Monday, October 25, 2010

ತ್ಯಾರಣ ಮನೆ ಬಾಗಿಲ ತೋರಣ


ಮನೆಯೆಂದಮೇಲೆ ಹೂದೋಟವೊಂದು ಇಲ್ಲದಿದ್ದರೆ ಅದು ಅಪೂರ್ಣ. ಚಿಕ್ಕದಾದರೂ ಚೊಕ್ಕವಾಗಿರುವ ಬಣ್ಣ ಬಣ್ಣದ ಹೂವರಳಿಸುವ ಗಿಡಗಳ ಸಾಲು ಮನೆಗೆ ಬರುವ ಅತಿಥಿಗಳ ಸ್ವಾಗತಿಸುವಂತಿದ್ದರೆ ಅದರ ಅಂದ ವರ್ಣಿಸಲಸದಳ. ಅಂತಹ ಹೂದೋಟಕ್ಕೆ ಅಂದ ನೀಡಲು ಗುಲಾಬಿ ದಾಸವಾಳ ಮಲ್ಲಿಗೆ ಜಾಜಿ ಮುಂತಾದ ಬಹುವಾರ್ಷಿಕ ಹೂವಿನಗಿಡಗಳು ಇವೆ. ಆದರೆ ಅವು ಸರ್ವಋತುವಿನಲ್ಲಿಯೂ ಹೂವು ಅರಳಿಸುವುದಿಲ್ಲ. ಹಾಗಾಗಿ ನಿರಂತರವಾಗಿ ಹೂದೋಟ ಚೈತನ್ಯ ತುಂಬಿರಬೇಕೆಂದರೆ ವಿವಿಧಬಗೆಯ ಹೂವಿನಗಿಡಗಳ ಅವಶ್ಯಕತೆಯಿದೆ. ಬಗೆ ಬೇರೆಯದಾದ್ರೂ ಮಳೆಗಾಲದ ಅಂತ್ಯದಲ್ಲಿ ಹೂವು ಬಿಡುವ ಗಿಡಗಳ ಸಂಖ್ಯೆ ಅಪರೂಪ. ಆ ಅಪರೂಪವನ್ನು ಹುಡುಕಿ ತೋಟವನ್ನು ಚಂದಗೊಳಿಸುವುದು ಹೂದೋಟಾಸಕ್ತರ ಮುಖ್ಯ ಕಸುಬು. ಅಂತಹ ಮಳೆಗಾಲದಲ್ಲಿ ಹೂ ಅರಳಿಸುವ ಬಗೆಗಳಲ್ಲಿ ಈ ತ್ಯಾರಣವೂ ಒಂದು.
ಮಲೆನಾಡಿನ ಕೃಷಿಕರಮನೆಯ ಎದುರು ವಿಶಾಲ ಅಂಗಳ ಸಾಮಾನ್ಯ. ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ಅದು ಬಳಕೆಯಾದರೆ ಮಳೆಗಾಲದಲ್ಲಿ ಹೂದೋಟವಾಗಿ ಮಾರ್ಪಾಡಾಗಿಬಿಡುತ್ತದೆ. ಆ ಮಾರ್ಪಾಡಿಗೆ ಈ ತ್ಯಾರಣದ ಗಿಡಗಳು ಮುಖ್ಯ ಕಾರಣ. ಸಾಸಿವೆ ಕಾಳಿನಂತಹ ತ್ಯಾರಣದ ಬೀಜವನ್ನು ಮಹಿಳೆಯರು ಜತನವಾಗಿ ಕಾಪಿಟ್ಟು ಮಳೆಗಾಲದಲ್ಲಿ ಬೇಕಾದ ರೀತಿಯ ಆಕಾರದಲ್ಲಿ ಬಿತ್ತುತ್ತಾರೆ. ಬೀಜ ಬಿತ್ತಿ ತಿಂಗಳೊಳಗೆ ಹಸಿರುಬಣ್ಣದ ಮೃದೂ ದಂಟಿನ ಗಿಡಗಳು ಪುತುಪುತು ಎಳುತ್ತವೆ. ಸಪ್ಟೆಂಬರ್ ನಲ್ಲಿ ಇನ್ನೇನು ಮಳೆಗಾಲ ಮುಗಿಯಿತು ಎಂದಾಗ ಕೆಂಪು,ನೀಲಿ, ಕೇಸರಿ ಬಣ್ಣದ ಎರಡು ಪೊಕಳೆ, ಒಂಟಿ ಪೊಕಳೆ ಯ ಹೆಸರನ್ನಿಟ್ಟುಕೊಂಡು ಹೂವು ಅರಳಲಾರಂಬಿಸುತ್ತವೆ. ಒಟ್ಟಿಗೆ ಹೂವು ಬಿಟ್ಟು ಸರಿಸುಮಾರು ಒಂದು ತಿಂಗಳುಗಳಕಾಲ ನಿರಂತ ಕಣ್ಣಿಗೆ ಹಬ್ಬ ನೀಡುವ ತ್ಯಾರಣ ಮತ್ತೆ ಬೀಜವಾಗಿ ಮಹಿಳೆಯರ ಮಜ್ಜಿಗೆಗೂಡಿನಲ್ಲಿ ಕಾಪಾಡಲ್ಪಡುತ್ತದೆ ಮತ್ತೆ ಮುಂದಿನವರ್ಷ ಅಂಗಳಕ್ಕೆ ರಂಗೇರಿಸಲು. ಹೀಗೆ ಅಂಗಳವನ್ನೇ ಹೂದೋಟಗಿಸುವ ತ್ಯಾರಣ ಮಲೆನಾಡಿನ ಮಳೆಗಾಲದ ಹೂವು ಪೂರೈಕೆ ಗಣಿ. ಸರಿ ಸುಮಾರು ಎಲ್ಲಾ ಮನೆಗಳಲ್ಲಿಯೂ ಕಾಣುವ ಇದು ಅವರವರ ಅಭಿರುಚಿಗೆ ತಕ್ಕಂತೆ ವಿವಿಧ ಆಕಾರ ಆಕೃತಿಗಳಲ್ಲಿ ಮನತಣಿಸುತ್ತಿದೆ.
(ಇಂದಿನ ವಿಕೆ ಲವಲವಿಕೆಯಲ್ಲಿ ಪ್ರಕಟಿತ)

1 comment:

Sushrutha Dodderi said...

sweet.. :-)

aldE, tyaaraNada beejana 'paT' antha oDiyadu, avaga adra kaaLu haguravaagi kai thumbikoLLodoo ondu majaa aaTa.. :-)