Thursday, July 7, 2011

ಅವೂ ಹೀಗೆ ಮಸುಕು ಮಸುಕುನನಗೆ ಬಹಳ ಸಾರಿ ಅನ್ನಿಸುತ್ತಿರುತ್ತದೆ. ನಾನು ಬರೆದಿದ್ದೆಲ್ಲಾ ನಾ ಕಂಡಿದ್ದು ನಾ ಕೇಳಿದ್ದು ನಾ ಅನುಭವಿಸಿದ್ದು. ಹಾಗಾಗಿ ನನಗೆ ನನ್ನಷ್ಟಕ್ಕೆ ಒಂಥರಾ ಜಿಗುಪ್ಸೆ. ಅದರಲ್ಲೇನಿದೆ ಬಹಳ ಜನ ಬರೆಯುವುದಿಲ್ಲ ನಾನು ಕಕ್ಕಿದ್ದೇನೆ ಅಷ್ಟೆ. ನಿಜವಾದ ಬರಹಗಾರ ತನ್ನ ಮಿದುಳನ್ನು ಸಮರ್ಥವಾಗಿ ಉಪಯೋಗಿಸಿದರೆ ಅವನು ಕಾಣದ್ದನ್ನು ಬರೆಯುತ್ತಾನೆ. ಅದು ಹೇಗಿರುತ್ತದೆ ಎಂದರೆ ಕಂಡವರೂ ಬೆಚ್ಚಿಬೀಳುವಷ್ಟು. ಆದರೆ ಅನುಭವಿಸಿದ್ದನ್ನು ಬರೆಯುವ ಬರಹಗಾರ ಕಲ್ಪಿಸಿಕೊಂಡು ಬರೆಯಲಾರ. ಕಲ್ಪನೆಗೆ ರಕ್ಕೆಪುಕ್ಕ ಸೇರಿಸಿ ಬರೆಯುವ ತಾಕತ್ತಿನ ಜನರು ನಿಜವಾದ ಮಜ ಕೊಡುವ ಬರಹಗಾರರಾಗಿಬಿಡುತ್ತಾರೆ.

ಎಂದೂ ವಿಮಾನ ಹತ್ತಿರದವ ಅಲ್ಲಿನ ವ್ಯವಸ್ಥೆಯ ಕುರಿತು ಕಷ್ಟಪಟ್ಟು ಬರೆಯತೊಡಗಿದರೆ, " ವಿಮಾನ ಹತ್ತಿದೊಡನೆ ಒಮ್ಮೆಲೆ ದಂಗಾದೆ, ಕೂರಲು ಇರಲಿ, ಒಂಟಿಕಾಲಿನಲ್ಲಿ ನಿಲ್ಲದೂ ಆಗದಷ್ಟು ರಷ್ ಆಗಿತ್ತು. ಬೆವರಿನ ವಾಸನೆಯ ಕಮಟು........ಕಿಟಕಿಯ ಸೀಟಿಗಾಗಿ ಜಗಳ..." ಹೀಗೆಲ್ಲಾ ಆಗಿಬಿಡಬಹುದು. ನಿತ್ಯ ಬಸ್ ಪ್ರಯಾಣವನ್ನಷ್ಟೇ ಮಾಡುತ್ತಿದ್ದ ಓದುಗ ತೀರಾ ತಲೆಕೆಡಿಸಿಕೊಳ್ಳದಿರಬಹುದು ಆದರೆ ವಿಮಾನ ಪ್ರಯಾಣಿಕ ಓದಿದರೆ...?

