"ಮೊನ್ನೆಯಷ್ಟೆ ಭಾನುವಾರ ಕಳೆದಿತ್ತು ಅಬ್ಬಾ ಅದೆಷ್ಟು ಬೇಗ ಮತ್ತೊಂದು ಭಾನುವಾರ, ದಿನ ಅದೆಷ್ಟು ಬೇಗ ಓಡುತ್ತಿದೆ" ಎನ್ನುವ ಮಾತು ಯಾರ ಬಾಯಿಂದ ಬಂತೋ ಅವರು ಸುಖದಿಂದ ಇದ್ದಾರೆ ಅಂತ ಅರ್ಥ. ಯಾವುದು ವೇಗದಿಂದ ಬೇಗನೆ ಕಳೆಯುತ್ತಿದೆ ಎಂಬ ಭಾವನೆ ಹುಟ್ಟಿಸುತ್ತದೆಯೋ ಅದು ಸುಖ.
ಅದೇ ಹಲ್ಲುನೋವು ಬಂದ ರಾತ್ರಿಯನ್ನು ನೆನಪಿಸಿಕೊಳ್ಳಿ ಒಂದು ರಾತ್ರಿ ಎಂದರೆ ಶುರುವಾಗಿ ಸುಮಾರು ವರ್ಷಗಳೇ ಸಂದವೇನೋ ಎಂಬ ಭಾವ ಹುಟ್ಟಿಸುತ್ತದೆ. ಇಡೀ ಪ್ರಪಂಚ ನಿದ್ರೆಗೆ ಜಾರಿರುತ್ತದೆ, ನೀರವ ವಾತವರಣ, ಆದರೆ ನಾವು ದಿಂಬಿಗೆ ತಲೆ ಕೊಟ್ಟರೆ ಮೂಲೆಯಲ್ಲಿರುವ ದವಡೆ ಹಲ್ಲು ತಣತಣ ಅಂತ ಶುರುವಾಗಿ ಚುಳ್ ಅಂತ ಬೆಚ್ಚಿಬೀಳಿಸುತ್ತದೆ. ಅಮ್ಮಾ ಯಾವುದನ್ನಾದರೂ ತಡೆದುಕೊಳ್ಳಬಹುದು ಈ ಹಲ್ಲುನೋವನ್ನೊಂದನ್ನು ಬಿಟ್ಟು ಅಂತ ಅನ್ನಿಸಿದರೂ ಹಲ್ಲೇನು? ಯಾವ ನೋವು ಬಂದಾಗಲೂ ಮತ್ತೊಂದರತ್ತ ಬೆಟ್ಟು ಸಹಜ ಅಷ್ಟೆ.
ಹಲ್ಲೆಂಬ ಹಲ್ಲಿನೊಳಗಿನ ಗುಳು ಬೃಹದಾಕಾರದ ಬಾವಿಯಂತೆ ಭಾಸವಾಗುತ್ತದೆ. ಕನ್ನಡಿ ಹಿಡಿದು ನೋಡಿಕೊಂದರೆ ಛೀ ಇದೇ ಕ್ಷುಲ್ಲಕ ಹಲ್ಲೇ ಇಷ್ಟೊಂದು ನೋವು ನೀಡುತ್ತಿರುವುದು ಅಂತ ಅನ್ನಿಸಿದರೂ ಕನ್ನಡಿ ಪಕ್ಕಕ್ಕಿಟ್ಟ ಮರುಕ್ಷಣ ಅಮ್ಮಾ ಎಂದು ಅಂಗೈ ತನ್ನಿಂದತಾನೆ ಕೆನ್ನೆಯತ್ತ ಓಡುತ್ತದೆ. ಮನಸ್ಸು ಹಲ್ಲುನೋವನ್ನೊಂದು ಬಿಟ್ಟು ಮತ್ತಿನ್ನೇನೂ ಯೋಚಿಸಲು ಅಸಮರ್ಥವಾಗಿರುತ್ತದೆ. ಎಂತಹ ಸಿನೆಮಾ ಇರಲಿ ಮೈನವಿರೇಳಿಸುವ ಪುಸ್ತಕ ಇರಲಿ ಕಡುಬು ಕಜ್ಜಾಯವಿರಲಿ, ಸಾವಿರದ ನೋಟಿನ ಕಂತೆಯಿರಲಿ, ತ್ರಿಪುರ ಸುಂದರಿಯಿರಲಿ, ಮನ್ಮಥ ಎದ್ದು ಬಂದಿರಲಿ. ಹೇ ಭಗವಂತಾ ಈ ಹಲ್ಲು ನೋವಿನಿಂದ ಮುಕ್ತಿಗೊಳಿಸು ಎಂಬ ಒಂದೇ ಒಂದು ವಿನಂತಿ. ಇಷ್ಟೊತ್ತಿಗೆ ಸುಮಾರು ಬೆಳಕಾಗಿರಬಹುದಾ? ಎಂದು ಗಂಟೆ ನೋಡಿದರೆ ಇನ್ನೂ ಹತ್ತೂ ಕಾಲು. ಮಾಮೂಲಿ ದಿನಗಳಾದರೆ ಹೀಗೆ ಹಾಸಿಗೆಗೆ ತಲೆಯೂರಿದರೆ ಕಣ್ಣು ಬಿಟ್ಟಾಗ ಚುಮುಚುಮು ಬೆಳಗು ಆದರೆ ಇಂದು ಮಾತ್ರಾ ಊಹ್ಞೂ ಬೆಳಗೇ ಆಗದು ಎಂಬ ಭಾವನೆ, ಹಲ್ಲಿನ ಸಂದಿಯಲ್ಲಿ ತಣತಣ ತಡೆಯಲಾರದೇ ಬಾವಿ ಹಾರಿಬಿಡೋಣ ಎಂಬಷ್ಟು ಯೋಚನೆ ಬರುತ್ತದೆ. ಒಮ್ಮೆ ಹಾಗೆ ಆಯಿತು
ರಾತ್ರಿಯೆಲ್ಲಾ ಹಲ್ಲುನೋವು ಸಿಕ್ಕಾಪಟ್ಟೆ ಇತ್ತು. ಬೆಳಿಗ್ಗೆ ನಮ್ಮ ಪಕ್ಕದ ಮನೆ ಗೀತಕ್ಕ ಬಂದಿದ್ದಳು "ಏನೋ ಮುಖ ಎಲ್ಲಾ ಒಂಥರಾ ಇದೆ" ಅಂದಳು. "ರಾತ್ರಿ ಎಲ್ಲಾ ಹಲ್ಲು ನೋವಿತ್ತು , ಅದೆಷ್ಟು ನೋವಿತ್ತು ಅಂದರೆ ತಡೆಯಲಾರದೆ ಬಾವಿ ಹಾರಿ ಪ್ರಾಣ ಕಳೆದುಕೊಂಡು ಬಿಡೋಣ ಅಂತ ಅನ್ನಿಸ್ತು" ಅಂತ ಅಂದೆ "ಹೌದಾಯಿಕ್ಕಲ, ಹಲ್ಲುನೋವಿಗೆಲ್ಲ ಬಾವಿ ಹಾರನ ಅಂತ ಕಂಡ್ರೆ ಇನ್ನು ಮಿಕ್ಕಿದ್ದಕ್ಕೆಲ್ಲಾ ಹ್ಯಾಂಗೋ" ಅಂತ ನಕ್ಕು ಹೊರಟು ಹೋದಳು. ಆನಂತರದ ದಿನಗಳಲ್ಲಿ ನಾನು ಅದನ್ನ ಮರೆತಿದ್ದೆ. ಮತ್ತೊಂದು ದಿವಸ ಹಾಗೆಯೇ ಬಂದ ಗೀತಕ್ಕ" ರಾಘು ಹೌದೋ ಅವತ್ತು ನೀನು ಹೇಳಿದ್ದು, ಬಾವಿಗೆ ಹಾರಿಬಿಡಣ ಅಂತ ಕಾಂಬ್ದು ಸುಳ್ಳಲ್ಲ ಮಾರಾಯ" ಅಂತ ಅಲವತ್ತುಕೊಂಡಳು. ಹಾಗಿರುತ್ತೇ ಹಲ್ಲುನೋವಿನ ಮಹಿಮೆ.
ಹುಳುಕು ಹಲ್ಲನ್ನು ಕಿತ್ತು ಎಸೆದಾಗ ಮತ್ತೆ ಆಸೆ ಚಿಗುರುತ್ತದೆ, ಸಿಟ್ಟು ಸಡಾಕು ಮರಳುತ್ತದೆ, ಉಪದೇಶ ಉಪದ್ವಾಪ ಅರಳುತ್ತದೆ. ಪ್ರೀತಿ ಪ್ರೇಮ ರಾಗ ಭಯ ಭಕ್ತಿ ದ್ವೇಷ ಎಲ್ಲಾ ಮಾಮೂಲಿ, ಅಯ್ಯ ದಿನಗಳು ಎಷ್ಟು ಬೇಗ ಕಳೆಯುತ್ತಿದೆ ಎಂಬ ಡೈಲಾಗೂ.....
1 comment:
It is very good yaar.
so nice
Post a Comment