Thursday, March 31, 2011

ಗೋಪಾಲ ಋಣಭಾಧೆಯೋ....

"ಗೋಪಾಲ" ಎಂಬ ಹೆಸರು ಕೇಳಿದಾಗಲೆಲ್ಲ ನನಗೆ ಯಕ್ಷಗಾನದ ಸಣ್ಣ ಕತೆಯೊಂದು ನೆನಪಾಗುತ್ತದೆ. ಯಕ್ಷಗಾನದ ವೇಷಧಾರಿಯೊಬ್ಬ ರಂಗದಲ್ಲಿ ಮಸ್ತ್ ಕುಣಿಯುತ್ತಿದ್ದ. ಹೀಗೆ ಗಂಟೆ ಕುಣಿಯುತ್ತಿರುವಾಗ ಆತನಿಗೆ ಜಲಭಾಧೆಯಾಯಿತು. ಆದರೆ ವೇಷ ಕಟ್ಟಿ ವೇದಿಕೆಯಮೇಲೆ ಕುಣಿಯುತ್ತಾ ಇದ್ದಾಗಿದೆ, ಈಗ ಜಲಬಾಧೆ ತೀರಿಸಿಕೊಳ್ಳುವ ಬಗೆ ತೋಚದೆ ಒದ್ದಾಡತೊಡಗಿದೆ. ಯಕ್ಷಗಾನದ ವೇಷಧಾರಿಗಳೋ ಒಂದರಮೇಲೆ ಒಂದು ಪಂಚೆ ಸುತ್ತಿ ಬರೋಬ್ಬರಿ ಆಳಾಗಿರುತ್ತಾರೆ, ಹಾಗಾಗಿ ವೇಷ ಕಟ್ಟಿಯಾದಮೇಲೆ ಜಲಬಾಧೆ ತಿರಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಆದರೆ ಸಮಸ್ಯೆ ಹೇಳಿಕೇಳಿ ಬಾರದಲ್ಲ. ಅರ್ಥಹೇಳಲು ಆಗದು ತಕತೈ ಕುಣಿಯಲೂ ಆಗದು ಎಂಬ ಪರಿಸ್ಥಿತಿ ಬಂದಾಗ ಪದ್ಯ ಹೇಳುವ ಭಾಗವತರ ಶೈಲಿಯಲ್ಲಿಯೇ "ಗೋಪಾಲ ಜಲಬಾಧೆಯೋ..." ಎಂದು ಹಾಡಿದ. ಗೋಪಾಲ ಎಂಬ ಹೆಸರಿನ ಮೃದಂಗಕಾರನಿಗೆ ವೇಷಧಾರಿಯ ಸಮಸ್ಯೆಯ ಅರಿವು ಆಯಿತು. ಆದರೆ ನೂರಾರು ಜನರೆದುರು ಪರಿಹಾರ ಹೇಳಲು ಬರುವುದಿಲ್ಲ. ಅದಕ್ಕೆ ಆತ ಮೃದಂಗದಲ್ಲಿಯೇ "ತಟಕು ತಟಕು ಹೊಯ್ಕ" ಎಂದು ಬಾರಿಸಿದ. ವೇಷಧಾರಿಗೆ ಗೋಪಾಲ ಹೇಳಿಕೊಟ್ಟ ಪರಿಹಾರ ಚೆನ್ನಾಗಿ ಕಂಡು ತಕ್ಷಣ ಅನುಷ್ಠಾನಗೊಳಿಸಿ ಸಮಸ್ಯೆ ತೀರಿಸಿಕೊಂಡ. ಎಂಬುದು ಯಕ್ಷಗಾನದ ಪ್ರಿಯರು ಹೇಳುವ ಕತೆ. ಇಲ್ಲಿ ಮೃದಂಗಕಾರ ಅಕ್ಷರಗಳನ್ನು ಕೂಡ ಮೂಡಿಸಬಲ್ಲ ತನ್ನ ಮೃದಂಗದಲ್ಲಿ ಎಂಬುದು ಸೂಚ್ಯ. ಇರಲಿ ಈಗ ನಾನು ಗೋಪಾಲ ಎಂಬ ಹೆಸರು ಯಾಕೆ ಇಂದು ನನಗೆ ನೆನಪಾಯಿತು ಅಂತ ಹೇಳುತ್ತೇನೆ. ನಮ್ಮ ಊರಿನ ಹರಿಜನ ಕೇರಿಯ ಹಳೇ ತಲೆ ಗೋಪಾಲ. ವಯಸ್ಸು ಎಪ್ಪತ್ನ್ಲಾಲ್ಕು. ಈ ವಯಸ್ಸಿನವರೆಗೆ ಡಾಕ್ಟರ್ ಮನೆಗೆ ಹೋದವನಲ್ಲ. ಬೆಳಿಗ್ಗೆ ಎದ್ದು ಚಾಕುಡಿದು ಬೀಡಿ ಎಳೆಯುವುದರಿಂದ ದಿನದ ಶುಭಾರಂಭ. ಮಟ ಮಟ ಬಿಸಿಲಿನ ಮೂರುಗಂಟೆಯವರೆಗೆ ಕೂಲಿ, ಆನಂತರ ಆಯಾದಿನದ ಸಂಪಾದನೆಗೆ ತಕ್ಕಂತೆ ಒಂದೆರಡು ಕ್ವಾಟರ್ ಜಡಿದು ತನ್ನ ಜೀವನದ ಸಾಹಸಗಾಥೆಯ ಸಾರ್ವಜನಿಕ ಪಠಣ. ಇಂತಿಪ್ಪ ಗೋಪಾಲ ಒಮ್ಮೆ ಸರ್ಕಾರದ ಮೀಸಲಾತಿಯ ನಿಯಮದಿಂದ ಗ್ರಾಮ ಪಂಚಾಯಿತಿಯ ಸದಸ್ಯನೂ ಆಗಿದ್ದ. ಮತ್ತು ಏರಿದಾಗ ಆ ಕತೆ ಓತಪ್ರೋತವಾಗಿ ಹರಿಯುತ್ತಿರುತ್ತದೆ. ಮತ್ತೆ ಬೆಳಿಗ್ಗೆ ಬೆನ್ನಿನ ಮೇಲೆ ಗುದ್ದಿದರೂ ಮಾತೇ ಹೊರಡದೇನೋ ಎಂಬ ಹಾ ಹೂ ಅಷ್ಟೆ. ಚುನಾವಣೆ ಸಂದರ್ಭದ ರಾಜಕಾರಣಿಗಳ ಭಾಷಣ ಸಂಜೆ ನಿಗದಿಯಾಗಿದ್ದರೆ ಅಲ್ಲಿ ಜನರ ನಡುವೆ ಗೋಪಾಲ ವೇದಿಕೆಯಲ್ಲಿರುವ ಜನರಿಗೆ ಹಿಗ್ಗಾಮುಗ್ಗಾ ಅನ್ನುವುದು ಮಿಕ್ಕವರಿಗೆ ಒಳ್ಳೆಯ ಮನರಂಜನೆ. ಸೋಗಿನ ಜನರು ರಾಜಕಾರಣ ಕೆಟ್ಟದ್ದು, ರಾಜಕಾರಣಿಗಳು ಕೆಟ್ಟವರು ಎಂದು ಅವರ ಬೆನ್ನಹಿಂದೆ ಆಡುತ್ತಾ ಅವರು ಮಾತನಾಡುವಾಗ ತಲೆಗುಂಡಾಡಿಸುತ್ತಿದ್ದರೆ ಈತ ಮಾತ್ರಾ ಹಿಗ್ಗಾಮುಗ್ಗಾ ಬಯ್ಯುತ್ತಿದ್ದ. ಆಯಿತು ಬಿಡಿ ಅವೆಲ್ಲಾ... ಮೊನ್ನೆಯಲ್ಲ ಆಚೆಮೊನ್ನೆ ಅವನಿಗೆ ಪಾರ್ಶ್ವವಾಯು ಬಡಿಯಿತು. ಇರುವ ಎರಡು ಗಂಡು ಮಕ್ಕಳಲ್ಲಿ ಒಬ್ಬಾತ ಅತ್ತ ಮುಖ ಹಾಕಲಿಲ್ಲ. ಮತ್ತೊಬ್ಬ ಆರೈಕೆಗೆ ನಿಂತ, ಹೇಳಿಕೇಳಿ ಕೂಲಿಮಾಡಿ ಬದುಕು, ಆತನೆಲ್ಲಿ ಹಣ ತಂದಾನು? ಸಾವಿರಗಟ್ಟಲೆ. ಗೋಪಾಲ ಸ್ವಸ್ಥ ಇದ್ದಾಗ ಅದೆಷ್ಟು ಮನೆಯ ಕೆಲಸ ಮಾಡಿದನೋ ಆದರೆ ಅವರೆಲ್ಲಾ "ಅಯ್ಯ ನಾವು ಅದಕ್ಕೆ ಕೂಲಿ ಕೊಟ್ಟಿದ್ದೇವೆ" ಅಂದು ಬಿಟ್ಟರು. ಗೊಜ ಗೊಜ ಎನ್ನುವ ಗೋಪಾಲನ ಬಳಿ ದಮಡಿ ಕಾಸೂ ಇಲ್ಲ. ಎಪ್ಪತ್ನಾಲ್ಕು ವರ್ಷದ ಜೀವ ಹೈರಾಣಾಗಿ ಮಲಗಿದೆ. "ಅಯ್ಯ ಅಷ್ಟೆಲ್ಲಾ ಅಯ್ಯೋ ಪಾಪ ಅನ್ನುವ ತಾವು ಏನಾದರೂ ಮಾಡಬಹುದಿತ್ತಲ್ಲ" ಅಂತ ನೀವು ಕೇಳಬಹುದು. ಕೇವಲ ಬರೆದು ಕೊರೆದು ಹೇಳುವುದಷ್ಟೆ ತಮ್ಮ ಕೆಲಸವಾ ಅಂತಲೂ ಅನ್ನಬಹುದು. ಇಲ್ಲ ಜೋಲು ಮೋರೆ ಹಾಕಿನಿಂತ ಗೋಪಾಲನ ಮಗನನ್ನು "ರಾಜು ಬಾ ಇಲ್ಲಿ" ಅಂತ ಕರೆದೆ, ಐದುನೂರರ ಎರಡು ನೋಟು ಇಟ್ಟೆ, ಅವನ ಮುಖದಲ್ಲಿ ಅದೇನೋ ವೇದನೆ ಇತ್ತು, ಅರ್ಥ ತಿಳೀಯಲಿಲ್ಲ. ಹಾಗಂತ ನೀವು "ಓಕೆ ಒಳ್ಳೆಯ ಕೆಲಸ ಮಾಡಿದ್ದೀರಿ" ಎಂದು ನನಗೆ ಹೇಳಬೇಡಿ ಕಾರಣ ಗೋಪಾಲ ಬಹಳ ಹಿಂದೆ ನಮ್ಮ ಮನೆಯ ತೋಟದಲ್ಲಿಯೂ ಕೆಲಸ ಮಾಡಿದ್ದ ಅದರ ಋಣ ತೀರಿಸುವ ಸಣ್ಣ ಪ್ರಯತ್ನವಷ್ಟೆ. ಹಾಗೂ ನಾನು ಕೊಟ್ಟ ಹಣದ ವಿಷಯ ಅವನು ಕೆಲಸ ಮಾಡಿದ ಮನೆಯವರಿಗೂ ಹೇಳಿದೆ. ಅಲ್ಲಿ ನನ್ನ ಸ್ವಾರ್ಥ ಇಷ್ಟೆ, ಅವರೂ ಸ್ವಲ್ಪ ಹಣ ಗೋಪಾಲನಿಗೆ ಕೊಡಲಿ ಎಂದು. ಈಗ ನಾನು ಅನ್ನುತ್ತೇನೆ ಗೋಪಾಲ ಋಣಭಾಧೆಯೋ.... ಭಗವಂತ ಎಲ್ಲಾದರೂ ಕೇಳಿಸಿಕೊಂಡರೆ ಅನ್ನಬಹುದೇನೋ "ತಟಾಕು ತಟಾಕು ಕಾಯ್ಕ"

1 comment:

umesh desai said...

good one sir, these "gopals" are so many in INDIA even in this modern age.