Sunday, June 14, 2009

ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ:

"ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ: "
ಹೀಗೊಂದು ವಾಕ್ಯ ಓದಲು ಕೊಟ್ಟು ಸ್ವರಸಹಿತ ಹೇಳಿ ಎಂದರೆ ತಲೆಕೆಟ್ಟು ಮೈಪರಚಿಕೊಳ್ಳುವಂತಾಗುತ್ತದೆ ಮೊದಲನೇ ದಿನ. ಎರಡನೇ ದಿನ ಎದ್ದು ಬಿದ್ದು ಓದಿದರೆ ಅಲ್ಪಸ್ವಲ್ಪ ತಡವರಿಸಿಕೊಳ್ಳುತ್ತಾ ಓದಬಲ್ಲೆ ಅನ್ನು ವಿಶ್ವಾಸ ಬರುತ್ತದೆ. ಹದಿನೈದನೇ ದಿನ ಅಸ್ಖಲಿತವಾಗಿ ಓದಬಹುದು ನೋಡಿಕೊಳ್ಳದೇ ಹೇಳಬಹುದು ಈ ವಾಕ್ಯವನ್ನ ಆದರೆ ಮುಂದಿನ ವಾಕ್ಯ ಮತ್ತೆ ಹಳೆಯದರಂತೆ. ಇದು ಸಹಜ ಮನುಷ್ಯನ ತಾಕತ್ತು. ಆ ವಿಷಯ ಈ ವಿಷಯ ಅಂತಲ್ಲ ಪ್ರಪಂಚದ ಎಲ್ಲಾ ವಿಷಯವೂ ಕಲಿಯುವವರೆಗೆ ಕಷ್ಟ ಕಲಿತಮೇಲೆ ಲೀಲಾಜಾಲ. ಬೇರೆಯವರು ತಡವರಿಸಿದಾಗ ಇವರೇಕೆ ಇಷ್ಟು ಒದ್ದಾಡುತ್ತಾರೆ ಅಂತ ಅನ್ನಿಸದಿರದು. ಇರಲಿ ಈಗ ಅದು ಎಲ್ಲಿಯ ವಾಕ್ಯ ಅಂತ ನೋಡೊಣ.
ಶ್ರೀ ಮಠದ ಭಕ್ತರಿಗೆ ಶ್ರೀಗಳು "ರುದ್ರ" ಕಲಿಯಲು ಹೇಳಿದ್ದಾರೆ. ಒಂದು ವರ್ಷಗಳ ಕಾಲ ಗೋಕರ್ಣದಲ್ಲಿ ನಡೆಯುವ ರುದ್ರ ಪಾರಾಯಣಕ್ಕೆ ಜನ ಬೇಕು. ಹಾಗಾಗಿ ಗ್ರೃಹಸ್ಥರು ರುದ್ರ ಕಲಿಯಲಿ ಎಂಬುದು ಶ್ರೀಗಳ ಆಶಯ. ಹತ್ತರಿಂದ ಐವತ್ತರವರೆಗಿನ ವಯಸ್ಸಿನ ಬೇಧವಿಲ್ಲದೆ ಹಳ್ಳಿಯ ಹವ್ಯಕರು ಸಂಜೆ ಶಲ್ಯ ಹೊದ್ದು "ಇಡಾದೇವಹೂ...." ಎಂದು ಸಂಜೆ ಸರಿ ಸುಮಾರು ಒಂದೂವರೆ ತಾಸು ಬಾಯಿಪಾಠ ಶುರುಮಾಡಿದ್ದಾರೆ. ಬರೊಬ್ಬರಿ ಪುರೋಹಿತರ ಮಗನಾದ ನಾನು ಬಾಲ್ಯದಲ್ಲೆಲ್ಲೋ "ಓಂ ಗಣಾನಾಂತ್ವಾ..." ಎಂಬ ಗಣಪತಿ ಉಪನಿಷತ್ ಹಾಗೂ " ನಾದಶಬ್ಧ ಮಹೀಂ ಘಂಟಾಂ..." ಎಂಬ ದೇವರ ಪೂಜೆ ಮಂತ್ರ ಕಲಿತದ್ದು ಬಿಟ್ಟರೆ ಮತ್ತೆ ಅತ್ತ ಕಡೆ ತಲೆಹಾಕಿ ಮಲಗಲಿಲ್ಲ. ಹಾಗಾಗಿ ನಾಲಿಗೆಗೆ ಅವೆಲ್ಲಾ ಹೊಚ್ಚ ಹೊಸತು. ಇನ್ನು ಮಿದುಳಿಗೆ ಅರ್ಥವಾಗದ ಆ ಸಂಸ್ಕೃತ ಶಭ್ದಗಳು ಕೇವಲ ಸ್ವರಸಹಿತ ಪದಪುಂಜಗಳಷ್ಟೆ. ಆದರೂ ಹದಿನೈದು ಜನ ನಿತ್ಯ ಸಂಜೆ ಒಂದೂಕಾಲು ತಾಸು ಹೇಳಿ ಬಂದಾಗ ಮನಸ್ಸಿಗೆ ಅದೇನೋ ಒಂಥರಾ ಹಿತವನ್ನು ಕೊಡುತ್ತದೆ. ಅಬ್ಬಾ ಇವತ್ತು ಮುಗಿಯಿತು ಎಂಬ ನಿರಾಳ ಭಾವವೋ ಅಥವಾ ಸಂಸ್ಕೃತ ಮಂತ್ರಗಳಲ್ಲಿನ ಅಂತ:ಶಕ್ತಿಯೋ..? ಉತ್ತರ ಖಚಿತವಾಗಿ ಗೊತ್ತಿಲ್ಲ. ಆದರೂ ಏನೋ ಒಂದು ಮಜ ಇದೆ. ಹೊಸತಲ್ಲವೇ ಮಿದುಳಿಗೆ ಅದೇ ಇದ್ದರೂ ಇರಬಹುದು.
ರುದ್ರದಲ್ಲಿರುವ ಶಬ್ದಗಳು ಸಂಸ್ಕೃತದಲ್ಲಿರುವುದರಿಂದ ಅರ್ಥ ಗೊತ್ತಿಲ್ಲ ಬಿಡಿ. ಆದರೆ ಅಲ್ಲಿ ಕಲಿಯಲು ಬರುತ್ತಾರಲ್ಲ ಆವಾಗ ಒಂದಿಷ್ಟು ಕನ್ನಡದ ಅರ್ಥಕ್ಕೆ ಹೋಲುತ್ತವೆ . ಪಠಿಸುವುದು ಸಂಸ್ಕೃತ ಅರ್ಥ ಕನ್ನಡ ಆವಾಗ ಮುಸಿಮುಸಿ ನಗು ಪಠಣದ ಗಂಭೀರತೆಗೆ ಬೇಡ ಬೇಡ ಅಂದರೂ ಧಕ್ಕೆತಂದುಬಿಡುತ್ತವೆ. "ಹೇತಿರ್ಮೀಢುಷ್ಟಮ, ಹೇತಿರ್ವಣಕ್ತು, ಕಾಪ್ಯಾಯ ಚಾ, ವಟ್ಯಾಯ ಚ, ಕಾಟ್ಯಾಯ ಚಾ, " ಮುಂತಾದ ಶಬ್ದಗಳೆಲ್ಲಾ ಕನ್ನಡಕ್ಕೆ ತಿರುಗಿ ಅನರ್ಥಕ್ಕೆ ಕಾರಣವಾಗಿ ನಗುತರಿಸಿಬಿಡುತ್ತವೆ. (ಇನ್ನೂ ಬಹಳಷ್ಟಿವೆ ಕೆಂಗಣ್ಣಿಗೆ ಗುರಿಯಾಗುವ ಇಷ್ಟವಿಲ್ಲದ್ದರಿಂದ ಇಷ್ಟು ಸಾಕು)
ಇರಲಿ ನಮಗೆ ಮೂಲ ಅರ್ಥ ಗೊತ್ತಿಲ್ಲ ಮುಂದೆ ತಿಳಿದಂತೆ ಈ ಅನರ್ಥ ಮಾಯವಾಗಿ ಘನಗಂಬೀರತೆ ಮೂಡುತ್ತದೆ ಅಂಬುದು ನಂಬಿಕೆಯಲ್ಲ ಪರಮ ಸತ್ಯ.
ಹೀಗೆ ರುದ್ರ ಕಲಿತು ನಂತರ ಚಮಕ ಕಲಿತು ಒಂಚೂರು ಪುರುಷ ಸೂಕ್ತ ಆಮೇಲೆ ಗಣಾನಾಂತ್ವ ಗಣಪತೀಂ ಬಾಯಿಗಟ್ಟು ಆಯಿತೆಂದರೆ ಸಾಕು ನಂತರ ಪುರೋಹಿತನಾದಂತಯೇ. ಅಲ್ಲಿ ಇಲ್ಲಿ ಸಣ್ಣಪುಟ್ಟ ಸತ್ಯನಾರಾಯಣ ಕತೆ ನಂತರ ಪ್ರತಿಷ್ಠೆ...! ಗೆ ಸೀದಾ ಜಂಪ್ ಆನಂತರ ಒಣಪ್ರತಿಷ್ಠೆ ಹೇಗೂ ಇದ್ದೇ ಇದೆ.
ಆದರೂ ಕೊನೆಯ ಸಾಲು ಇನ್ನೂ ಕಷ್ಟ ಅಂತ ಭಾಸವಾಗುತ್ತಿದೆ. "ದಶಪ್ರಾಚೀರ್ದಶದಕ್ಷಿಣಾದಶಪ್ರತೀಚೀರ್ದಶೋದೀಚೀರ್ದಶೋರ್ಧ್ವಾಸ್ತೇಭ್ಯೋ ನಮ ಸ್ತೇನೋ ಮೃಡಯಂತು ತೇ.." ಮುಂದೆ ಅಭ್ಯಾಸವಾಗುತ್ತದೆ ಆವಾಗ ಮತ್ತೆ ನಿಮಗೆ ಕೊರೆಯುತ್ತೇನೆ.
ಅಲ್ಲಿಯವರೆಗೆ ರುದ್ರಾಯ ನಮ:.

