Sunday, July 25, 2010

ಶಬ್ದವಿಲ್ಲದ ಸದ್ದುಗಳು.

ಹೇಗೆ ಬರೆಯಲಿ ನಾನು ಶಬ್ದಗಳನ್ನ
ಅಕ್ಷರಗಳಲ್ಲಿ ಇಲ್ಲದಿರುವುದನ್ನ?
ವಿಶಧಿಸುವ ಬಗೆ ಹೇಗೆ?
ಮೂಡುವ ಸ್ವರಗಳನ್ನ

ಟಪ ಟಪ ಎನ್ನುವ ಮಳೆಹನಿಗಳ
ಸದ್ದು ಹಾಗೆಯೇ ಇಲ್ಲ
ಕುಹೂ ಕುಹೂ ಎನ್ನುವ ಕೋಗಿಲೆ
ಹಾಗೆ ಕೂಗುವುದಿಲ್ಲ
ಕಾಕಾ ಅನ್ನುವ ಕಾಗೆ
ಅಷ್ಟಕ್ಕೇ ನಿಲ್ಲಿಸುವುದಿಲ್ಲ

ಹೇಗೆ ಬರೆಯಲಿ ನಾನು ಶಬ್ದಗಳನ್ನ
ಅಕ್ಷರಗಳಲ್ಲಿ ಇಲ್ಲದಿರುವುದನ್ನ?
ಚಿತ್ರವಿಚಿತ್ರ ಬಗೆಯಾಗಿ
ಮನಸೂರೆಗೊಳ್ಳುವ ದನಿಗಳನ್ನ.

ಜುಳು ಜುಳು ಹರಿವ ನದಿಯ
ನಿನಾದ ಬೇರೆ
ವಟರ್ ವಟರ್ ಎನ್ನುವ ಕಪ್ಪೆಯ
ಸ್ವರವೇ ಬೇರೆ
ಜಿರ್ ಜಿರ್ ಎನ್ನುವ ಜೀರುಂಡೆಯ
ದನಿಯೇ ಬೇರೆ


ಹೇಗೆ ಬರೆಯಲಿ ನಾನು ಶಬ್ದಗಳನ್ನ
ಅಕ್ಷರಗಳಲ್ಲಿ ಇಲ್ಲದಿರುವುದನ್ನ?
ವಿಶಿಷ್ಟ ವಿಕಾರ
ವಿಚಕ್ಷಣ ಸದ್ದುಗದ್ದಲವನ್ನ


ಚಟಿಲ್ ಎನ್ನುವ ಸಿಡಿಲು
ಗುಡುಗಿನಂತಿಲ್ಲ
ಗೊಂಡಾರಣ್ಯದ ಸದ್ದು
ಸಾಗರದಲ್ಲಿಲ್ಲ
ಭೂಮ್ಯಾಕಾಶದಲಿ
ನೀರವತೆಯಿಲ್ಲ

ಹೇಗೆ ಹೇಳಲಿ ನಿಮಗೆ ಸದ್ದುಗಳನ್ನ,
ಮನದೊಳಗಿನ ಶಬ್ದಗಳನ್ನ.

ಅಕ್ಷರಾಕ್ಷರ ಜೋಡಿಸಿ ಶಬ್ದಗಳು
ಕೇಳಿಸಿ ಆಲಿಸಿ ತಿಳಿದಿವೆ ಸದ್ದುಗಳು


ಕೇಳಿರಿ ಪ್ರಾಣಿಪಕ್ಷಿಗಳ ದನಿಯನ್ನ
ಆಲಿಸಿ ನದಿತೊರೆಗಳ ಸದ್ದುಗಳನ್ನ
ಅರಣ್ಯದ ಚೀತ್ಕಾರವನ್ನ,
ಸಾಗರದ ಭೋರ್ಗರೆತವನ್ನ,
ಮತ್ತಾಗ ಓದಿ ಆಲಿಸಿರಿ
ಅಕ್ಷರದಲ್ಲಿರುವ ಶಬ್ದವಿಲ್ಲದ ಸದ್ದುಗಳನ್ನ.

