Monday, September 20, 2010

ಅಡಿಕೆ ಕೃಷಿಗೆ ’ಅಮೇರಿಕನ್’ ಯುವಕ


ಮಲೆನಾಡಿನ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ, ಯುವಕ ಯುವತಿಯರು ಷಹರದ ಬಣ್ಣದ ಬದುಕಿಗೆ ಮನಸೋತು ಹಳ್ಳಿ ತೊರೆದು ಪಟ್ಟಣ ಸೇರುತ್ತಿದ್ದಾರೆ, ತೋಟದ ಕೆಲಸಕ್ಕೆ ಕೂಲಿಕಾರ್ಮಿಕರು ಸಿಗುತ್ತಿಲ್ಲ, ಎಂಬಂತಹ ಕೊರಗಿನ ಮಾತುಗಳ ನಡುವೆ ಪಟ್ಟಣದ ಬದುಕನ್ನು ತೊರೆದು ಕೃಷಿಯನ್ನು ಆಯ್ದುಕೊಂಡು ಹಳ್ಳಿಗೆ ಬಂದಿರುವ ದಂಪತಿಗಳ ಕತೆ ಇಲ್ಲಿದೆ.
ಸಾಗರದ ಸಮೀಪದ ಮಂಕಾಳೆ ಊರಿನವರಾಗಿದ್ದ ಕೃತಿ. ಆರ್. ತಾವು ದೆಹಲಿಯಲ್ಲಿ ಎಂ.ಫಿಲ್ ಓದುತ್ತಿದ್ದಾಗ ಮೆಚ್ಚಿದ್ದು ಅಮೇರಿಕಾದ ಟಾಡ್ ಅವರನ್ನು. ಮಗಳು ಮೆಚ್ಚಿದ ಅಮೆರಿಕಾದ ಅಳಿಯನನ್ನು ಮನೆಯವರೂ ಕೂಡ ತಂಟೆ ತಕರಾರಿಲ್ಲದೆ ಸ್ವಾಗತಿಸಿದರು. ಮದುವೆಯ ನಂತರ ಆರು ವರ್ಷಗಳ ಕಾಲ ದೆಹಲಿ ಅಮೆರಿಕಾ ಮುಂತಾದ ಕಡೆಗಳಲ್ಲಿ ಕೃತಿ ಹಾಗೂ ಟಾಡ್ ದುಡಿದರು. ದಂಪತಿಗಳಿಬ್ಬರೂ ಸಂಗೀತ ಪ್ರಿಯರಾದ್ದರಿಂದ ಸಂಜೆ ಸಮಯವನ್ನು ಸಂಗೀತಕ್ಕಾಗಿ ಮೀಸಲಿಡುವ ಆಸೆಯಿತ್ತು. ದುಡಿಮೆಗೆ ಪ್ರಾಧಾನ್ಯತೆಯಿತೆಯಿರುವ ಪಟ್ಟಣದಲ್ಲಿ ಸಂಜೆ ತಮ್ಮ ಹವ್ಯಾಸಕ್ಕೆ ಮೀಸಲಿಡಲು ಆಗುತ್ತಿರಲಿಲ್ಲ. ಆವಾಗ ಅವರಿಗೆ ಮನಸ್ಸಿನ ಮೂಲೆಯಲ್ಲಿ ಚಿಗುರೊಡೆದ ಆಸೆ ಕೃಷಿಕರಾಗಬೇಕು ಎಂದು. ಆ ಆಸೆಯ ಫಲ ಇಂದು ಅಮೆರಿಕನ್ ಯುವಕ ಟಾಡ್ ಲಿರಿಚ್ ಹಾಗೂ ಕೃತಿಯವರನ್ನು ಅಡಿಕೆ ತೋಟದ ಮಾಲಿಕರನ್ನಾಗಿಸಿದೆ.
ಸಾಗರದಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಪುರಪ್ಪೆಮನೆ ಎಂಬ ಊರು ಸಿಗುತ್ತದೆ. ಅಲ್ಲಿ ಅಪ್ಪೆಮನೆಯತ್ತ ಒಂದುಕಿಲೋಮೀಟರ್ ಸಾಗಿದರೆ ಈ ಅಮೇರಿಕನ್ ಅಳಿಯ ಊರಿನ ಮಗಳು ಅವರ ಸಣ್ಣ ಫಾರಂ ಹೌಸ್ ನೋಡಬಹುದು. ಪಕ್ಕಾ ಪಕ್ಕಾ ವಿದೇಶಿ ಶೈಲಿಯಮನೆ ನೋಡಿದ ತಕ್ಷಣ ಇದು ಪರಂಪರಾಗತ ಮಲೆನಾಡು ಮನೆ ಅಲ್ಲ ಎಂಬುದು ನಿಮಗೆ ತೋಚುತ್ತದೆ. ನಿಮ್ಮ ಅದೃಷ್ಟ ಖುಲಾಯಿಸದ್ದರೆ ಮನೆಯ ಬಳಿ ಹೋಗುತ್ತಿದ್ದಂತೆ ಸೀತಾರ್ ಧ್ವನಿ ಕೇಳಬಹುದು. ಸಿತಾರ್ ನಾದ ಹಾಗೂ ಅದಕ್ಕೊಂದು ಸಣ್ಣ ಮಟ್ಟದ ಹಾಡು ಕೇಳುತ್ತಿದೆಯಂದರೆ ಲಾಡ್ ದಂಪತಿಗಳು ಮನೆಯಲ್ಲಿದಾರೆಂದು ಅರ್ಥ. ಅವರು ಇದ್ದಾರೆಂದರೆ ನಿಮಗೆ ಉತ್ತಮ ಆತಿಥ್ಯ ಸಿಕ್ಕಿತು ಅಂತ.
ಸ್ವಭಾವತಹ ಏಕಾಂಗಿಪ್ರಿಯರಾದ ಟಾಡ್ ಲಿರಿಚ್ ಹರಟೆಮಲ್ಲರಲ್ಲ. ಭಾಷೆಯ ತೊಡಕೂ ಸ್ವಲ್ಪ ಮಟ್ಟದಲ್ಲಿರುವುದರಿಂದ ಹಾಗಿರಬಹುದು. ಕನ್ನಡ ಅರ್ಥ ಮಾಡಿಕೊಳ್ಳುವ ಹಂತದಲ್ಲಿರುವ ಅವರು ಅಲ್ಪಸ್ವಲ್ಪ ಮಾತನಾಡಲೂ ಬಲ್ಲರು ಈಗಷ್ಟೆ. "ನಿಮಗೆ ಈ ನೀರವ ವಾತಾವರಣ ಅಮೆರಿಕಾದ ಬ್ಯುಸೀ ಜೀವನಕ್ಕೆ ಹೋಲಿಸಿದಲ್ಲಿ ಬೇಸರ ತರಿಸದೇ? ಎಂಬ ಪ್ರಶ್ನೆಗೆ ಲಾಡ್ "ಬೇಸರ ತರಿಸಲು ಸಮಯವೇ ಇಲ್ಲ ಹಗಲೆಲ್ಲಾ ಕೆಲಸ, ರಾತ್ರಿ ಸಿತಾರ್ ಹಾಗೂ ಓದು" ಎಂದು ನಗುತ್ತಾರೆ. ಆದರೆ ಕೃತಿ ನಿಮ್ಮೆದುರು ಇತಿಹಾಸವನ್ನೇ ಬಿಚ್ಚಿಡುತ್ತಾರೆ . ಇಂಡೋ ಅಮೇರಿಕನ್ ಹಮೀರ್ ಮುಗಿಲು ನಿಮ್ಮನ್ನು ಮಂತ್ರಮುಗ್ದನನ್ನಾಗಿಸುವಲ್ಲಿ ಸೈ ಅನ್ನಿಸಿಕೊಳ್ಳುತ್ತಾನೆ. ಅಮೇರಿಕಾದ ಧೈರ್ಯ ಭಾರತದ ಒಳ್ಳೆಯತನ ಮಿಳಿತಗೊಂಡ ಅದ್ಭುತ ವ್ಯಕ್ತಿತ್ವ ಮಗ ಹಮೀರ್ ನದು. ಅಮ್ಮನ ಬಳಿ ಹವ್ಯಕ ಕನ್ನಡ ಮತ್ತಷ್ಟೆ ವೇಗವಾಗಿ ಅಪ್ಪನ ಬಳಿ ಅಮೇರಿಕನ್ ಆಕ್ಸೆಂಟ್ ನಲ್ಲಿ ಇಂಗ್ಲೀಷ್ ಮಾತನಾಡುವ ಮುದ್ದು ಮುಖದ ಹಮೀರ್ ಮುಗಿಲು ಪುಟ್ಟ ಕೃಷಿಕನಾಗಿ ಬೆಳೆಯುತ್ತಿದ್ದಾನೆ.
