಮುದುಡುವುದ್ಯಾಕೆ? ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗದು. ಆದರೂ ಒಂದಾನೊಂದು ಕಾಲದಲ್ಲಿ ಅವು ಕಾಯಾಗುತ್ತಿದ್ದವು ಕಾಲಾನಂತರ ಪ್ರಕೃತಿಯಲ್ಲಿನ ಏರುಪೇರು ಅವುಕ್ಕೆ ಕಾಯಾಗುವ ಸಂದರ್ಭವನ್ನು ತಪ್ಪಿಸಿತು. ಆದರೆ ಗಿಡಗಳ ಯೋಚನಾ ಕೋಶಕ್ಕೆ ಅವು ರವಾನೆಯಾಗಿಲ್ಲ. ಅವುಕ್ಕೆ ಅದು ತಿಳಿಯದೆ ಇನ್ನೂ ಹೂ ಬಿಡುತ್ತಲೇ ಇವೆ ಅಂತ. ಇರಲಿ ಯಾವ ಕಾರಣಕ್ಕಾದರೂ ಹೂ ಬಿಡಲಿ ನಾವಂತೂ ಅದರಿಂದ ಮಜ ತೆಗೆದುಕೊಳ್ಳೋಣ.
ಇಂತಹ ಕಾಯಾಗದ ಆದರೆ ಚಂದನೆಯ ಗೊಂಚಲು ಗೊಂಚಲು ಹೂ ಬಿಡುವ ವರ್ಗಕ್ಕೆ ಈ ಬಿಗ್ನೋನಿಯಾ ಸೇರುತ್ತದೆ. ದಕ್ಷಿಣ ಅಮೇರಿಕಾ ಇದರ ಮೂಲ. ಅಲ್ಲಿ ಕಾಡಿನಲ್ಲಿ ಕಾಲಾಬಾಷ್ ಮರಗಳಿಗೆ ಇವು ಸುತ್ತಿ ಬೆಳೆಯುತ್ತಂತೆ. ಇದರ ವಂಶ ಫಿಗ್ವರ್ಟ್ ಅಂತೆ. ಹೂ ಅರಳಿದಾಗ ಇಡೀ ಕಾಡು ಸುಂದರವಾಗಿ ಕಾಣಿಸುತ್ತದೆಯಂತೆ. ಅದ್ಯಾರೋ ಪುಣ್ಯಾತ್ಮರು ಒಂದೆರಡು ಗೆಲ್ಲನ್ನು ನಮ್ಮ ಮಲೆನಾಡಿಗೆ ತಂದರಿರಬೇಕು. ಹಾಗಾಗಿ ಜನವರಿಯಿಂದ ಏಪ್ರಿಲ್ ವರೆಗೆ ಹಲವಾರು ಮನೆಯ ಹೊರಗೆ ಬಿಗ್ನೋನಿಯಾ ನೋಡುಗರನ್ನು ಸೆಳೆಯುತ್ತದೆ. ಇದು ಸಿಹಿಯಾದ ಮಕರಂದವನ್ನು ಹೊಂದಿದ್ದು ಆದರೆ ಕಹಳೆಯಾಕಾರದ ಪಕಳೆಯನ್ನು ಹೊಂದಿರುವುದರಿಂದ ಪರಾಗಸ್ಪರ್ಷವಾಗಲಾರದು. ಅಷ್ಟುದ್ದ ಕೊಕ್ಕಿನ ಹಕ್ಕಿಗಳು ನಮ್ಮಲ್ಲಿ ಇಲ್ಲ. ಈ ಹೂವಿನ ತವರೂರು ದಕ್ಷಿಣ ಅಮೆರಿಕಾದಲ್ಲಿ ಕಾಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಒಂದೇ ಒಂದು ಗೆಲ್ಲು ಮನೆಯೆದುರು ನೆಟ್ಟರೆ ಕಣ್ಣಿಗೆ ಹಬ್ಬವಂತೂ ಖಂಡಿತ. ನೀವೂ ಪ್ರಯತ್ನಿಸಿ. ಹ್ಯಾಪಿ ಕ್ರಿಸ್ ಮಸ್

3 comments:

Anonymous said...

ಗುರೂ ನೀ ಬರ್ಯೋದು ಸಾಕು ಮಾಡೊ..... ನನಗೆ ಓದಿ ಓದಿ ತಲೆ ಕೆಟ್ಟೊಗಿದೆ. ಏನಿದೆ ಅದರಲ್ಲಿ ಅಂತ ನನಗೆ ಅರ್ಥ ಆಗ್ತಿಲ್ಲ.

Anonymous said...

ಶ್ರೀ. ಅನಾಮಧೇಯರಿಗೆ, ನಮಸ್ಕಾರ್ರೀ.. ನಿಮಗೆ ಓದಿಓದಿ ತಲೆ ಕೆಟ್ಟಿದೆ, ಸರಿ. ಆದ್ರೆ ಅದಕ್ಕೆ ಶ್ರೀಶಂ ಯಾಕೆ ಬರೆಯೋದು ಬಿಡ್ಬೇಕು ಅನ್ನೋದು ನಂಗೆ ಅರ್ಥ ಆಗ್ತಿಲ್ಲ. ನಾನೂ ನಿಮ್ಮ ಹಾಗೇ ಮತ್ತೊಬ್ಬ ಅನಾಮಧೇಯ!

Anonymous said...

ಮಿ. ಅನಾಮಧೇಯ ೨ ರವರೆ> ಹೀಗೆ ಏನೇನೋ ಬರೆಯುತ್ತಾ ಇರುವುದರ ಬದಲು ತಿ.ಮು ಕೊಂಡು ಕೂತರೆ ಅದರಲ್ಲಿ ಅರ್ಥವಿದೆ, ಹಾಗಾಗಿ ಸಾಕುಮಾಡೋ ಅಂತ ಬಡ್ಕಂಡೆ.