Sunday, February 1, 2009

ಶಿವಪ್ಪ ಕಾಯೋ ತಂದೆ... ಮೂರು ಲೋಕ ಸ್ವಾಮಿ ದೇವ

ಹಸಿವೆಯನ್ನು ತಾಳಲಾರೆ ಕಾಪಾಡೆಯಾ..ಶಿವನೇ ಕಾಪಾಡೆಯಾ, ಹರನೇ... ಹೀಗೆ ಆ ಹಸಿವೆಯ ಹಳೇ ಹಾಡು ಮುಂದುವರೆಯುತ್ತದೆ. ನನಗೆ ಇಲ್ಲಿ ಬರೆಯಲು ಹಾಡು ಮುಂದೆ ಬರುವುದಿಲ್ಲ. ಇನ್ನು ನಮ್ಮ ಯಜ್ಞೇಶ್(http://nammasangraha.blogspot.com/) ಮನಸ್ಸು ಮಾಡಿದರೆ ಸಂಪೂರ್ಣ ಹಾಡು ಸಿಗಬಹುದು. ಆಯಿತು ಅದು ಹಾಡಿನ ಕತೆ ಈಗ ನನ್ನ ವರಾತ ಆ ಹಾಡಿಗೆ ಕಾರಣವಾದ ಹಸಿವೆಯ ಕುರಿತು ಅದೇನೆಂದು ನೋಡೋಣ.
ಒಂದಾನೊಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ( ರಾಜ್ಯ ಎಂದಮೇಲೆ ರಾಜ ಇರಲೇ ಬೇಕು ಅಂದಿರಾ..?) ಆತನಿಗೆ ಮುದ್ದು ಕುವರನೊಬ್ಬ ಇದ್ದ. ಒಬ್ಬನೇ ಒಬ್ಬ ಏಕಮಾತ್ರ..! ಪುತ್ರನಾದ್ದರಿಂದ ರಾಜ ಮಗನಿಗೆ ಕಷ್ಟ ಕಾರ್ಪಣ್ಯಗಳು ಎರವಾಗದಂತೆ ಬೆಳಸುತ್ತಿದ್ದ. ಇಂತಿಪ್ಪ ದಿವಸಗಳಲ್ಲಿ ಒಂದು ದಿನ ಬೆಳ್ಳಂಬೆಳಗ್ಗೆ ರಾಜಕುಮಾರ ನನ್ನ ಹೊಟ್ಟೆಯಲ್ಲಿ ಏನೋ ಆಗುತ್ತಿದೆ ಎಂದು ಬೊಬ್ಬಿಡಲು ಪ್ರಾರಂಬಿಸಿದ. ರಾಜವೈದ್ಯರು ತರಾತುರಿಯಲ್ಲಿ ಬಂದರು ಪರೀಕ್ಷಿಸಿದರು.ಪರಿಣಾಮ ಇಲ್ಲ. ರಾಜ ಜ್ಯೋತಿಷಿಗಳು ಬಂದರು ಇಲ್ಲ ಪರಿಣಾಮ. ರಾಜಧಾನಿಯಲ್ಲಿರುವ ಇತರೇ ವೈದ್ಯರನ್ನು ಕರೆಸಲಾಯಿತು . ಇಲ್ಲ ನಿಲ್ಲಲಿಲ್ಲ ರಾಜಕುವರನ ಬೊಬ್ಬೆ. ಕ್ಷಣಕ್ಷಣಕ್ಕೂ ಹೊಟ್ಟೆ ಹಿಡಿದುಕೊಂಡು ಕೂಗುವ ಪರಿ ಹೆಚ್ಚಾಗುತ್ತಾ ಹೋಯಿತು. ಜನ ಸೇರಿದರು ಜಾತ್ರೆ ಸೇರಿತು ರಾಜಕುಮಾರನ ಬೊಬ್ಬೆ ಶಕ್ತಿಯಿಲ್ಲದೆ ಕ್ಷೀಣಿಸತೊಡಗಿತು. ಸೇವಕ ಸೇವಕಿಯರು ಗುಸುಗುಸು ಪಿಸ ಅಂತ ಮಾತಾಡತೊಡಗಿದರು. ಈ ಗುಸುಗುಸು ಪಿಸಪಿಸ ಮಾಡುತ್ತಿದ್ದ ಸೇವಕರ ನಡುವೆ ಜಾಗ ಮಾಡಿಕೊಂಡು ರಾಜಕುಮಾರನಿಗೆ ಬೆಳಗಿನ ತಿಂಡಿಕೊಡುವ ಸೇವಕ ರೂಮು ಸೇರಿ ಬಾಗಿಲು ಹಾಕಿಕೊಂಡ. ಸ್ವಲ್ಪ ಹೊತ್ತಿನ ನಂತರ ರಾಜಕುವರ ಖುಶ್ ಆಗಿ ನಳನಳಿಸತೊಡಗಿದ. ಆ ಸೇವಕ ಮಾಡಿದ್ದಷ್ಟೇ ಅಂದು ಎಂದಿನ ಸಮಯಕ್ಕೆ ಕುವರನಿಗೆ ತಿಂಡಿ(ರಾಜಕುವರ ನಾದ್ದರಿಂದ ಉಪಹಾರ ಶಭ್ದ ಸರಿ) ಕೊಡುವುದನ್ನು ಮರೆತಿದ್ದ. ಅದು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿತ್ತು. ಆ ದಿವಸದ ವರೆಗೂ ಹಸಿವು ಎಂದರೆ ಏನು ? ಎಂದು ತಿಳಿಯದಂತೆ ಬೆಳೆದಿದ್ದ ರಾಜಕುವರ ಹಸಿವಿನ ಅವಸ್ಥೆಯ ಹೊಸ ಅನುಭವಕ್ಕೆ ಬೆದರಿ ಬೊಬ್ಬೆ ಹಾಕಿದ್ದ.
ಇದು ಯಾರೋ ಹಸಿವಿನ ಬಗ್ಗೆ ಸೃಷ್ಟಿಸಿದ ಕತೆ. ಅದನ್ನು ನೇರವಾಗಿ ಕದ್ದು ನಿಮಗೆ ಹೇಳಿದ್ದೇನೆ. ನಿಜ ರಾಜಕುವರನ ಕತೆ ಹೀಗಾಯಿತು ಕಾರಣ ಆತನಿಗೆ ಹಸಿವಿನ ಅರಿವೇ ಇರಲಿಲ್ಲ. ನಮಗೆ ನಿಮಗೆ ಹಾಗಲ್ಲ ಹಸಿವಿನ ಅನುಭವ ಇದೆ ಆದರೆ ಆಹಾರ ಸಿಗದ ಸಿಗಲಾರದ ರಣ ಹಸಿವಿನ ಅರಿವು ಇಲ್ಲ. ಅದು ತುಂಬಾ ಕಷ್ಟಕರವಾದ್ದು. ಸೋಮಾಲಿಯಾದಲ್ಲಿ ಚಕ್ಕಳ ಹಿಡಿದ ಜನರ ಪೋಟೋಗಳನ್ನು ನೀವು ನೋಡಿರಬಹುದು. ಹಸಿವಿನಿಂದ ಅಲ್ಲಿ ಜನ ಸಾಯುತ್ತಿರುತ್ತಾರಂತೆ. ನಮ್ಮ ದೇಶದಲ್ಲಿ ಹಾಗಲ್ಲ ಸಧ್ಯ. ಹಸಿ ಹಸಿ ಬಡತನ ಇರಬಹುದು ಸ್ಲಂ ಡಾಗ್ ಸಿನೆಮಾದ ಸನ್ನಿವೇಶ ಇರಬಹುದು ಕೊಳಕುತನ ಇರಬಹುದು ಆದರೆ ಆಹಾರವೇ ಇಲ್ಲದೆ ಸಾಯುತ್ತಿರುವ ಮನುಷ್ಯರ ಸಂಖ್ಯೆ ಇಲ್ಲವೇ ಇಲ್ಲ ಎನ್ನಬಹುದು. ಇದು ಸಧ್ಯದ ಸ್ಥಿತಿ. ಇದರ ಪ್ರಮುಖ ಹಿನ್ನೆಲೆ ನಾವು ಬೆಳೆದು ಬಂದ ರೀತಿ. ಇಲ್ಲಿ ಕಠೋರತನದ ನಡುವೆ ಮಾನವೀಯತೆ ಇದೆ. ಕಟುಕತನದ ನಡುವೆಯೂ ಹೃದಯ ವೈಶಾಲ್ಯವಿದೆ. ಕರ್ಮಠರಲ್ಲಿಯೂ ಕನಿಕರವಿದೆ. ದುಷ್ಟರಲ್ಲಿಯೂ ಪ್ರೀತಿ ಇದೆ. ಅದಕ್ಕೊಂದು ನಮ್ಮ ಧರ್ಮ ರೀತಿ ರಿವಾಜು ನಡೆದು ಬಂದ ಪಾಪ ಪುಣ್ಯ ಬಿತ್ತುವ ಬೀಜ ಮಂತ್ರ ಇದೆ. ಅವುಗಳು ನಮಗೆ ಅರಿವಿಗೆ ಬಾರದಂತೆ ನಮ್ಮ ಆಳದಲ್ಲಿ ಹುದುಗಿ ನಮಗೂ ಹಾಗೂ ನಮ್ಮ ಜತೆಯಲ್ಲಿ ಸಹಜೀವನ ನಡೆಸುತ್ತಿರುವವ ಪ್ರಾಣಿ ಪಕ್ಷಿಗಲಾದಿಯಾಗಿ ಎಲ್ಲರಿಗೂ ರಣ ಹಸಿವು ಆಗದಂತೆ ಕಾಪಾಡುತ್ತದೆ. ಇರಲಿ ಆ ಶಕ್ತಿಯ ಮಹತ್ವ ತಿಳಿಯಲು ಆಧ್ಯಾತ್ಮ ಚಿಂತಕರೇ ಬೇಕು ಹಾಗಾಗಿ ಅದಬಿಟ್ಟು ಈಗ ನಮ್ಮ ಮಟ್ಟದ ಯೋಚನೆಗೆ ಹೊರಳೋಣ.
