Tuesday, February 9, 2010

ಪ್ರಜಾಪ್ರಭುತ್ವದ ನಾಲ್ಕನೇ ............!

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಂತೆ ಪತ್ರಿಕೆಗಳು. ಬಹಳಾ ಬಹಳಾ ಜವಾಬ್ದಾರಿಯುತವಾಗಿ ವರ್ತಿಸುತ್ತವಂತೆ. ಅವುಗಳು ಇಲ್ಲದಿದ್ದರೆ ಸಿಕ್ಕಾಪಟ್ಟೆ ಅನಾಹುತಗಳು ಆಗಿಬಿಡುತ್ತವಂತೆ. ಹೀಗೆ ಅಂತೆಕಂತೆಗಳ ಬೊಂತೆಯನ್ನು ಸೃಷ್ಟಿಸಿದವರೇ ಪತ್ರಿಕೋದ್ಯಮಿಗಳು ಎನ್ನುವುದು ಬೇರೆಯದೇ ವಿಷಯವಾದರೂ ಅದರಲ್ಲಿ ಸತ್ಯಾಂಶವಿದೆ. ಎಂತೆಂತಹಾ ಹಗರಣಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಸರ್ಕಾರಗಳನ್ನೇ ಕೆಡವಿದ ಉದಾಹರಣೆ ಸಿಗುತ್ತದೆ.

ಆದರೆ ದಶಕಗಳಿಂದೀಚೆಗೆ ಪತ್ರಿಕೆಗಳು ಅಥವಾ ಮಾಧ್ಯಮಗಳು ಅನಾಹುತವನ್ನೇ ಸೃಷ್ಟಿಮಾಡುತ್ತಿವೆಯಾ ಅಂತ ಪ್ರಶ್ನೆ ಸಾಮಾನ್ಯ ನಾಗರೀಕರನ್ನೂ ಕಾಡದಿರದು. ಹಣ ಮಾಡುವುದೇ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಂತೆ ವರ್ತಿಸುತ್ತಿರುವ ಹಲವು ಮಾಧ್ಯಗಳನ್ನು ಅವುಗಳ ಬೆಳವಣಿಗೆಗಳನ್ನು ಗಮನಿಸಿದರೆ "ಅಟ್ರಾಸಿಟಿ" ಕೇಸಿನ ದುರುಪಯೋಗವಾದಂತೆ ಪತ್ರಿಕೋದ್ಯಮದಲ್ಲಿರುವವರು ನಿಯತ್ತಿನ ಜನ ಪತ್ರಕರ್ತರು ಪ್ರಾಮಾಣಿಕರು ಎಂದು ನಂಬಿಕೊಂಡು ಬಂದ ಜನಸಾಮಾನ್ಯರ ನಂಬಿಕೆಯ ದುರುಪಯೋಗವಾದಂತೆ ಭಾಸವಾಗುತ್ತಿದೆ.

ಸಮಾರಂಭಗಳಲ್ಲಿ ಸ್ವಾಗತ ಪತ್ರಕರ್ತರಿಗೆ ಸರಿಯಾಗಿ ಕೋರಿಲ್ಲ ಎಂಬ ವಿಷಯಕ್ಕೆ ಪ್ರತಿಭಟನೆ ಮಾಡುವುದರಿಂದ ಹಿಡಿದು ಕಪೋಲಕಲ್ಪಿತ ವರದಿಗಳಿಗೆ ಪ್ರಾಮುಖ್ಯತೆ ನೀಡಿ ಹಣ ಮಾಡುತ್ತಿರುವ ಪತ್ರಿಕೆಗಳ ವಿರುದ್ಧ ದನಿ ಎತ್ತಿದರೂ ಅದರ ಕುರಿತಾಗಿ ಪ್ರತಿಭಟನೆ ಮಾಡುವ ಮಟ್ಟಕ್ಕೆ ಪತ್ರಿಕೆಗಳ ಹೊತ್ತಿರುವವರು ಬಂದು ತಲುಪಿದ್ದಾರೆ. ವಾಸ್ತವ ಸತ್ಯವೆಂದರೆ ರಾಜಕೀಯ ಮತ್ತು ರಾಜಕಾರಣಿಗಳಿಗಿಂತ ಕೆಳಮಟ್ಟದಲ್ಲಿ ಇಂದು ಪತ್ರಿಕೆಗಳಿವೆ. ರಾಜಕಾರಣಿಯ ಸ್ವಾರ್ಥದಾಸೆಗಾದರೂ ಒಂದಿಷ್ಟು ಸಾರ್ವಜನಿಕ ಕೆಲಸಗಳಾಗುತ್ತವೆ. ಆದ್ರೆ ಇಲ್ಲಿ ಹಾಗಲ್ಲ.

