Tuesday, March 3, 2009

ಹೆಸರು ಹೆಸರೆಂದು.....

ಹೆಸರು ಹೆಸರೆಂದು ನೀಂ ಬಸವುಳಿವುದೇಕಯ್ಯ.?
ಕಸದೊಳಗೆ ಕಸವಾಗಿ ಹೋಹನಲೆ ನೀನು?
ಮುಸಕಲೀ ಧರೆಯ ಮರೆವೆನ್ನನ್,ಎನ್ನುತ ಬೇಡು/
ಮಿಸುಕದಿರು ಮಣ್ಣಿನಲಿ ಮಂಕುತಿಮ್ಮ//
ಎಂದು ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ.ಜಿ ಯವರು ಹೆಸರಿನ ಹಿಂದೆ ಬೀಳುವವರ ಕುರಿತು, ಮಣ್ಣಲ್ಲಿ ಮಣ್ಣಾಗಿ ಹೋಗುವ ನಮಗೇಕೆ ಅದರ ಚಿಂತೆ ಎಂಬರ್ಥದ ಅದ್ಭುತವಾದ ಕಗ್ಗವನ್ನು ರಚಿಸಿದ್ದಾರೆ. ಜನರಿಗೆ ಹೆಸರಿನ ವ್ಯಾಮೋಹ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಆ ಮಹಾತ್ಮರೂ ಕಗ್ಗದ ಪುಸ್ತಕದಲ್ಲಿ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ ಎಂದು ಹೇಳಲು ಮರೆತಿಲ್ಲವೆಂಬುದು ಸತ್ಯ. ಅದು ಮುದ್ರಣಕಾರರ ಆಸಕ್ತಿಯೋ,ಪ್ರಕಾಶಕರ ಹಿತಾಸಕ್ತಿಯೋ? ಮುಂತಾದ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿಲ್ಲದ್ದರಿಂದ ಡಿ.ವಿ.ಜಿಯಂತಹ ಮಹಾತ್ಮರ ವಿಚಾರದ ಗೊಡವೆ ನಮಗೆ ಬೇಡ ಬಿಡಿ. ಆದರು ಹೆಸರಿನ ವ್ಯಾಮೋಹ ಬೇಡ ಅಂತ ಬಾಯಿಮಾತಲ್ಲಿ ಹೇಳುವ ಹಲವಾರು ಜನರನ್ನು ನಾವು ದಿನನಿತ್ಯ ಭೇಟಿಯಾಗುತ್ತಲೇ ಇರುತ್ತೇವೆ. ಹಾಗೆ ಹೇಳುತ್ತಾರೆ ಎಂದಾಕ್ಷಣ ಅವರಿಗೆ ಹೆಸರು ಗಳಿಸುವ ಚಟದ ಬಗ್ಗೆ ಆಸಕ್ತಿ ಇಲ್ಲಾ ಎಂದೆಣಿಸದಿರಿ ಅವರೂ ಒಂದಲ್ಲಾ ಒಂದು ರೀತಿಯಲ್ಲಿ ಹೆಸರಿಗಾಗಿಯೇ ಒದ್ದಾಡುತ್ತಿರುತ್ತಾರೆ ಎಂದರ್ಥ.
ಹುಟ್ಟಿದ ೧೧ ನೇ ದಿನ ನಾಮಕರಣ ಎಂಬ ಕಾರ್ಯಕ್ರಮದ ಮೂಲಕ ಹೆಗಲನ್ನೇರುವ ಈ ಬೇತಾಳ ಜೀವನಪೂರ್ತಿ ಕುಂತರೂ ನಿಂತರೂ ಕೊನೆಗೆ ಆನಂದದಿಂದ ಸವಿನಿದ್ದೆಯಲ್ಲಿದ್ದಾಗಲೂ ಕಾಡುತ್ತಿರುತ್ತದೆ. ಮುಖಾರವಿಂದದ ಮೂಲಕ ಪ್ರಸ್ತುತಪಡುವ ನಾಮವಳಿ ಅವರವರ ಮುಖ ಲಕ್ಷಣದ ಮೂಲಕ ಕೆಲವರಿಗೆ ಸಂತಸ ಮೂಡಿಸಿದರೆ ಹಲವರಿಗೆ ಸಿಟ್ಟುತರಿಸುತ್ತದೆ. ಹೆಸರಿನಿಂದ ಆಗುವ ಅನಾಹುತಗಳಿಂದ ಒಮ್ಮೊಮ್ಮೆ ಹೆಸರೇ ಇಲ್ಲದಿದ್ದರೆ ಎಷ್ಟು ಆರಾಮು ಅಂತ ಅನ್ನಿಸುವುದೂ ಉಂಟು. ಆದರೆ ಅವೆಲ್ಲಾ ಅನಿಸಿಕೆಗಷ್ಟೆ ಸೀಮಿತ ಎಂಬುದು ನಿತ್ಯನೂತನ ಸತ್ಯ. ಹೆಸರಿನ ಹುಚ್ಚು ಯಾರಿಗೆ ಅತಿ ಹೆಚ್ಚು? ಎಂಬ ಪ್ರಶ್ನೆಗೆ ಬರಹಗಾರರು, ಎಂದು ಹೊಸತಾಗಿ ಹೇಳುವ ಅಗತ್ಯವೇ ಇಲ್ಲ. ಪತ್ರಿಕೆಗಳಲ್ಲಿ ಬರೆಯುವ ಲೇಖಕ ಮಹಾಶಯರಿಗಂತೂ ಪ್ರಕಟವಾಗುವ ಲೇಖನಕ್ಕಿಂತ ಅಲ್ಲಿ ಮೂಡಿ ಬರುವ ತಮ್ಮ ಹೆಸರಿನದ್ದೇ ಚಿಂತೆ. ಹಿಂದೆಲ್ಲಾ(ಈಗಲೂ ಕೆಲವರಿದ್ದಾರೆ) ತಮ್ಮ ನಿಜ ನಾಮಧೇಯವನ್ನು ಮರೆಮಾಚಿ ಗುಪ್ತನಾಮದಲ್ಲಿ ಬರೆಯುವ ಹಲವಾರು ಜನ ಲೇಖಕರು ಸಿಗುತ್ತಿದ್ದರು.ನಾವು ಸಣ್ಣವರಿದ್ದಾಗ ಸುಧಾದಲ್ಲಿನ ನೀವು ಕೇಳಿದಿರಿ ಅಂಕಣದಲ್ಲಿ ಓದುಗರ ಪ್ರಶ್ನೆಗೆ ಉತ್ತರಿಸುವ ಚಿತ್ತಾ, ಉತ್ತರಮುಖಿ ಎಂಬ ಮಹಾಶಯರು ಯಾರು?,ಅವರ ನಿಜ ನಾಮಧೇಯವೇನು?. ಎಂದು ಪತ್ತೆ ಮಾಡಲಾಗದೆ ನಾವು ಒದ್ದಾಡುತ್ತಿದ್ದೆವು. ಅವರ ನಿಜವಾದ ಹೆಸರನ್ನು ಹೇಳಿದರೆ ಅವರು ನಿಧನರಾಗಿಬಿಡುತ್ತಾರಂತೆ ಎಂಬ ದಂತಕಥೆಗಳೂ ನಮ್ಮನ್ನು ಇನ್ನಷ್ಟು ಕುತೂಹಲಕ್ಕೆ ಎಡೆಮಾಡಿಕೊಡುತ್ತಿತ್ತು.ದಾಸಯ್ಯ ಎನ್ನುವ ಹೆಸರಿನಲ್ಲಿ ಬರೆಯುವವರು ಶಂಖನಾದ ಸಿನೆಮಾದ ಹೀರೋನ ತರಹದ ವ್ಯಕ್ತಿಯಾಗಿರಬಹುದೆ ಎಂಬ ಗುಮಾನಿ ನಮಗೆ ಬಹಳ ಕಾಡುತ್ತಿತ್ತು.ಹೀಗೆ ನಿಜನಾಮಧೇಯ ಮರೆಮಾಚಿ ಓದುಗರನ್ನು ಕಾಡುತ್ತಿದ್ದ ಲೇಖಕರ ಮೇಲೆ ಸಿಟ್ಟು ಬಂದರೂ ಅವರ ಬರವಣಿಗೆಯ ಶೈಲಿ ಸಿಟ್ಟನ್ನು ತಣಿಸಿ ಯಾರಿರಬಹುದೀತ? ಎಂಬ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗುತ್ತಿತ್ತು.ಕಾಲಾನಂತರ ಗುಪ್ತನಾಮದ ಲೇಖಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿತು. ಆನಂತರ ಕಥೆ ಕವನಗಳ ಜತೆ ತಮ್ಮ ಹೆಸರನ್ನು ಮಾತ್ರಾ ಬರೆಯುವ ಕಥಾ ಲೇಖಕರು ಶುರುವಾದರು. ನಂತರ ಹೆಸರಿನ ಮುಂದೆ ಅಡ್ಡ ಹೆಸರು ಸೇರಿತು. ಆನಂತರ ಊರಿನ ಹೆಸರು ಸೇರಿ ಕಥೆ ಕವನಗಳಿಗಿಂತ ಬರೆಯುವ ಲೇಖಕರ ಹೆಸರೇ ಉದ್ದವಾಗತೊಡಗಿತು. ಲೇಖಕಿಯೊಬ್ಬರು ಅಪರೂಪಕ್ಕೊಂದು ಸುಂದರ ಕವನ ಬರೆಯುತ್ತಿದ್ದರು. ಕವನದಲ್ಲಿ ಆಕೆ ಗಟ್ಟಿಗಿತ್ತಿ ಆದರೆ ಕವನದ ಕೆಳಗೆ ನಮೂದಿಸುತ್ತಿದ್ದುದು ಮೊದಲು ತನ್ನ ಹೆಸರು ನಂತರ ಯಜಮಾನರದ್ದು ಆಮೇಲೆ ತನ್ನ ಹುಟ್ಟೂರು ಆಮೇಲೆ ವಾಸವಾಗಿದ್ದ ಊರನ್ನೂ ಸೇರಿಸುತ್ತಿದ್ದರು . ಅದು ಹೇಗಿತ್ತೆಂದರೆ ಮಲ್ಲಿಗೆ ಹೂವಿನ ದಂಡೆಗಿಂತ ದಾರ ಉದ್ದವಾದರೆ ಹೇಗಿರುತ್ತಿತ್ತೋ ಹಾಗಿತ್ತು. ಇರಲಿ ಮುದ್ರಿಸುವವರಿಗೆ ಚಿಂತೆಯಿಲ್ಲ ನಮಗೇಕೆ ಬಿಡಿ. ಚಿಕ್ಕಂದಿನಲ್ಲಿ ನಮಗೆ ಹಲವಾರು ಲೆಖಕರ ಹೆಸರುಗಳು ಬಹಳ ತಲೆ ಕೆಡಿಸುತ್ತಿದ್ದವು ಅವುಗಳಲ್ಲಿ ಪ್ರಮುಖವಾಗಿದ್ದು(ಇವತ್ತಿಗೂ ಅದೇ ಸಮಸ್ಯೆ ಇದೆ ಎನ್ನಿ) ಕೆ.