ಪಾಳೇಕರ್ ಕೃಷಿಯ ಬಗ್ಗೆ ಅತ್ಯಾಸಕ್ತಿ ಹೊಂದಿರುವ ದಂಪತಿಗಳು ಸಾವಯವ ಕೃಷಿಯನ್ನು ಪಾಲಿಸುತ್ತಿದ್ದಾರೆ. ಒಂದು ಎಕರೆಯಷ್ಟು ಅಡಿಕೆ ತೊಟ, ಸೊಪ್ಪಿನ ಬೆಟ್ಟದಲ್ಲಿ ಸುಂದರ ಮನೆ, ನೆಮ್ಮದಿ ಜೀವನ ಇವರ ಆಸೆಯನ್ನು ಸಾಕಾರಗೊಳಿಸಿದೆ. ಹೆಗ್ಗೋಡಿನ ನೀನಾಸಂ ರಂಗಮಂದಿರ ಕೆಲವೇ ಕಿಲೋಮೀಟರ್ ಅಂತರದಲ್ಲಿ ಇರುವುದರಿಂದ ಇವರ ಹವ್ಯಾಸಕ್ಕೆ ಇಂಬು ನೀಡಿದೆ. ಅಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ನಾಟಕಗಳಿಗೂ ಈ ದಂಪತಿಗಳ ಭೇಟಿ ಖಂಡಿತ.
ಟಾಡ್ ರ ತಂದೆ ಇಲ್ಲಿಗೆ ಬಂದು ಹೋಗುತ್ತಾರೆ ಎನ್ನುವ ಕೃತಿ ಅಮೇರಿಕಾದ ಪೋಷಕರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೇಳುತ್ತಾರೆ. ಹದಿನೆಂಟು ತುಂಬಿದ ಮಕ್ಕಳನ್ನು ಪಕ್ಕಾ ಸ್ನೇಹಿತರಂತೆ ನಡೆಯಿಸಿಕೊಳ್ಳುವ ಅಲ್ಲಿನ ಜನ ತಮ್ಮ ಮಕ್ಕಳ ಭವಿಷ್ಯ ನಿರ್ಮಾಣದ ನಿರ್ಧಾರಕ್ಕೆ ಅಡ್ಡಿಯಾಗುವುದಿಲ್ಲ .ಅದು ಅವರ ವೈಯಕ್ತಿಕ ಬದುಕು ಎಂದು ಬೆಂಬಲಿಸುತ್ತಾರೆ ಎನ್ನುತ್ತಾರೆ. ಅಮೆರಿಕಾದ ಕೃಷಿಯ ಬಗ್ಗೆ ಸಾವಿರ ಹೆಕ್ಟೇರ್ ಕೃಷಿಕರ ಬಗ್ಗೆ ವಿಸ್ತಾರ ಕತೆ ಬಿಚ್ಚಿಡುತ್ತಾರೆ. ಅಲ್ಲಿ ಈ ರೀತಿಯ ಒಂದೆರಡು ಎಕರೆ ಭೂಮಿಯಿಂದ ಕೃಷಿ ಕೈಂಕರ್ಯ ಸಾಗದು ಎನ್ನುವ ಮಾತನ್ನು ನೆನಪಿಸುತ್ತಾರೆ.
ಟಾಡ್ ಬೆಳಿಗ್ಗೆ ಏಳಕ್ಕೆ ಅಡಿಕೆ ತೋಟಕ್ಕೆ ಹೋದರೆ ಸೋಗೆ ಕೊಚ್ಚುವುದು, ಕಾದಿಗೆ ಹೆರೆಯುವುದು ಮುಂತಾದ ಕೆಲಸವನ್ನು ಪಕ್ಕಾ ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಕೃಷಿಕರಂತೆ ಸ್ವತಹ ಮಾಡುತ್ತಾರೆ. ನಾವು ಕೂಲಿಕಾರ್ಮಿಕರ ಮೇಲೆ ಸಂಪೂರ್ಣ ಅವಲಂಬಿತರಾಗಿಲ್ಲ ಎಂದು ಕೃತಿ ಆತ್ಮಸ್ಥೈರ್ಯದಿಂದ ಹೇಳುತ್ತಾರೆ. ಕೊನೆಕೊಯ್ಲು, ಗೊಬ್ಬರ ಹಾಕುವುದಕ್ಕೆ ಮುಂತಾದ ದೊಡ್ಡ ಕೆಲಸ ಹೊರತುಪಡಿಸಿದರೆ ನಿತ್ಯದ ಕೆಲಸಕ್ಕೆ ನಾವು ಕೃಷಿಕಾರ್ಮಿಕರ ಬಯಸುವುದಿಲ್ಲ. ಟಾಡ್ ರ ಪ್ರಕಾರ ಕೂಲಿಕಾರ್ಮಿಕರ ಸಮಸ್ಯೆ ಅಮೆರಿಕಾಪ್ರಜೆಗಳಿಗೆ ಮಹತ್ತದ್ದಲ್ಲ. ಕಾರಣ ಅಲ್ಲಿ ತಮ್ಮ ಬಹುತೇಕ ಎಲ್ಲಾ ಕೆಲಸಕ್ಕೆ ಬೇರೆಯವರ ಅವಲಂಬನೆ ಇಲ್ಲ, ಮತ್ತೂ ಕೃಷಿ ಕಾರ್ಮಿಕರ ಸಮಸ್ಯೆಯ ಕುರಿತು ದಿವಸದಲ್ಲಿ ಆರು ತಾಸು ಮಾತನಾಡುವುದರ ಬದಲು ಎರಡು ತಾಸು ಕೆಲಸ ಮಾಡಿದರೆ ಸಮಸ್ಯೆ ಬಗೆಹರಿದಂತೆ ಎಂಬುದು ಖಚಿತ ಮಾತು. ಮನೆಗೆ ಬೇಕಾದಷ್ಟು ತರಕಾರಿ ಸೊಪ್ಪು ಬೆಳೆಯಲು ಹಿತ್ತಲು ಸಜ್ಜಾಗಿದೆ. ಮನೆಯಲ್ಲಿ ಅಡಿಗೆ ಕೆಲಸ ಹೆಂಗಸರದ್ದು ವ್ಯವಹಾರ ಗಂಡಸರದ್ದು ಎಂಬ ಬೇಧಭಾವ ಇವರಲ್ಲಿಲ್ಲ. ಸೋಮವಾರ ಕೃತಿ ಅಡಿಗೆ ಮಾಡಿದರೆ ಮಂಗಳವಾರ ಶುದ್ಧ ಅಮೇರಿಕನ್ ಶೈಲಿಯ ಅಡಿಗೆಯ ಉಸ್ತುವಾರಿ ಟಾಡ್ ರದ್ದು ಬುಧವಾರ ಮತ್ತೆ ಕೃತಿಯ ಅಡಿಗೆ .
ಪಕ್ಕಾ ಕೃಷಿಕರು ಹೇಗಿದ್ದರೆ ಚೆನ್ನ ಎಂಬುದಕ್ಕೆ ಈ ಇಂಡಿಯಾ-ಅಮೇರಿಕನ್ ದಂಪತಿಗಳು ಒಳ್ಳೆಯ ಉದಾಹರಣೆ. "ಕೃಷಿಯಲ್ಲಿ ಹಣದ ಓಘ ಕಡಿಮೆ ನಿಜ ಆದರೆ ಶಾಂತಿ ನೆಮ್ಮದಿ ಇಲ್ಲಿ ಇದೆ, ನಮ್ಮ ವಿದ್ಯಾರ್ಹತೆಗೆ ನಾವು ಪಟ್ಟಣದಲ್ಲಿದ್ದರೆ ಹಣ ಗುಡ್ಡೆ ಹಾಕಬಹುದು, ನಮ್ಮ ವೃದ್ದಾಪ್ಯದ ಹೊತ್ತಿಗೆ ದೊಡ್ಡ ಹಣದ ರಾಶಿ ಆಗಿರುತ್ತದೆ, ಆದರೆ ಅನುಭವಿಸಲು ವಯಸ್ಸು ಇರುವುದಿಲ್ಲ" ಎಂದು ತತ್ವಭರಿತವಾಗಿ ಹೇಳುವ ಕೃತಿ ದಂಪತಿಗಳು ಕೊರಗುತ್ತಾ ಬದುಕುವ ಅಡಿಕೆ ಕೃಷಿಕರಿಗೆ ಮಾದರಿ ಖಂಡಿತ.
ನಾವು ಕಾರಣರಾಗಿ ಸುದ್ಧಿಯಾಗುದಕ್ಕಿಂತ ನಾವು ಹಳ್ಳಿಯ ಜೀವವನ್ನಾಗಿಸಿಕೊಂಡ ಕಾರಣಗಳು ಸುದ್ಧಿಯಾಗುವುದು ಒಳಿತು ಎಂಬುದು ದಂಪತಿಗಳ ಕಿವಿಮಾತು.

