.gif)
ಹೀಗೆ ಜೇನಿನ ಬಗ್ಗೆ ಹೇಳುತ್ತಾ ಹೋದರೆ ಕನಿಷ್ಟವೆಂದರೂ ಐದು ಕಾದಂಬರಿ ಬರೆಯಬಹುದು. ಆವರಣದಂತಹ ವಿವಾದ ಎಬ್ಬಿಸದಿದ್ದರೂ ಓದಲು ಮಜ ಇರುತ್ತದೆ. ಇರಲಿ ಹೀಗೆ ಅದೇನೋ ಅರೆಬರೆಯಾಗಿ ಹೇಳಿದರೆ ಅರ್ಥವಾಗದು ಹೇಳಿದರೆ ಸರಿಯಾಗಿ ಹೇಳು ಇಲ್ಲದಿದ್ದರೆ ರೈಟ್ ಹೇಳು ಅಂದಿರಾ ..? ಸ್ಸಾರಿ ಒಂದಿಷ್ಟು ಸಾಲುಗಳಲ್ಲಿ ವಿವರಿಸಲು ಯತ್ನಿಸುತ್ತೇನೆ.
ಆವತ್ತು ನಿಮಗೆ ಗಂಡು ಜೇನು ನೋಣ ಆಚೆ ಬರುವುದನ್ನು ನಾನು "ಬಾ ಬಾರೋ ಬಾರೋ ರಣಧೀರ" ಅಂತ ಕಾಯುತ್ತಿರುತ್ತೇನೆ ಕಾರಣ ನಾನು ಅವುಗಳನ್ನು ಹಿಸ್ಸೆ ಮಾಡಿಸಬೇಕು ಅಂದಿದ್ದೆ. ನೆನಪಿರಬಹುದು ನೆನಪಿಲ್ಲದಿದ್ದರೂ ಪರವಾಗಿಲ್ಲ ಈಗಿನದ್ದು ಅರ್ಥಮಾಡಿಕೊಳ್ಳಬಹುದು ಬಿಡಿ.
ಎರಡು ಕುಟುಂಬಗಳಾದ ಜೇನಿನಲ್ಲಿ ಒಂದು ಹೊಸರಾಣಿ ಆಚೆ ಬರುತ್ತದೆ. ಹೀಗೆ ಬಂದಂತಹ ರಾಣಿ ಜೇನಿಗೆ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರಾ ಗಂಡನ್ನು ಸೇರುವ ಯೋಗ. ಆನಂತರ ತಾನು ಬದುಕುವ ಮೂರುವರ್ಷಗಳ ಕಾಲ ಅವಶ್ಯಕತೆ ಇದ್ದಾಗ ದಿನವೊಂದಕ್ಕೆ ಒಂದೂವರೆ ಸಾವಿರದವರೆಗೂ ಮೊಟ್ಟೆಯನ್ನಿಡುವ ತಾಕತ್ತು ಇದೆ. ಅದೇನೋ ಆಮೇಲಾಯಿತು ಆದರೆ ಅದಕ್ಕೂ ಮೊದಲು ಗಂಡು ಜೇನಿನೊಂದಿಗೆ ಮಿಲನವಾಗಬೇಕಲ್ಲ ಅದರ ಕಥೆ ನೋಡೋಣ.
ಕೋಶದಿಂದ ಹೊರಬಂದ ಮಾರನೆ ದಿನ ರಾಣಿಜೇನು ಮಿಲನಮಹೋತ್ಸವಕ್ಕೆ ಹೊರಟು ನಿಲ್ಲುತ್ತದೆ. ಅದರ ಜತೆ ಒಂದಿಪ್ಪತ್ತು ಗಂಡು ಜೇನುನೊಣಗಳೂ ಹಾಗೂ ಮಿಲನದ ನಂತರ ರಾಣಿಗೆ ಪರತ್ತು ಗೂಡಿನ ದಾರಿ ತೋರಿಸಲು ಇನ್ನೊಂದಿಪ್ಪತ್ತು ಕೆಲಸಗಾರ ಜೇನು ನೊಣಗಳೂ ಹೊರಡುತ್ತವೆ . ಈಗ ಚಂದದ ಹಾರಾಟ ಪ್ರಾರಂಭವಾಗುತ್ತದೆ. ರಾಣಿ ಜೇನುನೊಣ ಮುಂದೆ ಅದರ ಹಿಂದೆ ಗಂಡು ಜೇನುನೊಣ ತದನಂತರ ಕೆಲಸಗಾರ ಜೇನುನೊಣಗಳು. ಬಲಸ್ಯ ಪೃಥ್ವಿ ಎಂಬ ಪ್ರಕೃತಿಯ ನಿಯಮ ಇಲ್ಲಿ ಹಾರಾಟದ ಒಳಗುಟ್ಟು. ರಾಣಿ ಜೇನು ನೊಣ ಗತ್ತಿನೊಂದಿಗೆ ನುಲಿಯುತ್ತಾ ( ಚಳಿ ಚಳಿ ತಾಳೆನು ಈ ಛಳಿಯಾ.. ಅಹಾ ಓಹೋ ಎಂಬ ಹಾಡನ್ನು ನೀವು ಬೇಕಾದರೆ ಕಲ್ಪಿಸಿಕೊಳ್ಳಬಹುದು) ಗುಂಯ್ ಎನ್ನುವ ರಕ್ಕೆಯ ಸಂಗೀತ ದೊಂದಿಗೆ ರಾಣಿ ಜೇನು ನೊಣ ಆಕಾಶದತ್ತ ಏರಲು ಶುರುಮಾಡುತ್ತದೆ. ಈಗ ಗಂಡು ಜೇನು ನೊಣಗಳ ತಾಕತ್ತು ಪರೀಕ್ಷಾ ಕಾಲ. ರಾಣಿ ಆಕಾಶದತ್ತ ಏರುತ್ತಿದ್ದಂತೆ ಒಂದೊಂದೇ ಗಂಡು ಜೇನು ನೊಣಗಳು ಸೋಲನ್ನಪ್ಪತೊಡಗುತ್ತವೆ. ಹೀಗೆ ಮುಂದುವರೆದು ಅಂತಿಮವಾಗಿ ಇಪ್ಪತ್ತರಲ್ಲಿ ಒಬ್ಬ ಹೀರೋ (ನಮ್ಮ ಸಿನೆಮಾ ನಾಯಕನಂತೆ) ಉಳಿಯುತ್ತಾನೆ. ಮಿಕ್ಕೆಲ್ಲಾ ಗಂಡು ಜೇನು ನೊಣಗಳು ಹಿಂದೆ ಬೀಳುತ್ತವೆ. ರಾಣಿಯ ಸೇರುವ ಯೋಗ ಆತನಿಗೆ. ಆದರೆ ಆ ಗಂಡು ಜೇನಿಗೆ ತನ್ನ ಅಂತಿಮಯಾತ್ರೆ ಅದು ಎಂದು ತಿಳಿಯದು. ರಾಣಿಯ ಸೇರಿ ಆತನ ಕೆಲಸ ಮುಗಿದನಂತರ ಅಲ್ಲಿಂದಲೇ ಗಿರಕಿ ಹೊಡೆಯುತ್ತಾ ಧರೆಗುರುಳುತ್ತಾನೆ ಈ ಹೀರೋ. ಮಿಕ್ಕ ಗಂಡು ನೊಣಗಳು ಅವುಕ್ಕೆ ತಿಳಿಯದಂತೆ ಜೀವ ಉಳಿದದ್ದಕ್ಕೆ ಖುಷಿಯಾಗಿ ಹಾಗೂ ರಾಣಿ ಜೇನನ್ನು ಸೇರಲಾಗದ್ದಕ್ಕೆ ಒಣಮುಖ ಮಾಡಿಕೊಂಡು ಕೆಲಸಗಾರ ಜೇನು ನೊಣಗಳೊಂದಿಗೆ ಗೂಡು ಸೇರುತ್ತದೆ. ಅಲ್ಲಿಗೆ ಮಿಲನ ಮಹೋತ್ಸವದ ಕಥೆ ಮುಗಿದಂತೆ. ಸಂತಾನಾಭಿವೃದ್ಧಿಗೆ ತನ್ನ ಜೀವವನ್ನೇ ಬಲಿಕೊಡುವ ಗಂಡಿನ ಕಥೆಯಿದು. ಇಷ್ಟಕ್ಕೆ ರಾಣಿಯ ಹನಿಮೂನ್ ಮುಗಿದರೂ ಒಮ್ಮೊಮ್ಮೆ ವಾಪಾಸು ಗೂಡಿಗೆ ರಾಣಿಜೇನು ಸುರಕ್ಷಿತವಾಗಿ ಮರಳಲಾಗುವುದಿಲ್ಲ. ಅಲ್ಲಿ ಅದಕ್ಕೂ ಹಕ್ಕಿಗಳ ರೂಪದಲ್ಲಿ ಸಾವು ಕಾದಿರುತ್ತದೆ. ಹಲವು ಸಲ ಇಡೀ ಹನಿಮೂನ್ ಪ್ರಸಂಗ ಖೇದಕರ ರೀತಿಯಲ್ಲಿ ಮುಗಿಯುವ ಸಾಧ್ಯತೆ ಇದೆ. ಅದರ ಕಥೆ ಮುಂದೆ ಎಂದಾದರೂ ಬರೆಯುತ್ತೇನೆ. ಒಟ್ಟಿಗೆ ಹೇಳಿದರೆ "ಇವನೇನು ಕೊರತದ ಜನವಪ್ಪಾ ಅಂತ ನೀವು ಬಯ್ದುಕೊಳ್ಳುತ್ತೀರಿ. ಹಾಗಾಗುವುದು ಬೇಡ.