ಸರ್ಕಾರದಲ್ಲಿ ಜನಸಾಮಾನ್ಯರ ಹಣವನ್ನು ಲೂಟಿ ಮಾಡಲು ಈಗ ಪತ್ರಿಕೆ ನಡೆಸುವುದೂ ಒಂದು ದಂಧೆಯಾಗಿ ಪರಿಣಮಿಸಿದೆ. ನಾನು ಕಂಡಂತೆ ನಮ್ಮ ತಾಲ್ಲೂಕಿನಲ್ಲಿನಲ್ಲಿ ಹತ್ತು ಹಲವಾರು ಪತ್ರಿಕೆಗಳ ನಡೆಸುವ ಜನರಲ್ಲಿ ಕೆಲವರು ಪೋಲೀಸ್ ಕೇಸ್ ಡೀಲಿಂಗ್ ಕೂಡ ನಡೆಸುತ್ತಿದ್ದಾರೆ. ಸಂಘ ಮಾಡಿಕೊಂಡು ವಿಶೇಷ (ಸೈಟು ಮನೆ) ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನೆಪಕ್ಕೆ ಒಂದು ಪುಟದ ಪತ್ರಿಕೆ ಇಟ್ಟುಕೊಂಡು ವ್ಯವಸ್ಥಿತವಾಗಿ ಜನರಿಗೆ ಲಕ್ಷಗಟ್ಟಲೆ ಹಣ ಪಂಗನಾಮ ಹಾಕಿದರೂ ಇದ್ದಾರೆ. ಬ್ಲಾಕ್ಮೇಲ್ ತಂತ್ರ ಬಳಸಿ ಹಣ ಬಾಚುವವರು ಇದ್ದಾರೆ. ಪ್ರೆಸ್ ಕ್ಲಬ್ ಎಂಬ ಸರ್ಕಾರಿ ಕಾನೂನನ್ನು ಸ್ವಂತಕ್ಕೆ ಬಳಸಿಕೊಂಡು ಅದನ್ನು ಜೂಜಿನ ಅಡ್ಡೆ ನಡೆಸುವವರಿಗೆ ಬಾಡಿಗೆಗೆ ಕೊಟ್ಟು ತಿಂಗಳು ತಿಂಗಳೂ ಹಣ ಎಣಿಸಿಕೊಂಡ ಉದಾಹರಣೆ ಇದೆ. ಇವುಕ್ಕೆಲ್ಲಾ ಶ್ರೀರಕ್ಷೆ ಸರ್ಕಾರ "ಪತ್ರಕರ್ತರು" ಎಂದು ಕೊಟ್ಟ ಮಾನ್ಯತೆ. ಜನಸಾಮಾನ್ಯರು ಅವರು ಪ್ರಾಮಾಣಿಕರು ಎಂದು ತಿಳಿದುಕೊಂಡ ಕಾರಣ.
ಕರ್ನಾಟಕ ರಾಜ್ಯವೊಂದರಲ್ಲೇ ಸಹಸ್ರಾರು ಪತ್ರಿಕೆಗಳಿವೆ. ತಾಲ್ಲೂಕಾ ಸೆಂಟರ್ ಜಿಲ್ಲಾಕೇಂದ್ರ ದಿಂದ ಹೊರಡುವ ಸಹಸ್ರಾರು ಪತ್ರಿಕೆಗಳಲ್ಲಿ ಹಲವು ಪತ್ರಿಕಾಧರ್ಮವನ್ನು ಗಾಳಿಗೆ ತೂರಿ ತಲೆಹಿಡಿಯುವ ಕೆಲಸದಲ್ಲಿನ ನಿರತವಾಗಿವೆ. ತಾವು ಮುದ್ರಿಸುವ ಪ್ರತೀ ಕಾಗದದ ಹಿಂದೆ ವೃಕ್ಷವೊಂದರ ಸಾವು ಇದೆ ಎಂಬ ಪ್ರಾಥಮಿಕ ಅರಿವೂ ಇರದ ಈ ಪತ್ರಿಕೆಗಳು ಹಾಗೂ ಪತ್ರಕರ್ತರಿಂದ ಸಾಮಾಜಿಕ ಪಿಡುಗೇ ವಿನಹ ಮತ್ತಿನ್ಯಾವ ಕವಡೆಕಾಸಿನ ಪ್ರಯೋಜನವೂ ಇಲ್ಲ. ಪತ್ರಿಕಾ ಕಾನೂನುಗಳು ಬರಪ್ಪೂರ್ ಬದಲಾವಣೆಯಾಗಬೇಕಿದೆ. ಕನಿಷ್ಠ ಪ್ರಸಾರ, ಸುದ್ಧಿ ಬದ್ಧತೆ, ವಾರ್ಷಿಕ ಲೆಕ್ಕ, ಮುಂತಾದವುಗಳನ್ನು ಸಮರ್ಪಕವಾಗಿ ಪರಿಗಣಿಸಿ ನಾಯಿಕೊಡೆಯಂತಿರುವ ಪತ್ರಿಕೆಗಳಿಗೆ ಕಡಿವಾಣ ಹಾಕದಿದ್ದರೆ ಕಾಡನ್ನು ಉಳಿಸುವ ಕತೆ ಆಮೇಲಾಯಿತು ನಾಡನ್ನು ಉಳಿಸುವುದೂ ಕಷ್ಟವೇ.
ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೊರ್ಯಾರು? ಅನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.

No comments: