Friday, November 26, 2010

ಬದಲಾಗುತ್ತಿವೆ "ಮಸಣದ ಮಾತುಗಳು"

ನಲವತ್ತು ವರ್ಷದ ದೃಢಕಾಯನೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ತಂದೆ ತಾಯಿ ಬಂಧು ಬಳಗದ ಜತೆ ಹೆಂಡತಿ ಹಾಗೂ ಮಗುವನ್ನು ಅಗಲಿಹೋಗಿದ್ದಾನೆ. ಶೋಕ ಮನೆಯಲ್ಲಿ ಮಡುಗಟ್ಟಿದೆ. ರೋಧನ ತಾರಕಕ್ಕೇರಿದೆ. ಸಮಾಧಾನ ಸಂತಾಪ ಎಲ್ಲಾ ಅಸಾಹಾಯಕ ಕೆಲಸಗಳಂತೆ ನಡೆಯುತ್ತಿವೆ. ಜೀವವಿಲ್ಲದ ದೇಹ ಎಷ್ಟು ಹೊತ್ತು ಹಾಗೆಯೇ ಇರಲು ಸಾಧ್ಯ?. ಆ ಕಾರಣಕ್ಕಾಗಿ ಅಳುವವರ ನಡುವೆಯೇ ಚಿತೆಯೂ ಸಿದ್ಧವಾಗಿ ದೇಹಕ್ಕೆ ಅಗ್ನಿ ಇಡಲು ಸಿದ್ದತೆಯಾಗುತ್ತಿದೆ.
ಈ ಘಟನೆ ನಡೆದು ಆರು ತಿಂಗಳ ನಂತರ ಅದೇ ಮನೆಯಲ್ಲಿ ಮತ್ತೆ ಮದುವೆಯೊಂದರ ಸಿದ್ಧತೆ ನಡೆದಿದೆ. ಕಳೆದುಕೊಂಡ ಮಗನ ಸ್ಥಾನಕ್ಕೆ ಬದುಕುಳಿದ ಸೊಸೆಗೆ ಕಂಕಣ ಭಾಗ್ಯ ನೀಡುವುದರ ಜತೆ ಇಲ್ಲದ ಮಗನನ್ನು ಯಾರಲ್ಲೋ ಕಾಣುವ ತೀರ್ಮಾನಕ್ಕೆ ಅಪ್ಪ ಅಮ್ಮ ಬಂದಿದ್ದಾಗಿದೆ. ಮಗನ ಮದುವೆಯಷ್ಟು ಸಡಗರ ಸಂಭ್ರಮ ಇಲ್ಲ ನಿಜ ಆದರೆ ತೀರಾ ನೀರಸವಲ್ಲದ ಕಾರ್ಯಕ್ರಮದ ಮುಖಾಂತರ ಮದುವೆ ನಡೆಯುತ್ತದೆ.
ಇದು ಯಾವುದೇ ಸಿನೆಮಾದ ಕತೆಯಲ್ಲ. ಈ ದಶಕಗಳಲ್ಲಿ ನೈಜ ಘಟನೆಯ ಸಂಕ್ಷಿಪ್ತ ರೂಪ. ಇದೇ ಸಾವು ನೂರು ವರ್ಷದ ಹಿಂದಿನದಾಗಿದ್ದರೆ ಪತಿಯ ಜತೆ ಸತಿ ಸಹಗಮನಕ್ಕೆ ಸಜ್ಜಾಗಬೇಕಾಗಿತ್ತು. ಎಪ್ಪತ್ತೈದು ವರ್ಷಗಳ ಹಿಂದೆ ಆಗಿದ್ದರೆ ಪತ್ನಿ ತಲೆಕೂದಲು ಬೋಳಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆಯನ್ನುಟ್ಟು ಜೀವಮಾನ ಪೂರ್ಣ ವೈಧವ್ಯಕ್ಕೆ ಬಲಿಯಾಗಬೇಕಾಗಿತ್ತು. ಐವತ್ತು ವರ್ಷಗಳ ಹಿಂದಿನ ಘಟನೆಯಾಗಿದ್ದರೆ ಸಕೇಶಿ ಸರಿ ಆದರೆ ಮತ್ತೊಂದು ಮದುವೆ ಅಸಾದ್ಯದ ಮಾತು. ಹೀಗೆ ಆಯಾ ಕಾಲಘಟ್ಟದಲ್ಲಿ ಮನುಷ್ಯನ ಅರಿವು ಎಂಬುದು ಜಾಸ್ತಿಯಾಗಿ ಭಾರತದಂತಹ ಸಂಪ್ರದಾಯ ಬದ್ಧ ದೇಶದಲ್ಲಿನ ಅನಿಷ್ಠ ಪದ್ಧತಿಯೊಂದು ತನ್ನಷ್ಟಕ್ಕೆ ತಾನೇ ಸತ್ಯವನ್ನು ಕಂಡುಕೊಂಡು ಕುಸಿದುಹೋಗುತ್ತಿದೆ.

