Wednesday, January 5, 2011

ಹತ್ತಿಯಂತೆ ಉರಿಯುವ ರಾಂಬತ್ತಿ


ಬೆಳಕಿನ ಹಬ್ಬ ದೀಪಾವಳಿಯಿಂದ ಕಾರ್ತಿಕ ಮಾಸದ ಅಂತ್ಯದವರೆಗೂ ದೀಪಗಳದ್ದೇ ಕಾರುಬಾರು. ನಾನಾ ವಿಧದ ದೀಪಗಳು ಮನೆಯನ್ನು ಬೆಳಗಿಸುತ್ತವೆ. ಬೆಳಗುವ ದೀಪಕ್ಕೆ ಎಣ್ಣೆ ಆಹಾರವಾದರೆ ಬೆಂಕಿಯುರಿಯಲು ಮಾಧ್ಯಮ ಹತ್ತಿಯ ಬತ್ತಿ. ಎಣ್ಣೆಗೂ ಬೆಂಕಿಗೂ ನಡುವೆ ಈ ಬತ್ತಿಯೆಂಬುದು ಇಲ್ಲದಿದ್ದರೆ ದೀಪವೇ ಇಲ್ಲ. ಸಾಮಾನ್ಯವಾಗಿ ಹಣತೆಯ ಬತ್ತಿಗಾಗಿ ಹತ್ತಿ, ಬಟ್ಟೆ ಮುಂತಾದವುಗಳನ್ನು ಉಪಯೋಗಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಬಹುವಾಗಿ ಬೇಕಾಗುವ ಬತ್ತಿಗಾಗಿ ಮಹಿಳೆಯರು ಮಳೆಗಾಲದಲ್ಲಿ ಹತ್ತಿಯನ್ನು ಕೈಯಿಂದ ಹೊಸೆದು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಇವೆಲ್ಲಾ ಮಾಮೂಲಿನ ಕತೆಯಾಯಿತು ಆದರೆ ಮಲೆನಾಡಿನಲ್ಲಿ ದೀಪಾವಳಿಯಿ ನಂತರ ಬತ್ತಿಗಾಗಿ ಕಾಡಿನ ಚಿಗುರೊಂದನ್ನು ಉಪಯೋಗಿಸುತ್ತಾರೆ ಅದರ ಹೆಸರು ರಾಂಬತ್ತಿ.
ಹೆಸರಿನಲ್ಲಿ ರಾಮನಿದ್ದಮೇಲೆ ಅದಕ್ಕೊಂದು ಕತೆಯಿರಲೇ ಬೇಕಲ್ಲವೇ?.ಕತೆಯೇನೋ ಇದೆ ಆದರೆ ಸತ್ಯಾಸತ್ಯತೆ ನಂಬಿಕೆಗೆ ಬಿಟ್ಟ ವಿಚಾರ. ಶ್ರೀರಾಮಚಂದ್ರ ಸೀತೆಯ ಸಮೇತ ವನವಾಸಕ್ಕೆ ತೆರಳಿದಾಗ ಅಲ್ಲಿ ಸೀತಾಮಾತೆ ದೀಪವನ್ನುರಿಸಲು ಬತ್ತಿ ಬೇಕೆಂದು ರಾಮನ ಬಳಿ ಕೇಳಿದಳಂತೆ, ಆ ಗೊಂಡಾರಣ್ಯದಲ್ಲಿ ರಾಮ ಹತ್ತಿಯ ಬತ್ತಿಯನ್ನು ಎಲ್ಲಿಂದ ತಂದಾನು?. ಆಗ ಶ್ರೀರಾಮ ವೃಕ್ಷರಾಜನ ಸಹಾಯ ಕೇಳಿದನಂತೆ. ರಾಮನ ಬೇಡಿಕೆಗೆ ಸ್ಪಂದಿಸಿದ ವೃಕ್ಷರಾಜ ಗಿಡವೊಂದಕ್ಕೆ ತನ್ನ ಚಿಗುರನ್ನು ಉರಿಯಲು ಸಹಕಾರಿಯಾಗುವಂತೆ ಬೆಳೆಸಲು ಅಣತಿ ಮಾಡಿದನಂತೆ, ಅದಕ್ಕೆ ರಾಂಬತ್ತಿ ಎಂಬ ಹೆಸರು ಈ ಗಿಡದ ಚಿಗುರಿಗೆ. ಆ ಕಾರಣಕ್ಕಾಗಿ ವರ್ಷಕ್ಕೊಮ್ಮೆಯಾದರೂ ರಾಂಬತ್ತಿಯ ದೀಪ ಹಚ್ಚುವುದು ವಾಡಿಕೆಯಾಗಿ ಬಂದಿದೆ.
ಪೊದೆಗಳ ನಡುವೆ ಮರವಾಗಿ ಬೆಳೆಯುವ ಈ ಗಿಡಕ್ಕೆ ರಾಂಬತ್ತಿ ಮರ ಎಂದು ಸ್ಥಳೀಯ ಭಾಷೆಯಲ್ಲಿ ಕರೆಯುತ್ತಾರೆ. ಮಳೆಗಾಲ ಮುಗಿದು ದೀಪಾವಳಿ ಆರಂಭವಾಗುತ್ತಿದ್ದಂತೆ ಇದು ದೀಪದ ಬತ್ತಿಗಾಗಿಯೇ ಚಿಗುರುತ್ತದೆಯೇನೋ ಎಂಬಂತೆ ನೂರಾರು ಚಿಗುರೊಡೆದು ನಿಲ್ಲುತ್ತದೆ. ಮಲೆನಾಡಿನ ಸಂಪ್ರದಾಯಸ್ಥರು ಈ ಚಿಗುರನ್ನು ಕಾರ್ತಿಕ ಮಾಸದ ಹಣತೆ ದೀಪಕ್ಕೆ ಬಳಸುತ್ತಾರೆ. ಹತ್ತಿಯ ಬತ್ತಿಯಂತೆ ಎಣ್ಣೆಯನ್ನು ಹೀರಿ ಸಂಪೂರ್ಣ ಉತ್ತಮ ಹಣತೆದೀಪವಾಗಿ ಉರಿಯುವ ರಾಂಬತ್ತಿ ಹೆಚ್ಚಿನ ಸಂಖ್ಯೆಯಲ್ಲಿ ಹಚ್ಚಿದಲ್ಲಿ ಸುತ್ತಲಿನ ವಾತಾವರಣ ಕೊಂಚಮಟ್ಟಿಗಿನ ಸುವಾಸನಾಪೂರಿತವಾಗಿಯೂ ಇರುತ್ತದೆ. ಅರಣ್ಯ ನಾಶದ ಪರಿಸ್ಥಿತಿಯಿಂದ ಈ ರಾಂಬತ್ತಿಯ ಗಿಡದ ಸಂತತಿ ನಶಿಸುತ್ತಾ ಬಂದಿದೆಯಾದರೂ ಹಲವರು ದೇವರಬನದ ಮೂಲೆಯಲ್ಲಿ ಇದನ್ನು ನೆಟ್ಟು ಕಾಪಿಟ್ಟಿದ್ದಾರೆ. ದೀಪ ಬೆಳಗಲು ಮೇಣದ ಬತ್ತಿ, ವಿದ್ಯುತ್ ಬಲ್ಪುಗಳು ಮುಂತಾದ ಸುಲಭ ವಿಧಾನಗಳ ನಡುವೆಯೂ ರಾಂಬತ್ತಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ, ಹಾಗೂ ತಾನು ಉರಿದು ಸುಂದರ ದೀಪವಾಗಿ ಬೆಳಗುತ್ತಿದೆ.