ಆದರೆ ಕಾಳಿದಾಸ "ಮೇಘ ಸಂದೇಶ"ವನ್ನ ಅಂದೇ ಬರೆದ ಅಂತಾರೆ. ಅದರಲ್ಲಿ ಮೋಡಗಳು ಸಾಗುವ ಹಾದಿ ಅದೆಷ್ಟು ಕರಾರುವಕ್ಕಾಗಿ ವಣಿಸಿದ್ದಾನೆ ಆತ ಎಂದರೆ ಈಗಲೂ ಆ ಮೇಘಗಳ ದಾರಿಯಲ್ಲಿ ಒಂದು ಪುಟ್ಟ ವಿಮಾನದಲ್ಲಿ ಸಾಗಿದರೆ ಕಾಳಿದಾಸ ವರ್ಣಿಸಿದ ದೃಶ್ಯಾವಳಿಗಳು ಕಾಣಸಿಗುತ್ತವೆಯಂತೆ. (ಹಾಗಂತ ನನಗೆ ಯಾರೋ ಹೇಳಿದ್ದನ್ನ ಇಲ್ಲಿ ಬರೆಯುತ್ತಿದ್ದೇನೆ ಅಷ್ಟೆ. ನನಗೇನು ಮೇಘ ಸಂದೇಶವೂ ಗೊತ್ತಿಲ್ಲ ಕಾಳಿದಾಸನನ್ನೂ (ಹೆಸರು ಹೊರತುಪಡಿಸಿ) ತಿಳಿದಿಲ್ಲ. ಕವಿರತ್ನ ಕಾಳಿದಾಸ ಗೊತ್ತಷ್ಟೆ.) ಅಂದೇನು ಆತ ವಿಮಾನ ಹತ್ತಿರಲಿಲ್ಲ ಹೆಚ್ಚೆಂದರೆ ಕೆಳಗಿನಿಂದ ಆ ಜಾಗಗಳನ್ನು ನೋಡಿರಬಹುದು. ಮೇಲಿನ ಪಯಣ ಆತನ ಕಲ್ಪನೆಯ ಕೂಸು. ಹಾಗಾಗಿ ಅಂತಹ ಅದ್ಭುತ ಕಲ್ಪನೆಗೆ ಇಂದೂ ಕೂಡ ಕಾಳಿದಾಸ ಪ್ರಸ್ತುತ. ಎಂಬಲ್ಲಿಗೆ ನಮ್ಮ ಮಿದುಳನ್ನು ಸಮರ್ಥವಾಗಿ ಬಳಸಿದರೆ ಕಲ್ಪನೆಯೂ ಕೂಡ ವಾಸ್ತವವಾಗುತ್ತದೆ. ಅಂತಹ ತಾಕತ್ತು ಮನುಷ್ಯನ ಮಿದುಳಿಗಿದೆ.

ಸರಿ ಬಿಡಿ ಇಂತಿಪ್ಪ ಮಿದುಳೆಂಬ ಮಿದುಳನ್ನು ನಾವೂ ನೀವೂ ಬಹಳ ಹೆಚ್ಚಿನ ಅಂಶವನ್ನೇನೂ ಬಳಸಿಲ್ಲ. ಇಲ್ಲಿ ಹಳ್ಳಿಯ ಮೂಲೆಯಲ್ಲಿ ಕುಳಿತ ನನಗಿಂತ ಒಂದಿಷ್ಟು ಗುಲಗುಂಜಿ ಜಾಸ್ತಿ ನೀವು ಬಳಸಿರಬಹುದು. ಅಥವಾ ಹತ್ತು ಗುಲಗುಂಜಿ ಜಾಸ್ತಿ ಬೇಕಾದರೆ ಇಟ್ಟುಕೊಳ್ಳಿ ಮತ್ತೆ ಅಷ್ಟಕ್ಕೆ ತರ್ಲೆ ತಕರಾರು ಬೇಡ. ಆದರೆ ಅಂದೇಂದೋ ಸಿಕ್ಕಾಪಟ್ಟೆ ಜಾಸ್ತಿ ಬಳಸಿದ ಜನ ಇಂದಿಗೂ ಪ್ರಸ್ತುತರು ಅಂದಾದಮೇಲೆ ನಮಗೆ ನಿಮಗೆ ಯಾಕೆ ಹಾಗೆ ಮಾಡಲಾಗುತ್ತಿಲ್ಲ ಎಂಬ ಪ್ರಶ್ನೆ ನನ್ನಂತೆ ನಿಮಗೂ ಕಾಡಿದ್ದಿರಬಹುದು. ಸೌಲಭ್ಯ ಹೆಚ್ಚಾಗಿ ನಾವು ಬಡ್ದಾಗುತ್ತೀದ್ದೇವಾ, ಬಳಸದ ವಸ್ತು ತುಕ್ಕು ಹಿಡಿಯುವಂತೆ ನಮಗೂ ಆಗಿದೆಯಾ?, ಸಹಸ್ರಾರು ವರ್ಷ ಮುಂದಿನವರು ನೆನಪಿಟ್ಟುಕೊಳ್ಳುವಂತಹಾ ಸಾಹಿತ್ಯ ಬೇಡ ಒಂದಿನ್ನೂರು ವರ್ಷ ಉಳಿಯುವಂತಹ ಸಾಹಿತ್ಯ ರಚನೆ ಯಾಕಾಗುತಿಲ್ಲ ?. ಎಂಬ ಪ್ರಶ್ನೆ ಕಾಡಿ ಕಾಡಿ ಅಂತಿಮವಾಗಿ ಅವೂ ಹೀಗೆ ಮಸುಕು ಮಸುಕು ರೂಪ ತಾಳಿಬಿಟ್ಟಿತು. ಒಟ್ಟಿನಲ್ಲಿ ಕತೆ ಇಷ್ಟೆ ಆರಂಭವೂ ಇಲ್ಲ ಅಂತ್ಯವೂ ಇಲ್ಲ ನಡು ಕೇಳಬೇಡಿ.

No comments: