ಅಸಲಿಗೆ ಅವೆಲ್ಲಾ ಹಾಗೆ ಇದೆಯಾ..? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡಬಹುದು, ಬಹುದೇನು?,ಕಾಡುತ್ತದೆ. ನಾಭಿಯಿಂದ ಯೋಚಿಸುವುದು, ಉಸಿರಾಟ ನಿಯಂತ್ರಿಸಿ ಸಾಧಿಸುವುದು, ಆಜ್ಞಾಚಕ್ರಗಳನ್ನು ಹುಡುಕುವುದು, ಬೆಳಗಾಮುಂಚೆ ಎದ್ದು ಗರಗರ ತಿರುಗಿ ಸ್ಪರ್ಶಥೆರಪಿ ಅನುಭವಿಸಿ ಮುಪ್ಪನ್ನು ಮುಂದೂಡುವುದು, ಧ್ಯಾನ ಸ್ಥಿತಿಯಲ್ಲಿ ಕುಳಿತು ಲೌಕಿಕ ಮರೆಯುವುದು, ರುದ್ರ ಹೇಳಿ ರೌದ್ರಾವತಾರ ತಾಳುವುದು, ಲಕ್ಷ್ಮೀ ಪೂಜೆ ಮಾಡಿ ಹಣಗಳಿಸುವುದು, ಅಮೆನ್ ಹೇಳಿ ಪಾಪ ಕಳೆದುಕೊಂಡು ಮತ್ತೆ ಪಾಪ ಮಾಡುವುದು, ಗೋಡೆಯತ್ತ ಕಣ್ಮುಚ್ಚಿಕುಳಿತು ಹೋಯ್ ಭಗವಂತಾ ಅನ್ನುವುದು ಹೀಗೆ ಎನೇನೋ....
ಇರಲಿ, ಅವರೆಂಬ ಅವರುಗಳು ಏನನ್ನಾದರೂ ಹೇಳಿಕೊಳ್ಳಲಿ, ನಾವು ನೀವು ಹೀಗೆ ಯೋಚಿಸೋಣ, ನ್ಯೂಟನ್ ಒಂದಿಷ್ಟು ನಿಯಮಗಳನ್ನು ಮಾಡಿದ, ಅದೇನೋ ಸೇಬುಹಣ್ಣ ಬೀಳುತ್ತಿದ್ದುದನ್ನು ಕಂಡು ಅವನಿಗೆ ನಿಯಮಗಳು ಮೂಡಿದುವಂತೆ, ಅದು ವಿಜ್ಞಾನದ ವಿಷಯ. ಹಾಗಂತ ಅವ ಆ ನಿಯಮ ಮಾಡಿರದಿದ್ದರೆ ಅವೆಲ್ಲಾ ನಡೆಯುತ್ತಿರಲಿಲ್ಲವೇ?. ನಡೆಯುತಿತ್ತು, ಇದ್ದ ವಿಷಯವನ್ನು ನಮಗೆ ಆತ ವಿಷದಪಡಿಸಿದ ತನ್ನದೇ ಆದ ವಿಧಾನಗಳ ಮೂಲಕ. ಇವುಗಳೂ ಹಾಗೆಯೇ. ಏನೇನೋ ಇದೆ ಅವುಗಳನ್ನು ಅವರವರ ವಿಧಾನಗಳಮೂಲಕ ಜನರು ವಿಷದಪಡಿಸುತ್ತಿದ್ದಾರೆ. ಹಾಗೆ ಹೇಳುತ್ತಾ ಹೇಳುತ್ತಾ ಕೇಳುಗರ ಕಿವಿಯಮೇಲೆ ಹೂವನ್ನಿಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ವರ್ತಮಾನದಲ್ಲಿ ಬದುಕುವ ಮನುಷ್ಯರ ಸಂಖ್ಯೆ ಬಹು ಕಡಿಮೆ, ಮದುವೆಯಾದ ಮೂರ್ನಾಲ್ಕು ವರ್ಷದಲ್ಲಿ ಮಕ್ಕಳಾಗದಿದ್ದರೆ ಹೆಣ್ಣೋ ಗಂಡೋ ಒಂದು ಮಗುವಾಗಲಿ ಎಂಬ ಚಿಂತೆ, ಮಗು ಹುಟ್ಟಿದರೆ ಅದು ಆರೋಗ್ಯವಾಗಿರಬೇಕು, ಆರೋಗ್ಯವಾಗಿದ್ದರೆ ಅದು ಎಲ್ಲಾ ಮಕ್ಕಳಿಗಿಂತ ಬುದ್ಧಿವಂತನಾಗಿರಬೇಕು, ಬುದ್ದಿವಂತನಾಗಿದ್ದರೆ ಅದು ಬೆಳೆದು ಲಕ್ಷಗಟ್ಟಲೆ ಸಂಬಳ ತರುವ ಉದ್ಯೋಗಿಯಾಗಬೇಕು, ಹಾಗಾದ ಮರುಕ್ಷಣ ಒಂದು ಸುಂದರ ಅನುರೂಪ ಹುಡುಗಿ(ಗ) ಸಿಗಬೇಕು, ಅದೂ ಆಯಿತು ಎಂದರೆ ಅವರುಗಳು ನಾವು ಹೇಳಿದಂತೆ ಕೇಳಬೇಕು, ಎಂಬ ಚಿಂತೆ ಹಲವರಿದ್ದು, ಇಲ್ಲಿ ಕರಕರ ಎಂದು ಕೊರಗಲು ನೂರಾರು ಐಟಮ್ ಬಾಯಿತೆರೆದುಕೊಂಡು ಕುಂತಿರುವುದರಿಂದ ಜೀವನಪೂರ್ತಿ ನೆಮ್ಮದಿ ಕೆಡಿಸಿಕೊಳ್ಳಲು ಅವಕಾಶ ಹೇರಳ. ಈ ಸಂದರ್ಭವನ್ನು ಅವರುಗಳೆಂಬ ಅವರುಗಳು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ,
ಈ ಪ್ರಕ್ರಿಯೆ ಲಾಗಾಯ್ತಿನಿಂದ ನಡೆದುಬಂದಿದೆ, ಮುಂದೂ ಹೀಗೆಯೇ, ಇಲ್ಲಿ ಎಲ್ಲವೂ ಇದೆ ಆದರೆ ಅನುಭವಿಸಲು ಸ್ವಲ್ಪ ಜಾಣ್ಮೆ ಬೇಕು ಅಷ್ಟೆ.
ವಿಸೂ: ಥೋ ಇದು ಏನಪ್ಪಾ ಅರ್ಥವೇ ಆಗುತ್ತಿಲ್ಲ ಎಂದು ಅನಿಸಿದರೆ ಅರ್ಥವಾಗುವವರೆಗೂ ಓದಿ, ಇಲ್ಲದಿದ್ದರೆ ಎಕ್ಸ್ ಮಾರ್ಕ್ ಕ್ಲಿಕ್ ಮಾಡಿ.
No comments:
Post a Comment