ಕಾಲ ದ ಶಕ್ತಿ ಅಗಾಧ. ಎಲ್ಲವನ್ನೂ ನುಂಗುತ್ತಾ ಶರವೇಗದಿಂದ ಮುನ್ನುಗ್ಗುವ ಕಾಲದೆದುರು ಮನುಷ್ಯನ ವೇಗ ಅರ್ಥಕಳೆದುಕೊಂಡುಬಿಡುತ್ತದೆ. ನಂಬಿಕೆಯ ಅಡಿಯಲ್ಲಿ ಬದುಕು ಸಾಗಿಸುವ ಮನುಷ್ಯ ಪ್ರಕೃತಿಯ ಅಡಿಯಲ್ಲಿನ ಜೀವಿಯಾಗಿ ಒಮ್ಮೊಮ್ಮೆ ಅಸಾಹಾಯಕನಂತೆ ಅನ್ನಿಸಿದರೂ ಅವನ ಸಾಹಸ ಮತ್ತದೇ ಪ್ರಕೃತಿಯ ಅಡಿಯಾಳಿನ ನಿರ್ಧಾರವೇ ಆಗಿದೆ ಎಂಬುದು ವಾಸ್ತವ. ಮನುಷ್ಯನ ಜೀವನದ ಮಟ್ಟಕ್ಕೆ ಯೋಚಿಸುವುದಾದರೆ ಅವನ ನಂಬಿಕೆಗೂ ಮೂಢನಂಬಿಕೆಗೂ ಕಾಲಕ್ಕೂ ಬಿಡಿಸಲಾರದ ನಂಟು. ನಂಬಿಕೆಯೇ ಜೀವನ ನಿಜ. ಆದರೆ ತನ್ನ ಜೀವನ ಸುಗಮವಾಗಿಸಲು ನಂಬಿದ ತತ್ವ ಸಿದ್ಧಾಂತಗಳೆಲ್ಲ ಸಮರ್ಪಕವಾದುದಲ್ಲ ಎಂಬ ಅರಿವು ಮೂಡಿ ಬದಲಾಯಿಸಿಕೊಂಡು ಸರಿದಾರಿಗೆ ಬರಲು ಮನುಷ್ಯ ತೆಗೆದುಕೊಂಡ ಕಾಲ ಅತೀ ದುಬಾರಿಯಾಗಿಬಿಡುತ್ತದೆ ಒಮ್ಮೊಮ್ಮೆ. ಅಂತಹ ಒಂದು ವಿಷಯವೇ ವಿಧವೆ ಎಂಬ ಪಟ್ಟ.
ಕಾಲವೊಂದಿತ್ತು,ಅದು ಶತಮಾನಗಳ ಹಿಂದಿನದು. ಬಾಲ್ಯ ವಿವಾಹ ಪದ್ಧತಿಯೇ ಸರಿ ಎಂಬ ತೀರ್ಮಾನದ್ದು. ಆ ಕಾಲದಲ್ಲಿ ಗಂಡ ಸಾವಿಗೀಡಾದರೆ ಜತೆಜತೆ ಯಲ್ಲಿಯೇ ಸತಿ ಸಹಗಮನ ಮಾಡಬೇಕಾಗಿತ್ತು. ಹೆಣ್ಣೆಂಬ ಜೀವಿಗೆ ಯಾವ ಅಧಿಕಾರವೂ ಇರಲಿಲ್ಲ. ಅದು ಗಂಡಿನ ದೌರ್ಜನ್ಯವೆನ್ನಿ, ಮನು ಸ್ಮೃತಿಯ ಅನುಷ್ಠಾನವೆನ್ನಿ ಪರಿಣಾಮ ಮಾತ್ರಾ ಹೆಣ್ಣಿನ ಮೇಲೆಯೇ ಎಂಬುದು ಸರ್ವವಿಧಿತ. ಹತ್ತು ವರ್ಷದ ಹೆಣ್ಣಿಗೆ ನಲವತ್ತು ವರ್ಷದ ಗಂಡು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಬದುಕಿಬಾಳಬೇಕಾಗಿದ್ದ ಆರೋಗ್ಯವಂತ ಹೆಣ್ಣೂ ಕೂಡ ಆಯುಷ್ಯ ಮುಗಿದು ಸತ್ತ ಗಂಡನೊಂದಿಗೆ ಚಿತೆ ಏರಬೇಕಾಗಿತ್ತು. ಮನಸ್ಸಿನಾಳದಲ್ಲಿ ಅದುವೇ ಸ್ವರ್ಗದ ರಹದಾರಿ, ಅದುವೇ ಧರ್ಮ,ನೀತಿ ಎಂದು ಬಿಂಬಿಸಲಾಗಿದ್ದರಿಂದ ಜ್ಞಾನದ ಮಟ್ಟ ಕಡಿಮೆಯಿದ್ದ ಹೆಣ್ಣುಗಳ ಜೀವನ ಆಹುತಿಯಾಗುತಿತ್ತು. ಜೀವವನ್ನು ತ್ಯಜಿಸಲು ಹೆಣ್ಣು ಜೀವ ಅದೆಷ್ಟು ಹೋರಾಡಿತೋ ಬಲ್ಲವರ್ಯಾರು.?
ಕಾಲ ಬದಲಾಯಿತು ಎನ್ನುವ ವಾಕ್ಯ ಸಮರ್ಪಕವಲ್ಲದಿದ್ದರೂ ವಾಡಿಕೆಯಂತೆ ಸರಿ. ಕಾಲದ ಜತೆ ಓಡುತ್ತಿದ್ದ ಜನರ ಭಾವನೆ ಕೊಂಚ ಸುಧಾರಿಸಿತು. ಬಾಲ್ಯವಿವಾಹ ಪದ್ಧತಿ ಹಾಗೆಯೇ ಉಳಿದರೂ ಜ್ಞಾನಿಗಳ ಅಣತಿಯತೆ ಮಾನವೀಯ ಗುಣಗಳ ಜನರ ಭಾವನೆಯಂತೆ ಸತಿಪದ್ಧತಿ ಮಾಯವಾಯಿತು. ಸತಿಸಹಗಮನ ಪದ್ದತಿ ಮಾಯವಾಗಲು ತೆಗೆದುಕೊಂಡ ಕಾಲ ದೀರ್ಘದ್ದು. ಅದೇನೋ ಮಾಯವಾಯಿತು ಸರಿ ಆದರೆ ಅಷ್ಟೇ ಪ್ರಮಾಣದ ಬದುಕಿನುದ್ದಕ್ಕೂ ಹೆಣ್ಣನ್ನು ಹಿಂಸಿಸುವ ವೈಧವ್ಯ ಪದ್ದತಿಯ ಆಚರಣೆ ಇನ್ನಷ್ಟು ಕಟ್ಟುಪಾಡುಗಳನ್ನು ಹೊತ್ತು ಜಾರಿಗೆ ಬಂತು. ಅಲ್ಲಿಯ ತನಕ ಹೆಣ್ಣು ಹೆತ್ತವರು ಅಳಿಯನ ಅಕಾಲಿಕ ಸಾವಿನ ಜತೆ ಮಗಳ ಚಿತೆಯೇರುವ ದು:ಖವನ್ನೂ ಭರಿಸಬೇಕಾಗಿತ್ತು. ಆನಂತರ ಮಗಳ ವೈಧವ್ಯದ ಬಾಳಿನ ಬಗ್ಗೆ ಮರುಕಪಡುವಷ್ಟರ ಮಟ್ಟಿಗೆ ಇಳಿಯಿತು.
ಕಾಲ ಮತ್ತಷ್ಟು ಸರಿಯಿತು. ಸತಿಪದ್ಧತಿ ಅಳಿಯಲು ರಾಜಾರಾಂ ಮೋಹನ್ ರಾಯ್, ಮೀರಾ ಬಾಯಿ ಮುಂತಾದ ಸಮಾಜ ಸೇವಕರು ಕಾರಣ ರಾದರೆ ಅನಂತರದ ವೈಧವ್ಯ ಪದ್ಧತಿ ಅಳಿಯಲು ಸಾಹಿತಿಗಳು ಚಲನಚಿತ್ರಗಳು ಕಾರಣವಾಗಿದ್ದು ವಿಶೇಷ. ಮಾದ್ಯಮಗಳು ಚುರುಕಾಗಿದ್ದು ಸುಮಾರು ಐವತ್ತರ ದಶಕದಲ್ಲಿ. ನೂರಾರು ಮಡಿಸೀರೆ ಮಹಿಳೆಯ ಭಾವಗಳನ್ನು ಪಣಿಯಮ್ಮ ಹೊತ್ತು ಚಲನಚಿತ್ರ ರೂಪದಲ್ಲಿ ಜನರ ಮನಸನ್ನು ತಲುಪುವಂತಾಯಿತು. ವಿಧವೆಯರ ಬದುಕುಬವಣೆಯನ್ನು ಹೊತ್ತ ಕಾದಂಬರಿ ಕತೆಗಳ ಮಹಾಪೂರವೇ ಹರಿದು ಬಂತು. ತತ್ಪರಿಣಾಮವಾಗಿ ಗಂಡ ಸತ್ತ ಮಹಿಳೆಯ ಕೂದಲು ಬೋಳಿಸುವ ಕ್ರಿಯೆ ಅನಿಷ್ಟದ್ದು ಎಂಬ ವಿಷಯ ಜನಜನಿತವಾಗಿ ತನ್ನಷ್ಟಕ್ಕೆ ನಿಂತುಹೋಯಿತು.
ಕೂದಲು ಕಳೆದುಕೊಳ್ಳುವ ಕ್ರಿಯೆಯಷ್ಟೆ ನಿಂತಿತಷ್ಟೆ ಆದರೆ ಸಕೇಶಿವಿಧವೆಯರ ಕಷ್ಟ ಮೊದಲಿನಿಗಿಂತ ಹೆಚ್ಚಿನ ಸುಧಾರಣೆಯಾಗಿರಲಿಲ್ಲ. ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಕೂದಲು ಕರಿಮಣಿ ಕುಂಕುಮ ಎಂಬ ಮುತ್ತೈದೆ ಭಾಗ್ಯ ಹೊಂದಿದವರಿಂದ ಈ ಮೂರನ್ನು ಇಟ್ಟುಕೊಂಡು ಆದರೆ ಗಂಡನನ್ನು ಕಳೆದುಕೊಂಡ ಮಹಿಳೆ ನಿಕೃಷ್ಟಕ್ಕೆ ಒಳಗಾಗುತ್ತಿದ್ದಳು. ಕುಂಕುಮದ ಬದಲು ಕಾಡಿಗೆ, ಕರಿಮಿಣಿಯ ಬದಲು ಸರ ಮುಂತಾದ ಸಣ್ಣಪುಟ್ಟ ವ್ಯತ್ಯಯಗಳನ್ನು ಸಕೇಶಿ ವಿಧವೆ ಅನುಭವಿಸಬೇಕಾಗಿತ್ತು. ಆದರೆ ಕಾಲನ ಹೊಡತಕ್ಕೆ ನಿಧಾನಗತಿಯಲ್ಲಿ ಬದಲಾವಣೆ ಚಾಲ್ತಿಗೆ ಬಂತು. ಶ್ಲೋಕವೊಂದರ "ನಸ್ತ್ರೀ ಸ್ವಾತಂತ್ರ್ಯ ಮರ್ಹತಿ" ಎಂಬಷ್ಟೇ ಸಾಲುಗಳನ್ನ ಆರಿಸಿಕೊಂಡ ಪುರುಷಪ್ರಧಾನ ಸಮಾಜ ಸ್ತೀ ಗೆ ತನಗೆ ಗೊತ್ತಿಲ್ಲದಂತಯೇ ತಲೆಬಾಗಿತು.
ಸತಿಪದ್ದತಿಯಿಂದ ಸಕೇಶಿ ವಿಧವೆ ಪದ್ದತಿಯ ಆಚರಣೆಗೆ ತೆಗೆದುಕೊಂಡ ಕಾಲ ದೀರ್ಘವಾಗಿದ್ದರೂ ನಂತರ ವಿಧವಾ ವಿವಾಹಕ್ಕೆ ಅತಿ ಶೀಘ್ರ ನಿರ್ಧಾರಕ್ಕೆ ಬಂತು ಸಮಾಜ.
ಮಹಿಳೆಯರ ಪಾಲಿಗೆ ಈಗಿನ ಕಾಲ ಒಂದು ದೃಷ್ಟಿಯಲ್ಲಿ ಸಮೃದ್ಧಿಯದು ಅನ್ನಬೇಕು. ಅನಿಷ್ಠ ಪದ್ದತಿಯನ್ನು ಪ್ರಕೃತಿಯ ಸಹಾಯದಿಂದಲೋ ಅಥವಾ ಮನುಜನ ಅನುಭವದಿಂದಲೋ ಮಹಿಳೆ ಗೆದ್ದಿದ್ದಾಳೆ. ಸಂಗಾತಿಯ ಆಯ್ಕೆಯ ವಿಷಯದಲ್ಲಿಯೂ ಈಗ ಪುರುಷರಿಗಿಂತ ಮಹಿಳೆ ಹೆಚ್ಚು ಸ್ವತಂತ್ರಳು. ಹಾಗೆಯೇ ಸಂಗಾತಿಯ ಮರಣದ ನಂತರ ಮತ್ತೆ ಮರು ಆಯ್ಕೆಯಲ್ಲಿಯೂ ಆಕೆಯದೇ ತೀರ್ಮಾನ. ಇವಕ್ಕೆಲ್ಲಾ ಪ್ರಮುಖ ಕಾರಣ ಮಹಿಳೆ ಅಡಿಗೆ ಮನೆಗೆ ಸೀಮಿತವಾಗಿರದೆ ದುಡಿಯಲು ಹೊರಟಿದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.
ನೂರು ವರ್ಷದ ಹಿನ್ನೋಟ ಇಂದಿನ ಸ್ಥಿತಿ ಅವಲೋಕಿಸಿದಾಗ ಒಟ್ಟಾರೆ ಸಿಗುವ ಫಲಿತಾಂಶ, ಮಹಿಳೆ ಈಗಷ್ಟೆ ಪುರುಷನಷ್ಟೇ ಸಮಾನ ಅಧಿಕಾರ ಪಡೆದಿದ್ದಾಳೆ. ಅದಕ್ಕೆ ಆಕೆ ತೆತ್ತ ಬೆಲೆ ಬಹುದೊಡ್ಡದು. ಹಾಗೆಯೇ ಅದನ್ನು ಉಳಿಸಿಕೊಂಡು ಹೋಗುವ ಕ್ರಿಯೆಯೂ ಅಷ್ಟೇ ಕಠಿಣದ್ದು. ಈಗ ಗಂಡ ಸತ್ತ ಹೆಣ್ಣಿನತ್ತ ಕರುಣೆಯ ದೃಷ್ಟಿ ಬದಲಾಗಿದೆ. ಹೆಂಡತಿ ಸತ್ತ ಗಂಡನತ್ತ ಅದು ವ್ಯಕ್ತವಾಗುವತ್ತ ಹೊರಟಿದೆ. ಮುಂದಿನ ಬದಲಾವಣೆಗಳು ಮತ್ತೆ ಯಥಾಪ್ರಕಾರ ಕಾಲ ನಿಗೆ ಬಿಟ್ಟದ್ದು. ಆದರೆ ಒಂದಂತೂ ಸತ್ಯ ಇಂದು ನಾವು "ಸತಿಪದ್ದತಿಯ" ಅರ್ಥ ಹುಡುಕಲು ನಿಘಂಟು ತಡಕಾಡಿದಂತೆ ಮುಂದಿನ ತಲೆಮಾರಿನ ಜನರು "ವೈಧವ್ಯ" ಎಂಬ ಪದಕ್ಕೆ ನಿಘಂಟು ಹುಡುಕುವಂತಾಯಿತು. ಕಾಲ ಸಂದಂತೆ ಇನ್ನಷ್ಟು ಹೊಸ ಸಮಸ್ಯೆ ಹುಟ್ಟಿಕೊಳ್ಳಬಹುದು ಆದರೆ ಇವತ್ತು ಗಂಡನ ಹೆಣ ಚಿತೆಯೇರುತ್ತಿದ್ದಂತೆ ಮಸಣಕ್ಕೆ ಬಂದಿರುವ ರಕ್ತ ಸಂಬಂಧಿಗಳಲ್ಲದವರು ತಮ್ಮ ಪೈಕಿ ಮದುವೆಯಾಗದೆ ಉಳಿದಿರುವ ಗಂಡಿನ ನೆನಪು ಮಾಡಿಕೊಳ್ಳುವಷ್ಟರ ಮಟ್ಟಿಗಿನ ಸುಧಾರಣೆಗೆ ನಮ್ಮ ಹೆಗಲನ್ನೇ ನಾವು ಧೈರ್ಯವಾಗಿ ತಟ್ಟಿಕೊಳ್ಳಬಹುದು. ಜೈ ಎನ್ನೋಣ ಅನಿಷ್ಟ ಹೋಗಿದ್ದಕ್ಕೆ.