6 comments:

ಮೃತ್ಯುಂಜಯ ಹೊಸಮನೆ said...

ಅರೆ! ಇದರ ಬಗ್ಗೆ ಇಷ್ಟು ದಿವಸ ಕೇಳೇ ಇರ್ಲಿಲ್ಲ. ಎಲ್ಲುಂಟು ಈ ಬತ್ತಿ?

ವಿದ್ಯಾ ರಮೇಶ್ said...

ನಿಜವಾಗಿಯೂ ಒಂದು ಹೊಸ ವಿಷಯ, ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು!!

ತೇಜಸ್ವಿನಿ ಹೆಗಡೆ said...

GottE irlille.... dhanyavadagaLu.

PaLa said...

ಮಾಹಿತಿಯುಕ್ತ ಬರಹ.. ನೀವು ಅಪರೂಪದ ಮರಗಳ ಬಗ್ಗೆ ಬರೆಯುವಾಗ ಸಾಧ್ಯವಾದರೆ ಆ ಮರದ ವೈಜ್ಞಾನಿಕ ಹೆಸರನ್ನೂ ನಮೂದಿಸಿದರೆ ಇನ್ನೂ ಉಪಯುಕ್ತ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಅಂತರ್ಜಾಲದಿಂದ ಸಂಗ್ರಹಿಸಲು ಸಹಾಯಕ.

Handigodu Muthu. said...

ಅಬಬ್ಬ...! ಪ್ರಕೃತಿ ಏನೆಲ್ಲಾ ನಿಗೂಢಗಳನ್ನ, ವಿಸ್ಮಯ ಸಂಗತಿಗಳನ್ನು ತನ್ನ ಗರ್ಭದಲ್ಲಿ
ಅಡಗಿಸಿಕೊಂಡಿದೆ. ಕಾಡನ್ನು ಉಳಿಸುವುದು ಹಾಗು ಬೆಳೆಸುವುದು ಇಂದಿನ ಜರೂರತ್ತು.
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.

ಜಗದೀಶಶರ್ಮಾ said...

ನಾವು ಏನನ್ನೆಲ್ಲ ಕಳೆದುಕೊಳ್ಳುತ್ತಿದ್ದೇವೆ...

ಸಂಸ್ಕೃತ ಕಾವ್ಯಗಳಲ್ಲಿ ಇಂಗುದೀ ಎನ್ನುವ ವೃಕ್ಷದ ಚಿಗುರನ್ನು ದೀಪವಾಗಿ ಬಳಸುವ ಪ್ರಸ್ತಾಪ ಬರುತ್ತದೆ. ಅದೇ ಇದೋ? ಅಥವಾ ಅದು ಇಲ್ಲವಾಗಿದೆಯೋ?

ಉಪಯುಕ್ತ ಮಾಹಿತಿ....