11 comments:

ಮೃತ್ಯುಂಜಯ ಹೊಸಮನೆ said...

ಪರವಾಗಿಲ್ವೇ...

ಚುಕ್ಕಿಚಿತ್ತಾರ said...

ಹೌದಲ್ಲ..
ಶಬ್ದ ಶಬ್ದವಲ್ಲ.....!!!!
ಅವ್ಯಯವೆ೦ದು ಕೊಟ್ಟರೂ ಸಕಾರಣ..
ಅದು ವ್ಯಾಕರಣ...!!!!

ಸಾಗರದಾಚೆಯ ಇಂಚರ said...

ಶಬ್ದಗಳ ಕವನ ತುಂಬಾ ಸುಂದರ

ಸೀತಾರಾಮ. ಕೆ. / SITARAM.K said...

ಶಬ್ದ(ಸೌಂಡ್)ಗಳನ್ನೂ ಶಬ್ದ(ವರ್ಡ್)ಗಳಲ್ಲಿ ಹಿಡಿದಿಡಲಾಗದ ತಮ್ಮ ತೊಳಲಾಟದ ಕವನ ತುಂಬಾ ಚೆನ್ನಾಗಿ ಮೂಡಿದೆ.

ಪ್ರಗತಿ ಹೆಗಡೆ said...

ಶಬ್ದ ಗಳ ಕವನ ಚೆನ್ನಾಗಿದೆ.. ಕೆಲವು ಪ್ರಕೃತಿ ನೀಡಿದ ಶಬ್ದ ಗಳಿಗೆ ಶಬ್ಧ ಹುಡುಕುವುದು ಕಷ್ಟ... ಸೀತಾರಾಮ್ ಸರ್ ಅವರ ಪ್ರತಿಕ್ರಿಯೆ ಸಮಂಜಸವಾಗಿದೆ...

ಮನದಾಳದಿಂದ............ said...

ಶಬ್ದ ಶಬ್ಧವಲ್ಲ..........
ಪ್ರಕೃತಿಯ ಕೂಗದಲ್ಲ.........
ಅರಿತವರಾರೂ ಇಲ್ಲ.........
ಅರ್ಥ ಅವನೇ ಬಲ್ಲ..........

Nice one...

Anonymous said...

raaganna na hosa avtara. idenidu kvana?!
-kodsara

ಮಾವೆಂಸ said...

ಚೆಂದ ಬರದ್ದೆ. ಜೋರು ಮಳೆ , ಕರೆಂಟ್ ಕಣ್ಣಾಮುಚ್ಚಾಲೆ ಸಮಯದಲ್ಲಿ ಇದು ಬರೆದದ್ದು ಇರಬೇಕು! ಅದು ನಿಜವೇ ಆಗಿದ್ದರೆ ನಿಮ್ಮ್ಮೂರಲ್ಲಿ ಆ ಸ್ಥಿತಿ ಮುಂದುವರೆಯಲಿ!!

Ramya said...

Super kano :)

ಮನಮುಕ್ತಾ said...

ಅಕ್ಷರಗಳಲ್ಲಿ ಶಬ್ದಗಳು..ಶಬ್ದದಲ್ಲಿ ಸದ್ದಿಲ್ಲ..ಓಹ್..!
ಒಳ್ಳೆಯ ಕವಿತೆ.. ಹಿಡಿಸಿತು..

shivu.k said...

ಒಹ್! ಇದು ನಿಜಕ್ಕೂ ಸತ್ಯ. ತುಂಬಾ ಚೆನ್ನಾದ ಪದ್ಯದಲ್ಲಿ ಎಷ್ಟೊಂದು ಅರ್ಥಗರ್ಭಿತವಾಗಿ ಬರೆದಿದ್ದೀರಿ..