ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬ ಗಾದ ಮಾತಿದೆ. ಮನೆ ಮಗ ಮನೆಹಾಳು ಕೆಲಸ ಮಾಡಿದಾಗ ಈ ಗಾದೆಯನ್ನು ಬಳಸುತ್ತಾರೆ. ಹಾಗೆ ಬಳಸಲು, ಹೀಗೆ ಅನ್ನಲು ಕಾರಣವಿದೆ. ಕಬ್ಬಿಣದ ಕೊಡಲಿಗೆ ಹಿಡಿಕೆಯಿಲ್ಲದಿದ್ದರೆ ಮರ ಕಡಿಯಲು ಆಗುವುದಿಲ್ಲ. ಕೊಡಲಿಯ ಹಿಡಿಕೆ ಮರದ್ದೇ ಆಗಿದ್ದರಿಂದ ಮರವನ್ನೇ ಬಳಸಿ ಮರ ಕಡಿದಾಗ ಹೀಗೆ ಅನ್ನುತ್ತಾರೆ. ಇಲ್ಲಿ ಎರಡು ರೀತಿಯಿಂದ ಮರಕಡಿತಲೆ, ಮೊದಲನೆಯದು ಕೊಡಲಿಯ ಹಿಡಿಕೆಗಾಗಿ ಎರಡನೆಯದು ಹಿಡಿಕೆಯ ಬಳಸಿ ಮರ ಕಡಿದಾಗ. ಇರಲಿ ಹೇಳಹೊರಟಿರುವ ವಿಷಯ ಅದಲ್ಲ ಬೇರೆಯೇ ಇದೆ.
ಕೊಡಲಿ, ಗುದ್ದಲಿ, ಪಿಕಾಸಿ ಮುಂತಾದ ಕೃಷಿ ಉಪಕರಣಗಳ ಕಾವಿ(ಹಿಡಿಕೆ)ಗಾಗಿ ಮರ ಕಡಿಯುವುದು ಅನಿವಾರ್ಯ. ಗಟ್ಟಿಮುಟ್ಟಾದ ನೇರವಾಗಿರಬೇಕಾದ ಹಿಡಿಕೆಗಾಗಿ ಉತ್ತಮ ಮರಗಳನ್ನೇ ಕಡಿಯಬೇಕಾಗುತ್ತದೆ. ಇದರಿಂದ ಅರಣ್ಯ ನಾಶ ಅಪಾರ. ಆದರೆ ಮರಕಡಿಯದೆ ಅತ್ಯುತ್ತಮ ಗುಣ ಮಟ್ಟದ ಹಿಡಿಕೆಗಳನ್ನು ಕೃಷಿಕರಿಗೆ ಮರವೊಂದು ಒದಗಿಸುತ್ತಿದೆ. ಅದರ ಹೆಸರು ಸೂಜಿಗರಗಲು.
ಸೂಜಿಗರಗಲು ಪಶ್ಚಿಮಘಟ್ಟಗಳ ಕಾಡಿನಲ್ಲಿರುವ ಕಾಡುಜಾತಿಯ ಮರ. ಇದರ ಕಾಂಡದಲ್ಲಿ ಕೃಷಿ ಉಪಕರಣಗಳಿಗೆ ಬೇಕಾಗುವಂತಹ ಹಿಡಿಕೆಗಳು ಉಬ್ಬಿ ನಿಂತಿರುತ್ತವೆ. ಬೇಕಾದ ಅಳತಗೆ ಕತ್ತರಿಸಿ ಕೊಡಲಿ ಅಥವಾ ಗುದ್ದಲಿಗೆ ಹಾಕಿಕೊಂಡರೆ ಮರಕ್ಕೆ ಹಾಗೂ ಅದರ ಬೆಳವಣಿಗೆಗೆ ಕಿಂಚಿತ್ತೂ ಅಪಾಯವಿಲ್ಲ. ಅತ್ಯಂತ ಗಟ್ಟಿ ಜಾತಿಯಾಗಿರುವ ಇದರ ಹಿಡಿಕೆ ಗುದ್ದಲಿ ಪಿಕಾಸಿಯ ಆಯುಷ್ಯವಿರುವವರೆಗೂ ಬಾಳಿಕೆ ಬರುತ್ತದೆ. ಹೀಗಾಗಿ ಕೃಷಿ ಉಪಕರಣಗಳ ಹಿಡಿಕೆಗಾಗಿ ಕಾಡುನಾಶ ಮಾಡದೆ ಅಷ್ಟರಮಟ್ಟಿಗಿನ ಅರಣ್ಯ ಉಳಿಸಬಹುದು ಎಂಬುದು ಅನುಭವಸ್ತರ ಮಾತು.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)
4 comments:
Raghanna , nice info... :-)
ಈ ಗಾದೆ ಮಾತು ಕೆಳಿದಿದ್ದಿ...ಅರ್ಥ ಗೊತ್ತಿರ್ಲೆ... ಈಗ ಗೊತಾತು...thanku... :-)
ಸುಜಿಗರಗಲು ಬಗ್ಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.
ಉತ್ತಮ ಮಾಹಿತಿ ಶರ್ಮ ಅವರೆ. ಧನ್ಯವಾದಗಳು
ಅನ೦ತ್
ನನಗೂ ಗಾದೆಯ ಸರಿಯಾದ ಅರ್ಥ ತಿಳಿದಿರಲಿಲ್ಲ
ಒಳ್ಳೆಯ ವಿಚಾರ
Post a Comment