ಟಿ.ಗಟ್ಟಿ.ರಿಗ್ರೇಟ್ ಅಯ್ಯರ್, ಮುಂತಾದವುಗಳು. ಗಟ್ಟಿ ಎನ್ನುವುದು ಲೇಖಕರ ಹೆಸರೊ?, ಅಥವಾ ಕೆ.ಟಿ.ಗಳಲ್ಲಿ ಅವರ ಹೆಸರು ಅಡಗಿದೆಯೋ ಎನ್ನುವುದು ಇವತ್ತಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ರಿಗ್ರೇಟ್ ಅಯ್ಯರ್, ಇದೇನು ಹೆಸರೊ? ಮನೆತನದ ಹೆಸರೋ? ಎಂದು ಕೆಲಕಾಲ ಗೊಂದಲದಲ್ಲಿತ್ತು. ಆನಂತರ ನಮ್ಮ ಗುಂಪಿನಲ್ಲಿ ಒಬ್ಬ ಪತ್ತೆ ಮಾಡಿದ, ಅವರ ನಿಜನಾಮಧೇಯ ಬೇರೆಯಂತೆ, ಅವರು ಪತ್ರಿಕೆಗಳಿಂದ ವಿಷಾದ ಪತ್ರ ಸ್ವೀಕರಿಸಿ ಸುಸ್ತಾಗಿ ಅಲ್ಲಿನ ವಿಷಾದವನ್ನು ಆಂಗ್ಲೀಕರಿಸಿ ತಮ್ಮ ಸರ್‌ನೇಮ್ ಜೊತೆ ಸೇರಿಸಿಕೊಂಡು ಬರೆಯಲು ಶುರುವಿಟ್ಟು ಯಶಸ್ವಿಯಾದರಂತೆ. ಕೊನೆಗೂ ಹಠ ಬಿಡದೆ ಬರೆಯುವುದನ್ನು ಮುಂದುವರೆಸಿಕೊಂಡು ಈಗ ಪ್ರಸಿದ್ಧ ಬರಹಗಾರರಂತೆ ಎಂಬ ಅಂತೆಕಂತೆಗಳ ವರದಿ ತಂದ. ಅದೇ ನಿಜವೋ ಆಥವಾ ಸುಳ್ಳೋ ಪ್ರಾಮಾಣಿಕರಿಸಲು ನಮ್ಮ ಬಳಿ ಯಾವ ಸಾಕ್ಷ್ಯಾಧಾರಗಳು ಇಲ್ಲದ್ದರಿಂದ ಮತ್ತು ನಮಗೆ ನಿಜವಾದ ಅರ್ಥ ಗೊತ್ತಿಲ್ಲದ್ದರಿಂದ ಒಪ್ಪಿಕೊಳ್ಳಲಾಯಿತು.
ವಿಷಾದ ಪತ್ರ ಎಂದಾಕ್ಷಣ ನನ್ನ ಮತ್ತೊಬ್ಬ ಸ್ನೇಹಿತರ ಅವಸ್ಥೆ ನೆನಪಾಗುತ್ತದೆ. ಅವರಿಗೆ ಏನಕೇನ ಪ್ರಕಾರೇಣ ತನ್ನ ಹೆಸರಿನಲ್ಲಿ ಒಂದು ಲೇಖನ ಪ್ರಕಟೋಭವ ಎಂಬ ಮಹದಾಸೆ. ಆದರೆ ಪತ್ರಿಕೆಗಳಲ್ಲಿನ ಸಂಪಾದಕ ಮಂಡಳಿಯವರು ವಿಷಾದ ಪತ್ರವನ್ನು ಪತ್ರಿಕೆಗಳಿಗಿಂತ ಜಾಸ್ತಿ ಮುದ್ರಿಸುತ್ತಾರೇನೋ ಎಂಬುದು ಇವರ ಸಂಶಯ. ಕಾರಣ ಇವರ ಲೇಖನ ಅಂಚೆಗೆ ಹಾಕಿ ವಾರದೊಳಗೆ ರಬ್ಬರ್ ಚೆಂಡಿನ ತರಹ ವಿಷಾದ ಪತ್ರದೊಡನೆ ವಾಪಾಸು ಬರುತ್ತಿತ್ತು. ಇವರೋ ಹಠ ಬಿಡದ ತ್ರಿವಿಕ್ರಮ, ಅಂತೂ ಕೊನೆಗೊಂದು ದಿನ ವಾರಪತ್ರಿಕೆಯೊಂದರಲ್ಲಿ ಇವರು ಬರೆದ ಸಣ್ಣಕಥೆಯೊಂದು ಸ್ವೀಕೃತಿಯಾದ ಪತ್ರ ಬಂತು. ಪ್ರಕಟಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ಇವರಿಗೆ ಎಲ್ಲಿಲ್ಲದ ತಳಮಳ,ಇವರ ಕಥೆಯನ್ನು ಹೊತ್ತ ಪತ್ರಿಕೆಯೂ ಬಂದಾಯಿತು ಆದರೆ ಎಂಥಾ ದುರ್ದೈವ ನೋಡಿ ಪಾಪ ಇವರ ಹೆಸರು ಮಾತ್ರಾ ಕೈತಪ್ಪಿನಿಂದ ಅಚ್ಚಾಗದೆ ಬಿಟ್ಟುಹೋಗಿತ್ತು. ಆದರೂ ಅವರು ತೀರಾ ಹತಾಶರಾಗದೆ ಕಪ್ಪು ಇಂಕಿನಲ್ಲಿ ದುಂಡಗೆ ತಮ್ಮ ಹೆಸರನ್ನು ಕೆಳಗೆ ಬರೆದು ಪತ್ರಿಕೆಗಳನ್ನು ತಮ್ಮ ಇಷ್ಟಮಿತ್ರರಿಗೆ ಹಂಚಿದರೆನ್ನಿ. ಅವರನ್ನು ನಾವೆಲ್ಲಾ ನಿಮ್ಮ ಹೆಸರನ್ನು ಕೋರ್ಟಿನಲ್ಲಿ ಯಂಡಮೂರಿ ವೀರೇಂದ್ರನಾಥ್ ಎಂದು ಬದಲಾಯಿಸಿಕೊಳ್ಳಿ, ಆಗ ಸಮಸ್ಯೆ ತನ್ನಿಂದತಾನೆ ಬಗೆ ಹರಿಯುತ್ತದಲ್ಲಾ ಎಂದು ಕಿಚಾಯಿಸುತ್ತಿದ್ದೆವು.ಪಾಪ ಆನಂತರ ಅವರು ಬರವಣಿಗೆ ನನ್ನ ಹಣೆಯಮೇಲೆ ಬರೆದಿಲ್ಲಾ ಎಂಬ ತೀರ್ಮಾನಕ್ಕೆ ಬಂದವರಂತೆ ಆವತ್ತಿನಿಂದ ಬರೆಯುವುದನ್ನೇ ಬಿಟ್ಟರು ಎಂಬುದು ಕುಚೋದ್ಯವಂತೂ ಖಂಡಿತಾ ಅಲ್ಲ.
ಬಹಳ ಹಿಂದೆ ಡಾ ಅನುಪಮ ನಿರಂಜನ ಮಹಿಳೆಯರ ಹೆಸರಿನ ಕುರಿತಾಗಿ ಒಂದು ಲೇಖನ ಬರೆದಿದ್ದರು. ಲೇಖನದ ಪ್ರಮುಖವಾದ ವಿಷಯ ಮಹಿಳೆಯರು ತಮ್ಮ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದರ ಕುರಿತಾಗಿತ್ತು.ತಾವು ಪಡುವ ಶ್ರಮಕ್ಕೆ ಗಂಡಸರಿಗೇಕೆ ಪುಕ್ಕಟ್ಟೆ ಪ್ರಚಾರ ನೀಡಬೇಕು ಎಂಬುದು ಅವರ ಮೂಲ ಪ್ರಶ್ನೆ. ಲೇಖನ ಉತ್ತಮ ವಿಚಾರಗಳನ್ನು ಒಳಗೊಂಡಿತ್ತು. ಆದರೆ ಅವರ ಸಮರ್ಥನೆಗಳು ಅವರಿಂದಲೇ ವಿಫಲವಾಗಿತ್ತು. ಕಾರಣ ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ಅವರು ಕೂಡ ತಮ್ಮ ಹೆಸರಿನ ಮುಂದೆ ನಿರಂಜನರ ಹೆಸರನ್ನು ಸೇರಿಸಿದ್ದರು. ಅದು ಕಾಕತಾಳೀಯವಿರಬಹುದು ಬಿಡಿ. ಸಾಮಾನ್ಯವಾಗಿ ವ್ಯಕ್ತಿಗಳ ಹೆಸರನ್ನು ಕೇಳಿದಾಕ್ಷಣ ನಮ್ಮ ಮನಸ್ಸು ಅವರ ಮುಖ ಹೀಗಿರಬಹುದೆಂಬ ಅಸ್ಪಷ್ಟವಾದ ತೀರ್ಮಾನಕ್ಕೆ ಬಂದುಬಿಡುತ್ತದೆ. ನಿಜವಾದ ಮುಖಕ್ಕೂ ನಮ್ಮ ಕಲ್ಪನೆಯ ಮುಖಕ್ಕೂ ಸಂಬಂಧವೇ ಇಲ್ಲದಿರಬಹುದು, ಆದರೂ ಕಲ್ಪನೆ ಮೂಡಿಯೇ ಮೂಡುತ್ತದೆ. ಕೆಲವರು ಆ ಕಲ್ಪನೆಗೂ ತ್ರಾಸು ನೀಡುವಂತಹ ಹೆಸರನ್ನಿಟ್ಟುಕೊಳ್ಳುತ್ತಾರೆ. ನಮ್ಮ ಎಳೆವೆಯಲ್ಲಿ ಕರ್ವಾಲೋ ಕಥೆಗಾರ ಪೂರ್ಣ ಚಂದ್ರ ತೇಜಸ್ವಿಯವರ ಹೆಸರೇ ನಮಗೆ ಖುಷಿ ಕೊಡುತ್ತಿತ್ತು. ಅದರ ಜತೆಗೆ ಗೊಂದಲವನ್ನೂ ತಂದಿಡುತ್ತಿತ್ತು. ಮೂರು