Monday, July 25, 2011

ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ



ನಾನು ತೀರಾ ಈ ಮುಹೂರ್ತ ಶಾಸ್ತ್ರ ಜಾತಕಫಲ ಮುಂತಾದ್ದನ್ನೆಲ್ಲಾ ಬೆನ್ನತ್ತಿ ಹೋಗುವುದು ಕಡಿಮೆ. ಆದರೂ ತೀರಾ ಬುಡಕ್ಕೆಬಂದಾಗ ಸಂಕಟಬಂದಾಗ ವೆಂಕಟ ರಮಣ ಎಂದು ಹೋಗುವುದು ಇದೆಯಾದರೂ ಅದು ಜ್ಯೋತಿಷಿಗಳ ಬುಡಕ್ಕಂತೂ ಸದ್ಯಕ್ಕೆ ಅಲ್ಲಬಿಡಿ.

ಅವೆಲ್ಲಾ ಆಯಿತು ಆದರೆ ಮುಹೂರ್ತ ಎಂದರೆ ಅರ್ಥ ಇಷ್ಟೆ. ನಾವು ಮಾಡಬೇಕಾಗಿರುವ ಕೆಲಸ ನಿರ್ವಿಘ್ನವಾಗಿ ನಡೆಯಲು ಒಂದು ದಿನ ನಿಕ್ಕಿಮಾಡುವುದು, ಅಂದು ತೊಂದರೆ ತಾಪತ್ರಯ ಇರಬಾರದು ಅಷ್ಟೆ. ಮೊನ್ನೆ ಶುಕ್ರವಾರ ನಮ್ಮ ಬಿಲ್ಡಿಂಗ್ ನ ಸೆಂಟ್ರಿಂಗ್ ಮೇಸ್ತ್ರಿ ನೀಲಕಂಠ "ಸಾರ್ ಸೋಮವಾರ ಅಂದ್ರೆ ೨೫ ನೇ ತಾರೀಖು ಮೌಲ್ಡ್ ಹಾಕೋಣ ಸಾರ್" ಎಂದು ಬುಡಕ್ಕೊಂದು ತಲೆಗೊಂದು ಸಾರ್ ಸೇರಿಸಿ ಹೇಳಿದ. ಅವನು ಆ ಮುಹೂರ್ತ ಫಿಕ್ಸ್ ಮಾಡುತ್ತಿದ್ದ ಸಮಯದಲ್ಲಿ ಜಡಿಮಳೆ ಭಾರಿಸುತ್ತಿತ್ತು ಜೊರ್ರಂತ. ನನಗೆ ಅನಾಮತ್ತು ೨ ಲಕ್ಷರೂಪಾಯಿಯ ವ್ಯವಹಾರ. ಗೌರೀಶನಿಗೆ ಫೋನ್ ಹಚ್ಚಿದೆ. ಅವರೂ ಯೆಸ್ ಅಂದಾಯಿತು. ಆದರೆ ಒಳಗೊಳಗೆ ಪುಕ್ಕು. ಶನಿವಾರ ಮಳೆ ಇನ್ನೂ ಒಂದು ತೂಕ ಹೆಚ್ಚು, ಭಾನುವಾರ ಯಡ್ದಾದಿಡ್ಡಿ. ಒಟ್ಟಿನಲ್ಲಿ ಇದೊಂದು ಯಡವಟ್ಟು ಕೆಲಸವಾಯಿತು. ತಿಂಗಳಿನಿಂದ ಬಾರದ ಬಿಸಿಲು ಜಡಿಯುತ್ತಿರುವ ಮಳೆ ದಿಡೀರಂತ ನಾವು ಮೌಲ್ಡ್ ಹಾಕುತ್ತೇವೆ ಅಂತ ನಿಲ್ಲುತ್ತದಾ..? ಎಂಬ ಪ್ರಶ್ನೆ ಒಳಗೊಳಗೆ. ಕಟ್ಟಡದ ಮೈನ್ ಮೇಸ್ತ್ರಿ ತಿಲಕ್ ರಾಯ್ಕರ್ ವೆಂಕಟರಮಣ ದೇವಸ್ಥಾನದ ಶಾಸ್ತ್ರಿಗಳ ಬಳಿ ಕವಡೆ ಹಾಕಿಸಿ ಶಾಸ್ತ್ರ ಕೇಳಿ ಬಂದೂ ಆಯಿತು. ಆದರೆ ಭಾನುವಾರ ರಾತ್ರಿ ಜಡಿಯುತ್ತಿದ್ದ ಮಳೆಗೆ ಇದ್ಯಾವುದರ ಪರಿಯೂ ಇಲ್ಲ. ಅಂತೂ ಸೋಮವಾರ ಬೆಳಗಾಯಿತು. ಒಂಬತ್ತು ಗಂಟೆಗೆವರೆಗೆ ಹನಿ ಮಳೆಯೂ ಇಲ್ಲ. ನೀಲಕಂಠ ನ ಬಳಿ "ನೀ ಬಾಳ ಅಸಾಮಿ ಬಿಡಪೋ ಅಂದೆ. ಹತ್ತು ಗಂಟೆಗೆ ಬಿಸಿಲು. ನನಗೆ ಅಚ್ಚರಿಯೋ ಅಚ್ಚರಿ. ಮಧ್ಯಾಹ್ನ ಕೆಲಸಗಾರರು ಊಟಕ್ಕೆ ಬಿಟ್ಟಾಗ ಅರ್ದ ಗಂಟೆ ಸಿಕ್ಕಾಪಟ್ಟೆ ಮಳೆ. ನಂತರ ಮಾಯವಾದ ಮಳೆರಾಯ ಈ ಕ್ಷಣ ಅಂದರೆ ರಾತ್ರಿ ಹನ್ನೊಂದು ಗಂಟೆಯವರೆಗೂ ಹಾರಾಹನಿಯನ್ನೂ ಉದರಿಸುತಿಲ್ಲ. ಅಬ್ಬಾ ನೀಲಕಂಠನ ಮುಹೂರ್ಥವೇ ಅಂತ ನನಗೆ ಅನ್ನಿಸಿತು.