ಹೀಗೆ ಮನುಷ್ಯನ ಹುಟ್ಟಿನೊಂದಿಗೆ ಹುಟ್ಟಿ ಸಾವಿನವರೆಗೂ ಕಾಡುವ ಈ ಆಹಾರದ ಹೊಟ್ಟೆ ಹಸಿವು ದಿನನಿತ್ಯ ನಿಮಗೆ ಒಂದು ವಿಷಯವೇ ಅಲ್ಲ ಅದು ನೆನಪಾಗುತ್ತಲೇ ಇಲ್ಲ ಕಾಟ ಕೊಡುತ್ತಲೇ ಇಲ್ಲ ಅದು ಸಮಸ್ಯಯೇ ಅಲ್ಲ ಅಂತಿದ್ದರೆ ನೀವು ಸುಖದಲ್ಲಿ ತೇಲುತ್ತಿದ್ದಿರಿ ಅಂಬೋ ಅರ್ಥ ಅಂಡರ್ ಸ್ಟುಡ್. ಇಷ್ಟಿದ್ದಮೇಲೆ ಒಂದೇ ಒಂದು ದಿವಸ ನೀವು ಆ ರಣ ಹಸಿವನ್ನು ಅನುಭವಿಸಬೇಕು. ಸಾಬರು ರಂಜಾನ್ ಉಪವಾಸ ಮಾಡುತ್ತಾರಲ್ಲ ಹಾಗೆ. ಬೆಳಿಗ್ಗೆ ಯಿಂದ ಹಗಲು ಮುಗಿಯೋವರಗೆ ಒಂದು ದಿನ ನಿರಾಹಾರ ದ ಉಪವಾಸ. ಹೀಗೆ ಯಾಕೆ ಹೇಳುತ್ತಿದ್ದೀನಿ ಅಂದರೆ ಎಲ್ಲಾ ಕಡೆ ಉಪವಾಸ ಚಾಲ್ತಿಯಲ್ಲಿದೆ . ಹಲ ಜನರು ವಾರಕ್ಕೊಮ್ಮೆ ಮಾಡುತ್ತಾರೆ. ಅವರ ಲೆಕ್ಕದಲ್ಲಿ ಉಪವಾಸ ಎಂದರೆ ಬೆಳಿಗ್ಗೆ ನಾಲ್ಕು ಚಪಾತಿ. ಮಧ್ಯಾಹ್ನ ಗೋದಿ ಅನ್ನ ರಾತ್ರಿ ಸೇಬು ಹಣ್ಣು ಹಾಲು. ಈಗ ನಾನು ಹೇಳುತ್ತಿರುವ ಉಪವಾಸ ಅದಲ್ಲ. ಹಾಗಾಗಿಯೇ ನಿರಾಹಾರದ ಉಪವಾಸ ಎಂದಿರುವುದು. ಅಂತಹ ಒಂದು ಹಗಲಿನ ನಿರಾಹಾರ ಉಪವಾಸ ಧೈರ್ಯದಿಂದ ನೀವು ಕೈಗೊಂಡಲ್ಲಿ(ಬಿ.ಪಿ. ಷುಗರ್ ಇದ್ದರೆ ಧೈರ್ಯ ಮಾಡುವ ಕೆಲಸ ಮಾಡಬೇಡಿ) ಅದರ ಮಜ ಮಾರನೇ ದಿವಸ ನಿಮಗೆ ಅರಿವಾಗುತ್ತದೆ. ಅದನ್ನು ಇಲ್ಲಿ ನಾನು ಹೇಳಿ ಪ್ರಯೋಜನ ಇಲ್ಲ. ಹಸಿವಿನ ಅನುಭವ ಆಹಾರದ ಮಹತ್ವ ತಿಳಿದು ಮಾರನೇ ದಿನ ಹೊಸ ಪ್ರಪಂಚ... ಹೊಸ ಗಾಳಿ... ಹೊಸ ಪ್ರಫುಲ್ಲ ಮನಸ್ಸು... ಆಹಾ.... ಹಾಗೂ ಆ ಶಿವಪ್ಪ ಕಾಯೋ ತಂದೆ ಹಾಡಿನ ಒಳ ಮರ್ಮ ಎಲ್ಲಾ ನಿಮಗೆ ಸ್ವಂತ.
ಕೊನೆಯದಾಗಿ: ಸಾಬರಲ್ಲಿ ಯಡ್ದಾದಿಡ್ಡಿ ಆತ್ಮಸ್ಥೈರ್ಯಕ್ಕೆ ರಂಜಾನ್ ತಿಂಗಳ ಉಪವಾಸವೂ ಒಂದು ಕಾರಣ.

1 comment:

shivu said...

ಸರ್,

ಹಸಿವಿನ ಕತೆ ಚೆನ್ನಾಗಿದೆ.....

ಮತ್ತೆ ಹಸುವಿನ ಬಗ್ಗೆ ಕೂಡ ಚೆನ್ನಾಗಿ ಬರೆದಿದ್ದೀರಿ....