Tuesday, February 2, 2010

" ಮಾತೃ ದೇವೋ ಭವ, ಪಿತೃ ದೇವೋ ಭವ"

ಬಾಸ್ ಕಮ್ ಅಪ್ಪಯ್ಯ ಮೊನ್ನೆ ತಾಳಗುಪ್ಪಕ್ಕೆ ಸ್ಕೂಟಿ ತೆಗೆದುಕೊಂಡು ಹೋದ ಅರ್ದ ಗಂಟೆಗೆ ರಾಘವೇಂದ್ರ ಕೆಫೆ ಮಂಜಣ್ಣನಿಂದ ಫೋನ್ ಬಂತು. "ಅಪ್ಪಯ್ಯ ನ ಸ್ಕೂಟಿಗೆ ಯಾರ‍ೋ ಕಾರು ತಗುಲಿಸಿ ಹೋಗಿದ್ದಾರ‍ೆ, ಆಸ್ಪತ್ರೆಯಲ್ಲಿ ಸೇರಿಸಿದ್ದೀನಿ ಬಾ" ತಡಬಡಾಯಿಸಿಕೊಂಡು ಮಾರುತಿ ಕಿರ್ ಗುಡಿಸಿ ಹೋದೆ. ಅಪ್ಪಯ್ಯ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದರು. ಎಂಬತ್ತು ವರ್ಷದ ಗಟ್ಟಿ ಜೀವ. "ನಿನ್ನತ್ರ ಬಯ್ಸಿಕೊಳ್ಳುವ ಕೆಲಸ ಮಾಡೀಬಿಟ್ಟೆ" ಎಂದರು. ಪಿಚ್ಚೆನಿಸಿತು. ನಾನು ಯಾವತ್ತೂ ಯಾರಿಗೂ ಬೈಯ್ಯುವವನಲ್ಲ, ಆದರೂ ಅಪ್ಪಯ್ಯನಿಗೆ ತಾನು ಎಂಬತ್ತು ವರ್ಷದ ಇಳಿ ವಯಸ್ಸಿನಲ್ಲಿ ಬೈಕಿನಿಂದ ಬಿದ್ದೆನಲ್ಲ ಎಂಬ ಗಿಲ್ಟ್ ಇರಬೇಕು, ಹಾಗಾಗಿ ಹಾಗೆ ಹೇಳಿರಬೇಕು. ಇರಲಿ ನಾನು ಮಾಮೂಲಿ ಯಾಗಿ ಭೇಟಿಯಾಗಿ ಮುಂದಿನ ಕ್ರಮದ ಬಗ್ಗೆ ಕೇಳಿದೆ. ಅವರು ಸಾಗರಕ್ಕೆ ಕರೆದುಕೊಂಡು ಹೋಗಿ ಎಂದರು. ಸಾಗರದ ಡಾಕ್ಟರ್ ಪ್ರಸನ್ನರ ಬಳಿ ಅಡ್ಡ ಮಲಗಿಸಿ ಉದ್ದ ಮಲಗಿಸಿ ಎಕ್ಸ್ ರೇ ತೆಗೆಸಿದ್ದಾಯಿತು. ಆನಂತರ ತೊಡೆ ಸೊಂಟಕ್ಕೆ ಸೇರುವ ಜಾಗದಲ್ಲಿ ಸಣ್ಣ ಬಿರುಕುಬಿಟ್ಟಿದೆ, ಅಲ್ಲಿ ಆಪರೇಟ್ ಮಾಡಲಾಗುವುದಿಲ್ಲ ಬೆಡ್ ರೆಸ್ಟ್ ಒಂದೇ ಪರಿಹಾರ ಎಂಬ ಸಲಹೆಯೊಂದಿಗೆ ಒಂದಿಷ್ಟು ಮಾತ್ರೆ ಪಡೆದು ಮನೆಗೆ ಬಂದಾಯಿತು. ಇನ್ನು ನಲವತ್ತೈದು ದಿವಸಗಳ ಕಾಲ ಅಪ್ಪಯ್ಯ ಮಂಚದಿಂದ ಇಳಿಯುವಂತಿಲ್ಲ. ನಾನೂ ಕೂಡ ರೀಚಬಲ್ ಏರಿಯಾದಲ್ಲಿಯೇ ಇರಬೇಕು ಎಂಬ ತೀರ್ಮಾನ ಅನಿವಾರ್ಯ. "ಭಟ್ರು ಮತ್ತೆ ಬೈಕಿನಿಂದ ಬಿದ್ದಿದ್ವಡ" ಎಂಬ ಸುದ್ದಿ ಕಿವಿಯಿಂದ ಕಿವಿಗೆ ದಾಟುತ್ತಿದ್ದಂತೆ ಹಲವರು ನಮ್ಮ ಮನೆಗೆ ಬರತೊಡಗಿದರು.