ನಿಜ ನಿಜ ನಿಜ, ಒಳ್ಳೆಯ ಮುಹೂರ್ಥ ಫಿಕ್ಸ್ ಮಾಡಲು ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ ಶುದ್ಧ ಮನಸ್ಸಿರಬೇಕು ಅಂತ ಒಂಥರಾ ಅರ್ಥವಾಗುತ್ತಿದೆ. ಜುಲೈ ತಿಂಗಳ ಮಲೆನಾಡಿನ ಜಡಿಮಳೆಯ ತಿಂಗಳಿನಲ್ಲಿ ಹೀಗೊಂದು ಮಳೆಬಾರದ ದಿನವನ್ನು ಹುಡುಕಿದನಲ್ಲ ನೀಲಕಂಠ "ಅಬ್ಬಾ ನೀಲಕಂಠ ಮಿದುಳೇ" ಅಂತ ಅವನ ಕುರಿತು ಅನ್ನಿಸಿದ್ದು ಸುಳ್ಳಲ್ಲ.

ಕೆಲವೆಲ್ಲಾ ಅರ್ಥವಾಗದು, ಕೆಲವೆಲ್ಲಾ ಅರ್ಥವಾದಂತೆ ನಟಿಸಬೇಕು, ಇನ್ನು ಕೆಲವು ಅರ್ಥವಾದಂತೆ ಅನಿಸುತ್ತದೆ.

3 comments:

ಮೋಹನ್ ತಲಕಾಲುಕೊಪ್ಪ said...

I think its just coincidence. Nothing more. Somehow I did not like this write up.

Mohan

Unknown said...

ಮೋಹನಾ,

ನಾನು ಹೇಳಿದ್ದು ನೀ ಹೇಳಿದ್ದನ್ನೆ, ಸ್ವಲ್ಪ ಬೇರೆ ತರಹ ಅಷ್ಟೆ. ಕಾಕತಾಳೀಯವನ್ನು ಪಂಡಿತರು ಪುರೋಹಿತರು ಹ್ಯಾಗೆ ಬಳಸಿಕೊಳ್ಳುತ್ತಾರೆ, ಅಂಬೋದು ಅದರಲ್ಲಿ ನನ್ನ ಸೂಚ್ಯ ದನಿ. ಅದನ್ನ ಸಮರ್ಪಕವಾಗಿ ನಿರೂಪಿಸುವಲ್ಲಿ ಗಡಿಬಿಡಿಯ ಕಾರಣದಿಂದ ಎಡವಿದೆ ಅಷ್ಟೆ.
ಕಾಕತಾಳೀಯವನ್ನ ಬಳಸಿಕೊಳ್ಳುವ ಜನರಿಗಾಗಿ ಟೈಟಲ್...!
ತ್ಯಾಂಕ್ಯೂ.

ಸೀತಾರಾಮ. ಕೆ. / SITARAM.K said...

ಹೇ ಹೇ