4 comments:

ಮೃತ್ಯುಂಜಯ ಹೊಸಮನೆ said...

ಶಬ್ಧ ಅಲ್ಲವೋ...ಶಬ್ದ. ರುದ್ರದ ಮಂತ್ರ ಹಾಗೇ ಹೇಳಿಕೋ..ತಕರಾರಿಲ್ಲ. ಮುಂದಿನಬಾರಿ ಸಿಕ್ಕಾಗ ಮಾತೂ ಅದೇ ತರಹ ಆಡಿದ್ರೆ ಮಾತ್ರ ಜೋಪಾನ !!

Unknown said...

ಹ ಹ ಹ ಸರಿ ಸರಿಯಾದ ಶಬ್ದ

ಮಾವೆಂಸ said...

ಸ್ವಾರಸ್ಯಕರವಾಗಿ ಬರೆಯುವ ನಿನ್ನ ಶೈಲಿಯೇ ಚೆಂದ. ಅಲ್ಲಲ್ಲೇ ಚೂರು ಕುಟುಕುತ್ತ ಹೊಸ ದಾರಿಯಲ್ಲಿ ಯೋಚಿಸುವಂತೆ ಮಾಡುವ ಪರಿ ಅನುಕರಣೀಯ. ಬ್ಲಾಗ್ ಎರಡು ದಿನಕ್ಕೊಮ್ಮೆಯಾದರೂ ಅಪ್‌ಲೋಡ್ ಆಗುತ್ತಿರಲಿ.

Unknown said...

yeradu dinakkondu bareyalu vishaya yellinda tarali ambode chinte
Adru thanks