6 comments:

ಚುಕ್ಕಿಚಿತ್ತಾರ said...

ಕಾಲ ಅನ್ನುವುದು ಹೆಣ್ಣಿನ ವಿಚಾರದಲ್ಲಿ ತಡವಾಗಿಯಾದರೂ ಬದಲಾಗಿದೆ. ಸಮಾಧಾನಕರ ವಿಷಯ.

ಮಹಿಳೆ ದೈಹಿಕವಾಗಿ ಅಬಲೆ ಅನ್ನುವ ಕಾರಣದಿ೦ದ ಆಕೆಯ ಮಾನಸಿಕ ದೃಢತೆಗೆ ಬೆಲೆ ಸಿಗಲಿಲ್ಲ ಆ ಕಾಲದಲ್ಲಿ.ಆ ಎಲ್ಲ ಅನಿಷ್ಟ ಪದ್ಧತಿಗಳಿಗೂ ಹೆಣ್ಮಕ್ಕಳ ಮೇಲಿನ ಅನಾಚಾರ ಅತ್ಯಾಚಾರ ತಡೆಯಲು ರೂಪಿಸಿದ೦ತಹ ರಕ್ಷಣಾ ಕವಚ ಎನ್ನುವ ಸಮರ್ಥನೆಗಳೂ ಇವೆ. ಅವುಗಳೇನೆ ಇದ್ದರೂ ಹೆಣ್ಣೊಬ್ಬಳು ತನ್ನನ್ನು ತಾನೇ ರಕ್ಷಿಸಿಕೊಳ್ಳುವ ತ೦ತ್ರಗಾರಿಕೆಯನ್ನು ರೂಪಿಸಿಕೊಳ್ಳುವುದು ಯಾವ ಕಾಲಕ್ಕೂ ಅನಿವಾರ್ಯ.ಆರ್ಥಿಕ ಸಬಲತೆಯ ಜೊತೆಗೆ ಸಮಾಜದ ಸಹಾಯವೂ ಆಕೆಗೆ ಬೇಕು.

ಒಳ್ಳೆ ಲೇಖನ.ವ೦ದನೆಗಳು.

ಮನಮುಕ್ತಾ said...

ವಿಧವಾ ವಿವಾಹದ ವಿಚಾರದಲ್ಲಿ ಸಮಾಜ ಗಣನೀಯ ಪ್ರಮಾಣದಲ್ಲಿ ಬದಲಾಗುತ್ತಿರುವುದು,ಬದಲಾಗಿರುವುದು ಪ್ರಶ೦ಸನೀಯ.ಲೇಖನ ತು೦ಬಾ ಚೆನ್ನಾಗಿದೆ.

balasubramanya said...

