"ಇದೇನಪ್ಪಾ ದನದ ದೊಡ್ಡಿ ಇದ್ದಂಗೆ ಇದೆ" ಎಂಬ ಮಾತು ನೀವು ಯಾವಗಲಾದರೂ ಕೇಳಿಯೇ ಕೇಳಿರುತ್ತೀರಿ. ಆದರೆ ಕಚಡಾಗಳು ತುಂಬಿದಕ್ಕೆಲ್ಲಾ ದೊಡ್ಡಿ ಎಂದು ಕರೆಯಿಸಿಕೊಳ್ಳುವ ದೊಡ್ದಿ ನೋಡಿದ್ದು ಅಪರೂಪವೇ. ಬೇಲಿರಹಿತ ಕೃಷಿಯಿರುವ ಹಳ್ಳಿಗಳಲ್ಲಿ ಸರ್ಕಾರದಿಂದ ನಡೆಯಿಸಲ್ಪಡುವ ಜಾನುವಾರು ದೊಡ್ಡಿ ಇನ್ನೂ ಚಾಲ್ತಿಯಲ್ಲಿದೆ. ಜಾನುವಾರುಗಳು ದೊಡ್ಡಿ ಸೇರಲು ವಿಚಾರಣೆ ಇಲ್ಲದೆ, ವಕೀಲರ ವಶೀಲಿಬಾಜಿ, ಇಲ್ಲದೆ ಆರೋಪವೊಂದಿದ್ದರೇ ಸಾಕು . ಗದ್ದೆಗೆ ಬರುವ ಬೀಡಾಡಿ ದನಗಳು ಹಾಗೂ ಒಡೆತನದ ದನಗಳನ್ನು ನಾಲ್ಕಾರು ಜನ ಸೇರಿ ಅಟ್ಟಿಸಿಕೊಂಡು ದೊಡ್ಡಿ ಯ ತನಕ ಹೊಡೆದುಕೊಂಡು ಹೋಗಿ ಹೆಸರು ಬರೆಯಿಸಿ ಬಂದರಾಯಿತು. ಆಮೇಲೆ ಆ ಜಾನುವಾರು ಮಾಲಿಕರ ಕೆಲಸ ಶುರು. ಸಂಜೆ ಕಳೆದು ರಾತ್ರಿಯಾದರೂ ಮನೆಗೆ ಬರದ ಜಾನುವಾರುಗಳನ್ನು ನೆನೆದ ಮಾಲಿಕನಿಗೆ ಮೊದಲು ಯೋಚನೆ ಬರುವುದು ಈ ದೊಡ್ಡಿಯದು. ಬೆಳಿಗ್ಗೆ ದೊಡ್ಡಿಗೆ ಹೋಗಿ ಅಲ್ಲಿಯ ನಿರ್ವಾಹಕರು ವಿಧಿಸಿದ ದಂಡ ಕಟ್ಟಿ ಜಾನುವಾರು ಬಿಡಿಸಿಕೊಂಡು ಬಂದರೆ ಜಾನುವಾರುಗಳ ಜೈಲ್ ವಾಸ ಮುಗಿದಂತೆ. ಒಮ್ಮೊಮ್ಮೆ ಮಾಲಿಕ ಬರುವುದು ವಾರಗಟ್ಟಲೇ ತಡವಾಗಿ ಜಾನುವಾರುಗಳು ಜಾಮೀನುಸಿಗದ ಅಪರಾಧಿಯಂತೆ ದೊಡ್ಡಿಯಲ್ಲಿಯೇ ಕಾಲಕಳೆಯಬೇಕಾದ ಪ್ರಸಂಗ ಇರುತ್ತದೆ.
ದೊಡ್ಡಿಯೆಂಬುದು ಪೂಜೆಮಾಡುವ ಗೋಮಾತೆ ಗಾಗಿ ಅಲ್ಲ, ತುಡು ಮಾಡುವ ಜಾನುವಾರುಗಳಿಗಾಗಿ ಚಾಲ್ತಿಗೆ ಬಂದ ದೊಡ್ಡಿಯೆಂಬುದು ಅಕ್ಷರಶ: ಗಲೀಜು ಕೊಂಪೆಯಾಗಿರುತ್ತದೆ. ಅದನ್ನೊಂದು ಹೊರತುಪಡಿಸಿದರೆ ಮನುಷ್ಯರಿಗಿಲ್ಲದ ವಿಶೇಷ ಸವಲತ್ತು ಇಲ್ಲಿದೆ.....!. ಮನುಷ್ಯ ಹೊರಗೆ ಲೈಂಗಿಕ ಹಗರಣ ನಡೆಸಿ ಒಳಗೆ ಹೋದರೆ, ಇಲ್ಲಿ ಅವಕ್ಕೆಲ್ಲಾ ಒಳಗಡೆಯೂ ಮುಕ್ತ ಮುಕ್ತ. ಕಾರಣ ಹೋರಿ, ದನ ಎಮ್ಮೆ ಎತ್ತುಗಳೆಂಬ ಬೇಧಭಾವ ವಿಲ್ಲದೆ ಎಲ್ಲವುದಕ್ಕೂ ಒಂದೇ ಜಾಗ ಒಂದೇ ರೀತಿಯ ಆರೈಕೆ ಒಂದೇ ರೀತಿಯ ಸವಲತ್ತು. ಪುಕ್ಕಟ್ಟೆ ಹುಲ್ಲು ನೀರು ಸುಖ ನಿದ್ರೆ. ವಿಪರ್ಯಾಸವೆಂದರೆ ಜಾನುವಾರು ಸಾಕಾಣಿಕೆದಾರರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ದೊಡ್ಡಿಯ ಸಂಖ್ಯೆಯೂ ಇಳಿಮುಖವಾಗುತ್ತಿದೆ.
(ಇಂದಿನ ವಿಜಯ ಕರ್ನಾಟಕ ಲವಲವಿಕೆ ಯಲ್ಲಿ ಪ್ರಕಟಿತ)
1 comment:
ಅಭಿನಂದನೆಗಳು. ಕೊಂಡವಾಡ ಎನ್ನುವ ಪದವು ದೊಡ್ಡಿಗೆ ಸಮಾನಾರ್ಥದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿದೆ.
ಈಗ ಈ ಜಾಗೆಗಳನ್ನು ಪುಡಾರಿಗಳು ಅತಿಕ್ರಮಿಸಿ ಅ೦ಗದಿ ಮನೆಗಳನ್ನು ಮಾಡಿಕೊಂಡಿದ್ದು ಉಂಟು ಕೆಲವೆಡೆ!
Post a Comment