ಹೆಸರನ್ನು ಸೇರಿಸಿ ಒಂದು ಹೆಸರು ಮಾಡಿದಂತಿರುವ ಅವರ ನಾಮಾವಳಿ ನಮಗೆ ವಿಚಿತ್ರ ಅನುಭವ ತರುತ್ತಿತ್ತು. ಒಂದೊಂದು ಹೆಸರು ಬೇರೆಬೇರೆಯಾಗಿ ಕೇಳಿದಾಗಲೂ ನಮಗೆ ಮತ್ತೊಂದು ಮುಖ ಕಣ್ಣೆದುರಿಗೆ ಬಂದುಬಿಡುತ್ತಿತ್ತು. ಆಮೇಲೆ ಮತ್ಯಾರೋ ಇನ್ನಷ್ಟು ಗೊಂದಲ ಮಾಡಿದರು ಅವರ ಹೆಸರು ಅಷ್ಟೇ ಅಲ್ಲ ಅದರ ಹಿಂದೆ "ಚಾರು ಚಂದ್ರ ಚಕೋರ" ಎಂದೂ ಇದೆ ಅದನ್ನು ಶಾರ್ಟಾಗಿ ಚಾ.ಚಂ.ಚ.ಪೂ.ಚಂ.ತೆ. ಅಂತಲೂ ಕರೆಯುತ್ತಾರೆ ಎಂದರು. ಅಲ್ಲಿಂದ ನಮಗೆ ಅವರ ಪುಸ್ತಕಗಳನ್ನು ಓದುವಾಗ ಮತ್ತಷ್ಟು ಗೊಂದಲವಾಗುತ್ತಿತ್ತು. ಹೀಗೆ ಉದ್ದನೆಯದಾದ ಹೆಸರನ್ನು ಗಿಡ್ದದಾಗಿ ಮಾಡಿಕೊಂಡ ಅವರ ತಂದೆಯವರ ಹೆಸರಿನಲ್ಲಿ ಕುವೆಂಪು ಎನ್ನುವುದೇ ನಾಮಪದ, ಅದು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಾಂತ ಇನ್ನೂ ಬಹಳ ಜನರಿಗೆ ತಿಳಿದೇ ಇಲ್ಲ ಎನ್ನುವುದೂ ಅರಗಿಸಲಾಗದ ಸತ್ಯ. ಅದೇನೆ ಇರಲಿ, ಬಹುಶಃ ಅವರ ಹೆಸರಿನಿಂದ ನಮ್ಮೂರಲ್ಲೊಬ್ಬರು ಪ್ರಭಾವಿತರಾಗಿದ್ದರು ಅಂತ ಅನ್ನಿಸುತ್ತದೆ , ತಮ್ಮ ಮಗಳಿಗೆ "ರಾಗರುಣೋದಯ ಬಿಂಬಾನನ ಪೂರ್ಣ ಚಂದ್ರಿಕಾ ಸುಹಾಸಿನಿ" ಎಂಬ ಮಾರುದ್ದದ ಹೆಸರನ್ನಿಟ್ಟು ಆಕೆಯನ್ನು ಚಿಕ್ಕದಾಗಿ ಪೂರ್ಣ ಎಂದು ಕರೆಯುತ್ತಿದ್ದರು. ಶಾಲೆಗೆ ಹೊಸತಾಗಿ ಸೇರಿದಾಗ ಆಕೆಯ ಇಷ್ಟುದ್ದಾ.. ಹೆಸರನ್ನು ನೋಡಿದ ಮೇಷ್ಟ್ರು "ನಿನ್ನ ಏನಂತ ಕರೆಯೋದಮ್ಮಾ" ಎಂದಾಗ ಆಕೆ " ನನ್ನನ್ನು ಎಲ್ಲಾರು ಪೂರ್ಣ ಅಂತಾರೆ ನೀವು ಪೂರ್ಣ ಕರೀರಿ ಸಾರ್.. ಎಂದಾಗ, ಅವಳ ಹೆಸರನ್ನು ಸಂಪೂರ್ಣ ಕರೆಯಬೇಕೆಂದು ತಿಳಿದ ಮೇಷ್ಟ್ರು ಮತ್ತೆ ಮತ್ತೆ ಕೇಳಿದಾಗಲೂ, ಆಕೆ ಪೂರ್ಣ ಕರೀರಿ ಸಾರ್ ಎಂದರೆ ಮೆಷ್ಟ್ರು ಕೆಂಡಾಮಂಡಲರಾಗುತ್ತಾರಲ್ಲ ಎಂದು ಅಂದಿನ ದಿನಗಳಲ್ಲಿ ಚಾಲ್ತಿಯಲ್ಲಿದ್ದ ಜೋಕ್ ಎನ್ನಬಹುದಾದ ಕಥೆ. ಇಂಥಹ ನಾಮಾವಳಿಗಳು ಮೂರ್ನಾಮ ಹಾಕಿಕೊಳ್ಳುವಷ್ಟು ತಲೆ ಕೆಡಿಸಿಬಿಡುತ್ತದಲ್ಲಾ ಎಂದು ಒಮ್ಮೊಮ್ಮೆ ಯಾರಿಗಾದರೂ ಅನ್ನಿಸುತ್ತದೆ. ಕೆಲವರಿಗೆ ನಾಮಕರಣ ಮಾಡಿದ ಹೆಸರಿಗೂ ಅವರ ದೇಹ ಪ್ರಕೃತಿಗೂ ಅಜಗಜಾಂತರವಿರುತ್ತದೆ. ಅದು ಅವರ ತಪ್ಪಲ್ಲದಿದ್ದರೂ ಜನರಿಗೆ ಮಾತ್ರ ನೂರಾರು ಸಮಸ್ಯೆ.