ಬಂದವರು ದುಗುಡದ ಮುಖದಲ್ಲಿ " ಅಯ್ಯೋ ಗ್ರಾಚಾರವೇ.." "ಹಿಂಗಾದ್ರೆ ಹ್ಯಾಂಗಾ ಮಾರಾಯಾ" ಮುಂತಾದ ಮಾಮೂಲಿ ಡೈಲಾಗ್ ಹೊಡೆದರೆ ಇನ್ನು ಕೆಲವರು "ಈ ವಯಸ್ಸಿನಲ್ಲಿ ಬೈಕ್ ಹೊಡಿತಾ ಹೇಳಿರೆ ಕೇಳ್ತ್ವಲ್ಲೆ ಅಲ್ದಾ" ಎಂದು ನಾನು ಕರಗುಟ್ಟುತ್ತೇನೆ ಎಂದು ಮುಂದುವರೆಸಲು ನನಗೆ ಬಿಡುತಿದ್ದರು. ನಾನು ಹೌದಾ ಮಾರಾಯ ಎಂದರೆ ಅವರಿಗೆ ಅದೇನೋ ಒಂಥರಾ ಆನಂದ. ಆದರೆ ನಾನು ಬಿಲ್ ಕುಲ್ ಹಾಗೆ ಹೇಳುವ ಗಿರಾಕಿ ಅಲ್ಲ. "ಅಯ್ಯ ಮುರಿಯದೇ ಆದ್ರೆ ಬೈಕ್ ಅಲ್ದಿದ್ರೂ ಆಕ್ತಿತು ತಗ" ಆದರೆ ಅವರಿಗೆ ನನ್ನ ಈ ಡೈಲಾಗ್ ಖುಷಿ ಇಲ್ಲ, " ಆದ್ರೂ...." ಅಂಬ ರಾಗ ಅತ್ತ ಕಡೆಯಿಂದ. ಇರಲಿ ಅದು ಸಹಜ ನನಗೆ ತಲೆ ರಿಂ ಎನ್ನುವುದು ಅದಕ್ಕಲ್ಲ. ಪುರೋಹಿತರೊಬ್ಬರು ಬಂದಿದ್ದರು " ರಾಗು ನೀನು ಈಗಿಂದೀಗ್ಲೆ ಸೊರಬಕ್ಕೆ ಹೋಗು ಔಷಧಿ ತಗಬಾ..." ಅಂದರು. ನಾನು ತಡಮಾಡಲಿಲ್ಲ "ನೀವು ನಿಮ್ಮ ಅಪ್ಪಂಗೆ ಅದೆಲ್ಲೋ ಬೇರೆ ಕಡೆಯಿಂದ ಔಷಧಿ ತಂದಿದೀರಲ್ಲ ಆ ಊರು ಯಾವುದು?"ಅಂದೆ. ಪುರೋಹಿತರು ಮುಂದೆ ಮಾತಾಡಲಿಲ್ಲ. ಕಾರಣ ಸ್ಪಷ್ಟ ಅವರು ಅವರ ಅಪ್ಪ ಅಮ್ಮನ್ನ ಹೊರಹಾಕಿ ಹೆಂಡತಿಯೊಂದಿಗೆ ಸುಖ...? ಸಂಸಾರ ಸಾಗಿಸುತ್ತಿದ್ದರು. ಅಪ್ಪ ವರ್ಷ ಪೂರ್ತಿ ಮಲಗಿದರೂ ಇವರು ಅತ್ತ ತಲೆ ಹಾಕಿ ಮಲಗಲಿಲ್ಲ ಮತ್ತು ವರ್ಶಾಂತದ ಮನೆಗಳಲ್ಲಿ " ಮಾತೃ ದೇವೋ ಭವ, ಪಿತೃ ದೇವೋ ಭವ" ಅನ್ನುವುದನ್ನೂ ಬಿಡಲಿಲ್ಲ.
ಹೀಗಿರುತ್ತೇ ಪ್ರಪಂಚ. ಆದರೂ ನಾವು ಬೇರೆಯವರನ್ನ ಅನ್ನಬಾರದು ಕಾರಣ ಅವರೂ ನಮ್ಮಂತೆ ದೇವರ ಸೃಷ್ಟಿ. ಅವರನ್ನು ಅಂದರೆ ಪರೋಕ್ಷವಾಗಿ ದೇವರನ್ನು ಅಂದಂತೆ ಅಲ್ಲವೇ?. ಹಾಗಾಗಿ ಬೇರೆಯವರ ಸುದ್ದಿ ನಮಗ್ಯಾಕೆ....! ಅಲ್ಲವೆ ?

6 comments:

ಯಜ್ಞೇಶ್ (yajnesh) said...

ರಾಘಣ್ಣ,

ಹೆರಿಯಪ್ಪ ಹೆಂಗಿದ್ದ ಈಗ? ಫುಲ್ ರೆಸ್ಟ್ ಮಾಡಕೆ ಹೇಳು. ಅವ್ರು ಬೆಳೆದು ಬಂದ ದಾರಿನೇ ಹಾಗೆ. ಮೊದ್ಲಿಂದ್ಲು ಸ್ವಾಭಿಮಾನಿಗಳು. ತಮ್ಮದೇ ಆದ ರೀತಿನೀತಿಗಳು. ಅದನ್ನು ಬಿಟ್ಟು ಹೊರಹೋಗರು. ಹೆರಿಯಪ್ಪನ ತರ ಹಲ್ಕರೆ ತಿಮ್ಮಣ್ಣ ಭಟ್ರು ಇತ್ತೀಚಿನ ತನಕ ಬೈಕ್ ಓಡಿಸ್ತಾ ಇದ್ದವರು. ಅವ್ರು ಬೈಕ್ ತಗಂಡು ಬಂದ್ರು ಅಂದ್ರೆ ಎಲ್ಲರೂ ಈ ಕೆಲ್ಸ ಬೇಡದಿತ್ತು ಅನ್ನುತ್ತಿದ್ದರು.

venu said...

Olle kate heli konege bareda neeti manamuttuvante iddu.

kelagina line tumba chennagiddu...
"ವರ್ಶಾಂತದ ಮನೆಗಳಲ್ಲಿ " ಮಾತೃ ದೇವೋ ಭವ, ಪಿತೃ ದೇವೋ ಭವ" ಅನ್ನುವುದನ್ನೂ ಬಿಡಲಿಲ್ಲ"

ಮೂರ್ತಿ ಹೊಸಬಾಳೆ. said...

ಪುಟ್ಟಜ್ಜನ ಅಪಘಾತದ ಸುದ್ದಿ ಕೇಳಿ ಬೇಸರವಾಯ್ತು.
ನೀ ಹೇಳಿದ್ದು ಸರಿ ಮುರಿಯುವುದೇ ಆದರೆ ಬೈಕೇ ಆಗಬೇಕೆಂದಿಲ್ಲ.ಆದಷ್ಟು ಬೇಗ ಗುಣಮುಖರಾಗಿ ಓಡಾಡುವಂತಾಗಲಿ.

PARAANJAPE K.N. said...

ಬರಹದ ರೀತಿ, ಅದರೊಳಗಿನ ನೀತಿ ಚೆನ್ನಾಗಿದೆ. ನಿಮ್ಮ ಅಪ್ಪಯ್ಯ ಬೇಗ ಗುಣಮುಖರಾಗಲಿ

Unknown said...

Tnx To

Yajnesh
venu
Nanu
&
Paranjape

jithendra hindumane said...

ರಾಘು, ನಿಜವಾಗ್ಲೂ ತುಂಬಾ ಬೇಸರದ ಸಂಗತಿ..
ಬೇಗ ಹುಷಾರಾಗ್ಲಿ...