ಅಂತಿಮವಾಗಿ :ಸಧ್ಯ ಮನುಷ್ಯರಾದ ನಮಗೆ ಗಂಡು ಜೇನಿನಗತಿಯನ್ನುಪ್ರಕೃತಿ ಈ ವಿಚಾರದಲ್ಲಿ ಮಾಡಿಲ್ಲ ಹಾಗಾಗಿ ನಾವು ಬಚಾವು ಎಂದಿರಾ..? ಯೆಸ್ ತ್ಯಾಂಕ್ ಗಾಡ್....!
5 comments:
ಶ್ರೀ ಶಂ ಸಾರ್,
ಜೇನು ನೊಣದ ಕತೆ ತುಂಬಾ ಚೆನ್ನಾಗಿದೆ....ಮಾಹಿತಿಯುಕ್ತ ಲೇಖನವೆನಿಸಿತು...ಕೊನೆಯಲ್ಲಿ ರಾಣಿಜೇನು ಹಿಂತಿರುಗುವಾಗ ಹಕ್ಕಿಗಳಿಗೆ ಬಲಿಯಾಗುವುದು ಪ್ರಕೃತಿ ನಿಯಮ...ನೂರಕ್ಕೆ ೫ ಶೇಕಡ ಉಳಿಯುತ್ತವೆ...ಇದು ಏಕೆ ಹೇಳಬೇಕಿನಿಸಿತೆಂದರೆ ನಾನು ಗ್ರೀನ್ ಭಿ ಈಟರ್ ಪಕ್ಷಿಯು ಜೇನು ಹುಳು ಹಿಡಿದು ಗುಳುಂ ಮಾಡುವ ಫೋಟೊ ತೆಗೆದಿದ್ದೇನೆ....ಅದು ನೆನಪಾಯಿತು...
ಆಹಾಂ! ನಿಮಗೆ ಮನಃಪೂರ್ವಕವಾಗಿ ನಗಬೇಕೆ ! ನಡೆದಾಡುವ ಭೂಪಟ ನೋಡಬನ್ನಿ...
http://chaayakannadi.blogspot.com/
ಶಿವು...
"ಸಧ್ಯ ಮನುಷ್ಯರಾದ ನಮಗೆ ಗಂಡು ಜೇನಿನಗತಿಯನ್ನುಪ್ರಕೃತಿ ಈ ವಿಚಾರದಲ್ಲಿ ಮಾಡಿಲ್ಲ ಹಾಗಾಗಿ ನಾವು ಬಚಾವು ಎಂದಿರಾ..?" ಯಾಕಂದ್ರೆ, ಜೇನುಗಳ ಹಾಗೆ ನಮ್ಮಲ್ಲಿ ಒಟ್ಟಿಗೆ ಸಾವಿರಾರು ಮೊಟ್ಟೆ ಯಾರೂ ಇಡೋದಿಲ್ಲ, ಜೊತೆಗೆ ನಮ್ಮಲ್ಲಿ ಸಧ್ಯಕ್ಕೆ ಸಾಕಷ್ಟು ಜನಸಂಖ್ಯೆ ಇರೋದ್ರಿಂದ ಇದು ಸರಿ ಅಲ್ಲ.
ಅಲ್ವೇ?
ಕಟ್ಟೆ ಶಂಕ್ರ
ಇದನ್ನ ಎಲ್ಲೋ ಸ್ವಲ್ಪ ಭಾಗ ಓದಿದಂತೆ ಇದೆಯಲ್ಲಾ ಎಂದು ನಿನ್ನ ಬ್ಲಾಗನ್ನು ಹುಡುಕಿದೆ ಇದು ಸಿಕ್ಕಿತು... ಸ್ವಲ್ಪ ಬರೆದದ್ದೇ ಬರೆದಿದ್ದೀಯ ರಾಘಣ್ಣ.. ನಿಂದೇ ಲೇಖನ ಆಗಿದ್ದಕ್ಕೆ copy rights ಪ್ರಾಬ್ಲಂ ಬತಲೇ!ಮತ್ತೆ (ಜೇನಿನ)ಮಿಲನ ಮಹೋತ್ಸವದ ಬಗ್ಗೆ ಡೀಟೇಲಾಗಿ ಬರೆದದ್ದಕ್ಕೆ, ಒಳ್ಳೆಯ ಮಾಹಿತಿಗೊಂದು ಧನ್ಯವಾದಗಳು..
upayukta mahiti sir..........
ಶ್ರೀ.ಶ೦,
ಲೇಖನ ಚೆನ್ನಾಗಿದೆ. ಮನುಷ್ಯರಿಗೆ ಈ ಪ್ರಕೃತಿ ನಿಯಮ ಅನ್ವಯವಾಗುವ೦ತಿದ್ದರೆ ಬಹುಶಹ ಜನಸ೦ಖ್ಯೆ ಇಷ್ಟು ಏರುಗತಿಯಲ್ಲಿ ಇರುತ್ತಿರಲಿಲ್ಲವೇನೋ ??
Post a Comment