ನಮ್ಮ ಪರಿಚಿತ ಪುರೋಹಿತರೊಬ್ಬರ ಹೆಸರು ಪುಟ್ಟಭಟ್ಟರು ಎಂದಾಗಿತ್ತು. ಒಮ್ಮೆ ನಮ್ಮವರ ಮನೆಯಲ್ಲಿ ಶ್ರಾಧ್ದದ ಊಟಕ್ಕೆ ಅವರು ಬರಬೇಕಾಗಿತ್ತು. ೮ ಕಿಲೋಮೀಟರ್ ದೂರದ ಪೇಟೆಯ ಬಸ್ ಸ್ಟ್ಯಾಂಡಿಗೆ ಪುರೋಹಿತ ಪುಟ್ಟಭಟ್ಟರನ್ನು ಕರೆತರಲು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ನೆಂಟರ ಹುಡುಗನಿಗೆ ಬೈಕ್ ಕೊಟ್ಟು ಕಳುಹಿಸಲಾಯಿತು. ೩ ಗಂಟೆಯಾದರೂ ಇಬ್ಬರೂ ನಾಪತ್ತೆ. ಅಂತೂ ಮೂರುವರೆಗೆ ಪುರೋಹಿತರ ಸವಾರಿ ಯಾರದ್ದೋ ಬೈಕಿನ ಮೇಲೆ ಬಂದಾಯಿತು. ಅವರ ಹಿಂದೆ ನೆಂಟರ ಹುಡುಗ ಒಣಮುಖ ಹಾಕಿಕೊಂಡು ಬಂದ. ಕತೆ ಕೇಳಿದರೆ ಆತ " ಪುಟ್ಟಭಟ್ಟರೆಂದರೆ ಸಣ್ಣಗೆ ತೆಳ್ಳಗೆ ಇದ್ದಾರೆ ಎಂಬರ್ಥಮಾಡಿಕೊಂಡು ಅಲ್ಲೆಲ್ಲಾ ಹುಡುಕಾಡಿ ವಾಪಾಸು ಬಂದೆ, ಇವರಾಗಿದ್ದರೆ ಆಗಲೇ ಕಂಡಿದ್ದೆ, ಶ್ರಾದ್ದಕ್ಕೆ ಬರುವ ಭಟ್ಟರು ನೀವಾ ಎಂದು ಕೇಳೋಣ ಅಂದುಕೊಂಡೇ ಆದರೆ ಅವರ ಗಾತ್ರ ನೋಡಿ ಹೆದರಿ ಸುಮ್ಮನುಳಿದೆ" ಎಂದ. ಪುಟ್ಟಭಟ್ಟರು ಎಂಬುದು ಅವರ ಹೆಸರು ಎಂದು ಆತನಿಗೆ ಗೊತ್ತಿರಲಿಲ್ಲ. ಸಣ್ಣಗಿರುವ ಬಟ್ಟರನ್ನು ಆತ ಬಸ್ ಸ್ಟ್ಯಾಂಡನಲ್ಲಿ ಕಾಯುತ್ತಿದ್ದ ಆದರೆ ಇವರದು ಭೀಮಗಾತ್ರ ಶರೀರ ಜತೆಯಲ್ಲಿ ಗಂಟುಮುಖ, ಹೇಳಿಕೇಳಿ ಕರೆಯುವುದು ಶ್ರಾಧ್ಧದೂಟಕ್ಕೆ ಅಕಸ್ಮಾತ್ ಅವರು ಆ ಭಟ್ಟರಾಗಿರದಿದ್ದರೆ ತಪರಾಕಿ ತಿನ್ನಬೇಕಾದೀತೆಂದು ಹೆದರಿ ಆತ ಸಣಕಲು ಭಟ್ಟರಿಗಾಗಿ ಕಾಯುತ್ತಾ ಅಲ್ಲಿ ನಿಂತಿದ್ದ. ಹೆಸರಿಗೂ ಶರೀರಕ್ಕೂ ಸಂಬಂಧ ಇಲ್ಲದಿದ್ದರೆ ಇದೇ ತರಹದ ಸಮಸ್ಯೆಯಾಗುತ್ತದೆ. ಪಾಪ ಅವರಿಗೆ ಹೆಸರಿಟ್ಟವರಿದ್ದೂ ತೀರಾ ತಪ್ಪೇನಿಲ್ಲ, ಭಟ್ಟರು ಹುಟ್ಟುವಾಗ ಸಣ್ಣ ಕಡ್ಡಿಯಾಗಿಯೇ ಇದ್ದರಂತೆ, ಬದುಕುವುದೇ ಕಷ್ಟ ಎಂದುಕೊಂಡವರೇ ಹೆಚ್ಚು,ವಯಸ್ಸಿಗೆ ಬಂದಮೇಲೆ ನಿತ್ಯ ತುಪ್ಪದ ಸೇವನೆ ಅವರ ಗಾತ್ರ ಹೆಚ್ಚಿಸಲು ಕಾರಣವಾಗಿರಲೂಬಹುದು ಬಿಡಿ. ನಮ್ಮ ಊರಿನಲ್ಲಿ ಮತ್ತೊಬ್ಬ ಘಟಾನುಘಟಿ ಪುರೋಹಿತರು. ಅವರಿಗೆ ನಾಮಪದದ ಮೇಲೆ ಬಹಳ ಮಮತೆ. ಪ್ರತೀ ಹೆಸರು ಧನಾತ್ಮಕ ಗುಣಗಳನ್ನು ಹೊಂದಿರಬೇಕು ಎಂಬುದು ಅವರ ಸಿದ್ದಾಂತ. ಯಾವ ಹೆಸರಿನಲ್ಲಾದರೂ ಸ್ವಲ್ಪ ವ್ಯತ್ಯಯ ಉಂಟಾದರೂ ಅವರು ಅದರ ಹಿಂದೆ ಮುಂದೆ ಏನನ್ನಾದರೂ ಸೇರಿಸಿ ದುರಸ್ತಿಮಾಡುತ್ತಿದ್ದರು. ವೃತ್ತಿಯಲ್ಲಿ ಪುರೋಹಿತರಾದ್ದರಿಂದ ಅವರಿಗೆ ಸಹಿಸಲಾರದ ತಲೆನೋವು ಸಂವತ್ಸರದ ರೂಪದಲ್ಲಿ ಆ ವರ್ಷ ಬಂದೇಬಿಟ್ಟಿತು. ಈ ಸಂವತ್ಸರದ ಹೆಸರು "ವ್ಯಯಸಂವತ್ಸರ". ಅದೂ ವ್ಯಯ ಎಂದರೆ ನಷ್ಟ,ಹಾಗಾಗಿ ವರ್ಷಪೂರ್ತಿ ಎಲ್ಲರಿಗೂ ನಷ್ಟ ಎಂಬುದು ಅವರ ಅಚಲ ನಂಬಿಕೆ.ಒಬ್ಬರಿಗೆ ನಷ್ಟವದರೆ ಮತ್ತೊಬ್ಬರಿಗೆ ಲಾಭವಾಗುವ ಸಾಧ್ಯತೆ ಇದೆ ಎಂಬ ಸಿದ್ದಾಂತವನ್ನು ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ. ಒಂದಿನಿತೂ ನಷ್ಟ ಮಾಡಿಕೊಳ್ಳಲು ಇಚ್ಛಿಸದ ಅವರು ಅಂಗಡಿಯಲ್ಲಿ ವ್ಯಯನಾಮ ಸಂವತ್ಸರದ ಪಂಚಾಂಗವನ್ನು ಕೊಂಡಾಕ್ಷಣ ಅಂಗಡಿಯವನ ಹತ್ತಿರವೇ ಪೆನ್ನು ಇಸಿದುಕೊಂಡು ವ್ಯಯದ ಹಿಂದೆ ಅ ಸೇರಿಸಿ ಅವ್ಯಯ ಮಾಡಿಯೇ ಬಿಟ್ಟರು.ಅವರ ಚಳುವಳಿ ಅಷ್ಟಕ್ಕೆ ನಿಲ್ಲದೆ, ಅವರ ಬಳಿ ಮಂಗಲ ಕಾರ್ಯಕ್ರಮಗಳಿಗೆ ಮುಹೂರ್ತವಿರಿಸಿಕೊಳ್ಳಲು ಬರುವ ಶಿಷ್ಯಕೋಟಿಯ ಬಳಿ ಈ ಸಿದ್ದಾಂತವನ್ನು ವೇದಾಂತ ರೂಪದಲ್ಲಿ ವಿವರಿಸಿ ಮಂಗಲಪತ್ರದಲ್ಲಿ ಅವ್ಯಯ ಸಂವತ್ಸರ ಮಾಘ ಶುದ್ಧ........ ಎಂದೇ ಮುದ್ರಣವಾಗುವಂತೆ ನೋಡಿಕೊಂಡರು. ಪುರೋಹಿತರ ಈ ವರ್ತನೆ ಕಂಡ ನಮ್ಮವರೊಲ್ಲೊಬ್ಬ ಸದ್ಯ ಇವರು ಹುಬ್ಬಳ್ಳಿಯ ಕಡೆ ಹೋಗಲಿಲ್ಲ ಅಲ್ಲಿನ ಜನರ ಮೆಣಸಿನಕಾಯಿ,ಉಳ್ಳಾಗಡ್ಡಿ ಎಂಬ ಅಡ್ದ ಹೆಸರು ಇವರ ಹತ್ತಿರ ರೂಪಾಂತರಗೊಂಡು ಸಿಹಿಮೆಣಸಿನಕಾಯಿ, ಉಳ್ಳಾಗಡ್ಡಿಯಲ್ಲ, ಎಂದಾಗಿ ಗದ್ದಲವಾಗುತ್ತಿತ್ತು, ಎಂದು ನಗೆಯ ಅಲೆ ಎಬ್ಬಿಸಿದ್ದ. ಕೆಸರಿನ ಬಣ್ಣದ ಹೆಸರಿನ ಪಾನಕ ಕಣ್ಣಿಗೆ ಕೆಟ್ಟದಾಗಿ ಕಂಡರೂ ಹೊಟ್ಟೆಗೆ ತಂಪು ಎಂಬಂತೆ ಕೆಲವರ ಹೆಸರು ಕೇಳಲು ಕೆಟ್ಟದಾಗಿದ್ದರೂ ಅವರ ಸಾಧನೆಗಳಿಂದ ಹೆಸರಿಗೊಂದು ಅರ್ಥ ತಂದುಕೊಟ್ಟವರಿದ್ದಾರೆ.ಸುಂದರ ಹೆಸರನ್ನಿಟ್ಟುಕೊಂಡು ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ಆ ಹೆಸರಿಗೆ ಕುಖ್ಯಾತಿ ತಂದವರೂ ಇದ್ದಾರೆ. ಮನುಷ್ಯರಿಂದ ಹುಟ್ಟಿ ಮನುಷ್ಯರೊಡನೆ ಬಾಳಿ ಅವರು ಹೋದರೂ ಉಳಿಯುವುದು ಎಂದರೆ ಹೆಸರು ಮಾತ್ರ. ಅದು ಅವರವರು ಬಾಳಿಬದುಕಿದ ರೀತಿ ನೀತಿಯ ಪ್ರಕಾರ, ಅವರವರು ಆಚರಿಸಿದ ಸಿದ್ಧಾಂತ, ಹೇಳಿದ ವೇದಾಂತವನ್ನು ಅನುಸರಿಸಿ ಅದಕ್ಕೆ ತಕ್ಕಷ್ಟು ವರ್ಷಗಳು ಉಳಿಯುತ್ತದೆ. ಶಾಶ್ವತವಾಗಿ ಉಳಿಯುವ ತಾಕತ್ತು ಇರುವುದು ಹೆಸರಿಗೊಂದೆ. ಬದುಕಿದ್ದಾಗ ದೇಹಕ್ಕೆ ಹೆಸರು, ಹೋದಾಗ ಅವರ ಕೆಲಸಕ್ಕೆ ಹೆಸರು, ಮತ್ತೆ ಮರು ಹುಟ್ಟುವ ಭಾಗ್ಯವಿದ್ದರೆ ಹೊಸಾ ಹೆಸರು.ಎನ್ನುವ ಸರ್ವಜ್ಞನಂತಹವರು ಮಾತ್ರಾ ಅಜ್ಞಾತರಾಗಿ ಜ್ಞಾತರಾಗಬಲ್ಲರು. ಹಾಗಾಗಿ ಪ್ರಾರಂಭದಲ್ಲಿಯೇ ಹೆಸರು ಹೆಸರೆಂದು ನೀಂ ಬಸವುಳಿವುದೇಕಯ್ಯಾ ಎಂದಿದ್ದು. ಆದರೆ ಅದು ಕಾಲಕ್ಕೆ ತಕ್ಕಂತೆ ಈಗ ಬದಲಾಗಿ ಹೆಸರಿಗಾಗಿಯೇ ನೀಂ ಬಸವಳಿಯಬೇಕಯ್ಯಾ ಆಗಿದೆ.

1 comment:

PARAANJAPE K.N. said...

ಚೆನ್ನಾಗಿದೆ ಶರ್ಮರೆ, ನಿಮ್ಮ ನಾಮಪುರಾಣ, ಸ್ವಾರಸ್ಯಕರವಾಗಿದೆ. ನಮ್ಮೂರಲ್ಲಿ ಒಬ್ಬರಿದ್ದಾರೆ, ನೋಡಲು ಕರಿಕಪ್ಪು, ಅವರ ಹೆಸರು ಬಿಳಿಗೌಡ. ಇನ್ನೊಬ್ಬರು ಬೆಳ್ಳಗಿದ್ದಾರೆ ಅವರ ಹೆಸರು ಕರಿಗೌಡ ಅ೦ತ. ಹೀಗೆ ಹೆಸರಿಗೂ ವ್ಯಕ್ತಿಯ ಚಹರೆಗೂ ವೈರುಧ್ಯ ಇದ್ದಾಗ ಆಗುವ ಆಭಾಸಗಳನ್ನು ಚೆನ್ನಾಗಿ ಬರೆದಿದ್ದೀರಿ.