ನಿಮ್ಮ ಅರ್ಥ ಪೂರ್ಣ ಲೇಖನ ಸಮಾಜದ ಕಣ್ಣು ತೆರೆಸುವಂತಿದೆ . ನಿಮಗೆ ಧನ್ಯವಾದಗಳು.

--
ಪ್ರೀತಿಯಿಂದ ನಿಮ್ಮವ ಬಾಲು.

Unknown said...

ಇಂತಹ ಅನಿಸ್ಟ ಪದ್ದತಿಗಳನ್ನೆಲ್ಲ ತೊಡೆದು ಹಾಕಿ ಸಮಾಜ ಈ ಹಂತಕ್ಕೆ ಬಂದಿರುವುದು ಸಂತೋಷದ ವಿಚಾರ. ಸ್ವಾತಂತ್ರ್ಯ ಅಮೂಲ್ಯವಾದದ್ದು. ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಜವಾಬ್ದಾರಿ. ಸ್ವಾತಂತ್ರ್ಯವು ಸ್ವೆಚಾಚಾರವಾಗದಂತೆ ಇವುಗಳ ನಡುವಿನ ಅಂತರವನ್ನ ಮನಗಾಣಬೇಕಿದೆ. ಈ ನಿಟ್ಟಿನಲ್ಲಿ ಸಿಕ್ಕ ಸ್ವಾತಂತ್ರ್ಯದ ಇತಿ ಮಿತಿಗಳನ್ನ, ಇದಕ್ಕಾಗಿ ಸಾಗಿ ಬಂದ ದಾರಿಯನ್ನ ಅರ್ಥೈಸಿಕೊಂಡರೆ ಒಳ್ಳೆಯದೆನಿಸುತ್ತದೆ. ಇಲ್ಲವಾದರೆ ಸಿಕ್ಕ ಸ್ವಾತಂತ್ರ್ಯವು ಪಟ್ಟ ಕಷ್ಟವೂ ಕೂಡ ಅರ್ಥವಿಲ್ಲದಂತಾಗುತ್ತದೆ... ಹೀಗಾಗದಿರಲಿ ಎಂದು ಆಶಿಸೋಣವೇ

Pejathaya said...

ಶರ್ಮರೇ!
ತಾವು ಹೇಳಿದ್ದು ಸರಿ. ಸಮಾಜ ಸುಧಾರಣೆಯಲ್ಲಿ ಮೊದಲಿಗೆ, ಅಂದರೆ ಕಳೆದ ಶತಮಾನಗಳಲ್ಲಿ ಪತ್ರಿಕಾ ಮಾಧ್ಯಮದ ಮೂಲಕ, ಉತ್ತಮ ಕಾದಂಬರಿಗಳ ಮೂಲಕ, ಆಕಾಶವಾಣಿಯ ಮೂಲಕ ಖಂಡಿತವಾಗಿ ಸಮಾಜ ಸುಧಾರಣೆ ಆಯಿತು. ಆ ಮೇಲೆ ಚಲನ ಚಿತ್ರಗಳು ಸಮಾಜದ ಮೇಲೆ ಗುರುತರ ಪರಿಣಾಮ ಬೀರಿದುವು. ಈಗ ಕಿರುತೆರೆಯವರು ಮತ್ತು ಅಂತರ್ಜಾಲದ ಬ್ಲಾಗ್ ಮಾಧ್ಯಮದವರು ಕೂಡಾ ಆ ದಿಶೆಯಲ್ಲಿ ಕೆಲಸ ಮಾಡಬೇಕಾದ ಘಟ್ಟವನ್ನು ತಲುಪಿದ್ದೇವೆ.
ಸಮಾಜ ಸುಧಾರಣೆಯ ಹೊಣೆಯು ಜನರನ್ನು ತಲುಪುವ ಎಲ್ಲಾ ಮಾಧಮಗಳ ಮೇಲೂ ಇದೆ.

ತಾವು ಒಂದು ಉತ್ತಮ ಸಂದೇಶವನ್ನು ತಮ್ಮ ಬ್ಲಾಗಿನಲ್ಲಿ ಬರೆದು ಈ ದಿಶೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದೀರಿ. ಅಭಿನಂದನೆಗಳು. - ಪೆಜತ್ತಾಯ

ಸೀತಾರಾಮ. ಕೆ. / SITARAM.K said...

taavu heliddu nija!