(ಸಪ್ಟೆಂಬರ್ ಅಡಿಕೆಪತ್ರಿಕೆಯಲ್ಲಿ ಪ್ರಕಟಿತ)

11 comments:

ಪ್ರಸನ್ನ ಶಂಕರಪುರ said...

ಒಳ್ಳೆಯ ಪರಿಚಯ. ಎಲ್ಲದಕ್ಕೂ ಅಮೆರಿಕವನ್ನು ಅನುಸರಿಸುವ ಇಂದಿನ ಯುವಜನತೆ ಇವರನ್ನು ನೋಡಿಯಾದರೂ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡರೆ ಒಳ್ಳೆಯದು.

-ಪ್ರಸನ್ನ.ಎಸ್.ಪಿ

Dr.D.T.Krishna Murthy. said...

ಈ ಇಂಡೋ ಅಮೇರಿಕನ್ ದಂಪತಿಗಳ ಜೀವನ ನಮಗೆಲ್ಲಾ ಮಾದರಿಯಾಗಲಿ.ಚಂದದ ಬರಹಕ್ಕೆ ಅಭಿನಂದನೆಗಳು.

ತೇಜಸ್ವಿನಿ ಹೆಗಡೆ said...

ಅನುಸರಣೀಯ ಜೀವನ. ಇವರಿಂದ ಸ್ಫೂರ್ತಿ ಪಡೆದಿ ಹಳ್ಳಿ ತೊರೆಯುತ್ತಿರುವವರು ಮತ್ತೆ ಮಣ್ಣಿಗೆ ಮರಳಿದರೆ ತುಂಬಾ ಚೆನ್ನಾಗಿತ್ತು. ಇವರಿಬ್ಬರಿಗೂ ಅಭಿನಂದನೆಗಳು. ಪರಿಚಯಿಸಿದ ತಮಗೆ ಧನ್ಯವಾದಗಳು.

ಸುಮ said...

ಇತ್ತೀಚೆಗೆ ಒಂದು ಮದುವೆಮನೆಯಲ್ಲಿ ಇವರಿಬ್ಬರನ್ನು ನೋಡಿದ್ದೆ. ಮಾತನಾಡಿಸುವ ಅವಕಾಶವಾಗಿರಲಿಲ್ಲ. ನಂತರ ಅವರ ಬಗ್ಗೆ ಕೇಳಿ ಹೆಮ್ಮೆಯೆನಿಸಿತ್ತು. ನಿಜಕ್ಕೂ ಅನುಕರಣೀಯ ಆದರ್ಶ ಅವರದು.

PaLa said...

sakhat

ವನಿತಾ / Vanitha said...

Really Appreciate them:-)

Unknown said...

Beautiful. Thanks for introducing them here. Congratulations to that family!

Unknown said...

Great work.A lesson to learn.Thanks for introducing them.

cntaks said...

A good example to youth :)Thanks to the writer for introducing the couples (Indeed Rare one :))

ಪ್ರಗತಿ ಹೆಗಡೆ said...

ಪಟ್ಟಣ ಸೇರುತ್ತಿರುವ ಯುವ ಪೀಳಿಗೆಗೆ ಒಳ್ಳೆಯ ಮಾದರಿ...
ಧನ್ಯವಾದಗಳು..

ಸೀತಾರಾಮ. ಕೆ. / SITARAM.K said...

ಪಟ್ಟಣ ಸೇರಿ ಹಣದ ಹಿಂದೆ ಕಳೆದು ಹೋಗುತ್ತಿರುವ ನಮಗೆ ಇದೊಂದು ದಾರೀದೀಪದ ವಿಷಯ. ಮಾಹಿತಿಗೆ ಧನ್ಯವಾದಗಳು. ಆ ದಂಪತಿಗಳಿಗೆ ನಮ್ಮ ಅಭಿನಂದನೆಗಳು.